ದೆಹಲಿಯಲ್ಲಿ ‘ಕಳ್ಳ’

ನಾಟಕದ “ಕಳ್ಳ” ಯಾಕೆ ಜನರ ಮನ ಗೆಲ್ಲುತ್ತಾನೆ ?

-ಗುರು ಬಾಳಿಗ

untitled

ದೆಹಲಿಯಲ್ಲಿ ಬಿ. ಜಯಶ್ರೀ ಯವರ ನಿರ್ದೇಶನದ ಕನ್ನಡ ನಾಟಕ “ಸದಾರಮೆ”ಯಲ್ಲಿ ಜಯಶ್ರೀಯವರ ಕಳ್ಳ ಪಾತ್ರ ನೋಡಿ ನನಗೆ ಮೇಲಿನ ಯೋಚನೆ ಬಂತು.

ನಾವೆಲ್ಲ “ಹರಟೆ ಕಟ್ಟೆ” ರದ್ದು ಮಾಡಿ ನಾಟಕಕ್ಕೆ ಹೋಗಿದ್ದೆವು.

ಗುಬ್ಬಿ ವೀರಣ್ಣನ ಮೊಮ್ಮಗಳು ಜಯಶ್ರೀ, ವೀರಣ್ಣ ಮಾಡುತ್ತಿದ್ದ “ಕಳ್ಳ”ನ ಪಾತ್ರವನ್ನು ನಿರ್ವಹಿಸಿದ ವಿಷಯವಾಗಿ ಬರೆಯಲು ನನ್ನ ಬಳಿ ಪದಗಳಿಲ್ಲ ಅಂತ ಅಷ್ಟೆ ಬರೆದು ಬಿಟ್ಟರೆ ಅವರ ಪಾತ್ರಕ್ಕೆ ಅದು ನ್ಯಾಯವಲ್ಲ.

“ಸದಾರಮೆ” ನಾಟಕದ ಕತೆ ಎಲ್ಲರಿಗೂ ತಿಳಿದಿರಬಹುದು. ತಿಳಿಯದವರಿಗಾಗಿ ಸಂಕ್ಷಿಪ್ತ ಕತೆ.

ವೇದಾಂತದ ಓದಿಗೆ ಮರುಳಾಗಿರುವ ರಾಜಕುಮಾರ ಜಯವೀರ ತಾನು ಮದುವೆಯಾಗೆನು ಎಂದು ಮುನಿಸಿನಲ್ಲಿರುವಾಗ ಅವನಿಗೆ ಸದಾರಮೆಯ ಭೇಟಿಯಾಗುತ್ತದೆ. ರಾಜಕುಮಾರ ಅವಳನ್ನು ಮದುವೆಯಾಗಲು ಸಫಲನಾದರೂ ಸದಾರಮೆಯ ತಂದೆ ಬಂಗಾರು ಶ್ರೇಷ್ಠಿ ಮತ್ತು ಅಣ್ಣ ಆದಿ ಮೂರ್ತಿಯ ದುರಾಸೆ ಮತ್ತು ಕುಟಿಲತನ ಗಳಿಂದ ರಾಜ್ಯ ಕಳೆದು ಕೊಳ್ಳಬೇಕಾಗಿ ಬರುತ್ತದೆ.

galleryರಾಜ್ಯ ಭ್ರಷ್ಟನಾಗಿ ಪರವೂರಿಗೆ ಪಯಾಣಿಸುವಾಗ ನಡು ಕಾಡು ಹಾದಿಯಲ್ಲಿ ಸದಾರಮೆಗೆ ಆಯಾಸವೂ ಹಸಿವೂ ಕಾಡುತ್ತದೆ. ತನ್ನ ಕರವಸ್ತ್ರವನ್ನು ಗಂಡನಿಗೆ ಕೊಟ್ಟು ಅದನ್ನು ಹತ್ತಿರದ ನಗರವೊಂದರಲ್ಲಿ ಮಾರಿ ಊಟ ತರಲು ಗಂಡನಿಗೆ ವಿನಂತಿಸುತ್ತಾಳೆ ಸದಾರಮೆ.

ಗಂಡ ಸದಾರಮೆಯನ್ನು ಅಲ್ಲಿ ವಿಶ್ರಮಿಸಲು ಬಿಟ್ಟು ತೆರಳುತ್ತಾನೆ. ಕರವಸ್ತ್ರವನ್ನು ವಿಕ್ರಯಿಸಲು ಒಬ್ಬ ಶ್ರೀಮಂತ ಕುವರ ಕಲಹಂಸ ನ ಬಳಿ ಹೋದಾಗ, ಕರವಸ್ತ್ರ ಇಷ್ಟು ಸುಂದರವಾಗಿರಬೇಕಾದರೆ ಅದನ್ನು ರಚಿಸಿದವಳು ಎಷ್ಟು ಸುಂದರವಾಗಿರಬಹುದು ಎಂದು ಯೋಚಿಸಿ ಅವಳನ್ನು ವಶ ಮಾಡಿ ಕೊಳ್ಳಲೋಸುಗ ಜಯವೀರನನ್ನು ಬಂಧಿಸಿ ಕುಂತಿಣಿ ಎಂಬ ಕೆಟ್ಟ ಮುದುಕಿಯ ನೆರವಿನಿಂದ ಮೋಸದಿಂದ ತನ್ನ ಮಹಲಿಗೆ ಕರೆಯಿಸಿ ಕೊಳ್ಳುತ್ತಾನೆ. ಕಲಹಂಸನಿಂದ ಪಾರಾಗಲು ಸದಾರಮೆ ಒಲಿದ ಹಾಗೆ ಸೋಗು ಹಾಕುತ್ತಲೇ ತಾನು ಮೌನಗೌರಿ ವೃತವನ್ನು ಆಚರಿಸುವುದರಿಂದ ಒಂದು ತಿಂಗಳ ಕಾಲಾವಕಾಶ ಗಳಿಸಿಕೊಳ್ಳುತ್ತಾಳೆ. ಜೊತೆಗೆ ಜಯವೀರನ ಬಿಡುಗಡೆಯೂ ಆಗುತ್ತದೆ.

ಸದಾರಮೆಯನ್ನು ಹುಡುಕುತ್ತಾ ಅಲೆಯುವ ಜಯವೀರನಿಗೆ ಅವಳು ವಾಸಿಸುವ ಮಹಲಿನ ಬಳಿಗೆ ಬಂದಾಗ ಮಾಳಿಗೆ ಮೇಲಿಂದ ಸದಾರಮೆ ನೋಡಿ ಅವರ ಮಾತುಕತೆ ನಡೆಯುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾತ್ರಿ ೧೨ ಗಂಟೆಗೆ ನೂಲೇಣಿ ಮತ್ತು ಗಂಡುಡುಗೆ ತೆಗೆದುಕೊಂಡು ಬಂದು ಕರತಾಡನ ಸಂಕೇತ ಮಾಡುವಂತೆ ತಿಳಿಸುತ್ತಾಳೆ. ಒಬ್ಬ ಕಳ್ಳ ಮರೆನಿಂತು ಅದನ್ನು ಕೇಳಿಸಿಕೊಳ್ಳುತ್ತಾನೆ. ಜೊತೆಗೆ ಆಯಾಸದಿಂದ ಜಯವೀರ ಮಲಗಿರುವಾಗ ಸದಾರಮೆಯನ್ನು ವಂಚಿಸಿ ಕರಕೊಂಡು ಹೋಗುತ್ತಾನೆ. ಸದಾರಮೆ ಹೊಟ್ಟೆನೋವಿನ ನಟನೆ ಮಾಡಿ ಕಳ್ಳನಿಂದ ತಪ್ಪಿಸಿಕೊಳ್ಳುತ್ತಾಳೆ. ಗಂಡು ವೇಷದಲ್ಲಿರುವ ಅವಳು ಇನ್ನೊಂದು ರಾಜ್ಯಕ್ಕೆ ಬಂದು ಅಲ್ಲಿ ಒಬ್ಬ ರಾಜಕುಮಾರಿಯನ್ನು ವರಿಸಿದ ನಾಟಕವಾಡುತ್ತಾಳೆ. ರಾಜಕುವರಿಗೆ ತನ್ನ ರಹಸ್ಯವನ್ನು ತಿಳಿಸಿ ಸಹಕರಿಸುವಂತೆ ವಿನಂತಿಸುತ್ತಾಳೆ.

ಛತ್ರದಲ್ಲಿ ತೂಗು ಹಾಕಲ್ಪಟ್ಟಿರುವ ಸದಾರಮೆಯ ಭಾವ ಚಿತ್ರವನ್ನು ಅಲ್ಲಿಗೆ ಬರುವ ಕಲಹಂಸನೂ ಕಳ್ಳನೂ ನೋಡಿ ಈಕೆ ಮೋಸಗಾರ್ತಿ, ಇವಳ ಚಿತ್ರ ಇಲ್ಲೇಕೆ ಎಂದಾಗ ಅವರನ್ನು ಬಂಧಿಸಲಾಗುತ್ತದೆ. ಜಯವೀರನೂ ಅಲ್ಲಿಗೆ ಬಂದು ಭಾವಚಿತ್ರವನ್ನು ನೋಡಿ ವ್ಯಾಕುಲನಾಗುತ್ತಾನೆ.

ಅವರೆಲ್ಲರ ವಿಚಾರಣೆ ಗಂದುವೇಶದ ಸದಾರಮೆ ಮತ್ತು ರಾಜಕುಮಾರಿಯ ಮುಂದೆ ನಡೆಯುತ್ತದೆ. ಕೊನೆಗೆ ಎಲ್ಲವೂ ಸುಖಾಂತ.

ಅಷ್ಟು ಒಳ್ಳೆಯ ನಾಟಕವನ್ನು ಹೀಗೆ ಉಸಿರು ಬಿಗಿದು ಬರೆಯಲು ನೋವಾಗುತ್ತದೆ.

ನಟರೇ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವುದು. ಉತ್ತಮ ಹಾಡುಗಳು, ನಟನೆ ಮತ್ತು ನಿರ್ದೇಶನ, ಉಡುಪು ವಿನ್ಯಾಸ ಎಲ್ಲ ಚೆನ್ನಾಗಿತ್ತು. ಆದಿ ಮೂರ್ತಿಯ ಪಾತ್ರದಲ್ಲಿ ಡಿಂಗ್ರಿ ನಾಗರಾಜ್ ಮತ್ತು ಬಂಗಾರು ಶ್ರೇಷ್ಟಿಯ ಪಾತ್ರದಲ್ಲಿ ಶ್ರೀನಿವಾಸ್ ನಟನೆ ಬಹಳ ಸಹಜವಾಗಿತ್ತು. ಸದಾರಮೆ ಚೆನ್ನಾಗಿದ್ದಳು. ಆದರೆ ಆದಿ ಮೂರ್ತಿಯ ಹೆಂಡತಿಯ ಪಾತ್ರ ಮಾಡಿದವಳು ಇನ್ನೂ ಚೆನ್ನಾಗಿದ್ದಳು. ಹಾರ್ಮೋನಿಯಮ್ ಸ್ವಲ್ಪ ಗದ್ದಲ ಅಂತ ಅನಿಸಿತು. ಆದರೆ ಹೆಚ್ಚಲ್ಲ. ಇದೇ ನಾಟಕವನ್ನು ಗುಬ್ಬಿ ಕಂಪನಿಯಲ್ಲಿ ಡಾ. ರಾಜ್, ಬಿ.ವಿ. ಕಾರಂತರಂತಹ ದಿಗ್ಗಜರೂ ಮಾಡಿದ್ದರು ಎಂದು ಹೊಳೆದು ಚಳಕ್ಕ್ ಎಂದಿತು.

“ಕಳ್ಳ” ಸೂಪರ್. ಎಲ್ಲರಿಗೂ ಸಭ್ಯ ಸಂಸ್ಕೃತ ಮಿಶ್ರಿತ ನುಡಿಯಾದರೆ ಕಳ್ಳನಿಗೆ ಇಂಗ್ಲಿಶ್ ಹಿಂದಿ ಎಲ್ಲ ಬರುತ್ತೆ. ಕಳ್ಳನ ಉಡುಪು, ನಟನೆ, ಹಾಸ್ಯ, ಮಾತು ಎಲ್ಲವೂ ಉಳಿದೆಲ್ಲಕ್ಕಿಂತ ಹೆಚ್ಚು ತೂಕದ್ದು. ಜಯಶ್ರೀ “ಕಳ್ಳ” ಗುಬ್ಬಿ ವೀರಣ್ಣನ ಕಳ್ಳ ಹೇಗಿದ್ದಿರಬಹುದು ಎಂಬ ಒಂದು ಕಲ್ಪನೆಯನ್ನು ನನ್ನಲ್ಲಿ ಹಚ್ಚಿ ಬಿಟ್ಟ.

ಜೊತೆ ಜೊತೆಗೆ ಎಲ್ಲ ನಾಟಕದ ಕಳ್ಳರು ಯಾಕಿಷ್ಟು ಮನ ಸೆಳೆಯುತ್ತಾರೆ ಎನ್ನುವ ಯೋಚನೆ.

“ಕಳ್ಳ” ಯಾವಾಗಲೂ ನಾಟಕಕಾರನ ಟ್ರಂಪ್. ಅವನು ತನ್ನ ನಾಟಕದ ಉಳಿದ ಪಾತ್ರಗಳ ಕೊರತೆಗಳನ್ನು ಈ ಪಾತ್ರದ ಮೂಲಕ ತುಂಬಿ ಕೊಡುತ್ತಾನೆ. ಕಳ್ಳ ತಾನು ಕಳ್ಳನೆಂದು ಹೇಳಲು ಹೇಸುವುದಿಲ್ಲ. ಜೊತೆಗೆ ಉಳಿದವರೇನು ಸಾಚಾ? ಎನ್ನುವ ಪಶ್ನೆ ಹಾಕಿ ದಂಗು ಬಡಿಸುತ್ತಾನೆ. ಹೇಳಲಾಗದ ಸತ್ಯಗಳನ್ನು ಹೇಳಿಸಲು ಕಳ್ಳನೇ ಬೇಕು. ಅಷ್ಟು ನಿರ್ಭಿಡೆಯಿಂದ ಮಾತನಾಡುವ ಪಾತ್ರ ಸಭಿಕರಿಗೆ ಸೀಟಿ ಹೊಡೆಯುವಷ್ಟು ಖುಷಿ ನೀಡುತ್ತದೆ.

ಚೋರ ಚರಣದಾಸ ನೆನಪಾಗುತ್ತಾನೆ. ಆದರೆ ಜಯಶ್ರೀಯ “ಕಳ್ಳ” ಅವನ ನೆನಪನ್ನು ಮುಸುಕಾಗಿಸುತ್ತಾನೆ.

ಬಾಲಂಗೋಚಿ: ಎಲ್ಲ ಭಾರತೀಯ ಕತೆಗಳಲ್ಲೂ ರಾಜರು ರಾಜ್ಯ ಭ್ರಷ್ಟರಾಗಿ ಕಾಡಿಗೆ ತೆರಳುವುದು ಏಕೆ?

‍ಲೇಖಕರು avadhi

June 27, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This