‘ದಿಲ್ಲಿ ಡೈರಿಯ ನಿಗೂಢ ಪುಟಗಳು’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ನನಗೆ ಹಲವು ಕಾರಣಗಳಿಂದಾಗಿ ಫ್ರಾಂಕ್ ಅಬಗ್ನೇಲ್ ಇಷ್ಟ.

ಫ್ರಾಂಕ್ ತನ್ನ ತಾರುಣ್ಯದ ದಿನಗಳಲ್ಲಿ ಅಮೆರಿಕದಾದ್ಯಂತ ಕುಖ್ಯಾತಿಯನ್ನು ಗಳಿಸಿದ್ದವನು. ಬ್ಯಾಂಕ್ ಚೆಕ್ ಸಂಬಂಧಿ ವಂಚನೆಯ ಪ್ರಕರಣಗಳಲ್ಲಿ ಫ್ರಾಂಕ್ ನ ಕುಖ್ಯಾತಿಯು ಅದೆಷ್ಟರ ಮಟ್ಟಿಗಿತ್ತೆಂದರೆ ಹಲವು ಸ್ಟೇಟ್ಗಳ ಪೋಲೀಸರು ಈತನ ಹಿಂದೆ ಬಿದ್ದಿದ್ದರು. ಆದರೆ ಈತನೋ ಕಳ್ಳಮಾರ್ಗದ ಮೂಲಕವಾಗಿ ಗಳಿಸಿದ ನೋಟುಗಳನ್ನೇ ಹಾಸಿಗೆಯನ್ನಾಗಿಸಿಕೊಂಡು ಮತ್ತೆಲ್ಲೋ ಹೊರಳಾಡುತ್ತಿದ್ದ. ಜಗತ್ತಿನ ದುಬಾರಿ, ಐಷಾರಾಮಿ ತಾಣಗಳಲ್ಲಿ ಲಂಗುಲಗಾಮಿಲ್ಲದೆ ಮಜಾ ಉಡಾಯಿಸುತ್ತಿದ್ದ. ಆಗಾಗ ಇವೆಲ್ಲವೂ ನೀರಸವೆನಿಸತೊಡಗಿದರೆ ಮತ್ತೆ ನಕಲಿ ವೈದ್ಯನೋ, ಪೊಳ್ಳು ಪೈಲಟ್ ರೂಪದಲ್ಲಿಯೋ ಹೊಸ ದುಸ್ಸಾಹಸಗಳಿಗೆ ಮೈಯೊಡ್ಡುತ್ತಾ ತನ್ನ ವಂಚನೆಗಳನ್ನು ಮುಂದುವರೆಸುತ್ತಿದ್ದ. ಒಟ್ಟಿನಲ್ಲಿ ಆ ಕಾಲಕ್ಕೆ ಫ್ರಾಂಕ್ ಎಂದರೆ ಮೋಸ್ಟ್ ವಾಂಟೆಡ್ ಆಸಾಮಿ.

ಫ್ರಾಂಕ್ ಎಂಬಾತ ಇಷ್ಟೇ ಆಗಿದ್ದರೆ ಬಹುಷಃ ತೀರಾ ಪುಡಿ ಕ್ರಿಮಿನಲ್ ಆಗಿಯೇ ಉಳಿಯುತ್ತಿದ್ದನೇನೋ. ಇಲ್ಲವಾದರೆ ಹೆಚ್ಚೆಂದರೆ ಓರ್ವ ಬುದ್ಧಿವಂತ ಕಾನ್ ಮ್ಯಾನ್ ಆಗಿಯಷ್ಟೇ ಆತ ತೆರೆಮರೆಗೆ ಸರಿದುಹೋಗುತ್ತಿದ್ದ. ಆದರೆ ಹಾಗಾಗಲಿಲ್ಲ. ಅವನ ರೋಚಕ ಕತೆಯು ಆತನ ಮಿಲಿಯನ್ ಗಟ್ಟಲೆ ಗಳಿಕೆಯಂತೆಯೇ ಸಿಕ್ಕಾಪಟ್ಟೆ ಸ್ವಾರಸ್ಯಕರವಾಗಿ ಬೆಳೆಯುತ್ತಾ ಹೋಯಿತು. ಬ್ಯಾಂಕ್ ಚೆಕ್ಕುಗಳ ಬಗ್ಗೆ ಫ್ರಾಂಕ್ ನಿಗಿದ್ದ ಜ್ಞಾನವು ಅದೆಷ್ಟು ಅದ್ಭುತವಾಗಿತ್ತೆಂದರೆ, ಶಿಕ್ಷೆಯ ಅವಧಿಯ ನಂತರ ಅಮೆರಿಕನ್ ಭದ್ರತಾ ಸಂಸ್ಥೆಯಾದ ಎಫ್.ಬಿ.ಐ ಈತನನ್ನು ತಮ್ಮೊಂದಿಗೇ ಉದ್ಯೋಗಿಯಾಗಿ ಇರಿಸಿಕೊಂಡಿತು. ಅಂದಿನಿಂದ ಇಂದಿನವರೆಗೂ ಬ್ಯಾಂಕ್ ಚೆಕ್ ವಂಚನೆಯ ಅಸಂಖ್ಯಾತ ಪ್ರಕರಣಗಳನ್ನು ಫ್ರಾಂಕ್ ಮತ್ತವನ ಸಂಸ್ಥೆಯು ದಶಕಗಳಿಂದಲೂ ಭೇದಿಸುತ್ತಾ ಬಂದಿದೆ. ಅಮೆರಿಕಾ ಸೇರಿದಂತೆ ಹಲವು ದೇಶಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳು ಬ್ಯಾಂಕಿಂಗ್ ಅಪರಾಧಗಳನ್ನು ತಡೆಯುವಂತಹ ನವನವೀನ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಈತನಿಂದ ನೆರವನ್ನು ಪಡೆದುಕೊಂಡಿವೆ.

ಫೇಸ್ ಬುಕ್ಕಿನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ನೆರವಿನೊಂದಿಗೆ ಹಣ ಪೀಕುವವರ ಸಂಖ್ಯೆಯು ಹೆಚ್ಚಾದಂತೆಯೇ ಫ್ರಾಂಕ್ ಅಬಗ್ನೇಲರ ಉಪನ್ಯಾಸವೊಂದು ಅಚಾನಕ್ಕಾಗಿ ನನ್ನ ಕಣ್ಣಿಗೆ ಬಿದ್ದಿತ್ತು. ‘ನಿಮ್ಮ ಕಾಲಕ್ಕೆ ಹೋಲಿಸಿದರೆ ಆಧುನಿಕ ತಂತ್ರಜ್ಞಾನ ಮತ್ತು ಅಂತರ್ಜಾಲದ ಈ ಯುಗದಲ್ಲಿ ಅಮಾಯಕರನ್ನು ವಂಚಿಸುವುದು ಸುಲಭವೇ ಅಥವಾ ಕಷ್ಟವೇ?’, ಎಂದು ವ್ಯಕ್ತಿಯೊಬ್ಬ ಫ್ರಾಂಕ್ನಲ್ಲಿ ಕೇಳುತ್ತಿದ್ದ. ‘ನೀವೇನೇ ಹೇಳಿ. ವ್ಯವಸ್ಥಿತ ವಂಚನೆಗೆ ಇದಕ್ಕಿಂತ ಪ್ರಶಸ್ತವಾದ ಕಾಲವು ಬಂದೇ ಇಲ್ಲ. ತಂತ್ರಜ್ಞಾನದ ಅಭೂತಪೂರ್ವ ವಿಕಾಸದ ಜೊತೆಗೇ ಇಂತಹ ಕೆಲಸಗಳನ್ನು ಮಾಡುವುದು ಮತ್ತಷ್ಟು ಸರಳವಾಗಿದೆ’, ಎನ್ನುತ್ತಿದ್ದರು ಫ್ರಾಂಕ್.   

ನೀವು ಯಾವುದೇ ಸಂಸ್ಥೆಗೆ ಹೋಗಿ. ನಮ್ಮಷ್ಟು ವ್ಯವಸ್ಥಿತವಾದ ಸಂಸ್ಥೆಯೇ ಬೇರೊಂದಿಲ್ಲವೆಂಬಂತೆ ಅಲ್ಲಿಯ ಹಿರಿತಲೆಗಳು ಮಾತಾಡುತ್ತಿರುತ್ತಾರೆ. ಈ ಮಾತು ಒಕ್ಕೂಟ ವ್ಯವಸ್ಥೆಗೂ, ದೇಶಕ್ಕೂ, ಪ್ರದೇಶಕ್ಕೂ, ಅಲ್ಲಿಯ ಯಾವುದಾದರೊಂದು ವ್ಯವಸ್ಥೆಗೂ ಅನ್ವಯವಾಗುತ್ತದೆ. ನಾವು ಯಾವತ್ತಿಗೂ ಬೆಸ್ಟ್ ಎಂದು ಮುಂಬೈ ಪೋಲೀಸರು ಜಂಭ ಕೊಚ್ಚಿಕೊಂಡರೆ, ನಾವೇನು ಕಮ್ಮಿಯೇ ಎಂಬಂತೆ ದಿಲ್ಲಿ ಪೋಲೀಸರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಯಾವ ಮಹಾನಗರಿಯ ಪೋಲೀಸ್ ಇಲಾಖೆಯು ಅತ್ಯುತ್ತಮ ಎಂಬುದು ಇಲ್ಲಿ ಪ್ರಶ್ನೆಯಲ್ಲ. ಹಾಗಂತ ಮಹಾನಗರಗಳಲ್ಲಿ ಅಪರಾಧಗಳ ಪ್ರಮಾಣವೂ ಕಡೆಗಣಿಸುವಷ್ಟು ಕಮ್ಮಿಯೇನಿಲ್ಲ. ಬಹುಷಃ ಫ್ರಾಂಕ್ ಹೇಳಿದ್ದ ಮಾತುಗಳಲ್ಲಿ ಸತ್ಯಾಂಶವಿದೆ. ತಂತ್ರಜ್ಞಾನವು ನಮಗೆ ನೀಡಿರುವ ಕಂಫರ್ಟಿನ ಪ್ಯಾಕೇಜಿನಲ್ಲಿ ದುರಾದೃಷ್ಟವಶಾತ್ ಕ್ರೈಂ ಕೂಡ ಉಚಿತವಾಗಿ ಸಿಕ್ಕಿಬಿಟ್ಟಿದೆ.

ದಿಲ್ಲಿ ಮೆಟ್ರೋ ಇದಕ್ಕೊಂದು ಒಳ್ಳೆಯ ನಿದರ್ಶನ. ದಿಲ್ಲಿಯ ಮೆಟ್ರೋ ವ್ಯವಸ್ಥೆಯು ಜಾಗತಿಕ ಮಟ್ಟದ ಅತ್ಯುತ್ತಮ ಮೆಟ್ರೋ ವ್ಯವಸ್ಥೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂಥದ್ದು. ಉತ್ಕೃಷ್ಟ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನದಂತಹ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡಿರುವ ದಿಲ್ಲಿ ಮೆಟ್ರೋ ಎಂಥವರಿಗಾದರೂ ಖುಷಿ ತರುವ ಸಾರಿಗೆ ವ್ಯವಸ್ಥೆ. ಹಾಗೆ ನೋಡಿದರೆ ದಿಲ್ಲಿ ಮೆಟ್ರೋದ ಒಳಾಂಗಣ ಮತ್ತು ಹೊರಾಂಗಣಗಳಲ್ಲಿ ಕಾಣಸಿಗುವ ಸಿಸಿಟಿವಿ ಕ್ಯಾಮೆರಾಗಳು ಮೆಟ್ರೋ ಸ್ಟೇಷನ್ನುಗಳಿಗೆ ಬಂದುಹೋಗುವ ಪ್ರಯಾಣಿಕರ ಪಾಲಿಗೆ ರಹಸ್ಯದ ಸಂಗತಿಯೇನೂ ಅಲ್ಲ. ಅಷ್ಟಿದ್ದರೂ ಇಲ್ಲಿ ಜೇಬುಗಳ್ಳತನದ ಪ್ರಕರಣಗಳು ಆಗಾಗ ಸಂಭವಿಸುತ್ತವೆ. ಅದರಲ್ಲೂ ಅಕ್ಷರಶಃ ಕ್ಯಾಮೆರಾಗಳ ಕಣ್ಣಿಗೂ ನಿಲುಕದಷ್ಟಿನ ವೇಗದಲ್ಲಿ!

ರಾಜೀವ್ ಚೌಕ್ ನಂತಹ ಇಂಟರ್ ಚೇಂಜಿಂಗ್ ಮೆಟ್ರೋ ಸ್ಟೇಷನ್ನುಗಳಲ್ಲಿ ಅಪಾರವೆನ್ನಿಸುವಷ್ಟು ಜನಸಂದಣಿಯು ಕಾಣುವುದು ಇಲ್ಲಿಯ ನಿತ್ಯದ ದೃಶ್ಯಗಳಲ್ಲೊಂದು. ಹಲವು ಮೆಟ್ರೋ ಲೈನುಗಳನ್ನು ಒಂದಕ್ಕೊಂದು ಬೆಸೆಯುವ ಬಿಂದುವಿನಂತಿರುವ ಕಾರಣದಿಂದಾಗಿ ಇದು ಬಿಡುವಿಲ್ಲದ ಜನಜಾತ್ರೆಯ ತಾಣ. ಇಂತಹ ಸ್ಥಳಗಳಲ್ಲಂತೂ ಜೇಬಿನಲ್ಲಿದ್ದ ಪರ್ಸನ್ನೋ, ಮೊಬೈಲನ್ನೋ ಕ್ಷಣಾರ್ಧದಲ್ಲಿ ಎಗರಿಸಿಬಿಡುವ ಪವಾಡವನ್ನು ಇಲ್ಲಿಯ ಚಾಣಾಕ್ಷ ಅಪರಾಧಿಗಳು ಯಶಸ್ವಿಯಾಗಿ ಮಾಡಿರುತ್ತಾರೆ. ಒಂದೊಮ್ಮೆ ಪ್ರಯಾಣಿಕನೊಬ್ಬನಿಗೆ ಈ ಬಗ್ಗೆ ಥಟ್ಟನೆ ಅರಿವಾದರೂ ಅಸಂಖ್ಯಾತ ಅಪರಿಚಿತ ಮುಖಗಳ ನಡುವೆ ಖದೀಮನೊಬ್ಬನನ್ನು ನಿಖರವಾಗಿ ಪತ್ತೆಹಚ್ಚುವುದು ಅಸಾಧ್ಯದ ಮಾತೇ ಸರಿ.

ಹಳೇದಿಲ್ಲಿಯ ಕೆಲ ಭಾಗಗಳಲ್ಲಿ ಪಿಕ್ ಪಾಕೆಟಿಂಗ್ ನಿಂದ ಹಿಡಿದು ಹಲವು ದೊಡ್ಡಮಟ್ಟಿನ ಕಾಳದಂಧೆಗಳಲ್ಲಿ ತೊಡಗಿಸಿಕೊಂಡಿರುವ ಕೆಲ ಅಪರಾಧಿಗಳನ್ನು ನಾನು ಕಂಡಿದ್ದೇನೆ. ಅವರ ಬಳಿಯಿರುವ ರೋಚಕ ಕತೆಗಳಿಗೆ ಕಿವಿಯಾಗಿದ್ದೇನೆ. ಒಬ್ಬನಂತೂ ತೀರಾ ಆಕಸ್ಮಿಕವಾಗಿ ಈ ಅಪರಾಧದ ಲೋಕಕ್ಕಿಳಿದು ನಂತರ ಇದರಲ್ಲೇ ಪೂರ್ಣಾವಧಿ ತೊಡಗಿಕೊಂಡಿದ್ದ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಆತ ನೆಲೆಸಿದ್ದರಿಂದ ಆತನಿಗೆ ಈ ಭಾಗದ ಭಾಷೆಗಳೂ ಬರುತ್ತಿದ್ದವು. ಕನ್ನಡ ಮಾತನಾಡುವುದು ಕಷ್ಟವಾದರೂ ಮಾತುಗಳನ್ನು ನಿರಾಯಾಸವಾಗಿ ಅರ್ಥಮಾಡಿಕೊಳ್ಳಬಲ್ಲೆ ಎಂದು ಬೇರೆ ಖುಷಿಯಿಂದ ಹೇಳಿದ್ದ ಆತ.

ಇತ್ತ ದಿಲ್ಲಿಯ ಛತರ್ ಪುರ್ ಪ್ರದೇಶದಲ್ಲಿರುವ ಆಫ್ರಿಕನ್ ವಲಸಿಗರ ಬಗ್ಗೆ ಇಂಥದ್ದೊಂದು ಪೂರ್ವಾಗ್ರಹದ ನೋಟವು ಹಲವು ವರ್ಷಗಳಿಂದ ಇಂದಿಗೂ ಜೀವಂತವಾಗಿದೆ. ವರ್ಣ ಜನಾಂಗೀಯ ದೌರ್ಜನ್ಯದ ಪ್ರಕರಣಗಳು ಸದ್ಯ ಒಂದಷ್ಟು ಕಮ್ಮಿಯಾದಂತೆ ಕಂಡರೂ, ಮಾದಕದ್ರವ್ಯಗಳಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ ಇವರ ಹೆಸರುಗಳು ಆಗಾಗ ಕೇಳಿಬರುವುದುಂಟು. ಇನ್ನು ಭಾರತೀಯರ ವಿದೇಶೀ ವ್ಯಾಮೋಹದ ಪರಿಣಾಮವೋ ಎಂಬಂತೆ, ಈಚಿನ ದಿನಗಳಲ್ಲಿ ಈ ಮಂದಿಯ ವ್ಯಾಪ್ತಿಯು ವೇಶ್ಯಾವಾಟಿಕೆಯಂತಹ ದಂಧೆಯವರೆಗೂ ಹಬ್ಬಿಕೊಂಡಿರುವುದು ಎಲ್ಲರೂ ಬಲ್ಲ ಶಹರದ ಓಪನ್ ಸೀಕ್ರೆಟ್ ಗಳಲ್ಲೊಂದು.

ಮೇಲ್ನೋಟಕ್ಕೆ ಇವುಗಳು ಮಹಾನಗರಗಳಲ್ಲಿ ಸಾಮಾನ್ಯವಾಗಿ ಘಟಿಸಬಹುದಾದ ಚಿಕ್ಕಪುಟ್ಟ ಅಪರಾಧಗಳಂತೆ ಕಂಡರೂ ವಿಶಾಲ ವ್ಯಾಪ್ತಿಯಲ್ಲಿ ಇವುಗಳು ಬೀರುವ ಪರಿಣಾಮವು ಕಡೆಗಣಿಸುವಂಥದ್ದಲ್ಲ. ಉದಾಹರಣೆಗೆ ಅಪಾರ ಜನಸಂದಣಿಯಿರುವ ಹಜರತ್ ನಿಜಾಮುದ್ದೀನ್ ರೈಲ್ವೇ ನಿಲ್ದಾಣಗಳಂತಹ ಸ್ಥಳಗಳಲ್ಲಿ ಅವಶ್ಯವಾಗಿ ಇರಲೇಬೇಕಾದ ಭದ್ರತಾ ವ್ಯವಸ್ಥೆಯು ಕಳೆದ ಕೆಲ ವರ್ಷಗಳವರೆಗೂ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ದಿಲ್ಲಿಯಂತಹ ಶಹರಗಳಲ್ಲಿ ಮೆಟ್ರೋ ಸ್ಟೇಷನ್ನುಗಳು ವಿಮಾನನಿಲ್ದಾಣಗಳಂತಿನ ವ್ಯವಸ್ಥಿತ ಭದ್ರತಾ ವ್ಯವಸ್ಥೆಯನ್ನು ಪಡೆದುಕೊಂಡಿದ್ದರೂ, ಸದಾ ಜನಸಾಗರವನ್ನು ಹೊಂದಿರುವ ಮಹಾನಗರಿಯ ಪ್ರಮುಖ ರೈಲ್ವೇ ನಿಲ್ದಾಣವೊಂದು ಈ ನಿಟ್ಟಿನಲ್ಲಿ ಹಿಂದುಳಿಯುವುದು ನಿಜಕ್ಕೂ ಆಘಾತಕಾರಿ ಅಂಶ.

ಹಾಗೆ ನೋಡಿದರೆ ಈ ಸೂಕ್ಷ್ಮಗಳ ಬಗ್ಗೆ ಗಮನಹರಿಸಲು ಹೆಚ್ಚಿನ ಶ್ರಮವೇನೂ ಬೇಡ. ಇದಕ್ಕೆ ಭದ್ರತಾಲೋಪದಿಂದ ಈವರೆಗೆ ನಡೆದಿರುವ ಕೆಲ ಕಹಿ ಘಟನೆಗಳನ್ನು ಮೆಲುಕು ಹಾಕಿದರಷ್ಟೇ ಸಾಕು. ೨೬/೧೧ ದಾಳಿಯ ಬಗ್ಗೆ ಬರೆಯುವ ಖ್ಯಾತ ಲೇಖಕ ಹುಸೇನ್ ಝಾಯ್ದಿ ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಡೇವಿಡ್ ಹೆಡ್ಲಿಯ ಬಗ್ಗೆ ಹೇಳುತ್ತಾ ಆತ ಮುಂಬೈ ಶಹರವನ್ನೇಕೆ ಆರಿಸಿಕೊಂಡ ಎಂದು ತನ್ನ ಕೃತಿಯಲ್ಲಿ ದಾಖಲಿಸುತ್ತಾರೆ. ಈ ಹೆಡ್ಲಿ ಮಹಾಶಯ ದಿಲ್ಲಿ ಸೇರಿದಂತೆ ಭಾರತದ ಹಲವು ಪ್ರಮುಖ ಶಹರಗಳಿಗೆ ಭೇಟಿಯಿತ್ತು ಎಲ್ಲೆಲ್ಲಾ ಬಾಂಬ್ ದಾಳಿ ನಡೆಸಬಹುದು ಎಂಬುದನ್ನು ವಿವರವಾಗಿ ಅವಲೋಕಿಸಿದ್ದ. ಆಳೆತ್ತರದ ಬಿಳಿಯನಾಗಿದ್ದ ಹೆಡ್ಲಿ ತನ್ನ ಭಿನ್ನ ಬಣ್ಣದ ಕಣ್ಣುಗಳಿಂದಾಗಿ ಇತರರಿಂದ ವಿಭಿನ್ನವಾಗಿ ಕಂಡರೂ, ಪ್ರವಾಸಿಗನ ಸೋಗಿನಲ್ಲಿ ಅಲೆದಾಡುವುದು ಆತನಿಗೆ ಕಷ್ಟವೇನೂ ಆಗಿರಲಿಲ್ಲವಂತೆ.

ಅಂದಹಾಗೆ ಹೆಡ್ಲಿಯ ಒಟ್ಟಾರೆ ಉದ್ದೇಶವೂ ದೊಡ್ಡ ಮಟ್ಟಿನದ್ದೇ ಆಗಿತ್ತು. ಈ ದಾಳಿಯಲ್ಲಿ ಹೆಚ್ಚು ಮಂದಿಯನ್ನು ಕೊಲ್ಲುವುದಷ್ಟೇ ಅಲ್ಲದೆ, ಮೃತರಲ್ಲಿ ದೊಡ್ಡ ಸಂಖ್ಯೆಯ ವಿದೇಶೀಯರಿದ್ದರೆ ಬಾಂಬ್ ದಾಳಿಯ ಸುದ್ದಿಯು ಅಂತಾರಾಷ್ಟ್ರೀಯ ಮಟ್ಟಿನಲ್ಲಿ ಸದ್ದು ಮಾಡಬಹುದೆಂಬ ಯೋಜನೆಯು ಅವನದಾಗಿತ್ತು. ಹೀಗೆ ಹುಡುಕುತ್ತಾ ಹೊರಟ ಹೆಡ್ಲಿಗೆ ಕೊನೆಗೂ ಬಲಿಯಾಗಿದ್ದು ಭಾರತದ ಆರ್ಥಿಕ ನಗರಿಯಾದ ಮುಂಬೈ. ಸಮುದ್ರತೀರದ ಭಾಗದಲ್ಲಿ ತೀರಾ ನಗಣ್ಯ ಎಂದು ಹೇಳಬಹುದಾಗಿದ್ದ ಇಲ್ಲಿಯ ಭದ್ರತಾ ವ್ಯವಸ್ಥೆಯು ಹೆಡ್ಲಿಯ ಕೆಲಸವನ್ನು ಸುಲಭಗೊಳಿಸಿತ್ತು. ಮುಂದೆ ಇದೇ ಸಮುದ್ರಮಾರ್ಗವಾಗಿ ಬಂದ ಕೆಲ ತರುಣರು ಮುಂಬೈ ಮಹಾನಗರಿಯನ್ನೇ ಅಲ್ಲೋಲಕಲ್ಲೋಲ ಮಾಡಿ ಹೋಗಿದ್ದರು.

ದಿಲ್ಲಿಯ ಕೆಂಪುಕೋಟೆಯಲ್ಲಿ ೨೦೨೧ ರ ಗಣರಾಜ್ಯೋತ್ಸವದ ದಿನದಂದು ನಡೆದ ಗೊಂದಲದಲ್ಲಿ ಉದ್ಭವವಾಗಿದ್ದ ಪ್ರಶ್ನೆಯೂ ಕೂಡ ಭದ್ರತಾ ವ್ಯವಸ್ಥೆಯದ್ದೇ. ಗಣ್ಯಾತಿಗಣ್ಯರು ಆಗಮಿಸುವ ಇಂತಹ ಪ್ರತಿಷ್ಠಿತ ಕಾರ್ಯಕ್ರಮವೊಂದಕ್ಕೆ ಯಾವ ರೀತಿಯ ಭದ್ರತಾವ್ಯವಸ್ಥೆಯನ್ನು ನೀಡಲಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಅಂಶ. ಆಯ್ದ ಪ್ರದೇಶಗಳಲ್ಲಿ ಸಾಮಾನ್ಯ ದಿನಗಳಲ್ಲೂ ಕಾಣಸಿಗುವ ಸಮವಸ್ತçಧಾರಿಗಳ ಚಟುವಟಿಕೆಗಳು ದಿಲ್ಲಿಯ ಜನತೆಗೆ ಹೊಸತೇನಲ್ಲ. ಹಾಗಿದ್ದೂ ಪರಿಸ್ಥಿತಿಯು ಅದ್ಹೇಗೆ ಕೈಮೀರಿ ಹೋಯಿತು ಎಂಬಲ್ಲೇ ಈ ಘಟನೆಗೊಂದು ತಿರುವು ಸಿಕ್ಕಿ, ಎಲ್ಲವೂ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ ಎಂಬ ಜನತೆಯ ಊಹೆಯನ್ನು ಬಲವಾಗಿಸಿತು. ದಿಲ್ಲಿಯ ಐತಿಹಾಸಿಕ ರೈತ ಚಳುವಳಿಯಲ್ಲಿ ಇದೊಂದು ಘಟನೆಯೂ, ಮುಂದೆ ನಡೆದ ಕ್ಷಿಪ್ರ ಬೆಳವಣಿಗೆಗಳೂ ಸದಾ ನೆನಪಿನಲ್ಲುಳಿಯಲಿವೆ.

ಹೀಗೆ ಮಹಾನಗರಿಯು ಎಂದಿನಂತೆ ಸಹಜವಾಗಿ ಕಂಡರೂ ಅಪರಾಧ ಲೋಕದ ಗುಪ್ತಗಾಮಿನೀ ಹರಿವು ತನ್ನ ಪಾಡಿಗೆ ತಾನು ಪ್ರವಹಿಸುತ್ತಲೇ ಇರುತ್ತದೆ. ಯಾವುದೋ ಶಕ್ತಿಯ ಬುದ್ಧಿವಂತಿಕೆಯ ನಡೆಗೆ ಮತ್ಯಾವುದೋ ಕಾಯಿಯು ಉರುಳಿರುತ್ತದೆ. ಶಹರದ ಸಂಕೀರ್ಣ ವ್ಯವಸ್ಥೆಯ ಜಾಲದಲ್ಲಿ ಇವೆಲ್ಲಾ ನಿತ್ಯ ನಿರಂತರ. ವಿದೇಶಿ ಪ್ರವಾಸಿಗರನ್ನು ಲೂಟಿ ಮಾಡುವ ಖದೀಮರು, ಹವಾಲಾ ದಂಧೆಗಳಲ್ಲಿ ತೊಡಗಿರುವ ಅನಾಮಿಕ ಸಾಮಾನ್ಯರು, ಜಿ.ಬಿ ರೋಡಿನಲ್ಲಿ ಅಡ್ಡಾಡುವ ಗಿರಾಕಿಗಳನ್ನೇ ದೋಚುವ ದಲ್ಲಾಳಿಗಳು, ಡ್ರಗ್ಸ್ ಮಾರಾಟ ಜಾಲದ ಕುಳಗಳು, ದೊಡ್ಡವರ ದೊಡ್ಡ ಪಾರ್ಟಿಗಳಲ್ಲಿ ನಡೆಯುವ ವಿಲಕ್ಷಣ ಸಂಗತಿಗಳು… ಒಟ್ಟಿನಲ್ಲಿ ಮಹಾನಗರಿಯ ಕತೆಯಾಗದ ಕತೆಗಳನ್ನು ಬಗೆದಷ್ಟೂ ಕಮ್ಮಿಯೇ!

ಅವುಗಳೂ ಕೂಡ ಮಹಾನಗರಿಯಷ್ಟೇ ಬಹುರೂಪಿ!


February 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This