ನಕ್ಷತ್ರದ ಬೆಳಕು

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಈ ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

ನಾನು ಪದ್ಮ.  12 ವರ್ಷದವಳಿದ್ದಾಗಲೇ ನನ್ನ ಪಾಲಕರು ನನಗೆ ಮದುವೆ ಮಾಡಿಬಿಟ್ಟರು. ಕೂಡಲೇ ಒಬ್ಬ ಮಗಳ ತಾಯಿಯೂ ಆದೆ. ಮಗಳಿಗೆ ಎರಡು ವರ್ಷವಾದಾಗ ಗಂಡ ನನ್ನಿಂದ ಪ್ರತ್ಯೇಕವಾದ. ಹಾಗೂ ನಾಪತ್ತೆಯಾದ.  ಅವನನ್ನು ಹುಡುಕಲು ಅವನ ಬಗ್ಗೆ ನಮಗೆ ಯಾವ ಮಾಹಿತಿಯೂ ಇರಲಿಲ್ಲ. ನಾನೊಬ್ಬ ಅನಾಥ ಎಂದು ಹೇಳಿಕೊಂಡಿದ್ದ. 

ಆ ಬಳಿಕ ನಾನು ತಂದೆ ಮನೆಯಲ್ಲಿ ಸಹೋದರ ಮತ್ತು ಮಗಳ ಜೊತೆ ವಾಸವಾಗಿದ್ದೆ. ನಮ್ಮ ಪಕ್ಕದ ಬಾಡಿಗೆ ಮನೆಗೆ ಒಂದು ಹುಡುಗಿ ಬಂದಳು. ಆಗಾಗ್ಗೆ ನಮ್ಮ ಮನೆಗೂ ಭೇಟಿ ಕೊಡುತ್ತಿದ್ದಳು. ಕೆಲಸವೇನೆಂದು ಕೇಳಿದರೆ ನಾನು ನರ್ಸಿಂಗ್ ಹೋಂನಲ್ಲಿ ಕೆಲಸದಲ್ಲಿದ್ದೇನೆ ಎನ್ನುತ್ತಿದ್ದಳು. 

ನನ್ನ ಬದುಕೂ ಅತಂತ್ರದಲ್ಲಿತ್ತು. ಮನೆಯವರಿಗೆ ಹೊರೆಯಾಗಿದ್ದೆ. ದುಡಿದು ತರುತ್ತಿದ್ದ ಅಣ್ಣ ಆಗಾಗ ಸಿಡುಕುತ್ತಿದ್ದ. ನನ್ನ ಬದುಕಿನ ಎಲ್ಲವನ್ನೂ ಆ ಹುಡುಗಿಗೆ ಹೇಳಿಕೊಂಡೆ. ಅವಳು ನನಗೂ ಕೆಲಸ ಕೊಡಿಸುವುದಾಗಿ ಹೇಳಿದಳು. ಅವಳೊಂದು ದಿನ ಮನೆ ಖಾಲಿ ಮಾಡುತ್ತಿದ್ದಳು. ನಾನು ಅವಳಲ್ಲಿ ಮೊರೆಯಿಟ್ಟೆ, ನೀನು ಹೋಗುವ ಮೊದಲು ನನಗೊಂದು ದಾರಿ ತೋರಿಸು ಎಂದು. 

 ಅದು 1992,  ಜುಲೈ ತಿಂಗಳು, ನನಗೂ ಕೆಲಸ ಕೊಡಿಸುತ್ತೇನೆ ಎಂದು ಆಕೆ ನನ್ನನ್ನು ಪಕ್ಕದ ನಗರಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಆಕೆ ನನ್ನನ್ನು ಮೇಡಂ ಒಬ್ಬಳಿಗೆ ಪರಿಚಯಿಸಿ, ಇವರು ನಿನಗೆ ಕೆಲಸ ಕೊಡುತ್ತಾರೆ ಎಂದು ಹೇಳಿ ಹೋದಳು. ನಂತರ ತಿಳಿಯಿತು, ಅವಳು ನನ್ನನ್ನು  ಕೇವಲ 800 ರೂಪಾಯಿಗೆ ವೇಶ್ಯಾಗೃಹಕ್ಕೆ ಮಾರಿ ಹೋಗಿದ್ದಳು. ವೇಶ್ಯಾವಾಟಿಕೆ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನನಗೆ ಇದೊಂದು ವಿಚಿತ್ರವಾದ ವಾತಾವರಣ ಅನ್ನಿಸಿತ್ತು. 

ಒಂದೆರೆಡು ದಿನ ಮೇಡಂ ತನ್ನ ಸಹಾಯಕಳಾಗಿ ನನ್ನನ್ನು ಕಂಡಳು. ನನ್ನ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಳು. ದಯವಿಟ್ಟು ನಾನು ಹೋಗುತ್ತೇನೆ, ಸಣ್ಣ ಮಗುವನ್ನು ಬಿಟ್ಟು ಬಂದಿರುವೆ, ಮನೆಯಲ್ಲಿ ಏನೂ ತಿಳಿಸಿ ಬಂದಿಲ್ಲ ಅಂತ ಗೋಗರೆದೆ.

ಅದಕ್ಕವಳು, ನಿನ್ನನ್ನು ನಾನು ಖರೀದಿಸಿದ್ದೇನೆ ಇಲ್ಲಿಂದ ನೀನು ಹೋಗಲು ಸಾಧ್ಯವಿಲ್ಲ, ಸುಮ್ಮನೆ ಹೊಂದಿಕೊಂಡು ಹೋಗು. ನಿನಗೂ ನಿನ್ನ ಪಾಲಿನ ಹಣ ಕೊಡುವೆ. ಕೂಡಿಟ್ಟ ನಂತರ ನಿನ್ನ ಮಗಳನ್ನು ನೋಡಲು ಹೋಗಬಹುದು, ಅವಳಿಗೊಂದು ಒಳ್ಳೆಯ ಜೀವನ ಕೊಡಬಹುದು ಅಂತ ನನಗೆ ಹೇಳಿದಳು. ಬೇರೆ ದಾರಿಯಿಲ್ಲದೆ ನಾನೂ ಒಪ್ಪಿಕೊಂಡೆ. 

ಮೇಡಂ, ನನಗಾಗಿ ಗಿರಾಕಿಗಳಿಂದ ಒಳ್ಳೆ ಸಂಪಾದನೆ ಮಾಡಿಕೊಳ್ತಾ ಇದ್ದಳು. ಆದರೆ ನನಗೆ ಮಾತ್ರ ಏನೂ ಕೊಡ್ತಿರಲಿಲ್ಲ. ಪ್ರಶ್ನಿಸಿದರೆ ನಿನಗೆ ಕೊಡಬೇಕಾದ್ದನ್ನೆಲ್ಲ ಒಟ್ಟಿಗೇ ಕೊಡ್ತೀನಿ ಅಂತ ಬಾಯಿ ಮುಚ್ಚಿಸುತ್ತಿದ್ದಳು. ಮಾಯಾ ಅನ್ನೋ ಹುಡುಗಿ ಗಿರಾಕಿಗಳಿಂದ ಹಣ ಪಡೆದುಕೊಳ್ಳೋ ದಾರಿ ಹೇಳಿಕೊಟ್ಟಳು. 

ವ್ಯಕ್ತಿಯೊರ್ವ ನನ್ನ ಗಿರಾಕಿಯಾಗಿ ಆಗಾಗ ನನ್ನ ಬಳಿ ಬರುತ್ತಿದ್ದ. ನನ್ನನ್ನು ಪ್ರೀತಿಸುತ್ತಿರುವುದಾಗಿಯೂ ಆತ ಹೇಳಿದ. ನನ್ನ ಮಗಳನ್ನೂ ಸೇರಿದಂತೆ ನನ್ನನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ. ಸಾಮಾಜಿಕ ಜೀವನದ ಆಸೆಯಿಂದ ಅವನ ಬೇಡಿಕೆಗೆ ಒಪ್ಪಿದೆ. ಮೇಡಂಗೆ ಒಪ್ಪಿಸಿದ. ಕೊನೆಗೆ ಅವಳು ಕೊಡಬೇಕಾಗಿದ್ದ ಹಣವನ್ನೆಲ್ಲ ಕೇಳದಿದ್ದರೆ ಮಾತ್ರ ಒಪ್ಪುತ್ತೇನೆ ಅಂದಳು. ನಾನು ನನ್ನ ಹೊಸ ಸಭ್ಯ ಬದುಕಿನ ಕನಸು ಹೊತ್ತ ಸಂಭ್ರಮದಲ್ಲಿ ನಾನು ದುಡಿದಿದ್ದ ಪಾಲಿನ ಹಣವನ್ನೆಲ್ಲ ಬಿಟ್ಟು ಹೊರಬಂದೆ. ಬಳಿಕ ನಮ್ಮಿಬ್ಬರ ಮದುವೆಯಾಯಿತು. ಊರಿಗೆ ಹೋಗಿ  ಮಗಳನ್ನು ಕರೆ ತರುವುದನ್ನು ಮುಂದೂಡುತ್ತಲೇ ಇದ್ದ. ಅವನಿಂದಲೂ ನನಗೊಬ್ಬಳು ಮಗಳು ಹುಟ್ಟಿದಳು. 

ಬರುಬರುತ್ತಾ ಅವನು ನನ್ನ ಬಗ್ಗೆ ನಿರಾಸಕ್ತನಾದ. ಕೆಲವು ತಿಂಗಳ ಬಳಿಕ ಆತನ ತಾಯಿ ಮತ್ತೆ ಸೋದರ ಬಂದರು. ತಮ್ಮ ಮಗನಿಗೆ ಮದುವೆ ಗೊತ್ತಾಗಿದೆ, ನೀನೊಬ್ಬ ಸೂಳೆ ಅಂತ ಮನೆಯಲ್ಲಿದ್ದ ವಸ್ತುಗಳನ್ನೆಲ್ಲ ಕಟ್ಟಿಕೊಂಡು ಹೀಗೇ ಬಿಟ್ಟರು. ನಾನು ಅಸಹಾಯಕಳಾದೆ. ಅವನಿಗಾಗಿ ಕಾದೆ. ಅವನು ಬರಲೇ ಇಲ್ಲ. ಮೂರಾಬಟ್ಟೆಯಾಗಿದ್ದ ನನ್ನ ಬದುಕಿಗೆ ಆ ಮಗುವೂ ಜೊತೆಯಾಗಿತ್ತು. ಹಸಿವು ನಮ್ಮಿಬ್ಬರನ್ನೂ ಹರಿದು ತಿನ್ನುವ ಸ್ಥಿತಿ ಬಂತು. ನಾನು ಮತ್ತೆ ಬೀದಿಗೆ ಬಿದ್ದಿದ್ದೆ. ಗಿರಾಕಿ ಗಿರಾಕಿಯೇ ಹೊರತು ಅವನೆಂದೂ ಗಂಡನಾಗಲು ಸಾಧ್ಯವಿಲ್ಲ ಅನ್ನೋ ವಾಸ್ತವತೆಯನ್ನು ಗಟ್ಟಿ ಮಾಡಿಕೊಂಡೆ. ಅದೊಂದು ಭ್ರಮಾ ಲೋಕದಲ್ಲಿ ತೇಲಾಡಿ ಬೆಂಕಿಯಿಂದ ಬಾಣಲೆಗೆ ಬಿದ್ದಿದ್ದೆ. 

ಮತ್ತೆ ವೇಶ್ಯಾಗೃಹಕ್ಕೆ ಹೋಗಲಿಲ್ಲ ಬದಲಾಗಿ ಮಗುವನ್ನು ಸೆರಗಿನಲ್ಲಿ ಕಟ್ಟಿಕೊಂಡು ಬೀದಿಗಿಳಿದಿದ್ದೆ. ಅಲ್ಲಿಂದಲೇ ಗಿರಾಕಿಗಳನ್ನು ಹೊಂದಿಸಿಕೊಂಡು ಬದುಕುತ್ತಿದ್ದೆ. 

ಅದೊಂದು ಸಂದರ್ಭ. ನನ್ನ ಬದುಕಿನ ದಾರಿಯನ್ನೇ ಬದಲಿಸಿದ ಮಾರ್ಗ ಸೂಚಿಯಾಗಿತ್ತು. ನನಗೂ ಬದುಕು ಬದಲಾಗಬೇಕೆಂಬ ಹಂಬಲಿಕೆಯಿತ್ತು. ಕಾಣದ ಕಿರಾತಕರಿಗೆ ಮೈಯ್ಯೊಡ್ಡಿ ಸೋತು ಹೋಗಿದ್ದೆ. ಕಂಕುಳಿನ ಕೂಸಿನ ಮುಖ ನೋಡಿದಾಗಲೆಲ್ಲ ಕರುಳು ಕಿತ್ತು ಬರುವಂತಾಗುತ್ತಿತ್ತು……

ನನ್ನ ಆಗಾಗ್ಗೆ ಭೇಟಿ ಮಾಡಿ ಏಡ್ಸ್ ತಡೆಯೋ ಬಗ್ಗೆ ಮಾತಾಡ್ತಿದ್ದ ಮೇಡಂ ನನ್ನ ಹೃದಯಕ್ಕೂ ಹತ್ತಿರವಾದ್ರು. ಅವರಿಗೆ ನನ್ನ ಬಗ್ಗೆ ಎಂಥದೋ ಅಕ್ಕರೆ. ನಾನು ಸ್ವಲ್ಪ ಓದಿದ್ದೇನೆ ಅಂದಾಗಲಂತೂ ಅವರಿಗೆ ನನ್ನ ಬಗ್ಗೆ ಇನ್ನೂ ಆಪ್ತತೆ ಹೆಚ್ಚಾಗಿತ್ತು. 

ನೀನೂ ಯಾಕೆ ನಿನಗೆ ಗೊತ್ತಿರೋ ವೃತ್ತಿ ಮಾಡೋ ಹುಡುಗಿಯರಿಗೆ ಏಡ್ಸ್ ಬಗ್ಗೆ ಅರಿವು ಮೂಡಿಸಬಾರದು ಅಂತ ಕೇಳಿದ್ರು. ಮೊದಮೊದಲು ಅಂಜಿದವಳು ಕೊನೆಗೆ ಒಪ್ಪಿಬಿಟ್ಟೆ. ಅವರು ನನಗೆ ಆ ವಿಚಾರವಾಗಿ ತಿಳುವಳಿಕೆ ಕೊಟ್ಟರು. ನನ್ನ ಸುತ್ತಲಿರುವ ಕೇವಲ ಇಪ್ಪತ್ತು ಹುಡುಗಿಯರಿಗೆ ತಿಳಿಹೇಳಬೇಕಿತ್ತು. ಆ ದಿನ ಪದ್ಮಾ….. ಸಮಾನ ಮನಸ್ಕರು ( peer worker) ಅನ್ನೋ ಗುರುತಿನ ಚೀಟಿ ಕೊಟ್ಟರು. 

ಅಂದು ಪಡೆದ ಆ ಗುರುತಿನ ಚೀಟಿಯಿಂದಾಗಿ ಶ್ರದ್ಧೆಯಿಂದ ಏಡ್ಸ್ ನಿಯಂತ್ರಣದ ಸ್ವಯಂಸೇವಕಳಾದೆ. 

ರಾಜ್ಯ ಮಟ್ಟದ, ರಾಷ್ಟ್ರ ಮಟ್ಟದ ತರಬೇತಿ, ಸಭೆ, ಸಮಾರಂಭಗಳಲ್ಲಿ ಮೇಡಂ ಜೊತೆ ಭಾಗವಹಿಸಿದೆ. ಇಪ್ಪತ್ತು ಹುಡುಗಿಯರ ಆರೋಗ್ಯದ ಜವಾಬ್ದಾರಿಯನ್ನು ಆ ದಿನ ಧೈರ್ಯವಾಗಿ ಒಪ್ಪಿಕೊಂಡ ನಾನು, ಈ ದಿನ ನೂರಾರು ಲೈಂಗಿಕ ವೃತ್ತಿ ಮಹಿಳೆಯರ ಆರೋಗ್ಯದ  ಆಶಾ ಕಿರಣವಾಗಿದ್ದೇನೆ. 

ನನ್ನ ಮಗಳ ಬದುಕಿಗೆ ಮೇಡಂ ನಂದಾ ದೀಪವಾಗಿದ್ದಾರೆ. ಅವಳೀಗ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. 

ಈ ಜವಾಬ್ದಾರಿ ಹೊತ್ತ ಬಳಿಕ ನನಗೆ ಹೊಸ ಬದುಕಿನ ಸಾರ್ಥಕತೆಯ ಅರಿವಾಗಿದೆ. ಕತ್ತಲ ಕೋಣೆಯಿಂದ ಬೆಳಕಿನ ಜಗತ್ತಿಗೆ ಬಂದಿದ್ದೇನೆ. ಇಂತಹ ಹೊಸ ಬದುಕು ಸಾಗಿಸಬಹುದು, ಹೊರಜಗತ್ತಿನ ಜನರೊಂದಿಗೆ ಬೆರೆಯಬಹುದೆಂದು ಕನಸಿನಲ್ಲೂ ಊಹಿಸಿರಲಿಲ್ಲ. ಬದುಕಿನುದ್ದಕ್ಕೂ ಮುಳ್ಳಿನ ಹಾದಿಯಲ್ಲೇ ಸಾಗಿದ್ದರೂ ಈಗ ನನ್ನ ಮುಂದಿರುವ ಒಂದೇ ನಕ್ಷತ್ರ ನನ್ನ ಮಗಳು…..

‍ಲೇಖಕರು ಲೀಲಾ ಸಂಪಿಗೆ

January 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

ಸಿದ್ದನಗೌಡ ಪಾಟೀಲ ಆತ್ಮೀಯ ‘ಹೊಸತು’ ಓದುಗರೆ, ತಮ್ಮ ಸಹಕಾರದಿಂದ ಪತ್ರಿಕೆ 22ನೇ ವರ್ಷಕ್ಕೆ ಕಾಲಿಟ್ಟಿದೆ. ವೈಚಾರಿಕ ನೆಲೆಗಟ್ಟಿನಿಂದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This