ನಟರಾಜ್ ಹುಳಿಯಾರ್ ಲೈನಲ್ಲಿದ್ದಾರೆ…

ಹು ಲ ನಟರಾಜ್ – ಎಂದರೆ ಯಾರು ಎಂಬ ಪ್ರಶ್ನೆ ಸಹಜ. ನಟರಾಜ್ ಹುಳಿಯಾರ್ ಒಂದು ಕಾಲಕ್ಕೆ ವ್ಯಂಗ್ಯ ಚಿತ್ರಕಾರರಾಗಿದ್ದರು ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ (ಅವರಿಗೂ ಮರೆತುಹೋಗಿರಬಹುದು). ಹು ಲ ನಟರಾಜ್ ಎಂಬ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾರ್ಟೂನಿಸ್ಟ್ ಇಂದು ಕನ್ನಡದ ಮಹತ್ವದ ವಿಮರ್ಶಕ. ಡಿ ಆರ್ ನಾಗರಾಜ್ ಚಿಂತನಾ ಕ್ರಮದ ಮುಂದುವರಿಕೆ.

nhu2.jpgತಿಪಟೂರಿನ ಹುಳಿಯಾರಿನ ಈ ಹುಡುಗ ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನಿಂದ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಸ್ಪರ್ಧೆಗಳಲ್ಲಿ ಗೆಲ್ಲುತ್ತಿದ್ದ. ತಾಜಾ ಅನುಭವ, ನೇರವಂತಿಕೆ, ಉಕ್ಕುತ್ತಿದ್ದ ಯೌವನಕ್ಕೆ ಕೊಟ್ಟ ಮಾತು ಇವರ ಸ್ಪೆಷಾಲಿಟಿಯಾಗಿತ್ತು.

ನಂತರ ಎಂಎ ಇಂಗ್ಲಿಷ್ ಗಾಗಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಲಸೆ. ಅಲ್ಲಿಯವರೆಗೂ ಸಂಗಾತಿಯಾಗಿದ್ದ ಕವಿತೆಯನ್ನು ಪಕ್ಕಕ್ಕೆ ಸರಿಸಿ ಹುಳಿಯಾರ್ ಕಥೆಯತ್ತ ಮುಖ ಮಾಡಿ ನಿಂತರು. ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲೂ ಗೆದ್ದರು. “ಮತ್ತೊಬ್ಬ ಸರ್ವಾಧಿಕಾರಿ” ಕಥಾ ಸಂಕಲನ ಎದ್ದು ಬಂತು. ಕ್ಲೀಷೆ ನಟರಾಜ್ ಗೆ ಸದಾ ಇರಿಸುಮುರಿಸು ತರಿಸುವ ವಿಷಯ. ಆ ಕಾರಣಕ್ಕಾಗಿಯೇ ಇರಬೇಕು, ನೋಟದಲ್ಲಿ ಹೊಸತನವಿರಲಿ, ಒಂದಷ್ಟು ಗಾಳಿ ಬೆಳಕು ಆಡಲಿ ಎಂದು ನಿರ್ಧರಿಸಿದರು.

nhu3.jpgಲಂಕೇಶರ ಒಡನಾಟ, ಡಿ ಆರ್ ನಾಗರಾಜರ ಅಖಾಡ ನಟರಾಜ್ ಹುಳಿಯಾರ್ ಒಳಗಿನ ಗಂಭೀರ ವಿಮರ್ಶಕನನ್ನು ಒರೆಗೆ ಹಚ್ಚಿತು. ನಟರಾಜ್ ವ್ಯಕ್ತಿತ್ವದಲ್ಲಿರುವ ತುಂಟತನ, ಆರೋಗ್ಯಕರ ವ್ಯಂಗ್ಯ ಅವರ ಬರಹಗಳನ್ನೂ ಹೊಸದಾಗಿ ರೂಪಿಸಿತು. ಲಂಕೇಶರ ಅಡ್ಡೆಯಲ್ಲಿ ತಮಗೆ ಆ ವೇಳೆಗೇ ಇದ್ದ ಸಾಮಾಜಿಕ ನೋಟವನ್ನು ಪಳಗಿಸಿಕೊಂಡರು. ಡಿಆರ್, ವಿಮರ್ಶೆಗೆ ಬೇಕಾಗಿದ್ದ ಪರಿಕರಗಳನ್ನು ಸಾಣೆ ಹಿಡಿದರು.

nhu1.jpgಬೆಂಗಳೂರು ವಿವಿಯ ಕನ್ನಡ ವಿಭಾಗದಲ್ಲಿ ತೌಲನಿಕ ಅಧ್ಯಯನ ಬೋಧಿಸುವ ಹುಳಿಯಾರ್, ಡಿಆರ್ ಅಡಿ ಆಫ್ರಿಕನ್ ಸಾಹಿತ್ಯದ ಸಂಶೋಧನೆ ನಡೆಸಿದರು. “ರೂಪಕಗಳ ಸಾವು” ಕವಿತೆಗಳ ಸಂಕಲನ ಸಹ ಅದಾಗಲೇ ಬಂದಿತ್ತು.

ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿನಿ ಅನಿತಾರನ್ನು ಬುಟ್ಟಿಗೆ ಹಾಕಿಕೊಂಡ ಹುಳಿಯಾರ್, ಮಗನಿಗೆ ಇಟ್ಟ ಹೆಸರು ಷೋಯೆಂಕಾ. ಆಫ್ರಿಕಾದ ಹಾಡಿಗೆ ನಟರಾಜ್ ಮಾರುಹೋದ ರೀತಿ ಇದು. ಜಾತಿಗಳನ್ನು ಕಿತ್ತೊಗೆಯುವುದರ ಮೂಲಕವೇ ಪಂಪ ಕನಸಿದ ಮಾನವನನ್ನು ಸೃಷ್ಠಿಸಲು ಎಂಬ ಕಾರಣಕ್ಕೆ ಅಂತರ್ಜಾತೀಯ ವಿವಾಹಗಳ ವೇದಿಕೆ “ಮಾನವ ಮಂಟಪ”ಕ್ಕೆ ಕೈ ಜೋಡಿಸಿದರು. ಜಾಗತೀಕರಣದ ಮಧ್ಯೆ ಹಳ್ಳಿಯ ಹುಡುಗರು ಎದುರಿಸುತ್ತಿರುವ ತಲ್ಲಣಗಳಿಗೆ ಒಂದು ಕಾಲುದಾರಿಯನ್ನಾದರೂ ನಿರ್ಮಿಸಲು ಇಂಗ್ಲಿಷ್ ಕಲಿಕೆಯ ಪರವಾಗಿ ನಿಂತರು.

ಲಂಕೇಶ್ ಪತ್ರಿಕೆ ನೀಡಿದ್ದ ಒಂದು ಆರೋಗ್ಯಕರ ಕಣ್ಣೋಟ ಇಲ್ಲವಾಗುತ್ತಿರುವುದು ನಟರಾಜ್ ಗೆ ಎಲ್ಲೋ ಗಾಳಿ ಬೆಳಕು ಇಲ್ಲವಾಗುತ್ತಿದೆ ಎನಿಸಿರಬೇಕು. ಆ ಕಾರಣಕ್ಕಾಗಿಯೇ ಆದದ್ದಾಗಲಿ ಎಂದು ಅಥವಾ ಆದದ್ದೆಲ್ಲಾ ಒಳಿತೇ ಆಯಿತು ಎಂಬಂತೆ ಪತ್ರಿಕೋದ್ಯಮಕ್ಕೆ ಜಿಗಿದಿದ್ದಾರೆ. “ಕನ್ನಡ ಟೈಮ್ಸ್” (ಟೈಮ್ಸ್ ಆಫ್ ಇಂಡಿಯಾದ ಕನ್ನಡ ರೂಪವಲ್ಲ) ಟ್ಯಾಬ್ಲಾಯ್ಡ್ ಆರಂಭವಾಗಿದೆ. ಈ ಕನ್ನಡ ಟೈಮ್ಸ್ ನಿಂದಾಗಿ ಗಾಳಿ ಬೆಳಕು ಮತ್ತೆ ಆಡುತ್ತಿದೆ.

ಲಂಕೇಶ್ ಪತ್ರಿಕೆಗೆ ನಟರಾಜ್ ಹುಳಿಯಾರ್ ಬರೆದ ಅಂಕಣ “ಗಾಳಿ ಬೆಳಕು” ಈಗಾಗಲೇ ಪುಸ್ತಕವಾಗಿದೆ. ಅದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿದೆ. ಇವರ ಕೃತಿಗಳನ್ನು ಅರಸಿ ಬಿ ಎಂ ಇನಾಮದಾರ್ ಪ್ರಶಸ್ತಿ, ಕಥೆಗಳ ಅನುವಾದಕ್ಕಾಗಿ ದೆಹಲಿಯ ಪ್ರತಿಷ್ಠಿತ “ಕಥಾ” ಪ್ರಶಸ್ತಿ ಕೂಡ ಲಭಿಸಿದೆ. ಅವಧಿಗಾಗಿ ಅವರು ಇಂದಿನಿಂದ ವಾರಕ್ಕೊಮ್ಮೆ “ಗಾಳಿ ಬೆಳಕು” ಅಂಕಣ ಬರೆಯುತ್ತಿದ್ದಾರೆ. ನಂತರ ಕನ್ನಡ ಟೈಮ್ಸ್ ನಲ್ಲಿ ಇದು ಮುದ್ರಿತವಾಗಲಿದೆ.

ಇನ್ನು ನೀವುಂಟು, ನಟರಾಜ್ ಉಂಟು. ನಿಮ್ಮ ಮಧ್ಯೆ “ಗಾಳಿ ಬೆಳಕು”.

(ಸಂಪರ್ಕಕ್ಕೆ: [email protected] ದೂರವಾಣಿ: ೦೮೦-೨೮೬೦೩೬೬೩)

ಚಿತ್ರಗಳು: ಸುಗತ ಶ್ರೀನಿವಾಸರಾಜು

‍ಲೇಖಕರು avadhi

July 10, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

4 ಪ್ರತಿಕ್ರಿಯೆಗಳು

 1. Nagesh Hegde

  Great! Looking forward to read Nataraj’s coloumn. Keep adding further attractions. All the best.
  Nagesh Hegde

  ಪ್ರತಿಕ್ರಿಯೆ
 2. ಕಲ್ಯಾಣರಾಜು

  ನಮಸ್ಥೆ ಸಾರ್
  ನಾನು ನಿಮ್ಮ ವಿದ್ಯಾರ್ಥಿ, ನೀವೂ ಒಬ್ಬ ವ್ಯಂಗ್ಯ ಚಿತ್ರಕಾರರು ಎಂಬುದು “ಅವಧಿ” ಯಲ್ಲಿ ಪ್ರಕಟವಾದ ಲೇಖನದಿಂದ ತಿಳಿಯಿತು. ತುಂಬಾ ಸಂತೋಷ. ನನ್ನದೊಂದು ಪುಟ್ಟ ಪ್ರೆಶ್ನೆ ಇದೆ ಉದಾಸೀನ ಮಾಡದೇ ಉತ್ತರಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಿಮ್ಮ ಚಿಂತನೆಯ ರೀತಿಯಲ್ಲಿ ವ್ಯಂಗ್ಯ ಚಿತ್ರವಿರುತ್ತವೂ ಅಥವಾ ಹವ್ಯಾಸಕ್ಕಾಗಿ ರೂಢಿಸಿಕೊಂಡಿದ್ದೀರ?. ನಿಮ್ಮ ವ್ಯಂಗ್ಯತೆಯ ಒಳದನಿ ಏನು. ಅವೂ ಕೂಡ ರೂಪಕಗಳಾಗಿ ಬಳಕೆಯಾಗುತ್ತವ?

  ಉತ್ತರವನ್ನು ನಿರೀಕ್ಷಿಸುತ್ತೇನೆ ಸಾರ್.
  ಧನ್ಯವಾದಗಳು.

  ನಿಮ್ಮ ವಿದ್ಯಾರ್ಥಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: