ದೊಣ್ಣೆಯಿಂದಲೇ ಹುಲಿ ಹೊಡೆದ ವೀರ!

ಕೆದಂಬಾಡಿ ಜತ್ತಪ್ಪ ರೈ

ಕೊಲ್ಯ ಸುಬ್ರಾಯ ಗೌಡರು ಬಂಟ್ರ ಬೋರ್ಡು ಶಾಲೆಯ ಸಂಸ್ಥಾಪಕ ಉಪಾಧ್ಯಾಯರು; ನನಗೆ ಶ್ರೀಕಾರ ಕಲಿಸಿದ ಪ್ರಥಮ ಗುರುಗಳು. ಊರವರ ಪ್ರೀತಿಪಾತ್ರರು. ನಿರಕ್ಷರಿಗಳಾದ ಬಂಟ್ರ ಗ್ರಾಮದವರ ಯಾವ ರಿಕಾರ್ಡು ಇದ್ದರೂ ಅದು ಮಾಸ್ತರರು ಬರೆದುದೇ! ಮೂಕರ್ಜಿಯೊಂದು ಬಿಟ್ಟರೆ ಊರಿನ ಪ್ರೊ-ನೋಟಿನಿಂದ ಹಿಡಿದು, ಗೇಣಿಚೀಟು, ಗೊಬ್ಬರ ಚೀಟು, ಕೈ ಕಾಗದಗಳೆಲ್ಲ ಅವರಿಂದಲೇ ಆಗಬೇಕು. ಆ ಸಮಯಕ್ಕಾಗುವಾಗ, ಅಂದರೆ ನಾನು ಹೈಸ್ಕೂಲಿಗೆ ಮಣ್ಣು ಹೊತ್ತು ವಿಫಲನಾಗಿ ನೀರ್ಚಾಲಿನ ಮಹಾಜನ ಸಂಸ್ಕೃತ ಶಾಲೆಗೆ ೨, ೩ ವರ್ಷ ಹೋಗಿ ಕಲಿತು ಸಫಲತೆಯನ್ನು ಕಾಣದೆ ನೇಗಿಲ ಹಿಡಿಯೇ ನನ್ನ ಯೋಗ್ಯತೆಗೆ ತಕ್ಕದ್ದೆಂದು ಹುಟ್ಟಿದ ಮನೆಗೆ ಬಂದು ಬೀಡುಬಿಟ್ಟಿದ್ದೆ. ಮನೆಯಲ್ಲಿ ಕೆಲಸ ಮಾಡದಿದ್ದರೆ ನನ್ನ ತಂದೆಯವರು ಕೈ ಖರ್ಚಿಗೆ ಮುಕ್ಕಾಲು ಕೊಡುವವರಲ್ಲ. ಗರ್ಜಿ ಬಿದ್ದಾಗ ತಂದೆಯವರು ಐದು ಹತ್ತು ರೂಪಾಯಿಗಳನ್ನು ಮಾಸ್ತರರ ಮನೆಯಿಂದಲೇ ತರಿಸುತ್ತಿದ್ದರು. ಮಾಸ್ತರರು ಊರಿನಲ್ಲಿ ಆ ಕಾಲದಲ್ಲಿ ಗಟ್ಟಿ ಕುಳವಾರು. ನಾನು ನನ್ನ ಹಲವಾರು ಹೊರ ಚಟುವಟಿಕೆಗಳಿಂದ ಉತ್ತೀರ್ಣನಾಗಲಿಲ್ಲ ವಿನಾ ಬಡ್ಡು ತಲೆಯವನಲ್ಲವೆಂದು ಅವರು ಬಲ್ಲವರು; ನನಗಾಗಿ ಮರುಗಿದವರು. ಕೈಯಲ್ಲಿ ಕಾಸಿಲ್ಲದಾಗ ಎರಡು, ಮೂರು ರೂಪಾಯಿಗಳನ್ನು ಜಾತ್ರೆ ಖರ್ಚಿಗೆಂದು ಕೊಟ್ಟ ನನ್ನ ಹಿತೈಷಿ ಹಿರಿಯರು. ಕೆಲವೊಮ್ಮೆ ತಂದೆಯವರು ಹೇಳಿದ್ದಾರೆಂದು ಸುಳ್ಳು ಹೇಳಿ ಮಾಸ್ತರರಿಂದ ಹಣ ಪಡೆದು ನನ್ನ ಖರ್ಚಿಗೆ ಉಪಯೋಗಿಸುತ್ತಿದ್ದುದೂ ಉಂಟು. ಮಾಸ್ತರರದೂ ತಂದೆಯವರದೂ ಲೆಕ್ಕಾಚಾರ ವರ್ಷಾವಧಿಯದು. ಮಾಸ್ತರರು ಎಂದೂ ಸುಳ್ಳು ಹೇಳುವವರಲ್ಲ ಎಂದು ತಂದೆಯವರು ಈ ನನ್ನ ಮೋಸದ ಲೆಕ್ಕವನ್ನೂ, ತಮಗೇ ಮರೆತಿರಬೇಕೆಂದುಕೊಂಡು, ಜಮಾಖಾತೆಗೆ ತೆಗೆದುಕೊಳ್ಳುತ್ತಿದ್ದರು.img_1124.jpg

ಒಂದು ದಿನ ನಾನು ಏನೋ ನಿಮಿತ್ತದಿಂದ ಮಾಸ್ತರರನ್ನು ಕಾಣಲು ಕೊಲ್ಯಕ್ಕೆ ಹೋಗಿದ್ದೆ. ಪ್ರಾಯಸ್ಥರಾದುದರಿಂದ ಆಗ ಅವರ ಕಾಲಿಗೆ ನೀರು ಬಂದು ಊದಿಕೊಂಡಿತ್ತು. ಮತ್ತೆ ಹೆಚ್ಚು ಸಮಯ ಅವರು ಬದುಕುವುದಿಲ್ಲವೆಂದು ನನಗೆ ಖಾತ್ರಿಯಾಯಿತು. ಮಾತಾಡುತ್ತಾ, ವೈದ್ಯರು ಮುಸುವಿನ ಕಲಿಜವನ್ನು ತಿನ್ನಬೇಕೆಂದು ತಿಳಿಸಿದ್ದಾರೆಂದೂ ತಾನು ಹೇಳಿದರೆ ರುಗ್ಣಶಯ್ಯೆಯಲ್ಲಿರುವ ಈ ಮಾಸ್ತರನ ಮಾತಿಗೆ ಬೆಲೆ ಕೊಡುವವರಾರು? ಎಂದೂ, ತಮ್ಮ ಎದೆಗುದಿಯನ್ನು ನನ್ನಲ್ಲಿ ತೋಡಿಕೊಂಡರು. ನನಗೆ ತುಂಬಾ ಸಂತಾಪವಾಯಿತು. ಹುಟ್ಟಿದರೆ, ಸತ್ತರೆ, ಮದುವೆ, ಮುಂಜಿ, ಚೌಲೋಪನಯನಗಳಿಗೆ ದಿನ ನೋಡುವುದಕ್ಕೆ, ನಂಬುಗೆಯ ಸಾಕ್ಷಿಗೆ- ಇಂಥ ಹಲವು ತೆರನಾದ ಉಪಕಾರಗಳಿಗೆ ಬೇಕಾಗಿದ್ದ ಮಾಸ್ತರರ ಈ ಕಿರಿಯ ಆಸೆಯೊಂದನ್ನು ನಡೆಸುವ ಸಾಮರ್ಥ್ಯದ ಬೇಟೆಗಾರರು ಬಂಟ್ರಗ್ರಾಮದಲ್ಲಿ ಇಲ್ಲದೆ ಅಲ್ಲ. “ಸಾಯುವ ಮಾಸ್ತರ, ಇನ್ನೇಕೆ ಬೇಕು?” ಎಂಬ ಉಪೇಕ್ಷೆ! ಆದರೆ ನನಗೆ ಮಾತ್ರ ಆ ಕ್ಷಣದಲ್ಲಿ ಅವರಿಗೆ ನಾನು ಮಾಡಿದ್ದ ಹಲವು ಮೋಸ, ಇನ್ನೂ ಅವರಿಗೆ ನನ್ನಲ್ಲಿದ್ದ ಅಚಲ ವಿಶ್ವಾಸ- ಜಾಗೃತವಾಗಿ “ನಾಳೆ ಯಾ ನಾಡದು ನಾನು ಒಂದಲ್ಲ, ಎರಡು ಮುಸುವಿನ ಕಲಿಜಗಳನ್ನು ಕಳುಹಿಸಿ ಕೊಡುತ್ತೇನೆ” ಎಂದು ಭರವಸೆ ನೀಡಿ ತೋಟೆಗಳಿಗಾಗಿ ಅವರಿಂದಲೇ ಎರಡು ರೂಪಾಯ್ ಪಡೆದು ಮನೆಗೆ ಬಂದೆ. ಆಗ ರೂಪಾಯಿಗೆ ಎಂಟು ತೋಟೆ ಸಿಗುತ್ತಿದ್ದ ಕಾಲ!

ಮನೆಗೆ ಬಂದ ಬಳಿಕ ತಡ ಮಾಡದೆ ಕುಂಞಿಮೋನು ಬ್ಯಾರಿಯನ್ನು ಕರೆದು ಮರುದಿನ ಬೇಟೆಯ ಏರ್ಪಾಡು ಮಾಡಬೇಕೆಂದು ಹೇಳಿದೆ. ಆತ ಇಂಥ ಕಾರ್ಯಕ್ಕೆ ಯಾವಾಗಲೂ ಸಿದ್ಧನೆ! ನನ್ನ ಮಾತುಗಳನ್ನು ಕೇಳಿದ್ದೇ ತಡ, ತಾಯಿಯವರಲ್ಲಿ ಕೇಳಿ ಒಂದು ಲೋಟಾ ಗರಂ ಚಾ ಕುಡಿದು, ನನ್ನ ಕಂಚು ಕಟ್ಟಿದ ದೊಣ್ಣೆಯನ್ನೊಮ್ಮೆ ಅಂಗಳದಲ್ಲಿ ಕುಕ್ಕಿ ಮೀಸೆಯನ್ನು ತಿರುವಿ ಬೇಟೆಯ ಸಂದೇಶವನ್ನೊಯ್ಯಲು ಹೊರಟೇ ಬಿಟ್ಟ.

ಮರುದಿನ ಮರ್ದಾಳದಲ್ಲಿ ಬೇಟೆಗಾರರೆಲ್ಲ ಒಟ್ಟು ಸೇರಿದೆವು. ಆಜಣದ ಕಾಡನ್ನು ಮೊದಲು ಹೊಡೆಯುವುದೆಂದು ನಿರ್ಣಯ ಮಾಡಿದೆವು. ಕುಂಞಿಮೋನುವು ನನ್ನಲ್ಲಿ “ಧನೀ ಇಂದು ಒಂದು ಕಡವೆಯನ್ನು ಹೊಡೆಯಬೇಕು. ನಾನು ನಿಮ್ಮ ಬೆನ್ನ ಹಿಂದೆಯೇ ನಿಂತಿರುತ್ತೇನೆ. ಹೊಡೆದ ಕೂಡಲೇ ಚೂರಿ ಹಾಕದೆ ಬಿಡುವುದಿಲ್ಲ” ಎಂದು ತನ್ನ ಆಸೆಯನ್ನು ತೋಡಿಕೊಂಡ. ಒಳ್ಳೊಳ್ಳೆಯ ಆಯಕಟ್ಟಿನ ಗಂಡಿಗಳಲ್ಲಿ ಉತ್ತಮ ಈಡುಗಾರರನ್ನು ನಿಲ್ಲಿಸಿದ್ದಾಯಿತು. ಆಜಣದಿಂದ ಕೋಕಳ ಗುಡ್ಡೆಗೆ ಮಧ್ಯೆ ನಾನೂ, ಕುಂಞಿಮೋನುವೂ ಮರವನ್ನು ಮರೆ ಮಾಡಿ ಮರಸು ಕೂತೆವು. ಮಾರ್ಗದತ್ತಣಿಂದ ಸೋವತರ ಕಾ, ಕೂ ಎಂಬ ಎದುರ್ದನಿಯೆದ್ದಿತು. ಬಿಲ್ಲಿನಿಂದ ಒಗೆದ ಅಂಬಿನಂತೆ ಕಾಡುಮೇಕೆಯೊಂದು ಓಡಿ ಬರುವುದು ಕಂಡಿತು. ಕಾಡುಮೇಕೆಗೆ ಹೊಡೆಯುವ ಈಡುಗಾರನು ನಿಷ್ಣಾತನಿರಲೇಬೇಕು. ಅದರ ವೇಗಕ್ಕೆ ಅಂಬಿನ ವೇಗವೊಂದೇ ತುಲನೆ. ಕೋವಿಯನ್ನು ನೀಡಿ ಉದ್ದೇಶಿಸಿದ ಗುರಿಗೆ ಮಿಕವು ಬರುತ್ತಲೇ ಕುದುರೆಯನ್ನು ಮೀಟಿದೆ. ಕೋವಿಯು ‘ಢಾಂ’ ಎಂದಿತು. ಮೇಕೆಯು ನೀಳ ಹಾರೊಂದನ್ನು ಹಾರಿ ಸುಮಾರು ಐವತ್ತು ಮಾರು ದೂರಕ್ಕೆ ನೆಗೆದು ಬಿತ್ತು. ಇದನ್ನು ಕಂಡ ಕುಂಞಿಮೋನುವು ಸೊಂಟದಲ್ಲಿದ್ದ ಚೂರಿಯನ್ನು ಬಿಡಿಸಿ ಚೂರಿ ಹಾಕಲು ಹವಣಿಸಿದ. ನಾನೆಂದೆ “ಚೂರಿ ಹಾಕಬೇಡ. ಅದನ್ನು ಸುಬ್ರಾಯ ಮಾಸ್ತರರಿಗೆ ಕಳುಹಿಸಬೇಕಾಗಿದೆ” ಎಂದು. “ಸಾಯುವ ಕಾಲಕ್ಕೂ ಆಸೆ ಮುಗಿದಿಲ್ಲವೆ? ಹೂಂ. ಹಾಗಾದರೆ ನಮಗೆ ಇನ್ನು ಬೇರೆ ಸಿಕ್ಕಿಯೇ ಆಗಬೇಕಷ್ಟೆ?” ಎಂದು ತನ್ನ ಅತೃಪ್ತಿಯನ್ನು ಕುಂಞಿಮೋನು ಸೂಚಿಸಿದ. ಒಂದು ಈಡಾದ ಬಳಿಕ ಆ ಗಂಡಿಗೆ ಬೇರೆ ಮೃಗ ಬರುವ ಸಂಭವ ಕಡಿಮೆ. ಇದನ್ನು ಅರಿತ ಕುಂಞಿಮೋನು ಸಿಕ್ಕಿದುದು ಕೈ ತಪ್ಪಿತೆಂಬ ಅತೃಪ್ತಿಯಿಂದ ಇನ್ನಾವ ಪ್ರಾಣಿಯೂ ಸಿಗುವಂತಿಲ್ಲವೆಂದುಕೊಂಡು ತಾನು ಅಲ್ಲೇ ಹತ್ತಿಪ್ಪತ್ತು ಮಾರು ದೂರದಲ್ಲಿ ಹರಿಯುವ ಕಣಿಯತ್ತ ಹೋಗುವುದಾಗಿ ಹೇಳಿ ಬಹಿರ್ದೆಸೆಗೆ ಹೋದ.

ಒಂದು ಈಡನ್ನು ಕೇಳಿದ ಉಲ್ಲಾಸದಿಂದ ಸೋತವರ ಕಾಕೂ ಇನ್ನಷ್ಟು ಗಟ್ಟಿಯಾಗಿ ಕೇಳಿಬರುತ್ತಿದೆ. ಕುಂಞಿಮೋನು ನನ್ನ ಬಳಿಯಿಂದ ಹೋಗಿ ೫, ೬ ನಿಮಿಷಗಳು ಕಳೆದಿರಬಹುದು. ನೀರ ಕಣಿಯತ್ತಣಿಂದ ಬಂಡೆಗೆ ಹೊಡೆದಂತಹ ಒಂದು ಶಬ್ದದೊಂದಿಗೆ ಹುಲಿಯ ಒಂದು ಆರ್ಭಟೆಯನ್ನು ಕೇಳಿ ನಾನು ದಂಗಾಗಿ ಮರಗಟ್ಟಿದವನಂತೆ ನಿಂತೆ. ಅಷ್ಟರಲ್ಲಿ “ಯಾ, ಅಲ್ಲಾ” ಎಂಬ ಆರ್ತನಾದವೂ ಕೇಳಿಬಂತು! ನಾನು ಕೂಡಲೇ ಚೇತರಿಸಿಕೊಂಡು ಬೊಬ್ಬೆ ಕೇಳಿದ ಕಡೆಗೆ ಹೋಗಿ ನೋಡಿದೆ. ಕುಂಞಿಮೋನುವಿನ ಕಂಚಿನ ಹಿಡಿಯ ದೊಣ್ಣೆಯು ಹುಲಿಯ ಬಾಯಿಯಿಂದ ಹೊಕ್ಕು ಅರ್ಧ ಅಂಶ ಒಳಗೆ ಹೋಗಿ ಹುಲಿಯು ಮರದ ಬೊಡ್ಡೆಯೊಂದಕ್ಕೆ ಒರಗಿದೆ! ಅದು ಮೇಲೇಳದಂತೆ ಕುಂಞಿಮೋನು ತನ್ನೆಲ್ಲ ಶಕ್ತಿಯನ್ನೂ ಪ್ರಯೋಗಿಸಿ ದೊಣ್ಣೆಯಿಂದ ಅತ್ತ ದೂಡುತ್ತಿದ್ದಾನೆ. ಹುಲಿಯೂ ತನ್ನ ಶಕ್ತಿ ಸರ್ವಸ್ವದಿಂದ ಅವನನ್ನು ದೂಡಿ ಮೇಲೆ ಬೀಳಲು ಪ್ರಯತ್ನಿಸುತ್ತಿದೆ! ಅದು ಚಿಟ್ಟೆ ಹುಲಿಯಾದುದರಿಂದ ಆ ಹೋರಾಟದಲ್ಲಿ ಕುಂಞಿಮೋನುವಿನದೇ ಮೇಲುಗೈಯಾಗಿ ತೋರಿತು. ನನಗೆ ದೂರದಿಂದಲೇ, ಹುಲಿಯ ಎದೆಯ ಬಿಳಿಯ ಭಾಗ ಸ್ಪಷ್ಟವಾಗಿ ಕಾಣುತ್ತಿದೆ. ನಾನು ತಡ ಮಾಡದೆ ಒಂಟಿ ಗುಂಡಿನ ತೋಟೆಯೊಂದನ್ನು ಗುರಿ ನೋಡಿ ಹುಲಿಗೆ ಈಡು ಮಾಡಿದೆ. ಕುಂಞಿಮೋನಿನ ಜೀವದಾಸೆಯ ಅವುಕುವಿಕೆಯಿಂದ ಮೊದಲೇ ಕಂಗಾಲಾಗಿದ್ದ ಹುಲಿಯು ಗುಂಡಿನೇಟನ್ನು ತಿಂದು ಅತ್ತ ಹೊರಳಿದ್ದೇ ತಡ, ಕುಂಞಿಮೋನು ಇತ್ತ ಉರುಳಿದ! ಕಣಿಯಿಂದ ಆತುರಾತುರನಾಗಿ ನೀರು ತಂದು ಆತನ ಮುಖ, ತಲೆಗೆ ಚಿಮುಕಿಸಿದೆ; ಒಂದಿಷ್ಟು ಕುಡಿಸಿದೆ. ಬಿದ್ದಿದ್ದ ಕುಂಞಿಮೋನು ಸುಸ್ಥಿತಿಗೆ ಬರುವಾಗ ಆಚೀಚೆಯಿದ್ದ ಬೇಟೆಗಾರರೂ ಬಂದು ಅಲ್ಲಿ ಸಂದಣಿಸಿದರು. ನಡೆದ ವಿಚಾರವೇನೆಂದು ಕಾತರತೆಯಿಂದ ಎಲ್ಲರೂ ಬಗೆಬಗೆಯಾಗಿ ಪ್ರಶ್ನಿಸಿದರು. ಬೇಟೆಗೆ ಬಂದೂ ಆ ದಿನ ಮಾಂಸವಿಲ್ಲದ ಊಟ ಮಾಡಬೇಕಲ್ಲಾ ಎಂಬ ಬೇಸರದಿಂದ ತನ್ನಲ್ಲೆ ಯೋಚಿಸಿಕೊಂಡು ತಲೆ ಕೆಳಗೆ ಹಾಕಿ ಬಹಿರ್ದೆಸೆಗೆಂದು ಕುಳಿತಿದ್ದ ಕುಂಞಿಮೋನು ಅತ್ತಿತ್ತ ಗಮನಿಸಿರಲಿಲ್ಲ. ಹಾಗಾಗಿ ಎದುರಿನಿಂದ ಬಂದು ತಟ್ಟನೆ ಅಭಿಮುಖವಾದ ಹುಲಿಯನ್ನು ಕಂಡಾಗ ಹಿಂದಿರುಗಲು ಆತನಿಗಾಗಲೀ, ಹುಲಿಗಾಗಲೀ ಅವಕಾಶವಿರಲಿಲ್ಲ. ಹುಲಿಯು ಮೇಲೆ ನೆಗೆವ ಸಿದ್ಧತೆಯಲ್ಲಿದ್ದುದನ್ನು ಅರಿತ ಕುಂಞಿಮೋನು ಅನ್ಯಥಾ ಮಾರ್ಗವಿಲ್ಲದೆ ಕೈಯಲ್ಲಿ ಹಿಡಿದು ಊರಿದ್ದ ಕಂಚು ಕಟ್ಟಿದ ದೊಣ್ಣೆಯಿಂದಲೇ ಹುಲಿಯ ಮಂಡೆಗೆ ಬಲವಾಗಿ ಒಂದೇಟು ಹೊಡೆದೇ ಬಿಟ್ಟ! ಪ್ರಾಣದಾಸೆಯನ್ನು ತೊರೆದು “ಆದದ್ದಾಗಲಿ” ಎಂದುಕೊಂಡು ಹೊಡೆದ ವಜ್ರಮುಷ್ಟಿಯಂಥ ಆ ಪೆಟ್ಟು ಹುಲಿಯ ತಲೆಗೆ ಅನಿರೀಕ್ಷಿತವಾಗಿ ಬಿದ್ದಾಗ ಅದು ತತ್ತರಿಸಿತು. ನಾಲ್ಕು ಮಾರು ಹಿಂದೆ ಹೋಗಿ ಪ್ರಾಣೋತ್ಕೃಮಣ ಕಾಲದಲ್ಲಿ ವೈರಿಯ ಮೇಲೆ ನೆಗೆದು ಕೊನೆಯ ಬಾರಿಗೆ ಪರಾಕ್ರಮ ಪ್ರದರ್ಶಿಸುವಂತೆ ಅಬ್ಬರಿಸಿ ಬಾಯಗಲಿಸಿ ಮುನ್ನುಗ್ಗುವ ಸಿದ್ಧತೆಯಲ್ಲಿದ್ದ ಹುಲಿಯನ್ನು ಕಂಡ ಕುಂಞಿಮೋನು ತನ್ನ ಅಂತ್ಯಕಾಲ ಸಮೀಪಿಸಿತೆಂದಣಿಸಿ ಅಲ್ಲಾನ ಹೆಸರನ್ನು ಉಚ್ಚರಿಸುತ್ತಾ ಹುಲಿಯ ಎದುರಿಗೆ ದೊಣ್ಣೆಯನ್ನು ನೀಡಿದಾಗ “ಕಾಕತಾಳ ನ್ಯಾಯ”ದಂತೆ ಆ ಬಡಿಗೆಯ ತುದಿ ಹುಲಿಯ ಬಾಯಿಯೊಳಗೆ ಸಿಕ್ಕಿ, ಆತ ತಳ್ಳಿದ್ದರಿಂದ ಅದು ಮುಂದೆ ಗಂಟಲಿನೊಳಗೆ ನುಗ್ಗಿತು! ಇಷ್ಟು ವಿವರಗಳನ್ನು ಕುಂಞಿಮೋನುವಿನ ಮೂಲಕ ನಾವು ಸಂಗ್ರಹಿಸಿ ಅರಿತುಕೊಂಡೆವು. ನಾನು ಆ ಸ್ಥಳಕ್ಕೆ ಹೋಗಿ ನೋಡುವಾಗ ಕುಂಞಿಮೋನು ಮತ್ತು ಹುಲಿ ಇವರೊಳಗಿನ ಕಾದಾಟ ಆ ಹಂತದಲ್ಲಿತ್ತು. ಜೀವದ ಮೇಲಿನ ಆಸೆಯಿಂದ, ಪ್ರಾಣ ಭೀತಿಯಿಂದ ಕಂಗೆಟ್ಟ ಸ್ಥಿತಿಯಲ್ಲಿದ್ದ ಕುಂಞಿಮೋನು ಕೊನೆಯ ಶಕ್ತಿ ಪ್ರದರ್ಶನಕ್ಕೆ ಸಿದ್ಧವಾಗಿದ್ದ ಸಂದರ್ಭವದು. ಆತನ ದೊಣ್ಣೆಯೇ ಅವನಲ್ಲಿದ್ದ ಏಕಮಾತ್ರ ಅಸ್ತ್ರ. ಅದರಿಂದಲೇ ತಿಂದ ಪೆಟ್ಟು ಹುಲಿಗೆ ಮರಣಾಂತಿಕವೆಂಬಂತೆ ಘಾತಿಸಿದೆ. ಸಾಯುವ ಮುನ್ನ ಎದುರಾಳಿಯನ್ನು ಸೀಳುವ ಸಾಹಸ ಅದರದು. ಇಂಥ ದ್ವಂದ್ವ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲೆ ಅಲ್ಲಿಗೆ ತಲುಪಿದ ನನಗೆ ಕಂಡ ಆ ದೃಶ್ಯ ಬದುಕಿನಲ್ಲೇ ಅಪೂರ್ವ, ಅಸದೃಶವೆನಿಸಿದೆ. ನಾನು ಸಮಯವನ್ನು ವ್ಯರ್ಥವಾಗಿ ಕಳೆಯದೆ ಗುಂಡು ಹಾರಿಸಿದ್ದರಿಂದ ಹುಲಿ ಒಡನೆಯೇ ಅಸುನೀಗಿತ್ತು. ಬಿದ್ದ ಹುಲಿಯನ್ನು ಸಮೀಪಿಸಿ ಗಮನಿಸಿದೆ-ಕುಂಞಿಮೋನುವಿನ ಬಡಿಗೆಯ ಹೊಡೆತದಿಂದ ಅದರ ತಲೆ ಒಡೆದು ಪುಡಿಯಾಗಿ ತಲೆಯ ಮೇಲೆ ಕೈಯಾಡಿಸಿದಾಗ ‘ಗುಜು ಗುಜು’ ಎಂದು ಸಪ್ಪಳವಾಗುತ್ತಿತ್ತು! ಹುಲಿಯನ್ನು ಇಬ್ಬರು ಕಟ್ಟಾಳುಗಳ ಮೂಲಕ ಮನೆಗೆ ಸಾಗಿಸುವ ವ್ಯವಸ್ಥೆ ಮಾಡಿದೆ. ಚರ್ಮ ಸುಲಿಸಿ ಕಾಡುಮೇಕೆಯನ್ನು ಇಡಿಯಾಗಿಯೇ ಸುಬ್ರಾಯ ಮಾಸ್ತರರ ಮನೆಗೆ ಕಳುಹಿಸಿದೆ.

ಬಸವಳಿದಿದ್ದ ಕುಂಞಿಮೋನುವನ್ನು ಮನೆಗೆ ಕಳುಹಿಸಿ ಆತನಿಗಾಗಿ ರಾತ್ರಿಗೆ ಕೋಳಿಯೊಂದನ್ನು ಚೂರಿ ಹಾಕುವ ಏರ್ಪಾಡು ಮಾಡಿ ಮುಂದಿನ ಕಾಡು ಸೋವ ಕೆಲಸ ನಡೆಸಿದೆವು. ನಾನು ಹೊಳೆಯ ಬದಿಯಲ್ಲಿ ನಿಂತೆ. ನನ್ನಿಂದ ಸುಮಾರು ೫೦೦ ಮಾರು ದೂರದಲ್ಲಿ ನಿಂತ ಅಜ್ಜ ಕೊರಗಪ್ಪ ರೈಗಳು ಕಡವೆಯೊಂದನ್ನು ಹೊಡೆದ ಸದ್ದಿಗೆ ಗಾಬರಿಗೊಂಡು ಬಂದ ಮುಸುವೊಂದನ್ನು ನಾನು ಹೊಡೆದುರುಳಿಸಿ ಅದನ್ನೂ ಮಾಸ್ತರರಿಗೆ ಕಳುಹಿಸಿದೆ. ನಮಗೆ ದೊಡ್ಡ ಕಡವೆಯೊಂದು ದಕ್ಕಿತು. ಮಾಂಸವೆಂದರೆ ಜೀವ ಬಿಡುವಷ್ಟು ಆಶೆಯುಳ್ಳ ಕುಂಞಿಮೋನುವಿಗೆ ಮಾತ್ರ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯೆಂಬಂತೆ ಕಿರಿಯ ಕೋಳಿಮರಿ! ಆದರೆ ಅಂದಿನ ಬೇಟೆಯಲ್ಲಿ ಅನಿರೀಕ್ಷಿತವಾಗಿ ಹುಲಿಯನ್ನೆದುರಿಸಬೇಕಾಗಿ ಬಂದು ಆತ ತೋರಿದ ಸಾಹಸದಿಂದಾಗಿ “ದೊಣ್ಣೆಯಿಂದ ಹುಲಿಯನ್ನು ಹೊಡೆದ ಕುಂಞಿಮೋನು ಬ್ಯಾರಿ”ಯೆಂದು ಅವನ ಹೆಸರು ಉದ್ದವಾಯಿತು; ಪ್ರಸಿದ್ಧಿ ಬಂತು.

ನಮ್ಮ ಅಜ್ಜ ಪಟೇಲ ಕೊರಗಪ್ಪ ರೈಗಳೂ, ನನ್ನ ತಂದೆಯವರೂ ಕುಂಞಿಮೋನುವಿನ ಬಿರ್ಸಾತಿಗೆ ಮೆಚ್ಚಿ ಒಂದೊಂದು ಮುಡಿ ಅಕ್ಕಿ, ಹದಿನೈದು, ಹದಿನೈದು ತೆಂಗಿನಕಾಯಿಗಳನ್ನು ಮೆಚ್ಚು ಕೊಟ್ಟರು. ಆದರೆ ಅಂದು ರಾತ್ರಿ ಕೋಳಿ ರೊಟ್ಟಿ ತಿಂದು ಮಲಗಿದ ಕುಂಞೆಮೋನು ಹತ್ತು ಗಂಟೆ ರಾತ್ರಿಗೆ ಜ್ವರ ಹಿಡಿದು ನಡುಗತೊಡಗಿದ. ಮತ್ತೆ ಅವನು ಸುಧಾರಿಸಿಕೊಂಡದ್ದು ಗುರುವ ಮೇರನ ಮಂತ್ರವಾದ, ವಿಭೂತಿ, ಕುರ್ದಿ, ಕೋಳಿ ಬಲಿಗಳ ಫಲವಾಗಿ-ಮೂರು ದಿನಗಳ ಬಳಿಕವೆ!

‍ಲೇಖಕರು avadhi

June 16, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಲಂಕೇಶ್ Interviews ಕುವೆಂಪು

ಲಂಕೇಶ್ Interviews ಕುವೆಂಪು

1974 ರಲ್ಲಿ ಲಂಕೇಶ್ ರ ಸಂಪಾದಕತ್ವದಲ್ಲಿ ಪ್ರಕಟವಾದ `ಪಾಂಚಾಲಿ' ಸಂಚಿಕೆಯನ್ನು ಕನ್ನಡ ಸಾಹಿತ್ಯದ ಹಲವು ಮಹತ್ವದ ಬರವಣಿಗೆಗಳ ಕಣಜ ಎನ್ನಬಹುದು....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This