ನಂದಿನಿ ಹೆದ್ದುರ್ಗ ಪ್ರೇಮಪತ್ರ -‘ನನ್ನ ಪ್ರೀತಿಯ ಕನಸೇ…’

ನಂದಿನಿ ಹೆದ್ದುರ್ಗ

‘ನನ್ನ ಪ್ರೀತಿಯ ಕನಸೇ…

ಇವತ್ತು ಹೇಳ್ತೀನಿ ಕೇಳು.
ಮತ್ತೆಮತ್ತೆ ನೀ ಅದೇ ಪ್ರಶ್ನೆ ಕೇಳುವಾಗೆಲ್ಲ ನಾನು ಬೆಚ್ಚಗಾಗುತ್ತೇನೆ.
ಹೀಗೆ ಹಬೆಯಾಗೋದು ಹೊಸ ಅನುಭವ ನನಗೆ.
ನನಗೆ ನಿನ್ನನ್ನು ಕಾಡೋದ್ರಲ್ಲಿ ಅಮಲಿನಂಥ ಖುಷಿ ಸಿಕ್ಕುತ್ತೋ ಹುಡುಗಾ.
ಹಾಗಾಗಿ ಇಷ್ಟು ದಿನ ಹೇಳಿರಲಿಲ್ಲ.
ನೀನು ಗೋಗರೆವಾಗ ಒಳಗೊಳಗೇ ಸಂಭ್ರಮ.
ಇರಲಿ, ಇನ್ನೂ ಕಾಯಿಸುವುದಿಲ್ಲ.
ಕೇಳು ಗಮನವಿಟ್ಟು…
ಅದೇನಾಗಿತ್ತು ನಿನಗೆ ಆ ದಿನ.?

ಬೇಕಂತಲೇ ಹಾಗೆ ನನ್ನ ಕರೆದದ್ದೋ ಅಥವಾ ಆ ಗುಲಾಬಿ ನನ್ನ ಮುಡಿಯಲಿದ್ದದ್ದು ತಿಳಿದೇ ಕೊಟ್ಟಿದ್ದೋ.? ಹೋಗಲಿ.. ಹೀಗೆ ಹೂವು ಬೀಳಿಸಿಕೊಂಡು ಹೋಗುವ ಹೆಣ್ಣುಗಳಿಗೆಲ್ಲ ಕರೆದು ಕೊಡುತ್ತೀಯಾ ನೀನು.? ಇದೊಂದು ಉತ್ತರ ಬೇಕಿಲ್ಲದ ಪ್ರಶ್ನೆಯಾಗಿ ನನ್ನ ತುಟಿಯ ಮೇಲೆ ಮುಗಿಯದ ಒಂದು ಕಿರುನಗುವನ್ನ ಅಚ್ಚು ಹಾಕಿ ಕಾಡುತ್ತಿದೆ ನೋಡು.

ಅದಾವ ಕಾರ್ಯಕ್ರಮ ಹೇಳು…?

ಹಾ..ಆಹಾರ ಮತ್ತು ಜೀವನಶೈಲಿ ಯ ಕುರಿತಾದ ಉಪನ್ಯಾಸಗಳು. ಅಲ್ಲಿ ಆಹಾರ ವಿಜ್ಞಾನ ದ ವಿದ್ಯಾರ್ಥಿನಿಯಾದ ನನಗೂ ಮಾತಿಗೆ ಅವಕಾಶವಿತ್ತು. ಅದನ್ನು ಮುಗಿಸಿ ಆಯೋಜಕರು ಅಭಿನಂದನಾ ಪೂರ್ವಕವಾಗಿ ಕೊಟ್ಟ ಆ ಕೆಂಪು ಗುಲಾಬಿಯ ತೊಟ್ಟು ಚಿಕ್ಕದಾಗಿಸಿ ನನ್ನ ಗುಂಗುರಕೂದಲಿನ ಮೋಟುಜಡೆಗೆ ಮುಡಿದುಕೊಂಡು ಸಭೆಯಲ್ಲಿ ಕುಳಿತುಕೊಳುವಾಗ ಸಹಜವಾಗಿ ಪಕ್ಕ ನೋಡಿದಾಗ ನೀನಿದ್ದೆ.

ಮೊದಲ ನೋಟಕ್ಕೆ ಚಂದವೆನಿಸಿದ್ದೆ, ಸಭ್ಯಸ್ಥನಂತೆನಿಸಿದ್ದೆ. ಸಣ್ಣ ಆಕರ್ಷಣೆಯೂ ಹುಟ್ಟಿತು..!!

ಆದರೂ ಅದನ್ನೆಲ್ಲ ಸುಲಭವಾಗಿ ಹೊರಗೆಡುವವ ಹಾಗಿಲ್ಲ. ಹೆಣ್ಣು ಅಸ್ಪಷ್ಟವಾಗಿದ್ದರೇನೇ ಚಂದ ತಾನೇ..

ಕುಳಿತ ಸ್ವಲ್ಪ ಹೊತ್ತಿಗೇ ನೀ ನನ್ನ ಮಾತಿನ ಕುರಿತು ಮೆಚ್ಚುಗೆ ಹೇಳಿ ಅಭಿನಂದಿಸಿದ್ದು., ನಾನೂ ಕಿರುನಗುವಿನೊಂದಿಗೆ ಧನ್ಯವಾದ ಹೇಳಿದ್ದು ಬಿಟ್ಟರೆ ಗಂಭೀರವಾಗಿ ನಾವಿಬ್ಬರೂ ಉಪನ್ಯಾಸ ಕೇಳಿದೆವು ತಾನೇ..?

ಮೊದಲ ಸನಿಹದ ಕ್ಷಣಗಳು ಅವು… ಬಹುಶಃ ಬದುಕಿನ ಕೊನೆಗಳಿಗೆವರೆಗೂ ಮುದ ಕೊಡುವಂಥದ್ದು. ನೀನೂ ಆಹಾರ ವಿಜ್ಞಾನಿ ಅನ್ನೋದು ನಂತರದ ಎರಡು ಮಾತಿನಲ್ಲಿ ತಿಳಿಯಿತು. ಯಾವುದೋ ಫೋನ್ ಕಾಲ್ ರಿಸೀವ್ ಮಾಡೋ ಸಲುವಾಗಿ ಏಳುವಾಗ ಕೆಳಗೆ ಬಿದ್ದ ನನ್ನ ಮುಡಿಯಲಿದ್ದ ಕೆಂಪು ಗುಲಾಬಿಯನ್ನು ನೀ ಹೆಕ್ಕಿ ಥೇಟು ಹೊಸ ಪ್ರೇಮಿಯಂತೆ ನನ್ನೆಡೆಗೆ ಹಿಡಿದೆ.!

ಅದೆಷ್ಟು ಚಂದ‌ ಮಾರಾಯ ನಿನ್ನ ಆ ಭಂಗಿ…!!!
ಥ್ಯಾಂಕ್ಯೂ ಹೇಳುತ್ತ ಹೂವು ಪಡೆದವಳ ಮನಸಿನ ತುಂಬಾ ನೀನೆಂದರೆ ನೀನೇ…!
ಕ್ಷಣ ಹಿಂದೆಯಷ್ಟೇ ಹುಟ್ಟಿದ ಆಕರ್ಷಣೆ ಹೀಗೆ ಮುದ್ದಾಗಿ , ಖುದ್ದಾಗಿ ಹೂವು ಕೊಟ್ಟರೆ ನಾನು ಆರೋಗ್ಯವಾಗಿರಬಲ್ಲೆನೇ.? ನೀನೇ ಹೇಳು.?ಎದೆಯೊಳಗೆ ಸಾವಿರ ಸಾವಿರ ಪುಟ್ಟ ಹಕ್ಕಿಗಳು ಚಿಲಿಪಿಲಿಗುಟ್ಟಂತಾಯಿತು.

ಫೋನಿನಲ್ಲಿ ಅದೇನು ಮಾತನಾಡಿದೇನೋ ಗೊತ್ತಿಲ್ಲ. ತಿರುಗಿ ಬಂದವಳು ಮತ್ತೆ ನಿನ್ನ ಪಕ್ಕ ಕೂರುವಾಗ ನಾನು ಸಣ್ಣಗೆ ತಲ್ಲಣಗೊಂಡಿದ್ದೆ.. ಹತ್ತುನಿಮಿಷದಲ್ಲಿ ಮುಗಿದ ಉಪನ್ಯಾಸ ಕೇಳಿಸಿಕೊಂಡು ಏಳುವಾಗ..

‘ಬೈದಿಬೈ,, ನಾನು ಆರಿಲ್., ಆಹಾರ ವಿಜ್ಞಾನಿ.ನಿಮ್ಮ ಭೇಟಿ ಯಾಗಿದ್ದು ಖುಷಿಯಾಯ್ತು ಚಾರುಸ್ಮಿತ.’

ನಿನ್ನ ಕೈಗಳು ಮುಂದೆ ಬಂದಾಗ ನಾನೂ ಕೈಚಾಚಿದ್ದೆ.
ಅದೇನೂ ಹರಿದದ್ದು ನಮ್ಮಿಬ್ಬರ ನಡುವೆ.?
ಒಂದು ಬೆಚ್ಚಗಿನ ಭಾವದ ಜೊತೆಗೆ ಒಂದು ಸುಖವಾದ ಸುರಕ್ಷೆ.
ನಿನ್ನೊಂದಿಗೆ ಕೊನೆವರೆಗೂ ನೆಮ್ಮದಿಯಾಗಿರಬಲ್ಲೆನೆಂಬ ಭರವಸೆ…!!!
ಇದೇ ತಾನೇ ಒಲವೆಂದರೆ.?
ಈಗೆಲ್ಲಾ ಅದೆಷ್ಟು ಬಾರಿ ಕೇಳುತ್ತಿ ನೀನು.
‘ಅದೇನು ಕಂಡು ಒಲಿದೆ ಹೇಳು.?’

ಆರಿಲ್ ಬೇಬಿ.. ನೀನಲ್ಲದೇ ಮತ್ತಾರೂ ನನ್ನ ಹೃದಯ ಉಳುಕಿಸಿರಲಿಲ್ಲ ಇಲ್ಲೀವರೆಗೆ.
ನನ್ನ ಮಟ್ಟಿಗೆ ‘ಒಲವೆಂದರೆ ನಿನ್ನೊಂದಿಗೆ ಕ್ಷೇಮವಾಗಿ ಇರುತ್ತೇನೆ ಎನ್ನುವ ಭಾವ.
ಮತ್ತು ಅಕ್ಷಯವಾದ ಮೋಹ.
ಅದೆರಡೂ ನಮ್ಮ ಬಳಿ ಇವೆ.
ಮುದ್ದು ಗೆಳೆಯನೆ.,
ನೀನು ಜೊತೆಯಿರುವಾಗ ಕಾಲ ಬಹಳ ವೇಗವಾಗಿ ಚಲಿಸುತ್ತದೆ.
ಡಾಂಬರು ರಸ್ತೆ ತುಂಬೆಲ್ಲ ಪಾರಿಜಾತದ ಘಮಲು ಉಕ್ಕು ತ್ತದೆ.
ಬದಿಯ ಮರದಿಂದ ಉದುರಿದ ಒಂದು ಹಣ್ಣೆಲೆಯನ್ನ ಮೃದುವಾಗಿ ಹಿಡಿದು ಮರಕ್ಕೇ ತಿರುಗಿ ಮುಡಿಸಿ ಬರಬೇಕೆನಿಸುತ್ತದೆ.

ಅದೇನೋ ಆಗಿದೆ ನನಗೆ..
ನನಗೆ., ನನಗೆ., ನಿನ್ನ ಜೊತೆಗೆ ಜೀವನ ಬೇಕಿದೆ.
ಇಷ್ಟು ದಿನ ಹೇಳದೆ ಕಾಡಿದ್ದಕ್ಕಾಗಿ ಕ್ಷಮೆಯಿದೆಯೇ.?
ಅದೆಷ್ಟೋ ಬಾರಿ ಕೇಳಿದ ನಿನ್ನ ಪ್ರಶ್ನೆಗೆ ಉತ್ತರ ಸಿಕ್ಕಿದೆಯಾ ನನ್ನ ಮುದ್ದು ಹುಡುಗನೇ?
ನನಗೆ ಮುಂದಿನ ಜನ್ಮ ಗೊತ್ತಿಲ್ಲ..
ಈ ಆಯಸ್ಸು ನಿನ್ನ ಹೊರತಾಗಿ ಉಳಿದರೂ ಅದಕ್ಕೆ ಅರ್ಥವಿರಲಾರದು ಎನಿಸಿದೆ..
ಅಪ್ಪನನ್ನು ಆದಷ್ಟು ಬೇಗ ಸಂಪರ್ಕಿಸು.
ನಿನ್ನ ಮನೆಯ ಹೊಸಿಲಲ್ಲಿ ಅಕ್ಕಿಬೆಲ್ಲದ ಬಟ್ಟಲು ನನ್ನ ಬಲಗಾಲ ಸ್ಪರ್ಶಕ್ಕಾಗಿ ಕಾಯುತ್ತಿದೆ.
ತಡಮಾಡಬೇಡ ನನ್ನ ಮುದ್ದು ಹನಿಯೇ.
ಅಪ್ಪನಿಗಿಷ್ಟವಾದ ಕೃಷಿಯ ಕುರಿತೇ ಹೆಚ್ಚು ಮಾತನಾಡು.
ಅಪ್ಪನನ್ನು ನೀ ಗೆಲ್ಲುತ್ತಿ., ಖಂಡಿತವಾಗಿ.
ಪ್ರಶ್ನೆಗೆ ಉತ್ತರ ಸಿಕ್ಕಿದೆ ತಾನೇ…?
ಮತ್ತಾರದೋ ಮುಡಿಯಿಂದ ಜಾರಿದ ಕೆಂಪುಗುಲಾಬಿ ಕೊಡಹೋದರೆ ನೋಡು ಮತ್ತೆ…’

ಇಂತಿ
ನಿನ್ನ ಮೈಯ ಪರಿಮಳ.
ಚಾರು

‍ಲೇಖಕರು Avadhi

February 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೆನಪೇ ನೀನದೆಷ್ಟು ಸುಂದರ

ನೆನಪೇ ನೀನದೆಷ್ಟು ಸುಂದರ

ಸರೋಜಿನಿ ಪಡಸಲಗಿ ತಲೆ ತುಂಬ ಗೋಜಲು ಗೊಂದಲಎದೆ ತುಂಬ ನೆನಪುಗಳ ನೆರವಿ||ಕಣ್ಣಂಚಲಿ ಕಂಡೂ ಕಾಣದ ತೇವುತುಟಿಯಂಚಲೊಂದು ಹೂ ನಗು||ಮನದಿ ಮೌನ ರಾಗದ...

ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ

ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ

ನಾಗರಾಜ್ ಹರಪನಹಳ್ಳಿ ೧ ಧ್ಯಾನ ಧ್ಯಾನಿಸುವುದು ಎಂದರೆಅದು ನಿನ್ನೆದುರು ಕುಳಿತಂತೆ ಮುಗಿಲ ಕಡೆ ದಿಟ್ಟಿ ನೆಡುವುದೆಂದರೆಅದು ನಿನ್ನೆದೆಯ...

ಹಳೆಯ ಮೌನ…

ಹಳೆಯ ಮೌನ…

ಸೌಜನ್ಯ ನಾಯಕ ಅಮ್ಮ, ಉಪ್ಪಿಟ್ಟು ಬೇಕುಎಂದು ಆಕೆ ಕೇಳಿದಾಗಲೆಲ್ಲನಿನ್ನದೆ ನೆನಪಾದರೂಉಣ ಬಡಿಸುತ್ತೇನೆ ಖುಷಿಯಿಂದಲೇಅವಳು ಇಷ್ಟಪಟ್ಟಿದೆಲ್ಲವನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This