ದಲಿತರಿಂದ ದಲಿತರಿಗಾಗಿ

ಗಾಳಿ ಬೆಳಕು
gali5_thumbnail-1
ನಟರಾಜ್ ಹುಳಿಯಾರ್
ನೀನು ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆಯುತ್ತಿರುವ ಈ ‘ಬರೆವ ಬದುಕು’ ಅಂಕಣದಲ್ಲಿ ಬೇರೆಯವರ ಬಗ್ಗೆ ಮೃದುವಾಗಿ ಬರೆಯುತ್ತೀಯ, ಅದೇ ‘ನಮ್ಮವರ’ ಬಗ್ಗೆ ಮಾತ್ರ ಕಟುವಾಗಿ ಬರೆಯುತ್ತೀಯ ಎಂದು ದಲಿತ ಕವಿಯೊಬ್ಬ ದೂರಿದ. ಯೋಚಿಸುತ್ತೇನೆ ಎಂದು ಸುಮ್ಮನಾದೆ. ಆದರೆ ಅವನು ಬಳಸಿದ ‘ನಮ್ಮವರು’ ಎಂಬ ಪದ ನನ್ನ ತಲೆಯಲ್ಲೇ ಉಳಿಯಿತು. ಅದಕ್ಕೂ ಹಿಂದೆ ಈ ‘ನಮ್ಮವರು’ ಎಂಬ ಪದ ನನ್ನನ್ನು ಚಕಿತನಾಗಿಸಿದ್ದ ಸಂದರ್ಭವೊಂದು ನೆನಪಾಯಿತು.
ದಲಿತ ಸಾಹಿತ್ಯ ಕಮ್ಮಟವೊಂದರಲ್ಲಿ ದಲಿತ ಲೇಖಕರೊಬ್ಬರು ದಲಿತ ಮತ್ತು ಬಂಡಾಯ ಕತೆಗಳನ್ನು ವಿಮರ್ಶಿಸುತ್ತಾ, ಒಂದೆರಡು ಸಲ ‘ನಮ್ಮವರು’ ಎಂಬ ಮಾತನ್ನು ಬಳಸಿದಾಗ ‘ಅರೆ! ಇದೇನೋ ಚಿತ್ರವಾಗಿ ಕೇಳಿಸುತ್ತಿದೆಯಲ್ಲ’ ಅನ್ನಿಸಿತ್ತು. ನೆನಪಿನಿಂದ ಹೇಳುವುದಾದರೆ ಆ ಲೇಖಕರು ಹೇಳಿದ ವಾಕ್ಯಗಳಲ್ಲಿ ಕೆಲವು ಹೀಗಿದ್ದವು:
 asd
1. .ಕುಂ. ವೀರಭದ್ರಪ್ಪನವರು ದಲಿತ ಪಾತ್ರಗಳಲ್ಲಿ ಸಿಟ್ಟು ತುಂಬುದಕ್ಕೂ ‘ನಮ್ಮವರು’ ದಲಿತ ಪಾತ್ರಗಳ ಮೂಲಕ ಸಿಟ್ಟು ಹೊರಹೊಮ್ಮಿಸುವುದಕ್ಕೂ ವ್ಯತ್ಯಾಸವಿದೆ.
2. ಬೆಸಗರಹಳ್ಳಿ ರಾಮಣ್ಣನವರಂಥ ದಲಿತೇತರ ಲೇಖಕರು ಈ ಥರದ ಸನ್ನಿವೇಶದಲ್ಲಿ ದಲಿತ ಹೆಣ್ಣಿನ ಮಾನಭಂಗವಾಗುವಂತೆ ಚಿತ್ರಿಸಿಬಿಡುತ್ತಾರೆ. ಆದರೆ ‘ನಮ್ಮವರು’ ಇದೇ ಕತೆಯನ್ನು ಬರೆದಾಗ ಆ ಹೆಂಗಸಿಗೆ ಆತ್ಮಗೌರವವನ್ನು ತುಂಬಿ ತಲೆಯೆತ್ತಿ ನಡೆಯುವಂತೆ ಮಾಡುತ್ತಾರೆ
ನಾನು ಪ್ರಸ್ತಾಪಿಸಿರುವ ದಲಿತೇತರ ಲೇಖಕರ ಹೆಸರುಗಳು ಬೇರೆ ಇರಬಹುದು. ಆದರೆ ಸದರಿ ವಿಮರ್ಶಕರ ಒಟ್ಟು ವಿಮರ್ಶಾ ವೈಖರಿ ಹಾಗೂ ಹೋಲಿಕೆ ಹೆಚ್ಚೂಕಡಿಮೆ ಈ ಜಾಡಿನಲ್ಲೇ ಇತ್ತು. ಒಂದು ಜಾತಿಯ ಅನುಭವವನ್ನು ಆ ಜಾತಿಗೆ ಸೇರಿದ ಲೇಖಕರೇ ಬರೆದರೆ ಹೆಚ್ಚು ಅಧಿಕೃತವಾಗಿರುತ್ತದೆಂಬ ವಾದಕ್ಕಿಂತ ಭಿನ್ನವಾಗಿ ಕೇಳಿಸುತ್ತಿದ್ದ ಈ ವಾದಕ್ಕೆ ಕೊಂಚ ಮತೀಯವಾದಿ ಛಾಯೆಯೂ ಬಂದಂತಿತ್ತು. ಸಾಹಿತ್ಯದಲ್ಲಿ, ಅದರಲ್ಲೂ ಸಾಹಿತ್ಯ ವಿಮರ್ಶೆಯಲ್ಲಿ, ಸುಳಿಯಬಾರದ ಸ್ವಜನ ರಕ್ಷಣೆಯ ವಾಸನೆ ಅಲ್ಲಿ ಮೂಗಿಗೆ ಹೊಡೆಯುವಂತಿತ್ತು. ಅಂದು ತಮ್ಮೆದುರು ದಲಿತ ಕೇಳುಗರೇ ಹೆಚ್ಚಾಗಿ ಇದ್ದುದರಿಂದ ಆ ವಿಮರ್ಶಕರು ಈ ಭಾಷೆ ಬಳಸುತ್ತಿದ್ದಾರೆಂದು ಅನ್ನಿಸಿದರೂ ಆ ಧಾಟಿಯನ್ನು ಕೇಳಿಸಿಕೊಳ್ಳುವುದು ಅಷ್ಟೇನೂ ಹಿತಕರವಾಗಿರಲಿಲ್ಲ. ಆದರೆ ದಲಿತ ಸಂಘರ್ಷ ಸಮಿತಿ ಪ್ರಬಲವಾಗಿದ್ದ ಕಾಲದಲ್ಲಿ ನಾನು ಭೇಟಿಯಾಗುತ್ತಿದ್ದ ದ.ಸಂ.ಸ.ದ ಗೆಳೆಯರು ನಮ್ಮವರ ಮೇಲೆ ಅಟ್ರ್ಯಾಸಿಟಿ ಆಗಿದೆ ಅಂತಲೋ, ನಮ್ಮವನೊಬ್ಬನಿಗೆ ಕಾಲೇಜಿನಲ್ಲಿ ಸೀಟು ಬೇಕು ಅಂತಲೋ ಮತಾಡುತ್ತಿದ್ದಾಗ ಎಂದೂ ಹೀಗನ್ನಿಸುತ್ತಿರಲಿಲ್ಲ. ಅಥವಾ ಕವಿ ಗೋವಿಂದಯ್ಯನವರ ‘ಕಣ್ಣೀರ ಮಣ್ಣಲ್ಲಿ’ ಎಂಬ ಪದ್ಯದಲ್ಲಿ ‘ಬರಿ ಹೆಸರಿಗೆ ಬಸಿರಾದವರು- ಇವರು ನಮ್ಮವರು’ ಎಂಬುದನ್ನು ಓದಿದಾಗ ಪದ್ಯ ಚೆನ್ನಾಗಿಲ್ಲವೆನ್ನಿಸಿದರೂ ‘ನಮ್ಮವರು’ ಎಂಬ ಪದ ಸಹಜವಾಗಿಯೇ ಕೇಳಿಸುತ್ತಿತ್ತೇ ಹೊರತು ಅಲ್ಲಿ ಜಾತೀಯ ದನಿ ಇದ್ದಂತೆ ಕಾಣುತ್ತಿರಲಿಲ್ಲ.
ಆದರೆ ‘ಬರೆವ ಬದುಕು’ ಅಂಕಣ ಮುಗಿಯುವ ಕೆಲ ವಾರಗಳ ಮುಂಚೆ ಈ ಟಿಪ್ಪಣಿಯ ಆರಂಭದಲ್ಲಿ ಹೇಳಿದ ಗೆಳೆಯ ಪುನಃ ‘ನಮ್ಮವರು’ ಎಂಬ ಪದವನ್ನು ಬಳಸಿದ ಸಂದರ್ಭದಿಂದಾಗಿ ಮತ್ತೆ ಮುಜುಗರವಾಗತೊಡಗಿತು. ಆ ಬಗ್ಗೆ ತನ್ನ ಅಭಿಪ್ರಾಯ ಹೇಳಿದ ಗೆಳೆಯ ಈ ಅಂಕಣದಲ್ಲಿ ನಮ್ಮವರು ಇನ್ನೂ ಯಾರ್ಯಾರದು ಬರುತ್ತೆ? ಎಂದು ವಿಚಾರಿಸಿದ. ಅದಕ್ಕೆ ಏನೋ ಒಂದು ಉತ್ತರಕೊಟ್ಟ ನನಗೆ ನಂತರ ಅನ್ನಿಸಿದ್ದು ಇದು: ಈತ ಎಂದೂ ತನ್ನ ಸ್ವಂತದ ಲೇಖನ, ಕತೆ, ಕವಿತೆಯ ಬಗ್ಗೆ ನನ್ನ ಬಳಿ ಹೇಳಿಕೊಂಡಿಲ್ಲ. ತನ್ನನ್ನು ನಾನು ಮೆಚ್ಚಲಿ ಎಂದು ಪರೋಕ್ಷವಾಗಿ ಕೂಡ ಸೂಚಿಸಿಲ್ಲ. ಅಷ್ಟರಮಟ್ಟಿಗೆ ನಿಸ್ವಾರ್ಥಿಯಾದ ಈತನಿಗೆ ‘ತಮ್ಮ’ ಲೇಖಕರಿಗೆ ನ್ಯಾಯ ಸಲ್ಲಬೇಕೆಂದು ಅನ್ನಿಸಿದೆ, ಅದು ಸಹಜವಾದದ್ದು; ಆದರೆ ಈ ದಲಿತ ಲೇಖಕ- ಚಳುವಳಿಗಾರನಿಗೆ ಆ ಅಂಕಣದಲ್ಲಿ ಬರಬೇಕಾದ ಕನ್ನಡದ ಇತರ ಉತ್ತಮ ಲೇಖಕರ ಬಗ್ಗೆ ವಿಚಾರಿನಬೇಕು ಅನ್ನಿಸಲಿಲ್ಲ; ಹಾಗೆಯೇ ಕನ್ನಡ ಸಾಹಿತ್ಯದಲ್ಲಿ ಇದೀಗ ದನಿ ಮೂಡಿಸುತ್ತಿರುವ ಮಹಿಳೆಯರ ಬಗ್ಗೆಯಾಗಲೀ ಅಥವಾ ಬೆಸ್ತ, ಗಾಣಿಗ, ಬಲಿಜ, ಕುಂಬಾರ ಇತ್ಯಾದಿ ಕೆಳಜಾತಿಗಳ ಲೇಖಕರ ಬಗ್ಗೆಯಾಗಲೀ ವಿಚಾರಿಸಬೇಕು ಅನ್ನಿಸದೆ ತಮ್ಮವರ ಬಗ್ಗೆ ಮಾತ್ರ ಕೇಳಬೇಕೆನ್ನಿಸುತ್ತಿದೆಯೆಲ್ಲ ಹೀಗೆಲ್ಲಾ ಅನ್ನಿಸುತ್ತಿದ್ದಂತೆ ಒಳಗೊಳಗೇ ಕಸಿವಿಸಿಯಾಗತೊಡಗಿತು. ಮೊದಲ ತಲೆಮಾರಿನ ದಲಿತ ಲೇಖಕರಲ್ಲಿ (ಎಷ್ಟು ಬೇಗ ದಲಿತ ಲೇಖಕರ ಎರಡನೇ ತಲೆಮಾರು ಕೂಡ ಬಂದುಬಿಟ್ಟಿದೆ, ಗಮನಿಸಿ) ಕಾಣದ ಈ ಹೊಸ ಬಗೆಯ ಸ್ವಜಸಹಿತರಕ್ಷಣೆ ಆತಂಕಕಾರಿ ಎನ್ನಿಸತೊಡಗಿತು. ಈ ಧೋರಣೆ ಎಲ್ಲಿಗೆ ಮುಟ್ಟುತ್ತಿದೆಯೆಂದರೆ ಹೊಸ ದಲಿತ ಲೇಖಕರು ಹಿರಿಯ ಅಥವಾ ತಮ್ಮ ಸಮಕಾಲೀನ ದಲಿತ ಲೇಖಕರ ಪುಸ್ತಕ ಹಾಗೂ ಸಾಹಿತ್ಯ ಸಾಧನೆಗಳನ್ನು ಕಂಡು ಮಾತ್ರ ಸಂಭ್ರಮಗೊಳ್ಳತೊಡಗುತ್ತಾರೆ; ಅದರಲ್ಲೂ ಪುರುಷ ದಲಿತ ಬರಹಗಾರರು ಅವರಿಗೆ ಮುಖ್ಯವಾಗಿ ಕಾಣುತ್ತಾರೆಯೇ ಹೊರತು ಜಾಹ್ನವಿ ಥರದ ಲೇಖಕಿಯಲ್ಲ. ಇತರ ಲೇಖಕರು ದಲಿತರ ಬಗ್ಗೆ ಬರೆದದ್ದು ಮಾತ್ರ ತಮ್ಮ ಅವಗಾಹನೆಗೆ, ಚರ್ಚೆಗೆ ಅರ್ಹವೆಂದು ಅವರಿಗೆ ಕಂಡುಬರತೊಡಗುತ್ತದೆ. ದಲಿತರ ನೋವನ್ನು ಚಿತ್ರಿಸುವ ಭಾಗಗಳು ಮಾತ್ರ ‘ಒಳ್ಳೆಯ ಸಾಹಿತ್ಯ’ವೆಂದು ಅನ್ನಿಸತೊಡಗುತ್ತದೆ.
ಇವೆಲ್ಲವನ್ನೂ ಊಹೆಯಿಂದ ಹೇಳದೆ, ನಾನು ಆಗಾಗ್ಗೆ ಗಮನಿಸಿದ್ದಷ್ಟನ್ನೆ ಇಲ್ಲಿ ಹೇಳುತ್ತಿದ್ದೇನೆ. ಈ ಬಗೆಯ ಅಸಾಹಿತ್ಯಿಕ ಬೆಳವಣಿಗೆಗಳನ್ನು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೂಲಕ ವಿವರಿಸುವುದು ಕೂಡ ವ್ಯರ್ಥ. ಬರಬರುತ್ತಾ ದಲಿತ ಲೇಖಕರ ಬಗ್ಗೆ ಅಂಧಾಭಿಮಾನದಿಂದ ವರ್ತಿಸುವುದು ಕೂಡ ಇಂಥ ಬೆಳವಣಿಗೆಗಳ ಹಿಂದೆಯೇ ಶುರುವಾಗುತ್ತದೆ. ಬಹಳಷ್ಟು ದಲಿತ ವಿಮರ್ಶೆ ಕೂಡ ಸರಿಯಾದ ಸಾಹಿತ್ಯಿಕ ಮಾನದಂಡಗಳನ್ನು ರೂಪಿಸಿಕೊಳ್ಳಲಾರದೆ ಇದೇ ಬಲೆಯಲ್ಲಿ ಸಿಕ್ಕಿಕೊಂಡಂತೆ ತೋರುತ್ತದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬ್ರಾಹ್ಮಣ ಲೇಖಕರ ಬಗ್ಗೆ ಬ್ರಾಹ್ಮಣರು ಅಥವಾ ಕುವೆಂಪು ಅವರ ಬಗ್ಗೆ ಒಕ್ಕಲಿಗರು ಇಂಥ ಅಸಹ್ಯಕರ ಮಾದರಿಗಳನ್ನು ಹೇರಳವಾಗಿ ಸೃಷ್ಟಿಸಿಹೋಗಿದ್ದಾರೆ. ಹೊಸ ಕಾಲದ ಲೇಖಕರು ಕೂಡ ಅದಕ್ಕೆ ತಮ್ಮ ಕಾಣಿಕೆ ಕೊಡಹೊರಟಿರುವುದು ದುರದೃಷ್ಟಕರ.
(ಜೂನ್ 24, 1998)

‍ಲೇಖಕರು avadhi

May 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kirankumari

    ಸರ್,
    ನಿಮ್ಮ ವಿಮರ್ಶೆ ಮತ್ತು ವಿಶ್ಲೇಷಣೆ- ಅತ್ಯ೦ತ ಸ೦ದರ್ಬೋಚಿತವಾಗಿದೆ. ಇತ್ತೀಚೆಗೆ ನನ್ನ ಆತ್ಮೀಯ ದಲಿತ ಯುವ ಲೇಖಕ-ರೊಬ್ಬರು ಇ೦ಥದ್ದೇ ನಿಲುವನ್ನು ಸಾಮಾಜಿಕ ನೆಲಯ ಆಶಯದಲ್ಲಿ ಪ್ರತಿಕ್ರಿಯೆ ಹ೦ಚಿಕೊ೦ಡರು.[ ಕಥೆಯ ಶೈಲಿ..ಭಾಷೆ ಮತ್ತು ಅದರ ಹಿ೦ದಿರುವ ತಾತ್ವಿಕತೆ ಅಧಿಕೃತತೆ..ಕುರಿತಾಗಿ. ] ಇದೇ ಸ೦ದರ್ಭದಲ್ಲಿ ಇತರ ಜಾತಿ ವಿನ್ಯಾಸದಲ್ಲಿ ಹುಟ್ಟಿದ , ಬೆಳೆದ ಲೇಖಕ-ಲೇಖಕಿಯರ ಸಾಮಾಜಿಕ, ಸಾ೦ಸ್ಕೃತಿಕ , ಲೈ೦ಗಿಕ ಅನನ್ಯತೆಯನ್ನು ನಿರ್ಧಾಕ್ಷಿಣ್ಯವಾಗಿ ನಿರಾಕರಿಸುವ ಈತ, ಸಾರಾಸಗಟಾಗಿ..ದಲಿತ – ಗ೦ಡು ಮತ್ತು ಹೊಲೆಯ ಸಾ೦ಸ್ಕೃತಿಕ -ಕಥಾಲೋಕದ ಒಳಗೆ ಮತ್ತೊ೦ದನ್ನು ಮಾತ್ರ ತುಲನೆ ಮಾಡಿ ನೋಡಿದ್ದು. ಅದು ಅತ್ಯ೦ತ ಶ್ರೇಷ್ಟ ಎ೦ದು ಬಿ೦ಬಿಸಿದ್ದು..ಮನಸ್ಸಿಗೆ ಆತ೦ಕವಾಗಿತ್ತು.
    ನಾನು ದಲಿತೇತರಳಾಗಿದ್ದು..ಮುಕ್ತವಾಗಿ ” ನಮ್ಮವರು ” ಎ೦ಬ ಪದ\ಶಬ್ದಾರ್ಥಗಳಿ೦ದ ಹೊರಗುಳಿದು ಮಾತನಾಡಲಿಲ್ಲ. ಎಚ್ಚರಗೊ೦ಡ ನಮ್ಮ ನಮ್ಮವರ ಒಳಗೆ ಇ೦ಥ ಸೀಮಿತ ಅರ್ಥ ವ್ಯಾಖ್ಯಾನ ಸಮುದಾಯ ಮತ್ತು ಅನನ್ಯತೆಗಳನ್ನು ಮತ್ತೆ ಮೂಲಭೂತವಾದದ ಕಡೆಗೆ ಕಟ್ಟಿ ಹಾಕಬಹುದೇನೋ ಎ೦ದು ನನಗನ್ನಿಸುತ್ತಿದೆ. ಅವರ ಆತ್ಮಾಭಿಮಾನಕ್ಕೆ ಖ೦ಡಿತ ನನ್ನ ಸಹಮತವಿದೆ. ಆದರೆ ಒ೦ದರ ವಿರುದ್ದ ಮತ್ತೊ೦ದು..ಎ೦ಬ ವಿಚಾರಧಾರೆ..ಆರೋಗ್ಯಕರ ಸಮಾಜದ ಲಕ್ಷಣವಲ್ಲ..ಎ೦ಬುದು ನನ್ನ ನ೦ಬಿಕೆ. ಧನ್ಯವಾದಗಳು..ನಿಮ್ಮ ಚಿ೦ತನೆಯ ಪ್ರಖರತೆಯಿ೦ದ ಮತ್ತಷ್ಟು ಸ್ಪಷ್ಟವಾಗಿ ವಿವರಣೆನೀಡಲು ಪ್ರಯತ್ನಿಸುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: