ನನಗೂ ಬಂತು ‘ಅನಾಮಿಕ’ ಬೆದರಿಕೆ..

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

೧೯೯೭-೧೯೯೮ ಸಂರ್ಷದ, ಹೊಯ್ದಾಟಗಳ ಯಾತನಾಮಯ ವರ್ಷಗಳು. ಈ ಯಾತನೆಗಳ ಮಧ್ಯೆ ‘ಪ್ರವಾ’ ಸುವರ್ಣ ಮಹೋತ್ಸವದ ಸಂಭ್ರಮವೂ ಇತ್ತು. ೧೯೯೭ರ ಮೇ ತಿಂಗಳಿನಲ್ಲಿ ನನ್ನ ನೇಮಕದಲ್ಲಿ ಸ್ವಲ್ಪ ಬದಲಾವಣೆಯಾಗಿತ್ತು. ಅದು ನನ್ನ ಹುದ್ದೆಯ ಅಂಕಿತದಲ್ಲಿ ಆದ ಬದಲಾವಣೆ. ಎಕ್ಸಿಕ್ಯುಟಿವ್ ಎಡಿಟರ್ ಎಂದು ರಿಡೆಸಿಗ್ನೇಟ್ ಮಾಡಲಾಗಿತ್ತು. ವೇತನ ಇತ್ಯಾದಿಗಳಲ್ಲಿ ಏನೂ ಬದಲಾವಣೆ ಆಗಿರಲಿಲ್ಲವಾದ್ದರಿಂದ ಇದು ಬಡ್ತಿ ಆಗಿರಲಿಲ್ಲ.

೧೯೯೭ರಲ್ಲಿ ಡಿ.ಪಿ.ಜೆ.ಯು (ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿ ಜರ್ನಲಿಸ್ಟ್ಸ್‌ಯೂನಿಯನ್) ಎಂಬ ಪತ್ರಕರ್ತರ ಹೊಸ ಸಂಘ ಹುಟ್ಟಿಕೊಂಡಿತ್ತು. ಕರ್ನಾಟಕ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ (KUWJ) ಮಾತೃಸಂಸ್ಥೆಯಿಂದ ಸಿಡಿದು ಬಂದ ಸಂಘವಿದು. ಮಾತೃಸಂಸ್ಥೆಯ ಸಂಧಾನ (ಮಾಲೀಕರೊಡನೆ) ಸಾಮರ್ಥ್ಯದಲ್ಲಿ ವಿಶ್ವಾಸ ಕಳೆದುಕೊಂಡ ಡೆಕ್ಕನ್ ಹೆರಾಲ್ಡ್ ಪ್ರಜಾವಾಣಿಯ ಕೆಲವು ಪತ್ರಕರ್ತರು ಹೊಸ ಸಂಘ ಕಟ್ಟಿಕೊಂಡಿದ್ದರು. ಡಿಪಿಜೆಯು ಸದಸ್ಯರ ಬೇಡಿಕೆಗಳ ಬಗ್ಗೆ ತಮ್ಮ ಜೊತೆ ಸಂಧಾನ ನಡೆಸುವಂತೆ ಆಡಳಿತ ವರ್ಗಕ್ಕೆ ಬರೆದರು. ಬೇಡಿಕೆಗಳನ್ನೂ ಮುಂದಿಟ್ಟರು. ಅನೇಕ ಬೇಡಿಕೆಗಳು, ಕಂಪ್ಯೂಟರೀಕರಣದಿಂದಾಗಿ ಪತ್ರಕರ್ತರು ಎದುರಿಸಬೇಕಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದ್ದಾಗಿತ್ತು. ಕೆಲವು ಬೇಡಿಕೆಗಳನ್ನು ಆಡಳಿತ ವರ್ಗ ತಿರಸ್ಕರಿಸಿದಾಗ ಮುಷ್ಕರ ಹೂಡಿದರು. ಸದ್ಯ ಈ ಮುಷ್ಕರ ಹಿಂದಿನ ಮುಷ್ಕರದಂತೆ ತಿಂಗಳುಗಟ್ಟಲೆ ನಡೆಯಲಿಲ್ಲ. ಮಾತುಕತೆ  ಸಫಲಗೊಂಡು ಮುಷ್ಕರ ಬೇಗ ಅಂತ್ಯಗೊಂಡಿತು. ಸಂಧಾನದಲ್ಲಿ ನಾನು ಆಡಳಿತವರ್ಗದ ಪರವಾಗಿ ಭಾಗವಹಿಸಬೇಕಾಗುತ್ತಿತ್ತು.

ಪತ್ರಕರ್ತರ ಕೆಲವು ಬೇಡಿಕೆಗಳ ಬಗ್ಗೆ ಸಹಾನುಭೂತಿ ಇದ್ದರೂ ಅದನ್ನು ವ್ಯಕ್ತಪಡಿಸುವಂತಿರಲಿಲ್ಲ. ಮಾತುಕತೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದದ್ದು ಕಂಪನಿಯ ಕಾರ್ಪೊರೆಟ್ ವಿಭಾಗದ ವೈಸ್ ಪ್ರೆಸಿಡೆಂಟ್ ಅವರೇ. ನಾನು ಹೆಚ್ಚುಕಡಿಮೆ ಮೂಕ ಸಾಕ್ಷಿಯಾಗಿರುತ್ತಿದ್ದೆ. ವೃತ್ತಿ ಮತ್ತು ಕೌಶಲ್ಯ, ಪರಿಣತಿಗಳ ವಿಷಯ ಬಂದಾಗ ಮಾತ್ರ ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಬೇಕಾಗುತ್ತಿತ್ತು. ಅಂಥ ಸಂದರ್ಭಗಳಲ್ಲೂ ಆಡಳಿತ ವರ್ಗವನ್ನು ಬಿಟ್ಟುಕೊಡದೆ ಮಾತನಾಡಬೇಕಿತ್ತು. ಇದು ಬಹಳ ಮುಜುಗರದ ಸಂಗತಿಯಾಗಿತ್ತು. ಒಮ್ಮೆಯಂತೂ ‘ಪತ್ರಕರ್ತರಾಗಿದ್ದುಕೊಂಡೂ ಮ್ಯಾನೇಜ್ಮೆಂಟ್ ಪರ ಮಾತಾಡ್ತೀರ. ನಿಮ್ಮ ಕೈಕಾಲು ಮುರೀತೀವಿ’ ಎಂದು ಡಿಪಿಜೆಯು ಅಧ್ಯಕ್ಷರು ನೇರವಾಗಿ ನನಗೆ ಬೆದರಿಕೆ ಹಾಕಿದ್ದೂ ಉಂಟು.

ಮುದ್ರಣ ವಿಭಾಗವನ್ನು ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಮಂಜೂರಾದ ನಿವೇಶನಕ್ಕೆ ವರ್ಗಾಯಿಸುವ ವಿಷಯ ಚುರುಕು ಪಡೆದುಕೊಂಡಿತ್ತು. ಹೊಸ ಮುದ್ರಣಾಲಯದ ಕಟ್ಟಡ ನಿರ್ಮಾಣ ಕಾರ್ಯವೂ ಭರದಿಂದ ಸಾಗಿತ್ತು. ಹೆಚ್ಚು ಪುಟಗಳನ್ನು ಮುದ್ರಿಸುವ ಸಾಮರ್ಥ್ಯ ಉಳ್ಳ ಅತ್ಯಾಧುನಿಕ ಆಫ್ಸೆಟ್ ಬಣ್ಣದ ಮುದ್ರಣ ಯಂತ್ರವನ್ನು ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಾಶವನ್ನು ಖರೀದಿಸಲು ಆಡಳಿತ ವರ್ಗ ನಿರ್ಧರಿಸಿತ್ತು. ‘ಇಪ್ಟಾ ಎನ್ನುವ ಅಂತರರಾಷ್ಟ್ರೀಯ ಪತ್ರಿಕಾ ಸಂಸ್ಥೆ ಮುದ್ರಣದಲ್ಲಿ ಹೊಸ ಆವಿಷ್ಕಾರಗಳು ಬಂದಾಗಲೆಲ್ಲ ಐರೋಪ್ಯ ಮಾರುಕಟ್ಟೆ ಕೇಂದ್ರಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು (ಡೆಮೋ) ಏರ್ಪಡಿಸಿ ಸದಸ್ಯರನ್ನು ಆಹ್ವಾನಿಸುತ್ತಿತ್ತು. ಅಂಥ ಒಂದು ಪ್ರದರ್ಶನ ಲಂಡನ್‌ನಲ್ಲಿ ೧೯೯೭ರಲ್ಲಿ ಏರ್ಪಟ್ಟಿತ್ತು.

ಹೊಸ ಮುದ್ರಣ ಯಂತ್ರವನ್ನು ಆಯ್ಕೆ ಮಾಡಲು ಶ್ರೀ ಹರಿಕುಮಾರ್ ಲಂಡನ್ನಿಗೆ ಹೊರಟಿದ್ದರು. ಅವರ ಜೊತೆ ಮುದ್ರಣ ವಿಭಾಗದ ಜನರಲ್ ಮ್ಯಾನೇಜರ್ ಮತ್ತು ವಿದ್ಯುನ್ಮಾನ ವಿಭಾಗದ ಜನರಲ್ ಮ್ಯಾನೇಜರ್ ಅವರೂ ಹೋಗುತ್ತಿದ್ದರು. ಸಂಪಾದಕೀಯ ವಿಭಾಗದಿಂದ ರಂಗನಾಥ ರಾವ್ ಮತ್ತು ಶ್ರೀನಿವಾಸ ರಾಜು ಅವರೂ ಬರಲಿ ಎಂದು ಶ್ರೀ ಹರಿಕುಮಾರ್ ಅವರು ಆದೇಶ ಹೊರಡಿಸಿದ್ದರಿಂದ ನನಗೆ ವಿದೇಶ ಯಾತ್ರೆಯ ಯೋಗ ಕೂಡಿ ಬಂದಿತ್ತು. ತರಾತುರಿಯಲ್ಲಿ ಪಾಸ್ ಪೋರ್ಟ್, ವೀಸಾ ಮಾಡಿಸಿ ಸಿದ್ಧನಾದೆ.

ಐದು ದಿನಗಳ ಕಾಲ ಲಂಡನ್ನಿನಲ್ಲಿ ಇದ್ದೆವು. ಪ್ರತಿ ದಿನ ಮುದ್ರಣ ಯಂತ್ರ ತಯಾರಿಕಾ ಸಂಸ್ಥೆಗಳು ತಮ್ಮ ಹೊಸ ಆವಿಷ್ಕಾರಗಳನ್ನು ಪ್ರದರ್ಶಿಸಿ ಗುಣ, ಉಪಯೋಗ, ಶ್ರೇಷ್ಠತೆಗಳ ಬಗ್ಗೆ ಮಾತಾಡುತ್ತಿದ್ದರು. ನಮ್ಮ ಅನುಮಾನಗಳಿಗೆ ಸಮಜಾಯಿಷಿ ನೀಡುತ್ತಿದ್ದರು. ದಿನಚರಿ ಬೆಳಿಗ್ಗೆ ೯ಕ್ಕೆ ಶುರುವಾದರೆ ಸಂಜೆ ೭- ೮ರವರೆಗೆ ನಡೆಯುತ್ತಿತ್ತು. ಹೀಗಾಗಿ ಲಂಡನ್ನಿನಲ್ಲಿ ಏನನ್ನೂ ನೋಡಲಾಗಲಿಲ್ಲ. ಷೇಕ್ಸ್‌ಪಿಯರ್ ನಾಟಕ ನೋಡುವ ಉತ್ಸಾಹದಲ್ಲಿ ಹೋಗಿದ್ದ ನನಗೆ ನಿರಾಶೆಯಾಯಿತು. ‘ಹೋದರೆ ಸಂಜೆ ೭ರ ಪ್ರದರ್ಶನಕ್ಕೆ ಹೋಗಿ, ತಡ ರಾತ್ರಿ ಪ್ರದರ್ಶನಕ್ಕೆ ಹೋಗ ಬೇಡಿ, ಕೊಲೆ ಸುಲಿಗೆಗಳಿಗೆ ಗುರಿಯಾಗುವಿರಿ’ ಎಂದು ನಾವು ಇಳಿದುಕೊಂಡಿದ್ದ ಹೋಟೆಲಿನ ಮ್ಯಾನೇಜರ್ ಎಚ್ಚರಿಕೆ ಕೊಟ್ಟದ್ದರಿಂದ ಲಂಡನ್ನಿನಲ್ಲಿ ಷೇಕ್ಸ್‌ಪಿಯರ್ ನಾಟಕ ನೋಡುವ ಆಸೆ ಬಿಡಬೇಕಾಯಿತು.

ಇಪ್ಟಾ ಅಧಿಕಾರಿಗಳ ಕೃಪೆಯಿಂದ ಲಂಡನ್ ಟೈಮ್ಸ್ ಮತ್ತು ಕೆಲವು ಕೌಂಟಿ ಪತ್ರಿಕೆಗಳ ಸಂಪಾದಕೀಯ ಕಚೇರಿ, ಮುದ್ರಣಾಲಯಗಳಿಗೆ ಭೇಟಿಕೊಟ್ಟು ಅಲ್ಲಿನ ಪತ್ರಕರ್ತರ ಜೊತೆ ಒಂದಷ್ಟು ವೃತ್ತಿಪರ ಮಾತುಕತೆ ಸಾಧ್ಯವಾಯಿತು. ಸ್ವಿಜರ್ಲೆಂಡಿನಲ್ಲೂ ಎರಡು ದಿನವಿದ್ದು ಅಲ್ಲೂ ಹೊಸ ಮುದ್ರಣ ಯಂತ್ರಗಳ ಡೆಮೋ ನೋಡಿದೆವು. ಅಲ್ಲೂ ಒಂದೆರಡು ಪತ್ರ‍್ರಿಕಾಲಯಗಳಿಗೆ ಭೇಟಿಕೊಟ್ಟೆವು. ಬೇರೇನೂ ನೋಡಲಾಗಲಿಲ್ಲ. ಎರಡನೆಯ ದಿನ ರಾತ್ರಿ ತಾಯ್ನಾಡಿಗೆ ಹಿಂದಿರುಗಲು ವಿಮಾನ ಹತ್ತಿದೆವು. ಹೀಗೆ ಕಂಪನಿಯ ಕೃಪೆಯಿಂದ ನಾನು ಫಾರಿನ್ ರಿಟರ್ನಡ್ ಆದೆ. ಅಲ್ಲಿದ್ದಷ್ಟು ದಿನವೂ ಬ್ರೆಡ್ ತಿಂದು ಬಾಯಿ ರುಚಿ ಕೆಟ್ಟು ಹೋಗಿತ್ತು.

ಈ ಮಧ್ಯೆ ಕುಂಬಳಗೋಡಿನಲ್ಲಿ ಕರ್ನಾಟಕ ಕೈಗಾರಿಕಾ‌ ವಲಯ ಅಭಿವೃದ್ದಿ ನಿಗಮದಿಂದ ನೀಡಲಾಗಿದ್ದ ಜಮೀನಿನಲ್ಲಿದ್ದ ಒಂದು ಮುನೇಶ್ವರ ದೇವಾಲಯದ ವಿವಾದ ತೆರೆದುಕೊಂಡಿತ್ತು. ಅಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆ ಆರಂಭಿಸದಂತೆ ಸುತ್ತಮುತ್ತಲ ಹಳ್ಳಿಯವರು ಜಮಾಯಿಸಿಕೊಂಡು ಬಂದು ‘ಮುನೇಶ್ವರನಿಗೆ ಮತ್ತೊಂದು ದೇವಸ್ಥಾನ ಕಟ್ಟಿಸಿಕೊಡುವವರೆಗೆ ನಿರ್ಮಾಣ ಚಟುವಟಿಕೆಗೆ ಬಿಡುವುದಿಲ್ಲವೆಂದು’ ಪಟ್ಟು ಹಿಡಿದು ಕೂತರು. ಕೆ.ಐ.ಎ.ಡಿ.ಎ (ಕರ್ನಾಟಕ ಇಂಟಸ್ಟ್ರಿಯಲ್ ಏರಿಯಾ ಡೆವಲಪ್‌ಮೆಂಟ್ ಅಥಾರಿಟಿ) ಜಮೀನನ್ನು ವಶ ಪಡಿಸಿಕೊಂಡ ನಂತರವೂ ಹಳ್ಳಿಯ ಜನರು ಅಲ್ಲಿನ ಮುನೇಶ್ವರನಿಗೆ ಪೂಜೆ ಸಲ್ಲಿಸಿಸುತ್ತಿದ್ದರು.

ಈಗ ಆ ನಿವೇಶನ ‘ಪ್ರಿಂಟರ್ಸ್ʼಗೆ ಸಿಕ್ಕಿದ್ದು ಅಲ್ಲಿ ಮುದ್ರಣಾಲಯ ಬರಲಿರುವುದರಿಂದ ‘ತಮ್ಮ ದೇವರ ಗತಿ ಏನು? ತಾವು ಇನ್ನು ಮುಂದೆ ತಮ್ಮ ದೇವರನ್ನು ಎಲ್ಲಿ ಪೂಜಿಸಬೇಕು?’ ಎನ್ನುವುದು ಸುತ್ತಮುತ್ತಲ ಹಳ್ಳಿಗರ ಪ್ರಶ್ನೆಯಾಗಿತ್ತು. ಅಲ್ಲಿರುವ ಮುನೇಶ್ವರನನ್ನು ಬೇರೇಡೆಗೆ ಸ್ಥಳಾಂತರಿಸಿ ಗುಡಿಯೊಂದನ್ನು ಕಟ್ಟಿಸಿಕೊಡಬೇಕೆಂಬುದು ಅವರ ಬೇಡಿಕೆಯಾಗಿತ್ತು.

ಈ ರೀತಿಯ ಸ್ಥಳಾಂತರಕ್ಕೆ ಹತ್ತಿರದಲ್ಲೇ ನಿವೇಶನ ನೀಡಲು ಕೆ.ಐ.ಎ.ಡಿ.ಎ ಸಿದ್ಧವಿತ್ತು. ಆದರೆ ಗುಡಿ ನಿರ್ಮಾಣದ ವೆಚ್ಚವನ್ನು ‘ಪ್ರಿಂಟರ್ಸ್ʼ ಮೈಸೂರು ಸಂಸ್ಥೆ ವಹಿಸಿಕೊಳ್ಳಬೇಕೆಂಬುದು ಅದರ ಶರತ್ತಾಗಿತ್ತು. ಇದಕ್ಕೆ ನಮ್ಮ ಆಡಳಿತ ವರ್ಗ ಸಿದ್ಧವಿರಲಿಲ್ಲ.. ‘ಥ್ರೋ ದೋಸ್ ಐಡಲ್ಸ್ ಅಂಡ್ ಸ್ಟಾರ್ಟ್ ಕನ್‌ಸ್ಟ್ರಕ್ಷನ್’ ಎಂಬುದು ನಮ್ಮ ನಿಲುವಾಗಿತ್ತು. ಆದರೆ ಈ ವಿಷಯದಲ್ಲಿ ಆಡಳಿತ ಮಂಡಳಿಯಲ್ಲೇ ಒಮ್ಮತದ ಅಭಿಪ್ರಾಯವಿದ್ದಂತಿರಲಿಲ್ಲ.

ದೇವರನ್ನು, ಜನರ ಭಾವನೆಗಳನ್ನು ಕಡೆಗಣಿಸಿ ಮುಂದುವರಿಯುವುದು ಸರಿಯಲ್ಲ, ಬೇರೆ ದೇವಾಲಯ ಕಟ್ಟಿಸಿಕೊಡೋಣ ಎಂಬ ಅಭಿಪ್ರಾಯವೂ ಇತ್ತು, ಈ ವಿಚಾರದಲ್ಲಿ ನಾನು ಮತ್ತು ಪದ್ಮನಾಭನ್ ಹಳ್ಳಿಗರೊಡನೆ ಸಂಧಾನಕಾರರಾಗಿದ್ದೆವು. ಕೊನೆಗೆ ಬೇರೆ ದೇವಾಲಯ ನಿರ್ಮಾಣಕ್ಕೆ ಒಂದಿಷ್ಟು ಹಣ ಕೊಡುವುದೆಂದು ತೀರ್ಮಾನಾವಾಯಿತು. ಮುನೇಶ್ವರನ ಮೂರ್ತಿಗಳನ್ನು ಪಲ್ಲಟಗೊಳಿಸುವ ಮುನ್ನ ಶಾಂತಿ ಯಜ್ಞವೊಂದು ಆಗಬೇಕೆಂದು ಹಳ್ಳಿಯವರು ಕರೆತಂದಿದ್ದ ಪುರೋಹಿತರು ಸೂಚಿಸಿದರು. ಕೊನೆಗೆ ನಾನು ಮತ್ತು ಪದ್ಮನಾಭನ್ ಈ ಶಾಂತಿ ಯಜ್ಞದಲ್ಲಿ ಭಾಗವಹಿಸಿ ಹವನಹೋಮ ನಡೆಸಿದ್ದರಿಂದ ಮುನೇಶ್ವರ ದೇವರು ಅಲ್ಲಿಂದ ಚಲಿಸಿ ನಿರ್ಮಾಣ ಕಾರ್ಯ ಸುಗಮವಾಯಿತು.

ಈ ಮಧ್ಯೆ ಕಾರ್ಪೊರೆಟ್ ಜಗತ್ತಿಗೆ ಸಹಜವೆನಿಸುವಂಥ ಕೆಲವು ವಿದ್ಯಮಾನಗಳು ಘಟಿಸುತ್ತಿದ್ದವು. ಸಂಪಾದಕೀಯ ವಿಭಾಗದ ಕೆಲವರು ನಿರ್ದೇಶಕರುಗಳೊಡನೆ ನೇರ ಸಂಪರ್ಕ ಕಲ್ಪಿಸಿ ಕೊಂಡಿದ್ದರು. ಅವರು ನನಗೆ ತಿಳಿಸದೆಯೇ ನಿರ್ದೇಶಕರುಗಳನ್ನು ಭೇಟಿ ಮಾಡಿ ‘ಪ್ರವಾ’ ಸಂಪಾದಕೀಯದ ವಿಭಾಗದ ಬಗ್ಗೆ ಚರ್ಚಿಸುತ್ತಿದ್ದುದು ನನ್ನ ಗಮನಕ್ಕೆ ಬಂದಿತ್ತು. ‘ಪ್ರವಾ’ ಗುಣಮಟ್ಟ ಹೆಚ್ಚಿಸುವ ಬಗ್ಗೆ ಹಾಗೂ ಸಂಪಾದಕೀಯ ವಿಭಾಗದಲ್ಲಿನ ಸಮಸ್ಯೆಗಳ ಚರ್ಚೆಗೆ ಅನುವು ಮಾಡಿಕೊಡಲು  ನಿರ್ದೇಶಕರು ಒಂದೆರಡು ಭೋಜನಕೂಟ ಸಭೆಗಳನ್ನು ಏರ್ಪಡಿಸಿದ್ದೂ ಉಂಟು. ಈ ಸಭೆಗಳ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಇವು ಚಾಡಿಕೋರರ ಚಾವಡಿ ಮಟ್ಟಕ್ಕೆ ಇಳಿದಿದ್ದವು.

ಈ ಬಗೆಯ ವಿದ್ಯಮಾನಗಳಿಗೆ ತಲೆಕೆಡಸಿಕೊಳ್ಳದೆ ನಾನು ನನ್ನ ಕೆಲಸ ಕಾರ್ಯಗಳಲ್ಲಿ ಮಗ್ನನಾಗಿರುತಿದ್ದೆ. ಒಂದು ದಿನ ಹೀಗೆ ಕೆಲಸದಲ್ಲಿ ಮುಳುಗಿದ್ದಾಗ ಮನೆಯಿಂದ ಫೋನ್ ಬಂತು;

‘ತಕ್ಷಣ ಮನೆಗೆ ಬನ್ನಿ’ – ಆ ಕಡೆಯಿಂದ ಸರಳಾಳ ಧ್ವನಿ.

ಆಗಿನ್ನೂ ಸಮಯ ಸುಮಾರು ೧೨ ಗಂಟೆ. ೧೦.೩೦ರವರಗೆ ಮನೆಯಲ್ಲೇ ಇದ್ದೆ. ಈ ಒಂದೂವರೆ ಗಂಟೆಯಲ್ಲಿ ಇಂಥ ತುರ್ತು ಕರೆ. ಅಮ್ಮ ಆರೋಗ್ಯವಾಗಿಯೇ ಇದ್ದಳು.

‘ಏನು ಸಮಾಚಾರ…?’

‘ಒಂದು ಕಾಗದ ಬಂದಿದೆ. ನೀವು ತಕ್ಷಣ ಬನ್ನಿ’

ಸರಳಾಳ ಮಾತನಲ್ಲಿ ದುಗುಡವಿತ್ತು. ನಾನು ಮನೆಗೆ ಧಾವಿಸಿದೆ.,

ಬಾಗಿಲಲ್ಲೇ ಕಾಲಕಳೆಯಲು ಕೂತಿದ್ದ ಅಮ್ಮ-

‘ಇದೇನೋ ಈಗ ಹೋದೋನು ಆಗಲೇ ಬಂದಿ …ಏನಾದರೂ ಮರೆತಿದ್ಯ?’

ನಾನು ‘ಹ್ಞೂಂ’ ಎಂದು ಒಳಕ್ಕೆ ಹೋದೆ. ರೂಮಿನಲ್ಲಿ ಸರಳಾ ಆಗಷ್ಟೆ ಟಪಾಲಿನಲ್ಲಿ ಬಂದಿದ್ದ ಇನ್‌ಲ್ಯಾಂಡ್ ಕವರೊಂದನ್ನು ಕೈಯ್ಯಲ್ಲಿಟ್ಟಳು. ಅವಳು ಅಧೀರಳಾಗಿದ್ದಳು.

‘ಏನಿದು?’

‘ಓದಿ ನೋಡಿ’

ನಾನು ಕವರನ್ನು ಬಿಡಿಸಿ ಓದಿದೆ. ಆ ಅಂರ್ತದೇಶೀಯ ಪತ್ರದ ಒಕ್ಕಣೆ ಹೀಗಿತ್ತು:

‘ರಂಗನಾತ ರಾವ್

 ಜಾತೀಯತೆಯ ಕ್ರಿಮಿಯೆ,

 ಈ ತಿಂಗಳಲ್ಲಿ ಶ್ರೀ… ರನ್ನು ಸಹ ಸಂಪಾದಕರನ್ನಾಗಿ ಮತ್ತು ಶ್ರೀ…ರ್ ಅವರನ್ನು

 ಸುದ್ದಿ ಸಂಪಾದಕರನ್ನಾಗಿ ಮಾಡದಿದ್ದರೆ ನಿನ್ನ ಎರಡೂ ಮಕ್ಕಳನ್ನು ಅಪಹರಿಸಿ

 ನಿನಗೆ ನಿರಂತರ ಪುತ್ರ ಶೋಕ ಉಂಟುಮಾಡಲಿದ್ದೇನೆ.

ಎಚ್ಚರ ಇರಲಿ

ಆದಿ ನಾರಾಯಣ ಶೆಟ್ಟಿ

  ೨-೨-೯೮

‘ಅವೋಪ’, ನೊ.೩೭’೬೫೦,೧೩ನೇ ಕ್ರಾಸ್,ಬಿ.ಎಸ್.ಕೆ ೨ ಸ್ಟೇಜ್,

ಬೆಂಗಳೂರು -೫೬೦೦೦೭೦’

ಇದು ನಮ್ಮ ಸಹೋದ್ಯೋಗಿ ‘ಮಿತ್ರರ’ ಕೆಲಸವೆಂದು ಅರ್ಥವಾಯಿತು. ಸರಳಾ ಸಹಜವಾಗಿಯೇ ಆತಂಕಗೊಂಡಿದ್ದಳು. 

‘ಇವೆಲ್ಲ ವೃತ್ತಿ ಜೀವದಲ್ಲಿ ಆಗುತ್ತವೆ, ಇದು ಕೇವಲ ಬೆದರಿಕೆಯಷ್ಟೆ. ಹಾಗೇನೂ ಆಗುವುದಿಲ್ಲ’ ಎಂದು ಸಮಾಧಾನ ಹೇಳಿದೆ.

 ‘ಮುಂದೇನು?’

‘ದುಡುಕುವುದು ಬೇಡ.’

-ಎಂದು ಮಧ್ಯಾಹ್ನ ಇಬ್ಬರು ಮಕ್ಕಳೂ ಸ್ಕೂಲು/ಕಾಲೇಜುಗಳಿಂದ ಬರುವವರೆಗೆ ಮನೆಯಲ್ಲಿದ್ದು ಸರಳಾಗೆ ಸಮಾಧಾನ ಹೇಳಿ ಆಫೀಸಿಗೆ ಹಿಂದಿರುಗಿದೆ.

ಇದನ್ನು ಹೇಗೆ ಎದುರಿಸುವುದು ಎನ್ನುವುದೇ ತಲೆಯಲ್ಲಿ ಕೊರೆಯುತ್ತಿತ್ತು. ಮೊದಲು ಪ್ರಧಾನ ಸಂಪಾದಕರಾದ ಎಂ.ಡಿ.ಯವರ ಗಮನಕ್ಕೆ ತರುವುದು ಉಚಿತವೆನಿಸಿ ಅವರನ್ನು ಕಾಣಲು ಹೋದೆ. ಅವರು ಇನ್ನೂ ಆಫೀಸಿಗೆ ಬಂದಿರಲಿಲ್ಲ. ಅವತ್ತು ಬರುವ ಸಂಭವವೂ ಇರಲಿಲ್ಲ. ಫೋನ್ ಮಾಡಿ ವಿಷಯ ತಿಳಿಸಿದೆ.

‘ಇಸ್ ಇಟ್… ಸಮ್ ಮಿಸ್ಚಿವಸ್ ಎಲಿಮೆಂಟ್ಸ್…’ ಎಂದು, ಸ್ವಲ್ಪ ತಡೆದು ‘ಯೂ ಕೆನ್ ಲಾಡ್ಜ್ ಎ ಪೊಲೀಸ್ ಕಂಪ್ಲೇಂಟ್’ ಎಂದು ಹೇಳಿದರು.

ಪೊಲೀಸರಿಗೆ ದೂರು ನೀಡುವುದೇ, ಬೇಡವೇ? ಇಡೀ ದಿನ ಯೋಚಿಸಿದೆ. ಇದು ಕೇವಲ ಬೆದರಿಕೆಯ ಪ್ರಶ್ನೆಯಾಗಿರಲಿಲ್ಲ. ಸತ್ಯ, ನ್ಯಾಯಗಳ ಪರವಾಗಿರುವ ನನ್ನ ಆತ್ಮಸ್ಥೈರ್ಯಕ್ಕೆ ಒಡ್ಡಿದ ಸವಾಲೂ ಆಗಿತ್ತು. ಇದನ್ನು ನಾನು ನನ್ನ ವೈಯಕ್ತಿಕ ನೆಲೆಯಲ್ಲೇ ಎದುರಿಸ ಬೇಕಾಗಿತ್ತು. ಆಡಳಿತ ವರ್ಗ ನನ್ನ ಬೆಂಬಲಕ್ಕೆ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಪ್ರಧಾನ ಸಂಪಾದಕ/ಎಂ.ಡಿ. ಅವರ ಪ್ರತಿಕ್ರಿಯೆಯಲ್ಲೇ ಆ ಬಗ್ಗೆ ‘ಅದು ನಿನ್ನ ಹಣೇಬರಹ, ಬೇಕಾದ್ದನ್ನು ಮಾಡಿಕೊ’ ಎನ್ನುವ ಧೋರಣೆ ಇತ್ತು. ಇಂಥ ದಿನಗಳಲ್ಲಿ ನನಗೆ ನೈತಿಕ ಬೆಂಬಲವಾಗಿ ನಿಂತವರು ಪ್ರೊ.ಜಿ.ರಾಮಕೃಷ್ಣ ಮತ್ತು ಪ್ರೊ. ಜಿ.ಕೆ. ಗೋವಿಂದ ರಾವ್.

ಬೆಂಗಳೂರು ನಗರದ ಪೋಲಿಸ್ ಕಮೀಷನರ್ ಅವರನ್ನು ಭೇಟಿಯಾದೆ. ನನಗೆ ಬಂದಿದ್ದ ಪತ್ರ ತೋರಿಸಿದೆ. ಅವರು ನನ್ನ ಕಚೇರಿಯ ಬಗ್ಗೆ ಕೆಲವು ವಿವರಗಳನ್ನು ಕೇಳಿ ತಿಳಿದುಕೊಂಡರು.

‘ಇದೊಂದು ಹುಸಿ ಬೆದರಿಕೆ ಪತ್ರ. ಇದರಿಂದ ಏನೂ ಆಗದು. ಎನೇ ಆಗಲೀ ನಿಮ್ಮ ಮಕ್ಕಳಿಗೆ ಅಪರಿಚಿತರಿಂದ ದೂರವಿರಲು ಹೇಳಿ. ಅಪರಿಚಿತರು ಕೊಡುವ ಯಾವುದೇ ವಸ್ತುವನ್ನು ಮುಟ್ಟದೇ ಇರಲು ಹೇಳಿ. ಸಾಧ್ಯವಾದರೆ ಆ ಜನಕ್ಕೆ ಬಡ್ತಿ ಕೊಟ್ಟುಬಿಡಿ….’

‘ಸೂಕ್ತ ಸಮಯದಲ್ಲಿ ಅದನ್ನು ಪರಿಶೀಲಿಸಲಾಗುವುದು. ಅದು ನಮ್ಮ ಆಡಳಿತ ಮಂಡಳಿಯ ನೀತಿಯ ವಿಚಾರ. ನಾನು ಈ ಬಗ್ಗೆ ನಿಮಗೆ ಹೆಚ್ಚಿಗೆ ಏನೂ ಹೇಳಲಾಗದು.’

‘ನೀವು ಈ ಬಗ್ಗೆ ತನಿಖೆಯಾಗಬೇಕು ಎನ್ನುವುದಾದರೆ, ಒಂದು ಕಂಪ್ಲೇಂಟ್ ಕೊಡಿ. ಎಫ್.ಐ.ಆರ್ದಾ ಖಲಿಸಿಕೊಂಡು ತನಿಖೆ ಮಾಡುತ್ತೇವೆ’

ನನಗೆ ಅವರಲ್ಲಿ ಹೆಚ್ಚಿಗೆ ಹೇಳುವುದು ಏನೂ ಇರಲಿಲ್ಲ. ರಾಜಿ ಮಾಡಿಕೊಳ್ಳಿ ಎನ್ನುವದೇ ಅವರ ಸಲಹೆಯಾಗಿತ್ತು. ಇಂಥ ಬೆದರಿಕೆ ವಾತಾವರಣ ಸೃಷ್ಟಿಸುವವರನ್ನು ಪತ್ತೆ ಹಚ್ಚಿ ಪ್ರಾಮಾಣಿಕ ಕೆಲಸಕ್ಕೆ ಮುಕ್ತ ವಾತಾವರಣ ಕಲ್ಪಿಸುವಂಥ ಭರವಸೆ ಅವರಿಂದ ಸಿಗಲಿಲ್ಲ. ‘ಬಡ್ತಿ ಕೊಟ್ಟು ಸಮಸ್ಯೆ ಬಗೆಹರಿಸಿಕೊಳ್ಳಿ’ ಎನ್ನುವ ಬುದ್ಧಿವಾದ ಹೇಳಿಸಿಕೊಳ್ಳಲು ನಾನು ಕಾನೂನು ಸುವ್ಯವಸ್ಥೆ ಪಾಲನೆ ಅಧಿಕಾರಿಯಾದ ಅವರ ಬಳಿ ಹೋಗಬೇಕಾಗಿರಲಿಲ್ಲ.

ಅವರೇನೋ ಬಹಳ ಸುಲಭವಾಗಿ ಬುದ್ಧಿವಾದ ಹೇಳಿದ್ದರು. ಆದರೆ ನನಗೆ ಅವರ ಮುಂದೆ ‘ನಮ್ಮ ಮನೆಯ’ ಕೊಳೆ ತೊಳೆಯುವ ಮನಸ್ಸಿರಲಿಲ್ಲ.    

ಬಡ್ತಿ ಎನ್ನುವುದು ನಮ್ಮಲ್ಲಿ ಅಷ್ಟು ಸರಳವಾಗಿರಲಿಲ್ಲ. ಮೇಲ್ನೋಟಕ್ಕೆ ಮಾತ್ರ ಅದು ವಿಭಾಗದ ಮುಖ್ಯಸ್ಥರ ಶಿಫಾರಸಿನಂತೆ ನಡೆಯುತ್ತದೆ ಎನ್ನುವ ಕಲ್ಪನೆ ಇತ್ತು. ಶಿಫಾರಸು ಏನೇ ಇದ್ದರೂ, ಅವೆಲ್ಲ ಆಗುತ್ತಿದ್ದುದು, ಎಲ್ಲ ಖಾಸಗಿ ಸಂಸ್ಥೆಗಳಂತೆ, ಆಡಳಿತ ಮಂಡಲಿಯ ನಿರ್ದೇಶಕರುಗಳ ಆಖೈರು ತೀರ್ಮಾನದಂತೆ. ಈ ಆಖೈರು ತೀರ್ಮಾನದಲ್ಲಿ ಪ್ರತಿಭೆ, ದಕ್ಷತೆ, ಅನುಭವ, ಸೇವಾಹಿರಿತನ  ಇತ್ಯಾದಿಗಳ ಜೊತೆ ಬೇರೆಬೇರೆ ಪರಿಗಣನೆಗಳೂ ಇರುತ್ತಿದ್ದವು. ಹಲವೊಮ್ಮೆ, ಬಹುತೇಕ ನಮ್ಮ ಶಿಫಾರಸುಗಳ ಮೇಲೆ ನೂರಕ್ಕೆ ನೂರು ಕಾಟು ಬೀಳುತ್ತಿತ್ತು. ಇದು ನನ್ನ ಸಹೋದ್ಯೋಗಿಗಳಿಗೆ ತಿಳಿಯದ ವಿಷಯವೇನಾಗಿರಲಿಲ್ಲ.

ನನಗೆ ಬಂದಿದ್ದ ಬೆದರಿಕೆ ಪತ್ರ ಆದಿನಾರಾಯಣ ಶೆಟ್ಟಿಯದಲ್ಲ, ಇದು ನಮ್ಮೊಳಗೆ ಇರುವ ‘ನಾಜೂಕಯ್ಯ’ನದು ಎಂದು ನನಗೆ ಖಾತ್ರಿಯಾಗಿತ್ತು. ಎರಡು ದಿನ ಬಿಟ್ಟು ಸಂಜೆಯ ಸಭೆಯ ನಂತರ ಆ ಪತ್ರದಲ್ಲಿ ಹೆಸರಿಸಲಾಗಿದ್ದ ಇಬ್ಬರು ಸಹೋದ್ಯೋಗಿಗಳನ್ನು ಎದುರಿಗೆ ಕೂಡಿಸಿಕೊಂಡು ಪತ್ರವನ್ನು ಅವರ ಕೈಗೆ ಕೊಟ್ಟು, ಓದಿ ನೋಡಿ ಎಂದೆ. ಓದಿದ ನಂತರ ಅವರ ಮುಖಗಳು ಬಿಳಚಿಕೊಂಡವು.

‘ಇದಕ್ಕೂ ತಮಗೂ ಏನೇನೂ ಸಂಬಂಧವಿಲ್ಲವೆಂದೂ ಯಾರೋ ಕಿಡಿಗೇಡಿಗಳು ತಮಗೆ ಕಳಂಕ ತರಲು ಮಾಡಿರುವ ಕೆಲಸವಿದೆಂದೂ ತಾವು ಇಂಥ ನೀಚ ಕೆಲಸವನ್ನು ಎಂದೂ ಮಾಡುವುದಿಲ್ಲವೆಂದೂ’ ಅವರಿಬ್ಬರೂ ಪರಿಪರಿಯಾಗಿ ಹೇಳಿದರು.

‘ನೀವು ಮಾಡಿದ್ದೀರಿ ಎಂದು ನಾನೂ ಹೇಳುತ್ತಿಲ್ಲ. ನಿಮ್ಮ ಹಿತೈಷಿಗಳೋ ಅಭಿಮಾನಿಗಳೋ ಮಾಡಿರಬಹುದು. ಅವರನ್ನ ನೀವು ಅರಿತುಕೊಳ್ಳಲಿ ಎಂದು ನಿಮಗೆ ಇದನ್ನು ತೋರಿಸಿದೆ ಅಷ್ಟೆ. ಆದರೆ ಹೀಗೆಲ್ಲ ಮಾಡಿದರೆ ಬಡ್ತಿ ಸಿಗುತ್ತದೆ ಎಂಬ ಭಾವನೆ ಯಾರಿಗಾದರೀ ಇದ್ದಲ್ಲಿ ಅದು ತಪ್ಪು.’

ಎಂದು ಹೇಳಿ ಕಳುಹಿಸಿದೆ. ಮೂರು ನಾಲ್ಕು ದಿನಗಳ ನಂತರ ಬೆದರಿಕೆ ಪತ್ರ ಬರೆದ ವ್ಯಕ್ತಿ ಯಾರೆಂಬುದು ಅವರಿಬ್ಬರಲ್ಲೇ ಒಬ್ಬರಿಂದ ನನಗೆ ಗೊತ್ತಾಯಿತು.

February 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಎರಡು ಕೆಂಪು ದಾಸಾಳ ಹೂಂಗು

ಎರಡು ಕೆಂಪು ದಾಸಾಳ ಹೂಂಗು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This