ದಾಸಯ್ಯನ ಕಥೆ ದಿನಾಲೂವೆ ರಾತ್ರಿರಾಮಾಯಣ ಆಗದಾ?

ದಾಸಯ್ಯ

ಹೆಚ್.ಆರ್.ಸುಜಾತಾ

ನಮ್ಮೂರಲ್ಲಿ, ಹೆಂಡ ಕುಡ್ಡಿರೋ ಹೊತ್ನಲ್ಲಿ ,ಯಾರಾದರೂ ಗಂಡಸರು, “ಅವಳಿಗೆ ಅಂಗ್ ಮಾಡಿಬಿಟ್ಟೆ. ಇಂಗ್ ಮಾಡಿಬಿಟ್ಟೆ”. ಅಂತ ಜಂಭ ಹೊಡುದ್ರೆ “ಹೋಗೋ ಮೂಳ, ನನ್ನೆದಿರೆಗೆ ಜಂಭ ಕೊಚ್ಕಳುವಂತೆ. ಹೆಂಡ್ತಿ ಸೆರಗಿಗೆ ಹೋದಮೇಲೆ ಅವಳ ಕೈಲಿ ಮೂತಿ ತಿವುಸ್ಕಂತಿಯ” ಅಂತ ನಮ್ಮವ್ವ, ಆ ಗಂಡಸಿನ ಪೌರುಷನ, ತಳ್ ಹಾಕ್ಬುಡೋದು. ತನ್ನ ಪಾಡಿಗೆ ತಾನು ಕೆಲ್ಸಕ್ಕೆ ಹೋಗದು. ದೂರು ಹೇಳಕೆ ಅಂತ ಮೀಸೆ ತಿರುವ್ಕಂದು ಬಂದು ನಿಂತಿದ್ದ ಗಂಡುಸ್ರು ಈ ಮಾತ ಅರಗುಸಕಳಕ್ಕಾಗದೆ ಮೀನು ತಿನ್ನೊವಾಗ ಗಂಟ್ಲಲ್ಲಿ ಮುಳ್ಳು ಸಿಗ ಹಾಕಂಡಂಗೆ ಮುಖ ಮಾಡರು. ಊರು ಹೊಟ್ಟೆ ತುಂಬಿ ಕಿರುನಗೆಯ ತುಟಿ ಕಚ್ಕಂದು ತಡ್ಕದು.

ಒಂದಿನ ಇಂಗೆ ಮೇಗಳಕೆರಿ ಬಾಲಪ್ಪ ಚಿಗಯ್ಯ ಮನಿಗೆ ಬಂತು. ನಮ್ಮ ಕರಿಯ ಅನ್ನೋ ನಾಯಿ ಬಾಗ್ಲೆತ್ತೆರಕ್ಕೆ ಹೋಗಿ ನಿಂತ ಕೂಡ್ಲೆ ಯಾವಾಗಲು ತಗ್ದೆ ಇರೋ ಮುಂದ್ಗಡೆ ಬಾಗ್ಲನ್ನ ಬಂದ್ ಮಾಡಿ ಬಿಗಿಯಾಗಿ ಇಡಕೊಂಡು ಚಿಗಯ್ಯ  ಜೋರಾಗಿ ಕೂಕ್ಕಂತು. “ಅತ್ಗೆ, ಈರಾಪುರದತ್ಗೆ”  ಅವ್ವ ಬಂದು ಕರಿಯಂಗೆ ಗದರಿದೇಟ್ಗೆ, ಅದು ಬಾಲವ ಹಿಂದ್ಗಡೆ ಕಾಲೊಳಗೆ ಸಿಗ್ಗಾಕ್ಕಂದು ಹಿಂದ್ಮಕ್ ಹೋಯ್ತು. ಬಾಲಪ್ಪಣ್ಣ “ಈ ನಾಯಿಗೆ ಈ ಜನ್ಮದಲ್ಲಿ ಯಾರು ಒಳ್ಳೆರು ಯಾರು ಕೆಟ್ಟೋರು? ಅನ್ನೋದು ತಿಳಿಯದಿಲ್ಲ ಬುಡು,, ನಾಯ್ಮುಂಡೆದು” ಅಂಥ ಅದನ್ನ ಹೀಯಾಳಿಸಿ, ಊಟದ ಮನೆ ಬಾಗಿಲಲ್ಲಿ ಬಂದು ಕುಂತ್ಕಂತು. ಅವ್ವ ಅಡಿಗೆಮನೆಗೂ, ದೇವರಮನೆಗೂ ಓಡಾಡ್ತಲೇ ಮಾತಾಡ್ತಿತ್ತು. ಯಾಕಂದ್ರೆ… ಆಕಡೆ ದೇವರಮನೆ. ಈ ಕಡೇ ಅಡಿಗೆಮನೆ. ಮಧ್ಯದಲ್ಲಿ ಊಟದಮನೆ.

ದೇವರಮನೆಲಿ ಅಲಾದಿ ಒಂದು ಚಡ್ತಮಾಡಿ ದೇವ್ರನ ಕೂರಿಸಿದ್ರು.  ಬಾಕಿ ಜಾಗದಲ್ಲಿ ಮನೆಗೆ ಬಳಸೋ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಬಾಳೆಗೊನೆ, ಸೋರೆಕಾಯಿ, ಅಕ್ಕಿಮೂಟೆ, ಅಸ್ಸಿಟ್ಟು, ರೊಟ್ಟಿ ಹಿಟ್ಟ ಕಲ್ಸೋ ಮರಿಗೆ,  ಹಿತ್ತಾಳೆ ತಂಬಾಳೆ, ಸೊಂಟದುದ್ದ ಇರೊ ಇಡ್ಲಿ ತಪ್ಪಲೆ, ಮಜ್ಜಿಗೆ ಕಡಿಯೊ ಮಂತು, ಕುಡ್ಲು ಮಚ್ಚು, ದನದ ಹುರುಳಿ, ದವಸ ಅಳೆಯೋ ಹಿತ್ತಾಳೆ ಸೇರು, ಮೊರ, ವಂದರಿ, ಅಂಗೇಯ ಬತ್ತರಾಗಿ ಅಳಯೋ ಮರದ ಮೂರು ಸೇರಿನ ಬಳ್ಳ, ಆರುಸೇರಿನ ಇಬ್ಬಳಿಗೆ (ಕೊಳಗ), ಅದರೊಳಗೆ ತುಂಬಿಟ್ಟ ಕೊಳಿಗಾಕೋ ಅಕ್ಕಿನುಚ್ಚು, ನುಚ್ಚೊಳಗೆ ಯಾವಾಗೂ ತುಂಬಿರೋ ಕೋಳಿಮಟ್ಟೆ, ನುಚ್ಚಿನ ಆಸೆಗೆ ಅಂಗೊದಪ, ಇಂಗೊದಪ ಕಣ್ತಪ್ಸಿ ಬರೋ ಮೊಟ್ಟೆಕೋಳಿ, ದೊಡ್ಹುಂಜ, ಕಡತ, ಹಿಂಗೆ…ನಮ್ಮ ರೈತರ ಅಡಿಗೆ ಮನೆಯ ಸಕಲೈಶ್ವರ್ಯವು ಅಲ್ಲಿ ಇರವು. ಒಳಗೆ ಮೆಲ್ಲಗೆ ಕಳ್ಳ ಹೆಜ್ಜೆ ಇಡತಾ, ಸಂಚು ಮಾಡಕಂದು ಮೆಟ್ಟಲು ಹತ್ತಿ ಬರೋ ಕೋಳಿಯ “ಇಷ್ಯಾ…” ಅಂತ ಓಡಿಸೋ ಸ್ವರವ ಅವ್ವ ಅಡಿಗೆ ಮನೆಯಿಂದಾನೆ ಕೂಗದು.

ಯಾಕಂದ್ರೆ ಮಂಡಿ ಮೇಲೆ  ಕೂತ್ಕಂದು ಮೂರು ಸೇರು ಅನ್ನಬಸ್ದು  ಕೆಂಡದಮೇಲೆ ಅದ್ನ ಅರಳಕ್ಕಿಡತಿರದಾ?  ಓಗಾಲೆಲಿ ಎತ್ತಿಗೆ ಆರು ಸೇರು ಹುರಳಿ ಬೇಯಸಕ್ಕೆ ದೊಡ್ದ ಮಡಕೆ ಇಡತಾ ಇರದಾ? ಇತ್ಲಾಗೆ ಕಡೆದಿಟ್ಟಿರೊ ಮಜ್ಜಿಗೆ ಗುಡಾಣ ಅನ್ನದು ಸಿಂಬಿ ಮೇಲೆ ವಾರೆಯಾಗಿ ಕುಂತ್ಕಂದು, ಬಾಯ ಬುಟ್ಕಂದು ಅವ್ವನ್ನೇ ಕರಿತಿರದಾ?  ಅದರೊಳಗೆ ನೊರೆ ಸುತ್ಕಂದಿರ ಬೆಣ್ಣೆ ಅವ್ವನ್ನ Nammuru-1ಕೈನೇ…. ಕಾಯತಿರದಾ? ಹೊತ್ತೇರುದ್ರೆ ಬಿಸ್ಲು ಕಾವಿಗೆ ನಿನ್ನ ಕೈಗ್ ಸಿಗದೆ ಕರಗಿಹೋತಿನಿ ನೋಡು! ಅನ್ಕಂದು ಅದು ಎದೆ ಮೇಲೇ ನಿಂತಕಂದು ಕೇಳ್ತಿರದಾ? ಆಗ ಇರೊ ಕೆಲ್ಸ ಬುಟ್ಟು ಓಡೋಗಿ ಮಜ್ಜಿಗೆಯ ಬಡಬಡನೆ ದಡುಮಿ ತೇಲೋ ಬೆಣ್ಣೆಯ ಗೋರಕಂದು ಅಂಗೈ ಮೇಲೆ ಆಡಸೋ ಮಗಿನಂಗೆ ಹುಶಾರಾಗಿ ಎಸುದು ಎಸುದು, ಹಿಡುದು ಹಿಡುದು ದುಂಡನೆ ಉಂಡೆ ಕಟ್ತಿರದಾ? ಅಂಬಾರದಲ್ಲಿ ಚಂದಮಾಮನ್ನ ತೇಲಬಿಟ್ಟಂಗೆ ಮಜ್ಜಿಗೆ ವಳಗೆ ಒಂದೊಂದೇ ಉಂಡೆಯ ಕಟ್ಟಿಕಟ್ಟಿ ಮಡಿಕೆ ಸುತ್ತೋ ಮಜ್ಜಿಗೆ ಮೇಲೆ ತೇಲಿ ಬುಡತಿರದಾ?

ಆಕಾಶದಲ್ಲಿ ಒಂದೆ ಒಂದು ಚಂದಪ್ಪ ತೇಲತನೆ ಅಂದ್ರೆ ನಮ್ಮನೆ ಅಡುಗೆ ಮನೆಲಿ ಕಪ್ಪು ಮಡಕೆ ವಳಗೆ ಬಗ್ಗಿ ನೋಡುದ್ರೆ, ಒಂದು, ಎರಡು ಅಲ್ಲದೇಯ  ಬೆಣ್ಣೆ ಉಂಡೆ ಸೆರಗಲ್ಲಿ ಇನ್ನೂ ಒಂದು ಪಿಡ್ಚೆ ಗಾತ್ರದ್ದು ಸಣ್ಣ ಉಂಡೆನೂ ಇರದು. ಚಂದಪ್ಪಂಗೆ ಮದ್ವಿಲ್ಲ. ಮುಂಜಿಲ್ಲ ಒಬ್ಬಂಟಿ ಅಂದೋರು ಯಾರು? ನಮ್ಮನೆ ಕರಿ ಕತ್ಲಂಗಿರೊ ಮಜ್ಜಿಗೆ ಮಡಕೆ ವಳೂಗೆ ಅವನು ಬೆಳದಿಂಗಳ ಹರಿಬುಟ್ಟಿರೊ ಆ ಹರಗೇಲಿ ಅವನ ಸಂಸಾರವೇ ತೇಲತಿರೋದು. ಒಂದು ಕಡಾವಿಗೆ ಎಷ್ಟು ಸೇರು ಬೆಣ್ಣೆ ಬರುತ್ತೋ? ಅಷ್ಟು ಜನ ಅದರೊಳಗೆ ಇರೋರು. ತಿಂಗಳುಮಾವ, ಅವನ ಹೆಂಡತಿ ಮಕ್ಕಳು ಒಮ್ಮಕೆ ಈಜ ಬಿದ್ದಿರರು. ಬಿಳಿ ಅಂಬಾರನೂ ಹೋಲ್ತಲೇ, ಅದು ಸೇರೋ ಅಂಥ ಸಮುದ್ರನೂ ಹೋಲತಲೇ,  ವಿಶ್ವದರ್ಶನದಲ್ಲಿ ತೇಲಾಡೊ ಗ್ರಹಗತಿಗಳ್ನ ತನ್ನೊಳುಗೆ ತೇಲುಸ್ತಾ ಈ ಮಜ್ಜಿಗೆ ಮಡಿಕೆ ಅನ್ನೋ ಭೂಮಂಡಲ ನಮ್ಮ ಸಣ್ಣ ಕಣ್ಣಿಗೆ ಕಾಣದ ಎಲ್ಲಾ ವಿಸ್ಮಯನೂ ಕಾಣಸದು. ಇದನ್ನ ಇಷ್ಟೊತ್ತು ಮೂಲೇಲಿ ನಿಂತು ನೋಡತಿದ್ದ  ಬೆಣ್ಣೆಲಿ ಮಿಂದಿರೋ ಮಂತನ್ನ ಹುರುಳಿ ಬೇಯಸೋ ಬಿಸಿ ನೀರಿಗೆ ಅದ್ದಕ್ಕೆ ಅವ್ವ ತಗೋಳದು. ಆಗ ನಾವು ಹತ್ರಕ್ಕೆ ಹೋಗಿ ಅಂಗೈ ಅಗಲ ಮಾಡಿ ಹಿಡುದ್ರೆ, ಅದರ ತುಂಬ ಕಡೆದಿರೊ ಮಜ್ಜಿಗೆ ವಾಸನೆ ಘಮನದ ಬೆಣ್ಣೆ ಅಕ್ಕರೆಯಿಂದ ಬೀಳದು. ಅದ ನಾಲಿಗೇಲಿ ನೆಕ್ಕತಾ ನೆಕತಾ ನಮ್ಮ ನಾಲಿಗೆ ಎರಡಾಗದು.

ಆ ರುಚಿಯ ಬರಿ ಮಾತಲ್ಲಿ ಕಟ್ಟಿಕೊಡೊಕ್ಕಾಗದಿಲ್ಲ. ಅಂದು ತಿಂದಿರೊ ನಾಲಿಗೆ ಮೇಲೆ ಅದರ ತಾಜಾತನ ಇಂದೂವೆ ಅಂಗೇ… ಉಳದು ಹೋಗಿದೆ. ಅಜ್ಜಿ ಕೈಯಲ್ಲಿ ತಿರುಗಿ ತಿರುಗಿ ಸಾಕಾಗಿ, ಅವ್ವನ ಕೈಯಲ್ಲಿ ಸುತ್ತಿಸುತ್ತಿ, ಅತ್ತಿಗೇರು ಕೈಲ್ಲೂ  ಗಿರಕಿ ಹೊಡದ ನಮ್ಮನೆ ನಂದನವನದ ಅಂಥಾ… ಸಮುದ್ರನೇ ಕಡೆದ ಆ ಭೂಚಕ್ರ ಇತ್ತೀಚೆಗೆ ತವರಿನ ಮನೆ ರಿಪೇರಿ ಆಗಿ ನಿಂತಂಥ ಹೊಸ ವ್ಯವಸ್ಥೆಲಿ ನೊಂದು ಸೌದೆಗುಡ್ಲಲ್ಲಿ ಬಿದ್ದಿತ್ತು. ಅದು ನನ್ನ ಕಣ್ಣಿಗೆ ಬಿದ್ದು ಮತ್ತೆ ಮಿಂಚೆಣ್ಣೆಲಿ  ಅದು ಮಿಂದು ಈಗ ನನ್ನ ತವರಿನ ಬೆಣ್ಣೆ ಮೂಲೆಯಿಂದ  ಬೆಂಗಳೂರಿನ ಈ ಮೂಲೆಗೆ ಬಂದು ನಿಂತಿದೆ. ಈಗಿನ ಹುಡ್ಲುಗೆ “ಮಂತು ಅಂದ್ರೆ ಏನು?” ಅಂತವೆ? ಹಿಂಗೆ ಊರಾನುಊರಿಗೇ ಮಜ್ಜಿಗೆ ಕೊಟ್ಟು ತಣಿಸಿದ್ದ, ಬೆಣ್ಣೆತುಪ್ಪದಲ್ಲಿ ಇಡೀ ಕುಟುಂಬದ ಮೈ ಮನಸನ್ನು ಮೀಯಿಸಿದ್ದ, ಬಂದ ನೆಂಟರಿಷ್ಟರ, ಬಿಸಿಲಲ್ಲಿ ದಣಿದು ಬಂದವರ ಸಲುಹಿದ್ದ ಈಂ…ಥ ದೊಡ್ದ ಬದುಕು ತವರು ಮನೆಯಲ್ಲಿ ಸುರ್ರಬರ್ರ ಅನ್ನಕಂದು ಒಂದೆಪ್ಪತ್ತು ವರುಶ ಸೋಲಿಲ್ಲದೆ ಆಡಿ, ಹಾಡನ್ನೂ ಹಾಡಿ, ಮನೇಗೆ ನಿಶೆ ಹತ್ತಿಸಿ, ಎದೆಯಲ್ಲಿ ಸಾವಿರ ಪದ ಹೊತ್ತು  ನಿಂತ ಸೋಬಾನೆ ದೊಡ್ಡಕ್ಕಂದ್ರ  ಥರದಲ್ಲಿ, ಮಾತಿಲ್ಲದೆ ಅದು ಈಗ, ಮೂಕನಂಗೆ ಆಗಿ ಹೋಗಿದೆ.

ಹಿಂಗೆ ಒಂದಾ? ಎರಡಾ? ಮನೆ ಒಳ್ಗಿನ ಅವ್ವನ ಪಾಲುಪಾರಿಕತ್ತು ಅನ್ನವು, ಆ ದಿನದಲ್ಲಿ. ಚಿಗಯ್ಯ ಅತ್ತಗೊಂದಪ, ಇತ್ತಗೊಂದಪ, ಓಡಾಡ್ತಿರೊ ಅವ್ವನ್ನ ತಿರಿಕೊಂಡು ನೋಡ್ತಲೇ “ಅಲ್ಲ ಕನತ್ಗೆ, ನೀವೇ ಯೋಳಿ. ಬಾಯ್ ಮಾಡ್ತಾಳೆ ಬಾಯ, ಅದ್ಕೆ ಬಿಗ್ದೆ ನೋಡಿ. ಸರಿಯಾಗಿ ಸೊಂಟ ಮುರಿಯಂಗೆ ಕೊಟ್ಟಿದೀನಿ” ಅಂತ ಹೆಂಡ್ತಿಗೆ ಬಯ್ಕಂತು. “ಥೋ…ನಿನ್ನ, ಏನ್ ಮಾತು ಅಂತ ಆಡ್ತಿಯ ಬುಡು. ಆ ಗೌರಿ ಹೋತ್ನಳ್ಳಿಪುರದಲ್ಲಿ ಅಷ್ಟುರಮಟ್ಟಿಗೆ ಬೆಳದಿದ್ಲು. ಇಲ್ಲಿ ಬಂದು ನಿಮ್ಮವ್ವಂತವ ನೀಸಾಯ್ತು. ಈಗ ನಿಂಥವ ನಿಸ್ಬೇಕು. ಅವಳದು ಕರ್ಮಕನೋ” ಅಂತೇಳಿ  ತನ್ನ ವಾರಗಿತ್ತಿನ ವಹಿಸ್ಕಂತು. ಅವ್ವ ರೇಗಿ… ಹೇಳಿದ ಮಾತಿಗೆ ಚಿಗಯ್ಯ ತಟ್ಟನೆ ಸುಮ್ಗಾಯಿತು.

ಅವ್ವ “ಎದ್ದೋಗು ಇವಾಗ, ಏನು ಬಾಳ್ಮೆ ನಿಮ್ದು. ಬಾಯಿ ನೋಡ್ರೆ ಬೊಂಬಾಯಿ. ಬಾಳ ನೋಡುದ್ರೆ ಬಡಕೊಂಡ್ರು ಅನ್ನಂಗೆ. ನೆಟ್ಟಗ್ ನ್ಯಾರಕ್ಕೆ ಸಂಸಾರ ಮಾಡಬೇಡಾ ಅಂಥರೆನೋ! ನಿಮ್ಮ. ರಾತ್ರಿ ಹೊತ್ನಲ್ಲಿ ಕುಡ್ದು ಲೈಟ್ ಕಂಬದ ಕೆಳಗೆ ಕುಣಿಯೋದು. ಅವಳ್ನ ಆಚೆಗೆ ತಂದು ದಬ್ಬೋದು. ಬೆಳಗಾಗೆದ್ರೆ  ಅವರಿವರಿಗೆ ಗಿಳಿಪಾಠ ಒಪ್ಪಿಸಿ ಪೌರುಷ ತೋರುಸ್ಕಂಡು, ನನ್ನಂತ ಮೀಸೆ ತಿರುವೊ ಗಂಡಸೆ ಇಲ್ಲ ಅಂತ ಹೇಳಕ್ ಬರ್ತೀಯಲ್ಲ ನಂಗೆ. ನಿನ್ನಂಥ ಬಯಲಾಟದ  ಮುಕ್ಕಂಗೆ ಆ ಚಂದೊಳ್ಳಿ ಹುಡುಗಿ ಕತ್ತ ಹಿಡಿದು ಕೊಟ್ಟವ್ರಲ್ಲಾ! ಆ ಬಡಪಾಯಿಗಳು  ಏನ ಹೇಳನ ?ಹೇಳು ಮತ್ತೆ” ಅಂದೇಟ್ಗೆ ಅದೂವರ್ಗು ತಲೆತಗ್ಗಸಕೊಂದು ಕುಂತಿದ ಚಿಗಯ್ಯತಲೆಯೆತ್ತಿ

“ನೀವು….. ಯಾವಾಗಲು ಅವಳ ಪರವೇಯ… ಹುಂ ಕಣ್ ಅತ್ಗೆ….”ಅಂತ ದೂರತು.

“ಹುಂ ಕಣಪ್ಪ ಮತ್ತೆ…ಕಂಡೋರ ಮನೆ ಹೆಣ್ಮಕ್ಕಳು ತಂದು  ಹೊಟ್ಟುರುಸು ಅಂತ ನಾ ಏಳಕೊಡಲೇನಪ್ಪ? ಎದ್ದೋಗು ಈಗ ಕಂಡಿದಿನಿ.  ಒಂದು ಗಳಿಗೆ ಅಂಗೆ, ಇನ್ನೊಂದು ಗಳಿಗೆ ಇಂಗೆ.  ಭಟ್ಟಿಸಾರಾಯಿ ಸಹವಾಸ ಮಾಡ್ಕಂಡು.”

ಗದಿರದ್ದ ಕಂಡು

“ಓಗ್ಲಿ ಬುಡಿ, ಕುಡಿತಿದ್ದೆ. ಅದ ನಾನೂ ಒಪ್ಕತಿನಿ. ಒಂದು ವಾರದಿಂದ ಕುಡಿದಿದಿನ ನಾನು? ನೀವೇ ಹೇಳಿ. ಈಗಾ… ಅವಳು…ಮಾತಾಡ್ಸುದ್ರು, ಮಾತಾಡಲ್ಲಳು. ನಿವೊಂದ್ಚುರು ಹೇಳಿ ಅತ್ಗೆ ಮತ್ತೆ.” ಚಿಗಯ್ಯ ಮೆತ್ತಗಾಗಿ ಅವ್ವನ್ನ ಪೂಸಿ ಹೊಡಿತು.

“ಆಯ್ತು ಓಗು ಬಾಲಪ್ಪ. ನಂಗೆ ಕೆಲ್ಸಿತೀಗ. ಸಾಯಂಕಾಲ ನೀರಿಗೆ… ಬಾವಿ ತಕ್ ಬತ್ತಳಲ್ಲ, ಆಗ… ಏಳ್ತೀನಿ ಓಗು” ಅಂತ ಸಾಗ ಹಾಕ್ತು. ನಾನು ಬಾಯಿ ಬಿಟ್ಕೊಂಡು ಕೇಳ್ತಾ ಕುಂತಿದ್ದೆ.

ಸಾಯಂಕಾಲ ಅವ್ವ ತನ್ನ ಉದ್ದನೆಕೂದ್ಲನ ಮುಂದ್ಗಡೆ ಮೆಟ್ಲಮೇಲೆ ನಿಂತುಕೊಂಡು ಬಾಚ್ಕಳದ್ನೆ ಕಾಯ್ತಿದ್ದೆ. ಅದು ತಾಮ್ರದ ಕೊಡ ತಗಂದೆಟ್ಗೆ, ಸಣ್ಣ ಬಿಂದಿಗೆನ ನಾನೂ ತಗಂಡು ಅವ್ವನ ಸೆರಗ ಹಿಡ್ಕಂಡು ಬಾವಿತಕ ಹೋದೆ. ನೀರ ಸೇದಕಂಡು ಬಾವಿಕಟ್ಟೆ ದಾಟಿ ಮೆಟ್ಲಿಳಿದು ಇನ್ನೇನು ಮನೆಗೆ ತಿರುಗೊ ಸಂದೀಲಿ, ಸೊಂಟದಲ್ಲಿ ಕೊಡ ಇರಿಕ್ಕಂಡೇ ನಿಂತ್ಕಂಡು ಗೌರಿ ಚಿಗವ್ವ ಮತ್ತೆ ಅವ್ವ, ಆ ಇಬ್ಬ್ರಾಳೂವೆ ಕೈ ಬಾಯ ತಿರುಗುಸ್ಕಂಡು, ಸಣ್ಣ ದನಿಲಿ ಮಾತಾಡ್ಕಳ್ಳದ ಕೆಳಸ್ಕಂದ್ರೂವೆ ಇಳಿ ಕಣ್ಣೀರಂಗೆ ನನಗೆ ಅದು ಅರ್ಧ ಗೊತ್ತಾಯ್ತು. ಇನ್ನರ್ಧ ಚಿಗವ್ವನ ಗಂಟಳೊಳಗೆ ಉಳಿದುಹೋದ ದುಖಃದಂಗೆ ಅದು ನನ್ನ ತಲೆ ವಳಿಕೆ ಇಳಿನಿಲ್ಲ. ಕೊನೆಗೆ ಅವ್ವ

“ಬುಡೆ ಗೌರಿ, ಇಳಹೊತ್ನಲ್ಲಿ ಕಣ್ಣೀರ ಹಾಕ್ಬೇಡ. ಮೊದ್ಲು ಮನೆಗೆ ಹೋಗಿ ಒಲೆ ಹತ್ಸು. “ದಾಸಯ್ಯ ಹೆಂಡ್ತಿಗ್ ಹೊಡ್ದಂಗೆ” ಗಂಡಸ್ರದೆಲ್ಲ ಒಂದೆ ಕಥೆ. ಬೇರೋರ ಮುಂದೆ ಎಗ್ರಾಡ್ತಾರೆ. ಮಗ್ಲಿಗ್ ಬಂದ್ರೆ ಮುದ್ದಾಡ್ತಾರೆ ಹೆಂಡ್ತೀರ. ” ಅಂತ ನಗ್ತಾ ಹೇಳ್ತು. ದಾಸಯ್ಯನ ಸುದ್ದಿ ಬರ್ತಿದ್ದಂಗೆ, ಚಿಗವ್ವನೂ ಆ ಮಾತಿಗೆ ನಗ್ತ ನಗ್ತಾಲೆ ತುಂಬಿರೊ ಕೊಡದಲ್ಲಿ, ನೀರ ತುಳುಕುಸ್ಕೂಂಡು, ತುಳುಕಿದ ನಗೆನ ತುಟಿ ಮೇಲೆ ಮಿನುಗುಸ್ತಾ, ಮನಿಗೋಯ್ತು. ದಾಸಯ್ಯ ಇಂಗೆ… ಅವ್ವನ ಮಾತ ವಳಗಿಂದ ಬಂದು ನನ್ನ ತಲೇಲಿ ಭದ್ರಾಗಿ ಕುಂತುಬಿಟ್ಟ.

ಹಿಂಗೆ, ನನ್ನ ತಲೆ ವಳಿಕೆ ಬಂದ ಕುಂತ ದಾಸಯ್ಯ ಎಂಗಿದ್ದ ಗೊತ್ತಾ? ಅಡ್ಡ ಪಂಚೆ ಉಟ್ಕಂಡು, ಕೊಳೆ ಆಗಿರೊ ಬಿಳಿ ಅಂಗಿ ಮೇಲೆ ,ತೂತಾಗಿರೊ ಕರಿಕೋಟ ತೊಟ್ಕಂದು, ಎಡಗೈಲಿ ಶಂಖ ,ಬಲಗೈಲಿ ಜಾಗಟೆ, ಹೆಗಲಿಗೆ ತಾಮ್ರದ ಬನವಾಸೆ (ತಾಮ್ರದ ಪಾತ್ರೆ) ನೇತ್ ಹಾಕ್ಕಂದು, ಮನೆ ಮುಂದಿರೊ ಮೆಟ್ಲ ಮೇಲೆ ಬಂದು ನಿಂತ್ಕಳನು. ಆಮೇಕೆ…. ಭೋಂ,ಭೋಮ್…… ಅಂತ, ಶಂಖ ಊದುದೇಟ್ಕೆ ನಾವು ಭಿಕ್ಷ ಹಿಡ್ದು ಓಡ್ ಬರತಿದ್ವಿ

“ಇದೇನಿ ರಂಗವ್ವರೆ,ತಿನ್ನಕೆ ಏನಾದ್ರು ಇದ್ದರೆ ಕೊಡಿ….” ಅನ್ನೋನು. ಮುತ್ತಗದ ಎಲೆ ಮೇಲೆ ತಿಂಡಿ ಹಾಕಂಡು ತಂದುಕೊಟ್ಟ ತಿನಿಸನ್ನ, ಜೋಳಿಗೆಗೆ ಇಳ್ಸಕಳನು. ದೈನೇಸಿ ನಗೆ ನಕ್ಕಂತ, ನಡಿಯಾಕೆ ಅಂತಲೇ…. ಇದ್ದಂಥ ಅವನ ಕರಿಕಾಲಲ್ಲಿ ಪುಟಪುಟನೆ ಮುಂದಿನ ಮನಿಗೋಗನು.

13886484_10206504408598485_2306081210907787947_nಮತ್ತೆ ಅದೇ ಶಂಖ,ಅದೇ ಜಾಗಟೆ. ಅದೆ ಮೊಳಗೋ ಶಬ್ದ. ಶನಿ ಶನಿವಾರ ತಿರುಪತಿ ತಿಮ್ಮಪ್ಪನ ನಾಮ ಇಟ್ಕೊಂದು ಬರೊ ಅಂಥ ದಾಸಯ್ಯನ್ನ ನೋಡುದ್ರೆ ಅಜ್ಜಮ್ಮ, “ಮನೆ ಮುಂದೆ ಶಂಖ ಊದುದ್ರೆ ಒಳ್ಳೇದು ಕನವ್ವ. ಅಕ್ಕಿನೊ,ಅಸಿಟ್ಟೊ, ಬಿಕ್ಸ ಹಾಕಿ ಕಳುಸ್ರಲಾ… ಹುಡ್ಲೆ, ಮರಿಬ್ಯಾಡಿ” ಅಂತವ ಶಂಖದ ಕುಟೇ ರಾಗಾ ಎಳೇಯೋದು. ಬಂದಾಗ ಹಾಕೋ ಅಕ್ಕಿ, ಅಸಿಟ್ಟು, ಗೌರಿ ಹಬ್ಬದಲಿ ಮನೆಮನೆಲಿ ಒಂದು ಕಾಯಿ. ಹಬ್ಬಹಬ್ಬದಲ್ಲು ಕರಿದ ಎಣ್ಣೆ ತಿಂಡಿ, ಸುಗ್ಗೀಲಿ ವರ್ಶಕೊಂದಪ ಕಣದ ಮೇಲೆ ಅಳೆಯೋ ಬತ್ತ ರಾಗಿ. ಇಂಗೆ ಹೊಟ್ಟೆಗೆ ಅಂತ ಎಂಗೋ ಇರೋದು. ಬಟ್ಟೆ ಪಾಪ! ಹರದಿರೋವು. ಆಗಿನ ದಿನ್ದಲ್ಲಿ ಎಲ್ರು ಬಟ್ಟೆನೂ ಹರ್ದಿರವು. ದೊಡ್ಡರು ಚಿಕ್ಕೋರು ಅನ್ನದೆ ಎಲ್ಲಾರೂ…. ಹರದಿರೊ ಬಟ್ಟೆನ ಹೊಲ್ಕೊಂಡು, ತೇಪೆ ಹಾಕ್ಕಂದು ಇಕ್ಕಳರು. ಅದ್ಕೆ ಹಳ್ಳೀಲಿ ಯಾರೂ ನಾಚ್ಕೆ ಪಟ್ಟಕಂತಿರಲಿಲ್ಲ. ತಲಿಗೂ ಹಾಕ್ಕಂತಿರಲಿಲ್ಲ.

ಇನ್ನಂದಿನ ಹಿಂಗೆ ನಮ್ಮೂರಲ್ಲಿ ಏನಾತು? ಇನ್ಯಾರೊ ಗಂಡ ಹೆಂಡ್ತಿರು ಹೊಡ್ದಾಡಕಂಡ್ರು. ಆಗ್ಲೂ ದಾಸಯ್ಯನ ಮಾತು ಅಲ್ಲಿಗೆ ಬಂತು. ನಾನು, ಆ ಮಾತಾಡಿದ ಗಿಡ್ಡ ಚಿಗವ್ವರ ಮನೆಗೆ ಹೋದೋಳೆ, ನಾಕಾರು ವರುಶ  ಮರೆಯಾಗಿ ಮತ್ತೆ ಬಂದ ಮಾತನ್ನ ಮಗುಚಿ ಕೇಳುದೆ. “ಚಿಗವ್ವಾ,ಅದೆನು ಹೇಳು? ಗಾದೆ ಮಾತ್ನಂಗೆ ಊರೋರೆಲ್ಲಾ ” ದಾಸಯ್ಯ ಹೆಂಡ್ತಿ ಹೊಡ್ದಂಗೆ, ಹೆಂಡ್ತಿ ಹೊಡ್ದಂಗೆ” ಅಂತಾರಲ್ಲ….ನಮ್ಮ ದಾಸಯ್ಯ ಪಾಪ! ನಿಜವಾಗಲೂ ಹೆಂಡ್ತಿ ಹೊಡಿತಿದ್ನಾ?” ಅಂತವ. ಗಿಡ್ಡವ್ವ ಮೊದ್ಲೆ ಕಾಯ್ಲೆ ಮನುಶಿ. ಬಿಸ್ಲು ಕಾಯಿಸ್ತಾ ಯಾವಾಗ್ಲೂ… ಹಟ್ಟಿ ಬಾಗ್ಲಲ್ಲಿ ಕುಂತಿರೋದು. ಅದು ಇಂಥದ್ದನ್ನೆಲ್ಲ ಹೇಳೊದ್ರಲ್ಲಿ ಒಳ್ಳೇ ರುಸ್ತುಮಿ. ಹೆಣ್ಮಕ್ಕಳನ್ನ ಹೊಡಿತಾರೆ ಅನ್ನೋದೆ ನಮಗೆ ಹೊಸತು! ಆವಾಗ….

ಕೆಳ್ಳಕೇರಿಲಿ ನಮ್ಮ ಅಣ್ಣತಮ್ಮೋರ ಮನೆಗಳು ಇದ್ದವೇ ಮೂರು. ಊರಲ್ಲಿ ಕಡೆ ಮನ್ಗಳು ಬೇರೆ. ಸುತ್ತಮುತ್ತ ತೋಟತುಡ್ಕೆ…. ಹೊಲಗದ್ದೆ. ನಮಗೆ ಊರೋರ ಉಸಾಬರಿ ದೂರ. ನಮ್ಮ ಮನೆಗಳಲ್ಲಂತೂವೆ ಹೆಣ್ಣಮಕ್ಳ ಕಂಡ್ರೆ ಪಂಚ…ಪ್ರಾಣ. ಅಪ್ಪದೀರು, ಅಣ್ಣತಮ್ಮಂದ್ರು, ತಲೆಮೇಲೆ ಇಟ್ಕಂದು ನಮ್ಮ ಮೆರ್ಸೋರು ಅಂಗೇಯ. “ಅವ್ವಾ…. ಮಗ…..”  ಅನ್ನದಲೆ ಬಾಯ ತೆಗೆತಿರ್ಲಿಲ್ಲ ಕನಪ್ಪ. ಕಂಡೋರ ಮನೆ ಹೆಣ್ಣ್ಮಕ್ಳನ್ನೂ… ಅಷ್ಟೆಯ! ಸೊಸೆರ್ನಂತು  ಬುಡು, ತಲೆ ಮೇಲೆ ಹೊತ್ಕಂಡೆ ತಿರಗರು. ಅಂಗಿರೋರು. ಇದ್ದಿದ್ರಲ್ಲಿ  ತಾಯಿರೇ….. ಒಂಚೂರು ಗದ್ರುಕೊಳ್ಳೋರು. ಇಂಗಿರೊವಾಗ, ಊರಲ್ಲಿದ್ದ ಕುಡುಕರು, ಸಿಟ್ಟ ತಡಿದಿರೊರು, ಹೆಣ್ಮಕ್ಕಳು ಮೈಮೇಲೆ ಒಂದು ಏಟ ಹಾಕಿದ್ ಕೂಡ್ಲೆ  ತಗಳಪ್ಪಾ….ಊರ ತುಂಬಾ ಸುದ್ದಿ ಆಗೋಗಬುಡದು.

ಅದ್ರಲ್ಲೂ, ನಮ್ಮ ದಾಸಯ್ಯ ಆಡೋ ಮಾತನ್ನೆ ಮರ್ತಂಗಿರೊನು. ಶಂಖಜಾಗಟೆ ಏನಾರ ಇರಲಿಲ್ಲ ಅಂದ್ರೆ ಅವನು ಊರಲ್ಲಿ ಯಾರ ಅರಿವಿಗೇ ಬರ್ದಂಗಿರೋನಪ್ಪಾ! ಅಂಥೋನು, ಹೆಂಡ್ತಿ ಹೊಡ್ದ ಅಂದ್ರೆ ನಂಬೋದುಂಟಾ? ಅದ್ಕೆ ಅನುಮಾನ ಆಯ್ತು. ಕೇಳ್ದೆ. ಈ ಗಿಡ್ಡಚಿಗವ್ವ ಮೊದ್ಲೆ  ಊರನೇ ಆಡಕೊಳ್ಳೊ ಜಾತಿ… ಅಂಥದ್ರಲ್ಲಿ ನಾನು ಇಂಥ ಸುದ್ದಿ ಕೇಳ್ಬೇಕಾ? ಶುರು ಮಾಡೇಬುಡತು.

“ಬಾ ಇಲ್ಲಿ, ಕೂತ್ಕಾ, ದಾಸಯ್ಯ ಊರ ವಳಿಕೆ ಬಂದ್ರೆ, ಇಂಗಿರ್ತನಲ್ಲ. ತುಟಿಪಿಟಿಕ್ ಅನ್ನದೇಯ. ರಾತ್ರಿ ಹೊತ್ತು ಯಾಕಿಂಗ್ ಆಡಾನು? ಅಂತವ ಎಲ್ಲಾರು ಬಾಯ್ ಮೇಲೆ ಬೆರಳಿಟ್ಕಳರು ಕಣ್ ಮಗ. ಅವನ್ ಮದ್ವೆ ಆಗಿ ಆರೆಳು ವರ್ಶ ಆಗಿತ್ತು ಅನ್ಕ. ಒಂದು ಮಗ ಬೇರೆ ಇತ್ತಲ್ಲಾ? ದಿನಾಲು ರಾತ್ರಿ ಹೊತ್ನಲ್ಲಿ ಅವನ ಹೆಂಡ್ತಿ ಹೂವಿ ದಾಸಯ್ಯನ ಕೈಲಿ ಹೊಡ್ತ ತಿನ್ನೋಳು. ಅದೂವೆ.. ಎಂಗೆ ಅಂತೀಯ? ಅಬ್ಬರ್ಸ್ಕಂದು, ಕೀರಾಡ್ಕಂದು,ಮುಂಡೆ ಮುಕ್ಕ ಅನ್ಕಂದು, ಲಂಗೂಲೊಟ್ಟೆ  ಒಂದ…..ಲ್ಲಾ, ಅಂಗೆ ಬಯ್ದಾಡೊದು ಬೇರೆಯ! ಆ ರಂಪಾಟ……ಬ್ಯಾಡವಂತೆ ಕನ್ ಮಗ. ಕಳೆ ಕೀಳಕ್ಕೆ ಅಂತ ಬಂದ ಹೊಲಗೆರಿ ಹೆಂಗಸ್ರು, ಬೆಳಿಗ್ಗೆ ಎದ್ದುಬಂದು ಹೊಲದಲ್ಲಿ ನುಂಬ ಹಿಡ್ಕಂದು ಕುಂತೇಟ್ಗೆ, ಇದೇ ಮಾತು. ಎಲ್ಲಾರ ಬಾಯಲ್ಲೂವೆ.

“ಅಲ್ಲ, ಅವಳು ಮಲ್ಲಿ ಅಷ್ಟು ದಿಂಡಾದ ಆಳು. ಅವಳನ್ನೆ ಹೊಡ್ದು ಎತ್ ಹಾಕ್ತನಲ್ಲ ಈ ದಾಸಯ್ಯ, ಏನೇಳನ ಹೇಳು ಮತ್ತೆ.”ಅಂತ

ಒಬ್ಬಳು ಅಂಗಂದ್ರೆ, ಇನ್ನೊಬ್ಳು, “ಪಾಪಾ ,ಒಬ್ರು ಕುಟ್ಲು ಹೆಳ್ಕಳ್ದೇಯ ಅಂಗೇ, ವಳಗೇ ನೀಸ್ತಳೆ ಕಣೆ ಮಲ್ಲಿಗೆ” ಅಂತನ್ನೋಳು. ಹಿಂಗೆ ಊರಿಗೆ ಊರೇ ಅವಳ ಕಂಡು ಕರಳ ಸುಟ್ಟಕಳದು. ಬರಬರ್ತ ಗಲಾಟೆ ಅನ್ನೋದು ಜೋರಾತು. ಪಕ್ಕದಲ್ಲೇ ಸೆಟ್ಟಿಚಿಕ್ಕನ ಮನೆ ಅಲ್ವಾ?ಒಂದಿನ ಮಗ ಜೋರಾಗಿ ಬಡ್ಕತ್ತಿತ್ತಂತೆ. ’ಅಪ್ಪೋ….. ಅಪ್ಪ, ….ಅಪ್ಪೋ…..” ಅನ್ಕಂದು. ತಡಿನಾರ್ದೆ ಸೆಟ್ಟಿ ಚಿಕ್ಕನ ಹೆಂಡ್ತಿ ಪುಟ್ಟಿ ಏನ್ಮಾಡುದ್ಲು?

“ಇಂಗೆ ಬುಟ್ರೆ ಹೂವಿಯ ಸಾಯಿಸ್ಬುಟ್ಟಾನು ತಡಿ, ಇವತ್ತು ನೊಡೆ ಬಿಡನ” ಅಂತೇಳಿದ್ದೆಯ ಬಾಗ್ಲುತಕೆ ದಪ್ಪುದೊಂದು ಕಲ್ಲ ತಕಬಂದು ಇಟ್ಕಂದಿದ್ದೆಯ, ಸೂರಿನ ಗಳ ಹಿಡ್ಕಂದಿದ್ದೆಯ, ನೆರಿಕೆ ಬಾಗ್ಲಲ್ವಾ? ನೆಗರಿ ನೆಗರಿ ನೋಡುದ್ಲಂತೇ…… ನೋಡುದ್ದೆ…… ತಗ, ಅಂಗೇ ವಪಾಸ್ ಬಂದೋಳೆ, ಸೆರಗ ಬಾಯಿಗೆ ತುರಿಕಂದಿದ್ದೆಯ, ಮನಿಗೆ…. ಅಂಗೇ…ಓಡಿ… ಹೋಗಬುಟ್ಳಂತೆ. ನಗ ತಡಿನಾರ್ದೆಯ ನೆಲದ ಮೇಲೆ ಬಿದ್ದಕಂದು ಅತ್ಲಗೊಂದಪ, ಇತ್ಲಗೊಂದಪ ಉಳ್ತಳಂತೆ… ನಗ್ತಳಂತೆ. ಉರುಳಿ… ಉರುಳಿ…. ಅಂಗೆ ನಗಾಡಬುಟ್ಲಂತೆ. ಅವಳ ಮಗಳು ವೀರೆಶಿ ಈಗ್ಲೂವೆ ನಗ್ತಾಳೆ ಕಣೆ ಮಗಾ ಅದ ನೆನಕೊಂದು.”

ಗಿಡ್ಡವ್ವ, ಎದ್ದು ಈಗ ಅಡ್ಡಗೋಡೆ ಮೇಲಿಂದ ಬೇಲಿ ಮೇಕೆ ಪಿಚಕ್ಕನೆ ಬಾಯಲ್ಲಿ ತುಂಬ್ಕಂಡಿರೊ ಎಲಡಕೆ ಜೊಲ್ಲ  ಹಾರುಸ್ತು. ’ಇಸ್ಯಾಅ…..’ ಅಂತ ತನ್ನ ಉದ್ದನೆ ಕೋಲಿಂದ ಒಳಗಡಿಕೆ ಬರೊ ಕೋಳಿನ ಹಟ್ಟಿಗೆ ಓಡುಸ್ತು. ಅಲ್ಲೇ ಮೂಲೆಲಿ ಮೊಟ್ಟೆ ಇಕ್ಕಕೆ ಅಂತ ಕೊರುಗುಟ್ಕಂಡು ಕೂತಿದ್ದ ಕೋಳಿಯ ಅಂಡೆತ್ತಿ ನೋಡಿ ಬಿಸಿ ಮೊಟ್ಟೆ ತಗಂತು. ಆ ಬಿಸಿಯ ಕಣ್ಣಗೆ ವತ್ಕಂದು ಒಳಕ್ಕೋಗಿ ಇಟ್ಟು ಬರೋವಾಗ ಕುಕ್ಕೇಲಿದ್ದ ಕಲ್ಲುಮಣ್ಣ ರಾಗಿ ತಂದು ಕ್ಕಕ…

ಕ್ಕಕ …ಕ್ಕಕ……ಅಂತ ಕೂಗಿದ್ದೆ ತಡ ತಕಳಪ್ಪಾ… ಯಾಕೆ ಹೇಳ್ತೀಯಾ? ಬೇಲಿಸಾಲಿಂದ  ಬುಳಬುಳನೆ ಕೋಳ್ಗಳು ಹಾರಾಡ್ಕಂದು ಬಂದ್ವು. ತೂರಾಡ್ಕಂದು ಬಂದವು. ಎಲ್ಲೆಲ್ಲಿದ್ದವೋ, ಏನೋ?  ಹಂಗೆ ಅವು ಬಂದು ಕಚ್ಚಾಡ್ಕಂದು ಮೇವ

ಒಂದೇ ಉಸ್ರಿಗೆ ಮೇಯ್ತಿದ್ರೆ, ಮಾತ್ರವ…. ಈ ಮರಿ ಕೋಳಿ ಒಂದು… ಶಿವನೆ! ತನ್ನ ಕಾಲಲ್ಲಿ ಕೆರದೂ ಕೆರದೂ ಮೇವ ಮರಿಗಳ ಕರದೂ ಕರದೂ ಅದ ತಿನ್ನಕೆ ಬುಡ್ತಿತ್ತು.

ಕೋಳ್ಗಳು, ಮೇವ ತಿನ್ನವಾಗ…. ಸದ್ದ ನೋಡ್ಬೇಕು ನೀವು. ಎಳೆ ಮಗ ತಾಯಿ ಮೊಲೇಲಿ, ಹಾಲ ಗುಟುಕುಸ್ದಂಗೆ ಗುಟ್ಕ ಗುಟ್ಕ ಅಂತಿರ್ತವೆ. ಅಬ್ಬಬ್ಬ! ಅವರವ್ವನ ಹಿಂದೆ ಓಡ್ಡಾಡೋ ಆ ಹೂಮರಿಗಳ ಚೆಂದವಾ? ಏನ್ ಹೇಳಾದು? ಹತ್ತಿ ಉಂಡೆಗೆ ಎರಡು ಸೂಬರದ ಕಾಲ ಸಿಕ್ಸಿ, ಹೂ ಕೊಕ್ಕ ಹಚ್ಚಿ, ಎರಡು ಕರಿ ಗಣಿಕೆ ಹಣ್ಣ ತಂದು ಮುಖದ ಮೇಲೆ ಇಟ್ಟು, ಅವಕ್ಕೆ ಕಣ್ಣ ಕೊಟ್ಟು, ಪಿಯ್ಯಪಿಯ್ಯ ಅಂತ ಸ್ವರ ಕೊಟ್ಟ ದೇವ್ರು, ಎಲ್ಲಿದ್ದಾನೋ? ಕಾ….ಣಪ್ಪ. ಈ ಹಸುಗೂಸುಗಳಿಗೆ ದೇವ್ರು ಅನ್ನೋನು ಜಗತ್ತಿನ ರೂಪಾನೆ ಎರಕ ಹೂದಿರತನಲ್ಲಾ? ಎಂಗೆ? ಅದುಕ್ಕೆ ಅವ ನೋಡಕ್ಕೆ ಒಂದು ಚೆಂದ. ಕೆಂಪು, ಬಿಳಿ. ಕಪ್ಪು, ಅರಿಶಿನ, ಚುಂಚ ಪಂಚ. ಸಂಜೆ ಮುಂದಿನ ಬಣ್ಣೆಲ್ಲಾ, ಭೂಮಿ ಮೇಲೆ ಇಳೂದು… ಹೂವಾಗಿ ಒಡಾಡೊ ಹಂಗೆ ಕಾಣತಾ ಇರದು.

ಇನ್ನೊಂದು ಹಿಡಿ ಮೇವ ಹಿಡ್ಕಬಂದ ಗಿಡ್ಡವ್ವ  “ಓ… ಬಿಳಿ ಕಡ್ತ ಕಾಣ್ತಿಲ್ವಲ್ಲ” ಅನ್ಕಂದು, ಮುಂದೆ ದಿಬ್ಬದ ಮೇಲೆ ನಿತ್ಕಂದು, ವಸಿ ಜೋರಾಗಿ “ಕ್ಕಕ ಕ್ಕಕ ಕ್ಕಕ್ಕ…….” ಅಂತ ಕರೀತಾ ನಿಂತ್ಕಂತು. ಅದೆಲ್ಲಿತ್ತೋ ಬಿಳಿಕಡ್ತ ಓಡಿಬಂತು. ಅಲ್ಲೇ ಮೇವೆಸೆದು ತಂತಾನೆ ಗಿಡ್ಡವ್ವ ಮಾತಾಡ್ಕಂತಾ ಬಂತು. “ಎಲ್ಲೋ ಮುಂಗಸಿ ಕೀರ  ಬಾಯ್ಗೆ ಆಕಂಬುಡ್ತೇನೊ ಅಂತಿದ್ದೆ. ಅದ್ರ ನಾಲಿಗೆ ಸೇದ. ಅದ್ರ ವಂಶ ನಾಸ್ ಮುಕ್ಕ, ಅವಕ್ಕೆ ನಾಗರ ಬಂದು ಹೊಡೆಯಾ. ಇವೂ ಅಂಗೇಯಾ? ಹಸ್ರು ಕಾಲ್ದಲ್ಲಿ ಬೇಲಿ ಸಾಲಿಗೆ ಹೋಗಿ ಸಾಯ್ತವೆ ಅಂಗೇಯಾ? ಬ್ಯಾಡಾ ಅಂದ್ರೂವೆ ” ಅಂತ ಬಯ್ಕಂದು, ಸಮಾಧಾನ ಮಾಡ್ಕಂದು, ಹಟ್ಟಿ ಕಲ್ಲ ಮೇಲೆ ಬಂದು ಕೂತ್ಕಂತು.

ನಾನು ಕೋಳಿಯಿಂದ ಕಣ್ ಕಿತ್ಕಂಡು, ಮತ್ತೆ, ದಾಸಯ್ಯನ ಕಥೆ ಕಡೆಗೆ ಬಂದು ನಿಂತ್ಕಂಡೆ.,

“ಹೇಳು ಚಿಗವ್ವ, ನೀನು ನಿಲ್ಲಸದಲ್ಲ, ವೀರೆಶಿ ಏನೇಳಿದ್ಲು? ಅವ್ರವ್ವ ಪುಟ್ಟೀ ಯಾಕಂಗೆ ಬಿದ್ದೂ ಬಿದ್ದೂ ನಕ್ಲಂತೆ, ದಾಸಯ್ಯನ ಮನೇಲಿ ಏನ್ ನೊಡುದ್ಲಂತೆ?” ಒಂದೇ ಉಸ್ರಿಗೆ ಕೇಳಿದೆ. ಹಲ್ಲಿಟ್ಟು ಬಳ್ಕೊಂಡಿರೊ ಹಲ್ಲ, ಬಿಸ್ಲಲ್ಲಿ ಮಿರುಗುಡುಸ್ತಾ, ಕೆಂಪನೆ ಬಾಯ ಬುಟ್ಕೊಂಡು, ಊದ್ಲಕೆನ್ನೆಯ ಜೋರಾಗಿ  ಹೊರಳ್ಳುಸ್ತಾ, ಹೇಳ್ತು.

” ಪುಟ್ಟಿ  ನೆರಿಕೆ ಬಾಗ್ಲಿಂದ  ನೋಡದ್ಲಾ? ಅಲ್ಲಿ ಏನು ಕಂಡ್ಳು ಅಂತೀಯವ್ವಾ……. ದಾಸಯ್ಯ ಅಂತರೇ ಮಲಿಕ್ಕಂಡವನಂತೆ. ಅವನೆಣ್ತಿ ಎದೆ ಮೇಲೆ ಕೂತ್ಕಂಡು ಅವ್ನಿಗೆ ಹಾಕ್ಕಂಡು ಹೊಡಿತವಳಂತೆ. ಕೂದ್ಲ ಹಿಡಕೊಂಡು ಗೂರಾಡ್ತಾವಳಂತೆ. ಅವ್ನು ತಡೀಲಾರ್ದೆಯಾ ನೋವು ತಿನ್ನಕಂದು, ಅಕ್ಕ ಪಕ್ಕದವುರು ಕಂಡ್ರೆ ಏನಂದಾರು? ಅಂಥವ ಪಾಪ! ಬರಿ ಬಾಯ ಮಾಡ್ಕಂದು

13879368_10206529791433040_4982493123956466614_n“ಮಾಡೀಯೇನೆ ಮುಂಡೆ, ತಗ , ತಗ, ನಿನ್ನ…………… ಏನ  ಮಾಡ್ತೀನಿ  ನೋಡು ಅಂಗೇಯ……. ಹುಟ್ಟಿಲ್ಲ ಅನ್ಸು ಬುಡ್ತಿನಿ . ನಿನ್ನಮ್ಮನ್ನ…. ನಿನ್ನಪ್ಪನ್ನ….”

ಅಂಥ ಪುಗಸಟ್ಟೆ ಹಂಗೆ…. ಕೀರಾಡತಾ ಅವನಂತೆ. ಅವಳು ಒಂದೂ ಮಾತಾಡದೇಯ ಇವ್ನ ಕೆಡುವಕಂಡು ಸರ್ಯಾಗಿ ಹದ ಕಾಯಿಸ್ತವಳೆ. ಹೊರಗಡಿಂದ ಕೇಳ್ದೂರ್ಗ, ಇವನೇ ಹೊಡಿತವ್ನೆ ಅನ್ನಬೇಕು ಹಂಗೆ. ಇಂಗೆ…. ದಾಸಯ್ಯನ ಕಥೆ ದಿನಾಲೂವೆ ರಾತ್ರಿರಾಮಾಯಣ ಆಗದಾ?

ಬೆಳಿಗ್ಗೆದ್ರೆ, ರಾಮನ್ನೂ,ಸೀತೇನೂ ಕಟ್ಕಂಡು ನನಗೇನು?  ಅಂಥ ಇವ್ನು, ಊರಕಡಿಕೆ ಬನವಾಸೆ ಹೆಗಲಿಗೆ ನೇತ ಹಾಕಂಡು ಬಿಕ್ಷಕ್ಕೆ ಬರೋನು. ತಿರುಗಾಡ್ತಾ ಅವನ ಮೈ  ನೋವು  ಹರಿಯೋದು. ಮತ್ತೆ ರಾತ್ರಿಕೆ ಮನಿಗ್ ಹೋಗನ, ತಿರಿಕ್ಕಂಡು ಇದೇ ಕಥೆ . ಅಂಥ ದಯ್ಯ ಹಿಡುಕಿ ಅವನ ಹೆಂಡ್ತಿ.  ಇವನೇನ್ಮಾಡನು? ಇಂಗೆ ಮಾನ ಉಳುಸ್ಕಳನ ಅಂಥ ಪಾಪ ! ಸುಮ್ಮಗೆ ಕೀರಾಡುನು. ಅದೂ ಎಷ್ಟು ದಿನ ನಡಿತದೆ ಮಗ? ಒಂದಿನಲ್ಲ… ಒಂದಿನ… ಬಯಲಾಗ್ಲೇ ಬೇಕಲ್ಲೆ. ಊರಲ್ಲಿ, ಬಾಯಿಂದ ಬಾಯಿಗೆ ಈ ಸುದ್ದಿ ತಿರಗಾಡಿ, ಮನಿಂದಾಚಿಗೆ ಬಂದು ಎಂಡ್ತಿರ ಮೇಲೆ ಯಾರಾದ್ರೂ ಚಾಡಿ ಹೇಳುದ್ರು ಅಂದ್ರೆ, ಆವತ್ತಿನಿಂದ

” ಊಂ…ಕನಪ್ಪಾ! ದಾಸಯ್ಯ….ಹೆಂಡ್ತಿ ಹೊಡ್ದಂಗೆ ಕಣ್  ಬನ್ರಲಾ, ಕೊಚ್ಕಂಬೇಡಿ  ಪೌರುಶವ ಅಂತರೆ, ಕಣ್ ಮಗ  ನಮ್ಮೂರಲ್ಲಿ…..” ಅಂತು.

” ದಾಸಯ್ಯ  ಬಿಕ್ಷಕ್ಕೆ  ಬರಲ್ವಾ ಈಗ” ಅಂತ ನಾನು ಕೇಳದೆ.

“ಮೂಲೆ ಹಿಡ್ದವನಲ್ಲವ್ವ. ಈ ದೊಡ್ದಮಳೆಗೆ  ಕಾಲೆತ್ಕತನೆ ಅಂತಿದ್ರು ಕಣ್ ಮಗ, ನಾನು ಇತ್ತೀಚ್ಗೆ  ಹೊಲಗೇರಿ ದಿಕ್ಕಗೆ ಹೋಗೇ ಇಲ್ಲ. ಮನೆತಾವಲೇ ಇರ್ತಿನಿ ನೋಡು” ಅಂತು ಚಿಗವ್ವ.

ನಾನು ಎದ್ದು ಯೋಚುಸ್ತಾ, ಕೊಟ್ಟಿಗೆ ಬಾಗ್ಲ ಕಡಿಂದ  ಮನೆವಳಗೆ ಬಂದೆ.

ಆಚೆಕಡೆ ಕಾಣೊ ಒಣಮುಳ್ಳಲ್ಲಿ ಕಟ್ಟಿರೋ ಬೇಲೀನ ತಬ್ಬಕೊಂಡು, ಹಸಿರು ತೂಂಡೆ ಬಳ್ಳಿ ಹಚ್ಚಗೆ ಹಬ್ಬಿತ್ತು. ಅದರ ತುಂಬಲೂ ಅಚ್ಚಗೆ ಅರಳಿದ್ದ ಬಿಳಿ ಹೂವು, ಹೀಚು- ಕಾಯಿ  ಆಸೆನಾ ಹೊತ್ಕಂಡು ಬೇಲಿ ಉದ್ದಕ್ಕೂ ಅರಳಿದ್ವು.

ಆ ಕಾಯೋ ಬಿಸಿಲ ಹೊಳಪಲ್ಲಿ ಆ ನೋಟ ಕಣ್ಣಿಗೆ ಏನು ಹಿತವಾಗಿತ್ತು, ಅಂದ್ರೆ…..ಅದು ನನ್ನ ಮನಸಲ್ಲಿ ಹಂಗೆ ಹಚ್ಚೆ ಹಂಗೆ ಉಳ್ದುಹೋಯ್ತು.

‍ಲೇಖಕರು Admin

November 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಉಣ್ಣದೆಯೂ ತೊಳೆದಿಟ್ಟ ಖಾಲಿತಾಟು

ಉಣ್ಣದೆಯೂ ತೊಳೆದಿಟ್ಟ ಖಾಲಿತಾಟು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಸುಜಾತಾ ,,,,,,, ನಗ ತಡಿಯಕ್ ಆಗ್ತಿಲ್ಲ ಕನವ್ವ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: