ದೋಸೆಯಿರುತ್ತಿರಲಿಲ್ಲ. ದೋಸೆಯಿದ್ದರೆ ಚಟ್ನಿಯಿರುತ್ತಿರಲಿಲ್ಲ..

‘ಹೈವೇ ಬದಿ ದೋಸೆವ್ಯಾಪಾರ ಮತ್ತು ರಿಸೆಶನ್ ಗರ !!’

-ಜಯದೇವ ಪ್ರಸಾದ ಮೊಳೆಯಾರ

‘ಒಂದು ಕತೆ ಅಂದ್ರೆ, ಮೇಲ್ನೋಟಕ್ಕೆ ಕಂಡಷ್ಟೇ ಅಲ್ಲ; ಅದರಲ್ಲಿ ಸೂಚ್ಯವಾಗಿ ಹೇಳಲು ಯತ್ನಿಸುವ ಒಂದು ಥೀಮ್ ಅಥವಾ ‘ಒಳದನಿ’ಯೂ ಇರಬೇಕಾಗುತ್ತೆ. ಅಂತಹ ಒಳದನಿಯನ್ನು ನೇರವಾಗಿ ಒಂದು ವರದಿಯಂತೆ ಹೇಳದೆ ಪರೋಕ್ಷವಾಗಿ ಒಂದು ಸನ್ನಿವೇಶದ ಚಿತ್ರಣದ ಮೂಲಕ ಓದುಗರಿಗೆ ಮುಟ್ಟಿಸುವುದೇ ಸಣ್ಣಕತೆ ಪ್ರಕಾರದ ಮೂಲ ಸೂತ್ರ’ ಅಂತೆಲ್ಲಾ ವಿಮರ್ಶಕರು ಹೇಳ್ತಾರೆ.

ಈಗ ಈ ಕತೆ ಓದಿ:

dosa

ಒಬ್ಬ ಅನಕ್ಷರಸ್ಥ, ಬಡವ. ಹೊಟ್ಟೆಪಾಡಿಗಾಗಿ ಹೈವೇ ಬದಿಯಲ್ಲಿ ಒಂದು ತಳ್ಳುಗಾಡಿ ಹಿಡಿದುಕೊಂಡು ಯಾತ್ರಿಕರಿಗಾಗಿ ಬಿಸಿ ಬಿಸಿ ದೋಸೆ ಮಾಡಿ ಮಾರಾಟ ಆರಂಭಿಸುತ್ತಾನೆ. ಅವನಿಗೆ ವಾರ್ತಾಪತ್ರಿಕೆ ಓದಲು ಬರುವುದಿಲ್ಲ, ಟಿವಿ ನ್ಯೂಸ್ ಓದಿ ಅರ್ಥೈಸುವ ವ್ಯವಧಾನವಿಲ್ಲ. ದೇಶದ ಆಗು-ಹೋಗುಗಳ ಬಗ್ಗೆ ಯಾವುದೇ ಅರಿವಿಲ್ಲ. ಆದರೆ, ದೊಸೆ ಮಾತ್ರ ರುಚಿಕಟ್ಟಾಗಿ ಮಾಡಬಲ್ಲ. ಆ ಹೈವೇನಲ್ಲಿ ಹೋಗುವವರಿಗೆಲ್ಲಾ ಆತನ ದೊಸೆಯ ರುಚಿ ಹತ್ತಿ ವಾಹನ ನಿಲ್ಲಿಸಿ ದೋಸೆ ಮೆಲ್ಲತೊಡಗಿದರು. ದಿನೇ ದಿನೇ ಆತನ ವ್ಯಾಪಾರ ಹಿಗ್ಗಿ, ಜಾಸ್ತಿ ಬಂಡವಾಳ ಹೂಡಿ, ಒಂದು ರೆಸ್ಟಾರಂಟ್ ಹಾಕಿ, ಕೆಲಸಕ್ಕೆ ಜನ ಇಟ್ಟು, ದೊಡ್ಡ ಉದ್ಯಮವನ್ನೇ ಆರಂಭಿಸಿದ. ಕೆಲವು ವರುಷಗಳೇ ಸಂದವು. ಎಲ್ಲಾ ರೀತಿಯ ಆರ್ಥಿಕ ಏಳು ಬೀಳುಗಳನ್ನು ಎದುರಿಸಿಯೂ ಅಭಿವೃದ್ಧಿ ಹೊಂದಿದ. ಭಾರೀ ಧನ ಸಂಪಾದಿಸಿ ಮಗನನ್ನು ಕಾಲೇಜಿಗೆ ಕಳಿಸಿ ವಿದ್ಯಾವಂತನಾಗಿಸಿದ.

ಒಂದು ದಿನ ವಿದ್ಯಾವಂತ ಮಗ ಬಂದು ಹೇಳಿದ, ‘ಅಪ್ಪಾ, ನಿಂಗೆ ಗೊತ್ತಿಲ್ವಾ? ಇಡೀ ವಿಶ್ವಕ್ಕೆ ರಿಸೆಶನ್ ಗರ ಬರಲಿದೆ. ನಾವು ದೊಡ್ಡ ಆಪತ್ತಿನಲ್ಲಿ ಸಿಲುಕುತ್ತಿದ್ದೇವೆ. ನಾವೀಗ ಅತ್ಯಂತ ಮುಂಜಾಗರೂಕರಾಗಿರಬೇಕು.’ ಅನಕ್ಷರಸ್ಥ ಅಪ್ಪ ‘ಹ್ಹೂ’ಗುಟ್ಟುತ್ತಾನೆ. ಕಲಿತ ಮಗ ಹೇಳುತ್ತಿದ್ದಾನಲ್ಲವೇ? ಜಾಣ ಮಗನ ಸಲಹೆಯ ಮೇರೆಗೆ ಸಾಮಾನುಗಳ ದಾಸ್ತಾನು ಕಡಿಮೆ ಮಾಡುತ್ತಾನೆ. ಬಿಸಿನೆಸ್ನಲ್ಲಿ ಹೂಡಿದ ಬಂಡವಾಳ ಕಟ್ ಮಾಡುತ್ತಾನೆ. ಕೆಲಸದವರನ್ನು ನಮ್ಮ ಐಟಿ-ಬಿಟಿಯವರ ತರ ಲೇ-ಆಫ್ ಮಾಡುತ್ತಾನೆ. ಅಂಜಿ ಅಂಜಿ ಅರೆ ಮನಸ್ಸಿನಿಂದ ಹೋಟೆಲ್ ನಡೆಸುತ್ತಾನೆ.

ರೆಸ್ಟಾರಂಟ್ ಸ್ಥಿತಿ ಬದಲಾಯಿತು. ಯಾತ್ರಿಗಳಿಗೆ ಕೊಡಲು ದೋಸೆಯಿರುತ್ತಿರಲಿಲ್ಲ. ದೋಸೆಯಿದ್ದರೆ ಚಟ್ನಿಯಿರುತ್ತಿರಲಿಲ್ಲ. ಎರಡೂ ಇದ್ದರೆ ಸಪ್ಲೈಗೆ ಆಳಿರುತ್ತಿರಲಿಲ್ಲ. ಹೀಗೆಲ್ಲಾ ಆಗಿ, ಕಳಪೆ ಗುಣಮಟ್ಟದಿಂದ ರೋಸಿ ಹೋಗಿ ಗಿರಾಕಿಗಳು ಅವನನ್ನು ಬಿಟ್ಟು ಬೇರೆ ಕಡೆ ಹೋಗಲು ಶುರು ಮಾಡಿದರು. ಆತನ ದಂಧೆ ದಿನೇ ದಿನೇ ಕ್ಷೀಣಿಸತೊಡಗಿ ಕೊನೆಗೊಂದು ದಿನ ಗೂಡು ಹಾಕುವ ಹಂತಕ್ಕೆ ತಲುಪಿತು.

ಆಗ ಅವನು ಮಗನ ಮುಂದಾಲೋಚನೆಯನ್ನು ಮೆಚ್ಚಿ ಹೇಳುತ್ತಾನೆ ‘ಮಗಾ, ನೀನು ರಿಸೆಶನ್ ಬಗ್ಗೆ ಹೇಳಿದ್ದು ಸರಿ. ರಿಸೆಶನ್ ಗರ ಈಗ ಬಡಿದಿದೆ !!’

* * * *

fundamentals_economics

ಯಾರೋ ಇಂಟರ್ನೆಟ್ ನಲ್ಲಿ ತಮಾಷೆಗಾಗಿ ಹರಿಬಿಟ್ಟ, ಮೇಲ್ನೋಟಕ್ಕೆ ವಿಡಂಬನೆಯಂತೆ ಕಾಣುವ ಈ ಕತೆಯ ಒಳನೋಟ ಏನು? ಅದು ಹಲವರಿಗೆ ಹಲವು ರೀತಿ ಕಾಣಬಹುದು. ‘ವಿದ್ಯಾಭ್ಯಾಸದ ನಿರರ್ಥಕತೆ’, ‘ಮಗನ ಕೈಯಲ್ಲಿ ತಂದೆಯ ಅವಸಾನ’, ಇತ್ಯಾದಿ – ಅವು, ಬಹುತೇಕ ತಂದೆ-ಮಗನ ಸಂಬಂಧಗಳ ಸುತ್ತ ಗಿರಕಿ ಹೊಡೆಯಬಹುದು.

ಆದರೆ ನನ್ನನ್ನು ತಟ್ಟಿದ್ದು ಏನೆಂದರೆ ಈ ಸುಂದರ ಸಣ್ಣಕತೆ ಮಾನವಸ್ವಭಾವದ ಬಗ್ಗೆ ಅರ್ಥಶಾಸ್ತ್ರದ ಒಂದು ಪ್ರಾಮುಖ್ಯ ಸಿದ್ಧಾಂತವನ್ನು ಜೀವಂತವಾಗಿಸಿದ್ದು. ನೂತನ ಅರ್ಥಶಾಸ್ತ್ರದ ಪಿತಾಮಹನೆಂದು ಪರಿಗಣಿಸಲ್ಪಟ್ಟ ಇಂಗ್ಲಂಡಿನ ಮೈನಾಡರ್್ ಕೇಯ್ನ್ಸ್ (1883-1946) 1936ರಲ್ಲಿ ‘‘The General theory of employment, interest and money’’ ಎಂಬ ಗ್ರಂಥವನ್ನು ಪ್ರಕಟಿಸಿ ತನ್ನ ಸಿದ್ಧಾಂತಗಳನ್ನು ಪ್ರತಿಪಾದಿಸಿದ. ಆತನ ಸಿದ್ಧಾಂತಗಳ ಮೇಲೆ ಬಳಿಕ ಕೆಯ್ನೇಶಿಯನ್ ಇಕನಾಮಿಕ್ಸ್ ಎಂಬ ಹೊಸ ಶಾಖೆಯೇ ಆರಂಭಗೊಂಡಿತು. ಈ ಶಾಖೆ ಇಂದಿಗೂ ಜೀವಂತವಾಗಿದ್ದು ಸರಕಾರ ಮತ್ತು ಅವುಗಳ ವಿತ್ತನೀತಿಯ ಅಡಿಪಾಯವಾಗಿದೆ.

ಮಾನವನ ‘ಪಶು ಪ್ರವೃತ್ತಿ’ ಎಂಬ ಒಂದು ಪರಿಕಲ್ಪನೆಯನ್ನು ಕೂಡಾ ಆತನು ಆ ಪುಸ್ತಕದಲ್ಲಿ ತೇಲಬಿಟ್ಟಿದ್ದನು. ಆ ಪ್ರಕಾರ ಮ

ನುಷ್ಯನು ತಾನು ಎಷ್ಟೇ ರಾಶನಲ್ ಎಂದು ತಿಳಿದುಕೊಂಡರೂ ಕೂಡಾ ಮೂಲಭೂತವಾಗಿ ಪಶು ಪ್ರವೃತ್ತಿಯ ಆಳದಿಂದಲೇ ವ್ಯವಹರಿಸುತ್ತಾನೆ. ತನ್ನ ‘ನಂಬಿಕೆ’ಯ ಅಧಾರದ ಮೇಲೆ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆಯೇ ಹೊರತು ಯಾವುದೇ ಲೆಕ್ಕಾಚಾರ ಅಧಾರಿತ ಗಟ್ಟಿಮುಟ್ಟಾದ ವೈಜ್ಞಾನಿಕ ಸೂತ್ರಗಳ ಆಧಾರದ ಮೇಲೆ ಅಲ್ಲ! ಮಾರ್ಕೆಟ್ ಗಳು ದೊಡ್ಡ ರೀತಿ ಏರಿಳಿತಗಳನ್ನು ಕಾಣುವುದಕ್ಕೆ ಈ ಪ್ರವೃತ್ತಿಯೇ ಕಾರಣ. ಈ ಮಾತುಗಳನ್ನು ಬಳಿಕ ಪ್ರೊ. ರಾಬರ್ಟ್ ಶಿಲ್ಲರ್ ಎಂಬವರು ಇನ್ನೂ ವಿಸ್ತರಿಸಿ ಪ್ರಚುರಪಡಿಸಿದರು.

ಒಟ್ಟಿನಲ್ಲಿ, ರಿಸೆಶನ್ ಆಗಲಿ, ಬೂಮ್ ಆಗಲಿ, ಮೂಲಭೂತವಾಗಿ ಮನುಷ್ಯನ ‘ನಂಬಿಕೆ’ ಆಧಾರಿತ ನಡವಳಿಕೆಗಳಿಂದ ಜಾಸ್ತಿ ಮತ್ತು ಟೆಕ್ನಿಕಲ್ ಕಾರಣಗಳಿಂದ ಕಮ್ಮಿ ಉಂಟಾಗುತ್ತದೆ. ಹೈವೇ ದೋಸೆ ವ್ಯಾಪಾರಿ ತನ್ನ ‘ನಂಬಿಕೆ’ ಸಕಾರಾತ್ಮಕ ಇರುವವರೆಗೆ ಅಭಿವೃದ್ಧಿ ಪಥದಲ್ಲಿ ದೌಡಾಯಿಸುತ್ತಾನೆ. ಎಲ್ಲಿ ತನ್ನಿಂದ ಹೆಚ್ಚು ಕಲಿತ ಮಗ ಬಂದು ರಿಸೆಶನ್ ವಿಷವನ್ನು ಮನಸ್ಸಿಗೆ ಕುಡಿಸಿದನೋ ಅಂದಿನಿಂದ ಆತನ ಪಾಲಿಗೆ ರಿಸೆಶನ್ ಗರ ನಿಜವಾಗಿಯೂ ಆರಂಭವಾಗುತ್ತದೆ.

ಈ ಮಾತು ಒಂದು ಒಟ್ಟು ಸಮಾಜದ ಸಂದರ್ಭದಲ್ಲೂ ಕೂಡಾ ಅಷ್ಟೇ ಸತ್ಯ ಎಂದು ಶಿಲ್ಲರ್ ತನ್ನ ಪುಸ್ತಕದಲ್ಲಿ ಪ್ರತಿಪಾದಿಸುತ್ತಾನೆ ಮತ್ತು ಮಾನವನ ಚಿಂತನೆ ಮಾತ್ರವೇ ಒಂದು ಆರ್ಥಿಕ ವ್ಯವಸ್ತೆಯನ್ನು ಹೇಗೆ ಡ್ರೈವ್ ಮಾಡುತ್ತದೆ ಎಂಬುದನ್ನು ವಿವರಿಸುತ್ತಾನೆ. ಆರ್ಥಿಕ ಹಿಂಜರಿತಕ್ಕೆ ಮೂಲಭೂತ ಕಾರಣಗಳಿಲ್ಲ ಎನ್ನುವುದು ಆತನ ಇಂಗಿತವಲ್ಲ. ಯಾವುದೇ ಕಾರಣಗಳಿದ್ದರೂ, ಮನುಷ್ಯನ ‘ನಂಬಿಕೆ’ ಅದನ್ನು ಹೇಗೆ ನೂರು ಪಟ್ಟಾಗಿಸಿ ಅದನ್ನು ಒಂದು ಸಮಸ್ಯೆಯಾಗಿ ಪರಿವರ್ತಿಸುತ್ತದೆ ಎನ್ನುವುದರ ಬಗ್ಗೆ ಗಮನ ಸೆಳೆಯುವುದೇ ಆತನ ಉದ್ಧೇಶ. ಜಾಗತಿಕ ಅರ್ಥಿಕ ವ್ಯವಸ್ತೆ ಮತ್ತು ಶೇರು ಸೂಚ್ಯಂಕಗಳ ಉಯ್ಯಾಲೆಯಾಟವನ್ನು ನೋಡಿದಾಗಲೆಲ್ಲ ನನಗೆ ಹೈವೇ ಬದಿಯ ದೋಸೆಯ ನೆನಪಾಗುತ್ತದೆ. ಈ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯ ಇಂದು ಎಲ್ಲರಿಗೂ ಇದೆ. ಇಲ್ಲದಿದ್ದಲ್ಲಿ, ‘ಸಮೂಹ ಸನ್ನಿ’ಯ ಸಂತೃಪ್ತರಾಗಿ ಪ್ರತೀ ಬಾರಿಯೂ ಅರ್ಥಿಕತೆಯೆಂಬ ಉಯ್ಯಾಲೆಯಲ್ಲಿ ಜೀಕುತ್ತಲೇ ಇರಬೇಕಾಗುತ್ತದೆ.

‍ಲೇಖಕರು avadhi

September 30, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

  1. arun s shetty

    your articles in udayvani”s kaasu-kudike is simply superb.please publish those articles in hardbound format so that it can help small investors like us

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: