ದೇಶಕಾಲ:ಚಿಂತೆ ಬಿತ್ತುವುದು ಬೇಡ; ಚಿಂತನೆ ಬೆಳೆಸೋಣ

-ಕೆ.ಎಲ್. ಚಂದ್ರಶೇಖರ್ ಐಜೂರ್,

ಮಂಜುನಾಥ್‌ಲತಾ
ಮಾನ್ಯರೆ,
’ದೇಶ ಕಾಲ’ ಎಂಬ ಪತ್ರಿಕೆಯ ಕುರಿತು ಇದುವರೆಗೆ ನಡೆದಿರುವ ಅಭಿಪ್ರಾಯ-ಭಿನ್ನಾಭಿಪ್ರಾಯ, ಅನ್ನಿಸಿಕೆಗಳ ವಿದ್ಯಮಾನವನ್ನು ತಾವೆಲ್ಲರೂ ಗಮನಿಸಿದ್ದೀರಿ. ಕಳೆದ ಎರಡು ತಿಂಗಳುಗಳಿಂದಲೂ ನಡೆದ ಈ ವೈಚಾರಿಕ ಪ್ರಕ್ರಿಯೆ ನಮ್ಮ ಕನ್ನಡ ಸಾಂಸ್ಕೃತಿಕ ಜಗತ್ತಿನ ಹಲವು ಬಗೆಯ ಮುಖಗಳ ’ದರ್ಶನ’ ಮಾಡಿಸಿದೆ. ಈ ’ದೇಶ ಕಾಲ’ದ ನೆಪದಲ್ಲಿ ಹೊರಬಿದ್ದ ಅನೇಕ ಅಭಿಪ್ರಾಯಗಳಲ್ಲಿ ಹಲವು ನಮ್ಮೊಳಗಿದ್ದ ಆತಂಕವನ್ನು ಬೆಚ್ಚಿಬೀಳಿಸುವಂತೆ ಇದ್ದರೆ, ಮತ್ತೆ ಕೆಲವು ನಮ್ಮಲ್ಲಿ ಭರವಸೆ ಮೂಡಿಸುವಂತೆ ಇವೆ. ಈ ಸಂದರ್ಭದಲ್ಲಿ ನಮ್ಮನ್ನು ಕಾಡಿದ ಆತಂಕವನ್ನು ಕುರಿತೇ ನಾವು ಚರ್ಚಿಸುವುದು ಒಳ್ಳೆಯದೆಂದು ನಮಗೆ ಅನ್ನಿಸಿದೆ. ಯಾಕೆಂದರೆ ನಮ್ಮ ಮುಂದಿರುವ ಆಶಾಭಾವನೆಗಳ ಕುರಿತು ನಾವು ಸಂತೋಷ ಪಡುವುದಕ್ಕಿಂತಲೂ ಮುಂಚೆ ನಮ್ಮನ್ನು ಮತ್ತಷ್ಟು ಆತಂಕಕ್ಕೆ ದೂಡುವ ಕ್ಷಣಗಳ ಕುರಿತು ಮಾತನಾಡುವುದು ಒಳ್ಳೆಯದು. * ’ದೇಶ ಕಾಲ’ದ ಕುರಿತು ನಾವು ’ಆ’ ಭಾಷೆಯಲ್ಲಿ ಮಾತನಾಡಬೇಕಾಗಿದ್ದ ಅನಿವಾರ್ಯತೆ, ಸಂದರ್ಭದ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಆದರೆ ನಮ್ಮ ಅಂತಹ ಒಂದು ಹೊಸ ಚರ್ಚೆಯನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಹಿರಿಯರಾದ ಶ್ರೀ ಜಿ. ರಾಜಶೇಖರ್-ಶ್ರೀ ಕೆ. ಫಣಿರಾಜ್ ಜೋಡಿ ಹೆಣಗಾಡಿದ್ದು ನೋಡಿ ನಮ್ಮಲ್ಲಿ ಆತಂಕವಷ್ಟೇ ಬೆಳೆಯುತ್ತಾ ಹೋಯಿತು. ಆಗ ನಮಗೆ ನೆನಪಾಗಿದ್ದು ಬಸವಣ್ಣ ಹೇಳಿದ ’ತಾಯ ಮೊಲೆ ಹಾಲೇ ನಂಜಾಗಿ ಕೊಲುವೆಡೆ ಯಾರಿಗೆ ದೂರುವೆ’ ಎಂಬ ವಿಷಾದದ ಮಾತು. ಯಾಕೆಂದರೆ ನಾವೆಲ್ಲರೂ ನಮ್ಮ ಪ್ರಗತಿಪರ ಚಿಂತನೆಗಳ ಸೂಕ್ಷ್ಮತೆಯನ್ನೆಲ್ಲ ಬಲ್ಲ ಮಾರ್ಗದರ್ಶಿಗಳು ಎಂದುಕೊಂಡ ಇಂತಹವರೇ ’ದೇಶಕಾಲ ಉಳಿಸಿ’ ಎಂಬ ಒಂದಂಶದ ಅಭಿಯಾನದ ಸಾರಥ್ಯ ವಹಿಸಿಕೊಂಡು, ಸದ್ಯಕ್ಕೆ ಅದೊಂದೇ ತಮ್ಮ ತುರ್ತಿನ ಕೆಲಸವೆಂಬಂತೆ ನಡೆದುಕೊಂಡಿದ್ದು ನಮ್ಮ ಎಲ್ಲಾ ಆಶಯಗಳನ್ನು ಬುಡಮೇಲು ಮಾಡುವಂತೆ ಮಾಡಿತು. * ’ದೇಶಕಾಲವೇನೂ ವಿಮರ್ಶಾತೀತವಲ್ಲ’ ಎಂದು ತಮ್ಮ ಪ್ರತಿಕ್ರಿಯೆಗಳ ಕೊನೆಯಲ್ಲಿ ಒಂದು ಸಾಲು ಸೇರಿಸುತ್ತಲೇ ತಮ್ಮ ವಾದಗಳನ್ನು ಆರಂಭಿಸುತ್ತಿದ್ದ ಇವರು ಸ್ವತಃ ’ದೇಶಕಾಲ’ದ ಕುರಿತು ಗಂಭೀರವಾಗಿ ಅವಲೋಕಿಸುವ ಸಣ್ಣ ಪ್ರಯತ್ನವನ್ನೂ ತಮ್ಮ ಯಾವ ಪ್ರತಿಕ್ರಿಯೆಗಳಲ್ಲೂ ಮಾಡಲಿಲ್ಲ. ಬದಲಿಗೆ ನಮ್ಮ ಭಾಷೆಯನ್ನೂ, ಸಮರ್ಥನೆಯನ್ನೂ ನಿರಂತರವಾಗಿ ಖಂಡಿಸುತ್ತಾ ನಮ್ಮ ಧ್ವನಿಗಳನ್ನು ದಮನಿಸುವ ಪ್ರಯತ್ನದಲ್ಲಿ ತೊಡಗಿದ್ದು ನಿಜಕ್ಕೂ ಗಾಬರಿ ಹುಟ್ಟಿಸಿತು. * ಉಳಿದ ಆಸಕ್ತರೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂಬುದು ನಮ್ಮ ಬಯಕೆಯಾಗಿತ್ತು. ಆದರೆ ಹಾಗೆ ಚರ್ಚೆಯಲ್ಲಿ ಪಾಲ್ಗೊಂಡ ಎಲ್ಲರ ಭಿನ್ನ ಧ್ವನಿಗಳನ್ನು ದಮನಿಸುವ ವ್ಯರ್ಥ ಸಾಹಸವನ್ನಷ್ಟೇ ಈ ಹಿರಿಯರು ಮಾಡಿದರು. ಅವರಿಗೆ ಮುಖ್ಯವಾಗಿ ಬೇಕಾಗಿದ್ದುದು ’ದೇಶ ಕಾಲ’ವನ್ನು ಯಾವ ವಸ್ತುನಿಷ್ಠತೆಯೂ ಇಲ್ಲದೆ ಸಮರ್ಥಿಸಿ ನಿಲ್ಲಬೇಕಾದ ಅನಿವಾರ್ಯತೆಯೇ ಹೊರತು, ಆ ಪತ್ರಿಕೆಯ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಕನ್ನಡ ಸಾಂಸ್ಕೃತಿಕ ಪರಂಪರೆಯ ಗಂಭೀರ ಅವಲೋಕನವಲ್ಲ. ಜಿ.ಆರ್. ಅವರು ತಮ್ಮ ಪ್ರತಿಕ್ರಿಯಾ ಸರಣಿಯ ಉದ್ದಕ್ಕೂ ಹತಾಶೆಯಿಂದ ಮಾತಾಡಿದ್ದು ಅವರಿಗಿದ್ದ ಆತಂಕ ಯಾವುದು ಎಂಬುದನ್ನು ಅರ್ಥ ಮಾಡಿಸುವಂತಿತ್ತು. * ಪ್ರತಿ ಬಾರಿ ಪ್ರತಿಕ್ರಿಯೆ ಬರೆಯಲು ಕುಂತಾಗಲೆಲ್ಲವೂ ಶ್ರೀ ಕೆ. ಫಣಿರಾಜ್ ಅವರು ನಮ್ಮ ಜೊತೆ ’ಖಂಡಿತ ವಾಗ್ವಾದ ಸಾಧ್ಯವಿಲ್ಲ, ಸಾಧ್ಯವಿಲ್ಲ’ ಎಂದು ನಿರಾಕರಿಸುತ್ತಲೇ ಪುಟಗಟ್ಟಳೆ ಬರೆದು ಬಿಸಾಕುತ್ತಲೇ ಹೋದರು; ಎಷ್ಟೆಂದರೆ ಸಂಪಾದಕರಿಗೇ ಅವರ ಕುರಿತು ರೇಜಿಗೆ ಹುಟ್ಟುವಷ್ಟು! ಅಂದರೆ ಅವರ ಒಳಮನಸ್ಸು ಈ ಯಾವ ಚರ್ಚೆಯೂ ಬೇಡವೆನ್ನುತ್ತಿತ್ತು; ಆದರೆ ಯಾವುದೋ ’ಕಾಣದ ಕೈ’ ಅವರ ಲೇಖನಿಯನ್ನು ಇಲ್ಲಿಯವರೆಗೂ ಮುನ್ನಡೆಸಿತು! * ಫಣಿರಾಜ್ ಅವರು ತಮ್ಮ ವಾದಗಳ ಬೆನ್ನ ಮೇಲೆ ಹೇರಿಕೊಂಡಿರುವ ’ವಿಮರ್ಶಾ ತತ್ವಗಳು; ಅವುಗಳ ಸಿದ್ಧತೆಗಳು’ ಮುಂತಾದವುಗಳನ್ನೆಲ್ಲ ತಂದು ನಮ್ಮ ಮುಂದೆ ಕೆಡವಿ ನಮ್ಮಲ್ಲಿ ಭಯ ಮತ್ತು ಕೀಳರಿಮೆ ಹುಟ್ಟುವಂತೆ ಮಾಡಿ ’ದೇಶಕಾಲ’ದ ಮೇಲಿನ ನಿಷ್ಠುರ ಚರ್ಚೆಯ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಲೇ ಬಂದರು. ಅವರ ಪ್ರಕಾರ ವಿಮರ್ಶೆ ಮಾಡುವ ಸಾಮಾನ್ಯ ಮನುಷ್ಯನೊಬ್ಬ ತನ್ನ ಜೀವಮಾನವಿಡೀ ಯಾವೊಂದು ಪ್ರಶ್ನೆಯನ್ನೂ ಎತ್ತದೆ ಸಾಯುವ ತನಕ ’ವಿಮರ್ಶೆಯ ಪರಿಕಲ್ಪನೆ’ಗಳನ್ನು ಅಭ್ಯಾಸ ಮಾಡುತ್ತಲಿರಬೇಕು. ಅವರ ಪ್ರಕಾರ ತನಗನ್ನಿಸಿದ ನಾಕಾರು ಅಭಿಪ್ರಾಯಗಳನ್ನು, ಪ್ರಶ್ನೆಗಳನ್ನು ಕೇಳಬೇಕಾದ ಶ್ರೀಸಾಮಾನ್ಯನೊಬ್ಬ ಪ್ರಕಾಂಡ ಪಂಡಿತೋತ್ತಮನೇ ಆಗಿರಬೇಕು! ಇದು ಬಾವಿಯಲ್ಲಿ ಬಿದ್ದ ವ್ಯಾಕರಣ ಪಂಡಿತನೊಬ್ಬ ಅವನನ್ನು ಉಳಿಸಲು ಬಂದ ದಾರಿಹೋಕ ’ಅಗ್ಗ ತರುತ್ತೇನೆ ಇರಿ’ ಎಂದು ಹೇಳಿದ್ದಕ್ಕೆ, ’ಅದು ’ಅಗ್ಗ’ ಅಲ್ಲ ಕಣಯ್ಯ ’ಹಗ್ಗ’, ಮೊದಲು ವ್ಯಾಕರಣ ಕಲಿ’ ಎಂದು ಮೂದಲಿಸಿ; ’ಆಯ್ತು ಬುದ್ಧಿ, ವ್ಯಾಕರಣ ಕಲಿತುಕೊಂಡು ಆಮೇಲೆ ಬತ್ತೀನಿ’ ಎಂದು ದಾರಿಹೋಕನಿಂದ ’ಯಾಕರಣ’ ಹೇಳಿಸಿಕೊಂಡ ಕಥೆಯಂತಿದೆ! ಇದೂ ಕೂಡ ಎಂದಿನ ’ಬ್ರಾಹ್ಮಣ್ಯ’ದ ಬೌದ್ಧಿಕ ಬ್ಲ್ಯಾಕ್‌ಮೇಲ್ ತಂತ್ರವೇ ಆಗಿದೆ. * ಶ್ರೀ ಫಣಿರಾಜ್ ಅವರು ನಾವು ಲಂಕೇಶರ ಮೇಲೆ ಗೌರವವಿಟ್ಟುಕೊಂಡಿಲ್ಲ ಎಂಬ ಆರೋಪವನ್ನು ಪತ್ರಿಕೆಯ ಹೆಸರಿನೊಂದಿಗೆ ತಳುಕು ಹಾಕಿ ಸಂಪಾದಕರಲ್ಲಿ ನಮ್ಮ ಬಗ್ಗೆ ಅಗೌರವ ಹುಟ್ಟಿಸುವ ’ಸೆಂಟಿಮೆಂಟಲ್ ಸಾಹಸ’ಕ್ಕೂ ಕೂಡ ಕೈ ಹಾಕಿದರು. ನಮ್ಮ ಇಂತಹ ಚರ್ಚೆಗಳಿಗೆ ಲಂಕೇಶರೇ ನುಡಿಗಟ್ಟು ಕೊಟ್ಟರೆಂಬ ಸತ್ಯವನ್ನು ಮರೆಮಾಚುವ ಅನಿವಾರ್ಯ ದುರಂತ ಅವರಿಗೆ ಏಕೆ ಒದಗಿ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ’ದೇಶಕಾಲ’ದ ಬಗ್ಗೆ ನಿಷ್ಠುರ ಪ್ರಶ್ನೆಗಳನ್ನು ಎತ್ತುತ್ತಿರುವ ನಾವೆಲ್ಲ ’ಭಂಡರು’ ಎಂದು ಬ್ರಾಂಡ್ ಮಾಡುವುದು ಅವರ ಮೊದಲ ಆದ್ಯತೆ; ’ದೇಶಕಾಲ’ದ ಮೇಲಿನ ವಸ್ತುನಿಷ್ಠ ಚರ್ಚೆಯಲ್ಲ. * ನಮ್ಮ ಮೊದಲ ಪ್ರತಿಕ್ರಿಯೆಗೆ ಶ್ರೀ ಫಣಿರಾಜ್ ಅವರು ಕಕ್ಕಾಬಿಕ್ಕಿಯಾಗಿರುವುದು ಅವರ ಬರಹದಲ್ಲಿ ಎದ್ದು ಕಂಡಿತು. ಹಾಗಾಗಿ ’ಮೋಚಿ’ ಕಥೆ ಬರೆದವರ ಕುರಿತು ಅವರು ’ಸಖತ್’ ತಲೆ ಬಿಸಿ ಮಾಡಿಕೊಂಡರು. ಆ ಗಡಿಬಿಡಿಯನ್ನು ನಮ್ಮ ಮೇಲೆ ಹೊತ್ತುಹಾಕುವ ಅತಿಯಾದ ’ಬೌದ್ಧಿಕ ವರಸೆ’ಯನ್ನೂ ತೋರಿಸಿ ಅವರು ಓದುಗರನ್ನು ಮತ್ತಷ್ಟು ಗಲಿಬಿಲಿಗೆ ಕೆಡವಿದ್ದೂ ಆಯಿತು. * ಶ್ರೀ ಕೆ.ಫಣಿರಾಜ್ ಅವರಿಗೆ ಈ ದೇಶದ ರೈತ, ಗಾರೆ ಕೆಲಸದವರ ಶ್ರದ್ಧೆಯ ಬಗ್ಗೆ ಬಹಳ ಅನುಮಾನವೆಂದು ತೋರುತ್ತದೆ. ಯಾಕೆಂದರೆ ಅವರ‍್ಯಾರೂ ಯುನಿವರ್ಸಿಟಿ ಬುದ್ಧಿಜೀವಿಗಳ ಹಾಗೆ ಲಕ್ಷಾಂತರ ರೂಪಾಯಿಯ ಸಂಬಳ ಪಡೆಯುವುದಿಲ್ಲ! ಇದು ಸಾವಿರಾರು ಅಸಮಾನತೆಗಳ ಈ ದೇಶದಲ್ಲಿ ಲಕ್ಷ ರೂಪಾಯಿ ಸಂಬಳ ಪಡೆದು ಕಾರಿನಲ್ಲಿ ಓಡಾಡುವ ’ಸುಶಿಕ್ಷಿತ’ನೊಬ್ಬ ರಸ್ತೆಯನ್ನು ಸರಿಯಾಗಿ ದಾಟಲು ಬಾರದ ಅನಕ್ಷರಸ್ಥನನ್ನು ದೇಶದ್ರೋಹಿಯೆಂದು ಘೋಷಿಸಿದಂತಿದೆ. * ’ಬಹು ಸಂಸ್ಕೃತಿ’, ’ದೈಹಿಕ ಶ್ರಮ’ ಎಂಬ ಪದಗಳನ್ನು ನಾವು ಬಳಸಿದರೆ ಶ್ರೀ ಫಣಿರಾಜ್ ಅವರಿಗೆ ಅವು ಗೇಲಿಯ ಶಬ್ದಗಳು. ಅವರು ಬಳಸಿದಾಗ ಮಾತ್ರ ಅವುಗಳಿಗೆ ’ವಿದ್ವತ್ತನ’ ಪ್ರಾಪ್ತಿ! * ಶ್ರೀ ಜಿ. ರಾಜಶೇಖರ್ ಅವರು ’ದೇಶಕಾಲ’ದ ಐದೂ ವರ್ಷಗಳ ಸಂಚಿಕೆಗಳನ್ನು ಓದಿ ಬರಬೇಕೆಂದು ನಮಗೆ ತಿಳಿಸಿಕೊಟ್ಟರು. ಐದೂ ವರ್ಷಗಳ ಸಂಚಿಕೆಗಳ ಪುಟಪುಟಗಳನ್ನೂ ತಿರುವಿ ಹಾಕಿಯೇ ನಾವು ’ದೇಶಕಾಲ’ದಲ್ಲಿ ಯಾವ ಘನ ಗಾಂಭೀರ್ಯ ತಿರುಳೂ ಇಲ್ಲವೆಂದು ತೀರ್ಮಾನಿಸಿದ್ದೇವೆಂದು ಈ ಮೂಲಕ ಪ್ರಮಾಣೀಕರಿಸುತ್ತಿದ್ದೇವೆ. ಯಾಕೆಂದರೆ ಈ ಐದು ವರ್ಷಗಳ ’ಸಮಯ ಪರೀಕ್ಷೆ’ಯಲ್ಲಿ ’ದೇಶಕಾಲ’ದವರಿಗೆ ಎದ್ದು ಕಾಣುತ್ತಿರುವುದು ’ನುಡಿ ಫಾಂಟ್ ಬಳಸಬೇಕೋ, ಬರಹ ಫಾಂಟ್ ಬಳಸಬೇಕೋ’, ’ವಿಶಿಷ್ಟಾದ್ವೈತಿಗಳ ಅನಿವಾಸಿ ಪುರಾಣಗಳು’, ’ಕಥೆಗಾರರ ಸ್ವ-ವ್ಯಸನಗಳು- ಸ್ವ-ಕಥನಗಳು’, ’ದೃಶ್ಯಕಲೆಗಳ ಅ-ದೃಶ್ಯ ನೆಲೆಗಳು’ -ಇವೇ ಮೊದಲಾದ ಚರ್ಚೆಗಳು. ಇವು ನಮಗೇನೂ ಸಮಕಾಲೀನ ಸಮಾಜದ ತುರ್ತು ಬಿಕ್ಕಟ್ಟುಗಳ ಹಾಗೆ ಕಾಣಲಿಲ್ಲ. ನಾವು ಮೊದಲು ಪಟ್ಟಿ ಮಾಡಿದ ಈ ನೆಲದ ನಿಜಸಮಸ್ಯೆಗಳು, ಹಂಗರಹಳ್ಳಿ, ಕಂಬಾಲಪಲ್ಲಿ, ಖೈರ್ಲಾಂಜಿಯಂತಹ ಪ್ರಕರಣಗಳು ಅವರಿಗೆ ’ತಲೆತಿರುಕತನ’ವಾಗಿ ಕಂಡವು. ಆದರೆ ’ಅನಿವಾಸಿಗಳ ಪುರಾಣಗಳು’ ಅವರ ಪ್ರಕಾರ ಯಾವ ’ತನ’ ಎಂಬುದನ್ನು ಅವರು ಕೊನೆಯವರೆಗೂ ವಿಶದೀಕರಿಸಲು ಸಾಧ್ಯವಾಗಲೇ ಇಲ್ಲ; ಆಗುವುದೂ ಇಲ್ಲವೇನೋ? * ವಿಕ್ರಮ ವಿಸಾಜಿಯವರು ’ದೇಶಕಾಲ’ ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ತಾಂತ್ರಿಕ ತೊಡಕು ಕಾರಣವೆಂದು ಶ್ರೀ ಜಿ. ರಾಜಶೇಖರ್ ಅವರು ಸಾಕ್ಷಿ ಒದಗಿಸಿದರು. ೨೦೦೦ನೇ ಇಸವಿಗೂ ಮುಂಚೆ ಮೊದಲ ಪುಸ್ತಕ ಪ್ರಕಟಿಸಿದವರೆಂಬ ಆ ’ತಾಂತ್ರಿಕ ತೊಡಕು’ ಕವಿತಾ ರೈ ಅವರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳುವಾಗ ಯಾಕೆ ಅಡ್ಡ ಬರಲಿಲ್ಲ ಎಂಬುದಕ್ಕೆ ಶ್ರೀ ರಾಜಶೇಖರ್ ಅವರಲ್ಲ; ’ದೇಶಕಾಲ’ದ ಸಂಪಾದಕರು ಉತ್ತರ ಕೊಡಬೇಕು. * ಈ ನಾಡಿನ ಲಕ್ಷಾಂತರ ಮಂದಿ ಅನಕ್ಷರಸ್ಥರಿಗೆ, ದಲಿತರಿಗೆ, ಶೂದ್ರರಿಗೆ, ಅಲ್ಪ ಸಂಖ್ಯಾತರಿಗೆ, ಮಹಿಳೆಯರಿಗೆ ಅರಿವು, ಅನ್ನ ಕೊಟ್ಟ ವಯಸ್ಕರ ಶಿಕ್ಷಣ ಶ್ರೀ ರಾಜಶೇಖರ್ ಅವರಿಗೆ ’ಬೇಜವಾಬ್ದಾರಿ ಮಾಧ್ಯಮ’ವಾಗಿ ಮಾತ್ರ ಕಂಡಿದ್ದು ನಿಜಕ್ಕೂ ಸೋಜಿಗ! ಇಂತಹ ಇವರ ವರಸೆಯನ್ನೇ ನಾವು ಅವರ ಸೋಗಲಾಡಿ ಬುದ್ಧಿಜೀವಿತನವಿರಬಹುದೆಂದು ಆತಂಕ ಪಟ್ಟಿದ್ದು. * ತಮ್ಮ ಎಲ್ಲಾ ಪ್ರತಿಕ್ರಿಯೆಗಳ ನಡುವೆಯೂ ರಾಜಶೇಖರ್ ಅವರಿಗೆ ’ದೇಶ ಕಾಲ’ ಯಾಕೆ ಮುಖ್ಯ, ಎಷ್ಟು ಮುಖ್ಯ, ಅಥವಾ ಯಾಕೆ ಮುಖ್ಯವಲ್ಲ, ಅದರ ಮಿತಿಗಳು, ಅಪಾಯಕಾರಿ ನಿಲುವುಗಳು ಏನೆಂಬುದನ್ನು ಓದುಗರಿಗೆ ಮನವರಿಕೆ ಮಾಡಿಕೊಡಲು ಆಗಲೇ ಇಲ್ಲ. ಅದನ್ನೆಲ್ಲ ತಾಳ್ಮೆಯಿಂದ ನೋಡುವ ಬುದ್ಧಿವಂತಿಕೆ, ಸೂಕ್ಷ್ಮ ದೃಷ್ಟಿ ಅವರಿಗೆ ಇದ್ದರೂ ಅವರು ’ದೇಶ ಕಾಲ’ದ ಅಡ್ಡಗೋಡೆಯ ಹಾಗೆ ನಿಂತು, ದೇಶ ಕಾಲದ ಮೇಲೆ ಅಭಿಪ್ರಾಯ ಮಂಡಿಸುವವರೆಲ್ಲರೂ ಕಲ್ಲು ಬೀಸುವವರೆಂದು ಪರಿಗಣಿಸುವ ಅಸೂಕ್ಷ್ಮತೆಗೆ ಈಡಾದರು. ಹೀಗಾಗಿ ಕೆ.ಪಿ. ಸುರೇಶ, ವಸಂತ ಬನ್ನಾಡಿ, ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಎಚ್.ಎಸ್.ಅನುಪಮಾ, ಜ್ಯೋತಿ ಗುರುಪ್ರಸಾದ್‌ರಂತಹವರು ನೀಡಿದ ಅಭಿಪ್ರಾಯಗಳನ್ನೂ ಸಾವಧಾನದಿಂದ ನೋಡುವ ಘನತೆ ಅವರಿಗೆ ಒದಗಿ ಬರಲೇ ಇಲ್ಲ. * ಬರಗೂರು ರಾಮಚಂದ್ರಪ್ಪನವರ ’ಅಗೋಚರ ಸಂಘಟನೆ’ ಎಂಬ ಹೇಳಿಕೆಯನ್ನು ಒಂದು ತಾತ್ವಿಕ ಚಿಂತನೆಯಾಗಿ ನೋಡುವ ಚಿಂತನ ಶಕ್ತಿಯನ್ನೂ ಅವರು ಕಳೆದುಕೊಂಡರೆ ಎಂಬ ನಮ್ಮ ಆತಂಕವನ್ನು ನಿಜ ಮಾಡುವಂತೆ ಅವರು ನಡೆದುಕೊಂಡದ್ದು ಅವರ ಪ್ರತಿ ಪ್ರತಿಕ್ರಿಯೆಯಲ್ಲಿ ಎದ್ದು ಕಾಣುತ್ತಿತ್ತು. * ಅತ್ತ ಈ ಇಬ್ಬರ ಸಹಾಯಕ್ಕೆಂದು ಬಂದ ಹಿರಿಯ ಕವಿ ಶ್ರಿ ಎಚ್.ಎಸ್. ವೆಂಕಟೇಶಮೂರ್ತಿಯವರು ಬಸವಣ್ಣನ ಉದಾಹರಣೆಯ ಮೂಲಕ ಬಸವಣ್ಣನ ಹೇಳಿಕೆಯನ್ನೇ ಅವಮಾನಿಸುವ ವಾದವನ್ನು ಮಂಡಿಸುತ್ತಾ ಹೋದರು. ಅವರ ಪ್ರಕಾರ ಮಾಸ್ತಿ ಮತ್ತಿತರರು ಯಾವುದೇ ಸಂಕೋಚವಿಲ್ಲದೆ ಜಾತಿಯ ಕುರುಹುಗಳನ್ನು ಧರಿಸುವುದು ಅವಮಾನವಲ್ಲವಂತೆ. ನಮಗನ್ನಿಸುವುದು, ಯಾವುದೇ ಜಾತಿಯ ಮನುಷ್ಯ ಮೊದಲು ತನ್ನ ಜಾತಿಯನ್ನು ಅನುಮಾನದಿಂದ ನೋಡಿದಾಗ ಮಾತ್ರ ಜಾತ್ಯತೀತ ನಿಲುವಿಗೆ ತಲುಪಲು ಸಾಧ್ಯ. ಅಂತಹ ಅನುಮಾನ ಮಾಸ್ತಿಯವರನ್ನಾಗಲೀ, ಇತರೆ ಯಾವ ಬ್ರಾಹ್ಮಣ ಲೇಖಕರನ್ನೇ ಆಗಲಿ, ಕಾಡದಿದ್ದರೆ ಅದನ್ನು ಅವರ ಮಿತಿಯೆಂದು ಪರಿಗಣಿಸಬೇಕು. ಆದರೆ ಎಚ್.ಎಸ್.ವಿಯವರು ಹಾಗೆ ಜಾತಿ ಗುರುತು ಧರಿಸುವುದು ಒಂದು ಮೌಲ್ಯವೆಂಬಂತೆ ಬಿಂಬಿಸಲು ಹೊರಟಿದ್ದಂತೂ ಸಮಾಜವಿರೋಧಿ ಧೋರಣೆಯಂತೆ ನಮಗೆ ಕಂಡಿತು. ’ತನ್ನ ಜಾತಿ ಶ್ರೇಷ್ಠ, ಹಾಗಾಗಿ ನನ್ನ ಕುರುಹುಗಳು ಸಾಮಾಜಿಕವಾಗಿ ಗೌರವ ಹುಟ್ಟಿಸಬಹುದು’ ಎಂದು ಮೇಲ್ಜಾತಿಯವನೊಬ್ಬ ಜಾತಿ ’ಮಾಸ್ಕ್’ ಧರಿಸಿ ಓಡಾಡಿದಾಗ ಉಂಟಾಗುವ ಪರಿಣಾಮಕ್ಕೂ ಅಸ್ಪೃಶ್ಯನೊಬ್ಬ ತನ್ನ ಜಾತಿಯ ಚಹರೆಗಳನ್ನು ತೊಟ್ಟು ಓಡಾಡಿದಾಗ ಉಂಟಾಗುವ ಪರಿಣಾಮಕ್ಕೂ ತದ್ವಿರುದ್ಧ ವ್ಯತ್ಯಾಸಗಳಿವೆ. ಮೊನ್ನೆ ಸವಣೂರಿನ ಭಂಗಿಗಳು ಮೈಮೇಲೆ ಮಲ ಸುರಿದುಕೊಂಡಾಗ ನಾಡಿನ ಜನತೆ ಅದನ್ನು ಕಂಡು ಪ್ರತಿಕ್ರಿಯಿಸಿದ ಬಗೆಗಳನ್ನು ನೆನೆದರೆ ಎಚ್.ಎಸ್.ವಿಯವರಿಗೆ ಈ ಜಾತಿ ಗುರುತುಗಳು ಉಂಟು ಮಾಡುವ ಅಪಾಯಗಳು ಎಂತಹವೆಂದು ಅರ್ಥವಾಗಬಹುದು. ಈ ದೇಶದಲ್ಲಿ ಬ್ರಾಹ್ಮಣನೊಬ್ಬ ’ಉಡುಪಿ ಬ್ರಾಹ್ಮಣರ ಫಲಾಹಾರ ಮಂದಿರ’ವನ್ನೂ, ವೀರಶೈವನೊಬ್ಬ ’ವೀರಶೈವ ಫಲಾಹಾರ ಮಂದಿರ’ವನ್ನೂ, ಒಕ್ಕಲಿಗನೊಬ್ಬ ’ಒಕ್ಕಲಿಗರ ರಾಗಿ ಮುದ್ದೆ ಊಟದ ಹೋಟೆಲ್’ ಅನ್ನೂ ಸಾರ್ವಜನಿಕವಾಗಿ ತೆರೆದು ವ್ಯಾಪಾರ ಮಾಡಿ ಗೆಲ್ಲಬಹುದು. ಆದರೆ ಅಸ್ಪೃಶ್ಯನೊಬ್ಬ, ಮುಸಲ್ಮಾನನೊಬ್ಬ ’ಹೊಲೆಯರ-ಮಾದಿಗರ ಫಲಾಹಾರ ಮಂದಿರ’, ’ದನದ ಮಾಂಸದ ಹೋಟೆಲ್’ ಎಂದು ಬೋರ್ಡು ಹಾಕಿಕೊಂಡು ಕನಿಷ್ಟ ಬದುಕಿ ಉಳಿಯುವುದೂ ಕಷ್ಟ. ಹುಟ್ಟಿನಿಂದ ಬ್ರಾಹ್ಮಣನೆಂದು ನಾವೆಲ್ಲರೂ ಪರಿಗಣಿಸಿರುವ ಬಸವಣ್ಣ ತನ್ನನ್ನು ಮಾದಾರರ ಮನೆಯ ಮಗನೆಂದು ಕರೆದುಕೊಂಡು ತನ್ನ ’ಶ್ರೇಷ್ಠತೆಯ ಕಳಂಕ’ವನ್ನು ಕಳೆದುಕೊಳ್ಳಲು ಹಲುಬುವುದನ್ನು ಅರ್ಥಮಾಡಿಕೊಂಡಿದ್ದರೆ ಸಾಕು; ಎಚ್.ಎಸ್.ವಿಯವರಿಗೆ ಈ ಜಾತೀಯತೆಯ ನೀಚತನ ಅರ್ಥವಾಗಬಹುದು. * ಇಂತಹ ಯಾವೊಂದು ನಾಡಿನ ಸಮಸ್ಯೆಯ ಕುರಿತೂ ಮಾತನಾಡಲು ಇಚ್ಛಿಸದ ಶ್ರೀ ರಾಜಶೇಖರ್-ಫಣಿರಾಜ್ ಅವರು ’ದೇಶ ಕಾಲ’ದ ಮೇಲೆ ಭಿನ್ನಾಭಿಪ್ರಾಯ ಮಂಡಿಸುತ್ತಿರುವುದೇ ಈ ನಾಡಿಗೆ ಬಂದೊದಗಿರುವ ದೊಡ್ಡ ವಿಪತ್ತು ಎಂಬಂತೆ ಹಳಹಳಿಸುತ್ತಿರುವುದು ಬಹಳ ವಿಚಿತ್ರವಾಗಿದೆ. ಕೊನೆಗೆ ’ದೇಶ ಕಾಲ’ದ ಚರ್ಚೆಯ ಸಂದರ್ಭದಲ್ಲಿ ನಾವು ಕಂಡುಕೊಂಡ ಸತ್ಯಕ್ಕೆ ಹಲವು ಮುಖಗಳಿವೆ. ಅವುಗಳಲ್ಲಿ ಕೆಲವು ಸೋಗಲಾಡಿ ಮುಖಗಳೂ, ಕೆಲವು ನಿಜವಾದ ಆತಂಕದ ಧ್ವನಿಗಳೂ, ಕೆಲವು ನಿಜವಾದ ವೈಚಾರಿಕ ಚಿಂತನೆಗಳೂ, ಕೆಲವು ಅಡ್ಡಗೋಡೆಯ ಮೇಲೆ ದೀಪವಿಡುವ ಅರೆಬರೆ ಧೋರಣೆಗಳೂ-ಹೀಗೆ ಎಲ್ಲ ಬಗೆಯ ಸಂಕೀರ್ಣ ಪ್ರತಿಕ್ರಿಯೆಗಳೂ ಇವೆ. ಇವೆಲ್ಲವೂ ಸದ್ಯದ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭವನ್ನೇ ಪ್ರತಿನಿಧಿಸುವಂತಿವೆ. ಇಂತಹ ಒಂದು ಚರ್ಚೆಯಲ್ಲಿ ಪಾಲ್ಗೊಂಡು ನಮ್ಮಲ್ಲಿ ಆತ್ಮವಿಶ್ವಾಸವನ್ನೂ- ಆತಂಕವನ್ನೂ ಹುಟ್ಟು ಹಾಕಿದ ಎಲ್ಲಾ ಚಿಂತಕರಿಗೂ, ಲೇಖಕರಿಗೂ; ಇಂತಹುದೊಂದು ಚರ್ಚೆಗೆ ವೇದಿಕೆಯಾಗಿ ನಿಂತು ತನ್ನ ಜನಪರ ಕಾಳಜಿ ಪ್ರಕಟಿಸಿದ ’ಗೌರಿ ಲಂಕೇಶ್’ ಬಳಗಕ್ಕೂ ನಾವು ಕೃತಜ್ಞರಾಗಿದ್ದೇವೆ. ಇದು ಇಷ್ಟಕ್ಕೇ ನಿಲ್ಲದೆ; ಈ ಮೂಲಕ ನಾಡಿನ ಹತ್ತಾರು ಬಗೆಯ ಚಿಂತನಶೀಲ ಚರ್ಚೆಗಳಿಗೆ ಕಾರಣವಾಗಲಿ ಎಂಬುದೇ ನಮ್ಮ ಸದ್ಯದ ಆಶಯ. ಇದರಲ್ಲಿ ನಾವು ಮೊದಲಿಗರೂ ಅಲ್ಲ; ಕೊನೆಯವರೂ ಅಲ್ಲ.
]]>

‍ಲೇಖಕರು avadhi

September 4, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

15 ಪ್ರತಿಕ್ರಿಯೆಗಳು

 1. ಗುಡ್ಡಪ್ಪ

  “ಹೋದ್ಯಾ ಪಿಶಾಚಿ?” ಅಂದ್ರೆ, “ಬಂದೆ ಗವಾಕ್ಷಿಲೀ” ಅಂದಿವೆ..

  ಪ್ರತಿಕ್ರಿಯೆ
  • harsha

   Being born In India if one denies the need to look at the injustice HIS caste people doing to the community of “lower Caste and untouchable” castes then essentially he is a CASTIEST. Obviously it is oppressive to attempt to control the”TONE” of the people who Question the castiest azenda or castiest notions that might express trough any media.. as it was the case in DESHAKALA.
   Vasantha Bannadi is to be thanked for taking the discussion to really good heights.

   ಪ್ರತಿಕ್ರಿಯೆ
 2. kantharaju

  Chandrashekhr matthu Manjunathravarige nanna abinandanegalu, neevu Desha Kalada bagge etthida ‘prashnegalu’ e sandarbada matthu parisarada prashnegalu.Rajashekhar ravara baravanege nammellarannu dangubadiside. culural politics can’t be hidden for longer time, intelectuality is not a property of any one, inclusive politics is to be adopted in each and every field, but unfortunately it is missed in Desh Kala, there is no doubt it is carried out conciously by the editor, the way in which Rajashekhr defended the conviction of Desha Kala shocked us, this discussion will definately create an impact on the cultural politics of elite classes, keep writing, keep thinking, these are the two important weapons, given by the democracy. Kantharaju, Tumkuru.

  ಪ್ರತಿಕ್ರಿಯೆ
 3. ಮೀನಾ

  ಇನ್ನೆಷ್ಟು ದಿನ ಜಾತಿ ಜಾತಿ ಅಂತ ಕೊಳಕೆಬ್ಬಿಸ್ತೀರಿ….? ಥೂ… ಹೇಸಿಗೆ ಅನ್ಸಲ್ವಾ ಮತ್ತೆ ಮತ್ತೆ ಅಲ್ಲೇ ಸುತ್ತುತಿರೋದು….? ಬರ್ರಿ ಹೊರಗೆ ಅದ್ನೆಲ್ಲ ಬಿಟ್ಟು….. ನಾವು ಬರ್ತೀವನ್ದ್ರು ಅವ್ರು ಬಿಡಲ್ಲ ಅಂತ ಮತ್ತದೇ ರಾಗ ಬೇಡ… ನಮ್ಮ ದಾರಿ, ನಮ್ಮ ನಡಿಗೆ………

  ಪ್ರತಿಕ್ರಿಯೆ
 4. Mahesh kumar

  ನಿಮ್ಮ ಇಡೀ ಲೇಖನದ ತುಂಬ ಚಿಂತನೆಗಿಂತ. ಚಿಂತೆಯೇ ತುಂಬಿದೆ. ನಿಮ್ಮ ಹಿಂದಿನ ಮತ್ತು ಈ ಲೇಖನವನ್ನು ಓದಿದರೆ ನಿಮಗೆ ಯಾವುದೇ ಮನುಷ್ಯರನ್ನು ನೋಡಿದರೆ ಅವರ ಜಾತಿಯೇ ಎದ್ದು ಕಾಣುತ್ತದೆ. ಯಾವುದೂ ನಿಶ್ಚಿತ ಜಾತಿಗೆ ತೆಗೆಳುದವುದೇ ಪ್ರಗತಿಪರ ಚಿಂತನೆ ಎಂದು ಕೊಂಡಹಾಗಿದೆ. ಎಲ್ಲಾರು ನಿಮ್ಮ ವಿರುದ್ಧ ಏನೋ ಅಜೇಂಡಾ ಇಟ್ಟುಕೋಂಡೆ ಕೆಲಸ ಮಾಡುತ್ತಿದ್ದಂತೆ ಭಾವಿಸುತ್ತೀರಿ, ಇಂತಹ ಭಾವನೆಗಳು ತನ್ನ ಒಡಲಲ್ಲೇ ತನ್ನ ಸೋಲನ್ನು ಇಟ್ಟುಕೊಂಡಿರುತ್ತದೆ. ಮನಸು ಗಳ ನೆಡುವೆ ಬೆಸುಗೆ ಹಾಕುವುದರ ಬದಲು ಸಾಕಷ್ಟು ಕಂದರ ಎರ್ಪಡಿಸುವಲ್ಲಿ ಇಂಥಹ ಲೇಖನಗಳು ಸಹಕಾರಿಯಾಗುತ್ತವೆ.

  ಪ್ರತಿಕ್ರಿಯೆ
 5. Anivasi Kannadiga

  ಅನಿವಾಸಿಗಳನ್ನು ತೆಗಳುವ ನೀವು (ಐಜೂರು) ನಿಮ್ಮ ಕತೆಯನ್ನು ಯಾಕೆ ಅನಿವಾಸಿಗಳು ಏರ್ಪಡಿಸಿದ ಅಕ್ಕ ಕಥಾಸ್ಪರ್ಧೆಗೆ ಕಳಿಸಿದರು? ಕೊನೆಯ ಸುತ್ತಿನ ಸ್ಪರ್ಧಿಗಳಲ್ಲಿ ನಿಮ್ಮ ಹೆಸರಿದೆ. ಹಣ ಸಿಗುತ್ತದೆ ಎಂದರೆ ಹೆಣವೂ ಬಾಯ್ಬಿಡುತ್ತದೆ!
  ಶ್ರೀ ರಾಜಶೇಖರ ಬುದ್ಧಿಮಾತು ಹೇಳಿದರೆ ಅದು ನಿಮಗೆ ಅಪಥ್ಯ ಮತ್ತು ಆತಂಕವನ್ನುಂಟುಮಾಡುತ್ತದೆ. ನಿಮ್ಮನ್ನು ಬೆಂಬಲಿಸುವವರು ಮಾತ್ರ ಒಳ್ಳೆಯವರು ಉಳಿದವರು ಸಂಸ್ಕೃತಿ ದ್ರೋಹಿಗಳೇ? ನಿಮ್ಮ ಹೊಟ್ಟೆಕಿಚ್ಚನ್ನು ಪ್ರಕಟಪಡಿಸಿದ್ದೇ ದೊಡ್ಡ ಸಾಧನೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದೀರಿ. ನೀವು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಏನು ಮಾಡಿದ್ದೀರಿ ಎಂದು ಕೇಳಬಹುದೇ? ಸಾಹಿತ್ಯದಲ್ಲಾದರೂ ನಿಮ್ಮ ಸಾಧನೆಯೇನು? ದಯವಿಟ್ಟು ಜಾತಿಯ ಹೊಲಸನ್ನು ‘ಅವಧಿ’ಗೆ ತರಬೇಡಿ. ಯಾರೂ ಓದದ ಲಂಕೇಶ ಪತ್ರಿಕೆಯಲ್ಲಿಯೇ ಅದು ಇರಲಿ.
  ಹೊಟ್ಟೆಕಿಚ್ಚು ಬಿಟ್ಟರೆ ನಿಮ್ಮ ಸಮಸ್ಯೆ ಏನೆಂದು ತಿಳಿಯುವುದಿಲ್ಲ. ಯಾರಾದರೂ ಕನ್ನಡಕ್ಕೆ ಒಂದು ಒಳ್ಳೆಯ ಕೆಲಸ ಮಾಡಿದರೆ ನಿಮಗೆ ಸಹಿಸಲಿಕ್ಕಾಗುವುದಿಲ್ಲ. ಇದು ಕನ್ನಡಿಗರ ದುರ್ಗುಣ – ತಾವೂ ಮಾಡುವುದಿಲ್ಲ, ಮಾಡುವವರಿಗೂ ಕೊಡುವುದಿಲ್ಲ. ದಯವಿಟ್ಟು ಇದನ್ನು ನಿಲ್ಲಿಸಿ. Please stop this nonsense.
  – ಅನಿವಾಸಿ ಕನ್ನಡಿಗ

  ಪ್ರತಿಕ್ರಿಯೆ
 6. test

  ದೇಶಕಾಲ ಬೇಕಾದವ್ರು ದೇಶಕಾಲ ಓದ್ಲಿ, ಬೇಡ್ದೆ ಇದ್ರೆ ಬೇರೆ ಪತ್ರಿಕೆ ಓದ್ಲಿ. ಇರೋ ಪತ್ರಿಕೆ ಯಾವ್ದೂ ಸರೀಗಿಲ್ಲ ಅಂದ್ರೆ ಇವ್ರಿಬ್ರೇ ಸೇರ್ಕೊಂಡು ಹೊಸದೊಂದು ಪತ್ರಿಕೆ ಶುರುಮಾಡ್ಲಿ. ಅದುಬಿಟ್ಟು ಇದೇನ್ರೀ ಇದೂ… ನಿಮಗ್ಯಾರಿಗೂ ಮಾಡೋಕೆ ಬೇರೆ ಕೆಲ್ಸ ಇಲ್ವೇನ್ರೀ!

  ಪ್ರತಿಕ್ರಿಯೆ
 7. ಆನಂದ

  ಸದ್ಯಕ್ಕೆ ಅಕ್ಕ ಕಥಾಸ್ಪರ್ಧೆಯಲ್ಲಿ ಗೆದ್ದವರ ಜಾತಿ ಹುಡುಕುವ ಕೆಲಸದಲ್ಲಿ ನಿರತರಾಗಿರಬಹುದು ಈ ಲೇಖಕರು!

  ಪ್ರತಿಕ್ರಿಯೆ
 8. Prasad Raxidi

  Lekhanavannu ptrikeylle hakbekittu, blognalli nammathoru ododo kammi,
  neevu etthida prasheglige uttarisabekadoru konegoo utthrisadiruva janathana(doorthatana) meredru. prathiyobbaroo ondondu jathiylli huttideve.
  jathiyavnagi badukabaradendu- kelavrige chala, innukelvarige arivu agathyavemba vicharvanne nirakarisuvavarige hege thilisodu.

  ಪ್ರತಿಕ್ರಿಯೆ
 9. aditi

  sarakaradalli doshgalive anta torisidare, nimagishta bandare e rajyadalli iri, illa bere rajyakke hogi. illavadare neeve ondu sarakara nadesi andangide kelavara vada. adannu meeralu yatnisuva anno ondu sanna prayatnada maatoo yaroo aaduttilla. che!

  ಪ್ರತಿಕ್ರಿಯೆ
 10. Santosh Mehandale

  ಕಾಂತರಾಜು ಅವರ ಕಾಮೆಂಟ್ ಒಂದನ್ನು ಬಿಟ್ಟು ಉಳಿದವರು ಇಲ್ಲಿ ಚೀರಿಕೊಂಡಿರುವುದನ್ನು
  ಗಮನಿಸಿದರೆ ಇವರೆಲ್ಲ ಚಂದ್ರಶೇಖರ್ ಐಜೂರ್ ಮತ್ತು ಮಂಜುನಾಥ್ ಲತಾರ ಲೇಖನದಲ್ಲಿ
  ಬಂದಿರುವ ‘ಯಾಕರಣ ಪಂಡಿತನ’ ತಳಿಗಳಂತೆ ಕಾಣುತ್ತಿದ್ದಾರೆ. ಸದರಿ ಲೇಖಕದ್ವಯರು
  ಹುಟ್ಟುಹಾಕಿದ ಚರ್ಚೆಯಿಂದಾಗಿ ‘ದೇಶಕಾಲ’ದ ಜಾತಿಕೊಳಕರು ಇಂಚಿಂಚೆ ಬೆತ್ತಲಾಗಿರುವುದು
  ಇಡೀ ನಾಡಿಗೆ ತಿಳಿದಿದೆ. ದೇಶಕಾಲದ ವಿದ್ವಾಂಸರು ಜಾತಿ ಕುರಿತೇ ಮುಂದಿನ ಸಂಚಿಕೆಯನ್ನು
  ಮುತುವರ್ಜಿಯಿಂದ ರೂಪಿಸುತ್ತಿದ್ದಾರೆಂಬ ಸುದ್ದಿಯೂ ಇದೇ. ಜಾತಿಯೆಂಬ ಏಡ್ಸ್ ಪೀಡಿತ ದೇಶವಾದ
  ಇಂಡಿಯಾ ರಕ್ತ ಕೀವು ನೋವು ಗಾಯಗಳಿಂದ ತುಂಬಿಕೊಂಡಿದ್ದರೂ ಲಕಲಕನೆ ಹೊಳೆಯುತ್ತಿದೆ ಎಂದುಬಿಟ್ಟರೆ ಸಾಕು ಇಲ್ಲಿನ ವಿಪ್ರೋತ್ತಮರು ಕುಣಿದು ಕುಪ್ಪಳಿಸಿಯಾರು. ಇನ್ನೂ ಇಲ್ಲಿ ಅನಿವಾಸಿ ಕನ್ನಡಿಗರು ನೀಡಿರುವ ಪ್ರತಿಕ್ರಿಯೆ ‘ನಮ್ಮಪ್ಪ ಬರೀ ಬ್ರಾಹ್ಮಣರಿಗಷ್ಟೇ ಅಕ್ಕ ಸ್ಪರ್ಧೆ ಏರ್ಪಡಿಸಿದ್ದು, ಜಾತಿಗೆಟ್ಟವರೆಲ್ಲ ಸ್ಪರ್ಧಿಸಿ ಇಡೀ ಸ್ಪರ್ಧೆಯನ್ನೇ ಮಲಿನಗೊಳಿಸಿಬಿಟ್ಟರಲ್ಲ ‘ ಅನ್ನುವ ಧಾಟಿಯಲ್ಲಿದೆ. ಅಕ್ಕ ಕಥಾ ಸ್ಪರ್ಧೆಗೆ ಬ್ರಾಹ್ಮಣರನ್ನು ಹೊರತು ಪಡಿಸಿ ಉಳಿದವರು ಭಾಗವಹಿಸುವಂತಿಲ್ಲ ಎಂಬ ನಿಯಮವಿತ್ತೆ. ಇದ್ದರೆ ದಯವಿಟ್ಟು ಮಾಹಿತಿ ನೀಡಿ. ದೇಶಬಿಟ್ಟರೂ ಜಾತಿ ಬಿಡದ ರೋಗ ಈ ದೇಶದ ಬ್ರಾಹ್ಮಣರಿಗಲ್ಲದೆ ಇನ್ಯಾರಿಗೆ ತಾನೇ ತಗುಲಿಕೊಂಡಿದೆ ಹೇಳಿ.

  ಪ್ರತಿಕ್ರಿಯೆ
  • ಆನಂದ

   Santosh Mehandale ಅವರ ಪ್ರತಿಕ್ರಿಯೆ ನೋಡಿದರೆ ಯಾರು ಜಾತಿ ಹೆಸರಲ್ಲಿ ಚೀರಿಕೊಳ್ಳುತ್ತಿದ್ದಾರೆ ಎಂದು ತಿಳಿಯುತ್ತದೆ. ಈ ಚರ್ಚೆಯಿಂದ ದೇಶಕಾಲದ ಜಾತಿಕೊಳಕು ಇಂಚಿಂಚಾಗಿ ಬೆತ್ತಲೆಯಾಗಿಲ್ಲ, ಬದಲಾಗಿ ಈ ಲೇಖಕದ್ವಯರ ಜಾತಿಕೊಳಕಿನ ಮನಃಸ್ಥಿತಿ ಬಯಲಾಗಿದೆ. ಜಾತಿ ಎಂಬ ಏಡ್ಸ್ ನಿಂದ ದೇಶ ನಿಧಾನಕ್ಕೆ ಬಿಡುಗಡೆಯಾಗುತ್ತಿದ್ದರೂ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಜಾತಿಯ ಗಾಯ ಕೆರೆಯುತ್ತಾ ಅದು ಮಾಯಲು ಬಿಡದೇ ಕೀವು ತುಂಬಿ ಹರಿಯುವಂತೆ ಮಾಡುವುದರಲ್ಲಿ ಸಂತೋಷ ಅಂತವರು ಮತ್ತು ಲೇಖಕರಂತವರು ತೊಡಗಿದ್ದಾರೆ. ಅದಕ್ಕೆ ಈ ದೇಶಕಾಲದ ಚರ್ಚೆಯೇ ಸಾಕ್ಷಿ. . ದೇಶ ಜಾತಿ ಬಿಡುತ್ತಿದ್ದರೂ ತಾವು ಜಾತಿ ಬಿಡದೇ ಸಿಕ್ಕ ಕಡೆಯೆಲ್ಲಾ ಜಾತಿ ಕೆದಕುವ ಈ ರೋಗ ದೇಶಕ್ಕೆ ಒಳ್ಳೆಯದಲ್ಲ. ಈ ಹಳದಿ ಕಣ್ಣು ಗುಣವಾಗಲಿ.
   ಇನ್ನು ಅಕ್ಕ ಕತೆ ಸ್ಪರ್ಧೆ ಬರೀ ಇಂತಹ ಜಾತಿಯವರಿಗೆ ಅಂತ ಇರಲಿಲ್ಲ. ಅದರ ಮಾಹಿತಿ ಇನ್ನೂ ಅಂತರ್ಜಾಲದಲ್ಲಿದೆ. ನೋಡಿ. ಯೋಗ್ಯತೆ ಇದ್ದವರು ಯಾರು ಬೇಕಾದರೂ ಬರೆಯಬಹುದಿತ್ತು. ಆದರೆ ಅಲ್ಲಿ ಕೆಲ ’ಬಲಿತ’ ವರು ದಲಿತರ ಹೆಸರಿನಲ್ಲಿ ಬಯಸುವಂತೆ ಜಾತಿ ಮೀಸಲಾತಿ ಇರಲಿಲ್ಲ ಅಷ್ಟೆ.
   ಬೇರೆಯವರು ಮಾಡಿದ್ದು ಸರಿ ಎನಿಸದಿದ್ದರೆ ತಾವೇ ಮಾಡುವ ಸ್ವಾತಂತ್ರ್ಯವನ್ನು ಈ ದೇಶ ನಮಗೆ ಕೊಟ್ಟಿದೆ. ದೇಶಕಾಲ ಸರಿ ಇಲ್ಲ ಅನಿಸಿದರೆ ನೀವು ಇನ್ನೊಂದು ಪತ್ರಿಕೆ ಮಾಡಿ, ಸಾಮಾಜಿಕ ನ್ಯಾಯ ತುಂಬಿ. ಅಕ್ಕ ಕತಾ ಸ್ಪರ್ಧೆ ಸರಿ ಇಲ್ಲ ಅನಿಸಿದರೆ ನೀವೆ ಇನ್ನೊಂದು ಕತಾ ಸ್ಪರ್ಧೆ ನೆಡೆಸಿ. ಅದು ಬಿಟ್ಟು ಬೇರೆಯವರೇ ಬಂದು ನಿಮ್ಮ ಜಾತಿ ಕಾರಣಕ್ಕಾಗಿ ಹಾರ ಹಾಕಿ ಸನ್ಮಾನ ಮಾಡಬೇಕೆಂದು ಬಯಸುತ್ತಾ , ಕರುಬುತ್ತಾ ಕೂತರೆ ಮತ್ತೆ ಅದೇ ಜಾತಿಯ ಮಾನದಂಡವೊಂದೇ ತಮಗುಳಿಯುವುದು.

   ಪ್ರತಿಕ್ರಿಯೆ
 11. mamatha

  ದೇಶಕಾಲ ಬಳಗದ ಸಂವೇದನಾರಹಿತ ನಡವಳಿಕೆ ಏನಿದ್ದರೂ ಬ್ರಾಹ್ಮಣರ ಪಂಕ್ತಿ ಭೋಜನಕ್ಕೆ ಹೋಲಿಸುವಂತಿದೆ. ಬುದ್ಧಿವಂತಿಕೆ ಮೆರೆದಂತೆ ಹೃದಯವಂತಿಕೆ ಮೆರೆಯುವಂತೆ ಕಾಣುತ್ತಿಲ್ಲ.

  ಪ್ರತಿಕ್ರಿಯೆ
 12. nagaraj

  charche padeyuthiruva swaroopa nodidre indina paristhiti prati obbarannu swakendrita dveepagalannagi maduthide embudu spashta. vastu nishta alochane namma chintaneya neleyagali. vishesha sanchike swalpa gambheerya kaledukondide endu oppabahudu ashte. mathella namma grahikeyallina mitigalu.

  ಪ್ರತಿಕ್ರಿಯೆ
 13. Nataraja

  ಈ ಲೇಖನ ಓದುತ್ತಾ ಓದುತ್ತಾ ನನಗ್ಯಾಕೋ ಅಭಿಮನ್ಯು ನೆನಪಾದ. ಚಕ್ರವ್ಯೂಹ ಭೇದಿಸುವ ಕಲೆ ಅರಿಯದ ಅವನು ಪಾಪ ಹೊರಬರಲಾರದೇ ಅಸುನೀಗಿದ….. ಆದರೆ ಇಲ್ಲಿನ ಪರಿಸ್ಥಿತಿ ಕೊಂಚ ಭಿನ್ನ. ಮಾನ್ಯ ಲೇಖಕರಿಗೆ ಜಾತೀಯತೆ, ಅದರಿಂದುಂಟಾಗುವ ಶ್ರೇಷ್ಠ ಕನಿಷ್ಠಗಳ ಬಗ್ಗೆ ತುಂಬಾ ಗೊಂದಲಗಳಿವೆ. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಇಂತಹ ವಿಚಾರಗಳಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ನಿಲುವುಗಳಿಗೆ ಬರುವ ಮುನ್ನ ಅದರ ಒಳಹೊರಗುಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಬೇಕು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: