ನನಗೆ ಆಯ್ಕೆಇದ್ದಿದ್ರೆ ಕೃಷ್ಣ, ಶ್ರೀರಾಮ, ಬುದ್ಧ ಆಗಿ ಹುಟ್ಟಬಹುದಿತ್ತು…

-ಬೊಳುವಾರು ಮಹಮ್ಮದ್
ಸಾಮಾನ್ಯವಾಗಿ ದಕ್ಷಿಣ ಕನ್ನಡದಲ್ಲಿ ಹುಟ್ಟಿ ಬೆಳೆಯುವಂತ ನನ್ನಂತವನಿಗೆ ನನ್ನ ಮಾತೃಭಾಷೆಯ ಜೊತೆಗೆ ಎರಡು/ಮೂರು ಭಾಷೆಯ ಹೊರತಾಗಿ ಕೊಂಕಣಿ, ತುಳು, ಕನ್ನಡ ಈ ಮೂರು ಭಾಷೆ ಸುಲಭ ಆಗಿ ಅರ್ಥವಾಗುತ್ತೆ ಬರುತ್ತೆ ಇದರಿಂದಾಗಿ ಆ ಭಾಷೆ ಮಾತಾಡುವಂತಹ ಸ್ನೇಹಿತರ ಒಡನಾಟ ಕೂಡ ಬಹಳ ಸುಲಭವಾಗಿ ಸಿಗುತ್ತೆ.
ಬಾಲ್ಯದಲ್ಲಿ ಬಡತನ ಇದ್ದರೂ ಕೂಡ ಬಹಳ ಸುಂದರ ಅನಿಸುತ್ತದೆ. ಇಲ್ಲಿ ದೇವರು ಧರ್ಮಗಳನ್ನು ಒಂದೇ ಬಾಟ್ಲಿಯಲ್ಲಿ ಹಾಕಿ ಕಲಸಿ ಕುಡಿಸಬಹುದು ಅನಿಸುತ್ತದೆ. ಸುಮಾರು 40 ವರ್ಷದ ಹಿಂದೆ ಪುತ್ತೂರಲ್ಲಿ ಎರಡು ಗಣೇಶೋತ್ಸವವಿತ್ತು. ಒಂದು ಕಾಂಗ್ರೆಸ್ ಗಣೇಶ, ಇನ್ನೊಂದು ಕೊಂಕಣಿ ಗಣೇಶ,  ಕಾಂಗ್ರೆಸ್ ಗಣೇಶ್ ಕೋರ್ಟ್  ಮೈದಾನದಲ್ಲಿ ಮಾಡ್ತಾ ಇದ್ರು. ಕೊಂಕಣಿ ಗಣೇಶ್ ವೆಂಕಟರಮಣ ದೇವಸ್ಥಾನದಲ್ಲಿ. ನಾನಾಗ ಕಾಂಗ್ರೆಸ್ ಗಣೇಶ್ನ ಹತ್ರ ಹೋಗಿ ಸುಮಾರು ಒಂದುವರೆ ಗಂಟೆ ಗೀತೆ, ಬೈಬಲ್, ಕುರಾನ್ ಕುರಿತು ಅದ್ಭುತ ಆಗಿ ಮಾತಾಡಿ ಎಲ್ಲರಿಂದ ಕ್ಲ್ಯಾಪ್ ಹೊಡೆಸಿಕೊಂಡಿದ್ದೆ. ಆದರೆ ಕ್ರಮೇಣ ನಾನು ಸ್ವಲ್ಪ ಬೆಳೆದು ಹೆಚ್ಚೆಚ್ಚು ಓದ್ಕೊಂಡ ಹಾಗೇನೆ, ನನ್ನ ಅನುಮಾನಗಳು ಕೂಡ ಹೆಚ್ಚಾಗುತ್ತಾ ಹೋದವು. ನಮ್ಮ ಓದು ನಮ್ಮ ಕಣ್ಣಿಗೆ ಕನ್ನಡಕ ಆಗುತ್ತೆ. ನಾವು ಯಾವುದನ್ನು ನಿಜ ಅಂತ ನಂಬುತ್ತೇವೋ ಅದೇ ನಿಜದ ಒರೆಗಲ್ಲಿನಿಂದ ಬೇರೆಯವರ ನಿಜಗಳನ್ನು ಕೂಡಾ ನಾವು ಅಳೆಯಲ್ಲಿಕ್ಕೆ ಹೊರಡುತ್ತೇವೆ. ಇದರಿಂದಾಗಿ ಸಂಘರ್ಷ ಆರಂಭ ಆಗುತ್ತೆ. ಪ್ರತಿಯೊಬ್ಬನಿಗೂ ತನ್ನ ನಿಜ ಮಾತ್ರ ಬದುಕಿನ ಸತ್ಯ ಅದೇ ಪರಮ ಸತ್ಯ ಎಂಬ ವಾದ ಮಾಡುವುದರಿಂದ ಹಠ ಇರುವುದರಿಂದ, ಯಾರು ಬಲಶಾಲಿ ಆಗಿ ಇರುತ್ತಾನೆ ಅವನ ನಿಜ ಎಲ್ಲರ ನಿಜ ಆಗಬೇಕಾದಂತಹ ಸಮಯ ಬರುತ್ತೆ.
ಹುಟ್ಟು ನನಗೆ ಆಯ್ಕೆ ಆಗಿರಲಿಲ್ಲ. ಒಂದು ವೇಳೆ ಹುಟ್ಟು ನನಗೆ ಆಯ್ಕೆಯಾಗಿರುತ್ತಿದ್ರೆ ನಾನು ದಶರಥನ ಮಗ ಶ್ರೀರಾಮಚಂದ್ರ ಆಗಿ ಬರುತ್ತಿದ್ದೆ. ನಾನು ವಾಸುದೇವನ ಮಗ ಶ್ರೀಕೃಷ್ಣನಾಗಿಯೇ ಹುಟ್ಟುತ್ತಿದ್ದೆ. ಶುದ್ದೋದನನ ಮಗ ಬುದ್ಧ ಆಗ್ತಾ ಇದ್ದೆ. ಅಲ್ಲಿ ಕೂಡಾ ವೇಕೆನ್ಸಿ ಇಲ್ಲ ಅಂತ ಇದ್ರೆ ಕನಿಷ್ಟ ಕನಿಷ್ಟ ಕರಮಚಂದ ಗಾಂಧಿಯ ಮಗನಾಗಿ. ಆದರೆ ಅಬ್ಬಾಸ್ ಬ್ಯಾರಿಯ ಮಗನಾಗಿ ಹುಟ್ಟಿದ ನಂತರ ಅಬ್ಬಾಸ್ ಬ್ಯಾರಿ ನಂಬಿಕೊಂಡಂತಹ ನಿಲುವುಗಳಿಗೆ ಬದ್ಧನಾಗಿ ಬದುಕುವುದು ತಪ್ಪು ಅಂತ ನನಗೆ ಅನಿಸಿಲ್ಲ. ದಿನಕ್ಕೆ ಐದು ಬಾರಿ ನಮಾಜು ಮಾಡುವುದು. ಶುಕ್ರವಾರ ಮಸೀದಿಗೆ ಹೋಗುವುದು, ಮುಸ್ಲಿಂರ ನಂಬಿಕೆಗಳನ್ನು ನಾನು ನಂಬುವುದು. ಯಾಕೆಂದರೆ ನಮ್ಮಪ್ಪ ನಂಬುತ್ತ ಇರುವ ಕಾರಣಕ್ಕಾಗಿ ನನಗೆ ತಪ್ಪು ಅಂತ ಅನಿಸಿಲ್ಲ. ಆದರೆ ವಾಸ್ತವ ಹೀಗಿಲ್ಲ.
ಸುಮಾರು ಮೂವತ್ತೈದು ವರ್ಷಗಳ ಹಿಂದೆ ನಾನು ಕಥೆ ಕಾದಂಬರಿಗಳನ್ನು ಬರೆಯಲಿಕ್ಕೆ ಆರಂಭಿಸಿದಾಗ ನನ್ನ ಮುಂದಿನ ಪ್ರಶ್ನೆಗಳು ಇವು. ಯಾವುದೇ ನಿಲುವಿಗೆ ಬದ್ಧನಾಗಿ ಬರೆಯುವಾಗ ಸೃಜನಶೀಲತೆ ಸತ್ತು ಹೋಗುತ್ತೆ ಎಂಬಂತಹ ವಾದವನ್ನು ನಾನು ಕೇಳಿದ್ದೇನೆ ಅದರ ಜೊತೆಗೆ ಬದುಕು ಬದಲಾವಣೆ ಮಾಡುವುದು ಸಾಧ್ಯವಿಲ್ಲ ಅಂತ ಹೇಳುತ್ತಲೇ ನಿರ್ಧಿಷ್ಟ ನಿಲುವುಗಳಿಗೆ ಬದ್ಧವಾಗಿ ಬರೆಯಲ್ಪಟ್ಟ ನಮ್ಮ ಎಲ್ಲಾ ಪುರಾಣಗಳು, ಕುರಾನ್ಗಳು, ಬೈಬಲ್ಗಳು ನಮ್ಮೆಲ್ಲರ ಮೇಲೆ ಎಷ್ಟೊಂದು ಪ್ರಭಾವ ಬೀರಿದೆ ಎಂಬುದನ್ನು ಕೂಡಾ ನಾನು ಏಕಕಾಲದಲ್ಲಿ ಅರಿತಿದ್ದೆ. ಹಾಗಾಗಿ ನಾನು ಕೆಲವು ನಿರ್ಧಿಷ್ಟ ನಿಲುವುಗಳಿಗೆ  ಬದ್ಧನಾಗಿಯೇ ಕಥೆಗಳನ್ನು ಬರೆಯಲಿಕ್ಕೆ ಆರಂಭ ಮಾಡಿದೆ.
ನನ್ನ ಎದುರಿಗೆ ಆಗ ಎರಡು ಗುರಿಗಳು ಇದ್ದವು. ಒಂದು ಕನ್ನಡದ ಓದಿಗೆ ಅದುವರೆಗೆ ಅಷ್ಟೊಂದು ಪರಿಚಯವಿಲ್ಲದ ಜನ ಸಮೂಹವೊಂದನ್ನು ಉಳಿದವರಿಗೆ ಪರಿಚಯಿಸುವುದು. ಮತ್ತು ಕನ್ನಡದ ಓದಿಗೆ ಬಹುಪಾಲು ಕುರುಡರಾಗಿದ್ದ ಆ ಮುಸ್ಲಿಮರನ್ನು ಅದೇ ಜನ ಸಮೂಹ ಓದುವಂತೆ ಪ್ರೇರೆಪಿಸುವುದು. ಮೊದಲ ಗುರಿಯಿಂದಾಗಿ ಮುಸ್ಲಿಮರ ಬಗ್ಗೆ ಮುಸ್ಲಿಮೇತರರ ಬಗ್ಗೆ ಇರುವ ಕೆಲವೊಂದು ತಪ್ಪು ಕಲ್ಪನೆಗಳನ್ನು ನಿವಾರಿಸಿ. ಮಸ್ಲಿಮರಲ್ಲಿ ಕೂಡಾ ಒಳ್ಳೆಯವರು ಇರ್ತಾರಾ? ಎಂಬ ಪ್ರಶ್ನೆಯನ್ನು ಹುಟ್ಟಿಸುವುದು ಎರಡನೆ ಗುರಿಯಿಂದಾಗಿ ಮುಸ್ಲಿಮರಿಗೆ ತನ್ನ ತಪ್ಪುಗಳನ್ನು ತಾವೇ ಅರಿತುಕೊಳ್ಳುವುದು. ನೋಡಿ ನಾವು ಎಷ್ಟೊಂದು ದರಿದ್ರವಾಗಿ ಬದುಕುತ್ತಾ ಇದ್ದೇವಾ ಅಂತ ಅವರನ್ನು ಮುಟ್ಟಿಕೊಳ್ಳುವಂತೆ ಮಾಡುವುದು. ಒಟ್ಟಿನಲ್ಲಿ ಎರಡು ದೋಣಿಗಳ ಮೇಲೆ ಕಾಲಿಟ್ಟು ಹುಟ್ಟು ಹಾಕುವಂತೆ ಒಂದು ಕೆಟ್ಟ ದೈರ್ಯ.
ಹೌದು ಅವರು ಹಾಗಿಲ್ಲ ಅಂತ ಬೇರೆಯವರಿಗೆ ಹೇಳುವುದು ಬಹಳ ಸುಲಭ. ಇಷ್ಟ ಇದ್ದವನು ಕೇಳ್ತಾನೆ ಇಲ್ಲದಿದ್ದರೆ ಬಿಡ್ತಾನೆ. ಆಸಕ್ತಿ ಇಲ್ಲದವ ನನ್ನ ಮಾತನ್ನು ಕೇಳಲಿಕ್ಕೆ ಹೋಗೋದಿಲ್ಲ. ಆದರೆ ಒಂದು ಜನ ಸಮೂಹವನ್ನು  ಅವರಿಗೆ ಪರಿಚಯ ಮಾಡ್ತಾ, ಹೌದ ನಾವು ಹೀಗಿದ್ದೇವಾ? ಅಂತ ಮುಟ್ಟಿ ನೋಡಿಕೊಳ್ಳುವಂತೆ ಮಾಡುವುದು ಸುಲಭದ ಸಂಗತಿಯಲ್ಲ. ಯಾಕಂದ್ರೆ ಯಾವುದೇ ಒಂದು ಸಮಾಜ ತನ್ನ ಬದುಕಿನ ವಿಧಾನಗಳನ್ನು ಬಹಿರಂಗವಾಗಿ ಚರ್ಚೆ ಮಾಡುವುದನ್ನು  ಇಷ್ಟಪಡುವುದಿಲ್ಲ ಮತ್ತು ವಿಮರ್ಶೆ ಮಾಡುವವ ತನ್ನ ಜನಾಂಗದ ಒಳಗೆನೇ ಇದ್ದಾಗ ಅವನ ಬಗ್ಗೆ ಹೆಚ್ಚು ಅನುಮಾನ, ಅವನ ಬಾಯಿ ಮುಚ್ಚಿಸುವ ಎಲ್ಲಾ ಪ್ರಯತ್ನ ಮಾಡುತ್ತದೆ. ಅದಕ್ಕಾಗಿ ಈ ಅನುಮಾನದ ನಿವಾರಣೆ ಆಗಬೇಕಾದರೆ ತಾನು ವಿಮರ್ಶೆ ಮಾಡುವ, ತಾನು ಹುಟ್ಟಿದ ಧರ್ಮವನ್ನು ವಿಮರ್ಶೆ ಮಾಡುವಷ್ಟು ಕಠುವಾಗಿ, ಇನ್ನೊಂದು ಧರ್ಮದ ಬಗ್ಗೆ ಅದೇ ರೀತಿಯ ಕಠುವಾದ ಮಾತುಗಳ ಬಗ್ಗೆ ಬರೆಯಬೇಕಾಗುತ್ತದೆ. ಯಾಕಂದ್ರೆ ನಾನು ಯಾರನ್ನು ಉದ್ದೇಶಿಸಿ ಬರೆಲಿಕ್ಕಿದ್ದೇನೆ ಅವರಿಗೆ ನನ್ನ ಬಗ್ಗೆ ನಂಬಿಕೆ ಬರಬೇಕಾದರೆ ನಾನು ಇನ್ನೊಂದು ತರದ ತಂತ್ರವನ್ನು ಮಾಡಬೇಕಾಗುತ್ತದೆ.
ಮೂವತ್ತೈದು ವರ್ಷಗಳ ಹಿಂದೆ ಇದು ನನ್ನ ತಂತ್ರ ಎಂದು ಯಾರಿಗೂ ಹೇಳಿಲ್ಲ. ಇವತ್ತು ಮೂವತ್ತೈದು ವರ್ಷ ಆಯಿತು. ಇನ್ನು ಹೇಳಬಹುದು. ಇದರಿಂದಾಗಿ ಏನಾಗುತ್ತೆ ಅಂತ ಹೇಳಿದ್ರೆ ಎರಡೂ ಕಡೆಗಳಲ್ಲಿ ಶತ್ರುಗಳ ಸಂಖ್ಯೆ ಜಾಸ್ತಿ ಆಗುತ್ತೆ.
ಮತ್ತೆ ನಾನು ಬರೆಯಬೇಕಾದುದು 8,10 ಪುಟಗಳ ಕಥೆಗಳು. ಒಂದು 200 ಪುಟದ ಲೇಖನದಲ್ಲಿ ಎಲ್ಲದಕ್ಕೂ ಸಮಜಾಯಿಸಿ ಬರೆಯಲಿಕ್ಕೆ ಸಾಧ್ಯವಾಗುತ್ತೆ ಆದರೆ 10 ಪುಟದ ಕಥೆಯಲ್ಲಿ ಅವನು ಒಳ್ಳೆಯವನಿರುತ್ತಾನೆ. ಅಂದಾಗ ಇನ್ನೊಂದು ವರ್ಗ ‘ಇವನ ಬ್ಯಾರಿ ಬುದ್ಧಿ ಬಿಟ್ಟಿಲ್ಲ’ ಅನ್ನುತ್ತೆ. ಈ ತರದ ಎಲ್ಲಾ ವಿಮರ್ಶೆಗಳನ್ನು ನಗುನಗುತ್ತಾ ನುಂಗಿಕೊಳ್ಳಬೇಕಾಯಿತು. ಅದಕ್ಕಾಗಿ ನಾನು ಬೇರೆಯವರ ಉಸಾಬರಿ ಬೇಡಂತ ನನ್ನದೇ ಆದಂತಹ ಮುತ್ತುಪ್ಪಾಡಿ ಎಂಬಂತಹ ಗ್ರಾಮವನ್ನು ಸ್ಥಾಪಿಸಿದೆ. ಮುತ್ತುಪ್ಪಾಡಿ ಊರಿನ ತುಂಬ ಮನುಷ್ಯರನ್ನು ಹುಟ್ಟಿಸಿದೆ. ರಸ್ತೆ, ಬಾವಿ, ಎಲ್ಲಾ ಕಟ್ಟಿಸಿದೆ. ಅವರಿಗೆ ನಂಬಲೆಂದು ಎಲ್ಲಾ ದೇವರುಗಳನ್ನು ಹುಟ್ಟಿಸಿದೆ. ಈ ದೇವರುಗಳನ್ನು ಬೇರೆ ಬೇರೆಯಾಗಿ ಪೂಜಿಸಲು ಮಂದಿರ. ಪ್ರಾರ್ಥಿಸಲು ಮಸೀದಿ, ಓದಲು ಶಾಲೆ, ಆಡಲು ಮೈದಾನ, ಈಜಲು ಹೊಳೆ, ಹಾರಲು ಕೆರೆ, ಮಲಗಲು ಆಸ್ಪತ್ರೆ, ಸುಡಲು ಸ್ಮಶಾನ, ಆಳಲು ಪೊಲೀಸ್ ಏನೇನು ಬೇಕು ಅದೆಲ್ಲಾ ಒದಗಿಸಿದೆ. ಅನಂತರ ಆ ಮನುಷ್ಯರನ್ನು ಸ್ವತಂತ್ರವಾಗಿ ಏನ್ಬೇಕಾದ್ರು ಮಾಡ್ಕೊಳ್ಳಿ ಅಂತ ಹೇಳಿ ಅವರ ಕಥೆಗಳನ್ನು ಬರೆದು ಪತ್ರಿಕೆಗಳಲ್ಲಿ ಕಳಿಸ್ಲಿಕ್ಕೆ ಆರಂಭ ಮಾಡಿದೆ.
ನವಭಾರತಿಯ ಮಲ್ಯರು, ಉದಯವಾಣಿಯ ಬನ್ನಂಜೆಯವರು, ಪ್ರಜಾವಾಣಿಯ ರಂಗನಾಥರಾಯರು, ಸುಧಾದ ಎಂ.ಬಿ. ಸಿಂಗ್, ತುಷಾರದ ಈಶ್ವರಯ್ಯ, ಕಸ್ತೂರಿಯ ಪಾವೆಂ, ಮಲ್ಲಿಗೆಯ ದಿವಾಕರ ಮೊದಲಾದ ಸಂಪಾದಕರು ನಾನು ಬರೆದದ್ದನ್ನು ಪ್ರಕಟಿಸಿ ಮುತ್ತುಪಾಡಿಯ ಬದುಕನ್ನು ದಾಖಲಿಸಿದರು. ಸುಮಾರು 1975-95ರ ನಡುವೆ ನನ್ನ ಕಥೆ ಇಲ್ಲದ ಪತ್ರಿಕೆಗಳೇ ಇರ್ಲಿಕ್ಕಿಲ್ಲ. ಯಾವುದಾದರೊಂದು ಪತ್ರಿಕೆಯಲ್ಲಿ ನನ್ನ ಕಥೆ ಇರುತ್ತಿತ್ತು. ಅಷ್ಟು ಮಾತ್ರ ಅಲ್ಲ. ನನ್ನ ಬಹಳಷ್ಟು ಕಥೆಗಳ ಬಗ್ಗೆ ಸಂಪಾದಕರೇ ಓದುಗರ ಪ್ರತಿಕ್ರಿಯೆಗಳನ್ನು ಆರಂಭಿಸಿ ಚರ್ಚೆಗೆ ಅವಕಾಶ ಮಾಡಿಕೊಟ್ರು.
ಇಲ್ಲಿ ಏನಾಗಿದೆ ಅಂದ್ರೆ ಮುಸ್ಲಿಂ ಒಬ್ಬ ರ್ಯಾಶ್ನಲ್ ಆಗುವುದು ಅಂದ್ರೆ ಹಿಂದು ಆಗುವುದು ಎಂದೇ ನಂಬಿದಂತಹ ನನ್ನ ಗೆಳೆಯರು ಇಂತಹ ಸಂವಾದಗಳಲ್ಲಿ ಆಸಕ್ತಿಯಿಂದ ಭಾಗವಹಿಸಿದರು. ನನ್ನನ್ನು ಸಭೆಗೆ ಪರಿಚಯಿಸುವಾಗ “ಇವರು ಮಸ್ಲಿಂ ಆದರೂ ನಮ್ಮ ಹಾಗೆ” ಎಂದು ಹೆಮ್ಮೆಪಟ್ಟರು. ಇತ್ತೀಚೆಗೆ ಬೆಂಗಳೂರಲ್ಲಿ ಕುಮಾರವ್ಯಾಸ ಭಾರತ ಕುರಿತ ಪುಸ್ತಕ ಬಿಡುಗಡೆಯಾಗಿದೆ. ಸುಮಾರು 1800 ಪುಟದ ಬೃಹತ್ಗ್ರಂಥ. ಅದರ ಪುಸ್ತಕ ವಿನ್ಯಾಸ ನಾನು ಮಾಡಿದೆ. ಅದು ಮೊನ್ನೆ ಬಿಡುಗಡೆಯೂ ಆಯಿತು. ಅಲ್ಲಿಯ ಸಮಾರಂಭದಲ್ಲಿ ಮಾತೂ ಆಡಿದೆ. ಅದು ಪೇಪರಲ್ಲೂ ಬಂತು. ಎರಡು ದಿವಸ ಬಿಟ್ಟು ದಕ್ಷಿಣ ಕನ್ನಡದ ಒಬ್ಬರು ಹಿರಿಯರು ನನಗೆ ಫೋನ್ ಮಾಡಿದರು. ತುಳುವಿನಲ್ಲಿ “ಇರೆನ್ ಬ್ಯಾರಿ ಅಂದ್ ಪನ್ನಿನಾಯಗ್ ಮುಟ್ಟುಡು ಹಾಕೊಡು, ಈರ್ ನಮ್ಮ ಜಾತಿದಾರ್. ಇರೆನ್ ಪುದರ್ ಬೊಳುವಾರ್ ಆಚಾರ್ಲು.” ಅವರ ಮಾತಿನಲ್ಲಿ ಏನೂ ಕೊಂಕಿಲ್ಲ. ಬಹಳ ಪ್ರೀತಿಯಿಂದಲೇ, ಅಭಿಮಾನದಿಂದಲೇ ಹೇಳಿದ್ರು. ನಾನು ಅವರಿಗೆ ಥ್ಯಾಂಕ್ಸ್ ಹೇಳಿದೆ. ಅಷ್ಟೇ. ಏನೂ ಹೇಳ್ಳಿಕ್ಕೆ ಹೊಳೆಯಲಿಲ್ಲ. ಯಾಕೆಂದ್ರೆ ಇವನು ಮಸೀದಿಗೆ ಹೋಗುವುದಿಲ್ಲ ಅಂತ ಸಂತೋಷ ಪಡುತ್ತಿದ್ದಂತಹ ನನ್ನ ಗೆಳೆಯರು, ನನ್ನ ಬ್ಯಾಂಕ್ ಸಹೋದ್ಯೋಗಿಗಳು ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆಯು ಆದಾಗ ಪ್ರಸಾದ ಕೊಟ್ಟರೆ ನಾನು ಪೂಜೆ ಪ್ರಸಾದ ಬೇಡ ಅಂತ ಹೇಳಿದರೆ ಅನುಮಾನ ಬರುತ್ತೆ ಅಂತ ಹೇಳ್ಕೊಂಡು. ನನಗೆ ಶುಗರ್ ಕಾಯಿಲೆ ಶುರುವಾಗಿದೆ ಅನ್ತಿದ್ದೆ. ಪ್ರಕಟವಾದ ಕಥೆಯ ಹೀಗೆ ಆಶಯ ಹಿಂದೂ ಪರವಾಗಿದೆ ಅನಿಸಿದಾಗೆಲ್ಲಾ ಒಂದು ತರದ ಹೆಗ್ಗಳಿಕೆ. ಮತ್ತೊಂದು ಕಡೆ ಮುಸ್ಲಿಂ ಪರವಾಗಿದೆ ಅನಿಸಿದಾಗಲ್ಲಾ ಇನ್ನೊಂದು ತರದ ಹೆಗ್ಗಳಿಕೆ.
ದೇಶ ವಿಭಜನೆಯ ನೋವು ಇದೆ ಅಲ್ಲ ಅದು ನಮ್ಮ ಕನ್ನಡಿಗರನ್ನು ಬಹಳಷ್ಟು ಕಾಡಿದ ಹಾಗಿಲ್ಲ. ಆ ಸಾವು-ನೋವು ನಮ್ಮ ಹೆಚ್ಚಿನ ಮಂದಿಗಿಲ್ಲ. ಏಕೆಂದರೆ ನಮಗೆ ದೇಶ ವಿಭಜನೆಯ ಒಂದು ಪುರಾಣ ಅಷ್ಟೆ ಈ ಪುರಾಣ ನಮ್ಮ ಬದುಕಿನಲ್ಲಿ ಎಷ್ಟು ಪರಿಣಾಮ ಬೀರುತ್ತೆ ಅಂದ್ರೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವಾಗ ಕೂಡ ಈ ಪುರಾಣ ಅಡ್ಡವಿರುತ್ತದೆ. ದಕ್ಷಿಣ ಕನ್ನಡದಲ್ಲಿ ಹಸು ಮತ್ತು ಜ್ಯೂಸ್ ಈಗ ಸಮಸ್ಯೆ ನಮಗೆ. ಒಂದು ಹುಡುಗ ಮತ್ತು ಹುಡುಗಿಯೊಟ್ಟಿಗೆ ಜ್ಯೂಸ್ ಕುಡಿಯಲು ಹೋದರೆ ನಮ್ಮಲ್ಲಿ ಕೋಮುಗಲಭೆ ಆಗುತ್ತದೆ. ಇನ್ನೊಂದು ದನದ ಬಗ್ಗೆ, ನಿಮಗೆ ಗೊತ್ತಿದೆ ಯಾಕೆ ಆಗುತ್ತೆ ಅಂತ.
ನಮ್ಮ ಪುರಾಣಗಳು ನಮ್ಮ ಬದುಕನ್ನು ಎಷ್ಟು ನಿಯಂತ್ರಣ ಮಾಡ್ತಾ ಇದೆ ಅಂತ ಹೇಳಿದ್ರೆ ಹಿಂದೆ ಒಂದು ಪ್ರಜಾಮತ ಎಂಬ ಪತ್ರಿಕೆ ಇತ್ತು. ಅದರಲ್ಲಿ ಗುಪ್ತ ಸಮಾಲೋಚನೆ ಒಂದು ಪ್ರಶ್ನೆ ವಿಭಾಗ ಇತ್ತು. ಅಲ್ಲಿ ಬೇರೆ ಬೇರೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅದಕ್ಕೊಂದು ಪತ್ರ ಬರೆದಿದ್ದರು. “ನಾನು ಒಬ್ಬನನ್ನು ಪ್ರೀತಿಸುತ್ತಿದ್ದೇನೆ. ಅವರು ಮುಸ್ಲಿಮರಾಗಿದ್ದಾರೆ. ಒಳ್ಳೆಯವರು” ಏನು ಹಾಗಂದ್ರೆ? ಆ ಹುಡುಗಿದ್ದು ಏನೂ ತಪ್ಪಿಲ್ಲ ಅವಳಿಗೆ ಹಾಗೆ ಹೇಳ್ ಕೊಟ್ಟಿದ್ದಾರೆ. ಈವತ್ತಿನ ದಿನಗಳಲ್ಲಿ ಕನ್ನಡ ಪೇಪರ್ ಓದುತ್ತಾ ಇರುವವ ಯಾರಾದರೂ ಮಸ್ಲಿಮನನ್ನು ಪ್ರೀತಿ ಮಾಡಲು ಸಾಧ್ಯನ? ನಿನ್ನೆ ಮೊನ್ನೆ ಬಾಂಬೆಯಲ್ಲಿ ಆದಂತಹ ಈ ಅನ್ಯಾಯವನ್ನು ನೋಡಿ, ಅಲ್ಲಿ ಯಾವುದೋ ಒಂದು ಆ ಕಟ್ಟಡದ ಒಳಗೆ ಮಗಳು ಉಳ್ಕೊಂಡಿದ್ದಳು. ಅಪ್ಪ ಹೋಗಿ ಅವಳನ್ನು ಹೊರಗೆ ತರಲು ಪ್ರಯತ್ನ ಮಾಡಿದ. ಅಪ್ಪ ಸತ್ತು ಹೋದ. ಆ ಮಗಳು ಜೀವನಪೂರ್ತಿ ಮುಸ್ಲಿಮನನ್ನು ಪ್ರೀತಿಸಲು ಸಾಧ್ಯನ? ಆ ಭಯೋತ್ಪಾದಕರಿಗೆ ಏನು ಬೇಕಾಗಿದೆ ಅರ್ಥವಾಗಿಲ್ಲ ಅಥವಾ ಇದನ್ನು ಹೀಗೆ ಹೇಳಬಹುದಾ ಅಲ್ಲಿ ನಿರಪರಾಧಿಗಳು ಸಾಯ್ತ ಇದ್ದಾರೆ. ನಿರಪರಾಧಿಗಳನ್ನು ಕೊಲ್ಲುವುದು ತಪ್ಪು ಅಪರಾಧಿಗಳನ್ನು ಕೊಲ್ಲುವುದು ಸರಿನಾ? ಇಂತಹ ಗೊಂದಲ. ನಾವು ಭಯೋತ್ಪಾದನೆಯನ್ನು ಯಾವ ರೀತಿ ವಿರೋಧಿಸುತ್ತಿದ್ದೇವೆ ಅಂತ ಕೇಳಿದ್ರೆ ತುಂತುರು ಮಳೆ ಬೀಳ್ತಾ ಇದೆ. ರಸ್ತೆಯಲ್ಲಿ ಹೋಗ್ಬೇಕಾದ್ರೆ ತಲೆ ಮೇಲೆ ಕೈ ಹಿಡ್ಳೊಳ್ತಾದ್ದೇವೆ. ಎಲ್ಲಿ ತನಕ ನಾವು ನಮ್ಮ ಧರ್ಮಗಳನ್ನು ಅಲ್ಲಿಯ ಕಟ್ಟುಪಾಡುಗಳನ್ನು ಬಿಟ್ಟು ಹೊರ ಬರುವುದಿಲ್ಲವೋ ಅಲ್ಲಿಯ ತನಕ ಇದು ಎಲ್ಲಾ ಇದ್ದದ್ದೆ. ನಮಗೆ ಈ ಕಾರಣಗಳು ಗೊತ್ತು. ನಮ್ಮ ಸರಕಾರ ಇದಕ್ಕೆ ಏನು ಮಾಡ್ತಿದೆ ಎಂಬುದು ಗೊತ್ತು.
ನನ್ನ ಯಾವುದೆ ಕತೆ 20 ಪುಟ 30 ಪುಟ ಇರುವ ಕಾರಣ ಯಾವ ಭಾಗ ಓದಿದರೂ ನಿಮಗೆ ಏನೂ ಅರ್ಥ ಆಗ್ಲಿಕ್ಕಿಲ್ಲ. ಆದ್ರೂ ನಾನು ‘ನನ್ನ ದೇವರುಗಳ ರಾಜ್ಯದಲ್ಲಿ’ ಎಂಬ ಒಂದು ಕತೆಯ ಸಣ್ಣ ಭಾಗವನ್ನು ಓದುತ್ತೇನೆ.
ಆದಿಯಲ್ಲಿ ದೇವರು ಆಕಾಶವನ್ನು ಭೂಮಿ ತಾಯಿಯನ್ನು ಸೃಷ್ಟಿಸಿದನು. ಆ ಬಳಿಕ ಬೆಳಕಾಗಲಿ ಎಂದನು. ಬೆಳಕಾಯಿತು. ಕತ್ತಲು ಆಗಲಿ ಎಂದನು ಕತ್ತಲಾಯಿತು. ಬಹಳ ಸಂತೋಷಪಟ್ಟ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ, ಅವನಿಗೆ ಸಿರಿವಂತಿಗೆ ಮತ್ತು ಬಡತನಗಳನ್ನು ಸುಖ ಮತ್ತು ದುಃಖಗಳನ್ನು ಆರೋಗ್ಯ ಮತ್ತು ರೋಗಗಳನ್ನು ಒಂದೊಂದಾಗಿ ಅನುಗ್ರಹಿಸಿದನು. ಕೊನೆಯಲ್ಲಿ ನೆಲದ ಮೇಲೆಲ್ಲಾ ದೇವಾಲಯಗಳನ್ನು ಇಗಜರ್ಿಗಳನ್ನು ಮಸೀದಿಗಳನ್ನು ಸೃಷ್ಟಿ ಮಾಡಿ ಮುಂದಿನದೆಲ್ಲವೂ ತನ್ನ ಅಣತಿಯಂತೆಯೇ ನಡೆಯುತ್ತಿರಲಿ ಎಂದು ವಿರಮಿಸಿಕೊಂಡನು.
ಎಷ್ಟೋ ಮಿಲಿಯ ವರ್ಷಗಳ ಬಳಿಕ ಈ ದೇವರ ಕೃಪೆಯಿಂದ ಮುತ್ತುಪಾಡಿ ಎಂಬ ಊರಿನಲ್ಲಿ ಒಂದು ಮರದ ಕಾಖರ್ಾನೆಯು ಆರಂಭವಾಯಿತು. ಕಾಖರ್ಾನೆಯ ಮಾಲೀಕನು ಬಹಳ ಪುಣ್ಯವಂತನಾಗಿದ್ದನು. ಅವನ ಕಾಖರ್ಾನೆಯಲ್ಲಿ ಸುಮಾರು ಇನ್ನೂರು ಜನರು ಕೆಲಸ ಮಾಡುತ್ತಿದ್ದರು. ಮಾಲೀಕನು ಆಗಾಗ ಅನ್ನಸಂತರ್ಪಣೆ, ದೇವರ ಉತ್ಸವಗಳನ್ನು ಏರ್ಪಡಿಸುತ್ತಿದ್ದನು. ಈ ಪುಣ್ಯವಂತ ಮಾಲೀಕನ ಮರದ ಕಾಖರ್ಾನೆಯಲ್ಲಿ ಜೋಸೆಫ್ ಡಿಕಾಸ್ಟ್ ಎಂಬ ಯುವಕನು ದಿನವೊಂದಕ್ಕೆ ನಾಲ್ಕು ರೂ. ಕೂಲಿ ಸಂಪಾದಿಸುತ್ತಿದ್ದನು. ದೇವರ ಇಚ್ಚೆಯಂತೆ ಅವನು ಬಡವನೂ, ಆರೋಗ್ಯವಂತನೂ ಆಗಿದ್ದನು. ಅವನ ತಂದೆತಾಯಿಗಳು ಸ್ವರ್ಗದಲ್ಲಿದ್ದರು.
ಆ ದೇವರು ಹೇಳಿದನು ಅದು ಬೀಳಲಿ. ದೊಡ್ಡಮರದ ದಿಮ್ಮಿಯೊಂದು ಉರುಳಿ ಬಿತ್ತು. ಜೋಸೆಫ್ ಡಿ ಕಾಸ್ಪನನ್ನು ಸರಕಾರಿ ಆಸ್ಪತ್ರೆಗೆ ಹೊತ್ತುಕೊಂಡು ಹೋದರು. ಅವನು ಪ್ರಜ್ಞೆ ಕಳೆದುಕೊಂಡಿದ್ದನು… ದೇವರು ದಯಮಾಡಿದನು. ಅವನಿಗೆ ಪ್ರಜ್ಞೆ ಮರಳಿತು ಮತ್ತು ತನ್ನ ಬಲಕಾಲಿನ ಮೊಣಕಾಲ ಬಳಿ ಕತ್ತರಿಸಿದ್ದಾರೆ ಎಂದು ಅರಿತುಕೊಂಡನು. ನೋವು ಮತ್ತು ದುಃಖದಿಂದ ಅಳುತ್ತಾ ಮಲಗಿದನು. ಮರದ ಕಾಖರ್ಾನೆಯು ಪರಿಹಾರವೆಂದು ಇನ್ನೂರು ರೂ. ಕೊಟ್ಟಿದ್ದನು. ನಾಲ್ಕು ತಿಂಗಳಲ್ಲಿ ಖಚರ್ಾಯಿತು. ಮರುದಿನ ಕುಂಟ ಜೋಸೆಫ್ನನ್ನು ಆಸ್ಪತ್ರೆಯಿಂದ ಡಿಸ್ಚಾಜರ್್ ಮಾಡಿದರು. ದೇವರು ಕರುಣಾಮಯಿ, ಕುಂಟ ಜೋಸೆಫ್ನಿಗೆ ಎಂದಿನಂತೆ ಹಸಿವಾಗುತ್ತಿತ್ತು. ಕೆಲಸ ಮಾಡಲು ಸಾಧ್ಯವಿಲ್ಲವಾದರೂ  ಅವನು ಸಂಪಾದಿಸುವುದು ಅಗತ್ಯವಾಗಿತ್ತು. ಲೋಕದಲ್ಲಿ ಇಂತವರಿಗಾಗಿಯೇ ಕೆಲವು ಅನುಕೂಲತೆಯನ್ನು ಉಂಟುಮಾಡಿತ್ತು. ಭಿಕ್ಷೆ ಬೇಡಿಕೊಂಡು ಅವರು ಬದುಕುವಂತೆ ನೋಡಿಕೊಳ್ಳಲಾಗುತ್ತಿತ್ತು. ಅದಕ್ಕಾಗಿ ಸಹಸ್ರಾರು ಸಿರಿವಂತರನ್ನು ಅವರ ಹೃದಯದಲ್ಲಿ ಕರುಣೆಯನ್ನು ದೇವರು ಉಂಟುಮಾಡಿದರು.
ಸಾವಿರಾರು ಸಂಘ ಸಂಸ್ಥೆಗಳು, ಅನಾಥಾಲಯಗಳು, ಭಿಕ್ಷುಕರನ್ನು ಸ್ವಾಗತ ಮಾಡ್ತಾ ಇದ್ರು. ಕುಂಟ ಜೋಸೆಫ್ನ ಹೃದಯದಲ್ಲಿ ನಾಚಿಕೆ ಇತ್ತು. ಆದ್ದರಿಂದ ಅವನಿಗೆ ಹುಟ್ಟೂರಲ್ಲಿ ಭಿಕ್ಷೆ ಬೇಡಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವನು ದೊಡ್ಡ ಪಟ್ಟಣವೊಂದಕ್ಕೆ ಹೋಗುವ ಬಸ್ಸ್ ಹತ್ತಿದನು. ದೇವರ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆ, ಪ್ರವಾಹ, ಯುದ್ಧ, ಸಂಗೀತ ಇತ್ಯಾದಿಗಳು ನಡೆಯುತ್ತಲೇ ಇದ್ದವು. ದೇವರು ಎಲ್ಲವನ್ನು ನಿಯಂತ್ರಿಸುತ್ತಾ ಇದ್ದನು. ಸುಳ್ಳು, ಕಳವು ಇತ್ಯಾದಿಗಳಿಗಾಗಿಯೇ ಅವನು ನೀತಿಶಾಸ್ತ್ರವನ್ನು ರಚಿಸಿಕೊಟ್ಟಿದ್ದನು. ಭಿಕ್ಷುಕರನ್ನು ದೇವರು ಅತಿಯಾಗಿ ಪ್ರೀತಿಸುತ್ತಿರುವುದರಿಂದಾಗಿ ಕುಂಟ ಜೋಸೆಫ್ನನ್ನು ಸುಖವಾಗಿಯೇ ಇಟ್ಟರು.
ದೇವರು ಹೇಳಿದನು ಎರಡು ಮರಣಗಳಾಗಲಿ; ಇಬ್ಬರು ಸತ್ತು ಹೋದರು. ಮುಂಜಾನೆ ಎರಡು ಅನಾಥ ಶವಗಳು ದೊಡ್ಡ ಪಟ್ಟಣದಲ್ಲಿ ಕಾಣಿಸಿಕೊಂಡವು. ಬಸ್ಸ್ಟಾಂಡಿನ ಟಿಕೇಟ್ ಕೊಡುವ ಕಿಟಕಿಯ ಕೌಂಟರ್ನ ಎದುರಿಗೆ ಸಿಮೆಂಟ್ ಕಟ್ಟೆಯ ಮೇಲೆ ಒಂದು ಹೆಣವೂ, ಪಕ್ಕದ ಅಗಲ ರಸ್ತೆಯಲ್ಲಿರುವ ಬದ್ರಿಯಾ ಕ್ಲೋತ್ ಸೆಂಟರಿನ ಜಗಲಿಯ ಮೇಲೆ ಮತ್ತೊಂದು ಹೆಣವೂ ಬಿದ್ದುಕೊಂಡಿರುವುದನ್ನು ಜನರು ನೋಡಿದರು. ದೇವರು ಪರಿಶುದ್ಧನಾಗಿದ್ದನು. ಅವನು ಪಾಪಿಗಳನ್ನು ಕ್ಷಮಿಸುತ್ತಿದ್ದನು. ಅವನು ಹೇಳಿದನು-ಸತ್ತವರಿಗಾಗಿ ಅಳಬೇಡಿರಿ, ಬಡಕೊಳ್ಳಬೇಡಿರಿ. ನನ್ನ ಆಜ್ಞೆಗಳನ್ನು ಮನಃಪೂರ್ವಕವಾಗಿ ಪಾಲಿಸಿರಿ.
ದೇವರು ಪವಿತ್ರ ಗ್ರಂಥದಲ್ಲಿ ಬರೆದಿಟ್ಟನು “ಅಲ್ಲಾಹು ನಿಮಗೆ ಭೂಮಿಯನ್ನು ಹಾಸಿಗೆಯನ್ನಾಗಿಯೂ, ಆಕಾಶವನ್ನು ಮೇಲ್ಚಾವಣಿಯನ್ನಾಗಿಯೂ ರಚಿಸಿಕೊಟ್ಟನು. ಅವನು ನಿಮಗೆ ಸುಂದರವಾಗಿ ಸ್ವರ್ಗವನ್ನು ನಿಮರ್ಿಸಿರುತ್ತಾನೆ. ಆಮೆನ್”
ಭೂಮಿಯ ಮೇಲೆ ಒಡೆತನ ಮತ್ತು ಅಧಿಕಾರಕ್ಕಾಗಿ ತನ್ನ ಕಣ್ಣು ಕಿವಿಗಳನ್ನಷ್ಟೇ ಪ್ರಮಾಣವನ್ನಾಗಿರಿಸಿಕೊಂಡು, ನಿನ್ನದೆನ್ನಲಾದ ದಿವ್ಯ ವಾಣಿಯನ್ನು ಅವಿವೇಕದಿಂದ ವಿಚಾರರಹಿತವಾಗಿ ಉದ್ಧರಿಸುವವರನ್ನು  ಅಶಕ್ತರನ್ನು ದುಃಖಕ್ಕೆ ದೂಡುವವರನ್ನು ನರಕದ ಕೆಂಡದ ರಾಶಿಯ ಮೇಲೆ ನಿಲ್ಲಿಸು.
(ಆಳ್ವಾಸ್ ನುಡಿಸಿರಿ ಸಮ್ಮೇಳನದ ಕಥಾ ಸಮಯದಲ್ಲಿ ಮಾತನಾಡುತ್ತಾ ಹಂಚಿಕೊಂಡ ಅನಿಸಿಕೆ)

‍ಲೇಖಕರು avadhi

November 21, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

 1. ಸುಘೋಷ್ ಎಸ್. ನಿಗಳೆ

  ಬೋಳುವಾರು ಅವರ ಕೃತಿಯೊಂದು ನನಗೆ ದ್ವಿತೀಯ ಪಿಯುಸಿಯಲ್ಲಿ ಪಠ್ಯವಾಗಿತ್ತು. ಕ್ಲಾಸಿನಲ್ಲಿ ಆ ಕೃತಿ ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟದ್ದು, ಇಂದಿಗೂ ನೆನಪಿದೆ. ಅಂದೂ ಇಂದೂ ಬೋಳುವಾರು ಮಹಮ್ಮದ್ ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರು.

  ಪ್ರತಿಕ್ರಿಯೆ
 2. Berlinder

  “You can choose your friends but not your parents and co-born”. Parents do not give birth to a child and not to a Gandhi, Mohammed, Krishna or Jesu. Parents cannot even select which one of their infants should be a Gandhi etc.
  Your article is highly interesting, carries enormous ssignificance.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: