ದಿಲ್ಲಿ ಡೈರಿ: ಚಳಿ ಮತ್ತು ರೈತರ ಹೋರಾಟದ ಬಿಸಿ

ನವೀನ್‌ ಕುಮಾರ್

ರಾತ್ರಿ ಸುಮಾರು 11 ಗಂಟೆಗೆ ಮಲಗುವಾಗಲೇ ಚಳಿಯ ಪರಿಚಯವಾಗುತ್ತಿತ್ತು. ಬೆಳಗಿನ ಜಾವ 4 ಗಂಟೆಯ ಆಸುಪಾಸು ಚಳಿ ಎನ್ನುವುದು ದೇಹದ ಮಾಂಸಖಂಡಗಳನ್ನು ಸೀಳಿ ನರನಾಡಿಗಳನ್ನು ನುಗ್ಗಿ ಮೂಳೆಗಳನ್ನು ತಾಗುತ್ತಿತ್ತು. ‌ಈ ಚಳಿಯನ್ನು ತಡೆಯಲಾರದೆ ಎದ್ದು ನೋಡಿದರೆ ರೈಲು ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ನಲ್ಲಿತ್ತು. ನಮ್ಮ ಬಳಿಯಿರುವ ಶಾಲು ಮತ್ತು ಬೆಚ್ಚನೆಯ ಹೊದಿಕೆಗಳು ನಮ್ಮ ಊರಿನಲ್ಲಿ ಮಾತ್ರ ಬೆಚ್ಚಗಿರುತ್ತಿತ್ತು ಇಲ್ಲಿ ಅದು ತನ್ನ ಬೆಚ್ಚಗಿನ ಗುಣವನ್ನೇ ಕಳೆದುಕೊಂಡಂತಿತ್ತು. ತಲೆಯ ಕಡೆ ಚಳಿಯಾಗುತ್ತದೆಂದು ಸ್ವಲ್ಪ ತಲೆಭಾಗಕ್ಕೆ ಹೆಚ್ಚು ಎಳೆದುಕೊಂಡರೆ ಕಾಲಿನ ಭಾಗದಲ್ಲಿ ಚಳಿ ಪ್ರಾರಂಭವಾಗುವುದು.

ಕೆಲವು ಸಾರಿ ಯಾವ್ಯಾವ ಜಾಗಗಳಿಂದ ಚಳಿ ಬರುತ್ತಿದೆ ಎಂಬುದೇ ತಿಳಿಯುತ್ತಿರಲಿಲ್ಲ. ಆ ಚಳಿಗೆ ನಿದ್ದೆ ಮಾಡುವುದು ಅಸಾಧ್ಯವೆನಿಸಿ ಎದ್ದು ಕುಳಿತೆವು. ಅಷ್ಟರೊಳಗಾಗಲೇ ನಮ್ಮಂತೆಯೇ ಚಳಿಯನ್ನು ಅನುಭವಿಸಿದ್ದವರು ಅಕ್ಕಪಕ್ಕದ ಸೀಟುಗಳಲ್ಲಿ ಎದ್ದು ಕುಳಿತಿದ್ದರು. ನಮ್ಮ ಎಡಬದಿಯಲ್ಲಿ ಸಿಂಗಲ್ ಸೀಟಿನಲ್ಲಿದ್ದವ ಒಬ್ಬ ಆ ಚಳಿಯಲ್ಲೂ ಕಿಟಕಿಯನ್ನು ತೆಗೆಯುವ ಸಾಹಸ ಮಾಡಿದ್ದ…

ನಮ್ಮ ಸ್ಥಿತಿಯನ್ನು ನೋಡಿ ಕೊನೆಗೆ ಅವನೇ ಕಿಟಕಿ ಮುಚಿದ. ನಮ್ಮ ಬಳಿಯಿದ್ದ ಸ್ವೆಟರ್, ಜರ್ಕಿನ್, ಕೋಟ್, ತಲೆಗೆ ಟೋಪಿ, ಮಾಸ್ಕ್, ಕೈಗೆ ಗ್ಲೌಸ್ ಅದರ ಮೇಲೆ ಒಂದು ಶಾಲು ಮತ್ತು ಅದರ ಮೇಲೆ ಮತ್ತೊಂದು ಹೊದ್ದುಕೊಂಡರೂ ಚಳಿಯನ್ನು ತಡೆಯಲು ಸಾಧ್ಯವಾಗದೇ ಟೀಯನ್ನೇ ಕುಡಿಯದವರು ಮೂರು ಮೂರು ಟೀ ಕುಡಿದರೂ ಪ್ರಯೋಜನವಾಗಲಿಲ್ಲ. ಇರಲಿ ಬಿಡಿ ಚಳಿ ಬಗ್ಗೆ ಬರೆಯುತ್ತಾ ಹೋದರೆ ಇದು ಮುಗಿಯದ ವಿಷಯ ಇನ್ನೊಂದು ವಿಷಯವನ್ನು ಹೇಳಿ ಇಲ್ಲಿಗೆ ಇದನ್ನ ನಿಲ್ಲಿಸುತ್ತೇನೆ.

ಬೆಳಗಾಯಿತು ಸಮಯ 8 ಗಂಟೆ ಏನನ್ನ ಬೇಕಾದರೂ ತಡೆಯಬಹುದು ನಿತ್ಯಕರ್ಮಗಳನ್ನು ತಡೆಯಲಾಗದು… ದೊಡ್ಡ ಮನಸ್ಸು ಮಾಡಿ ಟಾಯ್ಲೆಟ್ ರೂಮ್ ಗೆ ಹೋಗೋಣವೆಂದರೆ ಕೈ ಕಾಲುಗಳು ಹಾಗೆ ಹಿಡಿದುಕೊಂಡಿವೆ. ಅಂತೂ ಒಮ್ಮೆ ಕೈಕಾಲುಗಳನ್ನ ಜಾಡಿಸಿ, ಮೈಕೈ ಮುರಿದು ಹೋಗಿ ವಾಪಸ್ ಬರುವುದರೊಳಗೆ ನೀರನ್ನ ಮುಟ್ಟಿದ್ದ ಕೈಗಳಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿತ್ತು. ಆಗ ಉಷ್ಣಾಂಶವನ್ನ ಪರೀಕ್ಷಿಸಿದರೆ 5° ಸೆಲ್ಸಿಯಸ್.

ಬೆಳಗ್ಗೆ 11.30ಕ್ಕೆ ನಿಜಾಮುದ್ದೀನ್ ಗೆ ಬಂದು ತಲುಪಬೇಕಾಗಿದ್ದ ನಮ್ಮ ಗಾಡಿ ಹವಾಮಾನದ ವ್ಯತ್ಯಯದಿಂದಾಗಿ ಒಂದು ಗಂಟೆ ತಡವಾಗಿ ಬಂದು ಸೇರಿತು. ರೈಲು ಇಳಿದು ಫ್ಲಾಟ್ ಫಾರಂ ಮೂಲಕ ಹೊರಬರುತ್ತಿದ್ದರೆ ನಮಗೆ ನವೀಕರಣದ ಕೆಲಸ ಕಣ್ಣಿಗೆ ಬಿತ್ತು ಅಲ್ಲಿರುವ ಕಂಬಗಳಿಗೆ ಕೇಸರಿ ಬಣ್ಣವನ್ನು ಬಳಿಯಲಾಗುತ್ತಿತ್ತು…

ಅಲ್ಲಿಂದ ನ್ಯೂಡೆಲ್ಲಿಯಲ್ಲಿರುವ ಅಖಿಲ ಭಾರತ ಕಿಸಾನ್ ಸಭಾದ AIKS ಕಚೇರಿಗೆ ಹೋಗುವುದಕ್ಕೆ ವೋಲಾ ಕ್ಯಾಬ್ ಬುಕ್ ಮಾಡಿ ಕಾಯುತ್ತಾ ನಿಂತಿದ್ದೆವು. ಅಲ್ಲಿಗೆ ಸುಮಾರು ಹತ್ತರಿಂದ ಹದಿನೈದು ಜನ ಟ್ಯಾಕ್ಸಿ ಮತ್ತು ಆಟೋದವರು ಬಂದರು. ನಮ್ಮನ್ನ ನೋಡಿದ ಕೂಡಲೇ ಇವರು ದೆಹಲಿಗೆ ಹೊಸಬರು ಮತ್ತು ದಕ್ಷಿಣ ಭಾರತದವರು ಎಂದು ಸುಲಭವಾಗಿ ಗುರುತಿಸುತ್ತಿದ್ದರು.

ಒಬ್ಬ ಬಂದು ನೀವು ವೋಲಾದಲ್ಲೆಲ್ಲ ಹೋಗಬೇಡಿ ಅವರು ನಿಮಗೆ ತುಂಬಾ ಮೋಸ ಮಾಡುತ್ತಾರೆ ಬನ್ನಿ ನಾನು ನಿಮ್ಮನ್ನ ಕಡಿಮೆಗೆ ಕರೆದುಕೊಂಡು ಹೋಗುತ್ತೇನೆ ಎಂದ. ನಾವು ಇರಲಿ ನೋಡೋಣ ಅಂತ ಎಷ್ಟು ಆಗುತ್ತದೆ ಎಂದು ಕೇಳಿದೆವು. ಅದಕ್ಕೆ ಅವನು 300 ರೂ. ಕೊಡಿ ಎಂದ. ನಾವು ವೋಲಾದಲ್ಲಿ ಬುಕ್ ಮಾಡಿದ್ದು 90 ರೂ. ಆಗಿತ್ತು. ಅದನ್ನ ಅವನಿಗೆ ತೋರಿಸಿದ್ದಕ್ಕೆ ಇದರಲ್ಲೇನೋ ಮೋಸ ಇದೆ ಅಂತ ಹೇಳಿ ಅಲ್ಲಿಂದ ಜಾಗ ಖಾಲಿ‌ಮಾಡಿದ.

ಒಮ್ಮೆಮ್ಮೆ ಯಾರನ್ನ ನಂಬಬೇಕು ಯಾರನ್ನ ನಂಬಬಾರದು ಎನ್ನುವುದೇ ಗೊತ್ತಾಗುವುದಿಲ್ಲ. ಕಚೇರಿ ತಲುಪಿ ಅಲ್ಲಿದ್ದ AIKS ನ ಪ್ರಧಾನ ಕಾರ್ಯದರ್ಶಿ ಹನ್ನನ್ ಮುಲ್ಲಾ, ಜಂಟಿ‌ಕಾರ್ಯದರ್ಶಿ ವಿಜೂ ಕೃಷ್ಣನ್, ಕೃಷ್ಣಪ್ರಸಾದ್ ರವರನ್ನು ಮಾತನಾಡಿಸಿ‌ ಅಲ್ಲೇ ಊಟವನ್ನು ಮುಗಿಸಿ ನಮ್ಮ ಮೂಲ ಉದ್ದೇಶದತ್ತ ಗಮನ ಹರಿಸಿದೆವು. ನಮ್ಮ ಜೊತೆ ಕೇರಳದಿಂದ ಬಂದಿದ್ದ ಶರತ್ ಮತ್ತು ಒಡಿಸ್ಸಾದ ಸಂಗಾತಿ ಪ್ರಭಾತ್ ಜೊತೆಗೂಡಿದರು.

ಸಿಂಗು ಗಡಿಗೆ ಪ್ರವೇಶ :

ನವದೆಹಲಿಯಿಂದ 40 ಕಿಲೋಮೀಟರ್ ದೂರ ಇರುವ ಹರಿಯಾಣ ಪಂಜಾಬ್ ನಡುವಣ ಇರುವ ಸಿಂಗು ಬಾರ್ಡರ್ ಗೆ ಸುಮಾರು 4 ಗಂಟೆಗೆ ತಲುಪಿದೆವು. ಗಡಿ ತಲುಪಿದ ಕೂಡಲೇ ನಮಗೆ ನಿಜವಾದ ಗಡಿಗಳ ಚಿತ್ರಣದಂತೆ ಕಂಡಿತು. ಗಡಿಗಳು ನಿರ್ಮಾಣಗೊಂಡಿವೆ…

ಇವು ದೇಶದ ಗಡಿಭಾಗಗಳಲ್ಲಿ ನಿರ್ಮಾಣಗೊಂಡವುಗಳಲ್ಲ ಬದಲಿಗೆ ದೇಶದ ಒಳಗೆ, ದೇಶದ ರಾಜಧಾನಿ ದೆಹಲಿಗೆ ಅನ್ನದಾತ ರೈತರು ಬರಬಾರದೆಂದು ಮೋದಿ ಸರ್ಕಾರ ನಿರ್ಮಾಣ ಮಾಡಿರುವ ಗಡಿಗಳಿವು. ತಂತಿಬೇಲಿಗಳಿವೆ, ದೊಡ್ಡ ದೊಡ್ಡ ಸಿಮೆಂಟ್ ಬ್ಲಾಕ್ ಗಳಿವೆ, ಕಂಟೈನರ್ ಗಳಿವೆ, ಮಣ್ಣು ತುಂಬಿದ ಟ್ರಕ್ ಗಳಿಂದ ಗಡಿಗಳನ್ನು ನಿರ್ಮಿಸಲಾಗಿದೆ.

ದೆಹಲಿಯಿಂದ ಪ್ರವೇಶ ಪಡೆಯುವವರಿಗೆ ಇವುಗಳೇ ಮೊದಲಿಗೆ ಸ್ವಾಗತವನ್ನು ಕೋರುತ್ತವೆ. ಇವುಗಳ ಅಕ್ಕಪಕ್ಕದಲ್ಲಿ ನಿಂತಿರುವ ದೆಹಲಿ ಪೊಲೀಸರು ಮತ್ತು ಆರ್ಮಿಯವರು ಹಾಗೂ ಸಿ ಆರ್ ಪಿ ಎಫ್ ನವರು ತಮ್ಮ ವಾಹನಗಳ ಜೊತೆ ಟಿಯರ್ ಶೆಲ್ಸ್ ಮತ್ತು ಜಲಫಿರಂಗಿ ವಾಹನಗಳೊಂದಿಗೆ ಶಸ್ತ್ರ ಸಜ್ಜಿತರಾಗಿ ನಿಂತಿದ್ದರು… ಇವರ ಲಾಠಿಗಳು, ಬಂದೂಕುಗಳು ದೇಶಕ್ಕೆ ಅನ್ನ ಬೆಳೆದು ಕೊಡುವ ಅನ್ನದಾತನ ಎದೆಯ ಕಡೆಗೆ ಗುರಿ ಮಾಡಿದ್ದವು. ಹೇಗಿದೆ ಭಾರತದ ವಾಸ್ತವ…

ಈ ಅಡ್ಡಗೋಡೆಗಳನ್ನ ದಾಟಿಕೊಂಡು‌ ಮುಂದೆ ಹೋದರೆ ಮೊದಲಿಗೆ‌ ಒಂದು ವೇದಿಕೆ.‌ ಆ ವೇದಿಕೆಯಲ್ಲಿ ಒಬ್ಬಳು ಹೆಣ್ಣುಮಗಳು ಭಾಷಣ ಮಾಡುತ್ತಿದ್ದಳು. ನೂರಾರು ಜನ ಕುಳಿತು ಕೇಳುತ್ತಿದ್ದರು. ಆಕೆಯ ಒಂದು‌ ಮಾತು ನನ್ನ ಗಮನ ಸೆಳೆಯಿತು “ಇಲ್ಲಿ ಪ್ರಧಾನಿ, ರಾಷ್ಟ್ರಪತಿಗಳು ಎಷ್ಟು ಜನ ಬೇಕಾದರು ಬಂದು ಹೋಗಬಹುದು, ಆದರೆ ದೇಶ ಮಾತ್ರ ಒಂದೇ. ಅದು ಹಾಗೆ ಇರುತ್ತದೆ. ಆ ದೇಶಕ್ಕಾಗಿ‌ ನಮ್ಮ ಹೋರಾಟ.”

ಅಲ್ಲಿಂದ ಮುಂದೆ ಹೋದರೆ ಪ್ರತಿಭಟನೆಯ ನಿಜವಾದ ದರ್ಶನ ನಮಗಾಗುತ್ತದೆ. ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿಯನ್ನ ಸಂಪೂರ್ಣ ತಮ್ಮ ವಶಕ್ಕೆ ಪಡೆದಿರುವ ರೈತರು ಆ ರಸ್ತೆಗಳ ಮೇಲೆ ತಮ್ಮ ಟ್ರ್ಯಾಕ್ಟರ್ ಗಳನ್ನ ನಿಲ್ಲಿಸಿಕೊಂಡು ಅವುಗಳನ್ನೇ ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ. ಇಡೀ ಪ್ರತಿಭಟನೆಯ ಜಾಗ ಅಕ್ಷರಶಃ ಕದನಕಣವಾಗಿ ಮಾರ್ಪಟ್ಟಿತ್ತು. ಈ ಕದನ ಕಣ ನಿರ್ಮಾಣವಾಗಿ ಇಂದಿಗೆ ಸರಿಯಾಗಿ 50 ದಿನಗಳು ಕಳೆದಿದ್ದವು… ಕರ್ನಾಟಕದಲ್ಲಿ ಎಲ್ಲರೂ ಇಂದು ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದರೆ ಇಲ್ಲಿಯ ಪ್ರತಿಭಟನಾಕಾರ ರೈತರು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಪ್ರತಿಗಳನ್ನ ಸುಟ್ಟು ಆಚರಿಸಿದ್ದರು.

ಚಳವಳಿಯ ಸಂಭ್ರಮ: ಚಳವಳಿಯನ್ನೂ ಸಂಭ್ರಮಿಸಬಹುದೆಂದು ನನಗೆ ಗೊತ್ತಾಗಿದ್ದೇ ಇಲ್ಲಿಗೆ ಬಂದು ಎಲ್ಲವನ್ನ ನೋಡಿದ ಮೇಲೆ. ನಮ್ಮ ಊರುಗಳಲೆಲ್ಲ ಕೇವಲ ಜಾತ್ರಾ ಮಹೋತ್ಸವಗಳಲ್ಲಿ ಮಾತ್ರ ನಾನು ಅಂತಹ ವಾತಾವರಣವನ್ನು ನೋಡಿದ್ದೇನೆ ಬಿಟ್ಟರೆ ಕೇರಳದಲ್ಲಿ ನಡೆದ ಸಿಪಿಐಎಂ ನ ಮಹಾಧಿವೇಶನದ ಬಹಿರಂಗ ಸಭೆಗಳಲ್ಲಿ ಭಾಗವಹಿಸಲು ಹೋದಾಗ ನನಗೆ ಈ ರೀತಿಯ ಅನುಭವವಾಗಿತ್ತು.

ಇಲ್ಲಿ ನಿರಂತರ ಅನ್ನ ದಾಸೋಹ ನಡೆಸಲು ಲೆಕ್ಕವಿಲ್ಲದಷ್ಟು ಅಡುಗೆ ಮನೆ (ಲಂಗರ್) ಗಳನ್ನ ನಿರ್ಮಿಸಿಕೊಳ್ಳಲಾಗಿದೆ. (ಲಂಗರ್ ಸಂಸ್ಕೃತಿ ಮತ್ತು ಅದರ ಇತಿಹಾಸದ ಬಗ್ಗೆ ಪ್ರತ್ತೇಕವಾಗಿ ಹೇಳುತ್ತೇನೆ) ಇಡೀ ಸಿಂಗು ಬಾರ್ಡರ್ ನಲ್ಲಿ ಸರಿ ಸುಮಾರು 22 ಕಿಲೋಮೀಟರ್ ಗಳ ಉದ್ದಕ್ಕೆ ಸುಮಾರು 60 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ಬೀಡು ಬಿಟ್ಟಿವೆ.

ಇದರಲ್ಲಿ ಬಂದಿರುವ ರೈತರು ತಮ್ಮ ತಮ್ಮ ಟ್ರ್ಯಾಕ್ಟರ್ ಗಳನ್ನು ಚಿಕ್ಕ ಮತ್ತು ಚೊಕ್ಕವಾದ ಮನೆಗಳನ್ನಾಗಿ ಪರಿವರ್ತಿಸಿಕೊಂಡು‌ ಅವರ ವಾಸಕ್ಕೆ ಬೇಕಾದ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಂಡಿದ್ದಾರೆ. ಇಲ್ಲಿ ಹೆಜ್ಜೆ ಹೆಜ್ಜೆಗೂ ಕೇವಲ ಅಡುಗೆಯ ಲಂಗರ್ ಗಳು ಮಾತ್ರವಲ್ಲ, ಆರೋಗ್ಯ ಚಿಕಿತ್ಸಾ ಕೇಂದ್ರಗಳು, ಮೆಡಿಕಲ್ ಶಾಪ್ ಗಳು, ಟೀ ಸ್ಟಾಲ್, ಪಾಯಸದ ಸ್ಟಾಲ್, ಬಟ್ಟೆಗಳನ್ನ ತೊಳೆದುಕೊಡುವುದು, ಸಾಮೂಹಿಕವಾಗಿ ಉಳಿದುಕೊಳ್ಳುವವರಿಗೆ ವ್ಯವಸ್ಥೆ… ಹೀಗೆ ಇವೆಲ್ಲವುಗಳನ್ನು ಮಾಡುತ್ತಿರುವವರು ಸ್ವಯಂ ಸೇವಕರು ಸೇವೆಯ ಹೆಸರಿನಲ್ಲಿ.

ಸಿಂಗು ಗಡಿಯಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿಕ್ ಸಮುದಾಯದಲ್ಲಿ ಸೇವೆ ಮಾಡುವುದೆಂದರೆ ಅದೊಂದು‌ ಪುಣ್ಯದ‌ ಕೆಲಸವಿದ್ದಂತೆ ಅದಕ್ಕಾಗಿ ಜನ ಸ್ವಯಂ ಸ್ಫೂರ್ತಿಯಿಂದ ಈ ಹೋರಾಟದಲ್ಲಿ ಭಾಗವಹಿಸಿ ತಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡುತ್ತಾರೆ. ಇದಕ್ಕಾಗಿ ತಮ್ಮ ಮನೆಮಂದಿ ಮಕ್ಕಳನ್ನೆಲ್ಲ ತೊಡಗಿಸುತ್ತಾರೆ. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಸೇವಾ ಮನೋಭಾವವನ್ನು ಕಲಿಸುತ್ತಾರೆ.

ನಾವು ಸುತ್ತಾಡಿದ 4-5 ಕಿಲೋಮೀಟರ್ ನಲ್ಲೇ ಸುಮಾರು 15ಕ್ಕೂ ಹೆಚ್ಚು ಊಟದ ಮನೆಗಳು (ಲಂಗರ್), 2 ಹತ್ತು ಹಾಸಿಗೆಗಳ ಟೆಂಟ್ ಆಸ್ಪತ್ರೆ, 5-6 ಔಷದ ಕೇಂದ್ರಗಳು, ಎರಡು ಸಾಮೂಹಿಕ ಉಳಿಯುವ ವ್ಯವಸ್ಥೆ ಮತ್ತು ನಾಲ್ಕು ಬಹಿರಂಗ ವೇದಿಕೆಗಳು ಎರಡು ವೇದಿಕೆಯಲ್ಲಿ ಭಾಷಣಗಳು ನಡೆಯುತ್ತಿದ್ದರೆ ಒಂದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತೊಂದರಲ್ಲಿ ಧಾರ್ಮಿಕ ಪ್ರವಚನ ನಡೆಯುತ್ತಿತ್ತು. ಒಂದೆರಡು ಕಡೆ ಪುಸ್ತಕದ ಅಂಗಡಿಗಳನ್ನೂ ನಾವು… ದೆಹಲಿಯಿಂದ ಪ್ರವೇಶ ಪಡೆದ ಗಡಿಯ ಪ್ರಾರಂಭದಲ್ಲೆ ನೂರಾರು ಶೌಚಾಲಯಗಳ ಗಾಡಿಗಳನ್ನು ನಿಲ್ಲಿಸಲಾಗಿತ್ತು. ಇವುಗಳನ್ನು ದಿಲ್ಲಿ ಸರ್ಕಾರ ಕಳುಹಿಸಿಕೊಟ್ಟಿದೆ ಎಂದು ಗೊತ್ತಾಯಿತು.

ಇವೆಲ್ಲವುಗಳ ಮಿಶ್ರಣ ಒಂದು ಪರಿಪೂರ್ಣತೆಯನ್ನು ತೋರಿಸುತ್ತಿತ್ತು.

ನಾವು ಪ್ರವೇಶ ಪಡೆದ ಪ್ರಾರಂಭದಲ್ಲೇ ಮೊಹಾಲಿಯಿಂದ ಕಾರಿನಲ್ಲಿ ಬಂದಿದ್ದ ಒಬ್ಬ ರೈತ ತನ್ನ ಕಾರನ್ನೇ ಮನೆಯನ್ನಾಗಿ ಮಾಡಿಕೊಂಡು ಇಲ್ಲಿದ್ದಾರೆ. ಇದು ವಿಶೇಷವೇನಲ್ಲ ಆದರೆ ಅವರು ತಮ್ಮ ಕಾರಿನ ಮುಂದೆ ಕೆಲವರ ಪ್ರತಿಕೃತಿಗಳನ್ನ ಮಾಡಿ (ಬೆದರು ಬೊಂಬೆ) ಅವುಗಳಿಗೆ ಭಾವಚಿತ್ರಗಳನ್ನು ಅಂಟಿಸಿ ಅವರುಗಳ ಕರಾಳ ಮುಖಗಳ ಗುಣಗಾನ ಮಾಡುವ ಬರವಣಿಗೆಗಳನ್ನು ಸ್ವತಃ ಕೈಲ್ಲಿ ಬರೆದು ಬಂದವರಿಗೆಲ್ಲ ಅದನ್ನ ವಿವರಿಸುತ್ತಿದ್ದರು. ಅದರಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯ, ಕಟ್ಟರ್, ಕಂಗಣ, ಮುಂತಾದವರಿದ್ದರು (ಇವರುಗಳ ಬಗ್ಗೆ ರೈತರು ಹೇಳಿದನ್ನ ಪ್ರತ್ಯೇಕವಾಗಿ ವರದಿ ಮಾಡುತ್ತೇನೆ.)

ಬಹುಶಃ ಟ್ರ್ಯಾಕ್ಟರ್ ಗಳಲ್ಲಿರುವವರೆಲ್ಲ ಒಂದು ಕಡೆ ಬಂದರೆ ಅವರನ್ನೆಲ್ಲ ಸಮಾವೇಶಗೊಳಿಸಲು ಜಾಗವೇ ಸಾಲುವುದಿಲ್ಲ. ಅಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರಿದ್ದಾರೆ ಇದು ಲಕ್ಷಗಳ ಗಡಿಗಳನ್ನ ಯಾವತ್ತೋ ದಾಟಿದೆ.

ಒಂದು ಟ್ರ್ಯಾಕ್ಟರ್ ಟೆಂಟ್ ನ ಬಳಿ ಹೋಗಿ ಕೆಲವರನ್ನು ಮಾತನಾಡಿಸಿದೆವು. ಅದರಲ್ಲಿ ಕುಳಿತಿದ್ದ ಹಿರಿಯರಿಗೆ 71 ವರ್ಷ. ಅವರು ಈ ಪ್ರತಿಭಟನೆ ಪ್ರಾರಂಭವಾದ ನವೆಂಬರ್ 26ರಿಂದ ಇಲ್ಲಿದ್ದಾರೆ. ಅವರು ತಮ್ಮ ಕೈಯಲ್ಲಿ ಭಗತ್ ಸಿಂಗ್ ನ ಒಂದು ಪೋಸ್ಟರ್ ಹಿಡಿದಿದ್ದು ಅವರ ಮಾತು ಎಷ್ಟು ಸ್ಪಷ್ಟವಾಗಿತ್ತೆಂದರೆ, ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ನಾವು ಇಲ್ಲಿಂದ ಒಂದಿಚೂ ಹಿಂದೆ ಸರಿಯುವುದಿಲ್ಲ. ಬದಲಾಗಿ ಶಾಂತಿಯುತವಾಗಿ ಮುಂದೆ ಹೋಗಲು‌ ಪ್ರಯತ್ನಿಸುತ್ತೇವೆ ಎಂದರು. ನಮ್ಮನ್ನು ಅವರ ಟ್ರ್ಯಾಕ್ಟರ್ ಟೆಂಟ್ ನ ಮನೆಯೊಳಗೆ ಕರೆದು ಗೌರವಿಸಿ ತಿನ್ನಲು ಸಿಹಿಯನ್ನು (ಲಡ್ಡು) ಕೊಟ್ಟರು.

ನಾವು ಇಂದು ಇದ್ದ ಸರಿ ಸುಮಾರು 4-5 ತಾಸುಗಳಲ್ಲಿ ಮಾತನಾಡಿಸಿದವರಲ್ಲಿ ಕನಿಷ್ಠ 5-6 ಜನ ನಾವು ಕರ್ನಾಟಕದವರು ಎಂದ ಕೂಡಲೇ ಅತ್ಯಂತ ಖುಷಿಪಟ್ಟರು ಮತ್ತು ನಮಗೆ ಕೇಳಿದ ಸಾಮಾನ್ಯ ಪ್ರಶ್ನೆ ಎಂದರೆ ಈ ಹೋರಾಟದ ಬಗ್ಗೆ ಕರ್ನಾಟಕದಲ್ಲಿ ಮಾಧ್ಯಮಗಳು ಸುದ್ದಿ ಮಾಡುತ್ತಿವೆಯಾ? ಮಾಡುತ್ತಿದ್ದರೆ ಏನೆಂದು ಮಾಡುತ್ತಿವೆ ಎಂದು.

ಜೊತೆಗೆ ಅವರ ಮನವಿ ಏನೆಂದರೆ “ಇದು ದೇಶಪ್ರೇಮಿ ಹೋರಾಟ. ರೈತರ ಬಗ್ಗೆ ಪ್ರೀತಿ ಇರುವವರು, ಭಾರತದಲ್ಲಿ ಕೃಷಿ‌ ಉಳಿಸಬೇಕು ಎನ್ನುವವರೆಲ್ಲ ಈ ಹೋರಾಟಕ್ಕೆ ಬಂದು ಕೈ ಜೋಡಿಸಿ‌…” ಎಂದರು.

‍ಲೇಖಕರು Avadhi

January 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This