
ಗೀತಾ ಜಿ ಹೆಗಡೆ ಕಲ್ಮನೆ
ಹಿಂದಿಂದೇ ಬರುವ ಒಂಟಿ ನೆರಳೊಂದು
ಕೇಳುತ್ತಿದೆ ಅವನೆಲ್ಲಿ ಬೇಗ ಹೇಳು
ಗುಟ್ಟೊಂದು ಅರ್ಜೆಂಟಾಗಿ ಹೇಳಬೇಕಿದೆ
ನನಗೂ ಈಗ ಸ್ವಲ್ಪ ಬಿಡುವಾಗಿದೆ
ಒಟ್ಟಿಗೇ ಕೂತು ಹರಟಬೇಕಿದೆ
ಆದರೆ ನೀನು ಮಾತ್ರ
ಇಬ್ಬರ ಮಧ್ಯೆ ಗೋಣು ತೂರಿಸಲು
ಬರುವುದು ಬೇಡ.
ಅರೆ ಇಸ್ಕಿ…
ನೋಡಿ ಹೇಗಿದೆ ಅದರ ಕರಾಮತ್ತು
ಅವನೆಲ್ಲಿರುವನೆಂದು ಹೇಳಲು ಬೇಕು ನಾನು
ಕೂತು ಹರಟಲು ಬೇಡ ಅಂದರೆ ಹೇಗೆ?
ನನಗೂ ಕೋಪ ಬಂತು
ಹೇಳಲ್ಲಾ ಹೋಗು ಅಂದೆ.
ಅದಕ್ಕದು ನೀನು ಹೀಗೆಲ್ಲಾ ಸೆಟಗೊಂಡರೆ
ನಾನು ಬಿಟ್ಟು ಹೋಗುವ ಗಿರಾಕಿಯಲ್ಲ
ನೀನೆಲ್ಲೇ ಹೋಗು
ನಾನು ಮಾತ್ರ ನಿನ್ನ ಬಿಡಲೊಲ್ಲೆ
ಹಿಂಬಾಲಿಸಿಕೊಂಡೇ ಯಮನ ಮನೆ ಬಾಗಿಲವರೆಗೂ
ಜೊತೆಯಾಗೇ ಬರುತ್ತೇನೆ
ಹೌದಾ?
ಯೋಚಿಸಿದೆ ಒಮ್ಮೆ
ಇದರ ಬಾಯಿ ಬಿಡಿಸಲು
ಹೇಗಾದರೂ ಒಂದುಪಾಯ ಮಾಡಲೇಬೇಕು!

ಅಲ್ಲಾ ….
ಹುಟ್ಟಿನಿಂದ ಸಾಯುವವರೆಗೂ ಬೆನ್ನಿಗಂಟಿದ ಬೇತಾಳ
ಹಾಗೆ ಹೀಗೆ ಎಂದು
ಜರಿಯುತ್ತಾರಲ್ಲ ಜನ ನಿನ್ನ
ನಿನಗೆ ಬೇಜಾರಾಗಲ್ವಾ?
ಸ್ವಲ್ಪ ಕುಶಲೋಪರಿ ವಿಚಾರಿಸಿದೆ
ಬುರ್ನಾಸ್ ಬುದ್ಧಿ ತೋರಿಸಿದೆ
ಮತ್ಯಾಕೂ ಅಲ್ಲ ಗುಟ್ಟು ತಿಳಿಯಲು!
ಆದರೂ ಒಮ್ಮೆ ಪಾಪ ಅನ್ನಿಸಿಬಿಡ್ತು
ಎಷ್ಟೆಂದರೂ ಹಿಂದಿಂದೆ ಬರುತ್ತಲ್ಲ…
ಮೆಲ್ಲನೆ ಕಿವಿಯಲ್ಲಿ ಉಸುರಿದೆ
ನಾನು ಮಾತ್ರ ನಿನ್ನ ಜರಿಯುವುದೇ ಇಲ್ಲ
ಚಿಂತೆ ಬಿಡು
ಆದರೆ ಅದೇನು ಅವನತ್ತಿರ ಹರಟುವಷ್ಟು ಮಾತು?
ಅದೇನು ಗುಟ್ಟು ನನಗೆ ಹೇಳಬೇಕು ಅಂದೆ.
ಸ್ವಲ್ಪ ಹೊತ್ತು ಮೌನ ತಳೆದು ಹೇಳಿತು
ನೀನು ಯಾರಿಗೂ ಹೇಳುವುದಿಲ್ಲ
ಎಂದು ಭಾಷೆ ಕೊಡು ಹೇಳುತ್ತೇನೆ
ಕೇಳಿದ ಮೇಲೆ
ಮತ್ತೆ ನನ್ನಿಂದ ಓಡಿ ಹೋಗುವ ಪ್ರಯತ್ನ ಮಾಡುವುದಿಲ್ಲ
ಅಂತಲೂ ನಿರ್ಧಾರ ತಳೆಯಬೇಕು
ಇದು ಕಠಿಣ ವ್ರತ ಹೆದರಬಾರದು
ಎಂದು ತಾಕೀತು ಮಾಡಿ
ನನ್ನನ್ನೇ ಚಿಂತೆಗೀಡು ಮಾಡಿತು.

ಹುಚ್ಮುಂಡೆ ಮನಸ್ಸಿಗೆ ತಡೆಯಲಾಗುತ್ತಿಲ್ಲ
ನೋಡಿ ಕೆಟ್ಟ ಕುತೂಹಲ
ಆಗಲಿ ಅದೇನೆಂದು ಹೇಳಿಬಿಡು
ನಿನ್ನ ಷರತ್ತಿಗೆ ಒಪ್ಪಿದೆ ಅಂದೆ.
ಹೇಳಿತು ಗಂಭೀರವಾಗಿ
ಸದಾ ನಾನು ನಿಮ್ಮ ಹಿಂದೆ ಬರುವ ನೆರಳೆಂದಷ್ಟೇ
ಭಾವಿಸಿ ನಿರಾಳವಾಗಿರದಿರಿ
ಗಮನವಿರಲಿ ಕ್ಷಣ ಕ್ಷಣಕೂ ನೀವು ಮಾಡುವ
ಒಳ್ಳೆಯ ಕಾರ್ಯಕೆ ಬೆಂಗಾವಲಾಗಿರುವೆ
ನೀತಿ ಬಾಹಿರವಾಗಿ ನಡೆದುಕೊಂಡರೆ
ನಿಮ್ಮ ನರಳಿಸಿ ನರಳಿಸಿ ಯಮಪಾಶ ಬಿಗಿವೆ
ನಾನೇ ನಿಮ್ಮ ಬೆನ್ನಿಗಿರುವ ಸಾವು!
ನಿದ್ದೆಯಲ್ಲೂ ಸ್ಥಬ್ಧಗೊಂಡು ಅದುರಿದೆ
ಬೆವೆತು ಬಡಕ್ಕನೆ ಎದ್ದು ಕೂತೆ
ರಾತ್ರಿ ತಲೆಬುಡಕೇ ಇಟ್ಟುಕೊಂಡ
ತಾಮ್ರದ ಗಿಂಡಿಯ ನೀರು
ಗಟ ಗಟನೆ ಕುಡಿದು ಬರಿದಾಗಿಸಿದರೂ
ದಾಹ ತೀರಲಿಲ್ಲ
ಹೊಡಕೋತಾ ಇತ್ತು ನನ್ನ ಲಭ್ ಡಭ್ ಎದೆ ಬಡಿತ
ನನಗೇ ಕೇಳಿಸುವಷ್ಟು.
“ಇಶ್ಶಿsss ಕನಸು ಬಿಟ್ಟಾಕೆ…”
ಅನ್ನಲೂ ಆಗುತ್ತಿಲ್ಲ ಬುದ್ಧಿಗೆ
ಬೆಳಗಿನಜಾವದ ಕನಸು ನಿಜವಾಗುತ್ತಂತೆ
ಆಳವಾದ ನಂಬಿಕೆಯದಕೆ.

ಅಯ್ಯೋ! ಬದ್ದವೋ ಸುಳ್ಳೋ
ಒಟ್ಟಿನಲ್ಲಿ ನೆರಳು, ಸಾವು, ಕನಸು, ಗಾದೆ, ಮೂಢನಂಬಿಕೆ, ಪಾಪಪ್ರಜ್ಞೆ
ಎಲ್ಲವೂ ಸುತ್ತಿಕೊಂಡು
ಮನಸ್ಸು ಅಲ್ಲೋಲಕಲ್ಲೋಲ, ಕಲಸುಮೇಲೋಗರ
ತಲೆಬುಡ ಅರ್ಥವಾಗದ ದಿಟವೆಂಬಂತೆ ಬಿದ್ದ ಕನಸು
ನಿಶ್ಚಿಂತೆಯಿಂದ ಇರಲಾಗುತ್ತಲೂ ಇಲ್ಲ.
ಆದರೂ ಆಗಾಗ
ಗಿರಗಿಟ್ಟಿ ಹೊಡೆವ ಕನಸಿನ ನೆನಪು ಬದಿಗೊತ್ತಿ
ವಾಸ್ತವವಾಗಿ ಯೋಚಿಸಲು ಶುರು ಮಾಡುತ್ತೇನೆ
ಬದಲಾಯಿಸಲು ಪ್ರಯತ್ನಿಸುತ್ತೇನೆ
“ಅಪ್ಪ ನೆಟ್ಟ ಆಲದ ಮರಕೆ”
ಜೋತು ಬಿದ್ದ ಮನಸು
ಅರ್ಥ ಮಾಡಿಕೊಳ್ಳಲೆಂದು
ಆದರೆ ಅದು ಅಷ್ಟು ಸುಲಭವಲ್ಲ ಎಂಬುದೂ
ಅಷ್ಟೇ ದಿಟ.
ಇದಕ್ಕಾಗಿಯೋ ಏನೋ
ಈಗೀಗ ನನ್ನರಿವಿಗೆ ಬಾರದಂತೆ
ಇಡುವ ಪ್ರತೀ ಹೆಜ್ಜೆ ಹೆಜ್ಜೆಗೂ
ಕಾಳಜಿ, ಆತಂಕ, ಕಳವಳ, ಹೆದರಿಕೆ
ಹೇಗೆ ನಡೆದುಕೊಂಡರೆ ಏನಾಗುತ್ತೋ….
ತಪ್ಪಾ…ಸರಿಯಾ….ಇತ್ಯಾದಿ..ಇತ್ಯಾದಿ.
ಸಾವಿಗಂಜಿಯಲ್ಲ
ರವ ರವ ನರಳಾಟದ ಆಸ್ಪತ್ರೆಯ
ವನವಾಸಕ್ಕೆ ಬೆದರಿ!
0 ಪ್ರತಿಕ್ರಿಯೆಗಳು