ನಂದಿನಿ ಹೆದ್ದುರ್ಗ ಅವರ ‘ಬ್ರೂನೋ ದಿ ಡಾರ್ಲಿಂಗ್’

ಕೆ. ಸತ್ಯನಾರಾಯಣ

ಆಪ್ತವಾಗಿ ಓದಿಸಿಕೊಳ್ಳುವ ಗುಣ ಹೊಂದಿರುವ ಇಲ್ಲಿಯ ಬರವಣಿಗೆಯನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು, ಸೇರಿಸಬೇಕು ಎಂಬ ಪ್ರಶ್ನೆ ಎಲ್ಲ ಓದುಗರ ಮನಸ್ಸಿನಲ್ಲೂ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ ಕೂಡ ಈ ಬರಹಗಳನ್ನು ಸಂತೋಷದಿಂದ ಓದಬಹುದು. ಬರವಣಿಗೆ ಓದುಗಸ್ನೇಹಿಯಾಗಿದೆ. ಭಾವನೆಗಳಲ್ಲಾಗಲೀ, ವಿಚಾರದಲ್ಲಾಗಲೀ ಕೃತಕತೆಯಿಲ್ಲ.

ಓದುಗನ ದಿನನಿತ್ಯದ ಅನುಭವ ಪ್ರಪಂಚಕ್ಕೆ ಸಮೀಪವಾಗಿದೆ. ಹಾಗೆಂದು ಓದುಗರನ್ನು ರಂಜಿಸಲು ಲೇಖಕಿ ಹೊರಟಿಲ್ಲ. ಈ ಕಾಲದ ಜೀವನಶೈಲಿ, ವ್ಯಕ್ತಿತ್ವದ ಸ್ವರೂಪ – ಇವುಗಳ ಬಗ್ಗೆ ಕೂಡ ಗಂಭೀರವಾದ ಪ್ರಶ್ನೆಗಳನ್ನು ಕೇಳುತ್ತಾರೆ, ಸೂಚಿಸುತ್ತಾರೆ. ಒಳ್ಳೆಯ ಬರವಣಿಗೆಯಿಂದ ಮತ್ತೆ ಯಾವ ಗುಣ ಸ್ವಭಾವಗಳನ್ನು ನಾವು ನಿರೀಕ್ಷಿಸಬೇಕು.

ಹಲವು ಪ್ರಕಾರಗಳನ್ನು ಬೆರೆಸಿ ಬರವಣಿಗೆ ಮಾಡುವುದು ನಮ್ಮ ಕಾಲದ ಸಾಹಿತ್ಯ ಮನೋಧರ್ಮದ ಒಂದು ವಿಶಿಷ್ಟ ಗುಣವಾಗಿದೆ. ಹೀಗೆ ಹಲವು ಪ್ರಕಾರಗಳನ್ನು ಬೆರೆಸಿ ಬರೆಯುವವರಲ್ಲಿ ಹೊಸ ಬರಹಗಾರರು ಮಾತ್ರವಲ್ಲ, ಪಳಗಿದ ಪ್ರತಿಷ್ಠಿತ ಬರಹಗಾರರೂ ಕೂಡ ಸೇರಿಕೊಂಡಿದ್ದಾರೆ. ಒಂದೇ ಬರವಣಿಗೆಯಲ್ಲಿ ಕತೆ, ಸ್ವಾನುಭವ ಕಥನ, ದಿನಚರಿ,  ಪ್ರಬಂಧ, ವ್ಯಕ್ತಿಚಿತ್ರ, ಲಹರಿ, ವಿಶ್ಲೇಷಣೆ ಎಲ್ಲವನ್ನೂ ಬೆರೆಸಿ ಬರೆಯುತ್ತಾರೆ. ಓದುಗರು ಕೂಡ ಇದನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತಾರೆ.

ತೇಜಸ್ವಿಯವರ ‘ಪರಿಸರದ ಕಥೆಗಳು’ ಈ ರೀತಿಯ ಬರವಣಿಗೆಗೆ ಒಂದು ಉದಾಹರಣೆ. ಚಿತ್ತಾಲರು ಕೂಡ ೧೯೮೦ರ ದಶಕದಲ್ಲಿ ಕತೆಯಂತಹ ಪ್ರಬಂಧಗಳನ್ನು, ಪ್ರಬಂಧದಂತಹ ಕತೆಗಳನ್ನು ಬರೆಯುವುದು ತಮ್ಮ ಬರವಣಿಗೆಯ ಕ್ರಮವೆಂದು ಸೂಚಿಸಿದ್ದರು. ನಂದಿನಿಯವರ ಯಾವುದೇ ಬರವಣಿಗೆಯನ್ನು ಉದಾಹರಣೆಯಾಗಿ ತೆಗೆದುಕೊಂಡರೂ ಈ ‘ಸಂಕರ’ದ ಗುಣವನ್ನು ಢಾಳಾಗಿ ಕಾಣಬಹುದು. 

ಸಂಕಲನದ ಮೊದಲ ಬರಹ – ‘ಉಗುಳು ವೀರರ ಜಗದಲ್ಲಿ’ – ಆಕೃತಿಯನ್ನು ಗಮನಿಸೋಣ. ಇದು ಲೇಖಕಿಯ ದಿನಚರಿಯ ಭಾಗವಾಗಿಯೂ ಕಾಣುತ್ತದೆ, ಮನುಷ್ಯ ಸ್ವಭಾವದ ವಿಶ್ಲೇಷಣೆ ಕೂಡ ಇದೆ. ಸಾಹಿತಿಕ ಬರಹಗಳಲ್ಲಿ ಕಾಣುವ ವಿಶ್ಲೇಷಣಾತ್ಮಕ ಗುಣವೂ ಇದೆ. ಹಾಸ್ಯ ಪ್ರಜ್ಞೆಯೂ ಇದೆ. ಇತರರ ಬಗ್ಗೆ ಮಾತ್ರವಲ್ಲ, ತನ್ನ ಬಗ್ಗೆ ಕೂಡ.

ನಂದಿನಿಯ ಬರವಣಿಗೆಯ ಇನ್ನೊಂದು ಗುಣವೆಂದರೆ, ತನ್ನ ವೈಯಕ್ತಿಕ ಬದುಕಿನ, ಕೌಟುಂಬಿಕ ಬದುಕಿನ ವಿವರಗಳನ್ನು ಕೂಡ ಸಹಜವಾಗಿ ತೆರೆದುಬಿಡುವುದು. ಹೀಗೆ ತೆರೆಯುವುದಕ್ಕೆ ಅವರು ಪ್ರಜ್ಞಾಪೂರ್ವಕವಾಗಿ, ಬರವಣಿಗೆಯ ತಂತ್ರವಾಗಿ ಮಾಡುವುದಿಲ್ಲ. ಬರವಣಿಗೆಯ ಓಘದಲ್ಲೇ ಅದು ಸಹಜವಾಗಿ ಬರುತ್ತದೆ. ‘ಉಗುಳು ವೀರರು’ ಬರಹದ ಈ ಪ್ಯಾರಾವನ್ನೇ ಗಮನಿಸಿ. 

‘ಥಿಯೇಟರ್‌ಗೆ ಹೋದರೆ ಮನೆಯಿಂದ ಒಂದು ದುಪ್ಪಟ್ಟಾ ಒಯ್ದು ಸೀಟಿನ ಮೇಲೆ ಹಾಕಿಕೊಳ್ಳುವ, ಹೋಟೆಲಿಗೆ ಹೋಗಬೇಕಾದಾಗ ಮಾತ್ರ ಹೋಗಿ, ಹೋದರೂ ತಟ್ಟೆ, ಲೋಟ ಎಲ್ಲವನ್ನೂ ಹತ್ತು ಸರ್ತಿ ಟಿಷ್ಯೂವಿನಲ್ಲಿ ಸ್ವಚ್ಛಗೊಳಿಸಿಕೊಳ್ಳುವ, ಮನೆಯಲ್ಲಿ ಮಕ್ಕಳಿಗೂ ಗಂಡನಿಗೂ ಕೆಮ್ಮುವುದಕ್ಕೂ, ಸೀನುವುದಕ್ಕೂ ಬಿಗಿ ಕಾನೂನು ಕಟ್ಟಳೆ ರೂಪಿಸಿರುವ ಘನ ಮಹಿಮೆಯ ಮಹತ್ತುಳ್ಳ ನನ್ನ ಕೈ ಬೆರಳಿನ ಕಡೆಗೆ ಆತ ಉಗಿದ ತುಣುಕೊಂದು ಹಾರಿ’…

ಇಲ್ಲಿ ಚಿತ್ರಿತವಾಗಿರುವ ಹಾಸ್ಯಪ್ರಜ್ಞೆಯನ್ನು ಗಮನಿಸಬಹುದು. ಬ್ರೂನೋ ‌ಮತ್ತು ಗೌರಿ ಕುರಿತ ವ್ಯಕ್ತಿಚಿತ್ರವನ್ನು ಓದಿದವರಿಗೆ ನಂದಿನಿಯವರ ಸಂಸಾರದ ಪಿರಿಪಿರಿಗಳು, ಸ್ವಭಾವಚಿತ್ರ ಕಣ್ಣ ಮುಂದೆ ಕಟ್ಟುತ್ತದೆ. ಎಂದಾದರೂ ಅವರ ಮನೆಗೆ ಭೇಟಿ ನೀಡುವ ಸಂದರ್ಭ ಬಂದರೆ ಏನೇನು ನಿರೀಕ್ಷಿಸಬೇಕು ಎಂದು ನನ್ನ ಮನಸ್ಸು ಈಗಲೇ ಲೆಕ್ಕ ಹಾಕಿದೆ. ಇದಕ್ಕೆ ಲೇಖಕಿ ಆಕ್ಷೇಪಿಸುವಂತಿಲ್ಲ. ಏಕೆಂದರೆ ಅವರ ಬರವಣಿಗೆಯೇ ಇದಕ್ಕೆ ಪ್ರಚೋದನೆ ನೀಡಿದೆ.

ಈ ಬರಹಗಳ ಗುಚ್ಛದ ಇನ್ನೊಂದು ವೈಶಿಷ್ಟ್ಯವೆಂದರೆ ಸಮಕಾಲೀನ ಬದುಕನ್ನು ಬೇರೆ ಬೇರೆ ಸ್ತರಗಳಿಂದ ಏಕಕಾಲದಲ್ಲಿ ನೋಡಲು ಪ್ರಯತ್ನಿಸುವುದು. ಇಲ್ಲಿ ಗ್ರಾಮೀಣ ಬದುಕಿದೆ. ಕೃಷಿ ಜೀವನದ ವಿವರಗಳು ಇವೆ. ಗ್ರಾಮವೂ ಅಲ್ಲದೆ, ಮಹಾನಗರವೂ ಅಲ್ಲದೆ ಬದಲಾಗುತ್ತಿರುವ ಸಣ್ಣ ಪಟ್ಟಣವಿದೆ. ಮಕ್ಕಳ ಲೋಕವಿದೆ. ಗೊಣಗುವ ಗೃಹಿಣಿಯಿದ್ದಾಳೆ, ತುಂಟ ಮಕ್ಕಳಿವೆ. ಯಾವುದಕ್ಕೂ ಸೊಪ್ಪು ಹಾಕದ ಗಂಡಸರು ಇರುವಂತೆಯೇ ಸ್ವಾಭಿಮಾನಿಯಾದ ಅಪ್ಪನೂ ಇದ್ದಾನೆ. ಬರವಣಿಗೆ ಎಲ್ಲರ ದೃಷ್ಟಿಕೋನದಿಂದಲೂ ಬದುಕನ್ನು, ಬದಲಾವಣೆಯನ್ನು ನೋಡಲು ಪ್ರಯತ್ನಿಸುತ್ತದೆ.

ಇದಮಿತ್ಥಂ ಧೋರಣೆಯಿಲ್ಲ. ಬರವಣಿಗೆಯ ಲಹರಿ ಸ್ವಭಾವಕ್ಕೆ, ಜೀವಂತಿಕೆಗೆ ಬರಹವು ಒಂದು ದೃಷ್ಟಿಕೋನದಿಂದ ಇನ್ನೊಂದು ದೃಷ್ಟಿಕೋನಕ್ಕೆ ಅನಾಯಾಸವಾಗಿ ಚಲಿಸುವುದು, ಹಾಗೆ ಚಲಿಸುವುದನ್ನು ತನ್ನ ಧಾಟಿಯನ್ನಾಗಿ ಮಾಡಿಕೊಂಡಿರುವುದು ಕೂಡ ಒಂದು ಕಾರಣವಿರಬಹುದು. ನಮ್ಮ ಕಣ್ಣೆದುರಿಗೇ ನಡೆಯುತ್ತಿರುವ ಬದಲಾವಣೆಗಳನ್ನು ಯಾವುದೇ ತೀರ್ಪು ಕೊಡದೆ ನೋಡಲು ಇದೇ ಸರಿಯಾದ ಕ್ರಮವಿರಬೇಕು. “ಪ್ರತಿ ಕಾಲವೂ ಆಯಾ ಕಾಲಕ್ಕೆ ನವನವೀನವೂ, ಅಷ್ಟೇ ಪುರಾತನವೂ ಆಗಿರುತ್ತದೆ. (ಪುಟ ೪೫ – ಲೆಕ್ಕ ಚುಕ್ತವಾಗದ ಹೊರತು ಲೇಖನ). 

ಬರಹಗಾರರಲ್ಲಿ ಎರಡು ಬಗೆ. ಮಹತ್ವಾಕಾಂಕ್ಷಿಗಳು, ಸಾಹಿತ್ಯ ಚರಿತ್ರೆಯಲ್ಲಿ ಶಾಶ್ವತವಾದ ಸ್ಥಾನ ಬೇಕೆಂದು ಬಯಸುವವರು, ಭ್ರಮಿಸುವವರು; ‘ಮಹತ್ವ’ವಾದ ಅನುಭವಗಳನ್ನು, ವಿಚಾರಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಅವರಿಗೆ ಶುಭವಾಗಲಿ, ಕಾಲದ ಸ್ಮಶಾನದಲ್ಲಿ ಶಾಶ್ವತವಾದ ಜಾಗ ಸಿಗಲಿ ಎಂದು ಹಾರೈಸೋಣ. ಇನ್ನೊಂದು ರೀತಿಯ ಬರಹಗಾರರಿದ್ದಾರೆ. ನಂದಿನಿಯ ರೀತಿಯವರು. ಇಂತಹವರಿಗೆ ಅವರ ಪುಟ್ಟ ಪ್ರಪಂಚವೇ, ದಿನನಿತ್ಯವೂ ಆಗುತ್ತಿರುವ ಅನುಭವವೇ ಸಾಕು. ಅದನ್ನು ಕುರಿತು ರಸಮಯವಾಗಿ ಬರೆಯುತ್ತಾರೆ. ಇವೆಲ್ಲ ಎಷ್ಟು ಸಾಧಾರಣ, ಸಾಮಾನ್ಯ, ದಿನನಿತ್ಯದ ಅನುಭವಗಳೆಂದರೆ ಓದುಗನಿಗೆ ಅವುಗಳೊಡನೆ ಗುರುತಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಮನೆ ಕೆಲಸ ಮಾಡಿಕೊಂಡು, ಬೇಸಾಯದ ಉಸಾಬರಿ ನೋಡಿಕೊಂಡು, ಗಂಡನನ್ನು ಸಂಭಾಳಿಸುತ್ತಾ, ಪದ್ಯದ ಆಡಿಯೋ ರೆಕಾರ್ಡ್ ಮಾಡಿ ಕಳಿಸಲು ಹೆಣಗಾಡುತ್ತಾ, ತಾಯಿ ಹಸುವಿಗಾಗಿ ಪರಿತಪಿಸುತ್ತಾ, ಉಗುಳು ವೀರರನ್ನು ಎದುರಿಸುತ್ತಾ, ಅದನ್ನೇ ಕುರಿತು ಬರೆಯುವುದರಲ್ಲೂ ಒಂದು ಸೊಗಸಿದೆ. ಈ ‘ಅದನ್ನೇ’ ‘ಅಷ್ಟನ್ನೇ’ ಕುರಿತು ಮಾತ್ರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಂದಿನಿಯವರ ಮುಂದಿನ ಬರವಣಿಗೆಗೆ ಸೇರಿದ್ದು. ಇದು ಹೇಗಾದರೂ ಇರಲಿ, ನಂದಿನಿ ವಿವರಗಳನ್ನು ಕೊಡುತ್ತಿರಲಿ, ವಿಶ್ಲೇಷಿಸುತ್ತಿರಲಿ, ವ್ಯಕ್ತಿಯ ಓರೆಕೋರೆಗಳನ್ನು ಚಿತ್ರಿಸುತ್ತಿರಲಿ, ಎದುರಿಗೆ ಕುಳಿತು ಮಾತನಾಡುತ್ತಿರುವ ಶೈಲಿಯಲ್ಲೇ ಬರೆಯುತ್ತಾರೆ. 

ಈ ಸಂಕಲನದಲ್ಲಿನ ಮೂರು ವ್ಯಕ್ತಿಚಿತ್ರಗಳಲ್ಲಿ ಎರಡು ಪ್ರಾಣಿಗಳನ್ನು ಕುರಿತದ್ದು ಎಂಬುದು ಒಂದು ವಿಶೇಷ. ಬ್ರೂನೋ ಕುರಿತ ವ್ಯಕ್ತಿಚಿತ್ರ ನಾಯಿಯೊಂದರ ಜೀವನಶೈಲಿಯ ವಿವಿಧ ಹಂತಗಳಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮತೆ ಯಿಂದಲೂ, ಹಾಸ್ಯಮಯವಾಗಿಯೂ ವಿವರಿಸುತ್ತದೆ. ಈ ಚಿತ್ರ, ವಿವರಗಳು ಈಗಾಗಲೇ ನಾನು ಕತೆ ಕಾದಂಬರಿಗಳಲ್ಲಿ ಓದಿರುವಂತಹ ವ್ಯಕ್ತಿಚಿತ್ರ, ಸ್ವಭಾವಚಿತ್ರಗಳಿಗಿಂತ ಭಿನ್ನವಾಗಿವೆ ಎಂಬುದು ಗಮನಿಸಬೇಕಾದ ಸಂಗತಿ.

ಬ್ರೂನೋ ಕುಟುಂಬದ ಬದುಕಿನ ಅಂತರಂಗದ ಭಾಗವೂ ಹೌದು, ಲೇಖಕಿಯ, ಅವರ ಮನೆಯವರ ಸಾಮಾಜಿಕ ಬದುಕಿನ ಭಾಗವೂ ಹೌದು. ಲಹರಿ ಆತ್ಮವಿಮರ್ಶೆ, ಸಾಮಾಜಿಕ ವಿಶ್ಲೇಷಣೆಯ ಜಾಡಿನಲ್ಲೇ ಸಾಗುವ ನಂದಿನಿಯವರ ಬರವಣಿಗೆಗೆ  ಬ್ರೂನೋನ ದೆಸೆಯಿಂದಾಗಿ ಒಂದು ತುಂಟತನ ಸಿಕ್ಕಿದೆ. 

‘ಗೌರಿ ಎನ್ನುವ ಚೆಲುವೆಯೂ ಮತ್ತು ನಾನು’ ಎಂಬ ಬರಹವನ್ನು ಸಂಘ ಪರಿವಾರದವರೂ, ಹಾಗೆಯೇ ಜಾತ್ಯತೀತವಾದಿಗಳೂ, ಇಬ್ಬರೂ ಓದಬೇಕೆಂದು ಕೇಳಿಕೊಳ್ಳುತ್ತೇನೆ. ಈ ತನ್ಮಯವಾದ ಬರಹದಲ್ಲಿ ನಮ್ಮ ಗಮನಕ್ಕೆ ಮೊದಲು ಬರುವ ಸಂಗತಿಯೆಂದರೆ, ಇಲ್ಲಿ ಒಂದೇ ಒಂದು ಧಾರ್ಮಿಕ, ಸಾಂಸ್ಕೃತಿಕ, ಪೌರಾಣಿಕ ವಿವರವೂ ಇಲ್ಲವೆಂಬುದು. ಗೌರಿ ಒಂದು ‘ಸಾಕುಪ್ರಾಣಿ’ ಎಂದು ಕೂಡ ನಿಮಗೆ ಅನಿಸುವುದಿಲ್ಲ. ಲೇಖಕಿಯ ಕುಟುಂಬದ ದೈನಿಕದೊಡನೆ ಸಮಗ್ರವಾಗಿ ಬೆರೆತು ಹೋಗಿದೆ. ಇವರ ಸಂತೋಷಕ್ಕೆ, ಜೀವಂತಿಕೆಗೆ ಕಾರಣವಾಗಿರುವಂತೆ ಮನಸ್ತಾಪಕ್ಕೂ, ಭಿನ್ನಾಭಿಪ್ರಾಯಕ್ಕೂ ಕೂಡ ಕಾರಣವಾಗಿದೆ.

ಮನೆಯ ಮಗಳಿಗಂತೂ ಜೀವನ ಸಂಗಾತಿಯಾಗಿದ್ದಾಳೆ. ಭಾವನಾತ್ಮಕವಾಗಿ ಇಷ್ಟೊಂದು ರೀತಿಯಲ್ಲಿ ಆವರಿಸಿಕೊಂಡು, ಹೆಜ್ಜೆ ಹೆಜ್ಜೆಗೂ ಜೀವನದಲ್ಲಿ ಬೆರೆತು ಹೋಗಿರುವ ಗೌರಿ ಎಲ್ಲಿ ಸತ್ತುಹೋಗಬಹುದೋ, ಎಲ್ಲಿ ಮನೆಯಿಂದ ಪರಾರಿಯಾಗಬಹುದೋ ಎಂದು ಓದುಗರಾದ ನಮಗೆ ಪ್ರಾಮಾಣಿಕವಾಗಿ ಕಳವಳವಾಗುತ್ತದೆ. ಲೇಖಕಿಯೇ, ಗೌರಿ ಕಸಾಯಿಖಾನೆಗೆ ಹೋಗುತ್ತಿಲ್ಲ, ಸಾಕುವವರ ಮನೆಗೆ ಹೋಗುತ್ತಿದ್ದಾಳೆ ಎಂದು ಸಮಾಧಾನ ಪಟ್ಟುಕೊಂಡು ಓದುಗರಿಗೂ ಸಮಾಧಾನ ಹೇಳಿದರೂ, ಗೌರಿಯಂತಹ ಕುಟುಂಬದ ಸದಸ್ಯರಿಂದ ಯಾವುದೇ ಕಾರಣಕ್ಕಾದರೂ ದೂರವಾಗುವುದಾದರೂ ಹೇಗೆ ಎಂಬ ಪ್ರಶ್ನೆಯನ್ನೂ, ಆತಂಕವನ್ನೂ ನಾವು ಎದುರಿಸಲೇ ಬೇಕಾಗುತ್ತದೆ.

ದಿನನಿತ್ಯದ ಒಡನಾಡಿಯೊಬ್ಬರ ಬದುಕನ್ನು ಕುರಿತ ಜೀವನ್ಮರಣದ ಪ್ರಶ್ನೆಯನ್ನು ಒಂದು ರಾಜಕೀಯ ವಾಗ್ವಾದವಾಗಿ ಪರಿವರ್ತಿಸುವುದರ ಬಗ್ಗೆ ಸಿಟ್ಟು ಬರುತ್ತದೆ. ಇಂತಹ ಸಿಟ್ಟನ್ನು ಓದುಗರಲ್ಲಿ ಹುಟ್ಟು ಹಾಕುವುದರ ಮೂಲಕ ನಂದಿನಿ ತಮಗೆ ಅರಿವಿಲ್ಲದೆಯೇ ಒಂದು ರಾಜಕೀಯ, ಸಾಂಸ್ಕೃತಿಕ ಬರಹವನ್ನು ಮಾಡಿದ್ದಾರೆ.

‘ಅಪ್ಪ ಎಂಬ ಆಕಾಶ’ ಚಿತ್ರ ಕೂಡ ಗೌರಿಯಷ್ಟೇ ತನ್ಮಯವಾಗಿದೆ. ಅಥವಾ ಗೌರಿಯ ಚಿತ್ರ ಕೂಡ ‘ಅಪ್ಪ’ನ ಚಿತ್ರದಷ್ಟೇ ತನ್ಮಯವಾಗಿದೆ ಎಂದು ಕೂಡ ಹೇಳಬಹುದು. ತಂದೆ ಲೌಕಿಕ ಬದುಕನ್ನು ಕಲಿಸಿದರು. ತಾಯಿ ಭಾವನಾತ್ಮಕ ನೆಲೆಗಳಿಗೆ ಮಾರ್ಗದರ್ಶಿಯಾದಳು ಎಂದು ಹೇಳುವುದು, ಬರೆಯುವುದು ಸಾಮಾನ್ಯವಾದ ರೂಢಿ. ಲೇಖಕಿಯ ದೃಷ್ಟಿಕೋನ ಅಥವಾ ಜೀವನದ ಅದೃಷ್ಟ ಭಿನ್ನವಾಗಿದೆ.

ಅಮ್ಮ ಬದುಕಿಗೆ ಸವಾಲೊಡ್ಡಿ ನಿಲ್ಲುವುದನ್ನು ಕಲಿಸಿದರೆ, ಅಪ್ಪ ಮಣ್ಣು, ಮರ, ಕಲ್ಲು ಎಲ್ಲವನ್ನೂ ಜೀವದ ಸ್ವರೂಪದಲ್ಲಿ, ದೈವದ ಸ್ವರೂಪದಲ್ಲಿ ಕಾಣುವುದನ್ನು ಹೇಳಿಕೊಟ್ಟರು ಎಂದು ನಂದಿನಿ ಸೂಚಿಸುತ್ತಾರೆ. ತಂದೆಯ ಜೀವನ ವಿವರಗಳು ಅವರ ವ್ಯಕ್ತಿತ್ವಕ್ಕೆ ವಿಶಿಷ್ಟವಾದುದು ಎನಿಸುವಾಗಲೂ, ಆ ವಿವರಗಳು ಓದುತ್ತಿರುವವರ ತಂದೆಯ ವಿವರಗಳು ಆಗಿರಬಹುದೇನೋ ಎಂಬ ಭಾವನೆ ಹುಟ್ಟಿಸುವ ರೀತಿಯಲ್ಲಿ ಬರೆಯುತ್ತಾರೆ.

ಹುಲ್ಲು ಬಣವೆ ಒಟ್ಟಿದಂದು ಬಂದ ಆನೆ ಇವರಪ್ಪನ ಪ್ರೀತಿಯ, ಗದರಿಕೆಯ ಮಾತಿಗೆ ಸ್ಪಂದಿಸಿ ಹಾಗೆ ಸುಮ್ಮನೆ ಹೊರಟು ಹೋಗುವುದು, ಕೆಂಪು ಹಲಸಿನ ಹಣ್ಣಿನ ಬೀಜವನ್ನು ಸಂಪಾದಿಸುವುದಕ್ಕಾಗಿ, ಹಣ್ಣು ತಿಂದು ಬೀಜ ಬಿಸಾಡುವ ತನಕ ಕಾಯ್ದು, ಆಯ್ದುಕೊಂಡು ಬಂದ ವಿವರಗಳು ಮನಸ್ಸಿಗೆ ತಟ್ಟುತ್ತವೆ. ಅಪ್ಪನ ಜೀವನ ಪ್ರೀತಿಯ ವಿವರಗಳನ್ನು ಹೇಳುವಾಗಲೇ ಬಾಲ್ಯದಲ್ಲಿ ಆತ ಮೂಡಿಸುತ್ತಿದ್ದ ಭಯ, ಆಶ್ರ‍್ಯಗಳನ್ನು ಕೂಡ ಹೇಳುವುದರಿಂದ ವ್ಯಕ್ತಿಚಿತ್ರಕ್ಕೆ ಒಂದು ವಸ್ತುನಿಷ್ಠತೆ ಬರುತ್ತದೆ.

ಬ್ರೂನೋ, ಗೌರಿ, ಅಪ್ಪ; ಮೂರೂ ವ್ಯಕ್ತಿಚಿತ್ರಗಳಲ್ಲೂ ಸುಮ್ಮನೆ ವಿವರಗಳನ್ನು ಹೇಳುವುದಕ್ಕಿಂತ ಈ ಮೂರೂ ‘ಜೀವ’ಗಳು ತನಗೆ ಬೇರೆ ಬೇರೆ ರೀತಿಯ ಅನುಭವಗಳ ಮೂಲಕ ಒದಗಿ ಬಂದ ರೀತಿಯನ್ನು ದಾಖಲಿಸುವ ಕಡೆಗೇ ಗಮನ ಇರುವುದನ್ನು ಕಾಣಬಹುದು. ಈ ಮೂರೂ ವ್ಯಕ್ತಿಚಿತ್ರಗಳಲ್ಲೂ, ಇವರೆಲ್ಲ ಎಂದೋ ಬದುಕಿನಲ್ಲಿ ಆಗಿಹೋದವರು ಎಂಬ ಹಳಹಳಿಕೆಯಿಲ್ಲ. ಜೊತೆಯಲ್ಲೇ ಬದುಕಿದವರು, ಬದುಕುತ್ತಿರುವವರು ಎಂಬ ಭಾವವಿದೆ. 

ನಂದಿನಿ ಕೇವಲ ಭಾವನಾತ್ಮಕ ನೆಲೆಗಳಲ್ಲಿ, ಸಂಬಂಧಗಳ ಸ್ತರದಲ್ಲೇ ಬರೆಯುತ್ತಾರೆ ಎಂದು ಭಾವಿಸಬೇಕಾಗಿಲ್ಲ. ಕೊರೊನಾ ಬಿಕ್ಕಟ್ಟನ್ನು ಇವರು ಗ್ರಹಿಸುವ ರೀತಿ ನೋಡಿ: 

‘ಒಂದು ದಿನದ ಆಯಸ್ಸು ಹೊಂದಿದ ಮಳೆಹುಳವೂ ಹುಟ್ಟಿದ ಕ್ಷಣದಿಂದ ಸಂಭ್ರಮದಿಂದ ಹಾರಾಡಿ ಧನ್ಯತೆಯನ್ನು ಹೊಂದಿ ಜಗತ್ತಿಗೂ ಹಂಚಿ, ಸಾಯುವಾಗ ಹಕ್ಕಿಗೋ ಇರುವೆಗೋ ಆಹಾರವಾಗಿ ತನ್ನ ಕರ್ತವ್ಯ ಮುಗಿಸುತ್ತದೆ. ಕೊರೊನಾ ಈ ಮೊದಲು ಇರಲಿಲ್ಲ ಎಂದರೆ ಸುಳ್ಳಾದೀತು. ಒಳಗೊಂದು ದುರಾಸೆಯ, ದುರ್ನಡತೆಯ ಕೊರೊನಾ ಎಲ್ಲರಲ್ಲೂ ಗುಪ್ತವಾಗಿ ಇದ್ದೇ ಇತ್ತು. ಹೊರಗಿನ ಕೊರೊನಾ ಹೋಗುತ್ತದೆ. ಆದರೆ ಒಳಗಿನ ಕೊರೊನಾ? ಆಲ್ಪರ್ಟ್ ಕಾಮು ತನ್ನ ‘ಪ್ಲೇಗ್’ ಕಾದಂಬರಿಯಲ್ಲಿ ಮಾರ್ಮಿಕವಾಗಿ ಹೇಳುವ ಹಾಗೆ, ಪ್ಲೇಗ್‌ನ ಕ್ರಿಮಿ ಇರುವುದು ನಮ್ಮೊಳಗೇ. ಹಾಗಾಗಿಯೇ ಅದು ಮಹಾಮಾರಿಯಾಗಿ ಮತ್ತೆ ಮತ್ತೆ ಎರಗುತ್ತಲೇ ಇರುತ್ತದೆ. 

ಹೀಗೆ ಎಷ್ಟೋ ಕಾರಣಗಳಿಗಾಗಿ ಆಪ್ತವಾಗುವ ನಂದಿನಿಯವರ ಬರವಣಿಗೆಯ ಇನ್ನೊಂದು ಸ್ವಭಾವದ ಬಗ್ಗೆಯೂ ಹೇಳಬೇಕು. ಒಂದೇ ದೃಷ್ಟಿಕೋನ, ಒಂದೇ ಭಾವದ ಬಗ್ಗೆ ಅವರು ಉದಾಹರಣೆಗಳನ್ನು ಕೊಡುತ್ತಾ, ವಾದ ಮಾಡುತ್ತಾ, ಬರವಣಿಗೆಯನ್ನು ಬೆಳೆಸುತ್ತಾ ಹೋಗುತ್ತಾರೆನಿಸುತ್ತದೆ. ಇದನ್ನು ಕೂಡ ಆಕರ್ಷಕವಾಗಿ ಅವರು ಮಾಡಬಲ್ಲರು ಎಂಬುದು ಅವರಿಗೆ ನಿರೂಪಣೆಯ ಮೇಲಿರುವ ಹಿಡಿತವನ್ನು ಸೂಚಿಸುತ್ತದೆ. ಅವರ ಬರವಣಿಗೆಯ ಒಟ್ಟು ದಿಕ್ಕೇ ಆ ಕಡೆಗೆ ಚಲಿಸಬಾರದಷ್ಟೆ. 

“ಎದೆಯ ಹಣತೆ” ಎಂಬ ಬರಹದಲ್ಲಿ ನಂದಿನಿ ಹೀಗೆ ಬರೆದಿದ್ದಾರೆ: “ಮೊಬೈಲಿನೊಳಗೆ ಹಚ್ಚಿಟ್ಟ ಹಣತೆಯೇ ಎದೆಯೊಳಗಿನ ದೀಪಾವಳಿಯ ಸಂಕೇತವೇ?” ಈ ಪ್ರಶ್ನೆ ಇನ್ನಿಲ್ಲದಂತೆ ಕಾಡುತ್ತಲೇ ಇರುತ್ತದೆ. ನಿಜವಾದ ಹಣತೆಯನ್ನು ಎಲ್ಲರ ಎದೆಯೊಳಗೆ ಹಚ್ಚುವ, ಬೆಳಗುವ ನಂದಿನಿಯವರ ಬರವಣಿಗೆಯ ಸದಾಕಾಂಕ್ಷೆ (ಮಹತ್ವಾಕಾಂಕ್ಷೆಯಲ್ಲ) ಹೀಗೇ ಮುಂದುವರಿಯುತ್ತಿರಲಿ. ತೋಟ-ಮನೆ-ನಗರಕ್ಕೆ ಆಗಾಗ್ಗೆ ಭೇಟಿ, ಕುಟುಂಬ ನಿರ್ವಹಣೆ – ಹೀಗೆ ಸಕಲ ನೆಲೆಗಳಿಂದಲೂ ಬದುಕನ್ನು ನೋಡಿ, ನಮಗೂ ತೋರಿಸಲಿ. ಶುಭಾಶಯಗಳು. ವಿಭಿನ್ನ ರೀತಿಯ ಬರವಣಿಗೆಯನ್ನು ಹಸ್ತಪ್ರತಿಯ ಹಂತದಲ್ಲಿ ಓದುವ ಅವಕಾಶ ಕೊಟ್ಟಿದ್ದಕ್ಕೆ ವಂದನೆಗಳು.

‍ಲೇಖಕರು Avadhi

February 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಯಲು ಸೀಮೆಯ ʼಒಕ್ಕಲ ಒನಪುʼ

ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ...

ಗಾಲಿಬನ ಮೇಲಿನ ಪ್ರೀತಿಗಾಗಿ..

ಗಾಲಿಬನ ಮೇಲಿನ ಪ್ರೀತಿಗಾಗಿ..

ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This