ದಿಲ್ಲಿ ಎಂಬ ‘ಸಮನ್ವಯ್’ ನಗರ

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ‘ರೇಖ್ತಾ’ ಮಾತುಕತೆಯೊಂದರಲ್ಲಿ ಖ್ಯಾತ ಕವಿ ಕುಮಾರ್ ವಿಶ್ವಾಸ್ ಮಾತನಾಡುವುದನ್ನು ಕಂಡಿದ್ದೆ.

ದಿಲ್ಲಿಯ ಆಪ್ ಪಕ್ಷದಲ್ಲಿ ರಾಜಕಾರಣಿಯಾಗಿ ಗುರುತಿಸಿಕೊಳ್ಳುವ ಮುನ್ನವೇ ವಿಶ್ವಾಸ್ ಓರ್ವ ಕವಿಯಾಗಿ, ವಾಗ್ಮಿಯಾಗಿ ಮಿಂಚಿದವರು. ‘ಕೋಯಿ ದೀವಾನಾ ಕೆಹ್ತಾ ಹೈ’ ಎಂಬ ಅವರ ಸೂಪರ್ ಹಿಟ್ ಕವಿತೆಯು ಯಾವ ಚಿತ್ರಗೀತೆಗೂ ಕಮ್ಮಿಯಿಲ್ಲವೆಂಬಂತೆ ಬಹುಜನಪ್ರಿಯವಾಗಿತ್ತು. ಅದರಲ್ಲೂ ವಿಶೇಷವಾಗಿ ದೇಶ-ಭಾಷೆಗಳ ಗಡಿಗಳನ್ನು ಮೀರಿ ಕೋಟ್ಯಾಂತರ ಯುವಜನರನ್ನು ಈ ಹಾಡು ಆಕರ್ಷಿಸಿತ್ತು. ಪ್ರತಿಭಾವಂತ ಕವಿಯಾಗಿರುವ ವಿಶ್ವಾಸ್ ಸೊಗಸಾದ ಮಾತುಗಾರರೂ ಹೌದು. ಹೀಗಾಗಿ ಕುಮಾರ್ ವಿಶ್ವಾಸ್ ಗೋಷ್ಠಿಗಳೆಂದರೆ ಜನಜಾತ್ರೆ ಮಾಮೂಲು.

ಅಂದು ಕುಮಾರ್ ವಿಶ್ವಾಸ್ ಮಾತನಾಡುತ್ತಿದ್ದಿದ್ದು ಉರ್ದು ಭಾಷೆಯ ಬಗ್ಗೆ. ಆಗಿದ್ದಿಷ್ಟೇ. ಉರ್ದುವಿನ ಪ್ರಖ್ಯಾತ ಕವಿಯಾದ ಜಾನ್ ಏಲಿಯಾನ ಬಗ್ಗೆ ಸಂಪಾದಿತ ಕೃತಿಯೊಂದನ್ನು ವಿಶ್ವಾಸ್ ತಂದಿದ್ದರಂತೆ. ಆದರೆ ಏಲಿಯಾರ ಉರ್ದು ಕವಿತೆಗಳನ್ನು ಹಿಂದಿ ಭಾಷೆಗೆ ವಿಶ್ವಾಸ್ ಇಳಿಸಿದ ಪರಿಯು ಸಾಂಪ್ರದಾಯಿಕ ಉರ್ದು ವಿಮರ್ಶಕರಿಗೆ ಮೆಚ್ಚುಗೆಯಾಗಿರಲಿಲ್ಲ. ತಾನು ಶುದ್ಧ ಹಿಂದಿಯ ವಿದ್ಯಾರ್ಥಿ, ಉರ್ದು ಲಿಪಿಯನ್ನು ಓದಲು ಬಾರದವನು; ಆದರೂ ಇಂದಿನ ಪೀಳಿಗೆಗೆ ದೈತ್ಯಪ್ರತಿಭೆ ಏಲಿಯಾರನ್ನು ಪರಿಚಯಿಸುವ ಪುಟ್ಟ ಪ್ರಯತ್ನವನ್ನು ನನ್ನ ಕೈಲಾದಷ್ಟು ಪ್ರಾಮಾಣಿಕವಾಗಿ ಮಾಡಿದ್ದೇನೆ ಎನ್ನುವುದು ಅವರ ಸಮರ್ಥನೆ.

”ಉರ್ದು ಭಾಷೆಯನ್ನು ಸ್ವಲ್ಪ ಉಸಿರಾಡಲು ಬಿಡಿ. ಅದನ್ನು ದೂರದ ಗಾಜಿನರಮನೆಯಲ್ಲಿ ಬಂಧಿಸಿಡಲು ಉರ್ದು ಯಾರ ಮನೆಯ ಖಾಸಗಿ ಸ್ವತ್ತೂ ಅಲ್ಲ. ಉರ್ದುವಿನ ಸುವಾಸನೆಯು ಎಲ್ಲರನ್ನೂ ತಲುಪಬೇಕು,” ಎನ್ನುತ್ತಿದ್ದರು ಕುಮಾರ್ ವಿಶ್ವಾಸ್. ಅವರು ಹೇಳಿದ್ದು ನಿಜ. ಜಾನ್ ಏಲಿಯಾ ಪಾಕಿಸ್ತಾನದಲ್ಲಿ ಎಷ್ಟು ಪ್ರಖ್ಯಾತರಾಗಿದ್ದರೋ, ಭಾರತದಲ್ಲೂ ಅಷ್ಟೇ ದೊಡ್ಡ ಅಭಿಮಾನಿ ಬಳಗವು ಅವರಿಗಿತ್ತು. ಈಗಲೂ ಇದೆ. ಅವರಂತೆಯೇ ಪಂಜಾಬಿ ಕವಿ ಶಿವ್ ಕುಮಾರ್ ಬತಾಲ್ವಿ ಭಾರತ, ಪಾಕಿಸ್ತಾನಗಳನ್ನು ಮೀರಿ ಪಶ್ಚಿಮದಲ್ಲೂ ಖ್ಯಾತರಾಗಿದ್ದವರು. ಹೀಗಾಗಿ ಏಲಿಯಾ, ಬತಾಲ್ವಿಯಂಥವರನ್ನು ಒಂದು ಭಾಷೆಗೋ, ದೇಶಕ್ಕೋ ಸೀಮಿತಗೊಳಿಸುವುದು ಅಸಾಧ್ಯವಷ್ಟೇ ಅಲ್ಲ. ಶುದ್ಧ ಮೂರ್ಖತನವೂ ಹೌದು ಎನ್ನುತ್ತಿದ್ದರು ವಿಶ್ವಾಸ್. 

ಏಲಿಯಾ-ಬತಾಲ್ವಿಯವರ ಮಾತುಗಳು ಹಾಗಿರಲಿ. ಸ್ವತಃ ಒಂದು ಮಹಾನಗರಿಯಾಗಿ ದಿಲ್ಲಿಗೆ ಅಂಥದ್ದೊಂದು ಖದರ್ ಇದೆ. ಅದು ಈ ದೇಶದ ರಾಜಧಾನಿಯಾಗಿಯೂ ಬಂದಿದ್ದಲ್ಲ. ತನ್ನ ಸುತ್ತಲೂ ಗುರುಗ್ರಾಮ, ನೋಯ್ಡಾದಂತಹ ಪಕ್ಕಾ ಕೈಗಾರಿಕಾ ವಲಯಗಳನ್ನು ಪೋಷಿಸಿಕೊಂಡು ಬಂದಿದ್ದರಿಂದಲೂ ಅಲ್ಲ. ಅದಕ್ಕೂ ಮೀರಿದ ವಿಚಿತ್ರ ಸೆಳೆತವೊಂದನ್ನು ದಿಲ್ಲಿಯು ಸದಾ ತನ್ನಲ್ಲಿ ಇಟ್ಟುಕೊಂಡಿದೆ. ಒಂದೆಡೆ ಕೋಟೆ-ಕೊತ್ತಲಗಳನ್ನು ಜೀವಂತವಾಗಿಟ್ಟುಕೊಂಡು ಇತಿಹಾಸವನ್ನೇ ಉಸಿರಾಡುವ ಪ್ರಾಚೀನ ನಗರಿಯಂತೆ ಕಾಣುವ, ಮತ್ತೊಮ್ಮೆ ಯಥಾವತ್ ಗಡಿಬಿಡಿಯ ಮಹಾನಗರಿಯಂತೆ ಕಾಣುವ ದಿಲ್ಲಿಯು ಇವೆರಡರ ನಡುವಿನ ತೆಳುಗೆರೆಯನ್ನು ಇನ್ನೂ ಮಸುಕಾಗಿಟ್ಟುಕೊಂಡು ನಿಗೂಢತೆಯನ್ನು ಉಳಿಸಿಕೊಂಡಿದೆ.

ವಿಶ್ವದ ಹಲವು ಪ್ರಾಚೀನ ನಗರಗಳಲ್ಲಿ ದಿಲ್ಲಿಯೂ ಒಂದು. ಇನ್ನು ಆಧುನಿಕತೆ, ಜನದಟ್ಟಣೆ ಮತ್ತು ಪ್ರಗತಿಯ ದೃಷ್ಟಿಕೋನದಲ್ಲಿ ನೋಡಿದರೆ ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಹರವೂ ಹೌದು. ಹಳೆಯ ಚಂದವನ್ನೂ ಉಳಿಸಿಕೊಂಡು, ಹೊಸತರ ಸೊಬಗನ್ನು ಅಪ್ಪಿಕೊಳ್ಳುವ ಉದಾರತೆಯು ಎಲ್ಲಾ ಶಹರಗಳಿಗೆ ಇರುವುದಿಲ್ಲ. ಈ ನಿಟ್ಟಿನಲ್ಲಿ ದಿಲ್ಲಿ ನಿಜಕ್ಕೂ ವಿಶಿಷ್ಟ. ಹೀಗಾಗಿ ದಿಲ್ಲಿಯು ಎಲ್ಲರನ್ನೂ ತನ್ನ ತೆರೆದ ಬಾಹುಗಳೊಂದಿಗೆ ಸ್ವಾಗತಿಸುತ್ತದೆ. ಯಾರೇನೇ ಹೇಳಲಿ, ದಿಲ್ಲಿ ಶಹರದ ಸೊಗಡು ಮಿರ್ಜಾ ಗಾಲಿಬನ ಕವಿತೆಗಳಂತೆ ಇಲ್ಲಿರುವ ಸುಭದ್ರ ಬೇರುಗಳ ಹೊರತಾಗಿಯೂ ವಿಶ್ವವ್ಯಾಪಿಯೆಂಬಂತೆ ತನ್ನ ಶಾಖೆಗಳನ್ನು ಹರಡಿಕೊಂಡಿದೆ.

ಸಂದರ್ಶನವೊಂದರಲ್ಲಿ ಖ್ಯಾತ ಪತ್ರಕರ್ತ ಸರ್ದಾರ್ ಖುಷ್ವಂತ್ ಸಿಂಗ್ ರವರಿಗೆ ಪ್ರಶ್ನೆಯೊಂದನ್ನು ಕೇಳಲಾಯಿತು. ದಿಲ್ಲಿಯ ಬಗ್ಗೆ ನಿಮಗೆ ಅತ್ಯಂತ ಖುಷಿಯೆನಿಸುವ ಸಂಗತಿಯೇನು ಎಂಬುದಾಗಿತ್ತು ಆ ಪ್ರಶ್ನೆ. ಸರ್ದಾರ್ಜಿ ತಮ್ಮ ಎಂದಿನ ಸರಳ ಮತ್ತು ನವಿರಾದ ಹಾಸ್ಯದ ಶೈಲಿಯಲ್ಲಿ ಹೀಗೆ ಉತ್ತರಿಸಿದ್ದರು: ”ದಿಲ್ಲಿಯಲ್ಲಿ ಎಲ್ಲರಿಗೂ ಪ್ರಿಯವೆನಿಸುವಂಥದ್ದು ಏನಾದರೊಂದು ಇದ್ದೇ ಇದೆ. ವಹೀ ಹೈ ಇಸ್ ಶಹರ್ ಕೀ ಖೂಬೀ!”

ಖುಷ್ವಂತರು ಹೇಳಿದ್ದು ಸತ್ಯ. ನೀವು ಯಾವುದೇ ಆರ್ಥಿಕ ವರ್ಗಕ್ಕೆ ಸೇರಿದವರಾಗಿರಿ. ನಿಮ್ಮ ವಯಸ್ಸು, ಆಸಕ್ತಿ, ಬಜೆಟ್ ಏನೇ ಆಗಿರಲಿ. ನಿಮ್ಮ ವೃತ್ತಿ-ಪ್ರವೃತ್ತಿ-ಖಯಾಲಿಗಳು ಎಂಥದ್ದೇ ಆಗಿರಲಿ. ದಿಲ್ಲಿಯ ಮೆನುವಿನಲ್ಲಿ ನಿಮಗೆ ಇಷ್ಟವಾಗುವಂಥದ್ದು ಏನಾದರೊಂದು ಸಿಕ್ಕೇ ಸಿಗುತ್ತದೆ. ದಿಲ್ಲಿಯನ್ನು ನೀರಸ ಶಹರವೆಂದು ಸ್ವತಃ ಇಲ್ಲಿ ಹಲವು ದಶಕಗಳಿಂದ ನೆಲೆಸಿರುವವರೇ ಹೇಳಲಾರರು. ಏಕೆಂದರೆ ದಿಲ್ಲಿ ಕಾಲಕಾಲಕ್ಕೆ ಬದಲಾಗುತ್ತಲೇ ಇದೆ. ಇದು ಯಶಸ್ಸನ್ನು ಜಗತ್ತಿನ ಸಾಮಾನ್ಯ ದೃಷ್ಟಿಕೋನದಲ್ಲಿ ಕಾಣುವಂತೆ ಆರ್ಥಿಕ ಆಯಾಮಕ್ಕಷ್ಟೇ ಸೀಮಿತವಲ್ಲ. ಸಾಂಸ್ಕೃತಿಕ ನೆಲೆಯಲ್ಲೂ ಇದು ಸತ್ಯ.

ಧಾರ್ಮಿಕ ಮನೋವೃತ್ತಿಯವರಿಗೆ ಮಂದಿರಗಳು, ಫಿಟ್ನೆಸ್ ಫ್ರೀಕ್ ಗಳಿಗೆ ವಾಕಿಂಗ್-ಜಾಗಿಂಗ್-ಧ್ಯಾನಗಳಿಗಾಗಿ ಉದ್ಯಾನಗಳು, ವಿಷಯಾಸಕ್ತರಿಗೆ ಅಸಂಖ್ಯಾತ ಸಂಶೋಧನಾ ಕೇಂದ್ರಗಳು, ವಸ್ತು ಸಂಗ್ರಹಾಲಯಗಳು, ಪ್ರವಾಸಿಗರ ರುಚಿ-ಅಭಿರುಚಿಗಳಿಗೆ ತಕ್ಕಂತೆ ಇರುವ ವಿಶಿಷ್ಟ ಪ್ರವಾಸಿ ತಾಣಗಳು, ವಿವಿಧಾವತಾರಗಳಲ್ಲಿ ಕಾಣುವ ಸಾಹಿತ್ಯ-ಸಾಂಸ್ಕೃತಿಕ ಕೇಂದ್ರಗಳು, ವಿಶೇಷ ಉತ್ಪನ್ನ ಕೇಂದ್ರಿತ ಮಾರುಕಟ್ಟೆಗಳು… ಹೀಗೆ ದಿಲ್ಲಿಯಲ್ಲಿ ಬಹುತೇಕ ಎಲ್ಲರಿಗೂ ಎಲ್ಲವೂ ಇವೆ. ಉಳ್ಳವರಿಗೆ ಉಣ್ಣಲು ಪಂಚತಾರಾ ಹೋಟೇಲುಗಳಿದ್ದರೆ, ದಿಲ್ಲಿಯ ಸ್ಟ್ರೀಟ್ ಫುಡ್ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ದಿಲ್ಲಿಯ ಈ ಸೊಬಗು ಬೇರೆಲ್ಲೂ ಕಾಣಸಿಗದು.

ನಿರಂತರವಾಗಿ ಏರುತ್ತಿರುವ ಜನದಟ್ಟಣೆಯನ್ನು ಗಮನಿಸಿದರೆ ಕಳೆದ ಕೆಲ ವರ್ಷಗಳಿಂದ ದಿಲ್ಲಿಗೆ ಬರುತ್ತಿರುವ ವಲಸಿಗರ ಸಂಖ್ಯೆಯು ಭಾರತದ ಉಳಿದ ಮಹಾನಗರಿಗಳಂತೆ ಇಲ್ಲೂ ಹೆಚ್ಚುತ್ತಿದೆ. ಅಷ್ಟಕ್ಕೂ ಇದು ಇಂದು ನಿನ್ನೆಯ ಮಾತೇನಲ್ಲ. ಹಲವು ರಾಜ್ಯಗಳ ಮಂದಿ ತಮ್ಮ ಮೂಲ ಬೇರುಗಳನ್ನು ಬಹುತೇಕ ತೊರೆದೇ ದಿಲ್ಲಿಯಲ್ಲಿ ಅದೆಷ್ಟೋ ವರ್ಷಗಳಿಂದ ಬೀಡುಬಿಟ್ಟಿದ್ದಾರೆ. ವಿಶೇಷವಾಗಿ ಸಾಮಾಜಿಕ ನೆಲೆಯಲ್ಲಿ ಉನ್ನತ ಸ್ಥಾನಮಾನದಲ್ಲಿರುವ ಇಂಥವರ ಮೂರು ಮತ್ತು ನಾಲ್ಕನೇ ಪೀಳಿಗೆಯ ಕುಡಿಗಳಿಗೆ ದಿಲ್ಲಿಯೇ ಜನ್ಮಭೂಮಿ, ಕರ್ಮಭೂಮಿ, ಪುಣ್ಯಭೂಮಿ… ಎಲ್ಲವೂ.

ಕೆಲ ಬೆರಳೆಣಿಕೆಯ ರಾಜಕೀಯ ಪ್ರೇರಿತ ದಂಗೆಗಳನ್ನು ಹೊರತುಪಡಿಸಿದರೆ ದೇಶದ ವಿವಿಧ ಭಾಗಗಳಿಂದ ದಿಲ್ಲಿಯತ್ತ ನಡೆದು ಬಂದು, ನಂತರ ಇಲ್ಲಿ ನೆಲೆಯೂರಿದವರು ಸೌಹಾರ್ದಯುತವಾಗಿಯೇ ನೆಲೆಸಿದ್ದಾರೆ. ಈ ಮಂದಿ ಇಲ್ಲಿ ಬಂದು ನೆಲೆಸಿದ್ದಷ್ಟೇ ಅಲ್ಲದೆ ತಮ್ಮ ಭಾಗದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ದಿಲ್ಲಿಗೂ ಧಾರೆಯೆರೆದಿದ್ದಾರೆ. ಉದಾಹರಣೆಗೆ ದಿಲ್ಲಿಯ ಸಿ ಆರ್ ಪಾರ್ಕಿನಲ್ಲಿರುವ ಬೆಂಗಾಲಿ ಕುಟುಂಬಗಳು ತಮ್ಮದೇ ಆದ ಬೆಂಗಾಲಿ ಶೈಲಿಯಲ್ಲಿ ದುರ್ಗಾಪೂಜೆಯನ್ನು ಆಚರಿಸುವುದು ನೋಡಲು ಸೊಗಸು. ಮಾಂಸಾಹಾರ ಪ್ರಿಯರಿಗೆ ನಾಗಾ ಶೈಲಿಯ ಆಹಾರ ವಿಧಾನವು ದಿಲ್ಲಿಯಲ್ಲೂ ಫೇಮಸ್ಸು.

ಕೊರೊನಾ ಕಾಲದಲ್ಲಿ ಕಾರ್ಮಿಕರ ದೊಡ್ಡ ಗುಂಪುಗಳು ತಮ್ಮ ಹಳ್ಳಿಗಳಿಗೆ ಮರಳಿದ ಕಾರಣ ಕಟ್ಟಡ ನಿರ್ಮಾಣ ಕಾಮಗಾರಿಗಳೂ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹಿನ್ನಡೆಯಾಗಿತ್ತು. ಹೊಟ್ಟೆಪಾಡಿಗೆಂದು ಉತ್ತರಪ್ರದೇಶ ಮತ್ತು ಬಿಹಾರಗಳಿಂದ ದಿಲ್ಲಿಗೆ ಬಂದ ಸಾವಿರಾರು ಕಾರ್ಮಿಕರ ದುರಾದೃಷ್ಟಕರ ಪಯಣವು ಅದಾಗಿತ್ತು. ಸಾಮಾನ್ಯವಾಗಿ ಝುಗ್ಗೀಗಳೆಂದು ಕರೆಯಲಾಗುವ ಇಕ್ಕಟ್ಟಿನ ಕೊಂಪೆಯಂತಹ ಬಸ್ತಿಗಳಲ್ಲಿ ಹೀಗೆ ಬಿಹಾರ, ಜಾರ್ಖಂಡ್ ಇತ್ಯಾದಿ ಮೂಲಗಳಿಂದ ಬಂದಿರುವ ಸಾವಿರಾರು ಮಂದಿಯನ್ನು ಇಂದಿಗೂ ನೋಡಬಹುದು.

ದಿಲ್ಲಿಯ ಹಜ್ರತ್ ನಿಜಾಮುದ್ದೀನ್ ಔಲಿಯಾರ ದರ್ಗಾಕ್ಕೆ ಧರ್ಮದ ಹಂಗಿಲ್ಲ. ಗುರುದ್ವಾರವೆಂದಾಗ ಪಂಜಾಬಿಗಳು, ಗುರುನಾನಕ್ ಥಟ್ಟನೆ ನೆನಪಾದರೂ ದಿಲ್ಲಿಯ ಬಂಗ್ಲಾ ಸಾಹಿಬ್ ಗುರುದ್ವಾರಕ್ಕೆ ಜಾತಿ-ಧರ್ಮಗಳ ಸೋಂಕು ತಟ್ಟಿಲ್ಲ. ಇತ್ತ ದಿಲ್ಲಿಯಲ್ಲಿ ರೈತರ ಚಳವಳಿಯ ತೀವ್ರತೆಯು ಹೆಚ್ಚಾಗುತ್ತಿರುವಂತೆ, ದಿಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿರುವ ಪಂಜಾಬಿ ಕಾರ್ಮಿಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿರಿಸಿ ಈ ಚಳುವಳಿಯಲ್ಲಿ ಸ್ವತಃ ಧುಮುಕಿದ್ದಾರೆ. ದೇಶದ ರಾಜಧಾನಿಯೊಳಗೇ ದೇಶದ ಪುಟಾಣಿ ಆವೃತ್ತಿಗಳು ಹೀಗೆ ಗುಂಪುಗುಂಪಾಗಿ ಕಾಣಸಿಗುವುದು ಅಪರೂಪವೇನೋ!

ನನ್ನ ಗೆಳೆಯನೊಬ್ಬನೊಂದಿಗೆ ದಿಲ್ಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮೊದಲ ಬಾರಿಗೆ ಅಲೆಯುತ್ತಿದ್ದ ನಾನು, ಅಲ್ಲಿ ಹಲವಾರು ಕನ್ನಡಿಗ ವಿದ್ಯಾರ್ಥಿಗಳನ್ನು ಕಂಡು ದಂಗಾಗಿದ್ದೆ. ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಕಾಶಿಯಂತಿರುವ ಈ ಪ್ರದೇಶಕ್ಕೆ ದೇಶದ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ಕಾಣುವ ಕೋಚಿಂಗ್ ಸಂಸ್ಥೆಗಳು ಇಲ್ಲಿರುವ ದೈತ್ಯ ಕುಳಗಳು. ಹಾಗೆಯೇ ವಿವಿಧ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳ ಪುಟ್ಟ ಗ್ಯಾಂಗುಗಳು ಮತ್ತು ಅವರಿಗೆಂದೇ ಹುಟ್ಟಿಕೊಂಡಿರುವ ಪುಟ್ಟ ಕ್ಯಾಂಟೀನಿನಂತಹ ಅಡ್ಡಾಗಳು ಇಲ್ಲಿ ಮಾಮೂಲು.

ದುಬೈ, ಕತಾರ್, ಮುಂಬಯಿಯಲ್ಲಿರುವಂತೆ ದಿಲ್ಲಿಯಲ್ಲಿರುವ ಕನ್ನಡಿಗರ ಕ್ರಿಯಾಶೀಲತೆಯೂ ಸದಾ ಸುದ್ದಿಯಲ್ಲಿರುವ ಸಂಗತಿಗಳಲ್ಲೊಂದು. ಕೆಲ ವರ್ಷಗಳ ಹಿಂದೆ ಸೂರಜ್ ಕುಂಡ್ ನಲ್ಲಿ ನಡೆದಿದ್ದ ಖ್ಯಾತ ಸಾಂಸ್ಕೃತಿಕ ಮೇಳವೊಂದರಲ್ಲಿ ‘ಕರ್ನಾಟಕ’ ಥೀಮ್ ಸ್ಟೇಟ್ ಆಗಿದ್ದರಿಂದ ಕರ್ನಾಟಕದ ಶ್ರೀಮಂತ ಸಂಸ್ಕೃತಿಯು ದಿಲ್ಲಿಯ ನಿವಾಸಿಗಳಿಗಾಗಿ ಅದ್ಧೂರಿಯಾಗಿ ತೆರೆದುಕೊಂಡಿತ್ತು. ಇನ್ನು ‘ಎಲೀಟ್’ ವರ್ಗದ ಮಂದಿಗಳನ್ನೇ ಸದಾ ತುಂಬಿದಂತೆ ಕಾಣುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಲ್ಚರ್ ನಲ್ಲೂ ಯಕ್ಷಗಾನದ ಪ್ರದರ್ಶನವೊಂದು 2019 ರಲ್ಲಿ ಯಶಸ್ವಿಯಾಗಿದ್ದು ದಿಲ್ಲಿಯಲ್ಲಷ್ಟೇ ಕಾಣಸಿಗುವ ಅಚ್ಚರಿಗಳಲ್ಲೊಂದು.

ದಿಲ್ಲಿಯಲ್ಲಿ ಪ್ರತೀವರ್ಷವೂ ನಡೆಯುವ ‘ಸಮನ್ವಯ್’ ಭಾಷಾ ಸಮ್ಮೇಳನವು ಭಾರತದ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳ ಪ್ರತಿಭಾವಂತರನ್ನು ಒಂದೆಡೆ ಸೇರಿಸುವ ಕೆಲಸವನ್ನು ಅದ್ಧೂರಿಯಾಗಿ ಮಾಡುತ್ತಾ ಬಂದಿದೆ. ಉಳಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ಹಲವು ಅಕಾಡೆಮಿಗಳು ತಮ್ಮ ಸೀಮಿತ ಪರಿಧಿಯಲ್ಲೇ ತರಹೇವಾರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತವೆ. ಮುಶಾಯಿರಾಗಳ ಹೊಸ ಆವೃತ್ತಿಯೇನೋ ಎಂಬಂತಿರುವ ಪುಟ್ಟ ಕವಿಗೋಷ್ಠಿಗಳು, ಕತೆಕೂಟಗಳು ಎಲ್ಲೆಂದರಲ್ಲಿ ನಡೆಯುತ್ತಿರುತ್ತವೆ. ಸ್ವದೇಶ್ ದೀಪಕ್ ರವರ ‘ಕೋರ್ಟ್ ಮಾರ್ಷಲ್’ ನಾಟಕವು ದಿಲ್ಲಿಯಲ್ಲಿ ಅದೆಷ್ಟು ಪ್ರದರ್ಶನಗಳನ್ನು ಕಂಡಿದೆಯೋ, ನಮ್ಮ ಕಾರ್ನಾಡರ ‘ತುಘಲಕ್’ ಕೂಡ ದಿಲ್ಲಿಗೆ ಅಷ್ಟೇ ಚಿರಪರಿಚಿತ.

ಇನ್ನು ದಿಲ್ಲಿಯೊಳಗೇ ಒಂದು ಪುಟ್ಟ ಟಿಬೆಟ್ ಅನ್ನು ನೋಡಬೇಕೇ? ಸುಮ್ಮನೆ ಎದ್ದು ‘ಮಜ್ನು ಕಾ ತಿಲಾ’ ಎಂಬ ಪ್ರದೇಶಕ್ಕೆ ಹೋಗಬೇಕು. ಕೆಲವೇ ಕಿಲೋಮೀಟರುಗಳ ವಿಸ್ತೀರ್ಣವಿರುವ ಈ ಸುಂದರ ಪ್ರದೇಶದಲ್ಲಿ ಟಿಬೆಟ್ ಮೂಲದ ನೂರಾರು ಮಂದಿ ನೆಮ್ಮದಿಯಾಗಿ ನೆಲೆಯಾಗಿದ್ದಾರೆ. ಅರವತ್ತರ ದಶಕದಲ್ಲಿ ದಲಾಯಿಲಾಮಾ ಟಿಬೆಟ್ ನಿಂದ ಪಲಾಯನಗೈದ ಸಂಕೀರ್ಣ ಸಮಯದಲ್ಲಿ ಸ್ವಂತ ನೆಲವನ್ನು ಬಿಟ್ಟು ಬಂದಿದ್ದ ಈ ಮಂದಿಗೆ ಮುಂದೆ ಆಸರೆಯಾಗಿದ್ದು ದಿಲ್ಲಿ. ಈ ಪುಟ್ಟ ಪ್ರದೇಶದಲ್ಲಿ ನಡೆದಾಡುತ್ತಿದ್ದರೆ ಸೀದಾ ಟಿಬೆಟ್ಟಿಗೆ ಬಂದುಬಿಟ್ಟೆವೇನೋ ಎಂದು ಅಚ್ಚರಿಯಾಗುವುದು ಸಹಜ. ಈ ಆವರಣದೊಳಗೆ ಬೇರೆಯದೇ ಆದ ಭಾರತವೊಂದು ತೆರೆದುಕೊಂಡಿದೆ ಎಂಬಂತೆ.

ಅವರಿವರೇಕೆ? ದಿಲ್ಲಿಯ ‘ಮೆಹಫಿಲ್’ ನಲ್ಲಿ ಆಫ್ರಿಕನ್ನರೂ ‘ಮೆಹಫೂಸ್’ ಆಗಿದ್ದಾರೆ. ಖುದ್ದು ದಿಲ್ಲಿಯ ಛತರ್ ಪುರ್ ಪ್ರದೇಶದಲ್ಲಿ ಆಫ್ರಿಕನ್ನರ ಸಂಖ್ಯೆ ಸಾಕಷ್ಟಿದೆ. ಹಾಗೆ ನೋಡಿದರೆ ಛತರ್ ಪುರ್ ನಲ್ಲಿರುವ ಐಷಾರಾಮಿ ಕೋಠಿಗಳು ಒಂದು ಧ್ರುವವಾದರೆ, ಆಫ್ರಿಕನ್ನರು ಬೀಡುಬಿಟ್ಟಿರುವ ಬಸ್ತಿಗಳು ಇಲ್ಲಿಯ ಮತ್ತೊಂದು ಧ್ರುವ. ಅಪರಾಧ ಲೋಕದ ನಿಗೂಢ ಒಳಸುಳಿಗಳು ಅದೇನೇ ಇರಲಿ. ಒಂದಿಲ್ಲೊಂದು ಕಾರಣಗಳಿಂದಾಗಿ ಈ ಭಾಗವು ಸದಾ ಸುದ್ದಿಯಲ್ಲಿರುವುದಂತೂ ಸತ್ಯ.

ಅಂಡಮಾನ್ ದ್ವೀಪವನ್ನು ಮಿನಿ ಇಂಡಿಯಾ ಎನ್ನುತ್ತಾರಂತೆ. ಭಾರತದ ಅಷ್ಟೂ ವೈವಿಧ್ಯತೆಯು ಅಂಡಮಾನಿನಂತಹ ಪುಟ್ಟ ಜಾಗದಲ್ಲಿ ಕಾಣಸಿಗುವುದು ಇದಕ್ಕೆ ಕಾರಣ. ದಿಲ್ಲಿಯೂ ಇದಕ್ಕೆ ಹೊರತಲ್ಲ. ಆದರೆ ರಾಷ್ಟ್ರ ರಾಜಧಾನಿ ಮತ್ತು ಮಹಾನಗರಿಯಾಗಿರುವ ನೆಲೆಯಲ್ಲಿ ದಿಲ್ಲಿಯಲ್ಲಿ ಇದರ ಮಟ್ಟವು ಸಹಜವಾಗಿಯೇ ಅಗಾಧವಾಗಿದೆ. ಒಟ್ಟಿನಲ್ಲಿ ದಿಲ್ಲಿಯು ಭಾರತದ ವೈವಿಧ್ಯಮಯ ಸಂಸ್ಕೃತಿಯ ಮತ್ತು ಜನಜೀವನದ ಅದ್ಭುತ ಕಲಸುಮಲೋಗರ.

ದಿಲ್ಲಿಯ ಅಚ್ಚರಿಗಳು ಕುಮಾರ್ ವಿಶ್ವಾಸ್ ಹೇಳಿದಂತೆ ಏಲಿಯಾ-ಬತಾಲ್ವಿಯವರ ವ್ಯಕ್ತಿತ್ವದಂತೆಯೇ ಹಲವು ಆಯಾಮಗಳಿಂದ ಕೂಡಿರುವವುಗಳು. ಸಾಂಪ್ರದಾಯಿಕ, ಲೌಕಿಕ ಸೀಮೆಗಳಿಗೆ ನಿಲುಕದಂಥವುಗಳು. ಎಲ್ಲವನ್ನೂ ಬಲ್ಲ ಪ್ರಜ್ಞರಂತೆ ನಾವೆಷ್ಟೇ ಕೊಚ್ಚಿಕೊಂಡರೂ ಶಹರವು ದಕ್ಕಿದಷ್ಟೇ ನಮ್ಮದು.

January 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಬಹುರೂಪಿʼಯ ಪ್ರಕಟಣೆ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಭಾರತಿ ಬಿ ವಿ ಅವರ ಪ್ರವಾಸ ಕಥನ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ...

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹೆಸರಿನಲ್ಲೇನಿದೆ ಎಂದು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This