ಸೊಂಟದ ಕೆಳಗೆ ಜೀನ್ಸ್ ತೊಟ್ಟಿದ್ದ ತೆಳ್ಳಗೆ ಬೆಳ್ಳಗೆ ಬಳ್ಳಿಯಂತೆ ಬಳುಕುತ್ತಿದ್ದ ಹುಡುಗಿಯೊಬ್ಬಳು ಕೈಗೆ ಸಿಗದಿದ್ದರೂ ಹಠಕ್ಕೆ ಬಿದ್ದವಳಂತೆ ತುದಿಗಾಲಲ್ಲಿ ನಿಂತು ಘಂಟೆ ಹೊಡೆಯೊ ಹುಚ್ಚು ಪ್ರಯತ್ನದಲ್ಲಿದ್ದಳು. ಘಂಟೆ ಹೊಡೆಯುವ ಸಂಭ್ರಮದಲ್ಲಿ ಆಕಾಶದೆತ್ತರಕ್ಕೆ ಚಾಚಿದ್ದ ಕೈಯಿಂದಾಗಿ ಅವಳು ತೊಟ್ಟಿದ್ದ ಮೇಲಂಗಿ ಮೊದ ಮೊದಲು ಸ್ವಲ್ಪ ಹೋರಾಡಿದಂತೆ ಮಾಡಿ ಕೊನೆಗೆ ಇನ್ನವಳ ದೇಹ ಸಿರಿಯನ್ನು ಮುಚ್ಚಿಡಲು ತನ್ನಿಂದ ಸಾದ್ಯವಿಲ್ಲವೆನ್ನುವಂತೆ ಕೈಚೆಲ್ಲಿಬಿಟ್ಟಿತು. ಅಬ್ಬಬ್ಬಾ ಅದೇನು ಮೈಮಾಟ! ನೋಡಿದರು ನೋಡದಂತೆ ಕಣ್ಣು ಮುಚ್ಚಿಕೊಳ್ಳದೆ ಬೇರೆ ದಾರಿ ಇರಲಿಲ್ಲಾ ನನಗೆ, ಅಷ್ಟು ಹತ್ತಿರದಲ್ಲಿದ್ದಳು ಅವಳು.
ಅರೇ ನಾನ್ಯಾಕೆ ಕಣ್ಣು ಮುಚ್ಚಿದೆ? ನಿಜವಾಗ್ಲು ಗೊತ್ತಿಲ್ಲ! ನಾನ್ ಅವಳನ್ನ ನೋಡಿದ್ದು ಬೇರೆಯವರಿಗೆ ಗೊತ್ತಾಗಿಬಿಡುತ್ತೆ ಅನ್ನೋ ಮುಜುಗರನಾ? ಅಪ್ಪನಿಗೆ ಯಾರಾದ್ರು ಹೇಳಿಬಿಡ್ತಾರೆ ಅನ್ನೋ ಭಯಾನಾ? ಅಂತದೆಲ್ಲಾ ನೋಡಬಾರದು ಅಂತ ಅಮ್ಮ ಹೇಳಿಕೊಟ್ಟಿದ್ದಕ್ಕಾ?ಗೊತ್ತಿಲ್ಲ! ಹಂಗಂತ ಇಂತದೆಲ್ಲಾ ನಡೆದಿದ್ದು ಇದೆ ಮೊದಲೆನಲ್ಲಾ. ಆದರೇ ಮೊದ್ಲೆಲ್ಲಾ ಹಿಂಗಾಗ್ತಿರಲಿಲ್ಲಾ. ಈಗೀಗ ಇಂತದೆಲ್ಲಾ ನೋಡಿದಾಗ ಎನೋ ಒಂತರ. ಯಾಕ ಹೀಗೆ? ಎಷ್ಟೋ ಸರಿ ಕೇಳಿದ್ದಿನಿ, ನನ್ನೊಳಗಿನ ನನ್ನನ್ನೇ. ಈ ವಯಸ್ಸೇ ಹೀಗೆನೋ? ಎಲ್ಲೋ ಕೇಳಿದ್ದ ನೆನಪು. ಆದರೆ ಇದನ್ನೆಲ್ಲಾ ಯಾರ ಹತ್ತಿರ ಹೇಳಿಕೊಳ್ಳಲಿ? ನನ್ನ ವಯಸ್ಸಿನವರು ಯಾರಿದ್ದಾರಿಲ್ಲಿ?
ನಂಗೆ ನೆನಪಿರಂಗೆ ನನಗಾಗಿನ್ನು ಆರೇಳು ವರ್ಷ ಅನ್ಸುತ್ತೆ. ಅಪ್ಪ ಅರ್ಚಕ, ಪ್ರತಿದಿನ ಬೆಳಗಿನ ಜಾವ ಬೇಗ ಎದ್ದು ದೇವಸ್ಥಾನಕ್ಕೆ ಹೋಗ್ತಿದ್ರು. ದೇವಸ್ಥಾನ ಶುಚಿಗೊಳಿಸಿ ದೇವರ ಅಭಿಷೇಕ, ಅಲಂಕಾರ, ಪೂಜೆ, ಪ್ರಸಾದ, ಮಹಾಮಂಗಳಾರತಿ ಮಾಡೋದು ಅವರ ನಿತ್ಯದ ಕಾಯಕ. ಒಂದೊಂದು ಸಾರಿ ಹಠ ಮಾಡಿ ಅಪ್ಪನ ಜೊತೆಗೆ ನಾನು ದೇವಸ್ಥಾನಕ್ಕೆ ಹೋಗ್ತಿದ್ದೆ. ಅಪ್ಪ ದೇವರಿಗೆ ಅಲಂಕಾರ ಮಾಡೊವಾಗ ನನ್ನ ಕೈಯಲ್ಲು ಒಂದಿಷ್ಟು ಹೂ ಕೊಡ್ತಿದ್ರು. ನಾನು ದೇವರ ತಲೆ ಮೇಲೆ ನಿಧಾನಕ್ಕೆ ಒಂದೊಂದೆ ಹೂ ಇಟ್ಟು ಅದು ಕೆಳಗೆ ಬೀಳದೆ ಇದ್ದಾಗ ಚಪ್ಪಾಳೆ ತಟ್ತಿದ್ದೆ, ಅಪ್ಪ ತಮ್ಮೊಳಗೆ ನಗ್ತಿದ್ರು. ಆಗೆಲ್ಲಾ ಎನೋ ಖುಷಿ ಅದನ್ನೆಲ್ಲಾ ಮಾಡೋಕೆ. ಅದು ಒಂತರ ಆಟ ಅನ್ಸಿರಬೇಕು ಆ ವಯಸ್ಸಲ್ಲಿ ನನಗೆ. ಆ ದೇವರ ವಿಗ್ರಹ ಕೂಡ ಚಂದದ ಗೊಂಬೆತರ ಕಾಣ್ಸತಿತ್ತು ನನಗೆ. ಅದರೊಟ್ಟಿಗೆ ಮಾತಾಡ್ತಿದ್ದೆ. ಪೂಜೆಗೆ ತಂದಿದ್ದ ಪ್ರಸಾದ ತುತ್ತು ಮಾಡಿ ತಿನ್ನಿಸ್ತಿದ್ದೆ. ಕೆಲವೊಮ್ಮೆ ಅಪ್ಪ ಬೈತಿದ್ರು ಮತ್ತೆ ಕೆಲವೊಮ್ಮೆ ದೇವರೆಂದ್ರೆ ಏನು ಪ್ರೀತಿ ನನ್ನ ಮಗನಿಗೆ ಅಂತ ಹೆಮ್ಮೆ ಪಡ್ತಿದ್ರು.
ದಿನಗಳು ಕಳೆದವು, ಅಪ್ಪಂಗು ವಯೋಸಹಜ ಖಾಯಿಲೆಗಳು ಶುರುವಾದವು. ಅಪ್ಪನಿಗೆ ಬರೋ ಆದಾಯದಲ್ಲಿ ಮನೆಯನ್ನೆನೋ ನಡೆಸಬಹುದಿತ್ತು ಆದರೆ ಅಪ್ಪನ ಖಾಯಿಲೆಯ ವೆಚ್ಚಕ್ಕೆ ಸಾಕಾಗ್ತಿರಲಿಲ್ಲಾ. ಔಷದೋಪಚಾರವಿಲ್ಲದೆ ಅಪ್ಪ ಹಾಸಿಗೆ ಹಿಡಿದರು. ಮನೆ ನಡೆಯುವುದು ದುಸ್ತರವಾಯಿತು. ಓದಿಗೆ ತಿಲಾಂಜಲಿ ಹೇಳಿ ದೇವಸ್ಥಾನದ ಕೆಲಸಕ್ಕೆ ಸೇರದೆ ಬೇರೆ ದಾರಿಯಿರಲಿಲ್ಲಾ ನಂಗೆ. ಆಗಿನ್ನು ಹದಿನಾಲ್ಕರ ಪ್ರಾಯ. ಅಪ್ಪ ನಿಸ್ಸಹಾಯಕ, ಏನು ಮಾಡಿಯಾನು? ಮಗಾ ಮೊದಲಿಂದಲು ನಿಂಗೆ ದೇವರೆಂದರೆ ವಿಶೇಷ ಪ್ರೀತಿಯಲ್ಲವೆ, ದೇವರ ಕೆಲಸ ಶ್ರದ್ಧೆಯಿಂದ ಮಾಡು ಅಂತ ಕಣ್ಣೀರಾದರು. ಒಪ್ಪಿಕೊಳ್ಳದೆ ಬೇರೆ ಏನು ಮಾಡಲು ಸಾಧ್ಯ? ಅದೆಲ್ಲಾ ನಂಗೆ ಹೊಸದು, ನಾಳೆಯ ಬಗ್ಗೆ ಯೋಚಿಸುವಷ್ಟು ಬಲತಿರಲಿಲ್ಲಾ ಮನಸ್ಸು. ಒಪ್ಪಿಕೊಂಡಷ್ಟು ಸುಲಭವಾಗಿರಲಿಲ್ಲಾ ಕೆಲಸವನ್ನು ಅಪ್ಪಿಕೊಳ್ಳುವುದು. ಮೊದಲಿನಂತೆ ನನ್ನ ವಾರಿಗೆಯ ಹುಡುಗರ ಜೊತೆ ಆಡುವ ಹಾಗಿರಲಿಲ್ಲ. ಆಡಲು ಸಮಯವಾದರು ಎಲ್ಲಿತ್ತು? ದಿನ ಕಳೆದಂತೆ ಇದ್ದ ನಾಲ್ಕಾರು ಸ್ನೇಹಿತರು ದೂರವಾದರು. ಕ್ರಮೇಣ ನನ್ನೊಳಗೆ ನಾನು ಬಂಧಿಯಾಗತೊಡಗಿದೆ. ಅದು ಗಾಂಭೀರ್ಯಾನಾ? ಇಲ್ಲ ಮೌನವಿದ್ದಿರಬಹುದು. ಮೌನ? ನಾನೇ ಹೇರಿಕೊಂಡಿದ್ದಾ? ಮಾತಾಡಲು ಯಾರಿದ್ದರು ಜೊತೆಯಲ್ಲಿ ಆ ಕಲ್ಲು ದೇವರ ಬಿಟ್ಟು?
ನಾವು ಮಾಡುವ ಕಾರ್ಯದಲ್ಲಿ ಕಾಣಬೇಕಂತೆ ದೇವರನ್ನ, ಕಾಯಕವೇ ಕೈಲಾಸ ಅಂತೇಳ್ತಿದ್ರು ನಮ್ಮೇಷ್ಟ್ರು. ಆದರೆ ನಂಗ್ಯಾಕೆ ಹಿಂಗಾಗ್ತಿದೆ? ಎರಡು ವರ್ಷವಾಗುತ್ತೆ ಈ ಶನಿವಾರಕ್ಕೆ, ಪ್ರತಿದಿನ ಅದೇ ಕೆಲಸ ಒಂಚೂರು ಬದಲಾವಣೆಯಿಲ್ಲಾ. ಒಮ್ಮೊಮ್ಮೆ ಅನ್ನಿಸಿದ್ದಿದೆ ಯಾತಕ್ಕಾಗಿ ಈ ಕೆಲಸ? ಯಾರ ಹಿತಕ್ಕಾಗಿ? ದೇವರು ಇದ್ದಾನೇಯೆ? ಇದ್ದರೂ ಹೀಗೆ ಕಲ್ಲಾಗಿ ಈ ನಾಲ್ಕು ಗೋಡೆಗಳ ಮಧ್ಯ ಬಂಧಿಯಾಗಿರಲು ಇಚ್ಛಿಸುವವನೇ? ಅವನಿಗೆಂತಹ ಬಂಧನ? ಇದೇಲ್ಲಾ ನಾವೇ ಮಾಡಿಕೊಂಡಿದ್ದಲ್ಲವೇ? ದೇವರಿಗೇಕೆ ರೂಪು? ಅವನ ಅಸ್ತಿತ್ವವನ್ನು ಸಾರಲು ಅವನಿಗೊಂದು ರೂಪ ಬೇಕಿಲ್ಲಾ. ಸರ್ವಾಂತರಯಾಮಿಯಲ್ಲವೇ ಅವನು? ಒಮ್ಮೊಮ್ಮೆ ನನಗನ್ನಿಸಿದ್ದಿದೆ ಈ ಕಲ್ಲಿನ ಮೇಲೆ ಎಷ್ಟೇ ಪಂಚಾಮೃತ ಸುರಿದರು ಇದೆಂದೂ ದೇವರಾಗದು. ನನ್ನ ದೇವರು ಕಲ್ಲಾಗಿರಲು ಸಾಧ್ಯವಿಲ್ಲಾ. ಹೀಗೆ ಈ ಕಲ್ಲಿನ ಸೇವೆ ಮಾಡುವ ಬದಲು ಬಡವರ ಸೇವೆ ಮಾಡುವ ಬಯಕೆ ನಂಗೆ. ಅವರ ನಗುವಿನಲ್ಲಿ ದೇವರ ಕಾಣೋ ಹುಚ್ಚು ಬಯಕೆ. ನನಗೂ ಎಲ್ಲರಂತೆ ಬದುಕುವ ಆಸೆ. ಆದರೆ ಈ ಕಲ್ಲಿನಂತೆ ನಾನೂ ಈ ನಾಲ್ಕು ಗೋಡೆಗಳ ಮಧ್ಯ ಬಂಧಿಯಾಗಿರುವೆ!
]]>
hmm…good one..