ಹುಳುನಾನವ
ವೈಶಾಲಿ ಹೆಗ್ಡೆ
ಎಲ್ಲಿಂದ ಹಾರಿ ಬಂತೋ
ಒಣಗಿ ಉದುರಿರುವ ಎಲೆಯ ಹಿಂದೊಂದು ಹುಳದ ಗೂಡಿದೆ
ಅದೂ ಅರೆಬರೆ ಒಣಗಿದೆ
ದಿನಾ ಹುಟ್ಟಿ ಸಾಯುವ ಹುಳಗಳ ಲೆಕ್ಕವಿಡುವುದಿಲ್ಲ ಯಾರೂ
ಹಾಗಾಗಿ ನನಗೊಂದೇ ಮೀಸಲು ಆ ಕೆಲಸ
ಜಾಗತಿಕ ಲೀಡರುಗಳ ಫೋರಮ್ಮಿನ ಕೊನೆಯಲ್ಲಿ
ಹೊರಟಿತ್ತಂತೆ ಠರಾವು
ಕಂಡು ಹಿಡಿಯಬೇಕು
ಹುಟ್ಟುವ ಸಾಯುವ ಹುಟ್ಟುತ್ತಲೇ ಸಾಯುವ ಸಾಯದೆ ಹುಟ್ಟುವ ಎಲ್ಲ ಹುಳಗಳ ಠಾವು
ಎಂತೆಂತ ಕೆಲಸವಿದೆ ನಮಗೆಲ್ಲ
ಸಸಿಯ ಹುಟ್ಟಿಸದ ಬೀಜ ಹಣ್ಣಾಗಬೇಕು
ನೀರಲ್ಲಿ ಅರಗದ್ದು ಮಣ್ಣಾಗಬೇಕು
ನೀಲಿ ಆಗಸದ ಬಣ್ಣ ಸುಣ್ಣವಾಗಬೇಕು
ನಕ್ಷತ್ರದ ಅಂಚಲ್ಲಿ ಹೊಳೆ ಹರಿಯಬೇಕು
ನಭದ ಸೂಜಿಗೆ ನೆಲವ ನೂಲಿಸಬೇಕು
ಇದೆಂತ !
ಹುಳಹುಡುಕುವ ಹುಚ್ಚೆಂತ ಹಣೆಬರಹ!
ಹಿಂದೆ ಸರಿದವರೆಲ್ಲ ಚೀಟಿ ಎತ್ತಿದ್ದಾರೆ ನಾನು ಹುಳ ಹುಡುಕಬೇಕೆಂದು
ಹುಡುಕುತ್ತಿದ್ದೆ ಹಿಂದೆಲ್ಲ ಟೀವಿ ಪರದೆಯ ಮೇಲೆ
ದಿನದ ಪೇಪರಿರನ ಮೇಲೆ
ಹಾದಿಬದಿಯ ಕಾಲುವೆಯ ಬದಿಗೆ
ಅಂಗಳದ ತುದಿಯ ಗೇಟಿನ ಮೇಲೆ ಕುಳಿತು
ಬೆಳಗಿಂದ ಸಂಜೆಯವರೆಗೆ
ಈಗೀಗ ಅವೇ ಹುಡುಕಿ ಬರುತ್ತವೆ
ಹೆಬ್ಬಾಗಿಲ ಹತ್ತಿ ಬಂದು ತತ್ತಿ ಕೂರುತ್ತವೆ
ಕಣ್ಣ ಪರದೆಯ ಮೇಲೆ ತೀರ ಚಿಕ್ಕ ಕಣ್ಣಲ್ಲಿ ದೂರು ಹೇಳುತ್ತಾ
ಹುಳಗಳ ಲೆಕ್ಕ ಯಾಕಿಡುವಿ ಏನಿದರ ಲಾಭ ಬಾಯಿಬಿಡೆಂದು ಜಬರಿಸುತ್ತ
ನಾ ವಿವರಿಸುವದರೊಳಗೆ ಪಟಪಟನೆ ಉದುರಿ ಬಿದ್ದು ಅಂಗೈ ತುಂಬುತ್ತವೆ
ಇನ್ನೂ ತನಕ ಒಂದು ಹುಳಕ್ಕೂ ಗೊತ್ತಿಲ್ಲ
ಅವಕೇನೂ ನನಗೂ ಗೊತ್ತಿಲ್ಲ
ಆದರೆ ಅದೇ ಖುಷಿಯೆಂದರೆ
ಏನೇ ಆದರೂ ಕೆಲಸ ಹೋಗುವುದೆಂಬ ಭಯ ಮಾತ್ರ ಇಲ್ಲ
ಹುಟ್ಟಿ ಸಾಯುವ ಹುಳಗಳ ಸಂಖ್ಯೆ ಇನಿತೂ ಕಡಿಮೆಯಾಗುವ ಲಕ್ಷಣವಿಲ್ಲ
0 ಪ್ರತಿಕ್ರಿಯೆಗಳು