ನನಗೆ ಇಲ್ಲಿ ಬದುಕು ಸಿಕ್ಕಿತು..

ನನ್ನ ಮಹಾರಾಜಾ ಕಾಲೇಜು ದಿನಗಳು

parameshvara guruswamy

ಪರಮೇಶ್ವರ ಗುರುಸ್ವಾಮಿ 

ಅವು ಜಾತಿಯ ಒಳಸುಳಿಗಳನ್ನು, ಅಗೋಚರ ಜಾತಿಬಂಧದ ಕುಟಿಲತೆಯ, ಜಾತಿಯಾಧಾರಿತ ಪಕ್ಷಪಾತೀ ಜಾಲಗಳನ್ನು, ಅದರಿಂದ ಪ್ರಕಟವಾಗುವ ಸಣ್ಣತನಗಳನ್ನು, ಅಸೂಯೆ ದ್ವೇಷಗಳನ್ನು ಅರಿಯಲು ನನ್ನನ್ನು ತೊಡಗಿಸಿದ ದಿನಗಳು. ಮಹಾರಾಜಾ ಕಾಲೇಜಿನ ದಿನಗಳು. ಲೋಹಿಯಾ, ಮಾರ್ಕ್ಸ್, ಲೆನಿನ್, ಮಾವೊ, ಕ್ಯಾಸ್ಟ್ರೊ, ಚೆ ಗೆವಾರ ಮುಂತಾದವರ ಪರಿಚಯವಾದ ದಿನಗಳೂ ಸಹ.

ಅಲ್ಲಿಯವರೆಗೆ ಜಾತಿ ಎಂಬುದು, ಹುಟ್ಟಿದವರು ಹೇಗೆ ಗಂಡು ಅಥವ ಹೆಣ್ಣು ಎಂಬ ವಿಂಗಡಣಗೆ ಸೇರುತ್ತಾರೊ ಹಾಗೆ, ನಿಸರ್ಗಸಹಜವಾದ ವಿಂಗಡಣೆ ಎಂಬ ಅನಿಸಿಕೆ ಇತ್ತು.

ಕ್ಲಿಕ್: ಅಲೆಕ್ಸ್

ಕ್ಲಿಕ್: ಅಲೆಕ್ಸ್

ಆ ದಿನಗಳಿಗೆ ಮೊದಲು ಉಪಾಧ್ಯಾಯ ದೀನ ದಯಾಳ ಬಂಧು ಅವರ ಬಗ್ಗೆ ಅಭಿಮಾನವಿದ್ದ ದಿನಗಳು, ದಯಾನಂದ ಸರಸ್ವತಿಯವರಿಂದಾಗಿ ಜನಿವಾರ ತೊಟ್ಟು ಗಾಯತ್ರಿ ಮಂತ್ರ ಕಲಿತು ಯಜ್ಞಗಳಲ್ಲಿ ಭಾಗವಹಿಸಿ ದಿನಗಳನ್ನು ಕಳೆದಿದ್ದೆ.
ಈ ಮಹಾರಾಜಾ ಕಾಲೇಜೊಂದು ನನ್ನ ವ್ಯಕ್ತಿತ್ವದ ಕುಲುಮೆ. ಅಲ್ಲೇ ನನಗೆ ಮಂಜುಳಾ ಸಹ ಸಿಕ್ಕಿ ನಾವಿಬ್ಬರು ಜೊತೆಯಾದದ್ದು.

ಮೈದಾನದಲ್ಲಿ ಆಟಗಾರನಾಗಿದ್ದವನು ಬದುಕಿನಲ್ಲಿ ನೋಟಗಾರನಾದದ್ದು ಮಹಾರಾಜಾ ಕಾಲೇಜಿನ ದಿನಗಳಲ್ಲಿ.

ಫ಼ುಟ್ಬಾಲ್ ಮ್ಯಾಚೊಂದರಲ್ಲಿ ಅಶೋಕಪುರಂ ಟೀಮಿನ ಆಟಗಾರನೊಬ್ಬ ಆಕಸ್ಮಿಕವಾಗಿಯೋ ಉದ್ದೇಶಪೂರ್ವಕವಾಗಿಯೋ ನನಗೆ ಗಾಯ ಮಾಡಿದಾಗ ನಮ್ಮ ಕಾಲೇಜಿನ ಅಭಿಮಾನಿಗಳು ಅಶೋಕಪುರಂ ಆಟಗಾರರನ್ನು ಅಟ್ಟಾಡಿಸಿಕೊಂಡು ಚಚ್ಚಿದಾಗ ಬೀಗಿದ್ದವನು ದಲಿತ ಸಂಘರ್ಷ ಸಮಿತಿಯ ಚಳುವಳಿ ಬಹಳ ಮುಖ್ಯ (ಅಂದಿನ ಸ್ವರೂಪದಲ್ಲಿ) ಎಂದು ಮನಗಂಡಿದ್ದು ಇದೇ ಕಾಲೇಜಿನ ಕುಲುಮೆಯಲ್ಲಿ.

“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ” ಮತ್ತು, “ನಾಗರ ಹಾವೇ ಹಾವೊಳು ಹೂವೆ” ಇಂದ ಹಲ್ಮಿಡಿ ಶಾಸನಕ್ಕೆ ಹೋಗಿ, ಪಂಪ ರನ್ನ ಶರಣರ ಕಂಡು, ಕುಮಾರವ್ಯಾಸನನ್ನು ಅಸ್ವಾದಿಸಿ, ಕನಕ ಪುರಂದರರ ಕೇಳಿ, ಮುದ್ದಣನ ರಸಿಕತೆಯನ್ನು ಇಷ್ಟಪಟ್ಟು ಬಿಎಂಶ್ರೀ ಪ್ರಯೋಗಗಳನ್ನು ಸ್ವಲ್ಪ reservationನಿಂದಲೇ ಪರಿಭಾವಿಸುವುದನ್ನು ಕಲಿತದ್ದು, ನವೋದಯದವರೆಡೆಗೆ ಇದ್ದ ಗೌರವದಿಂದ ಸಾಗಿ ನವ್ಯರ ಮಾತುಗಳಿಗೆ ಮರುಳಾಗಿ ಅವರ ಪದ, ವಾಕ್ಯಗಳಲ್ಲಿನ ಕರಾರುವಾಕ್ತನಗಳ ಸಾಣೆ ಹಿಡಿದಂಥ ಪ್ರಯೋಗಗಳನ್ನು ಆ dalithಕುಶಲತೆಯನ್ನು ಮೆಚ್ಚಿ, ಅದುವರೆಗೂ taboo ಆಗಿದ್ದ ಕಾಮವನ್ನು ಅವರು ಅನಾವರಣಗೊಳಿಸಿ ಮುಂಚೂಣಿಗೆ ಎಳೆದು ತಂದಿದ್ದದ್ದನ್ನು, ಇಡೀ ನವ್ಯವನ್ನೇ ಪ್ರತಿರೋಧಿಸುತ್ತಾ ಒಳಗೆ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ದೇವನೂರು ಮಹದೇವರು ಸಿಕ್ಕಿ, ಇದು ಬಹಳ original, ಈ ಮಹಾದೇವ ಶಿವನಂಥ ತಾಯಿ. ಕೃಷ್ಣನಂಥ ತ್ರಿಕಾಲ ಜ್ಞಾನಿ ಅನಿಸಿದ್ದೂ ಇದೇ ಮಹಾರಾಜಾ ಕಾಲೇಜಿನ ದಿನಗಳಲ್ಲಿ.

ಘಂಟಾಘೋಷವಾಗಿ ಜಾತಿವಿನಾಶವನ್ನು ಪ್ರತಿಪಾದಿಸುತ್ತಿದ್ದ ಗೆಳೆಯ ಒಂದು ದಿನ ಹಾಸ್ಟೆಲಿನ ಅವನ ರೂಮಿನಲ್ಲಿ ತನ್ನ ಜಾತಿಯವರೇ ಕೂಡಿದ್ದಾಗ ಲಾಂಡ್ರಿಯವನಿಗೆ ಮೂಲೆಯಲ್ಲಿಟ್ಟಿದ್ದ ಬೆಡ್ಶೀಟ್ ಮತ್ತು ದಿಂಬಿನ ಕವರುಗಳನ್ನು ಮಡಿಕೋಲ ತುದಿಯಲ್ಲಿ ಮುಟ್ಟಿದಂತೆ ಎಡಗೈಯಲ್ಲಿ ಹಾಕುತ್ತಾ, “ಅವನು, (ಅವನು ಉಚ್ಚರಸಿದ ಹೆಸರನ್ನು ಇಲ್ಲಿ ನಾನು ಬರೆಯುತ್ತಿಲ್ಲ. ಆ ವ್ಯಕ್ತಿ ನಮ್ಮ ಕಾಲೇಜಿನ ಮಾಜಿ ವಿದ್ಯಾರ್ಥಿಯಾಗಿದ್ದು ಬೆಂಗಳೂರಿನಲ್ಲಿ ಖ್ಯಾತರಾಗಿದ್ದ ಅವರನ್ನು ಯಾವುದೋ ಸಮಾರಂಭಕ್ಕೆ ಮುಖ್ಯ ಅತಿಥಿಯಾಗ ಇವನೇ ಕರೆಸಿದ್ದ. ), ಆ ದಲಿತ, ರಾತ್ರಿ ಇದರ ಮೇಲೆ ಮಲಗಿದ್ದ. ಅದಕ್ಕೆ ವಾಶ್ ಮಾಡಿಸ್ತಿದ್ದೀನಿ” ಎಂದಾಗ ಜಾತಿ ವ್ಯವಸ್ಥೆಯ ಅಮಾನುಷತೆಯನ್ನು ಅರಿತದ್ದೂ ಸಹ ಇದೇ ದಿನಗಳಲ್ಲಿ.

‍ಲೇಖಕರು Admin

November 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ

ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ

ಅಂಜಲಿ ರಾಮಣ್ಣ ಇಂದು ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಪ್ತಾಹದ ಕೊನೆಯ ದಿನ ಇದರ ಅಂಗವಾಗಿ 'ಮಕ್ಕಳ ಕಲ್ಯಾಣ ಸಮಿತಿ' ಅಧ್ಯಕ್ಷರೂ, 'ಅಸ್ತಿತ್ವ...

ಹಬ್ಬದ ಹಸಿರು ಖರೀದಿಯೇ ಉಸಿರು..

ಹಬ್ಬದ ಹಸಿರು ಖರೀದಿಯೇ ಉಸಿರು..

ಮಾಲತಿ ಹೆಗಡೆ ಹಗಲಿರುಳಿನ ರಥ ಉರುಳುತ್ತಾ ಉರುಳುತ್ತಾ ಮತ್ತೆ ಬರುತ್ತಿದೆ ಬೆಳಕಿನ ಹಬ್ಬ ದೀಪಾವಳಿ. ಕಳೆದ ಕಾಲ, ಇರುವ ಕಾಲಗಳಲ್ಲಿ ವಿಭಿನ್ನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This