ನಂಬಿಸುವ ಅರ್ಥಶಾಸ್ತ್ರ ಮತ್ತು ನಂಬಲಾಗದ ಬಜೆಟ್ ಶಾಸ್ತ್ರ

ಜರ್ಮನಿಯಿಂದ ವಿವೇಕ ರೈ
ವಿವೇಕ ರೈ ಅವರು ಪ್ರಜಾವಾಣಿ ಗಾಗಿ ಬರೆಯುತ್ತಿದ್ದ ಅಂಕಣ ಇರುಳ ಕಣ್ಣಿನ ಆಯ್ದ ಭಾಗ ಇದು. ಕಳೆದ ವರ್ಷದ ಬಜೆಟ್ ಅನ್ನು ರೈ ಅವರು ತಮ್ಮ ವಿಶೇಷ ಕಣ್ಣಿನ ಮೂಲಕ ನೋಡಿದ್ದರು. ಅದು ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು.
ಪ್ರಣಬ್ ಮುಖರ್ಜಿ ಇನ್ನೊಂದು ಬಜೆಟ್ ಮಂಡಿಸಿರುವ ಈ ವೇಳೆಯಲ್ಲಿ ರೈ ಅವರ ಹರಿತ ನೋಟದ ನೆನಪು ಇಲ್ಲಿದೆ-

ಸಂಸತ್ತಿನಲ್ಲಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರ ಬಜೆಟ್ ಮಂಡನೆಯ ಬಳಿಕ ಸಂಪ್ರದಾಯದಂತೆ ಆಳುವ ಪಕ್ಷದವರು ಅದನ್ನು ಸ್ವಾಗತಿಸಿದರೆ,ವಿರೋಧಪಕ್ಷದವರು ಟೀಕಿಸಿದ್ದಾರೆ. ಅರ್ಥಶಾಸ್ತ್ರದ ಪಂಡಿತರು ಎಂದಿನಂತೆ ಭಿನ್ನವ್ಯಾಖ್ಯಾನಗಳ ಚರ್ಚೆಯನ್ನು ನಡೆಸಿದ್ದಾರೆ. ಮುಂಗಾರು ಅಧಿವೇಶನದ ಈ ಬಜೆಟ್ ನ ವೇಳೆಗೆ ಹಿಂದಿನಂತೆ ಮಳೆಗಾಲದಲ್ಲಿ ಆಹಾರದಾಸ್ತಾನು ಕಡಮೆಯಾಗಿ, ದೈನಂದಿನ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ದುಬಾರಿ ಬೆಲೆಯ ಧಾನ್ಯಗಳ ಧ್ಯಾನದಲ್ಲಿ ಮುಳುಗಿರುವ ಜನ, ತಮ್ಮ ಭವಿಷ್ಯದ ಶ್ರೀಮಂತಿಕೆಗಿಂತ ವರ್ತಮಾನದ ಬಡತನದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಬಜೆಟ್ ಮಂಡನೆ ಒಂದು ವಾರ್ಷಿಕ ಶಾಸ್ತ್ರವಾಗಿ, ಆಚರಣೆಯಾಗಿ ನಿರಂತರವಾಗಿ ನಡೆದುಬರುತ್ತಿದೆ. ಒಂದೆಡೆ ಆರ್ಥಿಕ ತಜ್ಞರ ವಿಶ್ಲೇಷಣೆಗಳು, ಇನ್ನೊಂದೆಡೆ ಷೇರು ಮಾರುಕಟ್ಟೆಯ ಏರಿಳಿತಗಳು-ಇವುಗಳ ನಡುವೆಯೇ ಜನಸಾಮಾನ್ಯರು ಒಂದು ಮಳೆಗಾಲದಿಂದ ಇನ್ನೊಂದು ಮಳೆಗಾಲಕ್ಕೆ ತಮ್ಮ ಯಾತನೆಯ ಬದುಕಿನ ಯಾನವನ್ನು ಮುಂದುವರೆಸುತ್ತಾರೆ. ಜನಪ್ರಿಯತೆಯ ಮೇಲೆ ಕಣ್ಣಿಟ್ಟು ಮಂಡಿಸುವ ರಾಜಕೀಯ ಬಜೆಟ್ಗಳು ಕೂಡ ಅನುಷ್ಠಾನದ ಹಂತದಲ್ಲಿ ವಿಫಲವಾಗುತ್ತಿರುವುದರಿಂದ, ತಾತ್ಕಾಲಿಕವಾಗಿಯಾದರೂ ಸಂತೃಪ್ತಿಯನ್ನು ಕೊಡಲು ಅಸಾಧ್ಯವಾಗಿವೆ. ಬಜೆಟ್ ನ ನಿಜವಾದ ಪರಿಣಾಮಗಳ ಬಗ್ಗೆ ನಿರಾಶೆ ಹೊಂದಿರುವ ಜನರು, ಅಂಕೆಸಂಖ್ಯೆಗಳ ಮೂಲಕ ಹೆಚ್ಚಳ ಅಥವಾ ಕೊರತೆಯನ್ನು ಬಿಂಬಿಸುವ ‘ನಂಬಿಸುವ ಅರ್ಥಶಾಸ್ತ್ರ’ದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ.
‘ಹಣ’ ಎನ್ನುವುದು ಆಕಾರದಲ್ಲಿ, ಬೆಲೆಯಲ್ಲಿ ಮತ್ತು ಉಪಯೋಗದಲ್ಲಿ ಕಾಲದಿಂದ ಕಾಲಕ್ಕೆ ತೀವ್ರ ಬದಲಾವಣೆಯನ್ನು ಹೊಂದುತ್ತಾ ಬಂದಿದೆ. ಲೋಹದ ತುಂಡೊಂದು ‘ನಾಣ್ಯ’ವೆಂಬ ಹೆಸರಿನಲ್ಲಿ ಬೆಲೆಯನ್ನು ಉಳ್ಳ ವಸ್ತುವಾಗಿ ಜಣಜಣಿಸುತ್ತಾ ಇದ್ದದ್ದು, ‘ನೋಟು’ ಎನ್ನುವ ಕಾಗದದ ಚೂರಿನ ಮೂಲಕ ಹಗುರವಾಗಿ ಗಾಳಿಯಲ್ಲಿ ಹಾರಾಡಲು ತೊಡಗಿತು. ಮುಂದೆ ಚೆಕ್, ಡಿ.ಡಿ.ಗಳಂತಹ ಕಾಗದದ ಅನ್ಯರೂಪಗಳಲ್ಲಿ ಬೆಲೆಯನ್ನು ಹೊಂದಿದಾಗಲೂ ಅದು ಎಲ್ಲ ಸಂದರ್ಭದಲ್ಲೂ ನಗದಾಗಿ ಪರಿವರ್ತನೆ ಹೊಂದುತ್ತದೆ ಎಂಬ ಭರವಸೆಯೇನೂ ಉಳಿಯಲಿಲ್ಲ. ಪ್ಲಾಸ್ಟಿಕ್ ಕ್ರೆಡಿಟ್ ಕಾರ್ಡುಗಳ ರೂಪದಲ್ಲಿ ಹಣ ಜಾರಲು ತೊಡಗಿದಾಗ, ಅದು ‘ಗುಪ್ತನಿಧಿ’ಯ ಯಂತ್ರದ ಒಳಹೊಕ್ಕು ಹೊರಬಂದು ಹಿರಣ್ಯಗರ್ಭದೊಳಗಿನ ಕಾಗದದ ಚೂರುಗಳನ್ನು ಉದುರಿಸುವ ‘ಮಾಂತ್ರಿಕ ಕಾರ್ಡ್’ ಆಯಿತು. ಆದರೆ ಊಟಕ್ಕೆ, ಬಟ್ಟೆಗೆ, ಸಿಕ್ಕಸಿಕ್ಕ ಸಾಮಗ್ರಿಗಳನ್ನು ಕೊಳ್ಳಲು ಮತ್ತು ಕೊಳ್ಳೆಹೊಡೆಯಲು ಈ ಜಾರುವ ‘ಮಾಂತ್ರಿಕ ಕ್ರೆಡಿಟ್ ಕಾರ್ಡ್’ ಬಳಕೆಯಾದಂತೆಲ್ಲಾ ಹಣವೂ ಜಾರಿತು, ‘ಕ್ರೆಡಿಟ್’ ಮಾತ್ರ ಉಳಿಯಿತು.
ಪೂರ್ಣ ಓದಿಗೆ- ಬಿ ಎ ವಿವೇಕ ರೈ

‍ಲೇಖಕರು avadhi

February 27, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This