ದೇವು ಪತ್ತಾರ್ ಎಂಬ 'ಚಿನ್ನದ ಹುಡುಗ'

ದೇವು ಚಿನ್ನದಂತಹ ಹುಡುಗ. ‘ಚಿನ್ನದ ಹುಡುಗ’ ಈತನ ಬ್ಲಾಗ್ ಹೆಸರು. ಕಲ್ಬುರ್ಗಿಯ ಒಡಲಲ್ಲಿಯೇ ಕುಳಿತಿರುವ ಆ ಕರುಣೆ ದೇವು ಪತ್ತಾರ್ ನಲ್ಲೂ ಮನೆ ಮಾಡಿದೆ. ಇಂಗ್ಲಿಷ್ ಎಂ ಎ ಮಾಡಿ ಪತ್ರಿಕೋದ್ಯಮಕ್ಕೆ ಹೊರಳಿಕೊಂಡ ದೇವು ಹಲವು ವರ್ಷಗಳ ಕಾಲ ಸಾಪ್ತಾಹಿಕ ಪುರವಣಿಗೆ ಸಾಥಿ ನೀಡಿದರು. ಈಗ ಬೀದರ್ ನಲ್ಲಿ ಪ್ರಜಾವಾಣಿ ವರದಿಗಾರ.
ದೇವು ಬ್ಲಾಗ್ ಆರಂಭಿಸಿದ್ದರಿಂದ ಅವರಿಗೇನು ಲಾಭವಾಯಿತೋ ಗೊತ್ತಿಲ್ಲ. ಆದರೆ ಅವರ ಬೇಂದ್ರೆ, ಶೇಕ್ಸ್ಪಿಯರ್ ಮುಂತಾದ ಹೊಸ ಒಳನೋಟಗಳ ಲೇಖನಗಳಿಂದ ಬ್ಲಾಗ್ ಓದುಗರಿಗಂತೂ ಲಾಭವಿದೆ. ದೇವು ಈತನಕ ಅಲ್ಲಿಲ್ಲಿ ಬರೆದದ್ದನ್ನು ಬ್ಲಾಗ್ ಅಂಗಳದಲ್ಲಿ ಸೇರಿಸುತ್ತಿದ್ದಾರೆ. ಹೊಸತಾಗಿಯೇ ಬರೆಯುವುದಕ್ಕೆ ಇನ್ನೊಂದು ಬ್ಲಾಗ್ ಆರಂಭಿಸಿದ್ದೇನೆ ಎಂದಿದ್ದಾರೆ. ಎಲ್ಲಕ್ಕೂ ಸ್ವಾಗತ
ಖ್ಯಾತ ಕಲಾವಿದ ಸಜ್ಜನಿಕೆಯ ವಿ ಜಿ ಅಂದಾನಿ ಕುರಿತ ಅವರ ಬರಹವೊಂದು ಸ್ಯಾಂಪಲ್ ಗಾಗಿ ಇಲ್ಲಿ-

‘ಒಕ್ಕಲತನದ ಮ್ಯಾಲ ನನಗ ಭಾಳ ಒಲವು’

ತಮ್ಮ ಕಲಾಕೃತಿಗಳಲ್ಲಿ ಹೈದರಾಬಾದ್ ಕರ್ನಾಟಕದ ಅದರಲ್ಲೂ ವಿಶೇಷವಾಗಿ ಕಲ್ಬುರ್ಗಿ ಸುತ್ತಲಿನ ಬದುಕಿನ ಅನುಭವ- ಜೀವಂತಿಕೆಯನ್ನು ಚಿತ್ರಿಸುವ ವಿ.ಜಿ. ಅಂದಾನಿಯವರು ಪ್ರಾದೇಶಿಕ ಅನನ್ಯ ಶೈಲಿಯ ಮೂಲಕ ಹೆಸರುವಾಸಿಯಾಗಿರುವವರು. ಕಲ್ಬುರ್ಗಿಯಂತಹ ಬರಡು ನೆಲದಲ್ಲಿ `ಐಡಿಯಲ್ ಫೈನ್ ಆರ್ಟ್‌ ಸ್ಕೂಲ್ಮೂಲಕ ಕಲಾಪರಂಪರೆಯನ್ನು ಹುಟ್ಟುಹಾಕಿರುವ ಅಂದಾನಿಯವರು ತಮ್ಮ ಕುಟುಂಬ, ನೆನಪು- ಹಳಹಳಿಕೆ- ಕನಸುಗಳನ್ನು ಮನಬಿಚ್ಚಿ ಮಾತನಾಡುತ್ತಾರೆ.

`ನಮ್ಮೂರು ಕಲ್ಬುರ್ಗಿಗೆ 25 ಕಿ.ಮೀ. ದೂರದಲ್ಲಿರುವ ಕಿರಣಗಿ. ನಾ ಸಣ್ಣಾವ್ದಿದಾಗ ನಮ್ಮದು ಜಾಯಿಂಟ್ ಫ್ಯಾಮಿಲಿ. ಒಬ್ಬ ಅಕ್ಕ ಸೇರಿದಂತೆ 11 ಸಹೋದರರಲ್ಲಿ ನಾನೇ ಕಡೆಯವ. ನಿಜಾಂ ಕಾಲದಲ್ಲಿ ಪಟವಾರಿ ಆಗಿದ್ದ ಅಜ್ಜ ಭಾರೀ ಮನಸ್ಯಾ ಇದ್ದ . ಅವನಿಂದಾನೇ ಮನ್ಯಾಗ ಎಲ್ಲರಿಗಿ ಎಜ್ಯುಕೇಷನ್ ಸಿಕ್ಕಿದ್ದು. ಆದ್ರ ನಮ್ಮ ಫಾದರ್ ಮಾತ್ರ ಪೂರ್ತಿ ಹೊಲಾನೇ ನಂಬಿ ಬದುಕಿದ್ದವರು. ನನಗೂ ಒಕ್ಕಲತನದ ಮ್ಯಾಲ ಭಾಳ ಒಲವ ಐತಿ. ಈಗೀಗ ಕಲ್ಬುರ್ಗಿ ಊರ ಹೊರಗ ಒಂದೀಟು ಹೊಲ ತಗೊಂಡು ತೋಟ-ಪಟ್ಟಿ ತರಹ ಮಾಡಬೇಕು ಅಂತ ಅಂದುಕೊಂಡೀನಿಎಂದು ತಮ್ಮ ಹಿನ್ನೆಲೆ ಮತ್ತು `ಕನಸುವಿವರಿಸುತ್ತಾರೆ.

`ನಮ್ಮೂರಿಗೆ ಸನೀಪದ ದೊಡ್ಡ ಊರಂದ್ರ ಎಸಿಸಿ ಫ್ಯಾಕ್ಟರಿಯಿಂದ ಫೇಮಸ್ ಆಗಿದ್ದ ಶಹಾಬಾದ. ಅಲ್ಲಿಗೆ ಸಿನಿಮಾ ನೋಡುದಕ್ಕೆ ಹೋಗ್ತಿದ್ವಿ. ನಾನು `ಆವಾರಾ‘, `420’ ನೋಡಿದ್ದೆಲ್ಲಾ ಅಲ್ಲಿಯೇ. ಆಗೇ ನಾಕಾರು ಸರ್ತಿ ನಾ ಫ್ಯಾಕ್ಟರಿಗೆ ಹೋಗಿದ್ದೆ. ಸಿನಿಮಾ- ಬಯಲಾಟ ಎರಡೂ ನೋಡ್ತಿದ್ದೆ. ಕುಂಬಾರ ಮನ್ಯಾಗ ಗಡಿಗಿ ಮಾಡೋದನ್ನ ನೋಡೋದು. ಅಲ್ಲಿ ಮಣ್ಣ ತಗೊಂಡು ನಾವೇ ಮಣ್ಣೆತ್ತ ಮಾಡೋದು ಮಾಡ್ತಿದ್ವಿ. ಆಗ ನಮಗ ಗೊತ್ತಿದ್ದ ಕಲಾ ಅಂದ್ರ ಇಷ್ಟ. ನಾಗರಮಾಸಿ- ಗಣೇಶ ಚೌತಿಗೆ ಚಿತ್ರ ಬರೀತಿದ್ದೆಎಂದು ಕಲಾಜೀವನ ಆರಂಭವಾಗುವ ಮುನ್ನಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

`ಆಗ ಕ್ರಿಕೆಟ್ ಇರಲಿಲ್ಲ. ದಪ್ಪ ದುಪ್ಪಿ, ಮರ ಹತ್ತೂದು, ಲಗೋರಿ ಆಡ್ತಿದ್ವಿ. ನಾವೇ ಕಲ್ಲಿನ ಗೋಟಿ ತಯಾರ ಮಾಡ್ತಿದ್ವಿ. ಮುಂಜಾನೆ ಹೋದ ಕೂಡಲೇ ಕಲ್ಲು ತಗೊಂಡು ಕಟಿಲಿಕ್ಕ ಸುರಮಾಡಿದ್ ಸಂಜಿ ಆಗೂದರೊಳಗ ಗೋಟಿ ಆಗ್ತಿತ್ತು. ದೀಪಾವಳಿ ದುಕಾನ ಪೂಜಿ ಇದ್ರ ಮತ್ತು ದಸರಾದಾಗ ಸುಣ್ಣ ಹಚ್ಚಿದ ಮ್ಯಾಲ ಬಣ್ಣ ಬರೀಲಿಕ್ಕ ಕರೀತಿದ್ದರು. ನಮ್ಮೂರಾಗಿನ ಎಷ್ಟೋ ಮನಿ ಗ್ವಾಡಿ ಮ್ಯಾಲ ಬಣ್ಣ ಬರದೀನಿ. ಅದಕ್ಕ ರೊಕ್ಕ ಕೊಟ್ಟ ಎನ್ಕರೇಜ್ ಮಾಡಿದ್ದರುಎನ್ನುವ ಅಂದಾನಿಯವರು `ನಾಕನೇತ್ತೆ ತನ ನಮ್ಮೂರಾಗ ಸಾಲೀ ಕಲ್ತ ನಾವು ಐದನೇಕ್ಕ ಕಲ್ಬುರ್ಗಿ ಬಂದ್ವಿ. ಸಮೀಪ ಇದ್ದದ್ದದರಿಂದ ನಮ್ಮೂರಿಂದ ಟಾಂಗಾದಾಗೇ ಬಂದು ಹೋಗ್ತಿದ್ವಿ. ನಮ್ಮೂರಿನ 20 ಜನ ಹುಡುಗರು ಒಂದೇ ಕಡೆ ಇರ್ತಿದ್ವಿ. ಯಾಡ ದಿನಕ್ಕೊಮ್ಮೆ ಟಾಂಗಾದಾಗ ಊರಿಂದ ಬುತ್ತಿ ಕಳಸ್ತಿದ್ದರು. ರೊಟ್ಟಿ, ಮಸರು, ಸೆಂಗಾದ ಹಿಂಡಿ, ಪುಂಡಿಪಲ್ಲ್ಯಾ, ಪಿಟ್ಲ ಕಳುಸ್ತಿದ್ದರು. ಅನ್ನ ಕಳಸ್ತಿದ್ದಿಲ್ಲ, ಯಾಕಂದ್ರ ನಮ್ಮೂರ ಕಡಿ ಅನ್ನದ ಬಳಕಿ ಬಹಳ ಕಡಿಮಿ. ಎಳ್ಳಾಮಾಸ್ಯಾಗ ಉಂಡಿ ಹಿಂಡಿಪಲ್ಲ್ದೆದ ವಿಶೇಷ, ಹಬ್ಬ-ಹುಣ್ಣಿವಿಗೆ ಹೋಳಿಗೆ, ಕಡಬು ಬರ್ತಿದ್ವು, ಆಗ ಲೈಫ್ ಬಹಳ ಲೈವ್ಲಿ ಇತ್ತು. ಬರಿ ನಾಕಾಣೆಗೆ ಸಿನಿಮಾ ನೋಡ್ತಿದ್ವಿ. ಹಳ್ಳಿಯಿಂದ ಬಂದಿದ್ವಿ ನೋಡ್ದಿದೆಲ್ಲಾ ಹೊಸದಾಗೇ ಕಾಣ್ತಿತ್ತು. ಆವಾಗ ಕಲ್ಬುರ್ಗಿಯಲ್ಲಿ ಸೈತ ಮನಿಗೆಲ್ಲ ಲೈಟ್ ಬಂದಿರಲಿಲ್ಲ. ನಾವು ಕಂದೀಲ ಬೆಳಕಿನಾಗ ಓದ್ತಿದ್ವಿ. ಲೈಟಿನ ಬೆಳಕ ಬೇಕಂದ್ರ ಗಾರ್ಡನ್ದಾಗ ಹೋಗಬೇಕಾಗ್ತಿತ್ತುಎಂದು ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾರೆ.

`ಡಾಕ್ಟರ್ ಓದಿಸಬೇಕು ಅಂತ ಮನ್ಯಾಗ ಒತ್ತಾಯ ಮಾಡಿ ಎಸ್ಸೆಸ್ಸೆಲ್ಸಿ ಮುಗದ ಮ್ಯಾಲ ಹುಬ್ಬಳ್ಳಿ ಪಿ.ಸಿ.ಜಾಬಿನ್ ಕಾಲೇಜಿಗೆ ಸೇರಿಸಿದರು. ಫಿಸಿಕ್ಸ್, ಗಣಿತ ಬಹಳ ಕಷ್ಟ ಆಗಿ ಎರಡು- ಮೂರು ವರ್ಷ ಫೇಲ್ ಆದೆ. ಆಮ್ಯಾಲ ಕಲ್ಬುರ್ಗಿ ಎಸ್ಬಿ ಕಾಲೇಜ್ನಾಗ ಆಟ್ಸ್ ಸೇರಿದೆ. ಅಲ್ಲಿದ್ದಾಗಲೇ ಕಲೆಯ ಬಗ್ಗೆ ಹೆಚ್ಚಿನ ಒಲವು ಬೆಳೆಸಿಕೊಂಡೆಎನ್ನುವ ಅವರು ತಮ್ಮ ಮೊದಲನೇ ಚಿತ್ರಕಲಾ ಪ್ರದರ್ಶನದ ಬಗ್ಗೆ ಹೇಳುವುದು ಹೀಗೆ `ಕಲ್ಬುರ್ಗಿಯಾಗ ಆಗ ಗ್ಯಾಲರಿ- ಗೀಲರಿ ಏನೂ ಇರಲಿಲ್ಲ, ರೆಂಟ್ ಕೊಡದೇ ಇರೊ ದುಕಾನ್ದಾಗ ಪೇಂಟಿಂಗ್ ಎಕ್ಸಿಬಿಷನ್ ಮಾಡಿದ್ವಿ. ಅದರೊಳಗ ಅಂತಾ ಕ್ರಿಯೇಟಿವ್ ಪೇಂಟಿಂಗ್ ಏನೂ ಇರಲಿಲ್ಲ. ಲ್ಯಾಂಡ್‌ಸ್ಕೇಪ್‌, ದೇವರ ಚಿತ್ರಗಳಿದ್ವು. ಅದರ ಉದ್ಘಾಟನೆಗೆ ಅನಕೃ ಬಂದಿದ್ರು‘.

`ಕಲೆಜೊತೆ ಪುಸ್ತಕ, ಅಂಚೆ ಚೀಟಿ ಮತ್ತು ಹಳೆಯ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿರುವ ಅಂದಾನಿಯವರ ಸಂಗ್ರಹದೊಳಗ 11 ಸಾವಿರ ಕಲಾಪುಸ್ತಕಗಳ ಸಂಗ್ರಹ ಮತ್ತು ನೂರಾರು ಅಂಚೆಚೀಟಿಗಳಿವೆ. `ಈಗಲೂ ಮನ್ಯಾಗಿನ ಮತ್ತು ಕಾಲೇಜಿನ ಸ್ಟುಡಿಯೋದಾಗ ಪ್ರತಿದಿನ 2-3 ತಾಸು ವರ್ಕ್‌ ಮಾಡ್ತಿನಿ, ಓದ್ತಿನಿ ಮತ್ತು ಬರೀತಿನಿ. ಸಂತೃಪ್ತಿ ಅದ. ಆದ್ರ, ಕೆಲ್ಸದ ನಡುವ ನಮ್ಮೂರಿಗೆ ಹೋಗೂದು ಕಡಿಮಿ ಆಗ್ಯಾದ. ವರ್ಸಕ್ಕ ಎರಡ- ಮೂರು ಸಲ. ಊರಿನಿಂದ ಹೋಗೂದು ಕಡಿಮಿ ಆದಾಂಗ ಪ್ರಕೃತಿಯಿಂದ ದೂರ ಹೋದಾಂಗ ಅನ್ನಸ್ತದಎಂದು ವಿಷಾದಿಸಲು ಮರೆಯುವುದಿಲ್ಲ.

ಅಂದಾನಿಯವರ ಕೆಲವು ವಿಚಾರಗಳು:

ಜಾಗತೀಕರಣದಿಂದಾಗಿ ಸಾಂಪ್ರದಾಯಿಕ ಕಲಾವಿದರು ಮತ್ತು ಕಲಾಪ್ರಕಾರಗಳು ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೇ ಸೊಗಸಾದ ಕಥನದ ಹಿನ್ನೆಲೆ, ಕೌಶಲ್ಯ ಇದ್ದರೂ ಖಚಿತ ಅಭಿವ್ಯಕ್ತಿ ನೀಡದಿದ್ದರೆ ಅವುಗಳು ಉಳಿಯುವುದು ಕಷ್ಟ. ಶಿವರಾಮ ಕಾರಂತರು ಯಕ್ಷಗಾನ ಕಲೆಗೆ ಹೊಸತನದ ಸ್ಪರ್ಶ ನೀಡಿದ ಹಾಗೆ ಯಾರಾದರು ಒಬ್ಬರು ಲೀಡ್ ತೆಗೆದುಕೊಂಡು ಸಂಸ್ಕರಿಸದಿದ್ದರೆ ಅವುಗಳನ್ನು ಮುಂಬರುವ ದಿನಗಳಲ್ಲಿ ಉಳಿಸಿಕೊಳ್ಳುವುದು ಕಷ್ಟ.

ಸಮಕಾಲೀನ ಕಲಾಕೃತಿಗಳಿಗೆ ಒಳ್ಳೆಯ ಮಾರುಕಟ್ಟೆ ದೊರೆಯುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಅವಕಾಶ ಇರುತ್ತದೆ. ಮುಂಬೈ, ಕೊಲ್ಕತ್ತಾ, ದೆಹಲಿ, ಬೆಂಗಳೂರುಗಳ ಕಲಾವಿದರು ಈಗಾಗಲೇ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿದ್ದಾರೆ. ಯಾವ ರೀತಿಯ ಕಲಾಕೃತಿಗಳನ್ನು ರಚಿಸಿದರೆ ಮಾರಾಟ ಮಾಡಬಹುದು ಎಂಬ ಅರಿವು ಅವರಿಗಿರುತ್ತದೆ. ಜಾಗತೀಕರಣ ಮೊದಲು ಬರುವುದೇ ಇಂತಹ ಬೃಹತ್ ನಗರಗಳಿಗೆ. ಸಹಜವಾಗಿಯೇ ಆ ನಗರಗಳಲ್ಲಿನ ಕಲಾವಿದರು ಅದರ ಲಾಭಗಳನ್ನು ಪಡೆದುಕೊಳ್ಳುತ್ತಾರೆ. ಆದರೆ, ಗುಲ್ಬರ್ಗ, ಹುಬ್ಬಳ್ಳಿ, ದಾವಣಗೆರೆಗಳಂತಹ ಸಣ್ಣ ಪುಟ್ಟ ನಗರಗಳಲ್ಲಿ ಇರುವವರು ಅಸ್ತಿತ್ವ ಉಳಿಸಿಕೊಳ್ಳಲು ಸಂಘರ್ಷ ಮಾಡಬೇಕಾಗುತ್ತದೆ. ಅವರಿಗೆ ಹೆಸರಾಂತ ಗ್ಯಾಲರಿಗಳ ಬೆಂಬಲ ಇರುವುದಿಲ್ಲ.

***

ಕಲಾವಿದರ ಗೌರವಯುತ ಉಪಜೀವನಕ್ಕೆ ಗ್ಯಾಲರಿಗಳು ಮಾರ್ಗ ಕಲ್ಪಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರೆ ಅವು ಮಾಡ್ದಿದು ಕೇವಲ ಅಷ್ಟು ಮಾತ್ರವೇ ಅಲ್ಲ. ಕಲೆಯ ಅಭಿವೃದ್ಧಿಗಾಗಿಯೂ ಗ್ಯಾಲರಿಗಳು ಒಳ್ಳೆಯ ಕೆಲಸ ಮಾಡಿವೆ. ಖಾಸಗಿ ಗ್ಯಾಲರಿಗಳು ಕಲಾವಿದರಿಗೆ ಮತ್ತು ಅವರ ಕಲಾಕೃತಿಗಳಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಗಣನೀಯ ಕೆಲಸ ಮಾಡಿವೆ. ಇವತ್ತು ದೊಡ್ಡ ಕಲಾವಿದರ ಕಲಾಕೃತಿಗಳ ಬಗ್ಗೆ ಲಕ್ಷ- ಕೋಟಿ ರೂಪಾಯಿಗಳ ಲೆಕ್ಕದಲ್ಲಿ ಜನ ಮಾತನಾಡುವಂತಾಗಲು ಗ್ಯಾಲರಿಗಳೇ ಕಾರಣ. ಹಾಗೆಯೇ ಖರೀದಿಸುವವರಲ್ಲಿ ಪೈಪೋಟಿ ಹೆಚ್ಚಲು ಗ್ಯಾಲರಿಗಳೇ ಕಾರಣ. ಮಾರುಕಟ್ಟೆ ದೃಷ್ಟಿಯಿಂದ ಮಾತ್ರವಲ್ಲದೇ ಕಲಾವಿದರಿಗೆ ಸ್ಟಾರ್ ಇಮೇಜ್ ಕಲ್ಪಿಸುವ ಕೆಲಸ ಕೂಡ ಮಾಡಿವೆ. ಈಗೀಗ ಗ್ಯಾಲರಿಗಳು ಕಲಾವಿದರ ಸಮಗ್ರ ಕಲಾಕೃತಿಗಳನ್ನು ಒಳಗೊಂಡ ಅತ್ಯುತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುವ ಕೆಲಸ ಕೂಡ ಮಾಡುತ್ತಿವೆ.

***

ನನಗೆ ಗೊತ್ತಿರುವ ಹಾಗೆ ಗ್ಯಾಲರಿಗಳವರು ರಿಸ್ಟ್ರಿಕ್ಷನ್ ಹಾಕುವುದಿಲ್ಲ. ಹಾಗೆ ಹಾಕಿದರೂ ಕಲಾವಿದರು ಒಪ್ಪಿಕೊಳ್ಳುವುದಿಲ್ಲ. ಕೆಲವು ದಿನಗಳ ಹಿಂದೆ ಆರ್ಟ್‌ ಫಿಲ್ಡ್‌ನಲ್ಲಿಯೂ `ವಾಸ್ತುಅಂತ ಬಂತು. ಮನೆಯ ವಾಸ್ತು ಆಧರಿಸಿ ಕಲರ್ ಉಪಯೋಗಿಸುವ ಪ್ರಸ್ತಾಪ ಬಂದಿದ್ದವು. ಕಲಾವಿದರಿಗೆ ಇಷ್ಟವೇ ಆಗದ ಕಲರ್ ಹೇಗೆ ಬಳಸಲು ಸಾಧ್ಯ? ಒಂದು ಮಾತು, ಮಾರುಕಟ್ಟೆ ಮತ್ತು ಟ್ರೆಂಡ್ ನೋಡಿಕೊಂಡು ಅದಕ್ಕೆ ಅಗತ್ಯವಿರುವ ಕಲಾಕೃತಿಗಳನ್ನು ರಚಿಸಿಕೊಡುವಂತೆ ಕೇಳುವ ಗ್ಯಾಲರಿಗಳಿರುತ್ತವೆ. ಅದರಿಂದ ಕಲಾವಿದರಿಗೆ `ಚೌಕಟ್ಟುದೊರೆತು ಅದರಿಂದ ಆರ್ಥಿಕ ಲಾಭವೂ ಆಗುತ್ತದೆ.

***

ಚಿತ್ರಸಂತೆ ಜನರನ್ನು ಆಕರ್ಷಿಸಬಹುದು. ಆದರೆ ಕಲಾಸಕ್ತಿಯನ್ನು ತಣಿಸುವ ಜವಾಬ್ದಾರಿ ನಿರ್ವಹಿಸುವುದಿಲ್ಲ. ಹಾಗೆಯೇ ಚೌಕಾಶಿ ವ್ಯಾಪಾರ ಇರುತ್ತದೆ. ಅದರಿಂದ ಕಲಾವಿದನಿಗೆ ನಷ್ಟ. ಗ್ಯಾಲರಿಯಲ್ಲಿ ಕಲಾಕೃತಿಗಳಿಗೆ ಸಿಗುವ ಆದ್ಯತೆ ಮತ್ತು ಮಾನ್ಯತೆಗಳೆರಡೂ ಚಿತ್ರಗಳಿಗೆ ಸಿಗುವುದಿಲ್ಲ. ಚಿತ್ರ ನೋಡಿದ ಖುಷಿಯೂ ಸಹೃದಯನಿಗೆ ದೊರೆಯುವುದಿಲ್ಲ. ಇಬ್ಬರ ದೃಷ್ಟಿಯಿಂದಲೂ ಗ್ಯಾಲರಿಗಳೇ ನಿಜವಾದ ಸಂಪರ್ಕದ ಕೊಂಡಿಗಳು.

***

ಫ್ಯಾಷನ್ ಆಗಿದೆ, ಆಗುತ್ತಿದೆ ಎಂಬ ಮಾತುಗಳನ್ನು ನಾನು ಒಪ್ಪುವುದಿಲ್ಲ. ಹಾಗೆ ಬಂದವರು ಕಠಿಣ ಪರಿಶ್ರಮ ನಿರೀಕ್ಷಿಸುವ ಈ ಫಿಲ್ಡ್ನಲ್ಲಿ ಉಳಿಯುವುದು ಸಾಧ್ಯವಿಲ್ಲ. ಕಲೆಯ ಬಗ್ಗೆ ಪ್ಯಾಷನ್ ಇದ್ದು ಶ್ರಮ ಪಡುವವರು ಮಾತ್ರ ಉಳಿಯುತ್ತಾರೆ ಮತ್ತು ಬೆಳೆಯುತ್ತಾರೆ.

‍ಲೇಖಕರು avadhi

October 15, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. Ganadhalu Srikanta

  ಮೂರ್ನಾಲ್ಕು ವರ್ಷಗಳ ಹಿಂದೆ ಮಬ್ಬುಕವಿಯುತ್ತಿದ್ದ ಸಂಜೆ ವೇಳೆ ರವೀಂದ್ರ ಕಲಾಕ್ಷೇತ್ರದ ಅಂಗಳದಲ್ಲಿ ಗೆಳೆಯ ಚೇತನ್ ನಾಡಿಗೇರ್ ನನಗೆ ದೇವು ಪತ್ತಾರ ಪರಿಚಯಿಸಿದ್ದ.ಕತ್ತಲಾದ್ದರಿಂದ ಅವರ ಚಹರೆ ಅಷ್ಟಾಗಿ ನೆನಪಿಲ್ಲ. ಆದರೆ ಅವರ ಅನೇಕ ಬರಹಗಳು ಮಾತ್ರ ನನ್ನ ಮನದಾಳದಲ್ಲಿ ಹಸಿರಾಗಿವೆ. ಅವರು ಚೆನ್ನಾಗಿ ಬರೆಯುತ್ತಾರೆ. ಮನಮುಟ್ಟುವಂತೆ ಬರೆಯುತ್ತಾರೆ. ಸನ್ನಿವೇಶಗಳು ಕಣ್ಮುಂದೆ ಹಾಯುವಂತೆ ಬರೆಯುತ್ತಾರೆ. ಇತ್ತೀಚೆಗಿನ ಅವರ ರಾಜಕೀಯ ಗ್ಯಾಂಬ್ಲಿಂಗ್ ಇದ್ಹಾಂಗ (ಮೆರಾಜುದ್ದೀನ್ ಪಟೇಲ್ ಅವರ ಸಂದರ್ಶನ) ಬರಹ ನನಗಂತೂ ತುಂಬಾ ಇಷ್ಟವಾಯಿತು. ಉತ್ತರ ಕನರ್ಾಟಕದ ಭಾಷಾ ಸೊಗಡಿನ ಆ ಸಂದರ್ಶನ ಓದುತ್ತಿದ್ದಾಗ ‘ಪಟೇಲ್ರು ನಮ್ಮ ಜೊತೆ ಕುಳಿತು ಮಾತನಾಡುತ್ತಿದ್ದಾರೇನೋ ಅನ್ನಿಸುತ್ತಿತ್ತು’.
  ದೇವು ಪತ್ತಾರ್ ಗೆ ಶುಭವಾಗಲಿ…
  ಗಾಣಧಾಳು ಶ್ರೀಕಂಠ

  ಪ್ರತಿಕ್ರಿಯೆ
 2. Godlabeelu Parameshwara

  ‘Chinnada Huduga’ blog hesare chennaagide. Barehagaloo haageye irutthave emba vishwaasa nannadu. Kaarana e blog DEVU PATTAR avaradu. Good Luck Pattar. Have a nice time.
  -Godlabeelu

  ಪ್ರತಿಕ್ರಿಯೆ
  • Manik Bhure

   `Chinnada Huduga’n
   `Bannad’ Matugalinda
   `kalavid’ Andani avar
   `Chahareya’ Sundar
   `Chitra’ moodide
   -Manik R.Bhure
   Basavakalyan

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: