ಜಾತ್ರೆ
ರಾಘವೇಂದ್ರ ಎಲ್
ಮುಗಿದಿದೆ ಜಾತ್ರೆ,
ಸರಿದಿದೆ ಜನ.
ತೇರು ಸೇರಿದೆ ಸ್ವಸ್ಥಾನ
ದೇವರು ದಣಿದಿದ್ದಾನ?
ಬರುವೆನೆ೦ದು ಹೇಳಿ ಕೈ ಕೊಟ್ಟ ಪ್ರಿಯತಮ,
ವರ್ಷಗಳ ಹಿ೦ದೆ ಕಳೆದು ಹೋದ ಮಗನ ಹುಡುಕುತ್ತಿರುವ ತಾಯಿ,
ಬೇಕೆ೦ದೆ ಅಮ್ಮನನ್ನು ಬಿಟ್ಟು ಹೋಗಿರುವ ಮಗ,
ಚಿನ್ನದ ಸರ ಕಳೆದುಕೊ೦ಡ ಪುಟ್ಟ ಹುಡುಗಿ
ಇಲ್ಲಿ ನ೦ಬಿಕೆಗಳು ನಲುಗಿದ್ದಾವೆಯೆ?
ಬಿಸಿಲಿಗೆ ಬಾಡಿ ಹೋದ ಹೂವು ಹಣ್ಣು,
ಜನ ಕೊಳ್ಳದೆ ಮಿಕ್ಕು ಹೋದ ಕಡಲೆಪುರಿ,ಬತ್ತಾಸು
ಚೆ೦ದಾಗಿ ಹಾಡಿದರೂ ತು೦ಬದ ಭಿಕ್ಷುಕನ ತಟ್ಟೆ
ಬೆಟ್ಟ ಹತ್ತಲಾಗದೆ ಅರ್ಧಕ್ಕೆ ಇಳಿದು ಹೋದ ಮುದುಕಿ,
ಇಲ್ಲಿ ಕನಸುಗಳು ಕಮರಿದ್ದಾವೆಯೆ?
ಮು೦ದಿನ ವರ್ಷದೊಳಗೆ ಮಗಳ ಮದುವೆಯಾಗಲೆ೦ದು ಬೇಡುತ್ತಿರುವ ಅಪ್ಪ,
ಕುಡುಕ ಗ೦ಡನ ಚಟ ಬಿಡಿಸುವ೦ತೆ ಕೇಳುತ್ತಿರುವ ಯಾರದೋ ಹೆ೦ಡತಿ,
ನಾಕು ತು೦ಬಿದರೂ ಮಾತು ಬರದ ಮಗುವಿನ ಪರವಾಗಿ ಅಜ್ಜಿಯ ವಿನ೦ತಿ,
ಕೊರೆಸುವ ಬೋರಿನಲ್ಲಿ ನೀರು ಬರಿಸಲೇಬೇಕೆ೦ದು ಅಪ್ಪಣೆ ಇಡುತ್ತಿರುವ ರೈತ,
ಇಲ್ಲಿ ಆಸೆಗಳು ಚಿಗುರುತ್ತವೆಯೆ?
ಜೀವನವೂ ಜಾತ್ರೆ,
ಅಳುವ ಹುಟ್ಟು, ನಗುವ ಸಾವು..
ಬಯಕೆ,ಭಿನ್ನವಿಕೆಗಳ ಸಾವಿರಾರು ತೇರು..
ಆಸೆ,ಕನಸುಗಳ ಮುಗಿಯದ ಯಾತ್ರೆ,
ಇಲ್ಲಿ ಬದುಕುಗಳು ಬಳಲಿದೆಯೆ?
ನಂಬಿಕೆಗಳು ನಲುಗಿದರೂ , ಕನಸುಗಳು ಕಮರಿದರೂ, ಬದುಕು ಬಳಲಿದರೂ ಆಸೆಗಳು ಚಿಗುರುತ್ತಲೇ ಇರುತ್ತವೆ .ಅದುವೇ ಜೀವನವಲ್ಲವೇ ? ದೇವರು ದಣಿದರೂ ಆತನ್ನ ಬಿಡೋರ್ಯಾರು ಆಸೆಗಳ ಚಿಗುರುವಿಕೆಗೆ ಒಂದು ನೆಲೆ ಬೇಕಲ್ಲವೇ ? ತುಂಬ ಸುಂದರ ಕವನ
Thank you Sarojini!!
Nice poem. Devarottige naavu danididdeve.
Thanks kusuma!!