ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಹೆಸರಿನಲ್ಲೇನಿದೆ ಎಂದು ಕೇಳಿ ತಳ್ಳಿ ಹಾಕುವುದು ಸುಲಭ.

ಆದರೆ ಹೆಸರಿನ ಪ್ರಾಮುಖ್ಯತೆಯು ಅದನ್ನು ಅರಿತುಕೊಂಡವರಿಗಷ್ಟೇ ಗೊತ್ತು. ಒಂದು ಚಂದದ ಲೇಖನಕ್ಕೋ, ಕಥೆಗೋ ಇಡುವ ಆಕರ್ಷಕ ಟೈಟಲ್ ಆ ಪ್ರಕಾರಕ್ಕೆ ತನ್ನದೇ ಆದ ರೀತಿಯಲ್ಲಿ ಪೂರಕವಾದ ಪರಿಣಾಮವನ್ನು ಬೀರಿರುತ್ತದೆ. ಇದನ್ನು ನಿಖರವಾಗಿ ಇದಮಿತ್ಥಂ ಎಂದು ಹೇಳಲಾಗದಿದ್ದರೂ, ಇದರ ಇರುವಿಕೆಯನ್ನು ಅಲ್ಲಗಳೆಯುವಂತಿಲ್ಲ.

ಮುಖಪುಟದಲ್ಲಿ ಪ್ರಕಟವಾಗುವ ಪ್ರಮುಖ ಸುದ್ದಿಗೆ ನೀಡಲಾಗುವ ಶೀರ್ಷಿಕೆಯ ಹಿಂದಿರುವ ಕಸರತ್ತುಗಳ ಬಗ್ಗೆ ಎಲ್ಲೋ ಓದಿದ ನಂತರ, ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗುವ ಮುಖ್ಯವರದಿಯ ತಲೆಬರಹವನ್ನು ಕುತೂಹಲದಿಂದ ನೋಡುವುದೇ ನನಗೊಂದು ಚಾಳಿಯಾಗಿ ಬಿಟ್ಟಿತ್ತು. ನನ್ನಂತಹ ಮಾಧ್ಯಮದ ಹೊರಗಿನವರಿಗೆ ಸುದ್ದಿಮನೆಗಳೆಂದರೆ ಮುಗಿಯದ ಕುತೂಹಲ.

ಮುಖಪುಟದ ಮುಖ್ಯಸುದ್ದಿಗೆ ನೀಡಲಾಗುವ ತಲೆಬರಹದ ಮಹತ್ವವು ಪತ್ರಿಕೋದ್ಯಮದಲ್ಲಿರುವವರಿಗೆ ಮಾತ್ರ ಗೊತ್ತು. ಹೀಗಾಗಿ ಇಲ್ಲಿ ತಮಾಷೆ, ಕೊಂಕು, ಗಾಂಭೀರ್ಯಾದಿ ಭಾವಗಳೆಲ್ಲವನ್ನೂ ಬುದ್ಧಿವಂತಿಕೆಯಿಂದ ಬೆರೆಸಿ ಶೀರ್ಷಿಕೆಯ ಪಾಕವನ್ನು ಸಿದ್ಧಪಡಿಸಲಾಗುತ್ತದೆ. ಪ್ರತೀವರ್ಷವೂ ಬಿಲ್ ಗೇಟ್ಸ್, ವಾರೆನ್ ಬಫೆಟ್, ಬರಾಕ್ ಒಬಾಮಾರಂತಹ ದಿಗ್ಗಜರು ಓದಿದ ಅತ್ಯುತ್ತಮ ಪುಸ್ತಕಗಳ ಪಟ್ಟಿಗೆ ಪುಸ್ತಕಪ್ರಿಯರು ಎದುರು ನೋಡುವಂತೆ, ರಾಜ್ಯ-ರಾಷ್ಟ್ರ-ಜಾಗತಿಕ ಮಟ್ಟದಲ್ಲಿ ಮಹತ್ವದ ಘಟನೆಯೊಂದು ನಡೆದಾಗ ಪತ್ರಿಕೆಗಳು ಅದನ್ನು ವಿಶಿಷ್ಟವಾಗಿ ಪ್ರಸ್ತುತಪಡಿಸಬಲ್ಲ ಸಾಧ್ಯತೆಗಳ ಬಗ್ಗೆಯೂ ಓದುಗರಿಗೆ ಕುತೂಹಲವಿರುತ್ತದೆ. ನಿಸ್ಸಂದೇಹವಾಗಿ ಇಲ್ಲಿ ಶೀರ್ಷಿಕೆಯು ವಹಿಸುವ ಪಾತ್ರವು ದೊಡ್ಡದು. 

ಈಚೆಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ನಡೆದಿದ್ದ ಗಲಾಟೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡದ ಹಲವು ಪ್ರಮುಖ ಪತ್ರಿಕೆಗಳು ತರಹೇವಾರಿ ಸ್ವಾರಸ್ಯಕರ ಹೆಡ್ಡಿಂಗುಗಳನ್ನು ನೀಡಿದ್ದವು. ಈಗಲೂ ‘ದ ಟೆಲಿಗ್ರಾಫ್’ ನಂತಹ ಪತ್ರಿಕೆಗಳು ನೀಡುವ ಪ್ರಮುಖ ಸುದ್ದಿಗಳ ಶೀರ್ಷಿಕೆಗಳು ಕ್ರಿಯೇಟಿವ್ ಎನ್ನಿಸುವುದುಂಟು. ಟೆಲಿಗ್ರಾಫ್ ನೀಡುವ ಹೆಡ್ಡಿಂಗುಗಳು ನಿರೂಪಿಸುವ ವರದಿಗೆ ಪೂರಕವಾಗಿ ಮಾರ್ಮಿಕವಾಗಿರುವುದರ ಜೊತೆಗೆ, ಪರಿಣಾಮಕಾರಿಯಾಗಿ ಕುಟುಕುವಂತೆಯೂ ಇರುತ್ತದೆ. ಪತ್ರಿಕೆಯಲ್ಲಿ ಪ್ರಕಟವಾಗುವ ವ್ಯಂಗ್ಯಚಿತ್ರವೊಂದು ಎಷ್ಟು ಪರಿಣಾಮಕಾರಿಯಾಗಿ ಓದುಗರನ್ನು ತಟ್ಟುತ್ತದೆಯೋ, ಕಿಲಾಡಿಯೆನ್ನಿಸುವ ಶೀರ್ಷಿಕೆಯೂ ಅಂಥದ್ದೊಂದು ಅನುಭವವನ್ನು ಓದುಗನಿಗೆ ನೀಡಬಹುದು. ಒಟ್ಟಿನಲ್ಲಿ ಓದುಗರಿಗೆ ಹಬ್ಬ.

ವ್ಯಕ್ತಿಗಾಗಲಿ, ಶಹರಗಳಿಗಾಗಲಿ… ಹೆಸರೆಂಬುದು ಒಂದು ಐಡೆಂಟಿಟಿಯಾಗುವಷ್ಟು ಬೆಳೆದುಬಂದಿರುವುದು ಸುಳ್ಳಲ್ಲ. ‘ವ್ಯಕ್ತಿಯೊಬ್ಬ ವೈಯಕ್ತಿಕವಾಗಿ ಕೇಳಲು ಬಹಳ ಇಷ್ಟಪಡುವ ಶಬ್ದವೆಂದರೆ ಅದು ತನ್ನ ಹೆಸರು’ ಎನ್ನುತ್ತಾರೆ ಮನೋವಿಜ್ಞಾನಿಗಳು. ನೆಪೋಲಿಯನ್ ನಿಂದ ಹಿಡಿದು ಕೆನಡಿಯವರಂಥಾ ದಿಗ್ಗಜರಿಗೂ ಇಂತಹ ಸೂಕ್ಷ್ಮಸತ್ಯಗಳ ಅರಿವಿತ್ತು ಮತ್ತು ಅವರ ಯಶಸ್ಸಿನ ಹಿಂದಿನ ಹಲವು ಕಾರಣಗಳಲ್ಲಿ ಇದೂ ಎಂದು ಎನ್ನುವ ಅಭಿಪ್ರಾಯಗಳಿವೆ. ಹೀಗೆ ನಿಜನಾಮವಿದ್ದರೂ ಅಡ್ಡನಾಮಗಳು ಆಪ್ತವೆನಿಸುವಂತೆ, ನಾಮಧೇಯಗಳು ಮೇಲ್ನೋಟಕ್ಕೆ ಗುರುತಿಗಷ್ಟೇ ಬಳಸಲಾಗುವ ಹಣೆಪಟ್ಟಿಯಂತೆ ಕಂಡರೂ ಅವುಗಳ ಹಿಂದಿರುವ ಜಗತ್ತು ಬಲುದೊಡ್ಡದು.

ಈ ಐಡೆಂಟಿಟಿಯೆಂಬುದು ವ್ಯಕ್ತಿ ಅಥವಾ ಸಾಹಿತ್ಯ ಪ್ರಕಾರವೊಂದಕ್ಕೆ ಮಾತ್ರ ಸೀಮಿತವಲ್ಲ. ಒಂದು ಹಳ್ಳಿಗೋ, ಪ್ರದೇಶಕ್ಕೋ ಇಟ್ಟಿರುವ ಹೆಸರುಗಳು ಮುಖ್ಯವೆನಿಸುವುದು ಕೂಡ ಇಂತಹ ಸಂದರ್ಭಗಳಲ್ಲೇ. ಕೆಲವೊಮ್ಮೆ ಏನೇನೂ ಅಲ್ಲವೆನಿಸುವ ಹೆಸರು ತಾನಾಗಿಯೇ ಬ್ರಾಂಡ್ ಒಂದನ್ನು ಸೃಷ್ಟಿಸಿರುತ್ತದೆ. ಉದಾಹರಣೆಗೆ ಆಗ್ರಾ ಎಂದರೆ ತಾಜ್ ಮಹಲ್, ಬೆಂಗಳೂರು ಎಂದರೆ ಐಟಿ ಸಿಟಿ ಎಂಬಂತೆ. ಆಗ್ರಾದಲ್ಲಿ ತಾಜ್ ಹೊರತುಪಡಿಸಿಯೂ ಬಹಳಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ ಆಗ್ರಾ ಶಹರವು ಎಂದೆಂದಿಗೂ ತನ್ನನ್ನು ತಾನು ಬ್ರಾಂಡಿಂಗ್ ಮಾಡಿಕೊಳ್ಳುವುದು ವಿಶ್ವವಿಖ್ಯಾತ ತಾಜ್ ಗರಿಮೆಯಿಂದಲೇ.

ದಿಲ್ಲಿಗೆ ಹೊಸತಾಗಿ ಬಂದ ದಿನಗಳಲ್ಲಿ ನನಗೆ ಆಕರ್ಷಿಸಿದ್ದು ಇಲ್ಲಿಯ ಪ್ರದೇಶಗಳಿಗೆ ಇಟ್ಟಿರುವ  ಆಕರ್ಷಕ ಹೆಸರುಗಳು. ಕಳೆದ ಕೆಲ ವರ್ಷಗಳಲ್ಲಿ ಆಯ್ದ ಪ್ರದೇಶಗಳ ಹೆಸರನ್ನು ಬದಲಿಸುವ ಟ್ರೆಂಡ್ ಒಂದನ್ನು ಕೆಲ ರಾಜಕೀಯ ನಾಯಕರು ಹುಟ್ಟುಹಾಕಿದ್ದರು. ಮೊದಮೊದಲು ಘನವಾದ ಉದ್ದೇಶಕ್ಕಾಗಿ ಹೀಗೆ ಮಾಡುತ್ತಿದ್ದೇವೆಂಬ ಕಾರಣವಿಟ್ಟುಕೊಂಡು ಸುದ್ದಿಯಾದ ಇಂತಹ ರಾಜಕೀಯ ನಡೆಗಳು ನಂತರ ಇವೆಲ್ಲಾ ಹಳಸಲು ಜೋಕಾಗಲೂ ನಾಲಾಯಕ್ಕು ಎಂಬಂತಾಗಿದ್ದೂ ಆಯಿತು. ಅಂತೂ ಇಂಥವುಗಳು ದಿಲ್ಲಿಗೆ ಬಂದರೆ ಇಲ್ಲಿಯ ಸುಂದರ ಹೆಸರುಗಳಿರುವ ಪ್ರದೇಶಗಳ ಇಮೇಜ್ ಏನಾಗಬಹುದು ಎಂದು ನಾವೆಲ್ಲ ಚರ್ಚಿಸುತ್ತಿದ್ದಿದ್ದೂ ಉಂಟು.

ಏಕೆಂದರೆ ಸ್ಥಳ ಅಥವಾ ನಗರವೊಂದರ ಹೆಸರನ್ನು ಬದಲಾಯಿಸಿದ ಮಾತ್ರಕ್ಕೆ ಎಲ್ಲವೂ ಬದಲಾಗುವುದಿಲ್ಲ. ಏಕಾಏಕಿ ಹೀಗಾಗುವುದು ಸಾಧ್ಯವೂ ಇಲ್ಲ. ಹೀಗಾಗಿ ಸ್ಥಳವೊಂದಕ್ಕೆ ಅಧಿಕೃತವಾಗಿ ಹೊಸ ಹೆಸರನ್ನಿಟ್ಟರೂ ಈಗಾಗಲೇ ಇರುವ ಆಡುಭಾಷೆಯ ಅಥವಾ ಜನಪ್ರಿಯ ಹೆಸರಿನಲ್ಲೇ ಅದು ಜನರ ಮಧ್ಯೆ ಕೆಲಕಾಲ ಉಳಿಯುವುದು ಸಾಮಾನ್ಯ. ಮಂಗಳೂರಿನವರಿಗೆ ಮಹಾವೀರ ವೃತ್ತವು ಅಂದಿಗೂ, ಇಂದಿಗೂ ಪಂಪ್-ವೆಲ್ ಸರ್ಕಲ್ಲೇ!

ಅಸಲಿಗೆ ಬಿಜೆಪಿ ನಾಯಕರಾದ ವಿಜಯ್ ಗೋಯಲ್ ದೆಹಲಿಯೆಂಬ ಹೆಸರನ್ನು ‘ದಿಲ್ಲಿ’ ಎಂದು ಬದಲಾಯಿಸಬೇಕೆಂಬ ವಿಚಾರವನ್ನು ಒಮ್ಮೆ ಪ್ರಸ್ತಾಪಿಸಿದ್ದರು. ಈ ಶಹರವನ್ನು ಖ್ಯಾತ ಕವಿ ಮಿರ್ಜಾ ಗಾಲಿಬ್ ‘ದಿಲ್ಲಿ’ ಎಂದು ಕರೆದಿದ್ದ. ಇಂದಿಗೂ ಸ್ಥಳೀಯರು ಬಾಯ್ತುಂಬಾ ‘ದಿಲ್ಲಿ’ ಎಂದೇ ಕರೆಯುತ್ತಾರೆ. ಹೃದಯ ಎಂಬ ಅರ್ಥವಿರುವ ‘ದಿಲ್’ ಪದದಿಂದಾಗಿ ರೊಮ್ಯಾಂಟಿಕ್ ಭಾವವನ್ನು ತರುವ ಈ ಹೆಸರಿನ ಬಗ್ಗೆ ಸ್ಥಳೀಯರಿಗೆ ಇಂದಿಗೂ ಮೋಹವಿದೆ. ‘ಮುಂಬೈ’ ಎಂದು ಹೆಸರು ಬದಲಾಗಿ ದಶಕಗಳು ಸಂದಿದ್ದರೂ ಬಹಳಷ್ಟು ಮಂದಿಗೆ ಶಹರವು ಆಂತರ್ಯದಲ್ಲಿ ಇಂದಿಗೂ ಹಳೆಯ ‘ಬಾಂಬೆ’ ಆಗಿರುವಂತೆ!

ಹಾಗೆ ನೋಡಿದರೆ ಹಿಂದೂಸ್ತಾನದ ಹೃದಯವೆಂಬಂತಹ ಅರ್ಥದಲ್ಲಿ ಕಾವ್ಯಮಯವಾಗಿ ಹೆಚ್ಚು ಬಳಸಲಾದ ಹೆಸರು ‘ದಿಲ್ಲಿ’. ಇನ್ನು ಬ್ರಿಟಿಷರ ಕಾಲದಲ್ಲಿ ಶಹರವು ‘ಡೆಲ್ಲಿ’ ಅಥವಾ ‘ಡೆಲಿ’ ಎಂಬ ಹೆಸರಿನಿಂದಲೇ ನಿರಂತರವಾಗಿ ಕರೆಯಲ್ಪಡುತ್ತಾ ಜನಪ್ರಿಯವಾಯಿತು. ಒಂದು ವಾದದ ಪ್ರಕಾರ ‘ದೆಹಲಿ’ ಎಂಬ ಹೆಸರಿನ ಹಿಂದಿರುವುದು ‘ದೆಹಲೀಝ್’ ಎಂಬ ಪದ. ದೆಹಲೀಝ್ ಎಂಬ ಹಿಂದುಸ್ತಾನಿಯ ಈ ಕಾವ್ಯಮಯ ಪದಕ್ಕೆ ‘ಹೊಸ್ತಿಲು’ ಎಂಬ ಸುಂದರ ಅರ್ಥವಿದೆ. ಇಂಡೋ-ಗ್ಯಾಂಗೆಟಿಕ್ ಬಯಲುಪ್ರದೇಶಕ್ಕಿರುವ ಹೊಸ್ತಿಲಿನಂತೆ ದಿಲ್ಲಿಯನ್ನು ಕರೆದ ಪರಿಯಿದು. 

ಪ್ರಾಚೀನ ಮಹಾಭಾರತದ ಇಂದ್ರಪ್ರಸ್ಥದಿಂದ ಹಿಡಿದು ಕಾಲಾನುಕ್ರಮದಲ್ಲಿ ಈ ಶಹರವು ಹಲವು ನಾಮಧೇಯಗಳನ್ನು ಪಡೆಯುತ್ತಲೇ ಬಂದಿದೆ. ಮೊಹಮ್ಮದ್ ತುಘಲಕ್ ನ ಕಾಲದ ದಾಖಲೆಗಳಲ್ಲಿ ಶಹರಕ್ಕೆ ‘ಧಿಲ್ಲಿಕಾ’ ಎಂಬ ಹೆಸರಿದ್ದರೆ ಮತ್ತು ಬಲ್ಬನ್ನನ ಕಾಲದಲ್ಲಿ ಇದು ‘ಧಿಲ್ಲಿ’ ಆಗಿತ್ತು. ಶಹಜಹಾನನಿಂದಾಗಿ ದಿಲ್ಲಿಯು ‘ಶಹಜಹಾನಾಬಾದ್’ ಆಯಿತು. ಕೆಂಪುಕೋಟೆಯಿರುವ ಇಂದಿನ ಹಳೇದಿಲ್ಲಿಯೇ ಸುಲ್ತಾನನ ಶಕ್ತಿಕೇಂದ್ರವಾಗಿದ್ದ ಶಹಜಹಾನಾಬಾದ್. ಇವುಗಳಲ್ಲದೆ ದಿಲ್ಲಿಯನ್ನು ‘ದಿಲ್ಲೀಪುರ್’ ಎಂದೂ ಕರೆಯಲಾಗುತ್ತಿತ್ತು ಎಂಬ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗುತ್ತವೆ.

ಇನ್ನು ದಿಲ್ಲಿಯ ಹೆಸರಿನ ಬಗೆಗಿರುವ ಪುರಾಣ ಮತ್ತು ದಂತಕಥೆಗಳತ್ತ ಬಂದರೆ ತಮಾಷೆಯಾಗಿ ಕಾಣುವ ಮತ್ತೊಂದು ಪದವೆಂದರೆ ‘ಢೀಲೀ’. ಹಿಂದಿಯಲ್ಲಿ ‘ಢೀಲೀ’ ಎಂದರೆ ‘ಸಡಿಲ’ ಎಂಬ ಅರ್ಥವಿದೆ. ಶತಮಾನಗಳಿಂದ ತುಕ್ಕುಹಿಡಿಯದೆ ಅಚ್ಚರಿಯೆಂಬಂತಿರುವ ದಿಲ್ಲಿಯ ಐತಿಹಾಸಿಕ ಕಬ್ಬಿಣದ ಕಂಬದ ಕಥೆಯು ತೋಮರ್ ರಾಜವಂಶದ ಅನಂಗಪಾಲನೆಂಬ ಸಾಮ್ರಾಟನ ಹೆಸರಿನೊಂದಿಗೆ ಇಲ್ಲಿ ತಳುಕುಹಾಕಿಕೊಂಡಿದೆ. ಇದರ ಪ್ರಕಾರ ಸಡಿಲ ಅಡಿಪಾಯದ ಮೇಲೆ ನಿಂತಿರುವ ಈ ಕಂಬದ ಕಥೆಯೊಂದಿಗೆ ಅನಂಗಪಾಲನ ಸಾಮ್ರಾಜ್ಯ ವಿಸ್ತರಣೆಯ ಮಹಾತ್ವಾಕಾಂಕ್ಷೆಗಳೂ ಬೆರೆತು ‘ಢೀಲೀ’ ಪದವು ಉಳಿದುಕೊಂಡಿತಂತೆ. 

ಇತ್ತ 1920, 1930 ಮತ್ತು 1940 ರ ದಶಕಗಳಲ್ಲಿ ದಿಲ್ಲಿಯನ್ನು ಬ್ರಿಟಿಷ್ ರಾಜ್ ಆಧಿಪತ್ಯದ ಬೃಹತ್ ಮಹಾತ್ವಾಕಾಂಕ್ಷೆಗೆ ತಕ್ಕಂತೆ ವಿನ್ಯಾಸಗೊಳಿಸಿದವನು ಖ್ಯಾತ ವಾಸ್ತುಶಿಲ್ಪಿಯಾಗಿದ್ದ ಸರ್ ಎಡ್ವಿನ್ ಲ್ಯೂಟೆನ್ಸ್. ದಿಲ್ಲಿಯ ರೈಸಿನಾ ಹಿಲ್ ನಲ್ಲಿರುವ ರಾಷ್ಟ್ರಪತಿ ಭವನದ ನಾಲ್ಕು ಬಂಗಲೆಗಳನ್ನು ಸೇರಿದಂತೆ ಶಹರದಲ್ಲಿ ಹಲವು ಆಯಕಟ್ಟಿನ ಭವನಗಳನ್ನು ಮತ್ತು ವಲಯಗಳನ್ನು ಲ್ಯೂಟೆನ್ಸ್ ನಿರ್ಮಿಸಿದ್ದ. ಹೀಗಾಗಿ ನವದೆಹಲಿಯ ಈ ಭಾಗಗಳಿಗೆ ‘ಲ್ಯೂಟೆನ್ಸ್ ಡೆಲ್ಲಿ’ ಎಂಬ ಹೆಸರೂ ಇದೆ. 

ದಿಲ್ಲಿಯ ವೈಭವಕ್ಕೆ ತಕ್ಕಂತೆ ತಮ್ಮ ಐಡೆಂಟಿಟಿಯನ್ನು ಹೆಮ್ಮೆಯಿಂದ ಶಹರದೊಂದಿಗೆ ಗುರುತಿಸಿಕೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ. ಇರಾನಿ ಸಂಪ್ರದಾಯವೆಂದು ಸಾಮಾನ್ಯವಾಗಿ ಹೇಳಲಾಗುವ ಇದು ದಿಲ್ಲಿಯ ವಿಚಾರದಲ್ಲಿ ಶತಮಾನಗಳಿಂದಲೂ ನಡೆದು ಬಂದಿದೆ. ಹದಿಮೂರನೇ ಶತಮಾನದ ಪ್ರತಿಭಾವಂತ ಕವಿಯಾಗಿದ್ದ ಆಮೀರ್ ಖುಸ್ರೋ ಸ್ವತಃ ‘ದೆಹ್ಲವೀ’ ಪದವನ್ನು ತನ್ನ ಹೆಸರಿನೊಂದಿಗೆ ಜೋಡಿಸಿಕೊಂಡಿದ್ದ. ಹದಿನಾಲ್ಕನೇ ಶತಮಾನದ ಸೂಫಿ ಸಂತರಾಗಿದ್ದ ನಾಸಿರುದ್ದೀನ್ ಚಿರಾಗ್ ದೆಹ್ಲವಿಯಿಂದ ಹಿಡಿದು ಈಚೆಗೆ ನಿಧನರಾದ ಲೇಖಕಿ, ಅಂಕಣಕಾರ್ತಿ ಸಾದಿಯಾ ದೆಹ್ಲವಿಯವರವರೆಗೂ ವ್ಯಕ್ತಿಗಳ ಹೆಸರಿನೊಂದಿಗೆ ಪ್ರೇಮಸಹಿತ ಗರಿಮೆಯಿಂದ ಮಿಂಚುತ್ತಿರುವ ದಿಲ್ಲಿ ಶಹರದ ಗುರುತನ್ನು ಕಾಣಬಹುದು.

ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ,
ಯೇ ತೋ ತೀರಥ್ ಹೈ ಸಾರೇ ಜಹಾನ್ ಕಾ…

ಕೆಹನೇ ಕೋ ಛೋಟಾ ಸಾ ಇಕ್ ನಾಮ್ ಹೈ,
ಸೋಚೋ ತೋ ಇಸ್ಕೇ ಮತ್ಲಬ್ ಹಝಾರ್…
ದಿಲ್ ಸೇ ಬನಾ ಹೈ ದಿಲ್ಲಿ ಜಭೀ ತೋ,
ಕರತಾ ದಿಲ್ ಸೇ ಸಭೀ ಕೋ ಯೇ ಪ್ಯಾರ್…

(ದಿಲ್ಲಿಯು ಹಿಂದೂಸ್ತಾನದ ಹೃದಯ,
ಇದು ಇಡೀ ಜಗತ್ತಿನ ಪವಿತ್ರ ಬೀಡು…
ಹೇಳಲು ಇದೊಂದು ಪುಟ್ಟ ಹೆಸರಾದರೂ,
ಯೋಚಿಸಲು ಅರ್ಥಗಳು ಸಾವಿರಾರು…
ಹೃದಯದಿಂದಲೇ ರೂಪಿಸಿದ ದಿಲ್ಲಿಯಾಗಿದ್ದರಿಂದಲೇ,
ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತದೆ ಈ ನಾಡು…)

ಎಂದು ದಿಲ್ಲಿಯ ಮತ್ತು ದಿಲ್ಲಿಯೆಂಬ ಹೆಸರಿನ ಬಗ್ಗೆ ಸೊಗಸಾಗಿ ಬರೆಯುತ್ತಾರೆ ಖ್ಯಾತ ಬಾಲಿವುಡ್ ಗೀತರಚನಾಕಾರ ರಾಜೀಂದರ್ ಕೃಷನ್. ಪ್ರಾಯಶಃ ದಿಲ್ಲಿಯ ಸ್ವಾರಸ್ಯಕರ ನಾಮಪುರಾಣದ ಬಗ್ಗೆ ಇದಕ್ಕಿಂತ ಸೊಗಸಾದ ಸಾಲುಗಳನ್ನು ಬೇರ್ಯಾರೂ ಬರೆದಿರಲಿಕ್ಕಿಲ್ಲವೇನೋ!

|ಮುಂದಿನ ಸಂಚಿಕೆಯಲ್ಲಿ|

January 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This