ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ

ಮುನ್ ನಗೆ ನುಡಿ

ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ ನೋಡಿದರೆ, ನನ್ನೂರು ದೊಡ್ದಾಲ ಹಳ್ಳಿಯ  ಪರಿಸರದ ತೆರೆ ಏಳುತ್ತದೆ , ಸ್ಯಾಂಪಲ್ ನೋಡಿ.

ರೈತ:  ಯಾಕೆ ಶೆಟ್ಟರೆ ನರಳ್ತಾ ಇದ್ದೀರಾ?
ಪಾಪಯ್ಯ ಶೆಟ್ರು : ಸುಮ್ನೆ ಕುತ್ಕೊಂಡು ಎನ್ಕೆಲಸ.
ಗಿರಾಕಿ: ಬಟ್ಟೆ , ಬಣ್ಣ  ಒಗಾಕಿಲ್ವ ಸೋಮಿ ಒಗುದ್ರೆ ?
ಜವಳಿ ಅಂಗಡಿ ನಂಜುಂಡಸ್ವಾಮಿ: ಬಟ್ಟೆನಾ ಕಾಲುವೇಲಿ ಒಗಿಬೇಡ .ನಿಂಗೇಗೌಡನ  ಕೊಳದಲ್ಲಿ ಒಗಿ. ಬಣ್ಣ ಎಲ್ಲೂ ಹೋಗಲ್ಲ ; ಅಲ್ಲೇ ಇರ್ತದೆ .
ಮೊಮ್ಮಗ : ತಾತ, ವೆಂಕಟೇಶ ತಲೆ ಮೇಲೆ ಹೊಡೆದುಬಿಟ್ಟ …
ತಾತ : ಏನು ನಿನಗೆ ಹೊಡೆದ್ನೆ? ಅವನ ಬಾಯ್ಗೆ ಬೆಂದನ್ನ ಹಾಕ, ಅವನ ಮನೇಲಿ ಎಂಟೆಮ್ಮೆ  ಕರೆಯಾ .., ಸಿಗಲಿ ಅವ್ನು …
ಹರಿಕಥೆ ಚೌಡಪ್ಪ : ಮನೆ ಮಗಳೆಸರು ಭಾಗ್ಯ , ಹೊಲ ಮನೆ ಎಲ್ಲ ಭೋಗ್ಯ . ಹೆಂಡ್ತಿ  ಹೆಸರು ಶಾರದೆ ಪಾಪ! ಮಕ್ಕಳಿಗೆ ಅ , ಆ, ಇ, ಈ ಹೇಳಿಕೊಡೋಕು ಬಾರದೆ?
“ಅವನು ಬುಡಪ್ಪಾ, ಅರೆ ಮೇಲೋದ್ರು (ಬೆಟ್ಟ)ಅನ್ನ ಉಟ್ಟುಸ್ಕೋತಾನೆ .
ಸ್ವಗತ: ಬುತ್ತಿ ಕಟ್ಕೊಂಡೋದ್ರೆ
” ಏನು , ಆ ನಸ್ಗುನ್ನಿ ಕಾಯ್ನ ನೆಂಬ್ತಿಯಾ ? ನೋಡ್ಲಾ ‘ಅಲಲಾ’ ಅನ್ನೋ ಅಳ್ಳಿಮರ  ನಂಬೋದು; ಮೆತ್ಗಿರೋ  ಕಳ್ಳಿ ಮರ ನಂಬಾರ್ದು ಜ್ವಾಕೆ .
” ಅವ್ನು ನಿನ್ಕೆಲಸ ಮಾಡಿಕೊಟ್ಟಾನ..? ನಿನಗೆಲ್ಲೋ  ಹುಚ್ಹು ಅದೇನೋ ಹೇಳ್ತಾರಲ್ಲಾ ‘ ಓಡೋಗೋ  ಬಡ್ಡಿಗೆ ಹಾಲ್ಗೆ ಹೆಪ್ಪಾಕ್ಬುಟ್ಟು ಹೋಗು ಅಂದರಂತೆ ಕೆಲಸ ನೋಡು ಮೂದೇವಿ
ಈ ಕೆಲಸ ನನ್ನ ಕೈಲಾಗಾಕಿಲ್ಲ ನಿನಾದ್ರೆ ವಯಸ್ನುಡುಗಾ ನೆಲ ಗುದ್ದುದರೆ ನೀರು   ಬತ್ತದೆ ಕಣ್ಣಲ್ಲಿ
ಬೊಮ್ಮ : (ಕುಡಿದ ಮತ್ತಿನಲ್ಲಿ ) ನಾಳೆಯೇ ನಿಮ್ಮ ದುಡ್ಡು ಕೊಟ್ ಬುಡ್ತೀನಿ . ಈ ಬೊಮ್ಮ ತಾಯಾಣೆ ಸುಳ್ಳೇಳಾಕಿಲ್ಲ  ಸತ್ಯವೇ ತಾಯಿ (ಪಕ್ಕಕ್ಕೆ ತಿರುಗಿ) ತಾಯೆ  ನಮಪ್ಪನ ಹೆಂಡ್ರು  ಮೊದಲಂಗೆ  ಮೋಸ ಮಾಡಾಕಿಲ್ಲ ಬುದ್ದಿ
ಬಲು ಚಂದವಾಗಿ ಒಗಟಿನಲ್ಲಿ ಮಾತಾಡ್ತಾ  ಮಾತಿಗೊಂದು ಗಾದೆ ಉದುರಿಸುತ್ತಾ ಭಾಷೆನಾ ಜೀವಂತ ಇಟ್ಟಿರೋವು ಹಳ್ಳಿಗಳೇ  ಏನೋ ಗ್ರಾಮರ್  ಸ್ವಲ್ಪ  ಏರುಪೇರಾದುದಕ್ಕೆ ‘ಗ್ರಾಮ್ಯ ‘ ಅಂತ ಯಾರೆಷ್ಟೇ ಹಳಿದರು ಲವಲವಿಕೆಯಿಂದ ಭಾಷೆಯನ್ನು  ಬಳಸುವ ದೃಷ್ಟಿಯಲ್ಲಿ  ಹಳಿಯ ಮೇಲಿರುವುದು  ಹಳ್ಳಿಗಳೇ .
ನಾನು ಬೆಂಗಳೂರಿಗೆ  ಬಂದ ಮೇಲೆ  ಕಾಲೇಜು ದಿನಗಳಿಂದಲೇ  ಹವ್ಯಾಸಿ ರಂಗ ಚಟುವಟಿಕೆಯಲ್ಲಿ  ತೊಡಗಿ ಕೊಂಡೆ . ಕೈಲಾಸಂ  ನಾಟಕಗಳಲ್ಲಿ  ಅಭಿನಯಿಸಿದಾಗ , ಅವರ ಪ್ರಭಾವ ನನ್ನ ಮೇಲಾದ ಕಾರಣ , ಕನ್ನಡಾಂಗ್ಲ ಭಾಷೆಯ ‘ಪರ್ ಮ್ಯುಟೆಶನ್ ಕಾಂಬಿನೇಶನ್ ‘ನಲ್ಲಿ  ತೊಡಗಿಕೊಂಡೆ . ‘ ಸೂತ್ರಧಾರ ವಾರ್ತಾಪತ್ರ ‘ ಈ ಮಾಸ ನಾಟಕ  ರಂಗಪತ್ರಿಕೆಗಳಲ್ಲಿ  ‘ ಕಲಾಕ್ಷೇತ್ರದ ಮೆಟ್ಟಿಲ ಮಹಿಮೆ’ ಕಾಲಂ ಬರೆಯುವಾಗ , ಬಹಳಷ್ಟು  ಸಂಧರ್ಭಗಳಲ್ಲಿ , ಪನ್ -ಪದ ಪ್ರಯೋಗಗಳನ್ನು  ಮಾಡಿ  ಓದುಗರ  ಮೆಚ್ಹುಗೆಗೆ ಪಾತ್ರನಾದೆ , ಮತ್ತವರ  ಒತ್ತಾಸೆಯ  ಮೇರೆಗೆ ‘ಮೆಟ್ಟಿಲ ಮಹಿಮೆ’ ಎರಡು ವಾಲ್ಯುಮುಗಳನ್ನು ಪ್ರಕಟಿಸಿದೆ . ಈ ಅನುಭವಗಳ ಹಿನ್ನಲೆಯಲ್ಲಿ ‘ಹನ್ನೊಂದು ಕಟ್ಟೋ ಬದಲು ಪನ್ ಒಂದು ಕಟ್ಟಿ ನೋಡು ‘ ಎನ್ನುವುದು  ನನ್ನ ಸಲಹೆ .
ಶ್ಲೇಷಾಲಂಕಾರ  ಆಕರ್ಷಣೆ  ಯಾರನ್ನು  ಬಿಟ್ಟಿಲ್ಲ ವಜ್ರವನ್ನು ಆಕರ್ಷಕವಾಗಿ  ಹಲವು ಕೊನೆಗಳಲ್ಲಿ ಕತ್ತರಿಸಿ ಹೊಳೆಯುವಂತೆ ಮಾಡುವ ಕುಶಲ ಕಲೆಗಾರನಂತೆ ಪನ್ ಡಿತನೆಂಬ  ‘ವರ್ಡ್ ಸ್ಮಿತ್ ‘ ಒಂದು ಪದಕ್ಕೆ  ಹಲವಾರು ಅರ್ಥಗಳನ್ನು  ಹೊಳೆಯಿಸುತ್ತಾನೆ . ಸಂದರ್ಭಾನುಸಾರ  ಪದಗಳನ್ನು  ‘ಪನ್’ ಮಾಡೋದು ಒಂದು ‘ಸಾಂಕ್ರಾಮಿಕ ಯೋಗ’ ಒಬ್ಬರಿಂದೊಬ್ಬರಿಗೆ ಹರಡುತ್ತಾ ಒಳಗೊಳ್ಳುವ  ಪ್ರಕ್ರಿಯೆ . ಇದೀಗ . ಹಲವಾರು  ವರ್ಷಗಳಿಂದ ಸಂದರ್ಭಾನುಸಾರ  ನಾನು ಮಾಡಿದ ಪನ್, ತಮಾಷೆ , ಪದ್ಯ ,ಆಲೋಚನೆ . ವಿಚಾರಗಳನ್ನು  ಬರೆದು ಈ ಪುಸ್ತಕದಲ್ಲಿ ಪ್ರಕಟಿಸಿದ್ದೇನೆ . ಪುಸ್ತಕವನ್ನು ಓದಿ ಮುಗಿಸುವಷ್ಟರಲ್ಲಿ ಈ ಪನ್ ಜುರ್ಲಿಯ ಪ್ರಭಾವಕ್ಕೆ  ನೀವು ಒಳಗಾಗಿ , ಶ್ಲೇಷಾಲಂಕಾರ  ಪ್ರಿಯರಾಗದಿದ್ದರೆ ಕೇಳಿ . ಇದು ನನ್ನ ಅಚಲ ನಂಬಿಕೆ . ‘ಸಾವ್ ಧಾನ್’ ದಿಂದ  ಓದಿ ; ನಗೆ ಬಂದರೆ ನಕ್ಕು , ನಂತರ ‘ವಿಶ್ರಾಮ್’ಸ್ಕೋಳಿ ಎಂಬುದೆನ್ನ  ಬಿನ್ನಹ ಯೋಗಾ ಯೋಗವಿದ್ದರೆ ಒಮ್ಮೆ ಭೇಟಿಯಾಗೋಣ

‍ಲೇಖಕರು avadhi

February 15, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This