ದೀಪ್ತಿ ಭದ್ರಾವತಿಯವರ ‘ಗೀರು’

ದೀಪ್ತಿ ಭದ್ರಾವತಿಯವರು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೆಲವು ಕಥೆಗಳಲ್ಲಿಯೂ ಆಸ್ಪತ್ರೆಯ ದೃಶ್ಯಗಳು ಮೂಡಿ ಬಂದಿವೆ. ದೀಪ್ತಿ ಅವರು ನನಗೆ ಫೇಸ್ಬುಕ್ ಮೂಲಕ ಪರಿಚಯವಾದವರು. ನನಗೆ  ಪರಿಚಯವಾಗುವುದಕ್ಕಿಂತ ಮುಂಚೆಯೇ ದೀಪ್ತಿಯವರು ನನ್ನ ಅಮ್ಮನಿಗೆ ಪರಿಚಯವಿದ್ದರೂ ನನಗೆ ಅದು ತಿಳಿದಿರಲಿಲ್ಲ. ನನ್ನ ಅಮ್ಮ ಮತ್ತು ನನಗೆ ಅಕ್ಕನಂತಿರುವ, ಗೆಳೆಯ ಪರಮೇಶನ ಅಕ್ಕ ವಿಜಯ ಕೂಡ ಶಿವಮೊಗ್ಗ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ನನ್ನ ಅಮ್ಮ ಇತ್ತೀಚೆಗೆ ನಿವೃತ್ತಿ ಹೊಂದಿದರು. ದೀಪ್ತಿ ಮತ್ತು ವಿಜಯ ಇಬ್ಬರು ಗೆಳತಿಯರು. ಅದು ಕೂಡ ನನಗೆ ಇತ್ತೀಚೆಗೆ ತಿಳಿದದ್ದು.

ದೀಪ್ತಿಯವರ ಈ ಗೀರು ಕಥಾ ಸಂಕಲನ ಕನ್ನಡ ಸಾಹಿತ್ಯದಲ್ಲಿ ಏಕೆ ಮುಖ್ಯವಾಗುತ್ತೆಂದರೆ ಇಲ್ಲಿನ ಕತೆಗಳ ವೈವಿಧ್ಯಮ ಹಿನ್ನೆಲೆ ಎಂದು ಖಂಡಿತ ಹೇಳಬಹುದು. ಈಗಾಗಲೇ ಈ ಕೃತಿ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ ಪಡೆದಿದೆ. ಇಲ್ಲಿನ ಸ್ಫೋಟ ಕತೆ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಸಾಮಾಜಿಕ ತಾಣಗಳಲ್ಲಿ ಅಪಾರವಾದ ಜನಮನ್ನಣೆ ಪಡೆದಿತ್ತು. ಶಿಕ್ಷೆ ಎಂಬ ಅತೀ ಚಿಕ್ಕ ಕತೆಯೂ ಕೂಡ ಮಯೂರದಲ್ಲಿ ಪ್ರಕಟವಾಗಿತ್ತು ಎಂದು ನೆನಪು. ಅದನ್ನು ಕೂಡ ಹಲವು ಜನ ಮೆಚ್ಚಿದ್ದರು.  

ಈ ಕಥಾಸಂಕಲನದಲ್ಲಿ ಒಟ್ಟು ಹದಿನಾಲ್ಕು ಕತೆಗಳಿವೆ. ಸ್ಫೋಟ, ಭಾಗೀಚಿಕ್ಕಿ, ಚೌಕಟ್ಟು, ಮೊಹರು, ಗೀರು, ಶಿಕ್ಷೆ, ಅಲಮೇಲಮ್ಮ ಮತ್ತು ಇಂಗ್ಲಿಷ್, ಕುದಿ ಕತೆಗಳು ಸ್ತ್ರೀ ಸಂವೇದನೆಯ ಕತೆಗಳು ಎಂದು ಹೇಳಬಹುದು. ಇಲ್ಲಿನ ಕಥಾನಾಯಕಿಯರು ಪುರುಷ ಸಮಾಜದ ದಬ್ಬಾಳಿಕೆಯಿಂದ ನೊಂದು ಬೆಂದವರು. ಕ್ಯಾನ್ವಾಸ್, ಮುಚ್ಚಿದ ಬಾಗಿಲು ಮತ್ತು ಈ ಟೆಂಡರ್ ಬೇರೆ ರೀತಿಯ ಕತೆಗಳು.

ಈ ಕಥಾಸಂಕಲನದ ಶೀರ್ಷಿಕೆ ಗೀರು ಎಂದು ಇದ್ದರೂ. ಇಲ್ಲಿ ಹೆಚ್ಚು ಕಾಡುವ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬಂದಿರುವ ಕತೆಗಳು ಸ್ಫೋಟ ಮತ್ತು ಭಾಗೀಚಿಕ್ಕಿ ಎಂದು ಹೇಳಬಹುದು. ಈ ಕಥಾಸಂಕಲನಕ್ಕೆ ಸ್ಫೋಟ ಎಂದು ಹೆಸರಿಟ್ಟಿದ್ದರೆ ಹೆಚ್ಚು ಸೂಕ್ತವಾಗುತಿತ್ತು ಎಂದು ಅನಿಸುತ್ತದೆ. ಸ್ಫೋಟ ಕತೆಯ ನಾಯಕಿಯಂತೆಯೇ ಇಲ್ಲಿನ ಇತರೆ ನಾಯಕಿಯರು ಸ್ಪೋಟಗೊಳ್ಳುವುದನ್ನು ನಾವು ಕಾಣಬಹುದು.

ಸ್ಪೋಟ ಕತೆಯಲ್ಲಿ ವಿಫಲ ದಾಂಪತ್ಯದಲ್ಲಿ ಬೆಂದುಹೋದ ಮಹಿಳೆಯೊಬ್ಬಳು ಹೇಗಾದರೂ ಮಾಡಿ ನನಗೊಂದು ಮಗು ಇದ್ದರೆ ನನ್ನ ಬದುಕು ಸಂಪೂರ್ಣವಾಗುತ್ತದೆ ಎಂದು ಭಯಸುತ್ತಾಳೆ. ಪುರುಷತ್ವವಿಲ್ಲದ ನಿರ್ವೀರ್ಯನಂತಿರುವ ಗಂಡನ ಜೊತೆ ಬದುಕುವುದಾದರೂ ಹೇಗೆ? ಹೇಗಾದರೂ ಮಾಡಿ ಅವನಿಂದಲೇ ಮಗುವನ್ನು ಪಡೆಯಬೇಕು ಎಂದು ಬಯಸುವ ಕಥಾನಾಯಕಿಯ ನಿರ್ಧಾರ ಕತೆಯ ಕೊನೆಗೆ ಬದಲಾದಾಗ ಓದುಗ ಅಚ್ಚರಿ ಪಡುತ್ತಾನೆ. ಅಲ್ಲಿನ ವೈದ್ಯರೊಬ್ಬರು ಅವಳ ಕೊನೆಯ ನಿರ್ಧಾರವನ್ನು ಕೇಳಿ ಬೆಚ್ಚಿ ಬೀಳುತ್ತಾರೆ.

ಭಾಗೀಚಿಕ್ಕಿಯ ಕಥಾನಾಯಕಿ ಕೆಲವೊಮ್ಮೆ ಎಂ.ಕೆ. ಇಂದಿರಾರವರ ಫಣಿಯಮ್ಮನಂತೆ ಕಂಡರೆ ಇನ್ನು ಕೆಲವೊಮ್ಮೆ ವೈದೇಹಿಯವರ ಅಕ್ಕು ಮತ್ತು ಅಮ್ಮಚ್ಚಿಯರನ್ನು ಓದುಗನ ಮುಂದೆ ನಿಲ್ಲುತ್ತಾಳೆ. ಇಲ್ಲಿ ಈಡಿಪಸ್ ಕಾಂಪ್ಲೆಕ್ಸ್ ಮತ್ತು ಶಿಶುಕಾಮಿತನ ಓದುಗನನ್ನು ಬೆಚ್ಚಿ ಬೀಳಿಸುತ್ತದೆ. ಈ ಕತೆಯನ್ನು ಮನೋಶಾಸ್ತ್ರದ ದೃಷ್ಟಿಯಿಂದ ನೋಡಲುಬಹುದು. ಈ ವಿಷಯವೇ ಭಾರತೀಯ ಸಂಸ್ಕೃತಿಗೆ ಹೊಸತು.

ಅದರಲ್ಲೂ ಸಂಪ್ರದಾಯದಲ್ಲಿ ಬೆಳೆದ ಕಥಾನಾಯಕಿ ತನ್ನ ಗಂಡನ ಮಾನಸಿಕ ಕಾಯಿಲೆಯಿಂದ ತನ್ನ ಮಗಳನ್ನೇ ಕಳೆದುಕೊಳ್ಳುವ ಸ್ಥಿತಿಯಿಂದ ತನ್ನ ಗಂಡನ್ನನು ಅವಳೇ ಕೊಂದಿರುವ ಸಂಭವವು ಇರಬಹುದು. ಆ ಅನಂತರವೂ ಅವಳನ್ನು ಹಲವು ಪುರುಷರು ಬಳಸಿಕೊಳ್ಳಲು ವಿಫಲ ಯತ್ನಮಾಡುವಂತಾಗುವುದು ಕೂಡ ಅವಳ ದಿಟ್ಟತನ ಮತ್ತು ಅವಳ ಬದುಕಿನಲ್ಲಿ ಸಂಭವಿಸಿದ್ದ ಘೋರ ಘಟನೆಯಿಂದ ಎಂದು ಹೇಳಬಹುದು.

ವಸುಧೇಂದ್ರರ ಒಂದು ಕತೆಯಲ್ಲಿ ವಿದೇಶದಲ್ಲಿ ತನ್ನ ಕಂಪನಿಯ ಕೆಲಸಕ್ಕೆ ಹೋದ ವ್ಯಕ್ತಿಯೊಬ್ಬ ಅಲ್ಲಿನ ತನ್ನ ಸಹೋದ್ಯೋಗಿಯೊಬ್ಬನ ಚಿಕ್ಕ ಮಗಳ ಫೋಟೋವನ್ನು ಅವನಿಗೆ ತಿಳಿಯದಂತೆಯೇ ಕ್ಯಾಮೆರಾದಲ್ಲಿ ತೆಗೆದು ತಂದು ತನ್ನ ಕಂಪ್ಯೂಟರ್ ಪರದೆಯ ಮುಖಚಿತ್ರವನ್ನಾಗಿ ಮಾಡಿಕೊಂಡಿರುತ್ತಾನೆ. ಆ ವಿದೇಶಿ ಸಹೋದ್ಯೋಗಿ ಬೆಂಗಳೂರಿಗೆ ಬಂದಾಗ ಕಥಾನಾಯಕನ ಕಂಪ್ಯೂಟರ್ ಪರದೆಯ ಮೇಲೆ ತನ್ನ ಮಗಳ ಫೋಟೋವನ್ನು ನೋಡಿ ಬೆಚ್ಚಿ ಬೀಳುತ್ತಾನೆ. ತಕ್ಷಣವೇ ಆ ಕಂಪನಿಯ ಮುಖ್ಯ ಅಧಿಕಾರಿಗೆ ದೂರು ಸಲ್ಲಿಸಿ ಇವನನ್ನು ಕೆಲಸದಿಂದ ತೆಗೆದು ಹಾಕಿಸುತ್ತಾನೆ. ಆ ಕತೆಯ ಸಂದೇಶ ಕೂಡ ಇದೆ ಆಗಿರುತ್ತದೆ.

ಇನ್ನು ಮೊಹರು ಮತ್ತು ಗೀರು ಕತೆಗಳಲ್ಲಿ ಹೆಂಗಸರಿಗೆ ಎಚ್.ಐ.ವಿ. ವೈರಸ್ಸಿನಿಂದ ಆಗುವ ಅನಾಹುತ ಮತ್ತು ಆ ರೀತಿ ಸೋಂಕು ತಗಲುವಿಕೆಗೆ ಕಾರಣೀಕರ್ತನಾದ ಪುರುಷ, ಇನ್ನೆಲ್ಲೋ ಅಜ್ಞಾತವಾಗಿರುವ ವ್ಯಕ್ತಿ. ಅದರಲ್ಲೂ ವೇಶ್ಯಾವಾಟಿಕೆಗೆ ಇಳಿಯುವ ಹೆಂಗಸರಿಗೆ ಬದುಕಿನಲ್ಲಿ ನೂರಾರು ಸಮಸ್ಯೆಗಳು ಬಡತನ ಎಲ್ಲವೂ ಕಾರಣವಾಗಿರುತ್ತವೆ. ಮಸಣದ ಹೂಗಳನ್ನು ಮುಡಿಯುವವರು ಯಾರು ಇರುವುದಿಲ್ಲ ಎಂಬ ಸತ್ಯದ ಜೊತೆಗೆ   ಅದೊಂದು ಮಹಾಕೂಪ ಅಲ್ಲಿಂದ ಎದ್ದು ಬರುವುದು ತುಂಬಾ ಕಷ್ಟದ ಕೆಲಸ ಎಂದು ಈ ಕತೆ ಹೇಳುತ್ತವೆ. ಅದೇ ರೀತಿಯ ಇನ್ನೊಂದು ಕತೆ ಚೌಕಟ್ಟು. ಇಲ್ಲಿ ಕೂಡ ಪುರುಷನಿಂದ ದಬ್ಬಾಳಿಕೆಗೆ ಒಳಪಟ್ಟ ಹೆಣ್ಣೊಬ್ಬಳು ಕೊನೆಗೆ ತನ್ನ ಬಿಡುಗಡೆಯ ಕನಸನ್ನು ಕಾಣುವುದನ್ನು ನೋಡಬಹುದು.

ಶಿಕ್ಷೆ ಕಿರುಕತೆಯ ನಾಯಕಿಯೂ ಕೂಡ ಗಂಡನನ್ನು ಕೊಂದಿರುತ್ತಾಳೆ. ಅವಳು ಏಕೆ ಕೊಂದಳು ಎಂದು ತಿಳಿಯುವುದಿಲ್ಲ. ಆದರೆ, ಬದುಕಿನಲ್ಲಿ ತೀರಾ ನೊಂದಿದ್ದಾಳೆ ಎಂದು ಮಾತ್ರ ತಿಳಿಯುತ್ತದೆ.

ಅಲಮೇಲಮ್ಮ ಮತ್ತು ಇಂಗ್ಲಿಷ್ ಕತೆ ಆಧುನಿಕ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೇಗೆ ಮಾತೃಭಾಷೆಯನ್ನು ಬಿಟ್ಟು ಆಂಗ್ಲಮಯವಾಗುತ್ತಿರುವುದನ್ನು ಮತ್ತು ಮಾತೃಭಾಷೆಯಲ್ಲಿ ಶಿಕ್ಷಣ ಕಲಿತರೆ ಅದು ಶಿಕ್ಷಣವೇ ಅಲ್ಲ ಎಂಬ ಮನಸ್ಥಿತಿಯನ್ನು ತೋರಿಸುತ್ತದೆ.

ಕುದಿ ಕತೆಯ ಇಬ್ಬರು ನಾಯಕಿಯರು ಕೂಡ ವೈದೇಹಿಯವರ ಕತೆಗಳ ನಾಯಕಿಯರಂತೆಯೇ ಕಾಣುತ್ತಾರೆ. ಇಲ್ಲಿ ರಾಮಾಯಣ, ಸೀತಾರಾಮ ಕಲ್ಯಾಣದ ನಿರರ್ಥಕತೆಯನ್ನು ಕತೆ ಎತ್ತಿ ತೋರಿಸುತ್ತದೆ. ಇಲ್ಲಿ ರಾಮಾಯಣ ಸ್ತ್ರೀ ವಿಮೋಚನೆಯ ವಿರುದ್ಧವಾಗಿದೆ ಮತ್ತು ರಾಮ ಪುರುಷೋತ್ತಮನಲ್ಲ ಅವನು ಸಾಮಾನ್ಯ ಪುರುಷರಂತೆ ಒಬ್ಬ ದಬ್ಬಾಳಿಕೆಯ ಪುರುಷನಾಗಿದ್ದ ಎಂಬುದನ್ನು ಇಲ್ಲಿ ಅರ್ಥೈಸಬಹುದು. ಇಲ್ಲಿನ ಒಂದು ಪಾತ್ರ ಅಕ್ಕಯಮ್ಮ “ಹಿಂಗೆ ಹೇಳ್ತಿನಿ ಅಂತ ಕೋಪ ಮಾಡಕಂಬೇಡ ಮತ್ತೇ…. ಆ ಸೀತೆ ಒಂದ್ ಸರ್ತಿ ಮದ್ವಿ ಮಾಡ್ಕಂಡೇ ಬೆಂಕಿಗೆ ಹಾರ್ಕಳ ಹಂಗಾತು. ನೀವೆಲ್ಲ ಸೇರಿ ಮತ್ತೆ ಮದ್ವೆ ಮಾಡಕ್ಕೆ ಹೊರಟಿದ್ದೀರಲ್ಲ…. ಅವ್ಳ ಕತೆ ಎಂತ ಅಂತ ನೆನ್ಸಕಂಡು ನಗು ಬಂತು ಕಣೇ” ಎಂದು ಹೇಳುವ ಪ್ರಸಂಗವಿದೆ.    

ನ್ಯೂಸ್ ಬೀ ಮತ್ತು ರೊಕ್ಕದೋಷ ಹಳ್ಳಿಯ ಕತೆಗಳು. ನ್ಯೂಸ್ ಬೀ ಕತೆಯ ನ್ಯೂಸ್ ಬೀ ಹೆಬ್ಬೆಟ್ ರಾಮಕ್ಕ ಚಲನಚಿತ್ರದ ರಾಮಕ್ಕನಂತವಳು. ಹಳ್ಳಿಯ ರಾಜಕೀಯ ಈ ಎರಡು ಕತೆಗಳಲ್ಲೂ ಕಾಣಬಹುದು. ನೆರಳಿನಾಚೆ ಕತೆಯಲ್ಲಿ ಆಧುನಿಕತೆ ಮತ್ತೇ ಮತ್ತು ನಗರೀಕರಣಗಳು ಸಾಮಾನ್ಯ ಜನರ ಬದುಕನ್ನು ಹೇಗೆ ನಿಯಂತ್ರಿಸುತ್ತವೆ ಎಂದು ತೋರಿಸುವ ಕತೆ.

ಈ ಟೆಂಡರ್, ಮನುಷ್ಯ ಹೆಣ್ಣು ಗಂಡುಗಳ ಸಂಗಮವಾಗದೆ ಇನ್ನೊಂದು ಹೊಸ ಸೃಷ್ಟಿಯನ್ನು ಮಾಡಲು ಹೊರಟಿರುವುದನ್ನು ಜೊತೆಗೆ ವ್ಯವಸ್ಥೆಯ ಭ್ರಷ್ಟಾಚಾರವನ್ನು ಅಣಕಿಸುವ ಕತೆ.

ಕ್ಯಾನ್ವಾಸ್ ಮತ್ತು ಮುಚ್ಚಿದ ಬಾಗಿಲು ಕತೆಗಳು ಮನುಷ್ಯನ ಮನೋವ್ಯವಹಾರವನ್ನು ಚೆನ್ನಾಗಿ ಚಿತ್ರಿಸಿವೆ. ಕ್ಯಾನ್ವಾಸ್ ಕತೆ ಪತ್ತೇದಾರಿ ಕತೆಯಂತೆ ತೀವ್ರ ಕುತೂಹಲಕಾರಿಯಾಗಿ. ಓದಿಸಿಕೊಂಡು ಹೋಗುತ್ತದೆ.

ಈ ಕಥಾ ಸಂಕಲನವಲ್ಲದೆ ದೀಪ್ತಿಯವರು ಕಾಗದದ ಕುದುರೆ, ಗ್ರೀನ್ ರೂಮಿನಲ್ಲಿ ಎಂಬ ಕವನ ಸಂಕಲನಗಳು ಹಾಗೂ  ಆ ಬದಿಯ ಹೂವು ಎಂಬ ಇನ್ನೊಂದು ಕಥಾಸಂಕಲನ ಬರೆದಿದ್ದಾರೆ.  ಮಾಸ್ತಿ ಕಥಾಪ್ರಶಸ್ತಿಯೂ ಸೇರಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವಾರು ಪತ್ರಿಕೆಗಳಲ್ಲೂ ತಮ್ಮ ಕತೆಗಳಿಗೆ ಬಹುಮಾನಗಳನ್ನು ಪಡೆದಿದ್ದಾರೆ. ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಹೊಸತಲೆಮಾರಿನ ಲೇಖಕಿಯಾಗಿ ತಮ್ಮದೇ ಆಗಿರುವ ಛಾಪು ಮೂಡಿಸಿದ್ದಾರೆ. ಅವರಿಂದ ಇನ್ನು ಹೆಚ್ಚು ಹೆಚ್ಚು ಕೃತಿಗಳನ್ನು ನಿರೀಕ್ಷಿಸಬಹುದಾಗಿದೆ.

December 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This