“ನನ್ನವ್ವ ಫಲವತ್ತಾದ ಕಪ್ಪು ನೆಲ”

ಸರಯೂ ಚೈತನ್ಯ

ಲಂಕೇಶರ “ಅವ್ವ”, ನಾನು ಮತ್ತೆ ಮತ್ತೆ ಓದಿಕೊಳ್ಳುವ ಕವಿತೆ. ಹಾಗೆ ನೋಡಿದರೆ ಲಂಕೇಶರ “ಅವ್ವ” ಎಲ್ಲರ ಅವ್ವನೂ ಆಗಿಬಿಡುವಂಥವಳು. ಒಂದಿಡೀ ತಾಯಂದಿರ ಪರಂಪರೆಯನ್ನೇ ಒಳಗೊಂಡು ನುಡಿವ ಹೆಂಗಸು ಆಕೆ.

“ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂಬುದೇ ಒಂದು ಬೆಳಕಿನ ಸಾಕ್ಷಾತ್ಕಾರದ ಹಾಗಿದೆ. ಶ್ರಮ ಸಂಸ್ಕೃತಿಯನ್ನೂ ಮಾತೃ ಪರಂಪರೆಯನ್ನೂ ಒಂದೆಡೆಯಲ್ಲಿ ಕಂಡುಕೊಳ್ಳುವ ಪ್ರತಿಮೆ ಅನ್ನಿಸುತ್ತದೆ ಅದು.

img_1126.jpgಪಾರ್ವತಿದೇವಿ ಕೊಳೆಯಿಂದ ಕೂಡಿದ ತನ್ನ ಮೈಯ ಬೆವರಿಂದಲೇ ಗೊಂಬೆ ಮಾಡಿ ಅದಕ್ಕೆ ಜೀವ ಕೊಟ್ಟಳು; ಆತನೇ ಗಣಪತಿ ಎಂಬ ಕಥೆಯೊಂದು ಬರುತ್ತದೆ. ಕೃಷಿ ಸಂಸ್ಕೃತಿಯ ಮನಸ್ಸು ತಾಯಿ ಮತ್ತು ಮಗುವಿನ ಸಂಬಂಧವನ್ನು ರೂಪಕಗೊಳಿಸಿರುವ ಬಗೆಗಿನ ಅಸಾಮಾನ್ಯ ನಿದರ್ಶನ ಈ ಕಥೆ. ಕರುಳ ಕುಡಿಯ ಬಗೆಗಿನ ತಾಯ ಗ್ಯಾನ, ಸಂವೇದನೆಯ ಜಗತ್ತಿನಲ್ಲಿ ಬಹುಶಃ ಯಾವಾಗಲೂ ಎತ್ತರದ ಸ್ಥಾನದಲ್ಲೇ ಇರುವಂಥದ್ದು.

“ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;
ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು
ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ”

ಈ ಅವ್ವನ ಕಥೆ, ಮಗುವಿಗೆ ಹಾಲೂಡಿದರೆ ಎದೆ ಬಿಗುವು ಸೋರಿ ಹೋದೀತು ಎಂದು ಆತಂಕಗೊಳ್ಳುವ “ಪೇಜ್ ಥ್ರೀ” ಮಮ್ಮಿಯದಲ್ಲ; ಬದಲಾಗಿ ನಿರಂತರ ಜೀವ ತೇಯುವ, ಎಲ್ಲ ನೋವನ್ನೂ ಒಂದು ನಿಟ್ಟುಸಿರಲ್ಲೇ ನುಂಗಿಕೊಳ್ಳುವ ಶಕ್ತಿವಂತೆಯ ಕಥೆ.

“ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ”

ಹೀಗೆ ಯಾನ ಮುಗಿಸುವ ಅವ್ವ, ಅನ್ನ ಕೊಡುವ ಹೊಲದ ಕಸುವಿಗಾಗಿ, ಜೀವನದ ಜೊತೆಗಾರನ ಸಂತೋಷಕ್ಕಾಗಿ ತನ್ನದೆಂಬುವ ಪ್ರತಿ ಕ್ಷಣವನ್ನೂ ಒತ್ತೆಯಿಟ್ಟಿದ್ದವಳು. ಅವಳದೊಂದು ನಿಸ್ವಾರ್ಥ ಪಯಣ.

“ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು.”

ಇವಳು ಕಣ್ಣೀರಿಟ್ಟಿದ್ದು ದಾರಿದ್ರ್ಯದ ದಣಿವಿನಲ್ಲಿ, ಕೈಗೆ ಫಸಲು ಬಾರದ ದುಃಖದಲ್ಲಿ, ಮನೆಯೊಳಗಿನ ಕರು ಸತ್ತು ಹೋದದ್ದರ ಕುರಿತ ತೀವ್ರ ಯಾತನೆಯಲ್ಲಿ. ಹಟ್ಟಿಯ ಮುದಿಯೆಮ್ಮೆ ತಪ್ಪಿಸಿಕೊಂಡಾಗ ಪ್ರಾಣವನ್ನೇ ಹುಡುಕುವವಳ ಧಾವಂತದಲ್ಲಿ ಊರೂರು ಅಲೆದ ಈ ಅವ್ವ ಬಲು ದೊಡ್ಡವಳು.

ಹಾಗೆಂದು ಸತಿ ಸಾವಿತ್ರಿಯಂಥವರ ಆದರ್ಶವೇನೂ ಇವಳ ಮುಂದಿರಲಿಲ್ಲ. ಅದರ ಗರಜೂ ಇವಳಿಗಿರಲಿಲ್ಲ. ತನ್ನದೇ ಧಾಟಿಯಲ್ಲಿ ಬದುಕಿನ ಹಾಡು ಹಾಡಿದವಳು. ಅತ್ಯಂತ ಸಹಜವಾಗಿ, ಎಲ್ಲ ಸಿಟ್ಟು, ಸೆಡವು, ಸಣ್ಣತನಗಳ ಕಂತೆಯೇ ಆಗಿ ಬಾಳ ದಾರಿ ನಡೆದವಳು. ಆದರೆ ಅದೆಲ್ಲದರ ಹಿಂದೊಂದು ಸೂತ್ರವಿತ್ತು.

“ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ
ಈಕೆ ಉರಿದೆದ್ದಾಳು
ಮಗ ಕೆಟ್ಟರೆ, ಗಂಡ ಬೇರೆ ಕಡೆ ಹೋದಾಗ ಮಾತ್ರ.”

ಯಾವುದೇ ಸಂಗತಿಯ ಮೇಲೆ ಇಂಥದೊಂದು ಪೊಸೆಸಿವ್ ಆದ ಒಳಗೊಳ್ಳುವಿಕೆ ಸಾಧ್ಯವಾಗುವುದು ಅದರ ಕುರಿತ ನಿಷ್ಕಳಂಕ ಪ್ರೀತಿಯಿಂದ ಮಾತ್ರ. ಇದು ಸೋಗಿನ ಹಂಗು ಬೇಡುವುದಿಲ್ಲ. ಎಲ್ಲರಿಗೂ ಕೋಲೆ ಬಸವನ ಹಾಗೆ ಹೂಂ ಹೂಂ ಎನ್ನುತ್ತ, ಎಲ್ಲರನ್ನೂ ಮೆಚ್ಚಿಸುತ್ತ ತನ್ನ ಒಳ್ಳೆಯತನವನ್ನು ಸ್ಥಾಪಿಸಲು ಹೊಂಚುವುದಿಲ್ಲ. ಬದಲಾಗಿ, ಸಿಟ್ಟು ಅಥವಾ ದ್ವೇಷವನ್ನು ಎದುರಿಸುವುದಾದರೂ ಸರಿಯೆ, ಸತ್ಯದ ಅಲಗಿಗೆ ಒಡ್ಡಿಕೊಳ್ಳಬೇಕು ಎಂಬ ಸ್ವಾಭಿಮಾನದ ದೃಢತೆಯೊಂದಿಗಿರುತ್ತದೆ. ಅವ್ವ ಅಂಥವಳಾಗಿದ್ದವಳು.

“ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;
ನನ್ನವ್ವ ಬದುಕಿದ್ದು
ಕಾಳು ಕಡ್ಡಿಗೆ ದುಡಿತಕ್ಕೆ, ಮಕ್ಕಳಿಗೆ;
ಮೇಲೊಂದು ಸೂರು, ರೊಟ್ಟಿ, ಹಚಡಕ್ಕೆ
ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ.”

ಬದುಕುವುದಕ್ಕೆ ಯಾವುದೇ ಉದಾತ್ತವಾದ ನೆಪಗಳು ಬೇಕಿಲ್ಲ. ಶ್ರಮ ಸಂಸ್ಕೃತಿಯ ತಳಪಾಯವೇ, “ಶರೀರ ನಶ್ವರ” ಎಂಬ ಆತ್ಮವಂಚಕ ನಿಲುವಿನಿಂದ ದೂರ ಕಾಯ್ದುಕೊಳ್ಳುವುದು. ಅಸ್ತಿತ್ವದ ಪ್ರಶ್ನೆಯಲ್ಲೇ ಸತ್ಯದ ಬೆಳಕಿಗಾಗಿ ಕಾಯುವುದು. ಇರುವಷ್ಟು ದಿನ ತಲೆ ಬಾಗದೆ ಬದುಕುವ ಬಲವನ್ನು ಹಂಬಲಿಸುವುದು. ಹೀಗೆ ದುಡಿಮೆಯೊಂದಿಗೆ ಅವಿನಾಭಾವವೆಂಬಂತೆ ಒಂದಾಗಿ ಹೋಗಿದ್ದ ಅವ್ವ, ದುಡಿಯುತ್ತ ದುಡಿಯುತ್ತಲೇ ಸಾವಿನ ಬಾಗಿಲಲ್ಲೂ ನಿರಾಯಾಸವಾಗೇ ನಡೆದುಬಿಡುತ್ತಾಳೆ. “ಮನೆಯಿಂದ ಹೊಲಕ್ಕೆ ಹೋದಂತೆ ತಣ್ಣಗೆ ಮಾತಾಡುತ್ತಲೇ” ಹೊರಟು ಹೋಗುತ್ತಾಳೆ.

ಅಷ್ಟೊಂದು ತೀವ್ರವಾಗಿ ಬದುಕಿದ್ದ ಅವ್ವ ಮತ್ತು ಹಾಗೆ ನಿರಾಳವಾಗಿ ಸಾವಿನೊಳಗೆ ನಡೆದುಬಿಟ್ಟ ಅವ್ವ -ಈ ಎರಡೂ ಚಿತ್ರಗಳು ಬಹುವಾಗಿ ಕಾಡುತ್ತವೆ. ಆರ್ದ್ರವಾದ ಸಂಬಂಧವೊಂದರ ಅಗಲುವಿಕೆಗೂ ಕರಗಿ ಕಣ್ಣೀರಾಗದವರ ಕಾಲದಲ್ಲಿ, ಅವ್ವ ಅದೊಂದು ಮುದಿಯೆಮ್ಮೆಗಾಗಿ, ಸತ್ತ ಕರುವಿಗಾಗಿ ಅಳುತ್ತ ಕೂತದ್ದು ಕಾಣಿಸುತ್ತದೆ.

ಬಹುಶಃ ಎಲ್ಲ ಅಳುವಿನ ಚಿತ್ರಗಳಲ್ಲೂ ಅವ್ವ ಮಸುಕು ಮಸುಕಾಗಿ ಇದ್ದೇ ಇರುತ್ತಾಳೆ.

‍ಲೇಖಕರು avadhi

May 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

  1. Laxminarayana Bhat P

    ಹುಟ್ಟಿಸಿದ ಮಗುವಿಗಾಗಿಯೇ ಜನ್ಮ ತೇಯುವ ‘ಅವ್ವ’ನದ್ದು ಒಂದು ಸಾರ್ವತ್ರಿಕ ರೂಪಕ; ಬಹು ವಿಧಗಳಲ್ಲಿ ಶ್ಲಾಘಿತ, ವಿಜ್ರಮ್ಭಿತ ರೂಪಕವೂ ಹೌದು! ಆದರೆ, ಜನ್ಮವಿತ್ತ ಶಿಶುವನ್ನೇ ತ್ಯಜಿಸಿದ ಅದೆಷ್ಟೋ ಅವ್ವಂದಿರ ಕಥೆಯೂ ಇದೆಯಲ್ಲ! ಮೊದಲನೆಯದ್ದು ಭಾವುಕ ಜಗತ್ತಿಗೆ ಆಪ್ಯಾಯಮಾನವಾಗಿ ಕಂಡರೆ, ಎರಡನೆಯದ್ದು ಕಟು ವಾಸ್ತವ ಜಗತ್ತಿನದ್ದು. ಸತ್ಯವೆಂಬುದು ಈ ಎರಡು ಜಗತ್ತುಗಳ ನಡುವಿನ ಯಾವುದೋ ಒಂದು ಬಿಂದುವಿನಲ್ಲಿ ಇರುವ ಸಾಧ್ಯತೆಯೇ ಹೆಚ್ಚು! ನಮಸ್ಕಾರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: