‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

|ಕಳೆದ ಸಂಚಿಕೆಯಿಂದ|

ಹುಟ್ಟಿದ ಮಗುವಿಗೆ ಇಡಲಾಗುವ ಹೆಸರುಗಳ ಬಗ್ಗೆ ಆಫ್ರಿಕನ್ ದೇಶಗಳಲ್ಲಿ ಸ್ವಾರಸ್ಯಕರ ಸಂಗತಿಯೊಂದಿದೆ.

ಬಿಳಿಯರು ಆಫ್ರಿಕನ್ ದೇಶಗಳಿಗೆ ದಂಡೆತ್ತಿ ಹೋಗುವುದಕ್ಕೆ ಮುನ್ನ ಬಹುತೇಕ ಆಫ್ರಿಕನ್ ದೇಶಗಳಲ್ಲಿ ಹೆಸರಿಡುವ ರೂಢಿಯು ಬಲು ಸಹಜವಾಗಿತ್ತಂತೆ. ಇಂದಿಗೆ ಅದು ವಿಚಿತ್ರವೆಂಬಂತೆ ಕಂಡರೂ, ಆ ದಿನಗಳಲ್ಲಿ ಈ ಪದ್ಧತಿಯು ಸಾಮಾನ್ಯವಾಗಿತ್ತು. ಅಷ್ಟಕ್ಕೂ ಅದೇನೆಂದರೆ ಮನೆಯಲ್ಲಿ ಮಗುವಿನ ಜನನವಾದಾಗ ಆ ಅವಧಿಯ ಋತುವನ್ನೋ, ಆ ಕಾಲಮಾನದಲ್ಲಾದ ಮಹತ್ವದ ಘಟನೆಯನ್ನೋ, ಆ ಕಾಲದಲ್ಲಿ ಖ್ಯಾತನಾಗಿದ್ದ ನಾಯಕನೊಬ್ಬನನ್ನೋ… ಹೀಗೆ ಯಾವುದಾದರೊಂದನ್ನು ಬಳಸಿ ಹುಟ್ಟಿದ ಶಿಶುವಿಗೆ ಅನ್ವರ್ಥ ನಾಮವೊಂದನ್ನು ಇಡಲಾಗುತ್ತಿತ್ತು. ಹೀಗೆ ಒಂದು ವಿಧದಲ್ಲಿ ಆ ಶಿಶುವು ತನಗರಿವಿಲ್ಲದಂತೆಯೇ ತನ್ನ ಕಾಲದ ಘಟನಾವಳಿಯೊಂದರ ಮೈಲುಗಲ್ಲಾಗುತ್ತಿತ್ತು.

ಈ ರೂಢಿಯು ಏನಿಲ್ಲದಿದ್ದರೂ ಅವರನ್ನು ತಮ್ಮ ನೆಲದ ಸಂಸ್ಕೃತಿಯ ಜೊತೆ ಮತ್ತಷ್ಟು ಪರಿಣಾಮಕಾರಿಯಾಗಿ ಬೆಸೆದಿದ್ದಂತೂ ಸತ್ಯ. ಹೀಗಾಗಿ ಬಹುತೇಕ ಹೆಸರುಗಳು ಕೊಂಚ ವಿಚಿತ್ರವಾಗಿದ್ದರೂ, ಅವುಗಳ ಹಿಂದೆ ಏನಾದರೊಂದು ಹಿನ್ನೆಲೆಯೋ, ಕತೆಯೋ ಇದ್ದೇ ಇರುತ್ತಿತ್ತು. ಮುಂದೆ ಕಲೋನಿಯಲ್ ದಾಳಿಗಳು ನಡೆದ ನಂತರ ಆಫ್ರಿಕನ್ನರ ಅಸ್ತಿತ್ವವನ್ನು ಅಲುಗಾಡಿಸಲು ಈ ಅಂಶವನ್ನೇ ಬಳಸಿಕೊಂಡರೆಂದು ಹೇಳಲಾಗುತ್ತದೆ. ಕಲೋನಿಯಲ್ ಶಕ್ತಿಗಳ ಜೊತೆಗೇ ಬಂದ ಧಾರ್ಮಿಕ ಮುಖಂಡರು, ಪಾದ್ರಿಗಳು ದೊಡ್ಡ ಮಟ್ಟದಲ್ಲಿ ಮತಾಂತರದ ಕೆಲಸಗಳನ್ನು ಪ್ರಾರಂಭಿಸಿದ್ದರು. ಅದರಂತೆ ಹಿಂದಿನ ರೂಢಿಯನ್ನು ಅಳಿಸಿ ಹಾಕಿ, ಪವಿತ್ರ ಬೈಬಲ್ಲಿನಲ್ಲಿ ಬರುವ ಪಾತ್ರಗಳ ಹೆಸರುಗಳೇ ಮುಂದೆ ಸಾಮಾನ್ಯವಾಗಿಬಿಟ್ಟವು.    

ಮತ್ತೆ ದಿಲ್ಲಿಯಲ್ಲಿರುವ ಪ್ರದೇಶಗಳ ವಿಚಾರಕ್ಕೆ ಮರಳಿದರೆ ಇಲ್ಲಿಯ ಹೆಸರುಗಳೂ ಕೂಡ ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಕನ್ನಡಿಯಂತಿವೆ. ಸಾಕೇತ್, ದೀಪಾಲಿ ಚೌಕ್, ಮಾಲವೀಯ ನಗರ್, ಮಧುಬನ್ ಚೌಕ್, ಚಿರಾಗ್ ದಿಲ್ಲಿ, ಶಹಾದ್ರಾ, ಚಾಂದನೀ ಚೌಕ್, ವೈಶಾಲಿ, ಯಮುನಾ ವಿಹಾರ್, ಇಂದ್ರಪ್ರಸ್ಥ, ಇಂದ್ರಲೋಕ್, ತುಘಲಕಾಬಾದ್, ಸಂಗಮ್ ವಿಹಾರ್, ಖಾನ್ ಮಾರ್ಕೆಟ್, ಚಾವಡೀ ಬಜಾರ್, ಚಾಣಕ್ಯಪುರಿ, ಸರೋಜಿನಿ ನಗರ್, ದ್ವಾರಕಾ, ಸಿಕಂದರ್ ಪುರ್… ಹೀಗೆ ಒಂದೇ, ಎರಡೇ? ಹೇಳಹೊರಟರೆ ಒಂದಕ್ಕೊಂದು ಮಿಗಿಲಾಗಿ ಚಂದದ ಹೆಸರುಗಳು. ಈ ಹೆಸರುಗಳನ್ನು ಕರೆಯುವುದೇ ಒಂದು ಸೊಗಸು.

ಅಷ್ಟಕ್ಕೂ ಎಲ್ಲ ಶಹರಗಳಿಗೂ ಇಂಥ ಭಾಗ್ಯವು ಸಿಗುವುದಿಲ್ಲ. ಈಗ ಚಂಡೀಗಢವನ್ನೇ ನೋಡಿ. ಪ್ರಾಯಶಃ ಮೊಟ್ಟಮೊದಲ ಬಾರಿಗೆ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ, ಆಧುನಿಕ ಭಾರತದ ನಗರವಾದ ಚಂಡೀಗಢವನ್ನು ಹಲವು ಸೆಕ್ಟರುಗಳಲ್ಲಿ ವಿಂಗಡಿಸಲಾಗಿತ್ತು. ಇಲ್ಲಿಯ ಹೆಸರುಗಳು ಸೆಕ್ಟರ್-1, ಸೆಕ್ಟರ್-2, ಸೆಕ್ಟರ್-3… ಎಂದು ಸಾಗುತ್ತವೆ. ಸಂಖ್ಯೆಗಳು ಕಮ್ಮಿಯೆನಿಸಿದಾಗ ಆಲ್ಫಾ, ಬೀಟಾ, ಗಾಮಾ, ಪೈ ಇತ್ಯಾದಿ ವೈಜ್ಞಾನಿಕ ಸಂಕೇತಗಳನ್ನು ಪ್ರದೇಶದ ಹೆಸರುಗಳನ್ನಾಗಿ ಬಳಸುವ ರೂಢಿಯೂ ಬರುತ್ತಿದೆ.

ದಿಲ್ಲಿಯ ಸುಂದರ ಹೆಸರುಗಳಿಗೆ ಹೋಲಿಸಿದರೆ ಇವುಗಳಷ್ಟು ನೀರಸವೆನಿಸುವ ಸಂಗತಿಯು ಬೇರೊಂದಿರಲಾರದು. ಜೈಲು ಪಾಲಾದ ಅಪರಾಧಿಯೊಬ್ಬ ಕೈದಿಯಾದ ನಂತರ ತನ್ನ ಐಡೆಂಟಿಟಿಯನ್ನೇ ಕಳೆದುಕೊಂಡು ಕೇವಲ ಒಂದು ಯಕಃಶ್ಚಿತ್ ಸಂಖ್ಯೆಯಾಗಿ ಉಳಿದುಬಿಡುವಂತೆ, ಇಲ್ಲಿಯ ಹೆಸರುಗಳು ಸಂಖ್ಯೆಯೊಂದಿಗೆ ಆರಂಭವಾಗಿ ಸಂಖ್ಯೆಯಲ್ಲೇ ಮುಗಿದು ಹೋಗುತ್ತವೆ.

ದಿಲ್ಲಿಯ ಖ್ಯಾತ ತಾಣಗಳಲ್ಲೊಂದಾದ ‘ಕನ್ನೌಟ್ ಪ್ಲೇಸ್’ ಜನಮಾನಸದಲ್ಲಿ ‘ಸಿ ಪಿ’ ಎಂದೇ ಪ್ರಸಿದ್ಧ. 1933ರಲ್ಲಿ ನಿರ್ಮಿತವಾದ ಈ ಪ್ರದೇಶಕ್ಕೆ ಡ್ಯೂಕ್ ಆಫ್ ಕನ್ನೌಟ್ ನ ಗೌರವಾರ್ಥ ಹೆಸರನ್ನಿಡಲಾಗಿತ್ತು. ರಾಣಿ ವಿಕ್ಟೋರಿಯಾ ಮತ್ತು ಪ್ರಿನ್ಸ್ ಆಲ್ಬರ್ಟ್ ನ ಮಗನಾಗಿದ್ದ ಈತ ದಿಲ್ಲಿಗೆ ಭೇಟಿ ಕೊಟ್ಟಾಗ ಗೌರವಪೂರ್ವಕವಾಗಿ ಇಟ್ಟ ಹೆಸರದು. ಕೈವಾರದಲ್ಲಿ ಕೊರೆದ ವೃತ್ತದಂತಿರುವ ಈ ಸುಂದರ ಪ್ರದೇಶವನ್ನು ಹಲವು ಬ್ಲಾಕುಗಳಲ್ಲಿ ಮತ್ತೆ ವಿಂಗಡಿಸಲಾಗಿದೆ. 

‘ಚಿರಾಗ್ ದಿಲ್ಲಿ’ ಹೆಸರಿನ ಹಿಂದಿರುವುದು ನಸೀರುದ್ದೀನ್ ಎಂಬಾತ. ಸಂತ, ದಾರ್ಶನಿಕ ನಿಜಾಮುದ್ದೀನ್ ಔಲಿಯಾರು ತನ್ನ ಶಿಷ್ಯನಾಗಿದ್ದ ನಸೀರುದ್ದೀನನಿಗೆ ನೀರಿನಿಂದಲೇ ದೀಪವನ್ನು ಬೆಳಗಿಸಬಲ್ಲ ದೈವಿಕ ಶಕ್ತಿಯನ್ನು ಅನುಗ್ರಹಿಸಿದ್ದರು. ಔಲಿಯಾರ ಪವಾಡದ ಕತೆಗಳಲ್ಲಿ ಇಂಥಾ ಘಟನೆಗಳು ಆಗಾಗ ಬರುವುದುಂಟು. ಔಲಿಯಾರು ನಸೀರುದ್ದೀನನನ್ನು ‘ಚಿರಾಗ್’ ಎಂದು ಮರು ನಾಮಕರಣ ಮಾಡಿದ್ದರು. ‘ಚಿರಾಗ್’ ಎಂದರೆ ದೀಪ ಎಂದರ್ಥ. ಮುಂದೆ ಈ ಪ್ರದೇಶಕ್ಕೂ ಇದೇ ಹೆಸರು ಉಳಿದುಕೊಂಡಿತು.

ದಿಲ್ಲಿಯ ಪ್ರದೇಶಗಳಲ್ಲೊಂದಾದ ‘ಶಹಾದರಾ’ ಹೆಸರಿನ ಹಿಂದೆಯೂ ಹಿನ್ನೆಲೆಯೊಂದಿದೆ. ‘ಶಹಾದರಾ’ ಎಂದರೆ ‘ರಾಜರ ದ್ವಾರ’ ಎಂದರ್ಥ. ‘ಶಾಹ್’ ಎಂದರೆ ರಾಜ, ‘ದರಾ’ ಎಂದರೆ ದ್ವಾರ/ಬಾಗಿಲು. ಇನ್ನು ದಿಲ್ಲಿಯಲ್ಲಿರುವ ಯಮುನೆಯಿಂದಾಗಿ ಶಹಾದರಾದ ಹೆಸರು ‘ಶಾಹೀ ದರಾ’ ಅಥವಾ ‘ಶಾಹೀ ದರಿಯಾ’ ಪದಮೂಲದಿಂದ ಬಂದಿರಬಹುದು ಎಂಬ ವಾದಗಳೂ ಇವೆ. ‘ದರಿಯಾ’ ಎಂದರೆ ನದಿ ಎಂಬರ್ಥವಿದೆ. ದಿಲ್ಲಿಯ ಮತ್ತೊಂದು ಪ್ರದೇಶವಾದ ‘ಬಾರಾ ಕಂಬಾ’ ಹೆಸರಿನ ಕತೆಯಿರುವುದು ಹನ್ನೆರಡು ಕಂಬಗಳಿಂದ ನಿರ್ಮಿತವಾದ ಬಾರಾ ಕಂಬಾ ಸ್ಮಾರಕದಲ್ಲಿ. ‘ಬಾರಾ’ ಎಂದರೆ ಹನ್ನೆರಡು.

ಹದಿನೇಳನೇ ಶತಮಾನದಲ್ಲಿ ದಿಲ್ಲಿಯ ಸುಲ್ತಾನನಾಗಿದ್ದ ಶಹಜಹಾನ್ ತನ್ನ ಮುದ್ದಿನ ಮಗಳಾದ ರಾಜಕುಮಾರಿ ಜಹಾನಾರಾಳಿಗಾಗಿ ವೈಭವೋಪೇತ ಮಾರುಕಟ್ಟೆಯೊಂದನ್ನು ನಿರ್ಮಿಸಿದ್ದ. ಚಚ್ಚೌಕದ ಆಕಾರವನ್ನು ಹೊಂದಿದ್ದ ಈ ಪ್ರದೇಶದ ನಟ್ಟನಡುವಿನಲ್ಲಿ ಪುಟ್ಟ ಸರೋವರದಂತಹ ವಿನ್ಯಾಸವಿತ್ತು. ಅದುವೇ ದಿಲ್ಲಿಯ ಪ್ರಖ್ಯಾತ ‘ಚಾಂದನೀ ಚೌಕ್’. ಚಾಂದನೀ ಎಂದರೆ ಬೆಳದಿಂಗಳು. ಶ್ರೀಮಂತ ಸುಲ್ತಾನರ ಕಾಲದ ಬೆಳ್ಳಿಯ ವ್ಯಾಪಾರಿಗಳು ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು.

ಪ್ರತಿಭಟನೆಗಳಿಂದಾಗಿ ಸದಾ ಸುದ್ದಿಯಲ್ಲಿರುವ ದಿಲ್ಲಿಯ ‘ಜಂತರ್-ಮಂತರ್’ ನ ಹಿಂದಿರುವುದು ‘ಯಂತ್ರ-ಮಂತ್ರ’ ಪದಗಳ ಅಪಭ್ರಂಶ. ಇದು ಜೈಪುರದ ದೊರೆಯಾಗಿದ್ದ ಮಹಾರಾಜಾ ಜೈ ಸಿಂಗ್-2 ನ ಕಾಲದ್ದು. ವಾಸ್ತುಶಿಲ್ಪ ಮತ್ತು ಖಗೋಳಶಾಸ್ತ್ರದ ವೈಜ್ಞಾನಿಕ ಪರಂಪರೆಯಿಂದ ಶ್ರೀಮಂತವಾಗಿರುವ ಇಲ್ಲಿನ ಅಪರೂಪದ ವಿನ್ಯಾಸಗಳು ಇಂದಿಗೂ ಪ್ರವಾಸಿಗರ ಮುಖ್ಯ ಆಕರ್ಷಣೆಗಳಲ್ಲೊಂದು. ಇನ್ನು ಆ ಕಾಲದ ಪಂಚಾಯಿತಿ-ಸಂಧಾನಗಳು ನಡೆಯುತ್ತಿದ್ದಿದ್ದು ಚಾವಡೀ ಬಜಾರಿನಲ್ಲಿ. ಪ್ರತಿಷ್ಠಿತರ ಮನೆಯ ಮುಂದಿನ ಚಾವಡಿಯಲ್ಲಿ ತೆಗೆದುಕೊಳ್ಳುತ್ತಿದ್ದ ನ್ಯಾಯತೀರ್ಮಾನಗಳು ನಿಯಮದಂತೆ ಅನ್ವಯವಾಗುತ್ತಿತ್ತು. 

ದಿಲ್ಲಿಯ ರೆಡ್ ಲೈಟ್ ಏರಿಯಾ ಆಗಿರುವ ‘ಜಿ ಬಿ ರೋಡ್’ ಹೆಸರಿನ ಹಿಂದಿರುವುದು ಬ್ರಿಟಿಷ್ ಕಮೀಷನರ್ ಆಗಿದ್ದ ಗಾಸ್ರ್ಟಿನ್ ನ ನಾಮಧೇಯ. ಇಲ್ಲಿ ನಡೆಯುತ್ತಿದ್ದ ‘ಮುಜ್ರಾ’ ನೃತ್ಯಗಳು ಮನರಂಜನೆಯ ಮುಖ್ಯ ಭಾಗವಾಗಿದ್ದವು. ಮುಜ್ರಾ ಕಾರ್ಯಕ್ರಮಗಳನ್ನು ನೋಡಿ ಸವಿಯಲು ಕೆಳವರ್ಗದ ಮಂದಿ ಕುತುಬ್ ಮಾರ್ಗಕ್ಕೂ, ಮಧ್ಯಮವರ್ಗದ ಮಂದಿ ಜಿ ಬಿ ರೋಡಿಗೂ, ಮೇಲ್ವರ್ಗದ ಮಂದಿ ಚಾವಡೀ ಬಾಜಾರಿಗೂ ಹೋಗುತ್ತಿದ್ದರಂತೆ. ಅಧಿಕಾರಿಯಾಗಿದ್ದ ಗಾಸ್ರ್ಟಿನ್ ದಿಲ್ಲಿಯಲ್ಲಿದ್ದ ಐದು ವೇಶ್ಯಾವಾಟಿಕೆಗಳನ್ನು ಒಗ್ಗೂಡಿಸಿ ಜಿ ಬಿ ರೋಡಿನ ಹುಟ್ಟಿಗೆ ಕಾರಣವಾಗಿದ್ದ. 

ಅಂತೆಯೇ ದಿಲ್ಲಿಯ ಡೆಪ್ಯೂಟಿ ಕಮಿಷನರ್ ಆಗಿದ್ದ ಬ್ರಿಟಿಷ್ ಅಧಿಕಾರಿ ಯಂಗ್ ನಿಂದಾಗಿ ‘ಜಂಗ್ ಪುರ’ ಹೆಸರು ಜನಪ್ರಿಯವಾಯಿತು. ರೈಸಿನಾ ಹಿಲ್ ಪ್ರದೇಶದಿಂದ ಜನರನ್ನು ತೆರವುಗಳಿಸಿದ ಯಂಗ್ ಹೊಸದೊಂದು ಪ್ರದೇಶದಲ್ಲಿ ಈ ಮಂದಿಗೆ ಪುನರ್ವಸತಿಯನ್ನು ಕಲ್ಪಿಸಿದ್ದ. ಈ ಪ್ರದೇಶಕ್ಕೆ ‘ಯಂಗ್ ಪುರ’ ಎಂಬ ಹೆಸರನ್ನಿಡಲಾಗಿತ್ತು. ಈ ಯಂಗ್ ಪುರವೇ ಮುಂದೆ ಸ್ಥಳೀಯರ ಆಡುಭಾಷೆಯಲ್ಲಿ ಜಂಗ್ ಪುರವಾಗಿ ಬದಲಾಗಿದ್ದು.

‘ಮೆಹರೋಲಿ’ಯನ್ನು ಹಿಂದೆ ‘ಮಿಹಿರನ ಮನೆ’ ಎಂಬರ್ಥದಲ್ಲಿ ‘ಮಿಹಿರಾವಾಲಿ’ ಎಂದು ಕರೆಯಲಾಗುತ್ತಿತ್ತು. ಗುರ್ಜರ್-ಪ್ರತಿಹಾರ ಸಾಮ್ರಾಜ್ಯದ ರಾಜನಾಗಿದ್ದ ಮಿಹಿರ ಭೋಜ ಇದನ್ನು ನಿರ್ಮಿಸಿದ್ದ. ಇಲ್ಲಿರುವ ದೇಗುಲದಿಂದಾಗಿ ಹಿಂದೂಗಳಲ್ಲಿ ಇದು ‘ಮೆಹ್ರಾವಾಲೀ ಮಾಯಿ’ (ಮೆಹರಾವಾಲಿಯ ತಾಯಿ) ಎಂದು ಪ್ರಸಿದ್ಧಿಯನ್ನು ಪಡೆದಿದ್ದರೆ, ಮುಸ್ಲಿಮರಲ್ಲಿ ‘ಮೆಹರ್-ಎ-ವಾಲಿ’ ಎಂಬ ಹೆಸರಿನಲ್ಲಿ ಖ್ಯಾತವಾಗಿದೆ. ಅನುಗ್ರಹದ ಅರ್ಥವನ್ನು ಹೊಂದಿರುವ ‘ಮೆಹರ್’ ಪದದಿಂದಾಗಿ ಈ ಸಮುದಾಯದ ಮಂದಿಗೂ ಇದು ಪೂಜನೀಯ. 

ಅಂದಹಾಗೆ ದಿಲ್ಲಿಯ ‘ಸಿರಿ ಫೋರ್ಟ್’ ಹಿಂದಿರುವ ಕತೆಯು ಭಯಾನಕವಾದದ್ದು. ಈ ಕತೆಯು ಮಹಾತ್ವಾಕಾಂಕ್ಷಿ ಸಾಮ್ರಾಟನಾಗಿದ್ದ ಅಲ್ಲಾವುದ್ದೀನ್ ಖಿಲ್ಜಿಯ ಕಾಲದ್ದು. ಖಿಲ್ಜಿ ಮತ್ತು ಮಂಗೋಲರ ನಡುವೆ ನಡೆದ ಭೀಕರ ಯುದ್ಧವೊಂದರಲ್ಲಿ ಮಂಗೋಲರ ಬರೋಬ್ಬರಿ ಎಂಟು ಸಾವಿರ ಸೈನಿಕರು ಹತರಾಗಿದ್ದರಂತೆ. ಈ ಅವಧಿಯಲ್ಲೇ ಸಾವಿರಾರು ಮಂಗೋಲನ್ ಸೈನಿಕರ ರುಂಡವನ್ನು ಮುಂಡದಿಂದ ಬೇರ್ಪಡಿಸಲಾಯಿತು. ಮುಂದೆ ಇಲ್ಲಿ ಕೋಟೆಯನ್ನು ಕಟ್ಟುವಾಗ ಅಷ್ಟೂ ಮಂದಿ ಸೈನಿಕರ ತಲೆಬುರುಡೆಗಳನ್ನು ಕೋಟೆಯ ಅಡಿಪಾಯದ ನಿರ್ಮಾಣ ಕಾರ್ಯದಲ್ಲಿ ಬಳಸಲಾಗಿತ್ತು ಎಂದು ಹೇಳಲಾಗುತ್ತದೆ. ‘ಸಿರ್’ ಎಂದರೆ ತಲೆ. ಮಾನವ ತಲೆಗಳ ಅಡಿಪಾಯದಲ್ಲಿ ನಿರ್ಮಿಸಲಾದ ಕೋಟೆಯು ‘ಸಿರಿ’ ಕೋಟೆಯಾಗಿದೆ.

ಮೇಲೆ ಹೇಳಿರುವ ಸಿರಿ ಕೊತ್ತಲದಂತೆ ದಿಲ್ಲಿಯ ‘ಖೂನಿ ದರ್ವಾಜಾ’ ಸ್ಮಾರಕದ ಹಿಂದಿರುವ ಕತೆಯೂ ರಕ್ತಸಿಕ್ತವಾದದ್ದು. 1540ರಲ್ಲಿ ಶೇರ್ ಷಾ ಸೂರಿಯಿಂದ ನಿರ್ಮಿತವಾದ ಇದು ಇಲ್ಲಿಯ ಕರಾಳ ಇತಿಹಾಸವನ್ನು ತನ್ನ ಹೆಸರಿನಿಂದಲೇ ನಿರಾಯಾಸವಾಗಿ ನೆನಪಿಸುತ್ತದೆ. 1857ರ ಸಿಪಾಯಿ ದಂಗೆಯಲ್ಲಿ ಮೊಘಲ್ ದೊರೆ ಬಹಾದ್ದೂರ್ ಷಾ ಝಫರ್ ನ ಪುತ್ರರಾದ ಮಿರ್ಜಾ ಮೊಘಲ್, ಮಿರ್ಜಾ ಖಿಜ್ರ್ ಸುಲ್ತಾನ್ ಮತ್ತು ಮೊಮ್ಮಗನಾದ ಮಿರ್ಜಾ ಅಬು ಬಖ್ತ್ ರನ್ನು ಇಲ್ಲಿ ಬ್ರಿಟಿಷ್ ಸೈನಿಕನಾಗಿದ್ದ ಕ್ಯಾಪ್ಟನ್ ವಿಲಿಯಂ ಹಡ್ಸನ್ ಗುಂಡಿಟ್ಟು ಕೊಂದು, ಮೃತದೇಹಗಳನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಪ್ರದರ್ಶನಕ್ಕಿಟ್ಟಿದ್ದನಂತೆ. ಇಂಥದ್ದೇ ಇನ್ನೂ ಕೆಲವು  ವಿಚಿತ್ರ ಘಟನೆಗಳು ಇಲ್ಲಿ ನಡೆದಿದ್ದರಿಂದ ಈ ಭಾಗಕ್ಕೆ ಭೂತಪ್ರೇತಗಳ ಕಳೆಯೂ ಅಂಟಿಕೊಂಡಿದೆ. ಅಂದಹಾಗೆ ‘ಖೂನಿ’ ಎಂದರೆ ‘ಕೊಲೆಗಾರ’ ಎಂಬ ಅರ್ಥವಿದೆ.

ಹೀಗೆ ದಿಲ್ಲಿಯ ಪ್ರತಿಯೊಂದು ಸುಂದರ ಹೆಸರಿನ ಹಿಂದೆಯೂ ಏನಾದರೊಂದು ಸ್ವಾರಸ್ಯವು ಕಾಣಸಿಗುವುದು ಸಾಮಾನ್ಯ. ಅಷ್ಟಕ್ಕೂ ಇಲ್ಲಿ ನೀಡಿರುವ ಪರಿಚಯವು ಒಂದು ಚಿಕ್ಕ ಸ್ಯಾಂಪಲ್ ಅಷ್ಟೇ. ಇವುಗಳ ವಿಸ್ತಾರವನ್ನು ಪುಟ್ಟ ಬರಹವೊಂದರಲ್ಲಿ ಹಿಡಿದಿಡುವುದು ಅಸಾಧ್ಯದ ಮಾತೇ ಸರಿ. ದಿಲ್ಲಿಯು ಹೆರಿಟೇಜ್ ಸಿಟಿಯೆಂಬ ಸ್ಥಾನಮಾನವನ್ನು ಗಳಿಸಲು ಇಲ್ಲಿರುವ ಕೋಟೆ-ಕೊತ್ತಲಗಳು ಎಷ್ಟು ಕಾರಣವಾಗಿವೆಯೋ, ಇತಿಹಾಸದೊಂದಿಗೆ ಬಿಟ್ಟಿರದ ನಂಟೂ ಕೂಡ ಅಷ್ಟೇ ಕಾರಣವಾಗಿದೆ. ಪ್ರತಿಯೊಂದು ಹೆಸರಿನೊಂದಿಗೆ ಇಂದಿಗೂ ತನ್ನಿಂತಾನೇ ನೆನಪಾಗುವ ಸ್ಥಳದ ಇತಿಹಾಸವು ಇದಕ್ಕೊಂದು ಉತ್ತಮ ನಿದರ್ಶನ. ಇತರ ಶಹರಗಳಿಂದ ದಿಲ್ಲಿ ವಿಭಿನ್ನವಾಗಿ ನಿಲ್ಲುವುದು ಕೂಡ ಈ ಕಾರಣಕ್ಕಾಗಿಯೇ.

ಒಟ್ಟಿನಲ್ಲಿ ದಿಲ್ಲಿಯಲ್ಲಿ ಕತೆಗಳನ್ನು ಹುಡುಕಿಕೊಂಡು ಹೋಗಬೇಕೆಂದಿಲ್ಲ. ಶಹರದ ಭಾಗಗಳಲ್ಲಿ ಆಯಾ ಸ್ಥಳ ಮಹಿಮೆಯ ಕತೆಗಳು ಸ್ವತಃ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಹವೆಯಲ್ಲಿ ಕತೆಗಳ ಘಮವನ್ನು ಹೊಂದಿರುವ ಗಲ್ಲಿಗಳು ಸುಮ್ಮನೆ ಪಿಸುಗುಡುತ್ತವೆ.

ಇನ್ನುಳಿದಿರುವುದು ಇಲ್ಲಿಯ ಕತೆಗಳಲ್ಲಿ ಕಳೆದು ಹೋಗುವುದಷ್ಟೇ!

January 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This