ಧೂಳು ತುಂಬಿದ ದೇವದುರ್ಗ

ಮಾತು ಮೌನದ ಮುಂದೆ

ಶೂದ್ರ ಶ್ರೀನಿವಾಸ

ವಾರ್ತಭಾರತಿ

ಧೂಳು ತುಂಬಿದ ದೇವದುರ್ಗ

  ‘ದೇ­­ವದುರ್ಗ’ ಎಂಬ ಹೆಸರು ಕೇಳಿಸಿಕೊಳ್ಳುವುದಕ್ಕೆ ಧ್ವನಿ ಪೂರ್ಣವಾಗಿದೆ. ಈ ಧ್ವನಿ ಪೂರ್ಣತೆಯ ಮೂಲಕವೇ ಅದರ ಮೂಲ ನೆಲೆಯನ್ನು ಹುಡುಕು ವುದು ‘ಮಾತು ಮೌನದ ಮುಂದೆ’ ಅಂಕಣದ ಉದ್ದೇಶವಲ್ಲ.ರಾಯಚೂರು ಜಿಲ್ಲೆಯ ಗಡಿಭಾಗದಲ್ಲಿರುವ ಈ ದೇವದುರ್ಗ ಕೇವಲ ಎರಡು ದಿನಗಳಲ್ಲಿ ಏನೇನೋ ಅನುಭವ ಕೊಟ್ಟಿತು.ಹಾಗೆ ನೋಡಿದರೆ ಉತ್ತರ ಕರ್ನಾಟಕದ ಬಿಸಿಯ ಬೇಗೆಯ ನಡುವೆ ಸುತ್ತಾಡುವುದೆಂದರೆ; ನನಗೆ ತುಂಬ ಇಷ್ಟ. ಇಲ್ಲೆಲ್ಲ ಯಾರ್ಯಾರೋ ಪುಂಡ ಪೋಕರಿಗಳು, ಸಣ್ಣ ಪುಟ್ಟ ರಾಜಮಹಾರಾಜರು ಎಂತೆಂಥ ಅನಾಹುತಗಳನ್ನು ಮಾಡಿ ಹೋಗಿದ್ದಾರೆ. ಆಗ ಅಲ್ಲಿಯ ಜನ ಭೀತರಾಗಿ ಎಲ್ಲೆಲ್ಲೋ ಅವಿತುಕೊಂಡು ತಮ್ಮನ್ನು ಹಾಗೂ ತಮ್ಮ ಮನೆಯವರ ಮಾನ ಮರ್ಯಾದೆಗಳನ್ನು ಸಾಧ್ಯವಾದ ಮಟ್ಟಿಗೆ ಕಾಪಾಡಿದ್ದಾರೆ. ಇದರ ನಡುವೆ ಮುಗ್ಧ ಜನತೆಯ ನೋವು ಮತ್ತು ವಿಷಾದಕ್ಕೆ ಮಾನಸಿಕವಾಗಿ ಚೈತನ್ಯ ತುಂಬಲು ಸೂಫಿ ಸಂತರು ಬಂದರು, ದಾಸರು ಬಂದರು. ಇದರ ಜೊತೆಗೆ ವಚನಕಾರರು ವೈವಿಧ್ಯಮಯವಾಗಿ ಜನರ ಮಧ್ಯೆ ಹುಟ್ಟಿಕೊಂಡರು. ಈ ಸಮಾಜ ಯಾವಾಗಲೂ ಹೀಗೆಯೇ ಉದಾತ್ತವಾದದ್ದನ್ನು ಮತ್ತು ನೀಚತನವನ್ನು ತನ್ನ ಒಡಲೊಳಗೆ ಇಟ್ಟುಕೊಂಡೇ ಬದು ಕುತ್ತಿರುತ್ತದೆ ಎಂಬುದನ್ನು ಜೋಗುಳದ ರೀತಿಯಲ್ಲಿ ಹೇಳುತ್ತ ಹೋದರು.   ಆದರೂ ನೂರಾರು ವರ್ಷಗಳು ಕಳೆದರೂ; ಇಲ್ಲಿಯ ಬಡತನ ಮತ್ತು ಶೌರ್ಯ ನಾಪತ್ತೆಯಾಗಲಿಲ್ಲ. ಇಂಥ ನಾಡನ್ನು ಮೂರು ದಶಕಗಳ ಹಿಂದೆ ಸಾಹಿತ್ಯ ಅಕಾಡೆಮಿಯ ಕೆಲವು ಕಾರ್ಯಕ್ರಮದ ಕಾರಣಕ್ಕಾಗಿ ಪ್ರೊ. ಜಿ.ಎಸ್. ಶಿವರುದ್ರಪ್ಪನ ವರ ಜೊತೆಯಲ್ಲಿ ಸುತ್ತಾಡಿದ್ದೆ. ಆಗ ವಚನ ಕಾರರ ಹಿರಿಮೆಯನ್ನು ಕುರಿತು ಮಾತನಾಡು ವಾಗ; ನನಗೆ ತುಂಬ ಪ್ರಿಯರಾದ ಚಿಂತಕ ಬೀರಬಲ್ಲನು ತನ್ನ ನಂಬುಗೆಯ ಯಜ ಮಾನ ಅಕ್ಬರ್‌ಗೆ ಹೇಳಿದ ಎರಡು ಕಥೆ ಗಳನ್ನು ಸಾಂದರ್ಭಿಕವಾಗಿ ವಿವರಿಸಿದ್ದೆ. ನಂತರ ಮೂರನೆಯ ದಿನ ಬೆಳಗ್ಗೆ ಹಿರಿಯ ಚಿಂತಕ, ಕವಿ ಹಾಗೂ ಗಾಂಧೀವಾದಿ ಸಿಂಪಿ ಲಿಂಗಣ್ಣನವರ ಜೊತೆಯಲ್ಲಿ ವಾಕ್ ಮಾಡುವಾಗ; ಆ ಭೂ ಪ್ರದೇಶಕ್ಕೆ ಸಂಬಂಧಿಸಿದ ನಾನಾ ರೀತಿಯ ಮಾರ್ಮಿಕವಾದ ಸಂಗತಿಗಳನ್ನು ಹೇಳಿದ್ದರು. ಎಲ್ಲೆಲ್ಲೂ ಹಸಿರಿಲ್ಲ.   ಆದರೆ ಹುಣಸೇ ಮರಗಳು ಮಾತ್ರ ಚಿಗುರಿ ಹೂವು ಬಿಟ್ಟಿರುವುದನ್ನು ಕಂಡು ನನ್ನ ಬಾಲ್ಯ ಕಾಲವನ್ನು ನೆನಪು ಮಾಡಿಕೊಂಡೆ. ಹುಣಸೇ ಹೂವನ್ನು ಚಚ್ಚಿ ಉಪ್ಪು ಮತ್ತು ಖಾರವನ್ನು ಹಾಕಿ ಲಾಡುಗಳ ರೀತಿಯಲ್ಲಿ ಕಚ್ಟಿ ತಿನ್ನುತ್ತಿದ್ದ ರುಚಿಯನ್ನು ಸಿಂಪಿ ಲಿಂಗಣ್ಣ ಅವರಿಗೆ ಪ್ರಸ್ತಾಪಿಸಿದಾಗ; ‘‘ನಾವೂ ತಿಂದಿದ್ದೀವಪ್ಪ, ಈಗ ನಿನಗೆ ಬೇಕೇನು?’’ ಎಂದು ಕೇಳಿದ್ದರು. ಅಪ್ಪಟ ಬಿಳಿಯ ವಸ್ತ್ರಧಾರಿ ಕಚ್ಚೆ ಪಂಚೆಯ ಮತ್ತು ಗಾಂಧಿ ಟೊಪ್ಪಿಗೆಯ ಸಿಂಪಿ ಲಿಂಗಣ್ಣನವರು ತುಂಬ ಆಪ್ತರಾಗಿ ಕಂಡು ಬಿಟ್ಟಿದ್ದರು.ಹೀಗೆಯೇ ಸ್ವಲ್ಪ ಮುಂದೆ ಹೋಗುವಾಗ; ಹತ್ತಾರು ಹೆಣ್ಣು ಮಕ್ಕಳು ಹ್ಯಾಂಡ್‌ಪಂಪ್‌ನಿಂದ ನೀರು ತೆಗೆದುಕೊಳ್ಳುತ್ತಿದ್ದರು. ಆ ಪಂಪಿಗೆ ಆಗ ತಾನೇ ಪೂಜೆ ಮಾಡಿ ನೀರು ಪಡೆಯುತ್ತಿದ್ದರು. ಹಾಗೆ ಪಡೆಯುವಾಗ ಅವರೆಲ್ಲ ಅಬ್ದುಲ್ ನಜೀರ್ ಸಾಬ್ ಅವರನ್ನು ಸ್ಮರಿಸಿ ನೀರು ಪಡೆಯುತ್ತಿದ್ದರು. ಅವರ ಪಾಲಿಗೆ ಅಬ್ದುಲ್ ನಜೀರ್‌ಸಾಬ್ ಒಬ್ಬ ರಾಜಕಾರಣಿಯಾಗಿಯೋ ಅಥವಾ ಮಂತ್ರಿಯಾ ಗಿಯೋ ಕಾಣುತ್ತಿರಲಿಲ್ಲ. ಆರಾಧ್ಯ ಸಂತನಾಗಿ ಕಂಡುಕೊಂಡವರು.   ಎಷ್ಟೊಂದು ಹ್ಯಾಂಡ್‌ಪಂಪ್ಗಳ ಬಳಿ ನಜೀರ್‌ಸಾಬ್ ಅವರ ಭಾವಚಿತ್ರವನ್ನು ಹಾಕಿ ನಮಸ್ಕರಿಸಿ ನೀರು ಪಡೆಯುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಅಬ್ದುಲ್ ನಜೀರ್‌ಸಾಬ್ ಅವರ ಜೊತೆಯಲ್ಲಿ ತಿಂಡಿ ತಿನ್ನುತ್ತಿದ್ದೆವು.ಅಂದು ಯು.ಆರ್.ಅನಂತ ಮೂರ್ತಿಯವರು ಮತ್ತು ಗೆಳೆಯ ರಮಜಾನ್ ದರ್ಗಾನೂ ಇದ್ದ. ಆಗ ಉತ್ತರ ಕರ್ನಾಟಕದ ಅನುಭವವನ್ನು ಹೇಳುತ್ತ: ಇದನ್ನೇ ನೆಪಮಾಡಿಕೊಂಡು ಆ ಪ್ರದೇಶಕ್ಕೆ ಅನುಗುಣ ವಾದ ಮರಗಳನ್ನು ಬೆಳೆಸಿ ಎಂದು ಹೇಳಿದ್ದೆ. ಅದಕ್ಕೆ ನಜೀರ್‌ಸಾಬ್ ಅವರು ‘‘ನಿಜವಾಗಿಯೂ ಮಾಡ ಬೇಕು ಶೂದ್ರ, ಪ್ರಜಾಪ್ರಭುತ್ವದ ಮುಂದೆ ಎಲ್ಲವೂ ಸಾಧ್ಯವಿದೆ’’ ಎಂದು ಹೇಳಿದ್ದರು. ಇಂಥ ಸಾಧ್ಯತೆ ಗಳನ್ನು ತಮ್ಮ ಎದೆಯ ತುಂಬ ಎಷ್ಟೊಂದು ತುಂಬಿ ಕೊಂಡಿದ್ದರು. ಆದರೆ ಅವರು ಗಂಟಲಿನ ಕ್ಯಾನ್ಸರ್ ನಿಂದ ನರಳುವಾಗ; ಎಲ್ಲವನ್ನು ವೇದನೆಯ ಅಥವಾ ಆಶಯಗಳ ದೃಷ್ಟಿಯಿಂದಲೇ ಮಾತಾಡುತ್ತಿದ್ದರು.   ನಾವು ವಾಕ್ ಮುಗಿಸಿ, ಸಿಂಪಿ ಲಿಂಗಣ್ಣನವರ ಮನೆಗೆ ತಿಂಡಿಗೆ ಬಂದೆವು. ನಮ್ಮ ಜೊತೆಗೆ ಕವಿ, ಶಿಕ್ಷಣತಜ್ಞ ಹಾಗೂ ಅದ್ಭುತ ಮೇಸ್ಟ್ರು ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯನವರು ಕೂಡಿಕೊಂಡರು. ಆಗ ಅವರು ಕರ್ನಾಟಕದ ಕಾಲೇಜು ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾಗಿದ್ದರಿಂದ ಒಂದಷ್ಟು ಮಂದಿ ಶಿಕ್ಷಕರು ಕೈಕಟ್ಟಿಕೊಂಡೇ ಅವರೊಡನೆ ನಡೆದುಬಂದಿದ್ದರು. ತಿಂಡಿಗೆ ಅವರೂ ಭಾಗಿಯಾಗಿದ್ದರು. ರುಚಿರುಚಿಯಾದ ಅವಲಕ್ಕಿ ಬಾತ್, ಜೊತೆಗೆ ಪಾಯಸ, ನಂತರ ಆ ಪ್ರದೇಶದ ವಿಶಿಷ್ಟ ವಾದ ಬಾಳೆಹಣ್ಣು, ಇದೆಲ್ಲದರ ಮಧ್ಯೆ ಮಾತು ಸಾಗಿದ್ದುದು ಉತ್ತರ ಕರ್ನಾಟಕದ ಬಡತನ ಮತ್ತು ಜನತೆಯ ನಾನಾ ರೀತಿಯ ಬವಣೆಯನ್ನು ಕುರಿತಂತೆ.   ಈ ಎಲ್ಲವೂ ಸೇರಿದಂತೆ ಲಂಕೇಶ್ ಪತ್ರಿಕೆಯ ನನ್ನ ಅಂಕಣದ ಭಾಗದಲ್ಲಿ ದೀರ್ಘ ಲೇಖನ ವನ್ನು ಬರೆದಿದ್ದೆ. ಅಲ್ಲಿ ಕೊನೆಯ ಪಕ್ಷ ಹಳೆಯ ಮೈಸೂರು ಪ್ರದೇಶಕ್ಕೆ ಕೊಡುವ ಸಂಪನ್ಮೂಲವನ್ನು ಅರ್ಧದಷ್ಟು ಕಡಿಮೆ ಮಾಡಿ; ಅದನ್ನು ಉತ್ತರ ಕರ್ನಾಟಕದ ಬೆಳವಣಿಗೆಗೆ ರವಾನಿಸಿ ಎಂದು. ಇದನ್ನು ಪ್ರೊ.ಡಿ.ಎಂ. ನಂಜುಂಡಪ್ಪನವರು ಹೈದ ರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕವಾದ ಪ್ಯಾಕೇಜ್ ಸ್ವರೂಪದ ವರದಿಯನ್ನು ಸಿದ್ಧಪಡಿಸುವಾಗ ಅವರ ಮುಂದೆ ನಾವು ಒಂದಷ್ಟು ಗೆಳೆಯರು ಪ್ರಸ್ತಾಪಿಸಿ ದ್ದೆವು. ಇತ್ತೀಚೆಗೆ ಭಾರತದ ಸಂಸತ್‌ನಲ್ಲಿ ಹೈದರಾಬಾದ್ ಕರ್ನಾಟಕದ ಭಾಗಕ್ಕೆ ಪ್ರತ್ಯೇಕ ವಾದ ಆರ್ಥಿಕ ಪ್ಯಾಕೇಜನ್ನು ಕುರಿತಂತೆ ಪ್ರಕಟಿಸಿ ದಾಗ ನನಗೆ ನಿಜವಾಗಿಯೂ ಖುಷಿಯಾಗಿತ್ತು.   ಇಂಥ ಹಿನ್ನೆಲೆಯ ತುಣುಕಾದ ದೇವದುರ್ಗವನ್ನು ನೋಡುವ ಅವಕಾಶ ಸಿಕ್ಕಿತು. ಕೆಲವು ತಿಂಗಳುಗಳ ಹಿಂದೆ ದೇವದುರ್ಗದಲ್ಲಿ ಅದ್ಭುತವಾದ ಗ್ರಂಥಾಲಯದ ಪ್ರಾರಂಭೋತ್ಸವವಿತ್ತು.ಗ್ರಂಥಾಲಯದ ಚಳವಳಿಯ ಬಗ್ಗೆ ತುಂಬ ಅನನ್ಯತೆಯಿಂದ ದುಡಿಯುತ್ತಿರುವ ಕೆ.ಜಿ.ವೆಂಕಟೇಶ್ ಅವರು ಗ್ರಂಥಾಲಯ ಇಲಾಖೆಯ ನಿರ್ದೇಶಕರು.ನಾನು ತುಂಬ ಗೌರವಿಸುವ ಅಧಿಕಾರಿ. ಎನ್.ಡಿ. ಬಗರಿ ಮತ್ತು ದೇಶಪಾಂಡೆಯವರ ನಂತರ ದೂರದೃಷ್ಟಿಯುಳ್ಳ ಅಧಿಕಾರಿ.ಇಂಥ ಅಧಿಕಾರಿ ನಿರ್ದೇಶಕರಾಗಕೂಡದು ಎಂದು ಅವರು ದೀರ್ಘ ಸೇವೆಯ ರಿಜಿಸ್ಟ್ರರ್ ಕಳೆದು ಹೋಗಿದೆಯೆಂದು ತಂತ್ರ ರೂಪಿಸಿ; ಬೇರೊಬ್ಬರನ್ನು ನಿರ್ದೇಶಕರನ್ನಾಗಿ ಮಾಡಿದ್ದರು.   ಕೊನೆಗೆ ಕಾನೂನಿನ ಪ್ರಕಾರ ಹೊರಾಟ ನಡೆಸಿ ಒಂದೆರಡು ವರ್ಷಗಳ ಅಲ್ಪಾವಧಿಗೆ ನಿರ್ದೇಶಕರಾಗಿ ಬಂದವರು. ತಮ್ಮ ಅವಧಿಯಲ್ಲಿ ಕೆಲವು ಉತ್ತಮ ಮಾದರಿಗಳನ್ನು ಬಿಟ್ಟು ಹೋಗೋಣವೆಂದು ದುಡಿಯುತ್ತಿರುವಂಥವರು. ಇದರ ಜೊತೆಗೆ ಪುಸ್ತಕ ಸಂಸ್ಕೃತಿಯೇ ಈ ಸಮಾಜದ ಏರುಪೇರುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡು ವಂಥದ್ದು ಎಂದು ಗಾಢವಾಗಿ ನಂಬಿದವರು.ಕರ್ನಾಟಕದ ಉದ್ದಗಲಕ್ಕೂ ಗ್ರಂಥಾಲಯಗಳಿಗೆ ಸುಸಜ್ಜಿತವಾದ ಕಟ್ಟಡಗಳಿಗೆ ಯೋಜನೆಗಳನ್ನು ರೂಪಿಸುತ್ತಿರುವಂಥವರು.ಯಾಕೆಂದರೆ ಪ್ರತಿವರ್ಷ ಕನ್ನಡದಲ್ಲಿಯೇ ಸಾವಿರಾರು ಪುಸ್ತಕಗಳು ಮುದ್ರಣವಾಗಿ ಹೊರಗೆ ಬರುತ್ತಿವೆ.ಇವುಗಳ ಜೊತೆಗೆ ಇಂಗ್ಲಿಷ್, ಹಿಂದಿ, ಉರ್ದು, ತಮಿಳು, ತೆಲುಗು ಮತ್ತು ಬಂಗಾಳಿ ಭಾಷೆಗಳ ಕೃತಿಗಳು ಸ್ವಲ್ಪಮಟ್ಟಿಗೆ ಸೇರ್ಪಡೆಯಾಗುತ್ತಿವೆ.   ಆದರೆ ಅವುಗಳನ್ನೆಲ್ಲ ವ್ಯವಸ್ಥಿತವಾಗಿ ಇಟ್ಟುಕೊಳ್ಳಲು ಜಾಗವಿಲ್ಲ. ಹಾಗೆಯೇ ವೃತ್ತ ಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ವಿವಿಧ ರೀತಿಯ ಮ್ಯಾಗಝಿನ್‌ಗಳನ್ನು ಓದಲು ಬರುವ ಮಂದಿ ಗ್ರಾಮಾಂತರ ಪ್ರದೇಶಗಳಲ್ಲಿ ಸುಮಾರು ಐದು ಸಾವಿರಾರು ಗ್ರಂಥಾಲಯ ಗಳು ತಲೆಯೆತ್ತಿ ನಮಗೆ ಉತ್ತಮ ಕಟ್ಟಡ ಗಳನ್ನು ಕೊಡಿ ಎಂಬ ವಾತಾವರಣ ಸೃಷ್ಟಿ ಯಾಗುತ್ತಿದೆ. ಈ ಕಾರಣಕ್ಕಾಗಿಯೇ ರಾಯಚೂರು ಜಿಲ್ಲೆಯಲ್ಲಿ ನೂರು ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಶಂಕುಸ್ಥಾಪನೆಯಾಗಿದೆ. ಇವೆಲ್ಲವೂ ಬೆಂಕಿ ಪೊಟ್ಟಣದ ರೀತಿಯ ಕಟ್ಟಡಗಳಾಗ ಬಾರದು; ಶಿಲ್ಪ ಕಲೆಯ ದೃಷ್ಟಿಯಿಂದ ಬೆಂಗಳೂರಿನ ಕಬ್ಬನ್ ಉದ್ಯಾನದಲ್ಲಿರುವ ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯದ ರೀತಿಯಲ್ಲಿ ರ್ಯಾಜದ ಎಲ್ಲ ಗ್ರಂಥಾಲಯಗಳು ಇರಬೇಕು.   ಇದನ್ನು ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಹೇಳಿ ನಿರ್ದೇಶಕರಾದ ಕೆ.ಜಿ. ವೆಂಕಟೇಶ್ ಅವರು ಮತ್ತು ನಾನು ಹೇಳಿದಾಗ ಸಚಿವರಾದ ರೇವು ನಾಯಕ ಬೆಳಮಗಿಯವರು ಸಂತೋಷವಾಗಿ ಒಪ್ಪಿಕೊಂಡರು. ಬೆಳಮಗಿಯವರು ಬಿಜೆಪಿಯ ಚಿಂತನೆಗಳಿಂದ ಹೊರಗುಳಿದು ದುಡಿಯುವಂಥವರು. ಅವರು ಯಾವಾಗಲೂ ಹೇಳುವರು: ‘‘ನಾನು ಒಬ್ಬ ಪೈಲ್ವಾನನಾಗಿ ಗ್ರಾಮೀಣ ಪ್ರದೇಶದಲ್ಲಿ ಜನರ ಸೇವೆಯನ್ನು ಮಾಡುತ್ತ ಬಂದವನು. ಪುಸ್ತಕಗಳ ಮೂಲಕ ಬೆಳೆಯಲಿಲ್ಲವಲ್ಲ ಎಂಬ ನೋವಿದೆ. ಆದರೆ ಆ ಕೊರತೆಯನ್ನು ಗ್ರಂಥಾಲ ಯಗಳ ಸಚಿವನಾಗಿ ತುಂಬಲು ಪ್ರಯತ್ನಿಸುವೆ’’ ಎಂದು ನಮ್ರತೆ ಯಿಂದ ಹೇಳುವರು. ದೇವದುರ್ಗ ತಾಲೂಕು ಕೇಂದ್ರವಾಗಿ ರಾಯಚೂರು ಜಿಲ್ಲೆಯ ಗಡಿಯಲ್ಲಿ ರುವಂಥದ್ದು. ರಾಯಚೂರಿನಿಂದ ದೇವದುರ್ಗಕ್ಕೆ ತೊಂಬತ್ತೈದು ಕಿ.ಮೀಟರಿಗಿಂತ ಜಾಸ್ತಿಯಾಗಬಹುದು.   ಉತ್ತರ ಕರ್ನಾಟಕದ ಬಡತನದಷ್ಟೇ ಭೀಕರ ರಸ್ತೆ. ನಾವು ರಾಯಚೂರಿನಲ್ಲಿ ಉಳಕೊಂಡು ಎರಡು ಬಾರಿದೇವದುರ್ಗಕ್ಕೆ ಹೋಗಿ ಬರಬೇಕಾಗಿತ್ತು.ನಮ್ಮ ಜೊತೆ ಗ್ರಂಥಾಲಯದ ಕ್ರಿಯಾಶೀಲ ಉಪ ನಿರ್ದೇಶಕರಾದ ಸತೀಶ್ ಕುಮಾರ್ ಹೊಸಮನಿಯವರು ಹಾಗೂ ಹೆಚ್.ಚಂದ್ರಶೇಖರ್ ಅವರೂ ಇದ್ದರು. ನಾವು ಎರಡು ಬಾರಿ ಆ ಕಡೆಯಿಂದ ಈ ಕಡೆಗೆ ಸುತ್ತಾಡಿದ್ದು ಒಳ್ಳೆಯದಾಯಿತು. ಯಾಕೆಂದರೆ: ರಸ್ತೆಯ ಎರಡೂ ಕಡೆ ಬತ್ತದ ಬೆಳೆಯ ಶ್ರೀಮಂತವಾದ ಹಸಿರು. ಆದರೆ ನೂರಾರು ಹೆಣ್ಣು ಮಕ್ಕಳು ಕಂಕುಳಲ್ಲಿ ಒಂದು ಮಗುವನ್ನಿಟ್ಟುಕೊಂಡು, ತಲೆಯ ಮೇಲೆ ಮಂಕರಿ ಮತ್ತು ಜೊತೆಗೆ ಕೈ ಹಿಡಿದು ನಡೆಯುವ ಇನ್ನೊಂದು ಮಗು. ಬದುಕುವ ಭೀಕರತೆ ಎಷ್ಟು ವೈಪರೀತ್ಯವಾದದ್ದು. ಇದನ್ನು ಮತ್ತಷ್ಟು ಪ್ರಮಾಣಿಕರಿಸುವಂತೆ ಪುಟ್ಟ ಪುಟ್ಟ ಟೆಂಪೋಗಳ ರೀತಿಯ ಗಾಡಿಗಳಲ್ಲಿ ಓದಬೇಕಾದ ಹುಡುಗ ಹುಡುಗಿಯರನ್ನು ಕುರಿಗಳ ರೀತಿಯಲ್ಲಿ ತುಂಬಿಸಿಕೊಂಡು ಕೂಲಿಗೆ ಹೋಗುವ ಹಿಂಸಾದಾಯಕ ದೃಶ್ಯಗಳು ಎದುರಾಗುತ್ತಿದ್ದವು. ಜೀವಭೀತಿಯನ್ನು ಮರೆತು ಗಾಡಿಯ ಟಾಪ್ ಮೇಲೆ ಕೂತು ಹೋಗುವ ಬಾಲಕಾರ್ಮಿಕರು.   ನಾವು ಎಷ್ಟೊಂದು ಚಿತ್ರಗಳನ್ನು ಕ್ಯಾಮರಾದಲ್ಲಿ ತುಂಬಿಸಿಕೊಂಡೆವು.ಭಯಂಕರ ಧೂಳು ತುಂಬಿದ ದೇವದುರ್ಗವನ್ನು ತಲುಪಿದೆವು. ಕೊಳಕೋ ಕೊಳಕು. ಜನ ಆ ರೀತಿಯ ಧೂಳನ್ನು ಕುಡಿದು ಹೇಗೆ ಬದುಕುತ್ತಿದ್ದಾರೆ ಅನ್ನಿಸಿತು. ಇದರ ಜೊತೆಗೆ ಎಲ್ಲೆಂದರಲ್ಲಿ ಬಡತನ ಮತ್ತು ಹಿಂದುಳಿದಿರುವಿಕೆಯನ್ನು ಸಂಭ್ರಮಿಸುವಂತೆ ಎದ್ದು ಕಾಣುವ ಕೃತಕ ನಗುವಿನ ಪೋಸ್ಟರ್‌ಗಳು. ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಬರುತ್ತಿದ್ದರಿಂದ; ಅವರ ಬೃಹದಾಕಾರದ ಕಟೌಟ್‌ಗಳು, ಅವರ ಬಾಲಬಡುಕರ ಕಟೌಟ್‌ಗಳು, ಇದರ ಜೊತೆಗೆ ಸಾವಿರಾರು ಮಂದಿಯ ಭವಿಷ್ಯದ ನಾಯಕರಾಗಲು ಜೋರಾಗಿ ಕಾರುಗಳನ್ನು ಓಡಿಸುತ್ತ,ಮತ್ತಷ್ಟು ಧೂಳೆಬ್ಬಿಸುತ್ತ ತಮ್ಮ ನಾಯಕರನ್ನು ಬರಮಾಡಿಕೊಳ್ಳಲು ಕಾತುರರಾಗಿರುವಂಥವರು.ಮತ್ತೊಂದು ಕಡೆ ಮುಗ್ಧ ಜನ ಬದುಕಲು ಬೇರೆ ದಾರಿ ಇಲ್ಲಯೆನ್ನುವ ರೀತಿಯಲ್ಲಿ ಕಾಲೆಳೆದುಕೊಂಡು ಓಡಾಡುತ್ತಿರುವಂಥವರು.ಇದರ ಜೊತೆಗೆ ಎಲ್ಲಿ ನೋಡಿದರಲ್ಲಿ ಕಸದ ಗುಡ್ಡೆಗಳು, ನೂರಾರು ನಾಯಿಗಳು, ನಾಯಿಮರಿಗಳು ಚರಂಡಿಗಳಲ್ಲಿ ಸಂಭ್ರಮಿಸುವ ವಿಕಾರ ದೃಶ್ಯ.   ಒಂದು ಕ್ಷಣ ನಾನು ದೇವರನ್ನು ನಂಬದಿದ್ದರೂ; ‘‘ಓ ದೇವರೇ’’ ಎಂಬ ಆರ್ತಧ್ವನಿ ನನ್ನಲ್ಲೇ ಗುನುಗುನಿಸತೊಡಗಿತು. ನಾವು ಹೀಗೆಯೇ ಮುಂದೆ ಸಾಗುವಾಗ ಟರ್ರೋಕೋಟಾ ಬಣ್ಣದ ಸರಕಾರಿ ಕಚೇರಿಯ ಪಕ್ಕದಲ್ಲಿ ಹೋಗುತ್ತಿದ್ದೆವು.ಕಿಟಕಿಯಲ್ಲಿ ಹೊರಗೆ ಕಸದ ರಾಶಿ ಕಾಣಿಸಿತು.ಅದನ್ನು ಕ್ಯಾಮರಾದಲ್ಲಿ ಹಿಡಿದಿಟ್ಟುಕೊಂಡು ಸ್ವಲ್ಪ ಧೈರ್ಯ ವಹಿಸಿ ಒಳಗೆ ಇಣಿಕಿ ನೋಡಿದೆ. ಅದು ಕೋರ್ಟಾಗಿತ್ತು.ಒಳಗೆ ನ್ಯಾಯಮೂರ್ತಿಗಳು ವಕೀಲರಿಗೆ ಏನೇನೋ ಕೇಳುತ್ತಿದ್ದರು.ಒಂದು ಕ್ಷಣ ಎಂಥ ಪ್ಯಾರಡಾಕ್ಸ್ ಅನ್ನಿಸಿತು. ಹೀಗೆಯೇ ಇದನ್ನು ಚರ್ಚಿಸುತ್ತ ಮುಂದೆ ಸಾಗಿದೆವು. ಮತ್ತೆ ಎಂತೆಂಥದೋ ಎದುರಾಯಿತು.   ಗ್ರಂಥಾಲಯದೊಳಕ್ಕೆ ಹೋದೆವು.ನಿರ್ದೇಶಕರಾದ ಕೆ.ಜಿ.ವೆಂಕಟೇಶ್ ಅವರು ಉದ್ಘಾಟನೆಗೆ ಎಲ್ಲವನ್ನು ವ್ಯವಸ್ಥಿತವಾಗಿ ರೂಪಿಸುತ್ತಿದ್ದರು.ಬೆಂಗಳೂರಿನಿಂದ ಸಾವಿರಾರು ಪುಸ್ತಕಗಳನ್ನು ಆ ಗ್ರಂಥಾಲಯಕ್ಕೆ ರವಾನಿಸಿದ್ದರು. ಮಕ್ಕಳ ಪುಸ್ತಕಗಳ ವಿಭಾಗ, ಕಂಪ್ಯೂಟರ್ ವಿಭಾಗ ಮತ್ತು ವೃತ್ತ ಪತ್ರಿಕೆಗಳ ವಿಭಾಗವೂ ಅಚ್ಚು ಕಟ್ಟಾಗಿ ವ್ಯವಸ್ಥೆಗೊಂಡಿತ್ತು. ಯಾಕೆಂದರೆ ಸ್ಥಳದ ಸಮಸ್ಯೆ ಇರಲಿಲ್ಲ. ಅಲ್ಲಿ ರ್ಯಾಕ್‌ಗಳಲ್ಲಿ ನನಗೆ ಪ್ರಿಯರಾದ ಆಸ್ಗರ್ ಆಲಿ ಇಂಜಿನಿಯರ್ ಅವರ ‘ಇಸ್ಲಾಂ’ ಪುಸ್ತಕ ಸಿಕ್ಕಿತು. ಅದನ್ನು ಕೈಗೆ ತೆಗೆದುಕೊಂಡೆ. ಬೆನ್ನುಡಿ ಓದುವ ಸಮಯಕ್ಕೆ ಮುಖ್ಯಮಂತ್ರಿಗಳಾದ ಸದಾನಂದ ಗೌಡರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಬರುತ್ತಿದ್ದಾರೆಂದು ಜನ ನುಗ್ಗಿದರು. ಸೆಕ್ಯೂರಿಟಿಯವರೂ ಬಂದರು. ಉದ್ಘಾಟನೆಯೂ ಆಯಿತು.   ಯಡಿಯೂರಪ್ಪನವರು ಮುಖವನ್ನು ಬಿಗಿ ಮಾಡಿಕೊಂಡಿದ್ದರು. ಅವರ ಅಕ್ಕ ಪಕ್ಕ ಬಸವರಾಜ ಬೊಮ್ಮಾಯಿ, ಸೋಮಣ್ಣ ಉದಾಸಿಯವರು ಮತ್ತು ರೇಣುಕಾರಾದ್ಯ ಮುಂತಾದ ವೀರಶೈವ ಸಚಿವರಿದ್ದರು. ಸದಾನಂದ ಗೌಡರು ಏಕಾಂಗಿಯಾಗಿದ್ದರು. ವ್ಯವಹಾರಿಕ ದೃಷ್ಟಿಯಿಂದಲಾದರೂ ಯಡಿಯೂರಪ್ಪನವರು ನಗಲು ಪ್ರತ್ನಿಸಲಿಲ್ಲ. ಇದು ಎಂಥ ಭಾಗ್ಯಹೀನ ಸಮಾಜ ಅನ್ನಿಸಿತು. ಗ್ರಂಥಾಲಯದ ಹಾಜರಿ ಪುಸ್ತಕಕ್ಕೆ ಸಹಿ ಮಾಡುವಾಗಲೂ ಯಡಿಯೂರಪ್ಪನವರು ನಗಲು ಪ್ರಯತ್ನಿಸಲಿಲ್ಲ. ಆಗ ಅನ್ನಿಸಿತು: ಇಷ್ಟು ವರ್ಷ ಜನರ ಮಧ್ಯೆ ರಾಜಕೀಯ ಮಾಡಿರ್ತಾರೆ. ಎಂತೆಂಥ ಹಿರಿಯರನ್ನು ಕಂಡಿರುತ್ತಾರೆ. ಆದರೆ ಬದುಕಿನಲ್ಲಿ ಏನು ಕಲಿತರು?   ಸುಮಾರು ವರ್ಷಗಳ ಹಿಂದೆ ನಾವು ಪಕ್ಕಾ ರ್ಯಾಷನಲಿಸ್ ಚಳುವಳಿಯಲ್ಲಿದ್ದೆವು. ಆಗ ವಿಚಾರವಾದಿ ಚಳವಳಿಯ ಉತ್ತುಂಗ ನಾಯಕರಾಗಿದ್ದ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಜೊತೆ ಮಾತಾಡುತ್ತಿದ್ದೆವು. ಆಗ ನಾನು ‘‘ವಿಚಾರವಾದಿ ಚಳವಳಿ ಕುರಿತಂತೆ ರಾಜಾಜಿಯವರ ಅಭಿಪ್ರಾಯವೇನು?’’ ಎಂದು ಕೇಳಿದ್ದೆ. ಅದಕ್ಕೆ ಪೆರಿಯಾರ್ ಅವರು ‘‘ರಾಜಾಜಿ ದೊಡ್ಡ ಮನುಷ್ಯ. ನನ್ನ ಎಷ್ಟೋ ಉಪನ್ಯಾಸಗಳಿಗೆ ಬಂದು ಕೂತಿದ್ದಾರೆ. ಕೇಳಿಸಿಕೊಂಡು ಹೋಗಿದ್ದಾರೆ. ಹಾಗೆಯೇ ಅವರ ಜೊತೆ ಸಮುದ್ರ ದಂಡೆಯಲ್ಲಿ ವಾಕ್ ಮಾಡಿದ್ದೇನೆ. ಏನೇನೋ ಮಾತಾಡಿದ್ದೇವೆ. ಆತ ನನ್ನ ಸ್ನೇಹಿತ’’ ಎಂದಿದ್ದರು. ಇಂಥ ಮನಸ್ಥಿತಿ ಯಡಿಯೂರಪ್ಪನವರಿಗೆ ಯಾಕೆ ಬರಲಿಲ್ಲ. ಇತಿಹಾಸದಲ್ಲಿ ಎಂಥ ಅಮೂಲ್ಯ ಮಾದರಿಗಳಿವೆ. ಆದರೆ ಇವರ್ಯಾರೂ ಓದುವುದಿಲ್ಲ. ಕೇವಲ ಸುತ್ತಲೂ ಭಟ್ಟಂಗಿಗಳನ್ನು ತುಂಬಿಸಿಕೊಂಡಿರುತ್ತಾರೆ. ಇವರು ಬೋ ಪರಾಕ್ ಎಂದಾಗ ಇಂಥ ರಾಜಕಾರಣಿಗಳ ಮುಖದ ನರಗಳು ಸಡಿಲಗೊಳ್ಳುತ್ತವೆ.   ಇರಲಿ, ಉದ್ಘಾಟನೆಯ ನಂತರ ಎಲ್ಲರೂ ಸದಾನಂದಗೌಡರ ಮತ್ತು ಯಡಿಯೂರಪ್ಪನವರನ್ನು ಹಿಂಬಾಲಿಸಿದರು. ಸೋಮಣ್ಣನವರು ಮತ್ತು ಬಸವರಾಜ ಬೊಮ್ಮಾಯಿಯವರು ‘‘ಏನು ಶೂದ್ರ, ಇಲ್ಲಿ?’’ ಎಂದರು. ನಗುತ್ತ ಏನನ್ನೂ ಹೇಳಲು ಹೋಗಲಿಲ್ಲ.ಯಾಕೆಂದರೆ ನಾನು ಒಂದೆರಡು ವಾಕ್ಯಗಳಲ್ಲಿ ಅವರಿಗೆ ಹೇಳಿದ್ದರೆ; ಏನೂ ಅರ್ಥವಾಗುತ್ತಿರಲಿಲ್ಲ. ಇದೇ ಸಮಯಕ್ಕೆ ಎಷ್ಟೋ ವರ್ಷಗಳಿಂದ ನೋಡದ ಬಿಜಾಪುರ,ಗುಲಬರ್ಗಾ ಮತ್ತು ರಾಯಚೂರಿನಿಂದ ಬಂದ ಗೆಳೆಯರು ಸಿಕ್ಕಿದರು.ಪ್ರೀತಿಯಿಂದ ಅಪ್ಪಿಕೊಂಡು ಮಾತಾಡಿದೆವು.ಒಟ್ಟಿಗೆ ಭಾವಚಿತ್ರದಲ್ಲಿ ಭಾಗಿಯಾದೆವು.ಅವರಿಗೆಲ್ಲ ‘‘ಈ ಗ್ರಂಥಾಲಯವನ್ನು ನೆಪ ಮಾಡಿಕೊಂಡು ಒಂದಷ್ಟು ಕಾರ್ಯಕ್ರಮ ರೂಪಿಸಿ. ಕೊನೆಗೂ ಪುಸ್ತಕ ಸಂಸ್ಕೃತಿಯೇ ನಮ್ಮನ್ನು ಕಾಪಾಡುವುದು’’ ಎಂದೆ. ಸಂಜೆ ರಾಯಚೂರಿನಲ್ಲಿ ನನಗೆ ಪ್ರಿಯರಾದ ಕ್ಲಾರನೇಟ್ ಕಲಾವಿದರಾದ ಪಂಡಿತ್ ನರಸಿಂಹಲು ವಡವಾಟಿಯವರು ಸಿಕ್ಕಿದ್ದರು. ಒಂದಷ್ಟು ಕಲೆಯ ಬಗ್ಗೆ ಮಾತಾಡುತ್ತ ಕಾಲ ಕಳೆದೆವು  ]]>

‍ಲೇಖಕರು G

June 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

೧ ಪ್ರತಿಕ್ರಿಯೆ

  1. shama, nandibetta

    ಬದುಕಿನ ಬಗ್ಗೆ, ಬದುಕಿನ ವೈರುಧ್ಯಗಳ ಬಗ್ಗೆ, ರಾಜಕಾರಣದ ಬಗ್ಗೆ, ಅದರ ಅಸಹ್ಯಗಳ ಬಗ್ಗೆ, ಪುಸ್ತಕ ಪ್ರೀತಿ ನಮ್ಮನ್ನು ಎಂಥದೇ ಸಂದರ್ಭದಲ್ಲೂ ಕೈ ಹಿಡಿದು ಕಾಪಾಡುವ ಬಗ್ಗೆ …. ಎಷ್ಟು ಚಂದ ಬರೆದಿದ್ದೀರಿ…. ಅಕ್ಕರೆಯ ನಮಸ್ಕಾರ ನಿಮಗೆ, ನಿಮ್ಮ ಲೇಖನಿಗೆ (ಅಥವಾ ಕೀ ಬೋರ್ಡ್ ಗೆ)….. 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: