ದ್ರಾವಿಡ್ ಗೆ ಎಸೆದ ಆರು ಚೆಂಡುಗಳು !

-ವೈ.ಅವನೀಂದ್ರನಾಥ್ ರಾವ್

ಕೆಂಪುಕೋಟೆ

ಕ್ರಿಕೆಟ್ ಗೀಳು ನನ್ನನ್ನು ಶೈಕ್ಷಣಿಕ ಆಯ್ಕೆಯಲ್ಲಿ ಎಡವಿ ಬೀಳುವಂತೆ ಮಾಡಿತ್ತು. ಭಾಷೆ ಮತ್ತು ಸಾಮಾಜಿಕ ಅಧ್ಯಯನಗಳಲ್ಲಿ ಹೆಚ್ಚು ಅಂಕವಿದ್ದರೂ ವಾಣಿಜ್ಯ ವಿಷಯವನ್ನು ನೆಚ್ಚಿಕೊಂಡೆ. ಕಲಾ ವಿಷಯವನ್ನು ಓದು, ಎಂಬ ಅಣ್ಣನ ಸಲಹೆಗೆ ಕಿವಿ ಕೊಡಲಿಲ್ಲ. ವಾಣಿಜ್ಯ ವಿಷಯ ಓದಿ ಬ್ಯಾಂಕ್ ಸೇರಿಕೊಂಡರೆ ಕ್ರಿಕೆಟ್ ರಂಗದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು ಎಂಬ ಭ್ರಮೆ ಆವರಿಸಿಕೊಂಡಿತ್ತು. ರಾಜ್ಯ ಮತ್ತು ದೇಶವನ್ನು ಕ್ರಿಕೆಟ್ ನಲ್ಲಿ ಪ್ರತಿನಿಧಿಸುವ ಕನಸು ತುಂಬಿಕೊಂಡಿತ್ತು. ಮುಲ್ಕಿಯ ವಿಜಯ ಕಾಲೇಜ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಆರಂಭ ಆಟಗಾರನಾಗಿ ಆಡಿದೆ. ಮಂಗಳೂರು ವಿಶ್ವವಿದ್ಯಾಲಯ ಪ್ರತೀ ವರುಷ ಬಿ.ಸಿ.ಆಳ್ವ ಟ್ರೋಫಿ ಪಂದ್ಯ ಆಯೋಜಿಸುತ್ತಿತ್ತು. ಬಿ.ಸಿ.ಆಳ್ವ ಎಂದೇ ಹೆಸರಾಗಿದ್ದ ದ.ಕ.ಜಿಲ್ಲೆಯ ಪುತ್ತೂರಿನ ಬೆಳ್ಳಿಪಾಡಿ ಚಂದ್ರಹಾಸ ಆಳ್ವ ೧೯೫೧-೫೨ರಲ್ಲಿ ಭಾರತದ ಪರ ಎರಡು ಅನಧಿಕೃತ ಟೆಸ್ಟ್ ಪಂದ್ಯ ಆಡಿದ್ದರು. ಅಕಾಲದಲ್ಲಿ ಕ್ಯಾನ್ಸೆರ್ ಗೆ ಬಲಿಯಾಗಿದ್ದರು.೧೯೯೧-೯೨ ರಲ್ಲಿ ನಾನು ಬಿ.ಸಿ.ಆಳ್ವ ಟ್ರೋಫಿ ಮೊದಲ ಪಂದ್ಯದಲ್ಲಿ ಎಂ.ಐ.ಟಿ ಮಣಿಪಾಲ ಎದುರು ಆರಂಭ ಆಟಗಾರನಾಗಿ ತೆರಳಿ ಶೂನ್ಯ ಸಂಪಾದನೆ ಮಾಡಿದೆ. ಎರಡನೆ ಪಂದ್ಯ ಉಡುಪಿಯ ಪೂರ್ಣಪ್ರಜ್ಞ ಕಾಲೇಜ್ ಎದುರು ಎರಡು ರನ್ ಹೊಡೆದು ಕಾಟ್ ಬಿಹೈಂಡ್ ಆದೆ. ಅಲ್ಲಿಗೆ ನನ್ನ ಕ್ರಿಕೆಟ್ ಕನಸು ಚೂರಾಗಿತ್ತು. ವಾಣಿಜ್ಯ ಪದವಿ ಗಳಿಸಿ ಬೆಂಗಳೂರು ಸೇರಿದೆ. ಖಾಸಗಿ ಕಂಪೆನಿಯಲ್ಲಿ ಆಗ ಲೆಕ್ಕ ಪತ್ರ ನೋಡಿಕೊಳ್ಳುವ ಕೆಲಸ. ಕ್ರಿಕೆಟ್ ಹುಚ್ಚು ಇನ್ನೂ ಬಿಟ್ಟಿರಲಿಲ್ಲ. ಅದು ೧೯೯೩-೯೪ ರಣಜಿ ಸೀಸನ್.ಬೆಂಗಳೂರಿನಲ್ಲಿ ಕರ್ನಾಟಕ ಮತ್ತು ಮುಂಬೈ ತಂಡಗಳ ನಡುವೆ ನಿರ್ಣಾಯಕ ಪಂದ್ಯ. ಮುಂಬೈ ತಂಡದಲ್ಲಿ ಅನುಭವಿ ಆಟಗಾರರು ಗೈರು ಹಾಜರಾಗಿದ್ದರು. ಹೊಸ ಆಟಗಾರರನ್ನು ಹಾಕಿಕೊಂಡು ತಂಡವನ್ನು ನಡೆಸುವ ಜವಾಬ್ದಾರಿಯನ್ನು ರವಿ ಶಾಸ್ತ್ರಿಗೆ ನೀಡಿದ್ದರು. ನನ್ನ ದೂರದ ಸಂಬಂಧಿಯೂ ಆಗಿದ್ದ ರವಿಶಾಸ್ತ್ರಿಯನ್ನು ಹತ್ತಿರದಿಂದ ಒಮ್ಮೆ ನೋಡುವ ಹಂಬಲ ಬಲವಾಗಿತ್ತು.೧೯೯೨ರ ವಿಶ್ವಕಪ್ ನಲ್ಲಿ ಕಾಲು ನೋವಿನ ನಡುವೆ ಆಡಿ ನೀರಸ ಪ್ರದರ್ಶನ ನೀಡಿದ್ದ ಶಾಸ್ತ್ರಿ ಟೀಕೆಗೆ ಗುರಿಯಾಗಿದ್ದರು.ಅದಕ್ಕೂ ಸ್ವಲ್ಪ ಹಿಂದೆ ಆಸ್ಟ್ರೇಲಿಯಾ ಎದುರು ದ್ವಿಶತಕ ಹೊಡೆದಿದ್ದ ರವಿ ಶಾಸ್ತ್ರಿಯ ಅಂತಾರಾಷ್ಟ್ರೀಯ ಬದುಕು ಕೊನೆಗೊಂಡಿತ್ತು. ೩೦ರ ಹರೆಯದ ಶಾಸ್ತ್ರೀ ಅಷ್ಟರಲ್ಲಿ ೮೦ ಟೆಸ್ಟ್ ಆಡಿದ್ದರು!. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆ ದಿನ ಕರ್ನಾಟಕ ಎದುರು ಮುಂಬೈ ಗೆಲ್ಲಬೇಕಾದರೆ ೪೦೬ ರನ್ ಗುರಿ ತಲುಪಬೇಕು. ಮುಂಬೈಯ ಆರು ಆಟಗಾರರನ್ನು ೧೭೪ ರನ್ನಿಗೆ ಪೆವಿಲಿಯನ್ ಗೆ ಅಟ್ಟಿದ ಕರ್ನಾಟಕದ ಆಟಗಾರರು ಮೇಲುಗೈ ಸಾಧಿಸಿದ್ದರು. ಈ ಒತ್ತಡದ ಸನ್ನಿವೇಶದಲ್ಲಿ ನೆಲಕಚ್ಚಿ ಆಡಿದ ನಾಯಕ ರವಿ ಶಾಸ್ತ್ರಿ ೧೫೧ ರನ್ ಹೊಡೆದು ಮುಂಬೈಯನ್ನು ಫೈನಲ್ ಗೆ ತಲುಪಿಸಿದರು. ಒಂಭತ್ತು ವರುಷದ ಬಳಿಕ ಮುಂಬೈಗೆ ಮತ್ತೆ ರಣಜಿ ಕಿರೀಟ ತೊಡಿಸಿದರು. ಸಂಜೆ ಪಂದ್ಯ ಮುಗಿದ ಬಳಿಕ ಪ್ರೇಕ್ಷಕರೆಲ್ಲ ಹೊರನಡೆಯುತ್ತಿದ್ದರು. ನಾನು ಮೆಲ್ಲನೆ ಮೈದಾನಕ್ಕೆ ಇಳಿದೆ. ಕರ್ನಾಟಕದ ಕೆಲವು ಆಟಗಾರರು ನಿಧಾನಕ್ಕೆ ಮೈದಾನದ ಇನ್ನೊಂದು ಮಗ್ಗುಲಿಗೆ ತಾಲೀಮಿಗೆ ತೆರಳುತಿದ್ದರು.ಅವರಲ್ಲಿ ಒಬ್ಬರಿಗೆ ನಾನು ವಿಶ್ ಮಾಡಿದೆ. ಅವರು ನಕ್ಕರು. ಮಾತಿಗೆ ತೊಡಗಿಕೊಂಡರು. ಅವರ ಹೆಸರು ಸುಜಿತ್ ಸೋಮಸುಂದರ್. ಆತ ವಾಚಾಳಿಯಂತೆ ಕಂಡಿತು. ಡೇವಿಡ್ ಜಾನ್ಸನ್ ಎಂಬ ವೇಗದ ಬೌಲರ್ ಜೊತೆಯಾದರು. ನಾನು ಸ್ಪಿನ್ ಬೌಲಿಂಗ್ ಮಾಡುತ್ತಿದ್ದೆ. ಅಷ್ಟರಲ್ಲಿ ನೀಳಕಾಯದ ತರುಣ ಆಟಗಾರ ನಮ್ಮ ಬಳಿಗೆ ನಡೆದು ಬರುತ್ತಿದ್ದರು. ಅವರೇ ರಾಹುಲ್ ದ್ರಾವಿಡ್. ದ್ರಾವಿಡ್ ನನ್ನ ಬಳಿ ಚೆಂಡು ಇರುವುದನ್ನು ಗಮನಿಸಿ ತನ್ನತ್ತ ಬೌಲಿಂಗ್ ನಡೆಸುವಂತೆ ಸನ್ನೆ ಮಾಡಿದರು. ಅವರಿಗೆ ಅದೇ ಶೈಲಿಯಲ್ಲಿ ಎಸೆದೆ. ಐದನೇ ಚೆಂಡು ಬ್ಯಾಟಿಗೆ ಸಿಗದಾಗ ದ್ರಾವಿಡ್ ಬ್ಯಾಟ್ ಎತ್ತಿ ಇನ್ನೊಂದು ಕೈಯಲ್ಲಿ ತಟ್ಟಿ ಅಭಿನಂದನೆ ಹೇಳಿದರು.ಹೀಗೆ ಸುಮಾರು ಆರು ಚೆಂಡು ಎಸೆದೆ. ಅಷ್ಟರಲ್ಲಿ ಕೋಚ್ ಇರಬೇಕು. ಆಟಗಾರರನ್ನು ಇನ್ನೊಂದು ತಾಲೀಮಿಗೆ ತೊಡಗಿಸಿಕೊಳ್ಳಲು ತನ್ನ ಬಳಿಗೆ ಕರೆದರು. ಈಗ ನನ್ನ ಕೆಲಸ ಚೆಂಡು ಹೆಕ್ಕಿ ಕೊಡಲು ಸೀಮಿತಗೊಂಡಿತು. ಮೊನ್ನೆ ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದಾಗ ಈ ಹಳೆಯ ನೆನಪುಗಳು ತೇಲಿ ಬಂತು. ಅದು ಹುಡುಗಾಟದ ದಿನಗಳು. ಆ ದಿನಗಳಲ್ಲಿ ಕರ್ನಾಟಕ ಪ್ರತಿಭಾನ್ವಿತ ಆಟಗಾರರನ್ನು ಹೊಂದಿತ್ತು. ಟೆಸ್ಟ್ ಇತಿಹಾಸದಲ್ಲಿ ದಾಖಲೆ ಬರೆದ ರಾಹುಲ್ ದ್ರಾವಿಡ್ ಗೆ ಆರಂಭದಲ್ಲಿ ಅವಕಾಶ ಸಿಕ್ಕಿದ್ದು ಏಕ ದಿನ ಪಂದ್ಯದಲ್ಲಿ. ಮೊದಲ ದಿನ ನಿರಾಶೆ ಕಾದಿತ್ತು. ನಂತರ ೧೯೯೬ರಲ್ಲಿ ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ಟೆಸ್ಟ್ ನಲ್ಲಿ ೯೫ ರನ್ ಗಳಿಸಿದ ದ್ರಾವಿಡ್ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಸುಜಿತ್ ಸೋಮಸುಂದರ್ ಹಾಗೂ ಡೇವಿಡ್ ಜಾನ್ಸನ್ ಕೂಡ ಒಂದೆರಡು ಪಂದ್ಯಗಳನ್ನು ಭಾರತಕ್ಕಾಗಿ ಆಡಿದ್ದರು. ನನಗೆ ನೆನಪಿರುವಂತೆ ಒಂದು ಕ್ರಿಕೆಟ್ ಸರಣಿಯಲ್ಲಿ ಕರ್ನಾಟಕದ ಏಳು ಮಂದಿ ಆಟಗಾರರು ಭಾರತ ತಂಡದಲ್ಲಿ ಆಡಿದ್ದರು!. ದಿಲೀಪ್ ವೆಂಗ್ಸರ್ಕರ್ ಮತ್ತು ಮೊಹಮದ್ ಅಜರುದ್ದಿನ್ ನಂತರ ಭಾರತದ ಕ್ರಿಕೆಟ್ ನ ಬ್ಯಾಟಿಂಗ್ ವಿಭಾಗಕ್ಕೆ ಆಸರೆಯಾದವರು ದ್ರಾವಿಡ್. ಈ ಬಗೆಯ ಸ್ಥಿರ ಚಿತ್ತದ ಆಟಗಾರರು ಭಾರತಕ್ಕೆ ಇಂದು ಅವಶ್ಯ ಬೇಕು. ವಾಣಿಜ್ಯ ಪದವಿ ಪಡೆದು ನಾನು ರನ್ ಔಟ್ ಆಗಿದ್ದೆ. ನಂತರ ಸಾಹಿತ್ಯದಲ್ಲಿ ಎಂ.ಎ ಮತ್ತು ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ನನ್ನ ದಾರಿ ಕಂಡುಕೊಂಡೆ. ಕ್ರಿಕೆಟ್ ನಲ್ಲಿ ಒಮ್ಮೆ ‘ಶೂನ್ಯ’ಕ್ಕೆ ಔಟ್ ಆದರೆ, ಮುಂದಿನ ಪಂದ್ಯದಲ್ಲಿ ಶತಕ ಹೊಡೆಯುವ ಅವಕಾಶವಿದೆ. ಕ್ರಿಕೆಟ್ ನನಗೆ ಇದನ್ನೇ ಕಲಿಸಿದೆ.]]>

‍ಲೇಖಕರು G

July 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: