ದಿ ಆರ್ಟಿಸ್ಟ್: ಶಬುದಕ್ಕೆ ಬಸಿರಾದ ಮೌನದ ಬಗ್ಗೆ..

– ಟಿ.ಕೆ. ದಯಾನಂದ

‘ಇವು ಆಸ್ಕರ್ ಹೊಡೀತವೆ ನೋಡು’ ಅಂತ ಗೆಳೆಯರೊಬ್ಬರು ಒಂದು ಗಾಡಿ ಆಂಗ್ಲ ಸಿನಿಮಾಗಳ ಪಟ್ಟಿ ಕೊಟ್ಟು ನೋಡಲು ಹೇಳಿದ್ದರು. ಹೌದೇನೋ ಯಾವುದಕ್ಕೂ ನೋಡೇ ಬಿಡೋಣ, ಆಸ್ಕರ್ ಬರೋಕ್ಕಿಂತ ಮೊದಲೇ ನಾನು ಇದನ್ನು ನೋಡಿದ್ದೆ ಅಂತ ಗೆಳೆಯರೆದೆರು ಮೀಸೆ ತಿರುವೋಕೆ ಆದರೂ ಇರಲಿ ಅಂತ ಒಂದರ ಹಿಂದೊಂದು ಆಸ್ಕರ್ ನಾಮಿನೇಟೆಡ್ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೆ. ನಾನು ನೋಡಿದ ಯಾವುದಕ್ಕೂ ನೆಟ್ಟಗೊಂದು ಪ್ರಶಸ್ತಿ ಬರಲಿಲ್ಲ. ಆಸ್ಕರ್ ಘೋಷಣೆಯಾದ ನಂತರ ನನ್ನನ್ನು ಗೆಳೆಯ ದಿವೀನಾದ ಹಳ್ಳಕ್ಕೆ ಕೆಡವಿದ್ದು ಗೊತ್ತಾಯ್ತು. ಅವನು ಹೇಳದಿದ್ದ, ನಾನು ನೋಡದಿದ್ದ ‘ದಿ ಆರ್ಟಿಸ್ಟ್’ ಸಿನಿಮಾ ಆಸ್ಕರ್ ಕಣದ ಬಹುಮುಖ್ಯ ಪ್ರಶಸ್ತಿಗಳನ್ನು ಸೂರೆ ಹೊಡೆದಿತ್ತು. ಇತ್ತೀಚೆಗೆ ಅದನ್ನು ನೋಡಿದ ನಂತರ ಇದೇನು ಅಂತಹ ಆಹಾ ಓಹೋ ಸಿನಿಮಾವಲ್ಲ. ನಮ್ ಅಣ್ಣಾವ್ರ ಕಸ್ತೂರಿ ನಿವಾಸವನ್ನ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ತಿರುವಿ ಬಗ್ಗಿಸಿ ಹಾಲಿವುಡ್ನವರು ದಿ ಆರ್ಟಿಸ್ಟ್ ಮಾಡಿದ್ದಾರೆ ಅನ್ನಿಸಿತು. ಇದರ ಹೊರತಾಗಿಯೂ ಈ ಸಿನಿಮಾದ ಬಗ್ಗೆ ಹೇಳಬೇಕಿರುವುದು ಬೇರೆಯದ್ದೇ ಇದೆ. ವಿನೈಲ್ ಪೋಸ್ಟರುಗಳು ಹೋರ್ಡಿಂಗ್ ಗಳು ನಗರಗಳೊಳಗೆ ಗಹಗಹಿಸುತ್ತ ಪ್ರವೇಶಿಸುವ ಮೊದಲು, ಬ್ಯಾನರ್ ಬರೆಯುವ, ಗೋಡೆಗಳ ಮೇಲೆ ಜಾಹಿರಾತುಗಳನ್ನು ಬರೆಯುತ್ತ ಬದುಕುತ್ತಿದ್ದ ಸಾವಿರಾರು ಚಿತ್ರಕಲಾವಿದರು ನಮಗೆಲ್ಲರಿಗೂ ನೆನಪಿದ್ದರು. ಒದ್ದೆಬಣ್ಣದಲ್ಲಿ ಬ್ರಶ್ಶು ಅದ್ದಿಕೊಂಡು ಸುನೀತವಾಗಿ ಬೆರಳು ತಿರುಗಿಸುತ್ತ ಅವರು ಅಕ್ಷರ ಬಿಡಿಸುವ ಪರಿಯೇ ಮಾಂತ್ರಿಕವಾಗಿತ್ತು. ಈಗ ಬ್ಯಾನರ್ರು ಬರೆಯುವ ಮಾಂತ್ರಿಕತೆಯನ್ನು ಬರೆಯುವ ಬೆರಳುಗಳ ಸಮೇತ ನೆನಪಿನ ಭೂಮಿಯೊಳಗೆ ಹೂತು ಹಾಕಿದ್ದೇವೆ, ಮಿಕ್ಸಿ ಗ್ರೈಂಡರುಗಳು ಬರುವ ಮೊದಲು ಒಬ್ಬಾತ ಹೆಗಲ ಮೇಲೆ ಗೋಣಿಚೀಲ ನೇತಾಕಿಕೊಂಡು ಕಲ್ಮುಳ್ ಹುಯ್ತೀವಪ್ಪ ಕಲ್ಮುಳ್ಳೂ ಅಂತ ಏರುದನಿಯಲ್ಲಿ ಊರೂರಲ್ಲಿ ಕೂಗಿಕೊಂಡು ಸುತ್ತಿಗೆ ಉಳಿ ಹಿಡಿದು ಅಲೆಯುತ್ತಿದ್ದವರೂ, ಎತ್ತುಗಳನ್ನು ಅರಳೀಮರದ ಕೆಳಗೆ ಮಲಗಿಸಿ ಅವುಗಳ ಕಾಲಿಗೆ ಲಾಳ ಹೊಡೆಯುತ್ತ ಬದುಕುತ್ತಿದ್ದವರು ಇವತ್ತು ನಮ್ಮ ಸ್ಮೃತಿಯೊಳಗೆಯೇ ಕೊಲೆಯಾಗಿ ಹೋಗಿದ್ದಾರೆ. ಹೀಗೆ ಆಧುನಿಕತೆಯ ಪರಿಕರಗಳ ಕೆಳಗೆ ಬದುಕನ್ನೇ ಹಾಸಿ ಸ್ಮೃತಿಯಾಚೆಗೆ ಸರಿದವರನ್ನು ದಿ ಆರ್ಟಿಸ್ಟ್ ಬಿಟ್ಟೂ ಬಿಡದೆ ನೆನಪಿಸುತ್ತದೆ. ಆಧುನಿಕತೆಯೆಂದರೇ ಇದಲ್ಲವೇ.. ನೋಟುಗಳ ಜಾತ್ರೆಯಲ್ಲಿ ಶ್ರಮದ ಕೊಲೆ ! ದಿ ಆರ್ಟಿಸ್ಟ್ ಚಿತ್ರವೂ ತನ್ನೊಳಗಿನ ಒಳಹರಿವಿನಲ್ಲಿ ಇದನ್ನೇ ಮಾತನಾಡುತ್ತದೆ. ಇದು ಶಬ್ದಕ್ಕೆ ಬಸಿರಾದ ಮೌನದ ಕಥೆ. ಮಾತು ಕಥೆ ಎರಡೂ ಬೇಡದ ತಿಳಿನೀರಿನಂಥಹ ಪ್ರೇಮದ ಕಥೆ. ಚಿತ್ರದ ನಾಯಕ ವ್ಯಾಲಂಟೈನ್ ಮೌನ ಮತ್ತು ಶಬ್ದಕ್ಕೂ ಮಧ್ಯೆ ಬೆಂಕಿ ಸುರಿದ ಆಧುನಿಕತೆಗೆ ಒಗ್ಗಲು ನಿರಾಕರಿಸಿ ಮುಖ್ಯವಾಹಿನಿಯ ನಿರಾಕರಣೆಗೊಳಗಾಗುವುದು ಮತ್ತು ಸಹನಟಿಯೊಬ್ಬಳೊಟ್ಟಿಗೆ ಅನೂಹ್ಯವಾಗಿ ಹುಟ್ಟಿದ ಪ್ರೇಮದೊಳಗೆ ತ್ಯಕ್ತನಂತೆ ಅಲೆದಾಡುವುದು ಚಿತ್ರದ ಕಥಾ ಹಂದರ. ಕಥೆಯ ಹರವು ತುಂಬ ಸರಳ. ವ್ಯಾಲಂಟೈನ್ ಎಂಬ 1920ರ ಕಾಲಘಟ್ಟದ ಮೂಕಿಚಿತ್ರಗಳ ಸೂಪರ್ಹಿಟ್ ಚಿತ್ರಗಳ ನಟನೊಬ್ಬ ಮೂಕಿಚಿತ್ರಗಳ ಯುಗದ ಯಶಸ್ವಿನಾಯಕ. ಅವನ ಅಭಿಮಾನಿಯಾಗಿದ್ದ ಪೆಪ್ಪಿ ಮಿಲ್ಲರ್ ಎಂಬಾಕೆ ಚಿತ್ರಪ್ರದರ್ಶನವೊಂದರ ನಂತರ ಮೀಡಿಯಾಗಳ ಎದುರಿನಲ್ಲಿಯೇ ಅವನನ್ನು ಚುಂಬಿಸುತ್ತಾಳೆ. ನಾಯಕನಟನ ಬದುಕಲ್ಲಿ ಯಾರೀ ಹೊಸ ಹುಡುಗಿ ಎಂದು ಮೀಡಿಯಾಗಳ ಹಲ್ಲಾಗುಲ್ಲಾದ ಕಾರಣಕ್ಕೆ ರೋಮಾಂಚನಗೊಳ್ಳುವ ಪೆಪ್ಪಿಮಿಲ್ಲರ್ ಆ ಸುದ್ದಿಯ ಪತ್ರಿಕೆಗಳನ್ನು ಹಿಡಿದು ತಾನೂ ಚಿತ್ರನಟಿಯಾಗ ಬಯಸುತ್ತಾಳೆ. ಸಹನರ್ತಕಿ, ಪೋಷಕನಟಿಯಂಥವೇ ಪಾತ್ರಗಳಲ್ಲಿ ಮುಖ ತೋರಿಸುವ ಮಟ್ಟಿಗೆ ಬೆಳೆದೂ ನಿಲ್ಲುತ್ತಾಳೆ. ಅವಳು ನಟಿಸಿದ ಸಿನಿಮಾ ಟೈಟಲ್ಗಳಲ್ಲಿ ಕೊನೇಸಾಲಿನಲ್ಲಿರುತ್ತಿದ್ದ ಆಕೆಯ ಹೆಸರು ಬರುಬರುತ್ತಾ ಎರಡನೇ ಸಾಲಿಗೆ ಬರುವಮಟ್ಟಿಗೆ ಪೆಪ್ಪಿಮಿಲ್ಲರ್ ಬೆಳೆಯುತ್ತಾಳೆ. ನಡುವಯಸ್ಕ ಚಿತ್ರನಟ ವ್ಯಾಲೆಂಟೈನ್ ಎದುರು ಚಿತ್ರವೊಂದರಲ್ಲಿ ಸಹನಟಿಯಾಗಿ ನಟಿಸುವಾಗ ಇಬ್ಬರಿಗೂ ವಿನಾಕಾರಣದ ಪ್ರೀತಿ ಮೊಳೆತುಬಿಡುತ್ತದೆ. ನೇತುಹಾಕಿದ್ದ ಅವನ ಕೋಟಿನೊಳಗೆ ತನ್ನ ಕೈ ತೂರಿಸಿ ತನ್ನನ್ನು ತಬ್ಬಿಕೊಂಡು ವ್ಯಾಲಂಟೈನ್ನನ್ನು ಭ್ರಮಿಸುತ್ತಾಳೆ. ಪೆಪ್ಪಿಯ ಮೋಹದೊಳಗೆ ಬೀಳುವ ವ್ಯಾಲೆಂಟೈನ್ ಇತರರಿಗಿಂತ ಬೇರೆಯಾಗಿ ಕಾಣಲು ನಿನ್ನೊಳಗೆ ಬೇರೆಯದ್ದೇ ಆದ ಒಂದಿರಬೇಕು ಎಂದು ಆಕೆಯ ತುಟಿಯ ಮೇಲೊಂದು ಚುಕ್ಕಿಯಿಟ್ಟು ಆಕೆಯನ್ನು ತನ್ನ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಆರಿಸಿ ಚಿತ್ರದಲ್ಲಿ ನಟಿಸುತ್ತಾನೆ. ಚಿತ್ರ ಚೆನ್ನಾಗಿಯೇ ಓಡುತ್ತದೆ.. ಪೆಪ್ಪಿ ಈಗ ಹಾಲಿವುಡ್ನಲ್ಲಿ ಗುರುತಿಸಲ್ಪಟ್ಟಿದ್ದಾಳೆ. ನಂತರದ್ದು ಮೂಕಿ ಮತ್ತು ಟಾಕಿಚಿತ್ರಗಳ ನಡುವಿನ ಅಕ್ಷರಶಃ ಮುಖಾಮುಖಿ. ಸಿನಿಮಾಗಳೊಳಗೆ ಮಾತುಗಳನ್ನೂ ಶಬ್ದಗಳನ್ನೂ ಅಳವಡಿಸಬಹುದು ಎಂಬ ತಂತ್ರಜ್ಞಾನ ಹೊಸದಾಗಿ ಅನ್ವೇಷಿತಗೊಂಡಿದೆ.. ಶಬ್ದದ ಮಾಂತ್ರಿಕತೆಯಲ್ಲಿ ಸಿನಿಮಾ ನೋಡುಗರು ಯುವಕ ಯುವತಿಯರನ್ನು ಬಯಸುತ್ತಿದ್ದಾರೆ. ಮಾತಿಲ್ಲದೆ ಮಣಮಣವೆಂದು ಬರೀ ಬಾಯಾಡಿಸುವ ಹಿರಿಯ ಚಿತ್ರನಟರ ಪಾಲಿಗೆ ಅವು ನಿರಾಕರಣೆಯ ಕಾಲಘಟ್ಟವಾಗಿ ಪರಿಣಮಿಸುತ್ತದೆ. ವ್ಯಾಲಂಟೈನ್ನ ಮೂಕಿನಾಣ್ಯಕ್ಕೆ ಟಾಕಿ ಮಾರುಕಟ್ಟೆಯಲ್ಲಿ ಚಲಾವಣೆಯ ಕಿಮ್ಮತ್ತು ರದ್ದುಗೊಂಡಿದೆ. ಶಬ್ದ ಮಾತುಗಳಲ್ಲಿ ವಾಚ್ಯವಾಗಿ ಹೇಳುವುದಕ್ಕಿಂತ ಮೌನದ ಅಮೂರ್ತತೆ ಮತ್ತು ಅನೂಹ್ಯತೆಯ ವಿವರಗಳು ಮೂಕಿಚಿತ್ರಗಳಲ್ಲಿ ಸಾಧ್ಯವೆಂಬ ವ್ಯಾಲಂಟೈನ್ನ ವಾದವನ್ನು ಅವನ ನಡುವಯಸ್ಸಿನೊಂದಿಗೇ ನೋಡುಗರು ತಿರಸ್ಕರಿಸಿದ್ದಾರೆ. ಪ್ರೇಮಕಂಬನಿ ಎಂಬ ಅವನೇ ನಿದರ್ೇಶಿಸಿದ ಹೊಸಚಿತ್ರ ಮಕಾಡೆ ಮಲಗಿರುವ ವೇಳೆಯಲ್ಲೇ ಪೆಪ್ಪಿಮಿಲ್ಲರ್ಳ ಟಾಕಿಚಿತ್ರ ಸೂಪರ್ಹಿಟ್ ಆಗಿ ಪೆಪ್ಪಿ ಹಾಲಿವುಡ್ನ ಅನಭಿಶಕ್ತ ರಾಣಿಯಾಗಿದ್ದಾಳೆ. ನಡುವಯಸ್ಕ ವ್ಯಾಲಂಟೈನ್ ಶೇರುಮಾರುಕಟ್ಟೆ ಮತ್ತು ತಾರಾಮೌಲ್ಯದ ಕುಸಿತದಿಂದ ಈಗ ನಿರುದ್ಯೋಗಿ. ಆತನ ಪತ್ನಿಯೂ ವ್ಯಾಲಂಟೈನ್ನನ್ನು ಮಾತನಾಡು ಎನ್ನುತ್ತಾಳೆ.. ನಾನು ಮಾತನಾಡಲಾರೆ ಎನ್ನುವ ಉತ್ತರದೊಂದಿಗೆ ಸಂಸಾರವೂ ಹೋಳಾಗುತ್ತದೆ. ಮನೆಯ ಅಡುಗೆಯಾಳಿಗೆ ಸಂಬಳಕೊಡಲೂ ಹಣವಿಲ್ಲದ ಪರಿಸ್ಥಿತಿಯಲ್ಲಿ ತನ್ನ ಕೋಟುಗಳನ್ನು ಮಾರಿಕೊಂಡು ಕುಡಿತಕ್ಕೆ ಬೀಳುವ ವ್ಯಾಲಂಟೈನ್ನನ್ನು ಅವನ ನೆರಳೇ ಹಂಗಿಸುತ್ತಿದೆ. ಮನೆಯೂ ಸೇರಿದಂತೆ ಎಲ್ಲವನ್ನೂ ಮಾರಿಕೊಂಡು ತನ್ನ ನಾಯಿಯೊಟ್ಟಿಗೆ ಬೀದಿಗೆ ಬಿದ್ದಿದ್ದಾನೆ. ಮೋಹಿಸಿದ.. ಬೆಳೆಯಲು ಅನುವು ಮಾಡಿದ ಇವತ್ತಿನ ಪೆಪ್ಪಿಮಿಲ್ಲರ್ ಆತನೆದುರಿಗೆಯೇ ನಡುವಯಸ್ಕ ನಟರನ್ನೂ ಮೂಕಿ ಚಿತ್ರಗಳನ್ನೂ ಮಾತಾಡದ ಮಣಗುಟ್ಟುವ ವೃದ್ಧರು ಎಂದು ಹೀಗಳೆಯುತ್ತಾಳೆ. ವ್ಯಾಲಂಟೈನ್ ಪರಿತ್ಯಕ್ತಗೊಂಡವನಂತೆ ಅಡುಗೆಯಾಳಿಗೆ ಸಂಬಳಕ್ಕೆ ಬದಲಾಗಿ ಕಾರು ಕೊಟ್ಟು ಕೆಲಸದಿಂದ ತೆಗೆಯುತ್ತಾನೆ. ಶಬ್ದ ಮಾತಿಲ್ಲದೆ ತಾನು ನಟಿಸಿದ್ದ ಮೂಕಿಚಿತ್ರಗಳ ರೀಲುಡಬ್ಬಗಳನ್ನು ತನ್ನ ಬಾಡಿಗೆ ಮನೆಯೊಳಗೆ ಕಿತ್ತು ಹರವಿ ಬೆಂಕಿಯಿಟ್ಟು ಸಹನಟಿ ಪೆಪ್ಪಿಮಿಲ್ಲರ್ ಮೇಲೆ ಮೋಹ ಹುಟ್ಟಿದ ದೃಶ್ಯವಿರುವ ಒಂದು ಡಬ್ಬವನ್ನು ಮಾತ್ರ ಜತನದಿಂದ ಎದೆಗಪ್ಪಿಕೊಂಡು ಆತ್ಮಹತ್ಯೆಗೆ ಯತ್ನ್ನಿಸಿದ್ದಾನೆ. ಬದುಕುಳಿಯುವ ವ್ಯಾಲಂಟೈನ್ನನ್ನು ಪೆಪ್ಪಿಯೇ ತನ್ನ ಮನೆಗೆ ಕರೆತಂದು ಆತನನ್ನು ಉಪಚರಿಸಿ ಆತನೊಟ್ಟಿಗೆ ಒಂದು ಚಿತ್ರವನ್ನು ನಿಮರ್ಿಸುವಂತೆ ನಿಮರ್ಾಪಕನೊಟ್ಟಿಗೆ ಜಗಳಕ್ಕೆ ಬಿದ್ದು ಗೆಲ್ಲುತ್ತಾಳೆ. ಮತ್ತೆ ಪೆಪ್ಪಿಮಿಲ್ಲರ್ಳೊಟ್ಟಿಗೆ ಟಾಕಿಚಿತ್ರದಲ್ಲಿ ನಟಿಸಲು ಶುರುವಿಡುವಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಕಡೆಗೂ ಇಲ್ಲಿ ವ್ಯಾಲಂಟೈನ್ನ ಮೂಕಿಚಿತ್ರಗಳ ಮೇಲಿನ ಪ್ರೇಮದ ಮೇಲೆ ಶಬ್ದವನ್ನೊಳಗೊಂಡ ಟಾಕಿಚಿತ್ರಗಳ ಆಧುನಿಕತೆ ಸವಾರಿ ನಡೆಸುತ್ತವೆ.. ದೃಶ್ಯಗಳನ್ನು 1920ರ ಮೂಕಿಚಿತ್ರಗಳ ಯುಗದ ಶೈಲಿಯಲ್ಲಿ ಕಟ್ಟಿರುವ ನಿರ್ದೇಶಕ ಮೈಕೆಲ್ ಹಸಾನ್ ಇದು ಹಳೆಯದ್ದೇ ಮೂಕಿಚಿತ್ರವೇನೋ ಎಂಬ ಬಲವಾದ ಭ್ರಮೆ ಹುಟ್ಟಿಸುತ್ತಾರೆ. ಸಂಗೀತವೂ ಮೂಕಿಚಿತ್ರಕ್ಕೆ ಸಾಣೆತಟ್ಟಿಸಿ ಮಾಡಿಸಿದಂತಿದೆ. ಇವತ್ತಿನ ಅವತಾರ್ ಯುಗದ ಯಾವ ತಾಂತ್ರಿಕತೆಯೂ ಇಲ್ಲದೆ.. ಚೂರುವೇಗವಾಗಿ ಆವತ್ತಿನ ಸೀಮಿತ ತಾಂತ್ರಿಕತೆಯಂತೆ ಸಿನಿಮಾ ಚಲಿಸುತ್ತದೆ. ಮೌನದ ಮೇಲೆ ಶಬ್ದದ ಸವಾರಿ ಮತ್ತು ನಿಂಬೇಹೂವಿನ ಘಮದಂತಹ ನವಿರು ಪ್ರೇಮವೊಂದನ್ನು ಮಾತಿಲ್ಲದೆಯೇ ಹೇಳುವಲ್ಲಿ ನಿರ್ದೇಶಕ ಹಸಾನ್ ಅನಾಯಾಸವಾಗಿ ಗೆದ್ದಿದ್ದಾನೆ. ಚಿತ್ರವು ನಮ್ಮದೇ ಕಸ್ತೂರಿನಿವಾಸ ಚಿತ್ರವನ್ನು ಬಹಳಷ್ಟು ಹೋಲುತ್ತದೆ.. ಒಂದೊಳ್ಳೆಯ ಪ್ರೇಮ ಯಾನವನ್ನು ಅನುಭವಿಸುವುದಕ್ಕಾದರೂ ದಿ ಆರ್ಟಿಸ್ಟ್ ಚಿತ್ರವನ್ನು ನೋಡಲೇಬೇಕು. ಮತ್ತೆ ಮತ್ತೆ ಬೀಸುವಕಲ್ಲು, ರುಬ್ಬುಕಲ್ಲುಗಳಿಗೆ ಮುಳ್ಳು ಹೊಯ್ಯುತ್ತಿದ್ದವರೂ.. ಬ್ಯಾನರ್ ಬರೆಯುತ್ತಿದ್ದ ಚಿತ್ರಕಲಾವಿದರೂ, ಎತ್ತಿಗೆ ಲಾಳ ಹೊಡೆದು ಬದುಕುತ್ತಿದ್ದವರೂ ನೆನಪಾಗುತ್ತಿದ್ದಾರೆ.. ಅವರೆಲ್ಲ ಎಲ್ಲಿಹೋದರೋ.. ಏನು ಮಾಡುತ್ತಿದ್ದಾರೋ.. ಇಂಥಹ ಜೀವಗಳನ್ನು ನವಿರಾಗಿ ನೆನಪಿಸಿದ ದಿ ಆರ್ಟಿಸ್ಟ್ ಗೆ ನನ್ನ ಸಲಾಂಗಳು.]]>

‍ಲೇಖಕರು G

March 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇನ್ನೂ ಎಷ್ಟು ದಿನ?

ಇನ್ನೂ ಎಷ್ಟು ದಿನ?

ಚೈತ್ರಾ ಶಿವಯೋಗಿಮಠ ತಣ್ಣಗೆ ಸಣ್ಣಗೆ ಇನ್ನೂ ಹಾಡುತ್ತಲೇ ಇದ್ದಾಳೆ ಸೋಗೆಯ ನಡುವೆ ಹಣಿಕುವ ಸೂರ್ಯರಶ್ಮಿಯ ಸ್ನಾನ, ಇಬ್ಬನಿಯ ಪಾನ. ಅಲಂಕಾರಕ್ಕೆ...

ಅಪ್ಪನ ಪದಕೋಶದಲಿ..

ಅಪ್ಪನ ಪದಕೋಶದಲಿ..

ಪ್ರವೀಣ ಹಿರೇಮಠ / ಬೋಡನಾಯಕದಿನ್ನಿ ಅಪ್ಪನ ಏಟುಗಳನ್ನು ಲೆಕ್ಕವಿಡುವ ಅಗತ್ಯವೇ ಇಲ್ಲ ಒಂದು ಏಟೂ ಕೊಟ್ಟ ಚಿಕ್ಕ ನೆನಪೂ ನನಗಿಲ್ಲ ಆದರೆ...

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ - ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ. ಇದೊಂದು ' ದೇಶ- ದೇಹ- ಮನಸ್ಸುಗಳ' ಕತೆ . ನಿಮ್ಮ...

5 ಪ್ರತಿಕ್ರಿಯೆಗಳು

 1. Pramod

  ನಾ ಓದಿದ ಹಲವಾರು ವಿಮರ್ಷೆಗಳಲ್ಲಿ ಇದು ಬೆಸ್ಟ್. ಮೂಕಿ ಚಿತ್ರಗಳಲ್ಲಿ ಭಾವನೆಗಳು ಶಬ್ದಗಳಲ್ಲಿ ಬ೦ಧಿಯಾಗದೆ ತೆರೆಯ ಮೇಲೆ ಮೌನವಾಗಿಯೇ ರೋಧಿಸುತ್ತವೆ. ತೆರೆ ಹರಿದು ಹೃದಯ ತಲುಪುತ್ತವೆ. ಇನ್ನೊ೦ದು ವಿಷಯವೆ೦ದರೆ 20ರ ದಶಕದಲ್ಲಿ ಝೂಮ್ ಶಾಟ್ ಇರಲಿಲ್ಲ. ಇದಕ್ಕಾಗಿ ಈ ಚಿತ್ರದಲ್ಲೆಲ್ಲೂ ಝೂಮ್ ಶಾಟ್ ಬರದ೦ತೆ ಡೈರಕ್ಟರ್ ಎಚ್ಚರಿಕೆ ವಹಿಸಿಕೊ೦ಡಿದ್ದಾರೆ. ಸಿ೦ಗಿ೦ಗ್ ಇನ್ ದಿ ರೈನ್ ಚಿತ್ರ ಈ ಚಿತ್ರದ ಮು೦ದಿನ ಭಾಗವೆ೦ಬ೦ತೆ ಅನಿಸುತ್ತಿದೆ 🙂

  ಪ್ರತಿಕ್ರಿಯೆ
 2. kiran gajanur

  ಆಧುನಿಕತೆಯೆಂದರೇ ಇದಲ್ಲವೇ.. ನೋಟುಗಳ ಜಾತ್ರೆಯಲ್ಲಿ ಶ್ರಮದ ಕೊಲೆ, ಇದು ಶಬ್ದಕ್ಕೆ ಬಸಿರಾದ ಮೌನದ ಕಥೆ. ದಯಾ ನಿಜಕ್ಕೂ ನೀಮ್ಮ ಪದಜೋಡನೆ ಅದ್ಬುತ ತಳ ಸಮುದಾಯದ ಬದುಕನ್ನು ಅಲ್ಲಿಯ ನೋವನ್ನು ಆನಂದವನ್ನು ನೀನೊಬ್ಬನೇ ಅನಿಭವಿಸಿದಂತೆ, ದಿನವು ಬದುಕುತ್ತಿರುವಂತೆ ಬರೆಯುತ್ತಿಯ ನಿಜಕ್ಕೂ ನೀನು ತುಂಬಾ ಬೆಳೆಯುತ್ತಿಯ . . . . . . . . . . . . ಏಕ ವಚನ ಪ್ರಯೋಗಕ್ಕೆ ಕ್ಷಮೆ ಇರಲಿ ಬದುಕಿನ್ಹ ಕುರಿತು ಒಂದೇ ನೋಟ ಇರುವುದರಿಂದ ಅತ್ಹ್ಮಿಯವಾಗಿ ಬಳಸಿದ್ದೇನೆ

  ಪ್ರತಿಕ್ರಿಯೆ
 3. poornima

  ಅತ್ಯಂತ ಸುಂದರವಾದ ಬರಹ. ಪತ್ರಿಕೆಗಳಲ್ಲಿ ಮೊದಲ ಪುಟದ ಮೇಲೆ ಕಣ್ಣಾಡಿಸುತ್ತಿದ್ದ ಹಾಗೇ ನೆಗೆಟಿವ್ ಸುದ್ಧಿಗಳು ಮನಸ್ಸಿನ ಸಂತೋಷವನ್ನು ಕೊಲ್ಲುತ್ತವೆ. (ಇತ್ತೀಚಿಗಿನ ಬೆಳವಣಿಗೆಗಳ ಬಗ್ಗೆ ಹೇಳುತ್ತಿದ್ದೇನೆ.ಏಕೆಂದರೆ ಮಾದ್ಯಮಗಳ ಬಗ್ಗೆ ಒಂದಿಷ್ಟು ಒಂದಿಕೊಂಡಿದ್ದೇನೆ.)ಆದರೆ “ಅವಧಿ” ಒಂದಿಷ್ಟು ಉತ್ತಮ ವಿಷಯಗಳ ಜೊತೆಗೆ ಚೇತೋಹಾರಿಯಾಗಿದೆ.
  ಧನ್ಯವಾದಗಳು..

  ಪ್ರತಿಕ್ರಿಯೆ
 4. Harsha

  ದಯಾ ದಿ ಆರ್ಟಿಸ್ಟ್ ಬಗ್ಗೆ ಒಬ್ಬ ಅದ್ಭುತವಾಗಿ ಬರೆದಿದ್ದೀಯಾ. ಥ್ಯಾಂಕ್ಸ್. ಕೊನೆಯಲ್ಲಿ ಅವರಿಬ್ಬರೂ ಸೇರಿ ಹಾಕುವ ಹೆಜ್ಜೆಗಳು ಮತ್ತು ಅವು ಹೊರ ಹೊರಹೊಮ್ಮಿಸುವ ರಿದಂ ನೋಡಲಾದರೂ ಈ ಸಿನೆಮಾ ನೋಡಲೇ ಬೇಕು. ನಾಯಿಯ ಪಾತ್ರವನ್ನು ಕೂಡ ಅಷ್ಟೇ ಸೊಗಸಾಗಿ ತಂದಿದ್ದಾರೆ..

  ಪ್ರತಿಕ್ರಿಯೆ
 5. Prashanth Nayak H R

  ದಯಾ…….. ನಿಮ್ಮ ನಿರೂಪಣೆ ನಿಜಕ್ಕೂ ಅದ್ಭುತ……..
  ಮನದ ನವಿರಾದ ಭಾವನೆಗಳ ಮೇಲೆ ನಾವ್ ಕ೦ಡ ಭೂತಕಾಲದ ಸವಾರಿ……..”” ಮತ್ತೆ ಮತ್ತೆ ಬೀಸುವಕಲ್ಲು, ರುಬ್ಬುಕಲ್ಲುಗಳಿಗೆ ಮುಳ್ಳು ಹೊಯ್ಯುತ್ತಿದ್ದವರೂ.. ಬ್ಯಾನರ್ ಬರೆಯುತ್ತಿದ್ದ ಚಿತ್ರಕಲಾವಿದರೂ, ಎತ್ತಿಗೆ ಲಾಳ ಹೊಡೆದು ಬದುಕುತ್ತಿದ್ದವರೂ ನೆನಪಾಗುತ್ತಿದ್ದಾರೆ.. ಅವರೆಲ್ಲ ಎಲ್ಲಿಹೋದರೋ.. ಏನು ಮಾಡುತ್ತಿದ್ದಾರೋ.. ಇಂಥಹ ಜೀವಗಳನ್ನು ನವಿರಾಗಿ ನೆನಪಿಸಿದ ದಿ ಆರ್ಟಿಸ್ಟ್ ಗೆ ನನ್ನ ಸಲಾಂಗಳು..””.. ಈ ಸಾಲುಗಳಿಗಾದರೂ ಖ೦ಡಿತಾ ದಿ ಆರ್ಟಿಸ್ಟ್ ನೋಡೇ ನೋಡುತ್ತೇನೆ……

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: