ನಟರಾಜು ಕಾಲ೦ : ಮಾಂಗಲ್ಯಂ ತಂತುನಾನೇನ

ಮಾಂಗಲ್ಯಂ ತಂತುನಾನೇನ (?)

ಎಸ್ ಎಂ ನಟರಾಜು

ರಾಧಾ ವಲ್ಲಬಿ, ಚನ್ನಾ ಮಸಾಲ, ಫಿಶ್ ಫ್ರೈ, ಸಲಾಡ್, ಪಲಾವ್, ಮಟನ್ ಕಶ್ಶಾ, ಚಟ್ನಿ, ಪಾಪಡ್, ರಸಗೊಲ್ಲ, ಸಂದೇಶ್, ಐಸ್ ಕ್ರೀಮ್ ಮತ್ತು ಪಾನ್ ಹೀಗೆ ರುಚಿ ರುಚಿಯಾದ ತಿನಿಸುಗಳ ಲಿಸ್ಟ್ ಇರುವ ಮೆನು ಕಾರ್ಡ್ ನನಗೆ ಒಂದು ದಿನ ನನ್ನ ಲಾಕರ್ ನಲ್ಲಿ ಸಿಕ್ಕಿದಾಗ ನಾನು ಮುಗುಳ್ನಕ್ಕಿದ್ದೆ. ಮೆನು ಕಾರ್ಡ್ ನ ಬಲ ಬದಿಯಲ್ಲಿ ತಿನಿಸುಗಳ ಲಿಸ್ಟ್ ಇದ್ದರೆ ಎಡಭಾಗದಲ್ಲಿ ಆ ಹುಡುಗ ಹುಡುಗಿಯ ಹೆಸರು, ದಿನಾಂಕ, ಆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಹೆಸರು ಮತ್ತು ಕ್ಯಾಟರರ್ ಅಡ್ರೆಸ್ ಇತ್ತು. ಬೆಂಗಾಳಿ ಮದುವೆಗಳಿಗೆ ಹೋದರೆ ಊಟದ ತಟ್ಟೆಯ ಜೊತೆಗೆ ಇಂತಹುದೊಂದು ಪುಟ್ಟ ಮೆನು ಕಾರ್ಡ್ ನೀಡುತ್ತಾರೆ. ಪ್ರತೀ ಮದುವೆಗಳ ಬೇಸಿಕ್ ಮೆನು ಹೆಚ್ಚು ಕಮ್ಮಿ ಇದೇ ತರಹ ಇರುತ್ತದೆ. ಒಂಚೂರು ಸ್ಥಿತಿವಂತರಾಗಿದ್ದರೆ ಈ ಮೆನುವಿನಲ್ಲಿ ತಂದೂರಿಗಳು, ಕಬಾಬ್ ಗಳು, ಮೀನಿನ ಇನ್ನೂ ಒಂದೆರಡು ಐಟಮ್ ಗಳು, ವಿಶೇಷವಾದ ಸೀಸನ್ ಆದರೆ ಹಿಲಿಸ್ ಮಾಚ್ (ಹಿಲಿಸ್ ಮೀನು) ಮತ್ತು ಚಿಂಗ್ರಿ ಮಾಚ್ (ದೊಡ್ಡ ಸೀಗಡಿ) ಗಳು ಸೇರಿಕೊಳ್ಳಬಹುದು. ಒಟ್ಟಿನಲ್ಲಿ ಬೆಂಗಾಳಿ ಮದುವೆಗಳು ಎಂದರೆ ಮಾಂಸಹಾರಿ ತಿನಿಸುಗಳಿಂದ ಕೂಡಿದ ಭೂರಿ ಬೋಜನ. ಆ ಮೆನು ಕಾರ್ಡ್ ನೋಡಿ ನಾನು ಮುಗುಳ್ನಗಲು ಕಾರಣವೂ ಇತ್ತು. ಯಾಕೆಂದರೆ ಅದು ನನ್ನ ಜೊತೆ ತುಂಬಾ ಸಲಿಗೆಯಿಂದಿದ್ದ ಗೆಳೆಯನೊಬ್ಬನ ಮದುವೆಯ ಮೆನು ಕಾರ್ಡ್. ನಾನು ತುಂಬಾ ಇಷ್ಟಪಟ್ಟ ಮದುವೆಗಳಲ್ಲಿ ಅವನ ಮದುವೆಯೂ ಒಂದು. ಆ ಮೆನು ಕಾರ್ಡ್ ನಲ್ಲಿದ್ದ ದಿನಾಕ ನೋಡಿ “ಓ ಮೈ ಗಾಡ್ ಇವನ ಮದುವೆಯಾಗಿ ಒಂದು ವರ್ಷ ಆಗಿ ಹೋಯಿತೇ” ಎಂದುಕೊಂಡು ಅವನು ಎದುರಿಗೆ ಸಿಕ್ಕಾಗ ಹ್ಯಾಪಿ ವೆಡ್ಡಿಂಗ್ ಆನಿವರ್ಷರಿ ಎಂದು ಹಾರೈಸಿದ್ದೆ. ಅವನು ಖುಷಿಯಾಗಿ ಧೋನ್ಯೋವಾದ್ ಎಂದು ತನ್ನ ಬೆಂಗಾಳಿ ಸ್ಟೈಲ್ ನಲ್ಲಿ ಹೇಳಿದ್ದ. ಜೊತೆಗೆ ಅಂದು ನಮ್ಮ ಲ್ಯಾಬಿನವರಿಗೆಲ್ಲಾ ಸಿಹಿ ಹಂಚಿದ್ದ. “ಮಲ್ಲು ಒಂದು ವರ್ಷ ಆಗಿಬಿಡ್ತು ನಿನ್ನ ಮದುವೆಯಾಗಿ. ಎನಿ ಗುಡ್ ನ್ಯೂಸ್” ಎಂದು ಅವನು ಒಂಟಿಯಾಗಿ ಸಿಕ್ಕಾಗ ಕಾಲೆಳೆದಿದ್ದೆ. “ಆಗುತ್ತೆ ನಟ್ಟು ಒಂಚೂರು ಟೈಮ್ ತೆಗೆದುಕೊಳ್ಳುತ್ತೆ” ಎಂದು ನಕ್ಕಿದ್ದ. ಅವನ ನಗುವಿನಲ್ಲಿನ ಆ ಮುಗ್ದತೆ ನನಗೆ ತುಂಬಾ ಇಷ್ಟವಾಗ್ತಾ ಇತ್ತು. ಅವನ ತಂದೆ ತೀರಿಕೊಂಡು ತುಂಬಾ ವರ್ಷಗಳೇ ಆಗಿತ್ತು. ತಾಯಿಯ ಆರೈಕೆಯಲ್ಲಿ ಬೆಳೆದವನಾತ. ವಯಸ್ಸಿನಲ್ಲಿ ದುಡಿದು ಮಗನ ಬೆಳೆಸಿದ ತಾಯಿ ತುಂಬಾ ದಿನಗಳಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದು ಮಲಗಿದ್ದರು. ಮಗನ ಮದುವೆಯನು ಕಣ್ತುಂಬ ನೋಡಬೇಕು ಎಂದು ಆಸೆಪಟ್ಟಿದ್ದ ತಾಯಿಯ ಆಸೆ ನೆರವೇರಿಸಲು ಆತ ಮದುವೆಯಾಗಿದ್ದ. ಮದುವೆಯಾದ ಮಗನ ನೋಡಿ ಅವನ ತಾಯಿ ಚೇತರಿಸಿಕೊಂಡಂತೆ ಕಂಡಿದ್ದರು. ಹೆಚ್ಚು ಸಂಬಂಧಿಕರಿಲ್ಲದ ಆತ ತನ್ನ ತಾಯಿ ಮತ್ತು ಹೆಂಡತಿ ಜೊತೆ ಆರಾಮಾಗಿ ಬದುಕು ಸಾಗಿಸುತ್ತಿದ್ದ. ಕೆಲಸದ ವೇಳೆ ಆತನಿಗೆ ಬಿಡುವಿದ್ದಾಗ ನನ್ನ ಪಕ್ಕ ಬಂದು ಕುಳಿತರೆ ಅವನು ಕತೆಗಳ ಹೇಳಲು ಶುರು ಮಾಡುತ್ತಿದ್ದ. ಆತ ಡಿಗ್ರಿ ಮುಗಿಸದಿದ್ದರೂ ತುಂಬಾ ಚಂದದ ಇಂಗ್ಲೀಷ್ ಮಾತನಾಡುತ್ತಿದ್ದ. ಅವನ ಮಾತು ಕೇಳಲು ಖುಷಿಯಾಗುತ್ತಿತ್ತು. ನನ್ನೊಡನೆ ಖುಷಿಯಾಗಿ ಮಾತನಾಡುತ್ತಿದ್ದ ಅಂತಹ ಗೆಳೆಯ ಇದ್ದಕ್ಕಿದ್ದ ಹಾಗೆ ಒಂದಷ್ಟು ದಿನ ಲ್ಯಾಬಿನಿಂದ ನಾಪತ್ತೆಯಾಗಿದ್ದ. ಎಂದೂ ಕೆಲಸಕ್ಕೆ ತಪ್ಪಿಸಿಕೊಳ್ಳದ ಆತ ಹೋಗಿದ್ದಾದರು ಎಲ್ಲಿಗೆ ಎಂದು ಕೆಲವು ಗೆಳೆಯರನು ವಿಚಾರಿಸಿದಾಗ ಅವರಿತ್ತ ಉತ್ತರವನ್ನು ನಾನು ನಂಬಲಾಗದೆ ಅವನ ಮೊಬೈಲ್ ನಂಬರ್ ಗೆ ಫೋನ್ ಮಾಡಿದ್ದೆ. ನಾನು ಫೋನ್ ಮಾಡಿದಾಗಲೆಲ್ಲಾ ನೀವು ಕರೆ ಮಾಡಿದ ಚಂದದಾರರು ಸ್ಟಿಚ್ ಆಫ್ ಮಾಡಿದ್ದಾರೆ ಎನ್ನುವ ಉತ್ತರ ಬರುತ್ತಿತ್ತು. ನಮ್ಮ ಲ್ಯಾಬಿನವರು ಆತನ ಕುರಿತು ಆಡುತ್ತಿದ್ದ ಮಾತುಗಳನ್ನು ನಾನು ನಂಬದೆ ಅವನು ಬರಲಿ ನಿಜ ವಿಷಯ ತಿಳಿಯುತ್ತದೆ ಎಂದು ಅವನಿಗೆ ಕಾಯುತ್ತಲೇ ಇದ್ದೆ. ಇಪ್ಪತ್ತು ದಿನಗಳಾದ ಮೇಲೆ ಒಂದು ದಿನ ಮಧ್ಯಾಹ್ನದ ವೇಳೆ ಕೆಲಸಕ್ಕೆ ಬಂದವನ ಮುಖ ನೋಡಿ ನನಗೆ ಶಾಕ್ ಆಗಿತ್ತು. ಖುಷಿಯಾಗಿ ನಗುತ್ತಾ ಇರುತ್ತಿದ್ದವನ ಕಣ್ಣುಗಳು ಕಾಂತಿ ಕಳೆದುಕೊಂಡಿದ್ದವು. ಗುಂಡು ಗುಂಡಾಗಿದ್ದ ಅವನು ಅರ್ಧ ಇಳಿದು ಹೋಗಿದ್ದ. ಜೊತೆಗೆ ಶೇವ್ ಮಾಡಿ ನೀಟಾಗಿ ಇರುತ್ತಿದ್ದ ಅವನ ಗಡ್ಡ ಅಲ್ಲಲ್ಲಿ ಬಿಳಿ ಕೂದಲುಗಳು ಕಾಣುವಂತೆ ಕುರುಚಲಾಗಿತ್ತು. ಎಲ್ಲಿಗೋ ಹೋಗಲು ಆತುರಾತುರವಾಗಿದ್ದವನಿಗೆ “ಮಲ್ಲು ಹೇಗಿದ್ದೀಯ? ಎಲ್ಲಿ ಹೋಗಿದ್ದೆ ಇಷ್ಟು ದಿನ” ಎಂದು ಕೇಳಿದ ಪ್ರಶ್ನೆಗೆ “ಭಾಲೋ ನಹಿ ನಟ್ಟು. ಚೌದೋ ದಿನ್ ಜೈಲೇ ಚಿಲಾಮ್ (ಚೆನ್ನಾಗಿಲ್ಲ ನಟ್ಟು. ಹದಿನಾಲ್ಕು ದಿನ ಜೈಲ್ ನಲ್ಲಿದ್ದೆ)” ಎಂದಾಗ ನಮ್ಮ ಲ್ಯಾಬಿನ ಗೆಳೆಯರು ಹೇಳಿತ್ತಿದ್ದ ಮಾತು ನಿಜವಾದುದ ಕೇಳಿ ನಾನು ಅಚ್ಚರಿಗೆ ಒಳಗಾಗಿದ್ದೆ. ಇಂತಹ ಒಳ್ಳೆಯ ಹುಡುಗನ ಜೈಲಿಗೆ ಕಳುಹಿಸಲು ಈತ ಮಾಡಿದ ತಪ್ಪಾದರು ಏನು ಎನಿಸಿತ್ತು. “ಮಲ್ಲು ಡೌಂಟ್ ವರಿ. ಎಲ್ಲಾ ಸರಿ ಹೋಗುತ್ತೆ. ನಿನಗೆ ಏನಾದರೂ ಸಹಾಯ ಬೇಕು ಎಂದರೆ ಕೇಳು ಖಂಡಿತಾ ಮಾಡೋಣ” ಎಂದು ಹೇಳಿ ಒಂಚೂರು ಧೈರ್ಯ ತುಂಬಲು ನೋಡಿದ್ದೆ. “ಥ್ಯಾಂಕ್ ಯೂ ನಟ್ಟು. ಪೋಲಿಸ್ ಸ್ಟೇಷನ್ ಗೆ ಹೋಗಿ ಸಹಿ ಹಾಕಬೇಕು. ಮತ್ತೆ ಸಿಗ್ತೇನೆ” ಎಂದು ಆತ ಹೊರಟು ಹೋಗಿದ್ದ. ಅಂದು ಹೊರಟು ಹೋಗಿದ್ದ ಆತ ಒಂದಷ್ಟು ದಿನಗಳಾದ ಮೇಲೆ ಮತ್ತೆ ಕೆಲಸಕ್ಕೆ ಬರಲು ಶುರು ಮಾಡಿದ್ದ. ಕೆಲಸಕ್ಕೆ ಬರಲು ಶುರು ಮಾಡಿದವನು ಪ್ರತಿ ಭಾರಿ ನನ್ನ ಜೊತೆ ಮಾತಿಗೆ ಕುಳಿತಾಗ “ಎಲ್ಲಾ ಸರಿ ಹೋಗುತ್ತೆ ಅಲ್ವಾ?” ಎಂದು ಮುಗ್ದನಂತೆ ಕೇಳ್ತಾ ಇದ್ದ. ನಾನು ಮುಗುಳ್ನಗುತ್ತಾ “ಎಲ್ಲಾ ಸರಿ ಹೋಗುತ್ತೆ. ಡೌಂಟ್ ವರಿ.” ಎಂದು ಹೇಳುತ್ತಿದ್ದೆ. ಜೊತೆಗೆ ಮುನಿದ ನಾರಿಯನು ಒಲಿಸಿಕೊಳ್ಳುವುದು ಹೇಗೆ ಎಂದು ಟಿಪ್ಸ್ ಸಹ ನೀಡುತ್ತಿದ್ದೆ. ಅವನು ಒಮ್ಮೊಮ್ಮೆ ನನ್ನೊಡನೆ ಮಾತನಾಡಿ ಹಗುರವಾದವನಂತೆ ಕಾಣುತ್ತಿದ್ದ. ಅವನು ಹಗುರವಾಗುವುದ ನೋಡಿ ದೇವರು ಅವನಿಗೆ ಒಳ್ಳೆಯದು ಮಾಡಲಿ ಎಂದು ದೇವರಲಿ ಕೇಳಿಕೊಳ್ಳುತ್ತಿದ್ದೆ. ದೇವರು ಆತನಿಗೆ ಒಳ್ಳೆಯದನ್ನು ಮಾಡಿದ ದಿನ ಅವನು ಯಾರೊಂದಿಗೂ ಹಂಚಿಕೊಳ್ಳದ ಕಥೆಯನ್ನು ನನ್ನೊಂದಿಗೆ ಹಂಚಿಕೊಂಡಿದ್ದ. “ಅವತ್ತು ನನ್ನ ಆನಿವರ್ಷರಿ ಇತ್ತಲ್ಲಾ ಆ ಖುಷಿಯನ್ನು ಆಚರಿಸಿಕೊಳ್ಳಲು ನನ್ನ ಹೆಂಡತಿ ದೂರದ ಡಾರ್ಜಿಲಿಂಗ್ ಗೆ ಹೋಗೋಣ ಎಂದಿದ್ದಳು. ಅಮ್ಮ ಹಾರ್ಟ್ ಪೇಷೆಂಟ್ ಅವಳನು ಬಿಟ್ಟು ಹೋಗುವುದು ಸರಿಯಲ್ಲ ಎಂದು ನಾನು ಅವಳಿಗೆ ಬುದ್ದಿ ಹೇಳಿದ್ದೆ. ನನ್ನೊಡನೆ ಅವಳು ಮುನಿದು ಮಾತು ಬಿಟ್ಟವಳು ಅವಳ ತಾಯಿಯ ಮನೆಗೆ ಹೋಗಿದ್ದಳು. ಒಂದಷ್ಟು ದಿನವಾದ ಮೇಲೆ ಒಂದು ದಿನ ಅವಳ ಅಂಕಲ್ ಒಬ್ಬರು ನಮ್ಮ ಮನೆಗೆ ಮುಂಜಾನೆಯೇ ಬಂದರು. ಬಂದವರೇ ನಿಮ್ಮ ಮಾವನಿಗೆ ಉಷಾರಿಲ್ಲ ಬಾ ನೋಡಿಕೊಂಡು ಬರುವೆ ಎಂದು ಅವರೂರಿಗೆ ಕರೆದರು. ನನ್ನ ತಾಯಿ ಹೋಗಿ ಬಾ ಮಗ ಎಂದು ಕಳುಹಿಸಿಕೊಟ್ಟಿದ್ದರು. ಅಂದು ಅವರ ಊರಿಗೆ ಹೋಗಿ ಮನೆಯವರನ್ನೆಲ್ಲಾ ಮಾತನಾಡಿಸಿ ನಮ್ಮ ಮಾವನ ಆರೋಗ್ಯ ವಿಚಾರಿಸಿ ಊಟ ಮಾಡಿ ಕೈ ತೊಳೆದು ಎದ್ದಿದ್ದೇ ಅಷ್ಟೆ. ಸರಿ ಬನ್ನಿ ತಿರುಗಾಡಿಕೊಂಡು ಬರೋಣ ಎಂದು ನನ್ನನ್ನು ಆ ಅಂಕಲ್ ತಿರುಗಾಡಲೆಂದು ಕರೆದೊಯ್ದವರು ಪೋಲಿಸ್ ಸ್ಟೇಷನ್ ಒಳಗೆ ಕರೆದೊಯ್ದಿದ್ದರು. ಆ ಅಂಕಲ್ ಮೊದಲು ಪೋಲಿಸ್ ಆಗಿದ್ದರಿಂದ ಪೋಲಿಸ್ ಸ್ಟೇಷನ್ ನಲ್ಲಿ ಅವರಿಗೆ ಏನೋ ಕೆಲಸವಿರಬೇಕು ಎಂದು ನಾನು ಅವರೊಡನೆ ಸುಮ್ಮನೆ ಒಳಗೆ ಹೋಗಿದ್ದೆ. ಒಳಗೆ ಹೋದಾಗ ನನಗೆ ಶಾಕ್ ಆಗಿತ್ತು. ಹೆಂಡತಿಗೆ ಕಿರುಕುಳ ನೀಡಿದ ಆರೋಪವನ್ನು ನನ್ನ ಮೇಲೆ ಹೊರಿಸಿ ಕೇಸ್ ಬುಕ್ ಮಾಡಿದ್ದರು. ಅವತ್ತೇ ಕೋರ್ಟ್ ನಲ್ಲಿ ನ್ಯಾಯಾಧೀಶರು ನನಗೆ ಹದಿನಾಲ್ಕು ದಿನಗಳ ಸಜಾ ಸಹ ನೀಡಿದರು. ಮನೆಯಲ್ಲಿ ಅಮ್ಮ ಒಬ್ಬಳೇ ಇದ್ದಳು. ಜೈಲಿನಲ್ಲಿ ನಾನು ತೊಟ್ಟಿದ್ದ ಬಟ್ಟೆ, ಮೊಬೈಲ್ ಎಲ್ಲಾ ತಮ್ಮ ವಶಕ್ಕೆ ತೆಗೆದುಕೊಂಡು ಕೈದಿಗಳು ತೊಡುವ ಬಟ್ಟೆ ಒಂದು ಚಡ್ಡಿ ನೀಡಿದ್ದರು. ಡಿಸೆಂಬರ್ ನ ಚಳಿಯಲ್ಲಿ ಚಡ್ಡಿ ಮತ್ತು ಅಂಗಿಯಲ್ಲಿ ಇರೋದು ಎಷ್ಟು ಕಷ್ಟ ಗೊತ್ತಾ ನಟ್ಟು. ಅಂದು ಒಂದು ದೊಡ್ಡ ಹಾಲ್ ನಲ್ಲಿ 165 ಜನ ಕೈದಿಗಳ ಜೊತೆ ನಾನು ಒಬ್ಬನಾಗಿ ದಿನ ಕಳೆಯಬೇಕಾಯಿತು. ಯಾರೊಡನೆಯೂ ಅಷ್ಟು ಮಾತನಾಡಲು ಇಷ್ಟವಾಗುತ್ತಿರಲಿಲ್ಲ. ಒಮ್ಮೊಮ್ಮೆ ದಿನ ಕಳೆಯಲಿ ಎಂದು ಜೈಲಿನಲ್ಲಿ ವಿವೇಕಾನಂದ ಆಶ್ರಮದವರ ಕೋಣೆಗೆ ಹೋಗಿ ಒಂದಕ್ಷರವೂ ತಿಳಿಯದ ಸಹ ಕೈದಿಗಳಿಗೆ ಅ ಆ ಇ ಈ ತಿದ್ದಿಸುತ್ತಿದ್ದೆ. ಹದಿನಾಲ್ಕು ದಿನ ಹೀಗೆಯೇ ಕಳೆದು ಹೋಯಿತು. ಜೈಲಿನಿಂದ ಬಿಡುಗಡೆಯಾದ ದಿನ ನನ್ನ ಮಾವನ ಮನೆಯವರು ಬಂದು ನನ್ನನ್ನು ಕರೆದುಕೊಂಡು ತಮ್ಮ ಮನೆಗೆ ಹೋದರು. ನನ್ನ ಮೇಲೆ ಅಂದು ಕೋರ್ಟ್ ನಲ್ಲಿ ನನ್ನ ಹೆಂಡತಿಯ ಅಂಕಲ್ ಆಡಿದ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ ನಟ್ಟು. ಆತ ಪೋಲಿಸ್ ಕೆಲಸದಲ್ಲಿದ್ದ ವ್ಯಕ್ತಿ. ಜೊತೆಗೆ ಕಾನೂನು ತಿಳಿದವನು. ನನ್ನ ಮೇಲೆ ಆತ ಇಲ್ಲ ಸಲ್ಲದ ಸುಳ್ಳು ಆರೋಪ ಹೊರಿಸಿದ್ದ” ಎಂದು ಮಲ್ಲು ತನ್ನ ಕಥೆಯನ್ನು ಹೇಳುತ್ತಿದ್ದರೆ ಯಾಕೋ ಮಾನವೀಯತೆ ಇಲ್ಲದ ಅಂತಹ ವ್ಯಕ್ತಿಗಳ ಕುರಿತು ಸಿಟ್ಟು ಬಂದಿತ್ತು. “ಹದಿನಾಲ್ಕು ದಿನ ಜೈಲಿನಲ್ಲಿ ಕಳೆದ ಮೇಲೆ ಪ್ರತೀ ದಿನ ಸ್ಟೇಷನ್ ಗೆ ಬಂದು ಸಹಿ ಹಾಕುವಂತೆ ನ್ಯಾಯಾಧೀಶರು ಆಜ್ಞೆ ಹೊರಡಿಸಿದ್ದರು. ಅದರಂತೆ ದಿನಾ ನನ್ನೂರಿನಿಂದ ಅವರೂರಿನ ಹತ್ತಿರವಿರುವ ಪೋಲಿಸ್ ಸ್ಟೇಷನ್ ಗೆ ಕೊರೆವ ಚಳಿಯ ದಿನಗಳಲ್ಲಿ ಮೂರು ಗಂಟೆಗಳ ಕಾಲ ರೈಲಿನಲ್ಲೂ ಒಂದೂವರೆ ಗಂಟೆಗಳ ಕಾಲ ಬಸ್ಸಿನಲ್ಲೂ ಪಯಣಿಸಿ ಸ್ಟೇಷನ್ ನಲ್ಲಿ ಸಹಿ ಮಾಡಿ ಮತ್ತೆ ನಾಲ್ಕೂವರೆ ಗಂಟೆ ಪಯಣಿಸಿ ಮನೆಗೆ ಸೇರಿದರೆ ಮದುವೆ ಯಾಕಾದೆ ಎಂದೆನಿಸಿ ಬದುಕು ಬೇಸರವೆನಿಸಿಬಿಡುತ್ತಿತ್ತು. ಒಂದು ವಾರ ನಿತ್ಯ ಆ ರೀತಿ ಪಯಣಿಸಿದ ಬಳಿಕ ಹೇಗೋ ವಕೀಲರೊಬ್ಬರೊಂದಿಗೆ ಮಾತನಾಡಿ ನಾನು ನಿತ್ಯ ಸ್ಟೇಷನ್ ಗೆ ಹೋಗುವ ಬದಲು ವಾರಕ್ಕೆ ಒಂದು ಬಾರಿ ಹೋಗಿ ಸಹಿ ಮಾಡುವಂತೆ ಅಪ್ಪಣೆ ಪಡೆದಿದ್ದೆ. ನನ್ನ ಸ್ಥಿತಿ ಕಂಡು ನನ್ನ ಹೆಂಡತಿಗೆ ಮರುಕ ಹುಟ್ಟಿತೋ ಏನೋ ನಾನು ಸ್ಟೇಷನ್ ಗೆ ಸಹಿ ಮಾಡಲು ಹೋದರೆ ನನ್ನನ್ನು ಸ್ಟೇಷನ್ ನ ಹೊರಗೆ ಭೇಟಿಯಾಗುತ್ತಿದ್ದಳು. ರೆಸ್ಟೋರೆಂಟ್ ಗೆ ಊಟಕ್ಕೆ ಸಹ ಕರೆದೊಯ್ಯುತ್ತಿದ್ದಳು. ಅವಳೊಡನೆ ಆಗ ಮನಬಿಚ್ಚಿ ಮಾತನಾಡಿದಾಗ ನನ್ನ ಸ್ಥಿತಿಗೆ ಅವಳು ಕಾರಣಳಲ್ಲ. ಅವಳ ಅಂಕಲ್ ಕಾರಣ ಎಂದು ತಿಳಿದಿತ್ತು.” ಎಂದು ಆತ ಹೇಳುವುದನ್ನು ನಾನು ಮೌನವಾಗಿ ಕೇಳುತ್ತಲಿದ್ದೆ. ಆತ ನನ್ನ ಮೌನ ಮುರಿಯುವಂತೆ “ನಿನಗೆ 498 ಗೊತ್ತಾ” ಎಂದಿದ್ದ. 498 ಹಾಗಂದ್ರೆ ಏನು ಎಂದು ತಿಳಿಯದಿದ್ದ ನಾನು ನನಗೆ ಗೊತ್ತಿಲ್ಲ ಎಂದಿದ್ದೆ. ಐಪಿಸಿ ಸೆಕ್ಷನ್ 498, ಮಹಿಳೆಯರ ರಕ್ಷಣೆಗೆ ಇರುವ ಒಂದು ಕಾನೂನು ಎಂದೆನುತಾ ಅದರ ದುರುಪಯೋಗ ಕುರಿತು ಆತ ಮಾತನಾಡತೊಡಗಿದ್ದ. ಕಳೆದ ಐದು ವರ್ಷಗಳಿಂದಲೂ ಅವನನ್ನು ಹತ್ತಿರದಿಂದ ಕಂಡಿದ್ದ ನನಗೆ 498 ರ ಕಾನೂನಿನ ದುರುಪಯೋಗ ಇವನ ಕೇಸ್ ನಲ್ಲಿ ನಡೆದಿದೆ ಎನಿಸಿತ್ತು. “ಗಂಡ ಹೆಂಡತಿಯ ನಡುವೆ ಸಮಸ್ಯೆಗಳಿದ್ದರೆ ಮೊದಲು ಎರಡು ಕುಟುಂಬದವರೂ ಕುಳಿತು ಸಮಸ್ಯೆಗಳ ಕುರಿತು ಚರ್ಚಿಸಿ ಅವುಗಳ ಬಗೆ ಹರಿಸಬೇಕು ಅಲ್ಲವಾ ನಟ್ಟು? ಅದು ಬಿಟ್ಟು 498 ನಂತಹ ಕಾನೂನುಗಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳೋದು ತಪ್ಪು. ನನ್ನಂತಹ ನಿರಪರಾಧಿಗಳಿಗೆ ಈ ತರಹ ಹಿಂಸೆ ಕಿರುಕುಳ ಶಿಕ್ಷೆಯಾಗುವುದು ನಿಲ್ಲಬೇಕೆಂದರೆ ವಕೀಲರು ಗಂಡ ಹೆಂಡತಿಯನ್ನು ಮೊದಲು ಪ್ರಶ್ನಿಸಿ ಅವರಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಮಯ ನೀಡಬೇಕೆ ಹೊರತು ಯಾರೋ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಏನೋ ವಾದಿಸಿ ನಿರಪರಾಧಿಗಳನ್ನು ಅಪರಾಧಿಗಳಂತೆ ಬಿಂಬಿಸುವುದು ತಪ್ಪು ನಟ್ಟು. ನನ್ನ ಹೆಂಡತಿ ನನ್ನನ್ನು ತುಂಬಾ ಪ್ರೀತಿಸ್ತಾಳೆ. ನಾನು ಸಹ ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸ್ತೇನೆ. ಆದರೆ ಅವಳ ಅಂಕಲ್ ನಂತಹ ವ್ಯಕ್ತಿಗಳಿಂದ ನಾವು ಬೇರೆಯಾಗಬೇಕಾದ ಸ್ಥಿತಿ ಬಂದು ಬಿಟ್ಟಿತ್ತು. ಇವತ್ತು ನನ್ನ ಹೆಂಡತಿ ನಮ್ಮ ಮನೆಗೆ ವಾಪಸ್ಸು ಬಂದಿದ್ದಾಳೆ. ಅವಳ ಕಡೆಯವರು ನನ್ನನ್ನು ಜೈಲಿಗೆ ಕಳಿಸಿದ್ದರು. ಅದು ನನ್ನ ಬದುಕಿನಲ್ಲಿ ಒಂದು ಕಪ್ಪು ಚುಕ್ಕೆ ಎನ್ನಬಹುದು. ಆದರೂ ಅದನ್ನೆಲ್ಲಾ ಮರೆತು ಈಗ ಚೆನ್ನಾಗಿ ಬದುಕಬೇಕು ನಟ್ಟು. ನೀನು ಆರ್ಟಿಕಲ್ಸ್ ಬರೀತಿಯಲ್ಲಾ. ಇದನ್ನೆಲ್ಲಾ ಕುರಿತು ಏನಾದ್ರು ಬರಿ.” ಎಂದು ಮಲ್ಲು ಮಾತು ಮುಗಿಸಿದ್ದ. ನೊಂದು ಬೆಂದು ಈಗ ನೋವಿನಿಂದ ಮುಕ್ತಿ ಪಡೆದವನಂತೆ ಕಂಡ ಅವನ ಮಾತುಗಳ ಕೇಳಿಯಾದ ಮೇಲೆ “ಎಷ್ಟೇ ಜಗಳ, ಮುನಿಸು, ಬೇಸರ, ಕಷ್ಟಗಳು ಎದುರಾದರೂ ಮೂರನೆಯವರಿಗೆ ಆ ಗುಟ್ಟುಗಳನ್ನು ಬಿಟ್ಟುಕೊಡದೆ ಇಬ್ಬರೇ ಕುಳಿತು ಸಮಸ್ಯೆಗಳ ಬಗೆಹರಿಸಿ ಸುಂದರವಾದ ಜೀವನವನ್ನು ರೂಪಿಸಿಕೊಳ್ಳುವುದನ್ನು ಪರಿಸ್ಥಿತಿಗೆ ತಕ್ಕಂತೆ ಗೆಳೆತನ, ಪ್ರೀತಿ, ದಾಂಪತ್ಯ ಎಂದೆಲ್ಲಾ ಕರೆಯಬಹುದು..” ಎಂದು ಯಾವತ್ತೋ ಬರೆದಿಟ್ಟಿದ್ದ ಸಾಲುಗಳು ನೆನಪಿಗೆ ಬಂದವು..]]>

‍ಲೇಖಕರು G

July 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

13 ಪ್ರತಿಕ್ರಿಯೆಗಳು

 1. Badarinath Palavalli

  ಅಪರೂಪದ ವ್ಯಕ್ತಿ ಈತ.
  ಆದ ಅವಮಾನಗಳನ್ನೆಲ್ಲ ಮರೆತು ಮತ್ತೆ ಸಹಬಾಳ್ವೇ ಬದುಕೋಣ ಅನ್ನುತ್ತಾನೆ ಎಂದರೆ, ಹಲವರಿಗೆ ಈತ ಆದರ್ಶಪ್ರಾಯ.

  ಪ್ರತಿಕ್ರಿಯೆ
 2. n.sujatha

  ಅಪರೂಪದ ವ್ಯಕ್ತಿಯೇ ಸರಿ, ಕ್ಷಮಿಸುವುದುದರಿಂದಲೇ ಮನುಷ್ಯ ಉನ್ನತ ಮಟ್ಟಕ್ಕೆ ಹೋಗುತ್ತಾರೆ…..ಚನ್ನಾಗಿದೆ…

  ಪ್ರತಿಕ್ರಿಯೆ
 3. Santhu

  Hey Nattu,
  Seriously I had not gone thru your little long (!) stories till now.
  Today with the curiosity it made me to read this.
  Started with Fish curry,marriage,then to Jail and ending with a lesson note.
  Superb. I liked it.
  I dont think many people who yet to get married wont understand this.
  But it is very essential to adapt this rule in the life.

  ಪ್ರತಿಕ್ರಿಯೆ
 4. shanthi k.a.

  nijakkoo nimma mallu aparoopada vyaktiye sari..
  kshamisuvudakkinta matte aa kahi ghataneya nenepu badukalli birugaali ebbisadante badukuvudu mukhya.nimma geleya aa nittinalli great.

  ಪ್ರತಿಕ್ರಿಯೆ
 5. D.RAVI VARMA

  ಸರ್, ನಿಮ್ಮ ಗೆಳೆಯನ ಬದುಕಿನ ಕಹಿಘಟನೆ ನಿಜಕ್ಕೂ ಮೈಜುಮ್ಮೆನಿಸುವಂತಿದೆ .ಗಂಡ ಹೆಂಡಿರ ಸಂಭಂದಗಳು ವಿಕೃತರೂಪ ಪದೆದುಕೊಲ್ಲುತ್ತಿರುವುದಕ್ಕೆ ಮೂರನೆ ವ್ಯಕ್ತಿ,ಆತ,ಅಥವಾ ಆಕೆ ಕಾರಣವಾಗಿರುತ್ತಾರೆ . ಏನೊಂದು ತಪ್ಪು ಮಾಡದೆ ೧೪ ದಿನ ಜೈಲಲ್ಲಿ ಇದ್ದು ಹಿಂಸೆ ಅನುಭವಿಸಿ , ಎಲ್ಲವನ್ನು ನುಂಗಿಕೊಂಡು ಹೆಂಡತಿಯ ಮೇಲೆ ಮುನಿಸಿಕೊಳ್ಳದೆ,ನಿರ್ಲಿಪ್ತ ನಾಗಿರೋ ಅವರ ತಾಳ್ಮೆ ಹಾಗು ದೊಡ್ದತನಕ್ಕೊಂದು ಪ್ರೀತಿಪೂರ್ವಕ ವಂದನೆ. ನನಗೆ ಸಮಸ್ಯೆ ಏನೆಂದರೆ ಬಹುಷಃ ಆಕೆ ಅವರ ಚಿಕ್ಕಪ್ಪ ನ ಮುಂದೆ ಹೇಳಿರಬಹುದಾದ ಸತ್ಯ ಏನಿರಬೇಕು, ಆತನೇಕೆ ಈತನ ಮೇಲೆ ಅಸ್ಟೊಂದು ಕೋಪಕ್ಕೆ ಒಳಗಾಗಿ ಜೈಲಲ್ಲಿ ಹಾಕಿರಬೇಕು. ಅಲ್ಲವೇ, ಕೆಲವರ ಮನಸುಗಳು ಜಡ್ಡುಗಟ್ಟಿ ಹೋಗಿರುತ್ತವೆ ,ಅಲ್ಲಿ ಯೋಚನೆಗೆ ಅವಕಾಶವು ಇಲ್ಲದೆ ತಮಗೆ ತಿಳಿದ ಹಾಗೆ ವರ್ಥಿಸಿಬಿಡೋದು ನಾವು ದಿನ ನಿತ್ಯ ನೋಡುತ್ತಿದ್ದೇವೆ. ಕೊನೆಪಕ್ಷ ಆತ ಜೈಲಲ್ಲಿದ್ದಾಗ ಆಕೆ ತಕ್ಷಣ ಪ್ರತಿಕ್ರಿಯಸಬೇಕಾಗಿತ್ತಲ್ಲವೇ , ಆ ತಕ್ಷಣ ಅದಕ್ಕೊಂದು ಪರಿಹಾರ ಕಂಡುಕೊಲ್ಲಬೇಕಾಗಿತ್ತೇನೋ , ಆ ಮನಸು ಅದೆಷ್ಟು ನೊಂದಿರಬಹುದು ಅಲ್ಲವೇ , ನಿಮ್ಮ ಬರಹ , ಅಲ್ಲಿನ ಪಿಸುಮಾತು ,ಅಲ್ಲಿನ ಬದುಕಿನ ಪ್ರೀತಿ ನನಗೆ ಇಸ್ತವಾಯ್ತು .ಅದೇಕೋ ಮನಸು ಮಾತ್ರ ವಿಲಿ ವಿಲಿ ಒದ್ದಾಡುತ್ತಿದೆ. ಮತ್ತೆ ಮತ್ತೆ ಬೇಂದ್ರೆ ಹಾಡು ನೆನಪು ಬರ್ತಿದೆ ……
  “ನನ್ನ ಕೈಯ ಹಿಡಿದಾಕೆ ,
  ಅಳುನುಂಗಿ ನಗುವೊಮ್ಮೆ ,
  ನಾನೂನು ನಕ್ಕೆನಾ……
  ,
  ಬಡತನಾ ಸಿರಿತಾನಾ,
  ಕೊನೆತನಕ ಉಳಿದಾವೆನ ,
  ನಕ್ಕವಾ ಗೆದ್ದವಾ…….
  , .
  ಬಡನೂರು ವರುಷನಾ ,
  ಹರುಷದಿ ಕಳೆಯೋಣ ,
  ಯಾಕಾರ ಮರಗೊಣಾ…..
  ಇಲದಿರಕ ನಿನ್ನ ಅಳುವು
  ಹುಚ್ಹೂ,ಹಳ್ಳದ ಕೊಳ್ಳ,
  ಉದುಲಾಗ ಸಿಕ್ಕೆನಾ
  ನನಾ ಕೈಯ ಹಿಡಿದಾಕೆ ,
  ಅಳುನುಂಗಿ ,ನಗುಒಮ್ಮೆ
  ನಾನೂನು ನಕ್ಕೆನಾ ……
  ಅದು ಯಾವಾಗ ನಮ್ಮ ಹೆಂಗಸರು ಈ ಬೇಂದ್ರೆ ಹಾಡನ್ನು ಅರ್ಥಿಸಿಕೊಳ್ತಾರೋ ಆ ದೇವರಿಗೆ ಗೊತ್ತು …
  ರವಿ ವರ್ಮ ಹೊಸಪೇಟೆ …..

  ಪ್ರತಿಕ್ರಿಯೆ
 6. B C Vidya

  mana miditittu.aa nimma geleya thumba saatwika hagu taalmeyullava.avana aatma vishwasakkondhu namana………………. hage nimma baraha aa nimma geleyana katheya chitrana torisittu.tamagu dhanyavaada.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: