ದೇವರುಗಳು ಆಗಿದ್ದೂ ಅಂತರ್ಜಾತಿ ವಿವಾಹ…

2008010154420402ಸದನದ ಕಲಾಪ ಅಂದರೆ ಸಾಕು ಅಲ್ಲೇನಾಗುತ್ತೆ ಅನ್ನುವ ಭಾವನೆಯೇ ಹೆಚ್ಚು. ಆದರೆ ರಾಜಕಾರಣಿಗಳು ಮನಸ್ಸು ಮಾಡಿದರೆ ಸದನ ಕಲಾಪಗಳು ಹೇಗೆ ಸಮಾಜವನ್ನೇ ಬದಲಿಸಬಹುದು ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಡಾ ಸಿದ್ಧಲಿಂಗಯ್ಯ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಮಂಡಿಸಿದ ಮನವಿಯೊಂದು ಇಲ್ಲಿದೆ. ಅಂತರ್ಜಾತಿ ವಿವಾಹವಾದವರಿಗೆ ನೌಕರಿಯಲ್ಲಿ ಮೀಸಲಾತಿ ನೀಡಬೇಕು ಎಂಬುದು ಅವರ ಮನವಿ. ಅದಕ್ಕೆ ಅವರು ನೀಡಿರುವ ವಿವರಣೆ ಸಹಾ ಗಮನ ಸೆಳೆಯುವಂತಿದೆ.

ಸಿದ್ಧಲಿಂಗಯ್ಯನವರು ಸದನದಲ್ಲಿ ಮಂಡಿಸಿರುವ ಎಲ್ಲಾ ಮನವಿಗಳು ‘ಸದನದಲ್ಲಿ ಸಿದ್ಧಲಿಂಗಯ್ಯ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಈ ಭಾಷಣವನ್ನು ಆ ಪುಸ್ತಕದಿಂದ ಹೆಕ್ಕಲಾಗಿದೆ-

ಓದಿ ನೋಡಿ. ಚರ್ಚೆಗೆ ಆಹ್ವಾನ-

ಮಾನ್ಯ ಉಪಸಭಾಪತಿಯವರೇ,

ಈ ನಿರ್ಣಯ ಕುರಿತಾದ ನನ್ನ ಅಭಿಪ್ರಾಯಗಳನ್ನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಶತಶತಮಾನಗಳಿಂದ ಜಾತಿ ಪದ್ಧತಿಯ ಕರಾಳ ಮುಷ್ಠಿಗೆ ಸಿಕ್ಕಿ ಈ ಸಮಾಜದಲ್ಲಿ ಪ್ರೀತಿ ಮತ್ತು ಮಾನವೀಯತೆಗಳು ಕಾಣೆಯಾಗಿವೆ. ಇಂತಹ ಪ್ರೀತಿ ಮತ್ತು ಮಾನವೀಯತೆಗೆ ಕೊಡಲಿಪೆಟ್ಟಾಗಿರುವ ಜಾತಿಪದ್ಧತಿ ವಿರುದ್ಧವಾಗಿ ಒಂದು ದೊಡ್ಡ ಸಮರವನ್ನೇ ಮಾಡಬೇಕಾಗಿದೆ. ಈ ಕೆಲಸಕ್ಕೆ ದೊಡ್ಡದಾದ, ಮುಖ್ಯವಾದ ಸಾಧನ ಎಂದರೆ ಅಂತರ್ಜಾತಿ ವಿವಾಹಗಳು. ಅಂತರ್ಜಾತಿ ವಿವಾಹ ಮಾತ್ರ ಈ ಜಾತಿಪದ್ಧತಿಯನ್ನು ಭಗ್ನಗೊಳಿಸಬಲ್ಲದು ಮತ್ತು ನಮ್ಮ ಸಮಾಜಕ್ಕೆ ಸಮಾನತೆಯನ್ನು, ಸಂತೋಷವನ್ನು, ಸೌಂದರ್ಯವನ್ನು ತರಬಲ್ಲದು. ಅದಕ್ಕಾಗಿ ನಮ್ಮ ಭಾರತ ಸಂವಿಧಾನದ 14, 15, 16ನೆಯ ಕಾಲಂಗಳಲ್ಲಿ ಯಾವ ಒಂದು ನಿರ್ದೇಶನ ಇದೆ- ನವಸಮಾಜ ನಿರ್ಮಾಣ ಆಗಬೇಕು, ವರ್ಗ ರಹಿತ ವರ್ಣರಹಿತವಾದ ಒಂದು ಸಮಾಜ ಆಗಬೇಕು ಎಂದು, ಅಂಥ ಒಂದು ಅವಶ್ಯಕತೆಗೆ ಅನುಗುಣವಾಗಿ ಈ ನಿರ್ಣಯವನ್ನು ನಾನು ಮಂಡಿಸಿದ್ದೇನೆ.

ಈ ಜಾತಿಪದ್ಧತಿಗಳಿಂದ ಉಂಟಾಗಿರುವಂತಹ ಅಪಾಯಗಳನ್ನು ನಾನು ತಮಗೆ ವಿವರವಾಗಿ ಹೇಳಬೇಕಾದದ್ದು ಏನೂ ಇಲ್ಲ. ಇವತ್ತು ಈ ಜಾತಿಪದ್ಧತಿಯಿಂದ ನಮ್ಮ ದೇಶದ ಭಾವೈಕ್ಯತೆಗೆ ಭಂಗ ಬಂದಿದ್ದು, ಸಮಾಜದ ಹೃದಯ ಮತ್ತು ಮನಸ್ಸಿನ ವಿಕಸನ ಸ್ಥಗಿತಗೊಂಡು ಇಡೀ ಚಲನೆಯೇ ನಿಂತುಹೋಗಿರುವುದನ್ನು ನಾವು ಕಾಣುತ್ತಿದ್ದೇವೆ. ಇದರ ಜೊತೆಗೆ ಜಾತಿಪದ್ಧತಿಯ ಕೊಡುಗೆ ಏನೆಂದರೆ ಕೆಳದರ್ಜೆಯವರ ಸ್ಥಿತಿಯನ್ನು ತುಂಬಾ ಧಾರುಣಗೊಳಿಸಿರುವುದು. ಇದರಿಂದಾಗಿ ಇಡೀ ಸಮಾಜ ಶ್ರೇಣೀಕರಣಕ್ಕೆ ಒಳಗಾಗಿದೆ. ಹೀಗಾಗಿ ಮನುಷ್ಯನನ್ನು ನಾವು ಅವನ ಯೋಗ್ಯತೆಯಿಂದ ಅಳೆಯದೆ ಜಾತಿಯಿಂದ ಅಳೆಯುತ್ತಿದ್ದೇವೆ. ಜಾತಿಪದ್ಧತಿಯ ಇನ್ನೊಂದು ದೊಡ್ಡ ಅಪಾಯವೆಂದರೆ, ಕಾರಣ ಇಲ್ಲದೇನೇ ಒಬ್ಬನನ್ನು ಮೆಚ್ಚ ತಕ್ಕದ್ದು, ಕಾರಣ ಇಲ್ಲದೇನೇ ಒಬ್ಬನನ್ನು ತಿರಸ್ಕಾರ ಮಾಡತಕ್ಕದ್ದು. ಕೇವಲ ಹುಟ್ಟಿನ ಕಾರಣದಿಂದ ಮೆಚ್ಚುಗೆ ಮತ್ತು ತಿರಸ್ಕಾರಗಳನ್ನು ಈ ಸಮಾಜದಲ್ಲಿ ಜಾತಿಯನ್ನು ಮಾನದಂಡವಾಗಿ ಇಟ್ಟುಕೊಂಡು ಮಾಡುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಜಾತೀಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂಬ ಉದ್ದೇಶದಿಂದ ಈ ನಿರ್ಣಯವನ್ನು ಮಂಡಿಸಿದ್ದೇನೆ.

ಕೆಳಜಾತಿಯಲ್ಲಿ ಆರ್ಥಿಕ ಸುಧಾರಣೆಯಾದರೂ ಕೂಡ ಅವರು ಮೇಲ್ಜಾತಿಗೆ ಏರುವುದಿಲ್ಲ. ಆ ಜಾತಿಯಲ್ಲೇ ಇರುತ್ತಾರೆ. ಆದರೆ ಆರ್ಥಿಕವಾಗಿ ಮಾತ್ರ ಅವರು ಮೇಲೆ ಬಂದಿರುತ್ತಾರೆ. ಹಾಗೆಯೇ ಮೇಲ್ಜಾತಿಯವರ ಸ್ಥಾನಮಾನಗಳು ಕೂಡ ಅವರ ಶ್ರಮದಿಂದ, ಸಾಧನೆಯಿಂದ ಬಂದಿದ್ದಲ್ಲ. ಕೇವಲ ಹುಟ್ಟಿನ ಕಾರಣದಿಂದ ಬಂದಿರುವಂಥಾದ್ದು. ಇದು ತುಂಬಾ ತರ್ಕಹೀನವಾದದ್ದು, ಅವೈಜ್ಞಾನಿಕವಾದದ್ದು, ಆಕಾಲಿಕವಾದದ್ದು. ಇದನ್ನು ನಾವು ಇವತ್ತು ಗಂಭೀರವಾಗಿ ಗಮನಿಸಬೇಕಾಗಿದೆ. ಈ ಜಾತಿಪದ್ಧತಿ ವೃತ್ತಿ ಮೂಲವಾಗಿ ಬಂದಿದ್ದರೂ ಕೂಡ ಪ್ರತಿಷ್ಠಿತ ವೃತ್ತಿಗಳು ಮೇಲ್ಜಾತಿಯವರ ಪಾಲಿಗೆ ಹೊಗಿ, ಕನಿಷ್ಠ ವೃತ್ತಿಗಳು ಹಾಗೂ ಮಲಿನಗೊಂಡ ವೃತ್ತಿಗಳು ಕೆಳಜಾತಿಯವರ ಪಾಲಿಗೆ ಬಂದಿದ್ದು ಕೂಡ ಇಂಥ ದುರಂತಕ್ಕೆ ಕಾರಣವಾಗಿದೆ.

siddalingaiah1_09042008ಸ್ವಾತಂತ್ರ್ಯ ಬಂದ ಮೇಲೆ ಜಾತಿಪದ್ಧತಿಯ ಮನೋಧರ್ಮ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆ ಆಗಿನ ಹಿರಿಯ ನಾಯಕರಲ್ಲಿ ಇತ್ತು. ಆದರೆ ಆ ನಿರೀಕ್ಷೆ ಇವತ್ತು ಸುಳ್ಳಾಗಿದೆ. ಒಬ್ಬ ಸಮಾಜ ವಿಜ್ಞಾನಿಯ ಸಂಶೋಧನೆಯ ಪ್ರಕಾರ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಭಾರತೀಯರ ಮನಸ್ಸಿನಲ್ಲಿ ಜಾತಿಯ ಮನೋಧರ್ಮ ಮೇಲ್ಜಾತಿಗಳಲ್ಲಿ ಶೇಕಡ 22 ಇದ್ದರೆ, ಸ್ವಾತಂತ್ರ್ಯ ನಂತರ ಅದು ಶೇಕಡ 63 ಏರಿದೆ. ಅಂದರೆ ಜಾತಿ ಮನೋಧರ್ಮ- ಕೆಲವು ಜಾತಿಗಳಲ್ಲಿ- ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡ 40 ರಷ್ಟು ಇತ್ತು. ಸ್ವಾತಂತ್ರ್ಯಾನಂತರ ಅದು ಶೇಕಡ 36 ರಷ್ಟಕ್ಕೆ ಇಳಿಯಿತು. ಅಂದರೆ ಮೇಲ್ಜಾತಿಯಲ್ಲಿ ಜಾತೀಯತೆಯ ಮನೋಧರ್ಮ ಸ್ವಲ್ಪ ಜಾಸ್ತಿಯಾಗಿದೆ ಅಂದಂತಾಯ್ತು. ಇದಕ್ಕೆ ‘ರಾಜಕೀಯ’ ಇತ್ಯಾದಿ ಕಾರಣ ಕೊಡಬಹುದು. ಆದರೆ ಇದು ಸಂತೋಷ ಕೊಡತಕ್ಕಂಥ ವಿಚಾರ ಅಲ್ಲ. ಬರಬರುತ್ತಾ ಜಾತೀಯತೆಯ ಮನೋಧರ್ಮ ಕಡಿಮೆಯಾಗಬೇಕು. ಆದರೆ ಹೆಚ್ಚಾಗುತ್ತಿರುವುದು ನಮ್ಮ ದೇಶದ ದುರಂತದ ಸೂಚನೆಯಾಗಿದೆ. ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಪೂರ್ತಿಯಾಗಿ ತೊಡೆದುಹಾಕಲು ಪ್ರಯತ್ನ ಮಾಡಬೇಕು. ಜಾತ್ಯತೀತ ಸಮಾಜವನ್ನು ಒಪ್ಪಿದ ನಾವು ಜಾತೀಯತೆಯನ್ನು ತೊಡೆದು ಹಾಕದೆ ಹೋದರೇ, ದೇಶಕ್ಕೆ ಮತ್ತು ಮಾನವೀಯತೆಗೆ ದೊಡ್ಡ ಅಪಚಾರ ಮಾಡುತ್ತಿದ್ದೇವೆ ಎಂದೇ ಅರ್ಥ. ಜಾತೀಯತೆಯನ್ನು ತೊಡೆದುಹಾಕುವುದಕ್ಕೆ ನಾವು ಕೈಗೊಂಡಿರುವಂಥ ಕಾರ್ಯಕ್ರಮಗಳು ಜಾತೀಯತೆಯ ಮನೋಧರ್ಮವನ್ನು ಗಟ್ಟಿಗೊಳಿಸುತ್ತಿವೆಯೆ ಹೊರತು ಸಡಿಲ ಮಾಡಿಲ್ಲ ಎನ್ನುವ ಸತ್ಯವನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಇಷ್ಟುವರ್ಷಗಳಲ್ಲಿ ನಮ್ಮ ವ್ಯಕ್ತಿತ್ವ ಜಾತಿರಹಿತ ವ್ಯಕ್ತಿತ್ವ ಆಗಬೇಕಾಗಿತ್ತು. ಆದರೆ ಜಾತಿಮಯ ವ್ಯಕ್ತಿತ್ವ ಆಗಿದೆ. ಪ್ರತಿಯೊಂದಕ್ಕೂ ಜಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಚನೆ ಮಾಡುವಂತಹ ತಪ್ಪನ್ನು ಮಾಡುತ್ತಿದ್ದೇವೆ.
ಜಾತಿಪದ್ಧತಿ ವಿರುದ್ಧ ನಮ್ಮ ದೇಶದಲ್ಲಿ ದೊಡ್ಡ ಚಳುವಳಿಗಳು ಆಗಿವೆ. ಈ ಸಂದರ್ಭದಲ್ಲಿ ಕೆಲವು ಮಹಾನ್ ವ್ಯಕ್ತಿಗಳ ನೆನಪನ್ನು ಮಾಡಿಕೊಳ್ಳುವುದು ಸೂಕ್ತ ಎನಿಸುತ್ತದೆ. ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಪರಿಕಲ್ಪನೆಯನ್ನು ಪ್ರಶ್ನೆ ಮಾಡಿದರಷ್ಟೆ ಅಲ್ಲ, ಅಂತರ್ಜಾತಿ ವಿವಾಹಕ್ಕೆ ಕರ್ಣಾಟಕದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಪ್ರೋತ್ಸಾಹ ಕೊಟ್ಟು ದೊಡ್ಡ ಕ್ರಾಂತಿಯನ್ನು ಮಾಡಿದರು. ಬ್ರಾಹ್ಮಣ ಕನ್ಯೆಯನ್ನು ಅಸ್ಪೃಶ್ಯ ವರನಿಗೆ ವಿವಾಹ ಮಾಡಿಸಿ ಸಮಾಜದ ಪೊಳ್ಳು ನಂಬಿಕೆಗೆ ಕೊಡಲಿಪೆಟ್ಟನ್ನು ಕೊಟ್ಟರು. ಬಸವಣ್ಣನವರು:

ಮಡಿವಾಳನೆಂಬೆನೇ ಮಾಚಯ್ಯನ
ಮಾದಾರನೆಂಬೆನೇ ಚೆನ್ನಯ್ಯನ
ಡೋಹಾರನೆಂಬೆನೇ ಕಕ್ಕಯ್ಯನ
ಆನು ಹಾರುವನೆಂದರೆ, ಕೂಡಲ
ಸಂಗಯ್ಯ ನಗುವನಯ್ಯ

– ಎಂದು ಹೇಳಿದರು.

cr030307shadow_lines01ಇದನ್ನು ನಾವು ಯಾರೂ ಗಮನಿಸಲಿಲ್ಲ, ಗಮನಿಸಿರುವವರು ಸಂಪೂರ್ಣವಾಗಿ ಮರೆತಿದ್ದಾರೆ. ಇದರಿಂದ ಆ ಮಹಾನ್ ವ್ಯಕ್ತಿಗೆ ಅಪಚಾರ ಮಾಡಿದ್ದೇವೆ ಎಂದು ಹೇಳಬಹುದು.
ಕನಕದಾಸರು ಮೊಟ್ಟಮೊದಲ ಬಾರಿಗೆ ನನ್ನನ್ನು ಯಾರಾದರೂ ಯಾವ ಜಾತಿ ಎಂದು ಕೇಳಿದರೆ ‘ಮನುಜ ಜಾತಿ’ ಎಂದು ಹೇಳುತ್ತೇನೆಂದು ಅವರ ಕೀರ್ತನೆಯಲ್ಲಿ ಹೇಳಿದ್ದಾರೆ. ಇದು ಬಹುದೊಡ್ಡ ಬಂಡಾಯದ ಮಾತು. ರಾಷ್ಟ್ರಕವಿ ಕುವೆಂಪುರವರು, ನಾವೆಲ್ಲರೂ ವಿಶ್ವಮಾನವರಾಗಬೇಕು, ಮನುಜ ಮತ ವಿಶ್ವ ಪಥ ಎಂದು ಕರೆಕೊಟ್ಟರು. ನಾವು ಕುವೆಂಪು ಅವರ ಅಭಿಮಾನಿಗಳಾಗಿದ್ದರೂ ಕೂಡ ಅವರು ಹೇಳಿದ ಈ ವಿಚಾರದಲ್ಲಿ, ವಿಶ್ವ ಒಂದೇ ಎಂಬ ತತ್ವದಲ್ಲಿ ಅಭಿಮಾನ ಬೆಳಸಿಕೊಳ್ಳಲಿಲ್ಲ. ನಮ್ಮ ಶ್ರೇಷ್ಟ ಕವಿ ಗೋಪಾಲಕೃಷ್ಣ ಅಡಿಗ ಅವರು ನಾವೆಲ್ಲ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಮನುಜರು. ನರರ ನಡುವಿನ ಅಡ್ಡಗೋಡೆಗಳನ್ನು ಕಟ್ಟಿ ಕೆಡಹುವೆವು. ನಾವು ವಿಲಯ ರುದ್ರರು ಎಂದು ಹೇಳಿದರು. ಆದರೆ ಆ ಹುಮ್ಮಸ್ಸು ಅಡಿಗರಲ್ಲಿ ಉಳಿಯಿತೇ ವಿನಃ ಇಡೀ ಜನತೆಯಲ್ಲಿ ಮಾನಸಿಕ ಬದಲಾವಣೆ ಮಾತ್ರ ಆಗಲಿಲ್ಲ.

ಹಾಗೆ ನೋಡಿದರೆ ವೇದಗಳ ಕಾಲದಲ್ಲಿ ಕೂಡ ಜಾತೀಯತೆ ಇರಲಿಲ್ಲ. ಇದು ಶುರುವಾದದ್ದು ಪುರಾಣಗಳ ಕಾಲಕ್ಕೆ. ಸಗೋತ್ರ ವಿವಾಹ ಪದ್ಧತಿ ಯಾವಾಗ ಎಲ್ಲಿ ಶುರುವಾಯಿತೋ ಅಲ್ಲಿಂದ ಜಾತೀಯತೆ ಶುರುವಾಯಿತು. ಭಿನ್ನಮತಗೋತ್ರ ವಿವಾಹ ಪದ್ಧತಿ ಇದ್ದಾಗ ಜಾತೀಯತೆ ಇರಲಿಲ್ಲ. ಆ ಕಾಲದಲ್ಲಿ ವಶಿಷ್ಟ ಮತ್ತು ಆರುಂಧತಿ ಮದುವೆ ಆದರು. ಸಮಾಜದ ಕಟ್ಟಕಡೆಯ ಹೆಣ್ಣುಮಗಳು, ಸಮಾಜದ ಮೇಲ್ವರ್ಗದ ಒಬ್ಬ ಪುರುಷನೊಡನೆ ಆದ ಮದುವೆಯೇ ಪರಾಶರ ಮತ್ತು ಮತ್ಸ್ಯಗಂಧಿ ಮದುವೆ. ಇವುಗಳೆಲ್ಲಾ ಆ ಕಾಲದಲ್ಲೇ ನಡೆದಿವೆ.

ಒಂದು ಕುತೂಹಲಕರ ಅಂಶವೆಂದರೆ, ನಮ್ಮ ಎಲ್ಲ ದೇವತೆಗಳು ಅಂತರ್ಜಾತಿ ವಿವಾಹ ಆಗಿರುವುದು. ಸ್ವಜಾತಿ ವಿವಾಹ ಆಗಿರುವ ದೇವರುಗಳು ತುಂಬಾ ಕಡಿಮೆ. ಶಿವ, ಕೃಷ್ಣ ಅಂತರ್ಜಾತಿ ವಿವಾಹ ಆಗಿದ್ದಾರೆ. ವೆಂಕಟರಮಣ ಅಂತರ್ಜಾತಿ ವಿವಾಹ ಆಗಿದ್ದಾನೆ. ಮೇಲುಕೋಟೆ ಚಲುವನಾರಾಯಣಸ್ವಾಮಿ ಕೇವಲ ಅಂತರ್ಜಾತಿ ಅಲ್ಲ ಅಂತರ್ಮತೀಯ ವಿವಾಹ ಆಗಿದ್ದಾನೆ. ಚೆಲುವನಾರಾಯಣಸ್ವಾಮಿ ಮುಸ್ಲಿಂ ಮಹಿಳೆಯನ್ನು ಮದುವೆಯಾದದ್ದನ್ನು ನಾವು ನೋಡಿದ್ದೇವೆ. ಬಿಳಿಗಿರಿ ರಂಗಯ್ಯ ಕೂಡ ಅಂತರ್ಜಾತಿ ಮದುವೆ ಆಗಿದ್ದಾನೆ. ಅಂದರೆ ದೇವತೆಗಳೆಲ್ಲರೂ ಅಂತರ್ಜಾತಿ ಮದುವೆಯಾಗಿರುವಾಗ, ಆ ದೇವತೆಗಳನ್ನು ನಾವು ಪೂಜೆ ಮಾಡುವುದಕ್ಕೆ ಮಾತ್ರ ಇಟ್ಟುಕೊಂಡು ಅವರುಗಳ ಆದರ್ಶವನ್ನು ತಿರಸ್ಕಾರ ಮಾಡಿದ್ದೇವೆ. ಈ ವಿಷಯವನ್ನು ಏಕೆ ಹೇಳುತ್ತಿದ್ದೇನೆಂದರೆ, ಅಂತರ್ಜಾತಿ ವಿವಾಹ ನಮ್ಮ ಸಂಸ್ಕೃತಿಯಲ್ಲಿ ಅಂತರ್ಗತವಾಗಿದೆ. ಇದು ಹೊಸ ವಿಚಾರ ಅಲ್ಲ. ನಮ್ಮ ಸಂಸ್ಕೃತಿಯ ಒಂದು ಪ್ರಾಚೀನ ಭಾಗ. ಇದನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಈ ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರು, ಮಹಾತ್ಮಗಾಂಧೀಜಿಯವರು, ರಾಮನೋಹರ ಲೋಹಿಯಾ ಅವರು ಮತ್ತು ಡಾ| ಅಂಬೇಡ್ಕರ್ ಅವರು ಇದನ್ನೇ ಪ್ರತಿಪಾದನೆ ಮಾಡಿದರು. ಲೋಹಿಯಾ ಮತ್ತು ಅಂಬೇಡ್ಕರ್ ಅವರುಗಳು ಈ ದೇಶ ಜಾತೀಯತೆಯಿಂದ ರೋಗಗ್ರಸ್ತವಾಗಿದ್ದು ಇದನ್ನು ಪಾರು ಮಾಡಬೇಕಾದರೆ ಅಂತರ್ಜಾತಿ ವಿವಾಹಗಳಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ರಾಮಮನೋಹರ ಲೋಹಿಯಾರವರಂತೂ ಆ ಕಾಲದಲ್ಲೇ, ನಿಜವಾಗಿಯೂ ಮೀಸಲಾತಿಯನ್ನು ಕೊಡಬೇಕೆಂದಿದ್ದರು. ಅಂತರ್ಜಾತಿ ವಿವಾಹ ಆದವರಿಗೆ ಕೊಡಿ, ಜಾತಿವಾರು ಮೀಸಲಾತಿಯನ್ನು ಕೊಟ್ಟು ಜಾತೀಯತೆಯನ್ನು ಗಟ್ಟಿಗೊಳಿಸಬೇಡಿ ಎಂದು ಹೇಳಿದರು. ಆದರೆ ನಾವು ಇದನ್ನು ಗಮನಿಸಲಿಲ್ಲ. ನಾವು ನಿಜವಾಗಿಯೂ ವರ್ಗ ರಹಿತ ಸಮಾಜವನ್ನು ಕಟ್ಟಬೇಕಾದರೆ ಲೋಹಿಯಾರವರ ಮಾತನ್ನು ಅನುಸರಿಸಬೇಕಾಗುತ್ತದೆ. ಜಾತಿ ದ್ವೇಷ ಕಡಿಮೆಯಾಗಬೇಕಾದರೆ, ಜಾತಿ ಕಲಹ ನಿಲ್ಲಬೇಕಾದರೆ, ಪ್ರೀತಿ ಮತ್ತು ಮಾನವೀಯತೆಗಳು ಸಂವರ್ಧನೆಯಾಗಬೇಕಾದರೆ ಈ ಕೆಲಸವನ್ನು ನಾವು ಖಂಡಿತವಾಗಿ ಮಾಡಲೇಬೇಕು.

ಈ ಸಮಾಜದಲ್ಲಿ ಅಂತರ್ಜಾತಿ ವಿವಾಹವಾದವರನ್ನು ನಾನು ‘ಬಂಡಾಯಗಾರರು’ ಎಂದು ಕರೆಯುತ್ತೇನೆ. ಜಾತಿಯ ಗಡಿಗೆರೆಗಳನ್ನು ದಾಟಿ ಜಾತೀಯತೆಯ ಅನಿಷ್ಠವನ್ನು ಮೆಟ್ಟಿ ನಿಂತ ಇವರು ನಿಜವಾದ ಬಂಡಾಯಗಾರರು. ಯಾವುದೇ ಲಾಭ ಲೆಕ್ಕಾಚಾರಗಳಿಗೆ ಬೆಲೆಕೊಡದೆ ಪ್ರೇಮ ಪ್ರೀತಿಗೆ ಬೆಲೆಕೊಟ್ಟು ಇವರು ಅಂತರ್ಜಾತಿ ವಿವಾಹವಾಗಿದ್ದಾರೆ. ಅವರನ್ನು ಈ ಸದನದಲ್ಲಿ ಅಭಿನಂದಿಸುತ್ತೇನೆ. ಎಲ್ಲ ಅಂತರ್ಜಾತೀಯ ವಿವಾಹಿತರನ್ನು ಅಭಿನಂದಿಸಲು ಈ ಒಂದು ಅವಕಾಶವನ್ನು ಬಳಸಿಕೊಳ್ಳುತ್ತೇನೆ. ಆದರೆ ಇವರನ್ನು ಅಭಿನಂದಿಸುವ ಸಂದರ್ಭದಲ್ಲಿ ಇವರು ಅನುಭವಿಸುತ್ತಿರುವ ಸಂಕಟವನ್ನು ಕೂಡ ತಮ್ಮ ಮುಂದೆ ಪ್ರಸ್ತಾಪಿಸುತ್ತೇನೆ.

ಅಂತರ್ಜಾತಿ ವಿವಾಹವಾದವರು ಮಾನಸಿಕವಾಗಿ ಆರ್ಥಿಕವಾಗಿ ಅಭದ್ರತೆ, ಆತಂಕಕ್ಕೆ ಒಳಗಾಗಿದ್ದಾರೆ. ಸಮಾಜ ಇವರನ್ನು ಜಾತಿ ಬಿಟ್ಟವರು, ಕುಲಗೆತ್ತವರು ಎಂದು ಕರೆಯುತ್ತದೆ. ಕುಲಗೆಟ್ಟವರು ಎಂಬುದಕ್ಕೆ ಅಂತರ್ಜಾತಿ ವಿವಾಹದವರು ಎಂಬ ಅರ್ಥವಿದೆ. ಈ ಶಬ್ದವನ್ನು ಬಳಸಬಾರದು. ನಮ್ಮ ಭಾಷೆ ಎಷ್ಟು ಪ್ರತಿಗಾಮಿಯಾಗಿದೆ ಎನ್ನುವುದಕ್ಕೆ ಇಂತಹ ಶಬ್ದಗಳು ಸಾಕ್ಷಿಯಾಗಿವೆ. ಅಂತರ್ಜಾತಿ ವಿವಾಹವಾದವರನ್ನು ಇಬ್ಬರ ಕಡೆಯ ಜಾತಿಗಳವರು ದೂರೀಕರಿಸುವುದರಿಂದ ಯಾವುದೇ ಆಸರೆಯಿಲ್ಲದಂತಾಗುವ ಇವರಿಗೆ ಸರಕಾರವೇ ಆಸರೆಯಾಗಬೇಕು. ಇವರ ಮಕ್ಕಳ ಭವಿಷ್ಯ ಕೂಡಾ ಆತಂಕಕಾರಿಯಾಗಿದ್ದು ಭವಿಷ್ಯದಲ್ಲಿ ಅವರ ವಿವಾಹದ ಪ್ರಶ್ನೆ ಬರುತ್ತದೆ. ಅವರು ಯಾವ ಜಾತಿಗೆ ಸೇರಿದವರು ಎಂಬ ಪ್ರಶ್ನೆ ಏಳುತ್ತದೆ. ಅಂತರ್ಜಾತಿ ವಿವಾಹ ಆದವರ ಮಕ್ಕಳು ಒಂದು ಬಗೆಯಲ್ಲಿ ಅಂತರ್ ಪಿಶಾಚಿಗಳಂತಾಗಿದ್ದು ಸಮಾಜ ಅವರನ್ನು ಪಾಪದ ಫಲಗಳೆಂಬಂತೆ ಕಾಣುತ್ತಿದೆ. ಹೇಳಿ, ಈ ಮಕ್ಕಳು ಪಾಪದ ಫಲಗಳೇ? ಖಂಡಿತಾ ಅಲ್ಲ. ಈ ಮಕ್ಕಳು ನವಭಾರತದ ಗೌರವಾನ್ವಿತ, ಜಾತ್ಯತೀತ ಪ್ರಜೆಗಳು. ಇವರನ್ನು ನಾವು ಗೌರವದಿಂದ ಕಾಣಬೇಕು. ಇವರಿಗೆ ಸಕಲ ಸವಲತ್ತುಗಳನ್ನು ಕೊಟ್ಟು ಪ್ರೋತ್ಸಾಹ ಕೊಡಬೇಕು. ಹೀಗೆ ಪ್ರೋತ್ಸಾಹ ಕೊಡುವುದರಿಂದ ಭಾವೈಕ್ಯತೆಯ ಹೂಗಳು ನಮ್ಮ ಹೃದಯದಲ್ಲಿ ಅರಳುವುದಕ್ಕೆ ಸಾಧ್ಯ ಇದೆ. ಪ್ರಜಾಪ್ರಭುತ್ವ ಯಶಸ್ವಿಯಾಗುವುದಕ್ಕೆ ಸಾಧ್ಯ ಇದೆ. ಇದರಿಂದ ಸಾಮಾಜಿಕ ಕ್ರಾಂತಿ ದಾರಿಯಾಗುತ್ತದೆ ಎಂದು ಹೇಳುತ್ತೇನೆ.
ಯಾವುದೇ ಜಾತಿಯ ಗಂಡು ಮತ್ತು ಹೆಣ್ಣು ಪರಸ್ಪರ ಮೆಚ್ಚಿ ವಿವಾಹವಾದರೆ ಅವರಿಗೆ ಮೀಸಲಾತಿಯ ಒಂದು ಪ್ರಮಾಣವನ್ನು ತಾವು ನಿಗದಿ ಮಾಡಬೇಕು. ಉದ್ಯೋಗ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಇದನ್ನು ಕೊಡಬೇಕು. ಕೆಳಜಾತಿ ಮತ್ತು ಮೇಲ್ಜಾತಿ ನಡುವೆ ವಿವಾಹವಾದಾಗ ಇದಕ್ಕೆ ಹೆಚ್ಚಿನ ಆದ್ಯತೆ ಕೊಡಿ, ಉಳಿದವರೂ ಆದಾಗ ಅವರಿಗೂ ಆದ್ಯತೆ ಕೊಡಿ. ಅವರು ಈ ರೀತಿ ವಿವಾಹವಾಗಬೇಕಾದರೆ ಅವರ ಮನಸ್ಸಿನಲ್ಲಿ ಒಂದು ಬದಲಾವಣೆ, ಆಂದೋಲನ ನಡೆದಿರುತ್ತದೆ. ಅವರು ಕ್ರಾಂತಿಯ ಕಡೆ ಒಲಿದಿರುವುದರಿಂದ ಇಂತಹ ವಿವಾಹ ಆಗಿದ್ದಾರೆ. ಇವರಿಗೂ ಕೂಡಾ ಮೀಸಲಾತಿ ಇರಬೇಕು. ಈ ಮೀಸಲಾತಿಗೆ ಆದಾಯದ ಮಿತಿಯನ್ನು ದಯವಿಟ್ಟು ಹಾಕಬೇಡಿ. ಏತಕ್ಕೆಂದರೆ ವರದಕ್ಷಿಣೆ ಮೊಟ್ಟಮೊದಲ ಪ್ರಾಮಾಣಿಕ ವಿರೋಧಿಗಳು ಈ ಅಂತರ್ಜಾತಿ ವಿವಾಹಿತರೆ. ವರದಕ್ಷಿಣೆ ಪಿಶಾಚಿಗಳು ಯಾರು ಎಂದರೆ, ಜಾತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಮ್ಮ ಜಾತಿಯಲ್ಲಿ ಮದುವೆಯಾದರೆ ವರದಕ್ಷಿಣೆ ಸಿಗುತ್ತದೆ. ಆದ್ದರಿಂದ ನಮ್ಮ ಜಾತಿಯಲ್ಲೇ ಮದುವೆ ಆಗುತ್ತೇನೆ ಎಂದು ಹೇಳುತ್ತಾರಲ್ಲ ಅವರು. ಬಹಶಃ ನೀವೇನಾದರೂ ಅಂತರ್ಜಾತಿ ವಿವಾಹಿತರಿಗೆ ಮೀಸಲಾತಿ ನೀಡಿದ್ದೇ ಆದರೆ ವರದಕ್ಷಿಣೆಯ ಹುಟ್ಟನ್ನು ಅಡಗಿಸಬಹುದು. ಇದನ್ನು ತಾವು ಗಮನಿಸಬೇಕು. ಇದು ತುಂಬಾ ಮಾನವೀಯವಾದ ವಿಚಾರ. ಆಮೇಲೆ ಎಷ್ಟೋ ಜನ ಏನು ಮಾತನಾಡುತ್ತಾರೆ ಎಂದರೆ, ನಮಗೆ ವರದಕ್ಷಿಣೆ ಏತಕ್ಕೆ ಬೇಕು ಅಂದರೆ ನೌಕರಿಗಾಗಿ ಎಂದು. ಮೀಸಲಾತಿ ನೀಡಿದರೆ ಯುವಕರಿಂದ ಇಂಥ ಸಂಕುಚಿತ ಆಲೋಚನೆ ದೂರವಾಗಿ ಅವರು ವಿಶಾಲ ದೃಷ್ಟಿಯಿಂದ ಯೋಚನೆ ಮಾಡುವುದಕ್ಕೆ ಶುರು ಮಾಡುತ್ತಾರೆಂದು ಹೇಳುತ್ತಿದ್ದೇನೆ. ಅಂತರ್ಜಾತಿ ವಿವಾಹವಾದವರ ಇನ್ನೊಂದು ಸಮಸ್ಯೆ ಏನು ಅಂದರೆ, ಇವರು ಯಾವುದಾದರೂ ಒಂದು ಜಾತಿಯನ್ನು ಹೇಳಿಕೊಳ್ಳಬೇಕಾಗುತ್ತದೆ. ಇದು ತಪ್ಪು, ಇವರು ಜಾತಿರಹಿತರು, ನಿಜವಾದ ಭಾರತೀಯರು, ಜಾತ್ಯತೀತರು ಎಂದು ಇವರನ್ನು ಗುರುತಿಸುವಂತಾಗಬೇಕು. ಅಂತರ್ಜಾತಿ ವಿವಾಹಿತರಿಗೆ, ಅವರ ಮಕ್ಕಳಿಗೆ ಇಷ್ಟು ಪ್ರಮಾಣ ಎಂದು ಮೀಸಲಾತಿ ಕೊಡಬೇಕು. ಜಾತಿಗನುಗುಣವಾಗಿ ನಾವು ಏನು ಮೀಸಲಾತಿ ಪದ್ಧತಿ ಅಳವಡಿಸಿದ್ದೇವೆ ಅದು ಕ್ರಮೇಣ ಕಡಿಮೆಯಾಗಿ, ಜಾತಿರಹಿತರಿಗೆ ಅನುಗಣವಾಗಿ ಮೀಸಲಾತಿ ಹೆಚ್ಚಾಗಬೇಕು. ಈ ನಮ್ಮ ಸಮಾಜ ಹಂತಹಂತವಾಗಿ ಜಾತಿರಹಿತ ಪದ್ಧತಿ ಕಡೆಗೆ ನಡೆಯಬೇಕೆಂದು ಹೇಳುತ್ತೇನೆ.

ಮಾನ್ಯ ಉಪಸಭಾಪತಿಯವರೇ,

ಈ ಸದನದಲ್ಲಿ ತಮ್ಮನ್ನೂ ಒಳಗೊಂಡಂತೆ ಸಾಮಾಜಿಕ ಸಾಂಸ್ಕೃತಿಕ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ, ವಿಚಾರ ಮಾಡಿ, ಅನುಭವವಿರುವಂಥ ದೊಡ್ಡ ವ್ಯಕ್ತಿಗಳು ಇದ್ದಾರೆ. ನಿಜವಾಗಿ ಇವರಿಗೆ ದೇಶಭಕ್ತಿ ಇದೆ. ಇಂತಹ ಹಿರಿಯರ ಗುಂಪಿನಲ್ಲಿ ಕಿರಿಯವನಾಗಿ ನಾನೂ ಒಬ್ಬ ಇದ್ದೇನೆ ಎಂದು ಸಂತೋಷವಾಗಿದೆ. ದಯಮಾಡಿ ಈ ನಿರ್ಣಯವನ್ನು ಶಿಫಾರಸ್ಸು ಮಾಡಬೇಕೆಂದು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ.

‍ಲೇಖಕರು avadhi

January 21, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

11 ಪ್ರತಿಕ್ರಿಯೆಗಳು

 1. ಸಂದೀಪ್ ಕಾಮತ್

  ಎಲ್ಲಾ ಓಕೆ ಈ ವಾಕ್ಯ ಮಾತ್ರ ಯಾಕೆ – “ಹಾಗೆಯೇ ಮೇಲ್ಜಾತಿಯವರ ಸ್ಥಾನಮಾನಗಳು ಕೂಡ ಅವರ ಶ್ರಮದಿಂದ, ಸಾಧನೆಯಿಂದ ಬಂದಿದ್ದಲ್ಲ. ಕೇವಲ ಹುಟ್ಟಿನ ಕಾರಣದಿಂದ ಬಂದಿರುವಂಥಾದ್ದು”

  ಎಂಥ ಮಾರಾಯ್ರೆ ಇದಕ್ಕೆ ಅರ್ಥ ಉಂಟಾ??

  ಪ್ರತಿಕ್ರಿಯೆ
 2. kallare

  ವಿಷಯ ಸರಿ.
  ಸಂದೀಪ್ ಮಾತಿಗೆ ಸಹಮತವಿದೆ. ಇನ್ನೂ ಏನೇನು ಉಳ್ಕೊಂಡಿವೆ ಮೀಸಲಾತಿ ಕೊಡೋದಕ್ಕೆ? ಮದ್ವೆಗೆ ಮೀಸಲಾತಿ ಆದ್ಮೇಲೆ ಮುಂದೆ?

  ಪ್ರತಿಕ್ರಿಯೆ
 3. ಎವಿಎಂ. ನಾಯರ್

  “ಮೇಲ್ಜಾತಿಯವರ ಸ್ಥಾನಮಾನ ಕೇವಲ ಹುಟ್ಟಿನ ಕಾರಣದಿಂದ ಬಂದಿರುವಂಥಾದ್ದು” ಎಂಬ ಡಾ.ಸಿದ್ದಲಿಂಗಯ್ಯನವರ ಮಾತು ಸರಿಯಾಗಿಯೇ ಇದೆ. ಸ್ವಾತಂತ್ರ ನಂತರ ಈ ದೇಶದ ಜನತೆಗೆ ದಕ್ಕಿರುವುದು ಕೇವಲ ರಾಜಕೀಯ ಸಮಾನತೆ ಮಾತ್ರ ಇನ್ನು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ದಕ್ಕಬೇಕಿದೆ. ಜಾತಿಯ ಗೀಳು ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರಿಗೂ ಕೆಲವು ಸ್ಥಾನಮಾನಗಳು ಹುಟ್ಟಿನ ಕಾರಣದಿಂದ ದಕ್ಕುತ್ತಲೇ ಇರುತ್ತವೆ.
  -ಎವಿಎಂ.ನಾಯರ್

  ಪ್ರತಿಕ್ರಿಯೆ
 4. ಎವಿಎಂ. ನಾಯರ್

  ಡಾ. ಸಿದ್ದಲಿಂಗಯ್ಯನವರ ಮಾತನ್ನು ನಾನು ಬೆಂಬಲಿಸುತ್ತೇನೆ. ಈ ದೇಶದ ಜನತೆಗೆ ರಾಜಕೀಯ ಸಮಾನತೆ ಮಾತ್ರ ದೊರೆತಿದೆ. ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ ಸಮಾನವಾಗಿ ಹಂಚಿಕೆಯಾಗಿಲ್ಲ. ಜಾತಿ ಪ್ರಜ್ಞೆ ಎಲ್ಲಿಯವರಿಗೂ ಇರುತ್ತದೋ ಅಲ್ಲಿಯವರಿಗೂ ಅದು ದೊರೆಯುವುದೂ ಇಲ್ಲ.

  ಪ್ರತಿಕ್ರಿಯೆ
 5. ಶೆಟ್ಟರು (Shettaru)

  ಹೀಗಾದ್ರೂ ಮಿಸಲಾತಿ ಸಿಗುತ್ತೆ ಅಂದ್ರೆ ನಾನು ಅಂತರ್ಜಾತಿ ಮದುವೆ ಆಗಲು ಸಿದ್ಧ.

  ನನಗಂತೂ ಎಲ್ಲದರಲ್ಲೂ ಫೈಟ ಮಾಡಿ ಸಾಕಾಗಿದೆ, ನನ್ನ ಮಕ್ಕಳಾದರೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಗಾಗಿ ನಂತರ ಸೀಟಗಾಗಿ, ಅಲ್ಲಿಂದ ನೌಕರಿಗಾಗಿ, ಅಲ್ಲಿಂದ ಪ್ರಮೋಷನ್ನಿಗಾಗಿ ಬಡಿದಾಡುವುದು ತಪ್ಪುತ್ತೆ.

  ದಯವಿಟ್ಟು ಕ್ಷಮಿಸಿ ಇದು ನನ್ನ ಅನುಭವ, ನಿಮ್ಮ ಅನುಭವ ಮತ್ತು ಅನಿಸಿಕೆ ನನಗಿಂಥ ಬೇರೆ ತರದ್ದು ಇರಬಹುದು.

  ಸಿದ್ದಲಿಂಗಯ್ಯನವರ ಯೋಚನೆ ಕಾರ್ಯಗತವಾದರೆ ನನ್ನಂಥ ಎಷ್ಟೋ ಜನಕ್ಕೆ ಸರಕಾರಿ ಕೆಲಸ ಸಿಕ್ಕು, ಸತ್ಯಂ, ರೆಸೇಷನ್, ಆಪ್ಪ್ರೈಸಲ್ ಇವುಗಳಿಂದ ಮುಕ್ತಿ ಸಿಗುತ್ತದೆ, ಆದಷ್ಟು ಬೇಗ ಜಾರಿಗೆ ಬರಲಿ ಎಂಬುದು ನನ್ನ ಹಾರೈಕೆ.

  -ಶೆಟ್ಟರು

  ಪ್ರತಿಕ್ರಿಯೆ
 6. ಚಂದಿನ

  ಈ ವಿಷಯವನ್ನು ಚರ್ಚೆಗೆ ತೆರೆದಿಟ್ಟರೆ ಚೆನ್ನಾಗಿರುತ್ತದೆ.

  ಅವರವರ ಅಭಿಪ್ರಾಯಗಳನ್ನು ಸೂಕ್ತ ಕಾರಣಗಳೊಂದಿಗೆ,
  ವೈಯುಕ್ತಿಕ ಅನುಭವ ಕಥನಗಳೊಂದಿಗೆ ಹಂಚಿಕೊಂಡರೆ,
  ಮಹತ್ವಪೂರ್ಣವಾಗಿರುತ್ತದೆ.

  -ಚಂದಿನ

  ಪ್ರತಿಕ್ರಿಯೆ
 7. chiru

  I think the time has come to stop this
  reservation mentality itself.It is cheap.
  That is a bane not a boon.Look at youths
  who marry the person of their choice and lead a normal
  life Without using big words.Act,don’t be articulate.

  ಪ್ರತಿಕ್ರಿಯೆ
 8. shama, nandibetta

  sir, namma devarugaLu antharjathi vivaaha aada bagge ma bagge maahithi elli siguthe antha tilisidare (some referance) anukoola. namma knowledge hechaagalu sahakaari. kinnulidanthe “kallare” helida vichaarakke nannadondu vote ide..

  ಪ್ರತಿಕ್ರಿಯೆ
 9. ಹೇಮಶ್ರೀ

  ಸಿದ್ಧಲಿಂಗಯ್ಯ ಅವರ ಮನವಿ ಕುರಿತು ನನ್ನ ಸೀಮಿತ ಮತ್ತು ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ.

  ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. !

  ೧. ಹೋಟೇಲ್‍ಗಳಲ್ಲಿ ತಿಂಡಿ ತಿನ್ನೋದು, ಬಸ್ಸು ರೈಲು ವಿಮಾನಗಳಲ್ಲಿ ಒಟ್ಟಿಗೆ ಹೋಗೋದು … ನಮ್ಮ ನಮ್ಮ ಸ್ನೇಹಿತರುಗಳ ಜಾತಿ ಧರ್ಮ ಗೊತ್ತಿಲ್ಲದೆ ಇರುವುದು ಇವೆಲ್ಲಾ ಒಂದು ರೀತಿಯ ಯಾಂತ್ರಿಕ ಅನುಭವ. ಮತ್ತು ಪಟ್ಟಣ, ನಗರ ಜೀವನದ ಅನಿವಾರ್ಯತೆ ಕೂಡ. ಇಲ್ಲವಾದರೆ ಮಡಿ, ಮೈಲಿಗೆ ಅಂತ ಅಂದುಕೊಂಡ್ರೆ ಬದುಕಲಿಕ್ಕೆ ಸಾಧ್ಯವಾ ಅಲ್ಲಿ. !!!

  ಹಾಗಂತ ಬೆಂಗಳೂರಿನಲ್ಲಿ ಬದುಕುವ ಮನಸ್ಸುಗಳಲ್ಲಿ ಜಾತಿ ಧರ್ಮ ಭಾಷೆ ಇಲ್ಲ ಅಂದ್ರೆ ಸುಳ್ಳೇ. ಕೆಲವರ ಅನುಭವಕ್ಕೆ, ಗಮನಕ್ಕೆ ಬರದೇ ಹೋಗಿರಬಹುದು ಅಷ್ಟೆ.

  – ನಾನು ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವ ಸಂದರ್ಭದಲ್ಲಿ ( ನಾಲ್ಕು-ಐದು ವರ್ಷಗಳ ಹಿಂದೆ) … ನಾನು ಯಾವ ಜಾತಿ / ವೆಜ್ಜಾ … ನಾನ್ ವೆಜ್ಜಾ / ಹುಡುಗರು ಫ್ರೆಂಡ್ಸ್ ಇದ್ದಾರಾ ಇಲ್ವಾ, ಇವೆಲ್ಲಾ ಸಂದರ್ಶನ ಆಗಿಯೇ ಕೊನೆಗೆ ಮನೆ ಬಾಡಿಗೆಗೆ ಸಿಕ್ಕಿದ್ದು.
  ಮೊನ್ನೆ ಮೊನ್ನೆ ಎರಡು ತಿಂಗಳ ಹಿಂದೆ ನನ್ನ ಗೆಳೆಯನೊಬ್ಬನ ಗಾಡಿ ಕಳುವಾಗಿ ಪೋಲಿಸ್ ಸ್ಟೇಶನ್‍ಗೆ complaint ಕೊಡ ಹೋದರೆ, ಅವನನ್ನು ಎಂತಹ ಕೆಟ್ಟ ರೀತಿಯಲ್ಲಿ ನಡೆಸಿಕೊಂಡರು ಎನ್ನುವುದನ್ನು ಕೇಳಿದರೆ ಇದು ಬೆಂಗಳೂರಾ ಅನ್ನಿಸಿಬಿಡ್ತು. ಅವನ ಹೆಸರು ಒಂದು ಧರ್ಮಕ್ಕೆ ಅಂಟಿಕೊಂಡಿತ್ತು. ಆದರೆ ಅವನಲ್ಲ. ಅವನು ಧರ್ಮವನ್ನು ಬಿಟ್ಟು ಯಾವ ಕಾಲವಾಗಿದೆಯೋ !!!

  ೨. ನಮಗೆ ಅಂದ್ರೆ, ಯಾರು (ಮಾನಸಿಕವಾಗಿ ಮತ್ತು ದೈಹಿಕವಾಗಿ) ತುಳಿತಕ್ಕೆ/ ಶೋಷಣೆಗೆ ಒಳಗಾಗದ ಅನುಭವ ಪಡೆದಿದ್ದಾರೆ ಅವರಿಗೆ ಮಾತುಗಳಲ್ಲಿ , ಬರಹಗಳಲ್ಲಿ – ಹೀಗಾದರೆ ಎಷ್ಟು ಒಳ್ಳೆಯದು ಎನ್ನುವ ಮೇಲ್ನೋಟದ ಆದರ್ಶದ ಭ್ರಮೆ ಇರುತ್ತದೆ. ಎಲ್ಲಾ ರೀತಿಯಲ್ಲೂ.
  ಅದು ಧರ್ಮ ಇರಬಹುದು, ರಾಜಕೀಯ ಇರಬಹುದು, economy ಇರಬಹುದು. anything and everything . ಎಲ್ಲವೂ ಬಿಟ್ಟಿ ಅನಿಸಿಕೆಗಳು ಅಲ್ವಾ. ಓದಿ ತಿಳಿದುಕೊಂಡೇ ಈ ರೀತಿ ಅಭಿಪ್ರಾಯ ನೀಡಲು ಸಾಧ್ಯ.!!!
  ನನ್ನನ್ನೂ ಸೇರಿಸಿಕೊಂಡೇ.

  – ಈ ವರೆಗೂ ನನಗೆ, ನಾನು particular ಜಾತಿಯವಳು ಎನ್ನುವ ಕಾರಣಕ್ಕೆ ಯಾವ ರೀತಿಯ ಅವಮಾನವಾಗಲೀ, ಬೇಸರವಾಗಲೀ, ದೂಶಣೆಯಾಗಲೀ ಅನುಭವಕ್ಕೆ ಬಂದಿಲ್ಲ. ಅಂದ ಮಾತ್ರಕ್ಕೆ it does not exist ಅಂತ ನಾನು ಅಂದುಕೊಂಡರೆ ತಪ್ಪಾಗಲ್ವಾ.!

  ೩.. ಕೆಲವು ಸ್ತರಗಳಲ್ಲಿ ಪ್ರಜ್ನಾಪೂರ್ವಕವಾಗಿಯಾದರೂ ನಾವು ವೈಯಕ್ತಿಕ ನೆಲೆಯಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಹತ್ತಬೇಕಲ್ಲಾ. ಹಿಂದಿನಿಂದಲೂ ಎಷ್ಟೊಂದು ಜನ ಇದನ್ನು ಮಾಡಿಕೊಂಡೇ ಬಂದಿದ್ದಾರೆ. ಸಮಾಜ ಅಂದ್ರೆ ನಾವೇ ಅಲ್ವಾ. ನಿಧಾನವಾಗಿಯಾದರೂ ಈ ಬಗ್ಗೆ ಯಾವ ಭಯ ಆತಂಕವಿಲ್ಲದೆ ಚರ್ಚೆ ಮಾಡುತ್ತಿದ್ದೇವೆ ಎಂದರೆ something must be happening over the period of time !!!

  ೪. ಕ್ರಾಂತಿ ಗಾಗಿ ಕ್ರಾಂತಿ ಎನ್ನುವ ಅನಿವಾರ್ಯತೆ ಈಗಲೂ ನಮ್ಮಲ್ಲಿ ಇದೆಯೇ !
  ಹೌದು ಅಂದರೆ ಇನ್ನೂ ನಾವು ಮಾಡಬೇಕಾಗಿರುವುದು ತುಂಬಾ ಇದೆ. ಒಟ್ಟು ಸಾಮಾಜಿಕ ಕ್ರಾಂತಿಯಲ್ಲಿ ನನ್ನದೂ ಒಂದು ಪಾತ್ರ ಇರುವುದರಿಂದ ಅದಾಗಿಯೇ ಅದು ಆಗುತ್ತದೆ ಎಂದರೆ ಅದು ದೊಡ್ಡ ಸುಳ್ಳು.

  – ನಾನು ಮದುವೆಯಾಗಲು ಯೋಚಿಸಿದಾಗ, ನನ್ನ ಅಪ್ಪ ಅಮ್ಮ ಮೊದಲು ಹುಡುಕಿದ್ದು ನಮ್ಮ ಜಾತಿಯಲ್ಲಿ ಯಾರಾದ್ರೂ ಒಳ್ಳೆ ಹುಡುಗ ಇದ್ದಾನಾ ಅಂತ. ಅಷ್ಟು ವರ್ಷ ಅವರಿಬ್ಬರೂ ಪ್ರಗತಿಪರರಾಗಿ ಬರೆದದ್ದು, ಭಾಷಣ ಮಾಡಿದ್ದು, ಚಿಂತನೆ ನಡೆಸಿದ್ದು, ಇವೆಲ್ಲ ಸುಳ್ಳಾ ಅಂತ ಮೊದಲ ಬಾರಿಗೆ ನನಗೆ ಅನ್ನಿಸಿತ್ತು. ಆ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆ ಆಯ್ತು ಅಂತ ನನ್ನ ಸ್ನೇಹಿತರಿಗೇ, ಅಪ್ಪ ಅಮ್ಮ ನ ಸ್ನೇಹಿತರಿಗೇ ಆಶ್ಚರ್ಯ. ಯಾಕಂದ್ರೆ ವಿಚಾರವಂತ ಬರಹಗಾರರ ಕುಟುಂಬ. ಇದು ಒಂದು ಚರ್ಚೆಯ ವಿಶಯವೇ ಅಲ್ಲ ನಮಗೆ. ಅನಾಯಾಸವಾಗಿ ನಮ್ಮ ಸಹಜ ಯೋಚನಾಕ್ರಮದಲ್ಲಿ ಇದು ಬಂದು ಹೋಗಿರಬೇಕಿತ್ತು. ಹಾಗಂತ ತಿಳ್ಕೊಂಡಿದ್ರು. ನಾನೂ ಹಾಗೇ ಅಂದ್ಕೊಂಡಿದ್ದೆ.

  ಆದ್ರೆ ಸಮಸ್ಯೆ ಅದಲ್ಲ. ವೈಯಕ್ತಿಕವಾಗಿ ನಾವು ಈ ಬಗ್ಗೆ ಯೋಚನೆ ಮಾಡುವಾಗ ಎಲ್ಲರೂ ನಮ್ಮ ನಮ್ಮ ಅನುಭವಗಳ ನೆಲೆಯಲ್ಲೇ ನಮಗೆ ಬೇಕಾಗುವ comfort zoneಗಳಲ್ಲೇ ಬದುಕಲು ಇಷ್ಟ ಪಡುವವರು.

  ಜಾತಿ, ಧರ್ಮ, ದೇವರನ್ನು ಮೂಟೆ ಕಟ್ಟಿ ಸಮುದ್ರಕ್ಕೆ ಬಿಸಾಡಿದ ನನ್ನ ಮನೆಯಲ್ಲೇ ನನ್ನ ನಿರ್ಧಾರದ ಬಗ್ಗೆ ಚರ್ಚೆಯಾದರೆ, ಪಾಪ ಅವನ್ನೆಲ್ಲಾ ಇನ್ನೂ ಹೊತ್ತುಕೊಂಡು ತಿರುಗುತ್ತಿರುವವರ ಪಾಡೇನು ಅಂತ ಯೋಚಿಸಿದೆ.
  ಎಲ್ಲವೂ ಒಮ್ಮೆಲೇ ಬದಲಾಗಬೇಕು ಅಂದ್ರೆ ಹೇಗೆ. ಬಸವಣ್ಣ ಕ್ರಾಂತಿ ಮಾಡಿದ್ದು ಎಷ್ಟು ಶತಮಾನಗಳ ಹಿಂದೆ. ನಾವು ಈಗಲೂ ಹಾಗೆಯೇ ಇದ್ದೇವೆ ಅಲ್ವಾ. ನಿಧಾನವಾಗಿ ಬದಲಾಗುವ ಪ್ರಕ್ರಿಯೆ ಇದು.

  ನಾನು ಮದುವೆಯಾದಾಗ, ನಾನು ಏನೋ ದೊಡ್ದ ಕ್ರಾಂತಿ ಮಾಡಿದೆ ಎಂದು ಅನ್ನಿಸಲೇ ಇಲ್ಲ. ಯಾಕಂದ್ರೆ, ಮೊದಲೇ ನಾನು ಈ ಜಾತಿ, ಆ ಧರ್ಮ, ಈ ದೇಶ ಎನ್ನುವ ನೆಲೆಗಟ್ಟನ್ನು ಮೀರಿ ಯೋಚಿಸಲು ಸಾಧ್ಯವಾಗಿದ್ದರಿಂದ. ಜತೆಗೆ ನನ್ನ ಮೊದಲೇ ಎಷ್ಟೊಂದು ಜನ ಈ ಮೆಟ್ಟಿಲು ಹತ್ತಿ ಹೋಗಿದ್ದಾರೆ ಎನ್ನುವ ಸರಳ ಸತ್ಯದ ಅರಿವು ನನಗೆ ಇದ್ದ ಕಾರಣ. ಮತ್ತು ನನಗೆ ನನ್ನ ಅಪ್ಪ ಅಮ್ಮ ನೀಡಿದ ಆತ್ಮಬಲ. (ದ್ವಂದ್ವಗಳು ಏನೇ ಇದ್ದರೂ ಅವರ ಧೈರ್ಯ ಮತ್ತು ಪ್ರೋತ್ಸಾಹ ಜತೆಗಿದ್ದರಿಂದ).

  ನನ್ನ ಕುಟುಂಬದ ಪ್ರತಿಕ್ರಿಯೆ ಅತ್ಯಂತ ಸಹಜ and I do understand it.
  Its a micro example ಅಷ್ಟೆ. ನಮ್ಮ ಸಮಾಜ ಮಾನಸಿಕವಾಗಿ ಬದಲಾವಣೆಗೆ ರೆಡಿಯಾಗಿಲ್ಲ ಎನ್ನುವುದಕ್ಕೆ.
  ಯಾಕಂದ್ರೆ, ನಾನು ಜಾತಿ ಧರ್ಮ ದೇವರನ್ನು ಬಿಟ್ಟರೂ ನನ್ನ ಸುತ್ತಮುತ್ತ ಇರುವ ಜನರು ಇನ್ನೂ ಅದೇ ಲೇಬಲ್ ಹಚ್ಚಿಕೊಂಡಿದ್ದಾರಲ್ಲಾ. ಅವರೆಲ್ಲಾ ಯಾವಾಗ ಈ tag ಗಳನ್ನು ಕಳಚಿಡುತ್ತಾರೋ ಅಲ್ಲಿಯವರೆಗೆ ನಾನು ಅವರ ಜತೆ ಗುದ್ದಾಡಲೇಬೇಕಲ್ಲ.

  ೫. ನಾವು ಎಷ್ಟು ಮಂದಿ ಧರ್ಮ, ಜಾತಿ ಬಿಡಲು ತಯಾರು.???
  ನಮ್ಮ ನಮ್ಮ ಹೆಸರುಗಳಲ್ಲಿನ ಜಾತಿ ಸೂಚಕ, ಧರ್ಮ ಸೂಚಕ ಹೆಸರುಗಳನ್ನು ( ಸರ್ ನೇಮ್ ) ಬಿಟ್ಟರೂ ಸ್ವಲ್ಪ ಮಟ್ಟಿನ ಬದಲಾವಣೆ ಬಂದೀತು. ಅಲ್ಲವೇ.

  ಎಲ್ಲಿವರೆಗೆ ಜಾತಿ, ಧರ್ಮ ಎನ್ನುವ ಬಾಲ ಕಟ್ಟಿಕೊಳ್ಳುತ್ತೇವೆಯೋ ಅಲ್ಲಿವರೆಗೆ ಯಾವ ಮೀಸಲಾತಿ ಯಾರಿಗೆ ನೀಡಿದರೂ ಉಪಯೋಗವಾಗದು.

  ೬. ಪ್ರಸ್ತುತ ಭಾರತದ ದುರಂತ ಅಂದರೆ ಯಾವುದೇ ಸಾಮಾಜಿಕ ಬದಲಾವಣೆಯೂ, ರಾಜಕೀಯವಾದ ಫಿಲ್ಟರ್ ‍ನಿಂದ ಹಾದು ಹೋಗಲೇ ಬೇಕಾದ ಸಂದರ್ಭ ಇದೆ. ಅದನ್ನು ಅರಿತೇ ಸಿದ್ಧಲಿಂಗಯ್ಯನವರು ಇ ಮನವಿಯನ್ನು ಮಂಡಿಸಿರುವುದು.

  ಅಂಬೇಡ್ಕರ್ ಅನ್ನೋ ಮಹಾನ್ ಚಿಂತಕ ಭಾರತದಲ್ಲಿ ಹುಟ್ಟದೇ ಇರುತ್ತಿದ್ದಲ್ಲಿ ಈಗಿನ ಚರ್ಚೆ, ವಾದ, ಮೀಸಲಾತಿಯ ಹೊಸ ಹೊಳಹುಗಳು ಸಾಧ್ಯವೇ ಆಗುತ್ತಿರಲಿಲ್ಲ. ಮಾರ್ಟಿನ್ ಲುಥರ್ ನ civil rights movement ಆಗದೇ ಇರುತ್ತಿದ್ದಲ್ಲಿ ಒಬಾಮಾ ಅಮೇರಿಕಾ ಅಧ್ಯಕ್ಷನಾಗುವುದು ಸಾಧ್ಯವಿತ್ತಾ?
  ಆತ ಎಷ್ಟು ಸಬಲ ಮತ್ತು ಪರಿಣಾಮಕಾರಿ ಎನ್ನುವುದು ಬೇರೆಯೇ ಮಾತು. ಅಥವಾ ಜಾತಿ ರಾಜಕೀಯ, ಧರ್ಮ ರಾಜಕೀಯ ಅಮೇರಿಕೆಯಲ್ಲಿ ಇಲ್ಲವೇ ಎನ್ನುವ ಪ್ರತಿವಾದ ಬೇರೆಯೇ. ಅದು ಇಲ್ಲಿ ಬೇಡ.
  ಕುವೆಂಪು ಅವರ ವಿಶ್ವಮಾನವ concept ಆದರ್ಶ. ಅದು practical ಆದಾಗ ಮಾತ್ರ ಅಲ್ವಾ ನಿಜವಾದ ಬೆಲೆ.

  ೭. ಇನ್ನು ಮೀಸಲಾತಿಯಿಂದ ಉಪಯೋಗ ಏನು ಎನ್ನುವ ಅಥವಾ ಕೇವಲ ಬಡವ – ಶ್ರೀಮಂತ ಎನ್ನುವುದನ್ನು ಪರಿಗಣಿಸಿ ಎನ್ನುವ ವಾದಗಳು, ಮತ್ತೆ basic point ಗೇ ಮರಳುವಂತೆ ಮಾಡುತ್ತವೆ. ಅದು ಪ್ರಸ್ತುತ ಸಮಯ ಸಂದರ್ಭದಲ್ಲಿ ಅನಗತ್ಯ. ಯಾಕಂದ್ರೆ ಆ ಕಾಲಘಟ್ಟವನ್ನು ದಾಟಿ ಯಾವತ್ತೋ ನಾವು ಮುಂದೆ ಬಂದಾಗಿದೆ.

  ೮. ಅಂತರ್ ಧರ್ಮೀಯ, ಅಂತರ್ ಜಾತೀಯ ವಿವಾಹಗಳು ನಡೆಯುತ್ತಲೇ ಇರುತ್ತವೆ. ಆದರೆ ಸಿದ್ಧಲಿಂಗಯ್ಯ ಅವರು ಪ್ರಸ್ತಾಪಿಸಿದ ರೀತಿಯಲ್ಲಿ ….
  [ ಅವರು ಈ ರೀತಿ ವಿವಾಹವಾಗಬೇಕಾದರೆ ಅವರ ಮನಸ್ಸಿನಲ್ಲಿ ಒಂದು ಬದಲಾವಣೆ, ಆಂದೋಲನ ನಡೆದಿರುತ್ತದೆ. ಅವರು ಕ್ರಾಂತಿಯ ಕಡೆ ಒಲಿದಿರುವುದರಿಂದ ಇಂತಹ ವಿವಾಹ ಆಗಿದ್ದಾರೆ. ] …
  ಎನ್ನುವುದನ್ನು ನಾನು ಪೂರ್ತಿಯಾಗಿ ಒಪ್ಪಿಕೊಳ್ಳಲಾರೆ. ಮತ್ತು ಇದೇ ಕಾರಣದಿಂದಾಗಿ ಮೀಸಲಾತಿ ನೀಡುವ ಪ್ರಯತ್ನ ಸಾಮಾಜಿಕ ಕ್ರಾಂತಿಗೆ ಉಪಯೋಗವಾಗಲಾರದು. ಮೀಸಲಾತಿ ಸಿಗುತ್ತದೆ ಎನ್ನುವ ಕಾರಣಕ್ಕೇ ಈ ರೀತಿಯ ಮದುವೆಗಳಾದರೂ ಆಶ್ಚರ್ಯವಿಲ್ಲ. ಲಾಭಕ್ಕಾಗಿ ಏನು ಬೇಕಾದರು ಮಾಡುವ ಜನ ನಾವು.

  ೯. ಅವರೇ ಹೇಳಿದ ಇನ್ನೊಂದು ಅಂಶ ಹೆಚ್ಚು ಸೂಕ್ತ : …… [ ಇವರು ಜಾತಿರಹಿತರು, ನಿಜವಾದ ಭಾರತೀಯರು, ಜಾತ್ಯತೀತರು ಎಂದು ಇವರನ್ನು ಗುರುತಿಸುವಂತಾಗಬೇಕು. ]

  ಅಂತರ್ ಜಾತಿ/ ಧರ್ಮ ವಿವಾಹವಾದವರು ತಮ್ಮ ಜಾತಿ / ಧರ್ಮ / ಭಾಷೆ ಎನ್ನುವ ಅಸ್ತಿತ್ವವನ್ನು ಕಳೆದುಕೊಳ್ಳಲು ಸಿದ್ಧರಾಗಿರಬೇಕು.
  ಆ ನೆಲೆಗಟ್ಟನ್ನು ಮೀರಿ ತಾವು, ತಮ್ಮ ಮಕ್ಕಳು ಜಾತಿ / ಧರ್ಮ ರಹಿತ ಮಾನವರು ಎನ್ನುವುದು ಗಟ್ಟಿಯಾಗಿ ಪ್ರತಿಪಾದಿಬೇಕು. ಮತ್ತು ಅದು ಮಕ್ಕಳ ಮನಸ್ಸಲ್ಲೂ ಬೆಳೆಯಬೇಕು.

  ಇಲ್ಲವಾದಲ್ಲಿ ಈಗ ಹೆಚ್ಚಾಗಿ ಆಗುತ್ತಿರುವ ಹಾಗೆ, ಒಂದು ಜಾತಿ/ ಧರ್ಮದ ಪ್ರಾಬಲ್ಯವಾಗುತ್ತದೆಯೇ ಹೊರತು ಜಾತಿ ರಹಿತ , ಧರ್ಮ ರಹಿತ ಸಮಾಜ ಸಾಧ್ಯವಾಗಲಾರದು. ಮಕ್ಕಳು ತಂದೆಯ ಜಾತಿ/ಧರ್ಮವನ್ನೇ (dominant paradigm) ಆಧಾರವಾಗಿಸಿಕೊಳ್ಳುವ ಸಂದರ್ಭವೇ ಹೆಚ್ಚು, ಅದು ಪೂರ್ವಾಗ್ರಹ ಪೀಡಿತ ಸಮಾಜದೊಳಗೆ ಬದುಕುವ ಅನಿವಾರ್ಯ ಆಯ್ಕೆ.

  ಯಾಕಂದ್ರೆ, ಪ್ರತಿಯೊಂದು application ನಲ್ಲೂ ನಿಮ್ಮ ಜಾತಿ ಯಾವುದು, ನಿಮ್ಮ ಧರ್ಮ ಯಾವುದು ಎನ್ನುವ box ಗಳು ಇರುತ್ತವಲ್ಲ. ಅವುಗಳನ್ನು ತುಂಬದೇ ಇದ್ದರೆ ಎದುರಿಗಿರುವ clerk/officer ನೀವು ಬೇರೆ ಗ್ರಹದಿಂದ ಬಂದವರೇನೋ ಅಂತ ನೋಡ್ತಾರಲ್ಲಾ. (ಈಗ ಇವು optional ಆಗಿವೆ ಅಂತ ಅಂದ್ಕೊಂಡಿದ್ದೇನೆ … ಗೊತ್ತಿಲ್ಲ). ಆ embarrassment ಯಾರಿಗೆ ಬೇಕು. ಮತ್ತೆ ಹಾಗೆ ಪ್ರತಿ ಸಲ ಎಲ್ಲರಿಗೂ ಹೇಳ್ಕೊಂಡೇ ಇರ್ಬೇಕು ಅಲ್ವಾ. ನಾನು ಹುಟ್ಟಿದ್ದು ಅಂತರ್ ಜಾತಿ / ಧರ್ಮೀಯ ವಿವಾಹವಾದ ನನ್ನ ಅಪ್ಪ ಅಮ್ಮನಿಗೆ ಅಂತ.

  – ಈಗಾಗಲೇ ಅರವತ್ತು – ಎಪ್ಪತ್ತು ವರ್ಷಗಳ ಹಿಂದೆ ಅಂತರ್ ಜಾತಿ ವಿವಾಹವಾಗಿದ್ದ ನನ್ನ ಒಬ್ಬ ಅಜ್ಜ-ಅಜ್ಜಿಯ (ನನ್ನ ಅಜ್ಜನ ತಮ್ಮ) ಮಕ್ಕಳ ಮದುವೆಯ ಸಂದರ್ಭದಲ್ಲಿ ( ಇಪ್ಪತ್ತು – ಇಪ್ಪ್ಪತೈದು ವರ್ಶಗಳ ಹಿಂದೆ) ಮತ್ತೆ ಅದೇ ಪ್ರಶ್ನೆಗಳು, ಅದೇ ಸಂದರ್ಭ, ಗೊಂದಲಗಳು – ಅವರನ್ನು ಕಾಡಿದ್ದವು. ಇನ್ನು ಈಗ ಅವರ ಮೊಮ್ಮಕ್ಕಳ ಸಂದರ್ಭದಲ್ಲೂ ಹೆಚ್ಚೇನೂ ಬದಲಾಗಲಿಲ್ಲ.!!!
  ಈಗಲೂ ಸಂದರ್ಭ ಹಾಗೇ ಇದೆ ಅಂದರೆ !!! ಮೀಸಲಾತಿಯಿಂದ ಕ್ರಾಂತಿ ಸಾಧ್ಯವೇ??? …ಕೆಲವೊಮ್ಮೆ ಅನ್ನಿಸುತ್ತದೆ!!!.

  ೧೦. ಬಹುಶಃ as a concept – ಮೀಸಲಾತಿ ಎನ್ನುವುದು ಆದರ್ಶ.
  ಆದರೆ ಅದು ಆಮಿಶವಾದರೆ … ಮದುವೆ ಅನ್ನುವುದೂ ರಾಜಕೀಯ ದಾಳವಾಗಿ … ಇನ್ನು ಏನೇನೋ ಹೊಸ ಹೊಸ ರೀತಿಯ ಸಮಸ್ಯೆಗಳು ಸೃಷ್ಟಿ ಮಾಡಿಕೊಳ್ಳಬಾರದಲ್ಲಾ ನಾವು. !!!

  ಹಾಗಾಗದೇ … ಸರಿಯಾಗಿ ಸಲ್ಲುವ ಪಾತ್ರರಿಗೇ ಅದು ದಕ್ಕಿದರೆ ಆಗ ಸಹಜವಾಗಿ ಹೋರಾಟದ ದಾರಿ ಸುಲಭವಾಗುತ್ತದೆ.
  ಯಾರಾದರೂ ಎಲ್ಲಿಂದಾದರೂ ಶುರು ಮಾಡಬೇಕಲ್ಲಾ. ! ಅದನ್ನು ಸಿದ್ಧಲಿಂಗಯ್ಯ ಶುರು ಮಾಡಿದ್ದಾರೆ.

  – ಹೇಮಶ್ರೀ

  ಪ್ರತಿಕ್ರಿಯೆ
 10. ಪ್ರದೀಪ್

  ಮೇಲ್ಜಾತಿ, ಕೆಳಜಾತಿ, ಮೀಸಲಾತಿ ಅನ್ನುವವು ಇರೋವರೆಗೆ ಏನೂ ಬಗೆಹರಿಯುವುದಿಲ್ಲ. ಜಾತಿಯೇ ಬೇಡ. ಬಿಟ್ಟುಹಾಕಿ ಅದನ್ನು. ಯಾರ ಜಾತಿಯನ್ನೂ ಕೇಳಬೇಡಿ. ಜಾತಿ ಅನ್ನುವುದನ್ನು ನಿಷೇಧಿಸಿ. ಮತ್ತೆ ಅಂತರ್ಜಾತಿಯೂ ಇಲ್ಲ ಇಂತರ್ಜಾತಿಯೂ ಇಲ್ಲ. ಬದಲಾವಣೆ ಬೇಕಿದ್ರೆ ಬದಲಾಗಲು ಮೊದಲು ಸಿಧ್ಧರಾಗಿ! ಅದು ಬಿಟ್ಟು ಮೇಲ್ಜಾತಿ, ಕೆಳಜಾತಿ, ಅಂತರ್ಜಾತಿ, ಮೀಸಲಾತಿ ಎಂದೆಲ್ಲ ಸಮಾಜ ಒಡೆಯುವ ಕಾರ್ಯಕ್ಕೆ ಕೈ ಹಾಕಬೇಡಿ…..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: