ದುಬೈನಲ್ಲಿ ಸಿಕ್ಕ ಬೆಂಗ್ಳೂರ್ ಕಳ್ಳ!

ಅರಬ್ಬರ ನಾಡಿನಲ್ಲಿ-4
ಅನಿರೀಕ್ಷಿತ ಮುಖಾಮುಖಿ
ಹೊಳೆನರಸೀಪುರ  ಮಂಜುನಾಥ್

(ಮೊನ್ನೆ ದುಬೈನಿಂದ ಬೆಂಗಳೂರಿಗೆ ಬಂದವನು ಈ ಅನುಭವವನ್ನು ಬರೆಯಲು ಇಂದು ಬೆಳಿಗ್ಗೆ ಕುಳಿತೆ. ಕೆಳಗಿನಿಂದ ಮಗಳು ಟಿವಿಯಲ್ಲಿ ನ್ಯೂಸ್ ನೋಡಿ ಕೂಗಿಕೊಂಡಳು, “ಡ್ಯಾಡಿ, ದುಬೈನಿಂದ ಬರುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆಯಂತೆ”. ತಕ್ಷಣ ಕೆಳಗೋಡಿದವನು ದುಬೈನಿಂದ ಮಂಗಳೂರಿಗೆ ಬಂದಿಳಿದ ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನ ದುರಂತಕ್ಕೀಡಾಗಿ ಸುಮಾರು ೧೬೦ ಜನ ಸಾವಿಗೀಡಾದ ಸುದ್ಧಿ ಕೇಳಿ ಗರಬಡಿದವನಂತೆ ನಿಂತೆ. ತಮ್ಮ ಪ್ರೀತಿ ಪಾತ್ರರನ್ನು ನೋಡಲು ಆ ಮರುಭೂಮಿಯ ನಾಡಿನಿಂದ ಬಹುದಿನಗಳ ನಂತರ ಹೊರಟು ಬಂದು ದುರಂತ ಸಾವಿಗೀಡಾದ ಆ ನತದೃಷ್ಟರಿಗೆ ಈ ನನ್ನ ಲೇಖನವನ್ನು ಅರ್ಪಿಸುತ್ತಿದ್ದೇನೆ. ಅವರ ಆತ್ಮಗಳಿಗೆ ಶಾಂತಿ ಸಿಗಲಿ, ಅವರ ಸಂಬಂಧಿಕರಿಗೆ ಭಗವಂತ ಆ ಅತೀವ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ.)

ತುರ್ತು ಕಾರಣಗಳಿಂದ ಆತುರಾತುರವಾಗಿ ಬೆಂಗಳೂರಿಗೆ ಹೊರಟೆ. ಸಂಜೆ ಐದೂವರೆಗೆ ಮನೆಗೆ ಬಂದ ನಂತರ ಎಲ್ಲ ಏರಲೈನ್ಸ್ ಗಳ ಅಂತರ್ಜಾಲ ತಾಣಗಳನ್ನು ಸುತ್ತಾಡಿ ಶೋಧಿಸಿದರೆ ಮಲ್ಯರ ಕಿಂಗ್ ಫಿಷರ್ನಲ್ಲಿ ಒಂದೇ ಒಂದು ಸೀಟಿತ್ತು, ಅದೂ ಕೊನೆಯ ೩೫ನೆ ನಂಬರಿನ ಸೀಟು, (ಟಾಯ್ಲೆಟ್ ಪಕ್ಕದ್ದು!) ಬಿಟ್ಟರೆ ಬೇರೆ ಯಾವ ದಾರಿಯೂ ಇರಲಿಲ್ಲ, ವಿಧಿಯಿಲ್ಲದೆ ಸಾಲದ ಕಾರ್ಡನ್ನು ಝಳಪಿಸಿ ಬುಕ್ ಮಾಡಿ, ತರಾತುರಿಯಲ್ಲಿ ಒಂದಷ್ಟು ಬಟ್ಟೆಗಳನ್ನು ನನ್ನ ಸೂಟ್ಕೇಸಿನಲ್ಲಿ ತುಂಬಿಕೊಂಡು ಸಿದ್ಧನಾದೆ. ಮೊದಲೇ ತಿಳಿಸಿದ್ದಂತೆ ನನ್ನ ಶಿಷ್ಯ ಅಶೋಕ ಸಮಯಕ್ಕೆ ಸರಿಯಾಗಿ ಬಂದು ಪಿಕಪ್ ಮಾಡಿದ. ಟರ್ಮಿನಲ್-೧ರಲ್ಲಿ ಎಲ್ಲ ದಾಖಲಾತಿಗಳ ಪರೀಕ್ಷಾ ವಿಧಿವಿಧಾನಗಳನ್ನು ಬಹು ಪ್ರಯಾಸದಿಂದ ಮುಗಿಸಿ, ಅಷ್ಟುದ್ಧವಿದ್ದ ಲಾಂಜಿನಲ್ಲಿ ನಡೆಯುತ್ತಾ, ಡ್ಯೂಟ್ಯಿಫ್ರೀ ಶಾಪಿಗೆ ಬರುವ ಹೊತ್ತಿಗೆ ಸಣ್ಣಗೆ ಕಾಲುಗಳು ನೋಯತೊಡಗಿದವು. ನನ್ನ ನೆಚ್ಚಿನ ಬ್ಲಾಕ್ ಲೇಬಲ್ ೨ಲೀಟರ್, ಮಾರ್ಲ್ ಬೋರೋ ಒಂದು ಡಬಲ್ ಪ್ಯಾಕ್, ಒಂದಷ್ಟು ಚಾಕಲೇಟ್ಗಳನ್ನು ಖರೀದಿಸಿ ಮತ್ತಷ್ಟು ಹಗುರಾದ ಜೇಬಿನೊಡನೆ ೧೩೩ನೆ ಗೇಟಿನ ಕಡೆಗೆ ನಡೆದೆ. ಇನ್ನೂ ಸಾಕಷ್ಟು ಸಮಯವಿದ್ದುದರಿಂದ ನನ್ನ ಲ್ಯಾಪ್ಟಾಪ್ ತೆಗೆದು, ಹೆಡ್ ಫೋನ್ ಸಿಗಿಸಿಕೊಂಡು, ಯೂಟ್ಯೂಬಿನಲ್ಲಿ ಸಿ.ಅಶ್ವಥರ ಧ್ವನಿಯಲ್ಲಿದ್ದ “ಕನ್ನಡವೇ ಸತ್ಯ” ಕಾರ್ಯಕ್ರಮದ ಸುಮಧುರ ಗೀತೆಗಳನ್ನು ಆಸ್ವಾದಿಸುತ್ತಾ ಕುಳಿತೆ.
ಅದಾಗಲೇ ಸಾಕಷ್ಟು ಜನ ಬೆಂಗಳೂರಿಗೆ ಹೋಗುವವರು ಬಂದು ಸೇರಿದ್ದರು, ಕೆಲವರ ಮುಖದಲ್ಲಿ ಅದೇನೋ ಆತಂಕ, ದುಗುಡ, ಇನ್ನು ಕೆಲವರ ಮೊಗದ ತುಂಬಾ ಬಹು ದಿನಗಳ ನಂತರ ಊರಿಗೆ ಹೋಗುತ್ತಿರುವ ಖುಷಿಯೋ ಖುಷಿ, ಮತ್ತೆ ಕೆಲವರು ಡ್ಯೂಟಿ ಫ್ರೀನಲ್ಲಿ ತಾವು ಕೊಂಡ ವಸ್ತುಗಳನ್ನೆಲ್ಲ ಮತ್ತೊಮ್ಮೆ ಪರೀಕ್ಷಿಸಿಕೊಳ್ಳುತ್ತಿದ್ದರು, ಅಮ್ಮನಿಗೆ, ಅಪ್ಪನಿಗೆ, ಅಕ್ಕನಿಗೆ, ತಂಗಿಗೆ, ಅಣ್ಣನ ಮಕ್ಕಳಿಗೆ ಕೊಂಡ ಉಡುಗೊರೆಗಳನ್ನೆಲ್ಲ ಪರೀಕ್ಷಿಸುತ್ತ ಮತ್ತೆ ಯಾರಿಗಾದರೂ ಏನಾದರೂ ಕೊಳ್ಳಬೇಕಿದೆಯೇ ಎಂದು ಮತ್ತೊಮ್ಮೆ ಮಗದೊಮ್ಮೆ ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ಕೆಲವು ಯುವಕರು ತಾವು ಧರಿಸಿದ ಹೊಸ ಬಟ್ಟೆ, ಸೊಂಟಕ್ಕೆ ಸಿಕ್ಕಿಸಿದ ಹೊಸ ಮೊಬೈಲ್ ಎಲ್ಲರಿಗೂ ಕಾಣಲೆಂದು ಸುಮ್ಮನೆ ಅತ್ತಿಂದಿತ್ತ ಗಸ್ತು ಹೊಡೆಯುತ್ತಿದ್ದರು. ಕೆಲವು ವಯ್ಯಾರಗಿತ್ತಿ ಯುವತಿಯರು ತಾವು ಕೊಂಡ ಹೊಸ ಚೈನು, ನೆಕ್ಲೇಸುಗಳನ್ನು ಎಲ್ಲರಿಗೂ ಕಾಣುವಂತೆ ತೋರಿಸಿಕೊಳ್ಳಲು ಬಹಳ ಶ್ರಮ ಪಡುತ್ತಿದ್ದರು.
ಹೊಸದಾಗಿ ಮದುವೆಯಾಗಿ ಗಂಡನೊಡನೆ ಪರದೇಶಕ್ಕೆ ಹಾರಿ ಬಂದು, ಸಾರ್ಥಕ ಸಂಸಾರ ನಡೆಸಿ ಒಂದು ಮಗುವಿನ ತಾಯಾಗಿ, ಹಸುಗೂಸಿನೊಡನೆ ಪ್ರಯಾಣ ಬೆಳೆಸಿದ್ದ ಒಂದಿಬ್ಬರು ಪ್ರಮದೆಯರ ಮುಖದಲ್ಲಿನ ಸಂತೃಪ್ತ ಭಾವ ನನ್ನ ಕಣ್ತುಂಬುತ್ತಿತ್ತು. ಹಸುಗಂದನನ್ನು ಮುದ್ದಿಸುತ್ತ ಲಲ್ಲೆಗರೆಯುತ್ತಿದ್ದ ಅವರನ್ನು ನೋಡುವುದೇ ಅಲ್ಲಿದ್ದ ಇತರ ಪ್ರಯಾಣಿಕರಿಗೆಲ್ಲ ಒಂದು ಆನಂದದ ವಿಚಾರವಾಗಿತ್ತು. ಒಂದಿಬ್ಬರಂತೂ ವಿಮಾನ ಇಳಿಯುವಾಗ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಯಾರೆಲ್ಲ ಬರಬಹುದು, ಅವರ ಮುಂದೆ ಹೇಗೆಲ್ಲ ಫೋಸು ಕೊಡಬೇಕೆಂಬುದರ ಬಗ್ಗೆ ದೊಡ್ಡ ಚರ್ಚೆಯನ್ನೇ ನಡೆಸಿದ್ದರು! ಹೀಗೆ ವಿಮಾನ ನಿಲ್ದಾಣದ ಸುಂದರ ದೃಶ್ಯಗಳನ್ನು ಆಸ್ವಾದಿಸುತ್ತಾ ಸಿ.ಅಶ್ವಥರ ಗಾನಾಮೃತದಲ್ಲಿ ಮೈ ಮರೆತಿದ್ದ ನನ್ನ ದೃಷ್ಟಿಯನ್ನು ಸೆಳೆದಿದ್ದು ಆತುರಾತುರವಾಗಿ ಬಂದ ಮೂವರು ಪ್ರಯಾಣಿಕರು. ಕುಳಿತುಕೊಳ್ಳಲು ಅಲ್ಲಿ ಇಲ್ಲಿ ಜಾಗ ಹುಡುಕಿ ಕೊನೆಗೆ ನನ್ನ ಪಕ್ಕದಲ್ಲಿ ಖಾಲಿ ಇದ್ದುದ್ದನ್ನು ಕಂಡು ಖುಷಿಯಿಂದ ಇತ್ತ ಬಂದರು.
ಮೂವರ ಹೆಗಲಲ್ಲಿಯೂ ನೇತಾಡುತ್ತಿದ್ದ ಲ್ಯಾಪ್ ಟಾಪ್ ಬ್ಯಾಗುಗಳಿಂದಲೇ ಅವರು ಪಕ್ಕಾ “ಸಾಫ್ಟ್ ವೇರ್ ತಂತ್ರಜ್ಞರು” ಎಂದು ಹೇಳಬಹುದಿತ್ತು. ಇಬ್ಬರು ಚಿಗುರುಮೀಸೆಯ ಯುವಕರು, ಮತ್ತೊಬ್ಬ ಮಧ್ಯವಯಸ್ಕ, ಬಹುಶಃ ಅವರ ಪ್ರಾಜೆಕ್ಟ್ ಮೇನೇಜರ್ ಇರಬಹುದು ಅಂದುಕೊಂಡೆ. ನನ್ನ ಪಕ್ಕ ಆ ಯುವಕರು ಆಸೀನರಾದ ನಂತರ ಕುಳಿತುಕೊಳ್ಳಲು ಬಂದ ಮಧ್ಯ ವಯಸ್ಕ ಒಮ್ಮೆ ನನ್ನತ್ತ ನೋಡಿದ, ನಾನೂ ಅವನನ್ನು ನೋಡಿದೆ, ಹಾವು ತುಳಿದವನಂತೆ ಒಮ್ಮೆಗೇ ಬೆಚ್ಚಿ ಬಿದ್ದ ಅವನು ಗಕ್ಕನೆ ಮುಖ ಅತ್ತ ತಿರುಗಿಸಿಕೊಂಡು ಬಿಟ್ಟ! ಅರೆ, ಇವನಿಗೇನಾಯ್ತು ಅಂದುಕೊಳ್ಳುವಷ್ಟರಲ್ಲಿ ಆ ಯುವಕರಿಗೆ ಪಿಸುಮಾತಿನಲ್ಲಿ ಅದೇನೋ ಹೇಳಿ ದುರ್ದಾನ ತೆಗೆದುಕೊಂಡ ದೂರ್ವಾಸನಂತೆ ಬರಬರನೆ ಅಲ್ಲಿಂದ ದೂರ ನಡೆದುಬಿಟ್ಟ!
ಅವನ ಅಸಾಮಾನ್ಯ ವರ್ತನೆಯನ್ನು ಕಂಡ ನನಗೆ ಅದೇನೋ ಅನುಮಾನ ಬಂದು ಅವನ ಚಲನವಲನಗಳನ್ನೇ ಗಮನಿಸಲಾರಂಭಿಸಿದೆ. ಸ್ವಲ್ಪ ದೂರದಲ್ಲಿ, ನಮ್ಮಿಂದ ಮೂರನೆಯ ಸಾಲಿನಲ್ಲಿ ಖಾಲಿಯಿದ್ದ ಜಾಗದಲ್ಲಿ ಕುಳಿತ ಅವನು ಗಹನವಾಗಿ ಅದೇನನ್ನೋ ಯೋಚಿಸಲಾರಂಭಿಸಿದ. ಅವನ ಎರಡೂ ಕೈಗಳ ಬೆರಳುಗಳು ಬಿಡುವಿಲ್ಲದಂತೆ ಒಂದಕ್ಕೊಂದು ಮಸೆಯುತ್ತಿದ್ದವು. ಅವನ ಮನಸ್ಸಿನಲ್ಲಿ ಅದೇನೋ ಭಯಂಕರ ತಾಕಲಾಟ ಆರಂಭವಾದ ಕುರುಹು ಅದಾಗಿತ್ತು. ಚೆನ್ನಾಗಿಯೇ ವಿಮಾನ ನಿಲ್ದಾಣದೊಳಕ್ಕೆ ತಮ್ಮೊಡನೆ ಬಂದ ಪ್ರಾಜೆಕ್ಟ್ ಮೇನೇಜರ್ ಹೀಗೆ ದೂರ ಹೋಗಿ ಕುಳಿತು ಒದ್ದಾಡುತ್ತಿದ್ದುದನ್ನು ಕಂಡ ನನ್ನ ಪಕ್ಕದಲ್ಲಿ ಕುಳಿತಿದ್ದ ಯುವಕರು ಅವರವರಲ್ಲೇ ಪಿಸುಮಾತಿನಲ್ಲಿ ಮಾತಾಡಿಕೊಳ್ಳುತ್ತಾ ತಮ್ಮೊಳಗೆ ನಗುತ್ತಿದ್ದರು. ನನಗೋ ಕೆಟ್ಟ ಕುತೂಹಲ! ಯಾಕೆ ಆ ಮಧ್ಯವಯಸ್ಕ ಹಾಗೆ ಹೋಗಿ ದೂರ ಕುಳಿತ? ನಾನು ಅವನನ್ನು ಗಮನಿಸುತ್ತಿದ್ದೇನೆಂದು ಅವನಿಗೆ ಅರ್ಥವಾಯಿತೋ ಏನೋ, ಅಲ್ಲಿಂದಲೂ ಎದ್ದವನ್ನು ನನ್ನತ್ತ ಒಮ್ಮೆ ಕೆಕ್ಕರಿಸಿ ನೋಡಿ ಮತ್ತಷ್ಟು ದೂರ ಹೋಗಿ ನನಗೆ ಕಾಣದಂತೆ ಕುಳಿತ. ಅರೆ ಇವನ, ಇವನ್ಯಾವನಪ್ಪಾ ಇವನು ದೂರ್ವಾಸ, ನನಗೂ ಅವನಿಗೂ ಏನು ಸಂಬಂಧ, ಇವನೇಕೆ ಹಾಗೆ ನನ್ನನ್ನು ಕೆಕ್ಕರಿಸಿ ನೋಡಿ ಸಿಟ್ಟಿನಿಂದ ಎದ್ದು ಹೋದ? ಹಲವಾರು ಪ್ರಶ್ನೆಗಳು ತಲೆಯಲ್ಲಿ ಸುತ್ತಲಾರಂಭಿಸಿದವು.
ವಿಮಾನದೊಳಕ್ಕೆ ಪ್ರವೇಶಿಸುವ ವೇಳೆಯಾಯಿತು, ಹೇಗಿದ್ದರೂ ನನ್ನದು ಕೊನೆಯ ಟಾಯ್ಲೆಟ್ ಪಕ್ಕದ ಸೀಟೆಂದು ಗೊತ್ತಿತ್ತಲ್ಲ, ನನಗೇನೂ ಆತುರವಿರಲಿಲ್ಲ, ಎಲ್ಲರೂ ಆತುರಾತುರವಾಗಿ ವಿಮಾನದೊಳಕ್ಕೆ ಹೊರಟರು. ನಾನು ಕೊನೆಯಲ್ಲಿ ಹೋಗೋಣವೆಂದು ಕುಳಿತೇ ಇದ್ದೆ. ನನ್ನ ಪಕ್ಕದಲ್ಲಿದ್ದ ಯುವಕರು ಅದಾವಾಗಲೋ ವಿಮಾನ ಹತ್ತಿದ್ದರು. ಇದ್ದಕ್ಕಿದ್ದಂತೆ ಅತ್ತಲಿಂದ ಬಂದ ಆ ದೂರ್ವಾಸ ಮತ್ತೊಮ್ಮೆ ನನ್ನತ್ತ ಕೆಕ್ಕರಿಸಿ ನೋಡುತ್ತಾ ವಿಮಾನದೊಳಕ್ಕೆ ಹೋದ. ಒಮ್ಮೆ ಗಂಭೀರವಾಗಿ ನೆಟ್ಟ ನೋಟದಿಂದ ಅವನತ್ತಲೇ ನೋಡಿದೆ, ಅಗ ಕಾಣಿಸಿತು, ಅವನ ಕುತ್ತಿಗೆಯ ಮೇಲಿದ್ದ ದೊಡ್ಡ ಕಪ್ಪು ಗುರುತು! ಇವನನ್ನು ಈ ಹಿಂದೆ ಎಲ್ಲಿ ನೋಡಿದ್ದೆ, ಉಹೂ, ನೆನಪಿಗೆ ಬರಲೊಲ್ಲದು, ದುಬೈನ ಯಾವುದಾದರೂ ಮಾಲುಗಳಲ್ಲಿ, ಬಾರುಗಳಲ್ಲಿ, ಹೋಟೆಲುಗಳಲ್ಲಿ ಅಥವಾ ಟ್ರಾಫಿಕ್ ಜಾಮಿನಲ್ಲಿ ಎಲ್ಲಾದರೂ ನಾನು ಇವನೊಡನೆ ಜಗಳವಾಡಿದ್ದೆನೇ, ಇಲ್ಲ. ಮತ್ತೆ ಇವನ್ಯಾರು, ಎಲ್ಲಿ ನೋಡಿದ್ದೆ?ವಿಠಲಾಚಾರ್ಯರ ಹಳೆಯ ಚಿತ್ರದ “ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಮುಖ ತೋರು” ಎಂಬ ಗೀತೆಯನ್ನು ನನಗೇ ತಿಳಿಯದಂತೆ ಗುನುಗಲಾರಂಭಿಸಿದ್ದೆ!!
ಕೊನೆಗೆ ಸಾವಕಾಶವಾಗಿ ಬಂದು ನನ್ನ ಸೀಟಿನಲ್ಲಿ ಕುಳಿತೆ, ಕುಲುಕಾಡುತ್ತಾ ಹೊರಟ ವಿಮಾನ ಭರ್ರನೆ ಮೇಲೇರಿ ವೇಗ ಪಡೆದುಕೊಂಡಂತೆ ಗಗನಸಖಿಯರು ತಮ್ಮ ತಳ್ಳುಗಾಡಿಗಳೊಡನೆ ಬಂದು ಎಲ್ಲರಿಗೂ ಪಾನೀಯ, ಆಹಾರಗಳನ್ನು ಸರಬರಾಜು ಮಾಡತೊಡಗಿದರು. ಮೂರು ಸೀಟಿನ ಕೊನೆಯ ಬದಿಯಲ್ಲಿ ಕುಳಿತಿದ್ದ ನನಗೆ ಅವರು ಹೋಗುವಾಗ ಬರುವಾಗಲೆಲ್ಲ ಭುಜಕ್ಕೋ ಕೈಯಿಗೋ ಅವರ ಕೈ ಕಾಲುಗಳು ತಗುಲಿದಾಗ ಒಂದು ಸಿಹಿಯಾದ ನಗುವನ್ನು ನನ್ನತ್ತ ಎಸೆದು “ಸ್ಸಾರಿ” ಎಂದು ಮುನ್ನಡೆಯುತ್ತಿದ್ದರು. ಇಂಥ ಸುಂದರ ನಗುವಿನ ಒಡತಿಯರನ್ನು ಆಯ್ಕೆ ಮಾಡಿದ ಆ ಮಲ್ಯನ ಕಿಂಗ್ ಫಿಷರ್ ನ ಮಾನವ ಸಂಪನ್ಮೂಲದವರನ್ನು ಮನದಲ್ಲೇ ಹೊಗಳುತ್ತಿದ್ದೆ. ಆ ನಂತರ ಶುರುವಾಯಿತು ನೋಡಿ, ಸ್ವಲ್ಪ ಸ್ವಲ್ಪವಾಗಿ ಪಾನೀಯಗಳನ್ನು ಗುಟುಕರಿಸಿದ ಮಂದಿ ಒಬ್ಬೊಬ್ಬರಾಗಿ ಟಾಯ್ಲೆಟ್ಟಿನ ಕಡೆಗೆ ಬರತೊಡಗಿದರು.
ಸುಮಾರು ಹದಿನೈದು ಜನ ಸಾಲಿನಲ್ಲಿ ಹೊಟ್ಟೆ ಹಿಡಿದು ನಿಂತದ್ದು ಕಂಡಾಗ ಇವರೇನು ವಿಮಾನದಲ್ಲಿ ಪ್ರಯಾಣಿಸಲು ಬಂದಿದ್ದಾರೋ ಅಥವಾ ಆ ವಿಮಾನದ ಟಾಯ್ಲೆಟ್ಟಿನ ಮಜಾ ಅನುಭವಿಸಲು ಬಂದಿದ್ದಾರೋ ಎಂಬ ಅನುಮಾನ ಮನದಲ್ಲಿ ಸುಳಿದು ಮೀಸೆಯಡಿಯಲ್ಲೇ ನಗುತ್ತಿದ್ದೆ. ಎರಡು ಪೆಗ್ ಏರಿಸಿದವನಿಗೆ ಸ್ವಲ್ಪ ಹಾಗೆಯೇ ಜೋಂಪು ಹತ್ತಿ ಕಣ್ಮುಚ್ಚಿದರೆ ಬಂದು ಹೋಗುವವರೆಲ್ಲ ಬೇಕಾಬಿಟ್ಟಿ ನನ್ನ ಭುಜಕ್ಕೆ ತಮ್ಮ ಕೈಗಳನ್ನು ತಗುಲಿಸಿ, ಸೀಟಿಗೊರಗಿದಾಗ ಅವರ ದೇಹದ ಭಾರವನ್ನೆಲ್ಲ ಬಿಟ್ಟು, ನನ್ನ ನಿದ್ದೆಯೆಲ್ಲ ಹಾರಿ ಹೋಗಿ, ನನ್ನ ಭುಜವೊಂದು ಸಾರ್ವಜನಿಕ ಆಸ್ತಿಯಾಗಿ ಹೋಯಿತು! ಈ ಪೀಕಲಾಟದಿಂದ ಸಾಕಾಗಿ ಜೀವನದಲ್ಲಿ ಮತ್ತಿನ್ನೆಂದೂ ಈ ಟಾಯ್ಲೆಟ್ ಪಕ್ಕದ ೩೫ನೆ ನಂಬರಿನ ಸೀಟಿನಲ್ಲಿ ಕುಳಿತು ಪ್ರಯಾಣಿಸಬಾರದೆಂದು ಭೀಷ್ಮ ಪ್ರತಿಜ್ಞೆ ಮಾಡಿ ಬಿಟ್ಟೆ!
ಕೊನೆಗೂ ಈ ಪ್ರಯಾಸದ ಪ್ರಯಾಣ ಮುಗಿದು ನನ್ನ ನಿದ್ರಾಭಂಗ ಮಾಡಿದವರನ್ನೆಲ್ಲ ಮನಸ್ಸಿನಲ್ಲೆ ಶಪಿಸುತ್ತ ಎದ್ದು ನಿಧಾನವಾಗಿ ಹೊರ ನಡೆದೆ. ವಿಮಾನದಿಂದ ಕೆಳಗಿಳಿದವನನ್ನು ನಮ್ಮ ಉದ್ಯಾನ ನಗರಿಯ ತಂಪುಗಾಳಿ ಮುಖ ಸವರಿ ಸ್ವಾಗತ ಕೋರಿದಾಗ ಮನ ಉಲ್ಲಸಿತವಾಯಿತು, ಪ್ರಯಾಣದ ಆಯಾಸವೆಲ್ಲಾ ಕ್ಷಣದಲ್ಲಿ ಮಂಗ ಮಾಯ! ವಲಸೆ ವಿಭಾಗದ ಉರಿಮೂತಿಯ ಅಧಿಕಾರಿ ಸ್ವಲ್ಪ ಹರಿದಿದ್ದ ನನ್ನ ಪಾಸ್ಪೋರ್ಟ್ ನ ಮೊದಲ ಪುಟವನ್ನು ತೋರಿಸಿ “ನೀವು ಹೊಸ ಪಾಸ್ ಪೋರ್ಟ್ ತೆಗೆದುಕೊಂಡಲ್ಲಿ ಮಾತ್ರ ಮುಂದಿನ ಸಲ ಪ್ರಯಾಣಿಸಬಹುದು, ಹುಶಾರಾಗಿರಿ” ಎಂದದ್ದನ್ನು ಕೇಳಿ ಹರಕೆಯ ಕುರಿಯಂತೆ ಗೋಣು ಅಲ್ಲಾಡಿಸಿ ಹೊರ ಬಂದು ನಿಟ್ಟುಸಿರು ಬಿಟ್ಟೆ. ಬ್ಯಾಗೇಜ್ ಕೌಂಟರಿಗೆ ಬಂದು ನನ್ನ ಸೂಟ್ಕೇಸಿಗಾಗಿ ಕಾಯುತ್ತಿದ್ದೆ, ಪಕ್ಕದಲ್ಲಿ ನೋಡಿದರೆ ಅದೇ ಉರಿ ಮೂತಿಯ ಸಿಂಗಳೀಕ! ನನ್ನನ್ನು ಕಂಡವನೆ ಥಟ್ಟನೆ ಹೋಗಿ ದೂರ ನಿಂತ. ಅರೆ, ಮತ್ತೆ ಅವನನ್ನೇ ಗಮನವಿಟ್ಟು ನೋಡಿದೆ, ಅವನಾರೆಂದು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದೆ, ಸ್ವಲ್ಪ ಸ್ವಲ್ಪವೇ ಅವನ ಮುಖ ನನ್ನ ಸ್ಮೃತಿಪಟಲದ ಮೇಲೆ ಮೂಡಲಾರಂಭಿಸಿತು, ಎಲಾ ನನ್ನ ನೆನಪಿನ ಶಕ್ತಿಯೇ, ಫಟ್ಟೆಂದು ನೆನಪಿಗೆ ಬಂದೇ ಬಿಟ್ಟಿತು, ಅವನು ಉತ್ತರ ಪ್ರದೇಶದ ಎಂ.ಕೆ.ತಿವಾರಿ,(ಹೆಸರು ಬದಲಾಯಿಸಲಾಗಿದೆ).
ಸುಮಾರು ಹತ್ತು ವರ್ಷಗಳ ಹಿಂದೆ, ನಾನು ಉದ್ಯಾನ ನಗರಿಯ ಹಳೆ ವಿಮಾನ ನಿಲ್ದಾಣದ ರಸ್ತೆಯಲ್ಲಿನ ಬಹು ರಾಷ್ಟ್ರೀಯ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದಾಗ ಪ್ರತಿ ದಿನ ಅಲ್ಲೊಂದು ಇಲ್ಲೊಂದು ಕಂಪ್ಯೂಟರ್ ಭಾಗಗಳು, ಲ್ಯಾಪ್ ಟಾಪ್ ಗಳು ಕಾಣೆಯಾದ ಬಗ್ಗೆ ದೂರುಗಳು ಬರುತ್ತಿದ್ದವು. ಏಳಂತಸ್ತಿನ ಆ ಕಟ್ಟಡದ ಪ್ರತಿಯೊಂದು ಮಹಡಿಯಲ್ಲೂ ಒಬ್ಬೊಬ್ಬ ಭದ್ರತಾ ರಕ್ಷಕ ೨೪ ಘಂಟೆಯೂ ಇರುತ್ತಿದ್ದರು, ಎಲ್ಲೆಡೆ ಸಿಸಿಟಿವಿ ಕ್ಯಾಮರಾಗಳು, ಆಕ್ಸೆಸ್ ಕಂಟ್ರೋಲ್ ಬಾಗಿಲುಗಳು, ದೊಡ್ಡದಾದ ಕಂಟ್ರೋಲ್ ರೂಮ್, ಎಲ್ಲ ಚಲನವಲನಗಳನ್ನೂ ಗಮನಿಸಬಹುದಾದ ಅತ್ಯಂತ ಸುಧಾರಿತ ವ್ಯವಸ್ಥೆ ಇವೆಲ್ಲ ಇದ್ದೂ ಕೂಡಾ ಪ್ರತಿ ದಿನ ಕಳ್ಳತನಗಳು ನಡೆಯುತ್ತಲೇ ಇದ್ದವು. ನಮಗೆ ಸಂಸ್ಥೆಯ ಮುಖ್ಯಸ್ಥರಿಂದ ಪ್ರತಿದಿನ ಮಂಗಳಾರತಿ, ಸಹಸ್ರನಾಮಾರ್ಚನೆಗಳು ಆಗುತ್ತಲೇ ಇದ್ದವು. ಕೊನೆಗೆ ಪಣ ತೊಟ್ಟು ಹೇಗಾದರೂ ಆ ಚಾಣಾಕ್ಷ ಕಳ್ಳರನ್ನು ಹಿಡಿಯಲೇ ಬೇಕೆಂದು ತಂತ್ರ ರೂಪಿಸಿ ಖೆಡ್ಡಾ ತೋಡಿದಾಗ ಹಳ್ಳಕ್ಕೆ ಬಿದ್ದ ಕಳ್ಳ ಆನೆ, ಈ ತಿವಾರಿ. ಅದೇ ಸಂಸ್ಥೆಯಲ್ಲಿ ನೆಟ್ವರ್ಕ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಅವನು, ತನ್ನ ದುರ್ನಡತೆಯಿಂದಾಗಿ ಕೆಲಸ ಕಳೆದುಕೊಂಡಿದ್ದ, ಆದರೆ ಅವನ ಬಗ್ಗೆ ಭದ್ರತಾ ವಿಭಾಗಕ್ಕೆ ಯಾವುದೇ ಮಾಹಿತಿಯಿರಲಿಲ್ಲ. ತನ್ನ ಆಕ್ಸೆಸ್ ಕಾರ್ಡ್ ಹಿಂದಿರುಗಿಸದೆ ಪ್ರತಿದಿನ ಎಲ್ಲ ಕೆಲಸಗಾರರೂ ಹೋದ ನಂತರ ನಮ್ಮ ಭದ್ರತಾ ರಕ್ಷಕರೊಂದಿಗೆ ನಗು ನಗುತ್ತಾ ಮಾತನಾಡಿ ಒಳ ಹೋಗುತ್ತಿದ್ದ ಇವನು ಒಂದು ಕಡೆಯಿಂದ ನೂರಾರು ಮೆಮೋರಿ, ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ಗಳನ್ನು ಅಲ್ಲಿಂದ ಲಪಟಾಯಿಸಿದ್ದ. ಇದರ ಅರಿವಿಲ್ಲದ ರಕ್ಷಕರು ಹೋಗುವಾಗ ಬರುವಾಗಲೆಲ್ಲ ಅವನಿಗೆ ಸೆಲ್ಯೂಟು ಹೊಡೆಯುತ್ತಿದ್ದರು. ಅವನು ನಿರಾತಂಕವಾಗಿ ತನ್ನ ದುರುಳ ಕಾರ್ಯವನ್ನು ಮುಂದುವರೆಸಿದ್ದ. ಒಂದು ದಿನ ರಾತ್ರಿ ೧ ಘಂಟೆಯಲ್ಲಿ ಧಿಡೀರ್ ಭೇಟಿಯಿತ್ತ ನನ್ನ ಕೈಗೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಅವನಿಗೆ ಸರಿಯಾಗಿ ನಾಲ್ಕು ಗೂಸಾ ಕೊಟ್ಟು, ವಿಮಾನಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪೊಲೀಸರ ವಶಕ್ಕೊಪ್ಪಿಸಿದ್ದೆ. ಅವರ ರಾಜಾತಿಥ್ಯದ ನಂತರ ತಿವಾರಿ ತನ್ನ ಕಳುವುಗಳನ್ನೆಲ್ಲ ಒಪ್ಪಿಕೊಂಡಿದ್ದ, ಸುಮಾರು ೫೦ ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಅವನ ಮನೆ ಜಫ್ತಿ ಮಾಡಿ ವಶಪಡಿಸಿಕೊಳ್ಳಲಾಗಿತ್ತು. ಅವನಿಗೆ ಸಹಕರಿಸಿದ ಆರೋಪದ ಮೇಲೆ ಇನ್ನಿಬ್ಬರು ಬಿಹಾರಿ ಬಾಬುಗಳೂ ಬಂಧನಕ್ಕೊಳಗಾಗಿದ್ದರು. ಅವರ ಅಪರಾಧಗಳು ಸಾಬೀತಾಗಿ ನ್ಯಾಯಾಲಯದಲ್ಲಿ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆಯೂ ಆಗಿತ್ತು. ಪೊಲೀಸ್ ಅಧಿಕಾರಿಯೊಬ್ಬರು ಸಿಟ್ಟಿನ ಭರದಲ್ಲಿ ಅವನಿಗೆ ತಮ್ಮ ಲಾಠಿಯಿಂದ ಹೊಡೆದಾಗ ಅವನ ಕುತ್ತಿಗೆಯ ಮೇಲೆ ಬಲವಾದ ಗಾಯವಾಗಿ ದಪ್ಪ ಕಪ್ಪನೆಯ ಮಚ್ಚೆ ಮೂಡಿತ್ತು. ಅದೇ ಗುರುತು ಅವನು ಯಾರೆಂದು ನನಗೆ ಮನವರಿಕೆ ಮಾಡಿಕೊಟ್ಟಿತ್ತು.
ನನ್ನ ಸೂಟ್ಕೇಸ್ ಎತ್ತಿಕೊಂಡು ಅಚೆ ಬರುವಷ್ಟರಲ್ಲಿ ಆಸಾಮಿ ಎಸ್ಕೇಪ್! ಅಂದು ನನ್ನ ಕೈಗೆ ಕಳ್ಳತನ ಮಾಡಿ ಸಿಕ್ಕಿ ಬಿದ್ದು ಜೈಲಿಗೆ ಹೋಗಿದ್ದವನೊಬ್ಬ ಹೀಗೆ ಅಚಾನಕ್ಕಾಗಿ ದುಬೈ ವಿಮಾನನಿಲ್ದಾಣದಲ್ಲಿ ಭೇಟಿಯಾಗುತ್ತಾನೆಂದು ನಾನು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ” ಈ ಭೂಮಿ ಬಣ್ಣದ ಬುಗುರಿ, ಆ ಶಿವನೆ ಚಾಟಿ ಕಣೋ” ಹಾಡನ್ನು ಗುನುಗಿಕೊಳ್ಳುತ್ತಾ ಮೇರು ಟ್ಯಾಕ್ಸಿ ಹತ್ತಿ ’ನಂದಿನಿ ಲೇಔಟಿಗೆ ನಡಿ ಗುರುವೆ’ ಎಂದು ಹೇಳಿ ಹಿಂದಿನ ಸೀಟಿಗೊರಗಿ ಕಣ್ಮುಚ್ಚಿದೆ.

‍ಲೇಖಕರು avadhi

May 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Manjunatha HT

    ನನಗೇ ಗೊತ್ತಿಲ್ಲದೆ ನನ್ನ ಲೇಖನ “ಅವಧಿ”ಯಲ್ಲಿ ಬಂದಿದ್ದು ನೋಡಿ ಖುಷಿಯಾಯಿತು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Manjunatha HTCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: