ದೀಪಾವಳಿಗೆ ‘ಜೋಗಿ’ ಸ್ಪೆಷಲ್ ಕಥೆ

ಇಕ್ಬಾಲ್ ಚರಿತೆ

ಶ್ರೀಧರನಿಗೆ ಆವತ್ತು ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು.

ಅವನು ತಡವಾಗಿ ಎದ್ದಿದ್ದ. ಮೂರನೆಯ ಮಗಳಿಗೆ ಬೆಳಗ್ಗೆಯೇ ವಾಂತಿಬೇಧಿ ಶುರುವಾಗಿತ್ತು. ಅವಳನ್ನು ಡಾಕ್ಟರ ಹತ್ತಿರ ಕರೆದುಕೊಂಡು ಹೋಗಿ ಎಂದು ಹೆಂಡತಿ ಗಂಟು ಬಿದ್ದಿದ್ದಳು. ತನಗೆ ಸಾಧ್ಯವೇ ಇಲ್ಲ ಅಂತ ಶ್ರೀಧರ ಕೂಗಾಡಿದ್ದ. ಮದುವೆ ಮನೆಗೆ ಹೋಗಿ ಹೊಟ್ಟೆ ತುಂಬಾ ತಿಂದು ಬಂದಿದ್ದಕ್ಕೇ ಹಾಗಾಗಿದೆ ಅಂತ ಕೂಗಾಡಿದ್ದ. ಅದು ನಿಮ್ಮ ಕಡೆ ಮದುವೆನಿಮ್ಮ ಮರ್ಯಾದೆ ಉಳಿಸೋದಕ್ಕೆ ಅಂತ ನಾನು ಹೋಗಿ ಬಂದೆ. ಇನ್ನು ಮುಂದೆ ನಿಮ್ಮ ಕಡೆಯೋರ ಯಾವ ಕಾರ್ಯಕ್ರಮಕ್ಕೂ ಹೋಗೋಲ್ಲ ಅಂತ ಸುಪರ್ಣಾ ಅವನಿಗಿಂತ ಜೋರಾಗಿ ಕೂಗಾಡಿದ್ದಳು. ಏನಾದ್ರೂ ಮಾಡ್ಕೊಂಡು ಹಾಳಾಗಿ ಹೋಗು ಅಂತ ಶ್ರೀಧರನೂ ಅರಚಿದ್ದ. ಸುಪರ್ಣಾ ತಿಂಡಿಯನ್ನೂ ಬಡಿಸದೇಮಗಳನ್ನು ದರದರ ಎಳೆದುಕೊಂಡು ಮನೆಯಿಂದ ಹೊರಬಿದ್ದಿದ್ದಳು.

ಅವನು ಸಿಟ್ಟಾಗುವುದಕ್ಕೆ ಮತ್ತೊಂದು ಕಾರಣವೂ ಇತ್ತು. ಹಿಂದಿನ ಸಂಜೆ ಆಫೀಸಿನಿಂದ ಹೊರಡುವುದು ಕೊಂಚ ತಡವಾಗಿತ್ತು. ಅಷ್ಟಕ್ಕೇ ವ್ಯಾನ್ ಡ್ರೈವರ್ ಇಕ್ಬಾಲ್ ಅವನನ್ನು ಬಿಟ್ಟೇ ಹೊರಟುಬಿಟ್ಟಿದ್ದ. ಆಮೇಲೆ ಅಟೋ ಸಿಗದೇ ಪರದಾಡಿಕೊಂಡು ಮನೆ ಸೇರುವ ಹೊತ್ತಿಗೆ ಗಂಟೆ ಹತ್ತಾಗಿತ್ತು. ಹೀಗಾಗಿ ಅವನ ಮೆಚ್ಚಿನ ಸೀರಿಯಲ್ ನೋಡುವುದಕ್ಕೆ ಸಾಧ್ಯವಾಗಿರಲಿಲ್ಲ. ಬರುವ ಹೊತ್ತಿಗೆ ಸುಪರ್ಣಾ ಮದುವೆ ಮನೆಯ ಊಟ ಮುಗಿಸಿ ಬಂದು ರೇಷ್ಮೆ ಸೀರೆ ಮಡಿಚಿಡುವ ನಿರುತ್ಸಾಹದಲ್ಲಿದ್ದಳು.

ಇಂಥ ಸಣ್ಣ ಸಂಗತಿಗಳಿಗೆಲ್ಲ ತಲೆಕೆಡಿಸಿಕೊಳ್ಳಬಾರದು. ಏನಾದರೂ ಆಗಲೀ ಪರವಾಗಿಲ್ಲ ಎಂದುಕೊಂಡು ಶ್ರೀಧರ ಅಯ್ಯಂಗಾರಿಸ್ನಾನ ಮುಗಿಸಿ ಪೂಜೆಗೆ ಕೂತ. ವ್ಯಾನ್ ಡ್ರೈವರ್ ಇಕ್ಬಾಲನನ್ನು ತರಾಟೆಗೆ ತೆಗೆದುಕೊಳ್ಳಬೇಕು. ತನ್ನನ್ನು ಬಿಟ್ಟು ಹೋಗಿದ್ದಕ್ಕೆ ಕಾರಣ ಕೇಳಬೇಕು. ಯಾವತ್ತೂ ಯಾರಿಗೂ ಆತ ಕಾಯುವುದೇ ಇಲ್ಲವಾ ನೋಡಬೇಕು. ಒಂದು ನಿಮಿಷ ಕಾದರೂ ಸಾಕುಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡ್ತೀಯೇನೋ ಎಂದು ಬೈದು ಅವನನ್ನು ಅವಮಾನಿಸಬೇಕು ಎಂದು ಶ್ರೀಧರ ನಿರ್ಧಾರ ಮಾಡಿಕೊಳ್ಳುತ್ತಲೇ ಪೂಜೆ ಮುಗಿಸಿದ.

ತಿಂಡಿ ತಿನ್ನದೇ ಹೊರಟು ನಿಂತಾಗ ಮನೆ ಬೀಗದ ಕೈ ಸಿಗಲಿಲ್ಲ. ಅದು ಇರಬೇಕಾದ ಜಾಗದಲ್ಲಿ ಇರಲಿಲ್ಲ. ಸುಪರ್ಣಾ ತೆಗೆದುಕೊಂಡು ಹೋಗಿರಬಹುದೇ ಅಂತ ಅನುಮಾನವಾಯಿತು. ಅವಳನ್ನೇ ಫೋನ್ ಮಾಡಿ ಕೇಳೋಣ ಎಂದುಕೊಂಡು ಫೋನ್ ಮಾಡಿದರೆಸುಪರ್ಣಾ ಫೋನ್ ಎತ್ತಿಕೊಳ್ಳಲಿಲ್ಲ. ಶ್ರೀಧರ ಸಿಟ್ಟು ಏರುತ್ತಾ ಹೋಯಿತು. ಇವತ್ತೂ ವ್ಯಾನಿಗೆ ತಡವಾದರೆ ಮತ್ತೆ ಇಕ್ಬಾಲ್ ಹೊರಟು ಹೋಗುತ್ತಾನೆ. ಆಫೀಸು ತಲುಪುವುದು ಖಂಡಿತಾ ತಡವಾಗುತ್ತದೆ. ಇಲ್ಲಿಂದ ಆಟೋ ಸಿಗುವುದಿಲ್ಲ ಎಂದೆಲ್ಲ ಲೆಕ್ಕಾಚಾರ ಹಾಕುತ್ತಾಮತ್ತೊಂದು ಬೀಗ ಜಡಿದು ಬೀಗದ ಕೈ ಪಕ್ಕದ ಮನೆಯಲ್ಲಿ ಕೊಟ್ಟು ಹೋಗುವುದು ಎಂದು ತೀರ್ಮಾನಿಸಿ ಹೊರಗೆ ಬಂದರೆ ಬೀಗ ಬಾಗಿಲಲ್ಲೇ ಇತ್ತು. ರಾತ್ರಿ ಲೇಟಾಗಿ ಬಂದವನು ಬಾಗಿಲು ತೆಗೆದು ಕೀ ಅಲ್ಲೇ ಬಿಟ್ಟಿದ್ದ.

ರಸ್ತೆಗೆ ಬಂದು ಕಾಯುತ್ತಾ ನಿಂತ ಶ್ರೀಧರ. ಇಕ್ಬಾಲನ ವ್ಯಾನು ಹತ್ತು ನಿಮಿಷ ಕಾದರೂ ಬರಲಿಲ್ಲ. ಸಿಟ್ಟು ಏರುವುದಕ್ಕೆ ಅದು ಮತ್ತೊಂದು ಕಾರಣವಾಯಿತು. ಇಕ್ಬಾಲನನ್ನು ಬೈಯುವುದಕ್ಕೆ ಮನಸ್ಸಿನಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಾ ಕಾಯುತ್ತಾ ನಿಂತ. ಸಿಟ್ಟಲ್ಲಿದ್ದುದರಿಂದ ಒಂದೊಂದು ಕ್ಷಣವೂ ಗಂಟೆಯೆಂಬಂತೆ ಭಾಸವಾಗಿ ಇಕ್ಬಾಲನ ವ್ಯಾನು ಬರುವ ಹೊತ್ತಿಗೆ ಶ್ರೀಧರ ಸಿಟ್ಟಿನಲ್ಲಿ ಕಂಪಿಸುತ್ತಿದ್ದ.

+++

ಇಕ್ಬಾಲನ ವ್ಯಾನು ಬಂತು. ಶ್ರೀಧರ ಯಾವತ್ತೂ ಕೂರುತ್ತಿದ್ದ ಸೀಟಲ್ಲಿ ಮಾಧವಿ ಕುಲಕರ್ಣಿ ಕೂತಿದ್ದಳು. ಅಯ್ಯಂಗಾರಿಗೆ ಸಿಕ್ಕಿದ್ದು ಹಿಂದಿನ ಸೀಟು. ಹೋಗಿ ಕೂರುವ ಮೊದಲು ಇಕ್ಬಾಲನಿಗೆ ನಾಲ್ಕು ಬೈದು ಬಿಡಬೇಕು ಅಂದುಕೊಂಡವನಿಗೆ ಅದು ಸಾಧ್ಯವೇ ಆಗಲಿಲ್ಲ. ವ್ಯಾನಿನ ತುಂಬ ಎಫ್ಪೆಮ್ ಹಾಡು ತುಳುಕಾಡುತ್ತಿತ್ತು. ಅದರ ಮಧ್ಯೆ ಶ್ರೀಧರ ಏನೋ ಅರಚಿಕೊಂಡದ್ದು ಯಾರಿಗೂ ಏನೆಂದು ಅರ್ಥವಾಗಲಿಲ್ಲ. ಎದುರು ಕೂತಿದ್ದ ಪರಿಚಿತ ಮುಖವೊಂದು ಹಿಂದೆ ಸೀಟು ಖಾಲಿ ಇದೆ ಅಂತ ಸನ್ನೆಯನ್ನೇ ಸೂಚಿಸಿತು. ಇಕ್ಬಾಲನಿಗೆ ಬೈಯುವುದೋ ಹಿಂದೆ ಹೋಗಿ ಕೂರುವುದೋ ಎಂಬ ದ್ವಂದ್ವದಲ್ಲಿದ್ದಾಗಲೇಇಕ್ಬಾಲ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ರಭಸಕ್ಕೆ ಶ್ರೀಧರ ಮುಗ್ಗರಿಸಿ ಮಾಧವಿ ಕುಲಕರ್ಣಿಯ ಮೇಲೆ ಬಿದ್ದು ಬಿಟ್ಟ. ಅವಳ ತೋಳಿನ ಮೇಲೆ ಬಿದ್ದ ಬಿರುಸಿಗೆ  ಸೆರಗನ್ನು ಭುಜದ ಹತ್ತಿರ ಬ್ಲೌಸಿಗೆ ಸಿಕ್ಕಿಸಿದ್ದ ಸೇಫ್ಟಿ ಪಿನ್ನನ್ನೂ ಹರಿದುಕೊಂಡು ಬಂತು. ಮಾಧವಿ ಕುಲಕರ್ಣಿ ಮರಾಠಿಯಲ್ಲಿ ಶ್ರೀಧರನ ಜನ್ಮ ಜಾಲಾಡತೊಡಗಿದಳು. ಯಾಕೆ,  ಬೇಗ ಹೋಗಿ ಹಿಂದೆ ಕೂತ್ಕೊಳ್ರಪ್ಪಾ ಅಂತ ಮಕ್ಕಳನ್ನು ಸಂತೈಸುವ ದನಿಯಲ್ಲಿ ಹೇಳಿದರು. ಅಯ್ಯಂಗಾರಿಗೆ ಅವನನ್ನು ಕೊಲೆ ಮಾಡಬೇಕು ಅನ್ನಿಸಿತು. ಗೊತ್ತು ಬಿಡ್ರೀ ಅಂತ ಶ್ರೀಧರ ರೇಗುವ ದನಿಯಲ್ಲಿ ಹೇಳಿದ. ಅಯ್ಯೋಅದಕ್ಯಾಕೆ ರೇಗ್ತೀರಿ ಅಂತ ಅವರು ಮತ್ತಷ್ಟು ಸಮಾಧಾನದಲ್ಲಿ ಸಂತೈಸಿದರು. ಶ್ರೀಧರನಿಗೆ ಯಾವತ್ತೂ  ಅಷ್ಟು  ಸಿಟ್ಟು ಬಂದಿರಲಿಲ್ಲ. ಸಮಾಧಾನದ ಮಾತುಗಳಿಗೆ ಅಷ್ಟೊಂದು ಅವಮಾನಿಸುವ ಶಕ್ತಿ ಇರುತ್ತದೆ ಅನ್ನುವುದು ಅವನಿಗೆ ಗೊತ್ತಿರಲಿಲ್ಲ.

 

ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿ ಶ್ರೀಧರನಿಗೆ ಮತ್ತಷ್ಟು ಅವಮಾನ ಆಯ್ತು. ತಾನು ತುಂಬ ಅಪ್ರಸ್ತುತನಾಗುತ್ತಿದ್ದೇನೆ ಅನ್ನಿಸಿತು. ಸದಾ ತನ್ನ ಜೊತೆ ಮಾತಾಡುತ್ತಿದ್ದ ನರೇಶ್ ಪಟೇಲ್ಆವತ್ತು ಫೈನಾನ್ಸಿಯಲ್ ಎಕ್ಸ್‌ಪ್ರೆಸ್ ಹಿಡಕೊಂಡು ಖಿನ್ನನಾಗಿ ಕೂತಿದ್ದ. ತನ್ನ ನಗುವಿನಿಂದಲೇ ಶ್ರೀಧರ ಹುರುಪು ತುಂಬುತ್ತಿದ್ದ ಚುಕ್ಕಿ ಕಿಟಕಿಯ ಹೊರಗೆ ನೋಡುತ್ತಾ ಕೂತಿದ್ದಳು. ಅವರೆಲ್ಲರ ಜೊತೆ ತಾನಿಲ್ಲ ಅನ್ನಿಸತೊಡಗಿತು. ಅದಕ್ಕೆಲ್ಲ ಕಾರಣ ಇಕ್ಬಾಲ್ ಅನ್ನಿಸಿತು. ಅವನು ಬೇಕಂತಲೇ ಬ್ರೇಕ್ ಹಾಕಿದ್ದಾನೆ. ಬೇಕಂತಲೇ ಅಷ್ಟು ಜೋರಾಗಿ ರೇಡಿಯೋ ಹಾಕಿದ್ದಾನೆ. ತಾನು ಬೈಯುತ್ತೇನೆ ಅಂತ ಗೊತ್ತಾಗಿಯೇ ಹಾಗೆ ಮಾಡಿಸುತ್ತಿದ್ದಾನೆ. ಮಾಧವಿ ಕುಲಕರ್ಣಿಯನ್ನು ತನ್ನ ಸೀಟಲ್ಲಿ ಅವನೇ ಕೂರಿಸಿರುತ್ತಾನೆ ಅನ್ನುವುದು ಅಯ್ಯಂಗಾರ್‌ಗೆ ಅರ್ಥವಾಗುತ್ತಾ ಹೋಯ್ತು.

ಆಫೀಸು ತಲುಪುವ ಹೊತ್ತಿಗೆ ಶ್ರೀಧರ ಹೊಟ್ಟೆಯಲ್ಲಿ ತಳಮಳ ಶುರುವಾಗಿತ್ತು. ತಿಂಡಿ ತಿನ್ನದೇ ಇದ್ದದ್ದರಿಂದ ಆಸಿಡಿಟಿ ಆಗಿದೆ ಅಂದುಕೊಂಡು ತಕ್ಷಣವೇ ಕ್ಯಾಂಟೀನಿಗೆ ಹೋಗಬೇಕು ಅಂದುಕೊಂಡ. ಆದರೆಸೀಟಿಗೆ ಹೋಗಿ ಕೂತು ಕಂಪ್ಯೂಟರ್‌ಗೆ ಲಾಗಾನ್ ಆಗುತ್ತಿದ್ದಂತೆ ಅರ್ಜೆಂಟ್ ಮೀಟಿಂಗು ಎನ್ನುವ ಸೂಚನೆ ಕಾಣಿಸಿಕೊಂಡಿತು. ಕಾನ್ಫರೆನ್ಸ್ ರೂಮಿಗೆ ಹೋಗುತ್ತಿದ್ದಂತೆ ಎಲ್ಲರೂ ಅಲ್ಲಿ ಸೇರಿದ್ದರು. ಅಮೆರಿಕಾದ ಮಾತೃಸಂಸ್ಥೆ ದಿವಾಳಿ ಏಳುವ ಸೂಚನೆ ಕಾಣುತ್ತಿದೆ. ಈ ತಿಂಗಳಿನಿಂದ ಡೌನ್‌ಸೈಜಿಂಗ್ ಶುರು. ನಿಮ್ಮ ನಿಮ್ಮ ಡಿಪಾರ್ಟ್‌ಮೆಂಟಲ್ಲಿ ಜಾಸ್ತಿ ಇರುವ ಸಿಬ್ಬಂದಿಗಳ ಲೆಕ್ಕ ಕೊಡಿ. ಮೊದಲ ಹಂತದಲ್ಲಿ ಇನ್ನೂರು ಮಂದಿಯನ್ನು ಕಿತ್ತು ಹಾಕೋದಕ್ಕೆ ನಿರ್ಧರಿಸಿದ್ದೇವೆ ಎಂದು ಸಿಇಓ ಘೋಷಿಸಿ ಎದ್ದು ಹೋದರು.

ಮೀಟಿಂಗು ಮುಗಿಸಿ ಕ್ಯಾಂಟೀನಿಗೆ ಹೋದರೆ ತಣ್ಣಗಿನ ಉಪ್ಪಿಟ್ಟಿತ್ತು. ಅದನ್ನು ತಿನ್ನುತ್ತಿದ್ದಂತೆ ತಲೆನೋವು ಶುರುವಾಯಿತು. ತಿಂದದ್ದಷ್ಟನ್ನೂ ವಾಂತಿ ಮಾಡಿ ಬಂದು ಸೀಟಲ್ಲಿ ಕೂರುವ ಹೊತ್ತಿಗೆ ಅಮೆರಿಕಾದಲ್ಲಿದ್ದ ಮೊದಲನೇ ಮಗ ದಿಗಂತ್‌ನ ಇಮೇಲ್ ಕಾಯುತ್ತಿತ್ತು. ಅವನು ಕೆಲಸ ಕಳಕೊಂಡಿದ್ದ. ಸುಪರ್ಣಾಳಿಗೆ ಅದನ್ನು ಹೇಳುವುದಕ್ಕೂ ಶ್ರೀಧರನಿಗೆ ಮನಸ್ಸಾಗಲಿಲ್ಲ

+++

ಮಧ್ಯಾಹ್ನ ಊಟ ಮುಗಿಸಿ ಪರ್ಸನಲ್ ಈಮೇಲ್ ಚೆಕ್‌ಮಾಡುತ್ತಾ ಕೂತವನಿಗೆ ಯಾರೋ ಅಪರಿಚಿತ ಫಾರ್ವರ್ಡ್ ಮಾಡಿದ ಮೇಲ್ ಕಾಣಿಸಿತು. ಅದನ್ನು ಸ್ಪ್ಯಾಮ್ ಎಂದು ಡಿಲೀಟ್ ಮಾಡಬೇಕು ಅನ್ನುವಷ್ಟರಲ್ಲಿ ಯಾಕೋ ಕುತೂಹಲ ಮೂಡಿ ಓದುವುದಕ್ಕೆ ಶುರುಮಾಡಿದ. ತಾಜ್‌ಮಹಲ್ ನಿಜಕ್ಕೂ ಮಮತಾಜಳ ಗೋರಿ ಅಲ್ಲಅದು ತೇಜೋ ಮಹಾಲಯ ಅನ್ನುವ ಶಿವದೇವಾಲಯ ಆಗಿತ್ತು ಎಂದು ಯಾರದೋ ಸಂಶೋಧನೆಯನ್ನು ಆಧರಿಸಿದ ಲೇಖನದ ಜೊತೆ ಅದು ದೇವಾಲಯ ಅನ್ನುವುದಕ್ಕೆ ಸಾಕ್ಷಿಯಾಗಿ ಅನೇಕ ಫೋಟೋಗಳನ್ನೂ ಕಳುಹಿಸಿದ್ದರು. ಲೇಖನದ ಕೊನೆಗೆ ಒಂದಷ್ಟು ವೆಬ್‌ಸೈಟುಗಳ ಲಿಂಕ್‌ಗಳಿದ್ದವು. ಅದರಲ್ಲಿ ಮುಸ್ಲಿಂ ದಾಳಿಗೆ ತುತ್ತಾದ ದೇವಾಲಯಗಳ ಪಟ್ಟಿಅವರು ಮಾಡಿದ ದೌರ್ಜನ್ಯಗಳ ವಿವರಗಳಿದ್ದವು. ಯಾವ್ಯಾವುದೋ ಚರಿತ್ರೆಯ ಪುಸ್ತಕಗಳನ್ನು ಕೂಡ ಅದಕ್ಕೆ ಆಧಾರವಾಗಿ ಹೆಸರಿಸಿದ್ದರು.

 

ಅದನ್ನೆಲ್ಲ ಓದುತ್ತಾ ಹೋದ ಹಾಗೆಇಕ್ಬಾಲ್ ಅವರ ಪ್ರತಿನಿಧಿಯ ಹಾಗೆ ಕಾಣಿಸತೊಡಗಿದ. ಅವನನ್ನು ಸುಮ್ಮನೆ ಬಿಡಬಾರದು ಎನ್ನುವ ನಿರ್ಧಾರಕ್ಕೆ ಬಂದ. ಇವತ್ತು ಸಂಜೆ ಅವನು ಕೈಗೆ ಸಿಗಲಿ ಅಂದುಕೊಂಡು ಕೆಲಸದಲ್ಲಿ ಮಗ್ನನಾದರೂ ಮನಸ್ಸು ಮಾತ್ರ ಇಕ್ಬಾಲನ ಚಿಂತೆಯಲ್ಲಿತ್ತು. ಅವನು ದೇವಾಲಯಗಳನ್ನು ಒಡೆಯುತ್ತಿರುವ ಚಿತ್ರ ಬೇಡವೆಂದರೂ ಕಣ್ಮುಂದೆ ಬರತೊಡಗಿತು.

ಸಂಜೆಯಾಗುವುದನ್ನೇ ಕಾಯುತ್ತಾತನ್ನ ವಿಭಾಗದ ಸಿಬ್ಬಂದಿಗಳಲ್ಲಿ ಯಾರನ್ನು ಮನೆಗೆ ಕಳಿಸಬಹುದು ಎಂದು ಲೆಕ್ಕ ಹಾಕುತ್ತಾ ಕೂತ ಶ್ರೀಧರನಿಗೆ ಇದ್ದಕ್ಕಿದ್ದಂತೆ ಖುಷಿಯಾಯಿತು. ಇನ್ನೂರು ಮಂದಿಯನ್ನು ಕಿತ್ತು ಹಾಕುವುದೇ ನಿಜವಾದರೆಅದರ ಜೊತೆಗೆ ಸುಮಾರು ಇಪ್ಪತ್ತು ವ್ಯಾನ್‌ಗಳಿಗೂ ಮುಕ್ತಿ ಸಿಗುತ್ತದೆ.  ಆ ಪಟ್ಟಿಯಲ್ಲಿ ಇಕ್ಬಾಲನೂ ಇರುವಂತೆ ನೋಡಿಕೊಳ್ಳಬೇಕು. ಅವನಿಗೆ ಪಾಠ ಕಲಿಸುವುದಕ್ಕೆ ಇದೇ ಸರಿಯಾದ ಅವಕಾಶ. ಏನೇ ಆದರೂ ಅವನನ್ನು ಮಾತ್ರ ಬಿಡುವುದಿಲ್ಲ. ಇಂಥ ಹೊತ್ತಲ್ಲಿ ಒಂದು ಕಂಪ್ಲೇಂಟ್ ಕೊಟ್ಟರೆ ಸಾಕುಅವನನ್ನು ಮನೆಗೆ ಕಳಿಸುತ್ತಾರೆ ಅಂದುಕೊಂಡು ಶ್ರೀಧರನಿಗೆ ಹೊಸ ಹುರುಪು ಬಂತು. ತಕ್ಷಣವೇ  ಅವನ ಅಶಿಸ್ತನ್ನು ಖಂಡಿಸಿ ಒಂದು ಇಮೇಲ್ ಕಳಿಸಿದ. ಮನಸ್ಸಿಗೆ ತುಂಬ ಹಿತವೆನಿಸಿತು.

+++

ಸಂಜೆ ವ್ಯಾನಿಗೆ ಹತ್ತುವಾಗ ಶ್ರೀಧರ ಮುಖದಲ್ಲಿ ಗೆದ್ದ ಸಂಭ್ರಮವಿತ್ತು. ಆದರೆ ಡ್ರೈವರ್ ಸೀಟಲ್ಲಿ ಇಕ್ಬಾಲ್ ಇರಲಿಲ್ಲ. ಡ್ರೈವರ್ ಸೀಟಲ್ಲಿ ಮತ್ಯಾರೋ ಕೂತಿದ್ದರು. ತನ್ನ ಇಮೇಲ್ ಅಷ್ಟು ಬೇಗ ಕಾರ್ಯರೂಪಕ್ಕೆ ಬಂತಾ ಅಂತ ಶ್ರೀಧರನಿಗೆ ಮತ್ತಷ್ಟು ಖುಷಿಯಾಯಿತು. ಇತಿಹಾಸದಲ್ಲಿ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡೆ ಅಂತ ಹೆಮ್ಮೆಯಾಯಿತು.

ಪಕ್ಕದಲ್ಲಿ ಕೂತಿದ್ದ ನರೇಶ್ ಪಟೇಲನ ಹತ್ತಿರ ಏನಿದು ಹೊಸ ಡ್ರೈವರ್ ಅಂತ ಏನೂ ಗೊತ್ತಿಲ್ಲದವನಂತೆ ಶ್ರೀಧರ ಕೇಳಿದ.  ನರೇಶ್ ನಿನ್ನೆಯೂ ಇವನೇ ಇದ್ನಲ್ಲ. ಇಕ್ಬಾಲ್ ಮಗಳಿಗೆ ಅದೇನೋ ಸೀರಿಯಸ್ಸಂತೆ. ಬೆಳಗ್ಗೆ ಮಾತ್ರ ಅವನು ಬರ್ತಾನಂತೆ. ಸಂಜೆ ಇವನಂತೆ. ಯಾಕೋ ಸರಿಯಿಲ್ಲ. ಒಂದು ನಿಮಿಷ ಕಾಯೋಲ್ಲಅಂದ.

ಏನಾಗಿದ್ಯಂತೆ ಇಕ್ಬಾಲ್ ಮಗಳಿಗೆ ಶ್ರೀಧರ ಕೇಳಿದ.

ಕಿಡ್ನಿ ಫೇಲ್ಯೂರ್ ಆಗಿದ್ಯಂತೆ. ನಾಳೆನೋ ನಾಡಿದ್ದೋ ಟ್ರಾನ್ಸ್‌ಪ್ಲಾಂಟ್ ಇರಬೇಕು. ಇಕ್ಬಾಲ್ ಕಿಡ್ನಿನೇ ಟ್ರಾನ್ಸ್‌ಪ್ಲಾಂಟ್ ಮಾಡ್ತಾರಂತೆ. ಪಾಪಎರಡೋ ಮೂರೋ ಲಕ್ಷ ಖರ್ಚಾಗುತ್ತೆ ಅಂದ ನರೇಶ್.

ವ್ಯಾನು ಸ್ಟಾರ್ಟಾಯಿತು. ಚುಕ್ಕಿ ಓಡೋಡಿ ಬಂದು ಹತ್ತಿದಳು. ಮಾಧವಿ ಕುಲಕರ್ಣಿ ಮುಂತಾದವರು ಇನ್ನೂ ಬಂದಿರಲಿಲ್ಲ. ಚುಕ್ಕಿ ಇರಪ್ಪಾಇನ್ನೂ ಬರಬೇಕುಅಂದಳು. ಟೈಮಂದ್ರೆ ಟೈಮುಕಾಯೋಕ್ಕಾಗಲ್ಲ ಅಂತ ಡ್ರೈವರ್ ಕೀರಲು ದನಿಯಲ್ಲಿ ಹೇಳಿದ. ವ್ಯಾನು ಜರ್ಕ್ ಹೊಡೆದು ಮುಂದೆ ಸಾಗಿತು. ಇವನ ಹೆಸರೇನು ಕೇಳಿದ ಶ್ರೀಧರ.

ಅದೇನೋ ಮಾದೇವ ಅಂತೆ ನರೇಶ್ ಗೊಣಗಿದ.                          

‍ಲೇಖಕರು avadhi

October 26, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

10 ಪ್ರತಿಕ್ರಿಯೆಗಳು

 1. ಬಿ.ಕಟ್ಟಿಮನಿ 45E

  ಇಷ್ಟವಾಯಿತು..

  ಬಿ.ಕಟ್ಟಿಮನಿ 45E

  ಪ್ರತಿಕ್ರಿಯೆ
 2. ಬಿ.ಕಟ್ಟಿಮನಿ 45E

  ಇಷ್ಟವಾಯಿತು..

  ಬಿ.ಕಟ್ಟಿಮನಿ 45E

  ಪ್ರತಿಕ್ರಿಯೆ
 3. ಬಿ.ಕಟ್ಟಿಮನಿ 45E

  ಇಷ್ಟವಾಯಿತು..

  ಬಿ.ಕಟ್ಟಿಮನಿ 45E

  ಪ್ರತಿಕ್ರಿಯೆ
 4. ಬಿ.ಕಟ್ಟಿಮನಿ 45E

  ಇಷ್ಟವಾಯಿತು..

  ಬಿ.ಕಟ್ಟಿಮನಿ 45E

  ಪ್ರತಿಕ್ರಿಯೆ
 5. ಬಿ.ಕಟ್ಟಿಮನಿ 45E

  ಇಷ್ಟವಾಯಿತು..

  ಬಿ.ಕಟ್ಟಿಮನಿ 45E

  ಪ್ರತಿಕ್ರಿಯೆ
 6. ಬಿ.ಕಟ್ಟಿಮನಿ 45E

  ಇಷ್ಟವಾಯಿತು..

  ಬಿ.ಕಟ್ಟಿಮನಿ 45E

  ಪ್ರತಿಕ್ರಿಯೆ
 7. ಬಿ.ಕಟ್ಟಿಮನಿ 45E

  ಇಷ್ಟವಾಯಿತು..

  ಬಿ.ಕಟ್ಟಿಮನಿ 45E

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: