ದಿಲ್ಲಿಯಲ್ಲಿ ಆಹಾ.. ಚಹಾ!

ಧಡಾ ಧಢ್… ಧಡಾ ಧಡ್… ನಟ್ಟ ನಡುರಾತ್ರಿಯಲ್ಲಿ ಯಾರೋ ನನ್ನ ಬಾಗಿಲು ತಟ್ಟುತ್ತಿದ್ದರು.

ಮೀನು ಮಾರ್ಕೆಟ್ಟಿನಲ್ಲಿ ಮಲಗಿದರೂ ಗೊರಕೆ ಹೊಡೆಯುವ ನನ್ನಂಥಾ ಕುಂಭಕರ್ಣನೂ ಕೂಡ ಆ ಸದ್ದಿಗೆ ತಡಬಡಿಸಿ ಏಳಬೇಕಾದರೆ ಅದು ಜೋರಾಗಿಯೇ ಇತ್ತು ಎಂಬುದರಲ್ಲಿ ಸಂಶಯವಿಲ್ಲ. ಪಕ್ಕದಲ್ಲಿದ್ದ ಮೊಬೈಲನ್ನು ಕಣ್ಣುಜ್ಜುತ್ತಾ ನೋಡಿದರೆ ಅಪರಾತ್ರಿ ಎರಡರ ಸಮಯ.

ಇದ್ಯಾವ ನಿಶಾಚರಿಯಪ್ಪಾ ಈ ಹೊತ್ತಿಗೆ ಎಂದು ನೋಡಿದರೆ ಪಕ್ಕದ ಮನೆಯ ನನ್ನದೇ ವಯಸ್ಸಿನ ಹುಡುಗ. ನಾನಿದ್ದ ಮಹಡಿಯ ಬಹುತೇಕರು ಬ್ಯಾಚುಲರ್ ಆಸಾಮಿಗಳೇ ಆಗಿದ್ದರು. ಹೀಗಾಗಿ ಮಲಗಿದ ಹೊತ್ತೇ ರಾತ್ರಿ, ಎದ್ದ ಸಮಯವೇ ಮುಂಜಾನೆ ಎಂಬಂತಿನ ದಿನಚರಿಗಳು.

ಒಂದೇ ಕೋಣೆಯಲ್ಲಿ ದಿನದ ಪಾಳಿ ಮತ್ತು ರಾತ್ರಿ ಪಾಳಿ ಮಾಡುವ ಇಬ್ಬರು ಅವಿವಾಹಿತ ನೌಕರರಿದ್ದರೆ ಆ ಕೋಣೆಯ ಹಾಸಿಗೆಗೆ ವಿಶ್ರಾಂತಿಯೇ ಇಲ್ಲ. ದಿನದ ಪಾಳಿಯಾತ ರಾತ್ರಿಯಿಡೀ ಮಲಗುತ್ತಾನೆ. ರಾತ್ರಿಯ ಪಾಳಿಯಾತ ದಿನವಿಡೀ ಮಲಗಿರುತ್ತಾನೆ. ಹಾಸಿದ್ದ ಹಾಸಿಗೆ ಯಾವಾಗಲೂ ಹೌಸ್ ಫುಲ್.”ಬಾರಯ್ಯಾ… ಚಹಾ ಕುಡಿದುಕೊಂಡು ಬರೋಣ”, ಎಂದ ಒಬ್ಬ. ”ನಾಳೆ ಮುಂಜಾನೆಯದ್ದು ನಾಳೆ ಕುಡಿದರಾಯಿತು. ಈಗ್ಯಾಕೆ ಅವಸರ?”, ಎಂದು ನಾನು ಸಿನಿಕ ಧಾಟಿಯಲ್ಲಿ ಉತ್ತರಿಸಿದೆ.

ಮೊದಲೇ ಜನವರಿಯ ಮೈಕೊರೆಯುವ ಚಳಿ ಬೇರೆ. ಅಂತೂ ನನ್ನ ಉದಾಸೀನಕ್ಕೆ ಮಾತಲ್ಲೇ ಸಮಾರಾಧನೆ ಮಾಡಿ ನನ್ನನ್ನೂ ಚಹಾ ಕುಡಿಯಲು ಎಳೆದೊಯ್ಯಲಾಯಿತು. ಹೀಗೆ ಚಹಾದ ನೆಪದಲ್ಲಿ ನಾವು ನಾಲ್ಕೈದು ಮಂದಿ ಒಂದೆರಡು ಕಿಲೋಮೀಟರ್ ನಡೆದುಕೊಂಡು ಬಂದೆವು. ಶುಂಠಿ ಹಾಕಿದ ಚಹಾ ಮೂಡನ್ನು ‘ಆಹಾ’ ಮಾಡಿತಾದರೂ ನನ್ನ ನಿದ್ದೆ ಹಾಳಾಯಿತೆಂದು ನಾನು ಒಳಗೊಳಗೇ ಶಪಿಸಿದೆ.  

ಇದನ್ನು ಒಮ್ಮೆ ಯಾರ ಬಳಿಯೋ ಹೇಳುತ್ತಿದ್ದಾಗ ಅವರು ‘ಇದೆಂಥಾ ಹುಚ್ಚು’ ಎಂದು ಹೌಹಾರಿಬಿಟ್ಟರು. ಅವರ ಅಚ್ಚರಿಗೂ ಅರ್ಥವಿತ್ತು ಅನ್ನೋದು ಸತ್ಯ. ಆದರೆ ಗುರುಗ್ರಾಮದಂಥಾ ಮಹಾನಗರಿಯಲ್ಲಿರುವವರಿಗೆ ಇದೊಂದು ಮಹಾಸಂಗತಿಯೇ ಅಲ್ಲವೇನೋ. ಹೀಗೆ ಬಹಳಷ್ಟು ಬಾರಿ ನಾವು ರಾತ್ರಿಯ ಚಹಾ ಹೀರಲು ಸುಖಾಸುಮ್ಮನೆ ಹೋದದ್ದಿದೆ.

ಒಮ್ಮೆಯಂತೂ ಪೋಲೀಸಪ್ಪನೊಬ್ಬ ಅಡ್ಡಗಟ್ಟಿ ರಸ್ತೆಯಲ್ಲೇ ವಿಚಾರಣೆ ಶುರುಮಾಡಿದ್ದ. ಠಾಣೆಗೆ ಬನ್ನಿ ಎಂದು ಹೆದರಿಸುತ್ತಿದ್ದ. ನಂತರ ನಾವು ಚಹಾ ಕುಡಿಯಲು ಬಂದ ಅಲೆಮಾರಿಗಳಷ್ಟೇ ಎಂಬುದು ಖಾತ್ರಿಯಾದಾಗ ”ಎಲೆಕ್ಷನ್ ಟೈಮು. ಸುಮ್ಮನೆ ಹೀಗೆಲ್ಲಾ ಓಡಾಡಬೇಡಿ” ಎಂದು ಬುದ್ಧಿ ಹೇಳಿ ಕಳಿಸಿದ.

ನಾನೂ ಮಹಾನಗರಿಗೆ ಹೊಸಬನಾಗಿದ್ದರಿಂದ ಈ ಅನುಭವದಿಂದ ಕೊಂಚ ಅಧೀರನಾಗಿಬಿಟ್ಟಿದ್ದೆ. ಮುಂದೆ ಕಾರಣಾಂತರಗಳಿಂದಾಗಿ ಇಂಥಾ ಹುಚ್ಚುಸಾಹಸಗಳೆಲ್ಲಾ ಬಹುತೇಕ ನಿಂತೇ ಹೋಯಿತು.

ಹಾಗೆಂದು ನಗರವೇನೂ ಮಲಗುವುದಿಲ್ಲ. ಅದರಲ್ಲೂ ಗುರುಗ್ರಾಮದ ಖ್ಯಾತ ಎಂಜಿ ರೋಡ್. ಬಹುತೇಕರು ಎಲ್ಲಾ ಕಡೆ ಇರುವ ಎಂಜಿ ರಸ್ತೆಗಳಂತೆ ಇದೂ ಕೂಡ ಅಂದುಕೊಳ್ಳುತ್ತಾರೆ. ಆದರೆ ಇದು ಮಹಾತ್ಮಾಗಾಂಧಿ ರಸ್ತೆಯಲ್ಲ. ಬದಲಾಗಿ ಮೆಹರೋಲಿ-ಗುರ್ಗಾಂವ್ ರಸ್ತೆ. ತಮಾಷೆಯೆಂದರೆ ಗುರುಗ್ರಾಮದಲ್ಲಿ ನೆಲೆಯಾಗಿರುವ ಬಹುತೇಕರು ಇಂದಿಗೂ ಇದನ್ನು ಮಹಾತ್ಮಾಗಾಂಧಿ ರಸ್ತೆಯೆಂದೇ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಈಗಂತೂ ಮಾಧ್ಯಮದವರು ಸಿಕ್ಕಸಿಕ್ಕವರ ಮೂತಿಗೆ ಮೈಕು ಹಿಡಿಯುವುದು ಸಾಮಾನ್ಯ. ಹೀಗೆ ಎಂಜಿ ರೋಡಿನ ಸಂಪೂರ್ಣ ರೂಪವನ್ನು ಹೇಳಿ ಎಂದು ಮೈಕು ಹಿಡಿದರೆ ಹತ್ತರಲ್ಲಿ ಏಳು ಜನರಾದರೂ ಇದನ್ನು ಮಹಾತ್ಮಾಗಾಂಧಿ ರಸ್ತೆಯೆಂದೇ ಹೇಳುತ್ತಾರೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ.

ಈ ಎಂಜಿ ರಸ್ತೆಯ ವಿಶೇಷತೆಯೆಂದರೆ ರಸ್ತೆಯ ಎರಡೂ ಭಾಗಗಳಲ್ಲಿ ಹಲವು ಶಾಪಿಂಗ್ ಮಾಲ್ ಗಳು ಬೆನ್ನು ಬೆನ್ನಿಗಿವೆ. ಒಂದು ಕಿಲೋಮೀಟರಿನ ದೂರದಲ್ಲಿ ಏನಿಲ್ಲವೆಂದರೂ ಆರೇಳು ಶಾಪಿಂಗ್ ಮಾಲ್ ಗಳು. ಇನ್ನು ಎಂಜಿ ರಸ್ತೆಯಿಂದ ಸ್ವಲ್ಪ ದೂರದಲ್ಲಿರುವ ಇಫ್ಕೋ ವೃತ್ತವೆಂದರೆ ಮೂರ್ನಾಲ್ಕು ರಸ್ತೆಗಳು ಹೆದ್ದಾರಿಗೆ ಕೂಡುವ ಸ್ಥಳ. ಒಂದು ದೆಹಲಿ, ಇನ್ನೊಂದು ಜೈಪುರ, ಮತ್ತೊಂದು ಮಾನೆಸರ್… ಹೀಗೆ ಸದಾ ಜನನಿಬಿಡವೂ ಆಗಿರುವ, ಬಹುತೇಕ ಎಲ್ಲರಿಗೂ ಗೊತ್ತಿರುವ ತಾಣ.

ಈ ಇಫ್ಕೋ ವೃತ್ತವನ್ನು ಸಾಮಾನ್ಯವಾಗಿ ನಾನು ಖಾಲಿ ನೋಡಿದ್ದೇ ಇಲ್ಲ. ಕೆಲವು ಡಾಬಾದಂತಿರುವ ಹೋಟೆಲ್ಲುಗಳು, ಪಾನ್ ಬೀಡಾ ಅಂಗಡಿಗಳು, ಬಸ್ಸು ಹಿಡಿಯಲು ಸಾಗುತ್ತಿರುವ ಪ್ರಯಾಣಿಕರು, ಎಂದೂ ಮಲಗದ ಮಹಾನಗರಿಯನ್ನು ಸಾಗಿಸುತ್ತಿರುವ ಹಳದಿ ಬೋರ್ಡಿನ ಕ್ಯಾಬುಗಳು… ಹೀಗೆ ಇವರೆಲ್ಲರೂ ನಗರವನ್ನು ಜೀವಂತವಾಗಿಡುತ್ತಾರೆ.

ನಾವೆಲ್ಲಾ ಚಹಾ ಸವಿಯಲು ಬರುತ್ತಿದ್ದಿದ್ದು ಕೂಡ ಇದೇ ಇಫ್ಕೋ ವೃತ್ತಕ್ಕೆ. ಚಳಿಗಾಲದಲ್ಲಂತೂ ಚಹಾಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ‘ಅದ್ರಕ್ ವಾಲೀ ಚಾಯ್’ ಎಂದರೆ ಶುಂಠಿ ಹಾಕಿರುವ ಕಡಕ್ ಟೀ ನಿಮ್ಮ ಮುಂದಿರುತ್ತದೆ.

ಇನ್ನು ‘ಕುಲ್ಲಡ್’ ಗಳೆಂದು ಸಾಮಾನ್ಯವಾಗಿ ಕರೆಯಲ್ಪಡುವ ಮಣ್ಣಿನ ಕಪ್ಪುಗಳಲ್ಲಿ ನೀಡುವ ಚಹಾ ಕೂಡ ಎಲ್ಲರಿಗೂ ಪ್ರೀತಿ. ಸಿಗರೇಟು ಮತ್ತು ಚಹಾ ಕೂಡ ಇಲ್ಲಿಯ ಎವರ್ ಗ್ರೀನ್ ಕಾಂಬೋಗಳಲ್ಲೊಂದು. ಸಿಗರೇಟನ್ನು ಬಿಟ್ಟವರೂ ಕೂಡ ಚಳಿಗಾಲದ ಸಮಯದಲ್ಲಿ ಈ ಕಾಂಬೋದ ಮಾಯಾಜಾಲಕ್ಕೆ ಶರಣಾಗಿ ಮತ್ತದೇ ಚಟವನ್ನು ಶುರುಮಾಡಿದ ಉದಾಹರಣೆಗಳನ್ನಿಲ್ಲಿ ನಾನು ನೋಡಿದ್ದಿದೆ. ಹೀಗೆ ಚಹಾ ಇಲ್ಲದ ಬದುಕನ್ನು ಎನ್.ಸಿ.ಆರ್ ಜನತೆಯು ಊಹಿಸಲಿಕ್ಕೂ ಸಾಧ್ಯವಿಲ್ಲವೇನೋ.

ಇದು 2011-12 ರ ಮಾತು. ನಮ್ಮ ಆಫೀಸು ಪಕ್ಕದಲ್ಲಿ ಬಿಹಾರ ಮೂಲದ ಯುವಕನೊಬ್ಬ ಚಹಾ ಅಂಗಡಿ ಹಾಕಿಕೊಂಡಿದ್ದ. ನಗುಮುಖದ, ಸೌಮ್ಯ ಸ್ವಭಾವದ ಯುವಕ. ಎಲ್ಲರೂ ಬಂದು ಚಹಾ ಕುಡಿಯುವುದಲ್ಲದೆ ಅವನೊಂದಿಗೆ ಲೋಕಾಭಿರಾಮದ ಮಾತನ್ನಾಡಿ ಹೋಗುತ್ತಿದ್ದರು. ತನ್ನದು ಅಂತಿದ್ದ ಒಂದು ಸ್ಟೂಲು, ಚಾಪೆ ಮತ್ತು ಪುಟ್ಟ ಒಲೆಯೊಂದನ್ನು ಬಿಟ್ಟರೆ ಬೇರೆ ಯಾವ ವ್ಯವಸ್ಥೆಯೂ ಅಲ್ಲಿರಲಿಲ್ಲ.

ರಸ್ತೆ ಬದಿಯಲ್ಲಿ ಸೂರಿಲ್ಲದ ಈ ಪುಟ್ಟ ಜಾಗದಲ್ಲಿ ಕೂತು ಚಹಾ ಮಾರುವುದು ಈತನ ನಿತ್ಯದ ದಿನಚರಿಯಾಗಿತ್ತು. ಒಂದೆರಡು ವರ್ಷ ಹೀಗೆ ಚಹಾ ಮಾರಿದ ಯುವಕ ಒಮ್ಮೆ ಅಚಾನಕ್ಕಾಗಿ ಅಲ್ಲಿಂದ ಮಾಯವಾಗಿಬಿಟ್ಟಿದ್ದ. ಒಂದೆರಡು ತಿಂಗಳಲ್ಲಿ ಅವನನ್ನು ನಾನು ಗುರುಗ್ರಾಮದ ಸೆಕ್ಟರ್ ಹದಿನೇಳರ ಮಾರ್ಕೆಟ್ಟಿನಲ್ಲಿ ನೋಡಿದೆ.

ಚಹಾ ಸರಕುಗಳು ಮಾಯವಾಗಿ ಈಗ ಕೈಗಾಡಿಯೊಂದು ಬಂದಿತ್ತು. ಈಗ ಆಮ್ಲೆಟ್ ಸೇರಿದಂತೆ ಮೊಟ್ಟೆಯ ಕೆಲ ಖಾದ್ಯಗಳನ್ನು ಈತ ಸಿದ್ಧಪಡಿಸುತ್ತಿದ್ದ. ನಿರೀಕ್ಷೆಯಂತೆ ಅಲ್ಲಿಯ ಗ್ರಾಹಕರನ್ನು ಸೆಳೆಯಲು ಹೆಚ್ಚಿನ ಸಮಯವೇನೂ ಆತನಿಗೆ ತಗುಲಲಿಲ್ಲ. ಮುಂದಿನ ಒಂದು ವರ್ಷದ ನಂತರ ಇದೇ ಯುವಕ ನನಗೆ ಕಾಣಸಿಕ್ಕಿದ್ದು ಇ-ರಿಕ್ಷಾ ಒಂದರ ಚಾಲಕನಾಗಿ. ”ಕ್ಯಾ ಸಾಬ್… ಕೈಸೇ ಹೋ?” ಎಂದು ಆತನೇ ನನ್ನನ್ನು ಗುರುತು ಹಿಡಿದು ವಿಚಾರಿಸಿದ. ನಾನು ಬಿಟ್ಟಗಣ್ಣಿನಿಂದ ಅವನ ಹೊಸ ಅವತಾರವನ್ನೇ ನೋಡುತ್ತಿದ್ದೆ.

ಮಾಧ್ಯಮಗಳಲ್ಲಿ ಫಾಲೋ ಅಪ್ ರಿಪೋರ್ಟಿಂಗ್ ಅಂತೇನೋ ಇರುತ್ತಂತೆ. ಅದೇನೆಂದರೆ ಒಂದು ಅವಧಿಯಲ್ಲಿ ಯಾವುದರ ಬಗ್ಗೆಯೋ ವರದಿ ಮಾಡಿರುತ್ತಾರೆ. ಸುದ್ದಿಯ ಬಿಸಿಯು ತಣ್ಣಗಾದ ನಂತರ ಎಲ್ಲರೂ ಆ ಸಂಗತಿಯನ್ನು ಮರೆಯುವುದು ಸಾಮಾನ್ಯ. ಆದರೆ ಚಾಣಾಕ್ಷ ಪತ್ರಕರ್ತನೊಬ್ಬ ಕೆಲ ವರ್ಷಗಳ ನಂತರ ಅದೇ ಸುದ್ದಿಯನ್ನು ರೆಫರೆನ್ಸ್ ಆಗಿಟ್ಟುಕೊಂಡು ಈಗಿನ ಪರಿಸ್ಥಿತಿಯನ್ನು ನೋಡಹೊರಟರೆ ಅಲ್ಲಾದ ಬದಲಾವಣೆಗಳಲ್ಲಿ ಒಂದು ಕುತೂಹಲಕಾರಿಯಾದ ಕಥೆಯೇ ಸಿಕ್ಕಿಬಿಡಬಹುದು. ಈ ಮಾದರಿಯಲ್ಲಿ ಈತ ಮತ್ತೆ ನನಗೆ ಸಿಕ್ಕಿಬಿಟ್ಟರೆ ಒಂದೊಳ್ಳೆಯ ಕಥೆಯನ್ನು ನೀಡಬಲ್ಲನೇನೋ.

ಹೀಗೆ ಚಹಾ ಎಂಬುದು ಇಲ್ಲಿ ಹಲವರ ಬದುಕನ್ನು ಬದಲಿಸಿದೆ. ಕ್ಷೌರದಂಗಡಿಗಳಂತೆ ಚಹಾ ಮೂಲೆಗಳೂ ಕೂಡ ಗಾಸಿಪ್ ಅಡ್ಡಾಗಳು. ಒಂದಿಬ್ಬರಾದರೂ ಇಂಥಾ ಸ್ಥಳಗಳಲ್ಲಿ ಸಿಗರೇಟು ಸುಡುತ್ತಾ, ಚಹಾ ಹೀರುತ್ತಾ ಹರಟೆ ಹೊಡೆಯುವುದು ನಗರದಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯಗಳಲ್ಲೊಂದು. ಗ್ರೀನ್ ಟೀ ಎಂಬುದು ಅದೆಷ್ಟೇ ಆಧುನಿಕ ಅನ್ನಿಸಿಕೊಂಡರೂ ದೇಸಿ ಚಾಯ್ ಗೆ ಬಾಯಿಬಾಯಿ ಬಿಡುವ ಜನರನ್ನು ಕಾಣಲು ಈ ಕಡೆ ಬರುವುದೇ ಉತ್ತಮ.        

ಈ ನಡುವೆ ಗುರುಗ್ರಾಮದ ಮಾರ್ಕೆಟ್ಟೊಂದರಲ್ಲಿ ‘ತಂದೂರಿ ಚಾಯ್’ ಎಂಬ ಹೆಸರನ್ನಿಟ್ಟುಕೊಂಡ ಡೇರೆಯಂತಿನ ವ್ಯವಸ್ಥೆಯೊಂದು ತೆರೆದಿತ್ತು. ಆ ದಾರಿಯಲ್ಲಿ ಹತ್ತಾರು ಬಾರಿ ಹೋಗಿಬಂದರೂ ಕಾಲಿಡಲೂ ಜಾಗವಿಲ್ಲದಷ್ಟು ಜನಜಂಗುಳಿ. ”ಅಂಥದ್ದೇನಿದೆ ಆ ಚಹಾದಲ್ಲಿ?”, ಎಂದು ಕುತೂಹಲದಿಂದ ಅಲ್ಲೇ ಆಸುಪಾಸಿನಲ್ಲಿ ನೆಲೆಸಿದ್ದ ನಮ್ಮ ಮಹಿಳಾ ಸಹೋದ್ಯೋಗಿಯೊಬ್ಬರ ಬಳಿ ಕೇಳಿದ್ದೆ. ”ನಾನೂ ಸುಮ್ಮನೆ ಕುತೂಹಲಕ್ಕೆಂದು ಹೋಗಿ ಬಂದಿದ್ದೆ. ಆದರೆ ಸಾಮಾನ್ಯ ಚಹಾಗಿಂತ ಅಂಥಾ ದೊಡ್ಡಮಟ್ಟಿನ ವ್ಯತ್ಯಾಸವೇನೂ ಕಾಣಲಿಲ್ಲ” ಎಂದು ನಗುತ್ತಾ ನುಡಿದರು.

ಜನರ ಚಹಾ ಮೋಹವೆಂದರೆ ಇದು. ”ನಿನ್ನ ನಾಮದ ಬಲವೊಂದಿದ್ದರೆ ಸಾಕು!” ಎಂದು ಪುರಂದರದಾಸರು ಸುಮ್ಮನೇನೂ ಬರೆದಿಲ್ಲ ಎಂದನ್ನಿಸಿತು ನನಗೆ.

October 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

2 ಪ್ರತಿಕ್ರಿಯೆಗಳು

 1. T S SHRAVANA KUMARI

  ಚಹಾದಷ್ಟೇ ಲವಲವಿಕೆಯಿಂದ ಕೂಡಿದ ಬರಹ

  ಪ್ರತಿಕ್ರಿಯೆ
 2. SUDHA SHIVARAMA HEGDE

  ಚಾ ಮಳ್ಳಿ ನಾನು ಕೂಡ.
  ಬಾಯಲ್ಲಿ ನೀರೂರಿತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: