ನನ್ನೊಳಗಿನ ನವೋಮಿ ಈಗಲೂ ನನ್ನನ್ನು ಹಂಗಿಸುತ್ತಾಳೆ

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..

ವಿಧಾನ ಸೌಧ ಸುತ್ತ ಮುತ್ತ ಅವಳನ್ನು ಹಲವಾರು ಬಾರಿ ನೋಡಿದ್ದೆ. ಉದ್ದೋ ಉದ್ದಕ್ಕಿದ್ದ ಮಗನನ್ನು ಕಂಕುಳಲ್ಲಿ ಹೊತ್ತು ಅಲ್ಲಿಂದಿಲ್ಲಿ ಇಲ್ಲಿಂದಲ್ಲಿ ಸಾಗುವ ಅವಳನ್ನು ಕಂಡಾಗಲೆಲ್ಲಾ ನನ್ನ ಕರುಳು ಚುರುಕ್ ಎನಿಸುತ್ತಿತ್ತು. ಅವಳ ಮಗನಿಗೆ ಸಿರೆಬ್ರಲ್ ಪಾಲ್ಸಿ. ಸುಮಾರು 13 ವರ್ಷ ಆಗಿತ್ತೇನೋ. ಆ ಹುಡುಗನ ಶರೀರ ಕೈಕಾಲುಗಳೊಂದಿಗೆ ಸೇರಿ ಎಳೆಯ ಜೀವ ಅಸ್ತವ್ಯಸ್ತಗೊಂಡಿತ್ತು. ಅವಳೋಗಿಡ್ಡಿ. ಅವಳಷ್ಟೇ ಉದ್ದದ ಶರೀರವನ್ನು ಹೊತ್ತುಕೊಂಡು ಸುತ್ತಾಡಿ ಅವಳು ಹೈರಾಣಾಗಿ  ಹೋಗಿದ್ದಳು. ಒಮ್ಮೆ ಅವಳ ಕಷ್ಟ ಕೇಳಬೇಕೆಂದುಕೊಂಡೆ. ನಮಗೆ,ಅಂದರೆ ಈಗಿನ ಜರ್ನಲಿಸ್ಟ್ ಗಳಿಗೆ ಪುರುಸೊತ್ತೆಲ್ಲಿ ನಾವೆಲ್ಲಾ ರಾಜಕಾರಣಿಗಳ ಹಿಂದೆ ಸುತ್ತಿಸುತ್ತಿನೇ ಹೈರಾಣಾಗಿ ಬಿಟ್ಟಿದ್ದೇವೆ. ಅಂಥದ್ದರಲ್ಲಿ ನೊಂದವರ ಕಷ್ಟ ಕೇಳೋಕೆ ನಮಗೆ ಪುರುಸೊತ್ತಿಲ್ಲ.ಹೀಗೆ ನನ್ನ ನಾನು ಬೈಯ್ದುಕೊಂಡೇ ಕಾಲ ಕಳೆಯುವಾಗ ಒಮ್ಮೆ ಅವಳು ಎದುರಾಗಿಬಿಟ್ಟಳು.
ನಮ್ಮ ಮಾರುತಿ ವ್ಯಾನ್ ಇನ್ನೇನೂ ಕೆಂಗಲ್ ಹನುಮಂತಯ್ಯ ಪ್ರತಿಮೆ ದಾಟುವುದರಲ್ಲಿತ್ತು. ಆ ಪ್ರತಿಮೆಯಡಿಯ ನೆರಳಿನಲ್ಲಿ ಈಕೆ ಬೆಂಡಾಗಿ ನಿಂತಿದ್ದಳು. ನಿರಾಶೆ,ಹತಾಶೆಯೇ ಅವಳ ಇಡೀಯ ಶರೀರವಾಗಿ ಹುಟ್ಟಿಸಿದವನಿಗೆ ಶಪಿಸುವ ರೀತಿಯಲ್ಲಿ ಅವಳು ಮೇಲೆ ನೋಡುತ್ತ ನಿಂತಿದ್ದಳು. ಅವಳು ಸೋತು ನಿಂತಿದ್ದನ್ನು ನೋಡಿದರೆ  ಕಂಕುಳಲ್ಲಿದ್ದ ಮಗನನ್ನು ಕೂಡ ಅವಳು ಅಸಹಾಯಕಳಾಗಿ ಶಪಿಸುತ್ತಿದ್ದಾಳೆ ಎಂದು ನನಗನ್ನಿಸಿದ್ದೆ ತಡ ವ್ಯಾನು ನಿಲ್ಲಿಸುವಂತೆ ಡ್ರೈವರ್
ಗೆ  ಸೂಚಿಸಿದೆ. ಇವತ್ತು ಯಾವ ಚೆನ್ನಿಗಪ್ಪನೂ ಇಲ್ಲ, ಉಗ್ರಪ್ಪನೂ ಇಲ್ಲ. ಆದದ್ದಾಗಲಿ, ಬುಲೆಟಿನ್ ಗೆ ಸುದ್ದಿ ಹೋಗದಿದ್ದರೂ ಪರವಾಗಿಲ್ಲ. ಅವಳ ಕಷ್ಟ ಕೇಳಲೇ ಬೇಕು. ಏನಿಲ್ಲ ಎಂದ್ರೂ  ಕನಿಷ್ಟ ಮನೆ ತಲುಪಿಸಬೇಕು ಎಂದುಕೊಂಡು ಅವಳನ್ನು ಕರೆದೆ. ನಾನು ಪತ್ರಕರ್ತೆ ಎಂದು ಗೊತ್ತಾದ ನಂತರ ಖುಷಿಯಿಂದ ಕಾರು ಹತ್ತಿದ ಆಕೆ ಮಗನೊಂದಿಗೆ ನನ್ನ ಬಳಿ ಕುಳಿತುಕೊಂಡಳು.
ತಾಯಿ ಮಗ ಇಬ್ಬರೂ ಸ್ನಾನ ಮಾಡಿ ಅದೆಷ್ಟು ದಿನವಾಗಿತ್ತೋ. ಅವಳನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದೆ. ಕೈ, ಕೊರಳು  ತುಂಬ ಸುಟ್ಟಗಾಯಗಳಾಗಿದ್ದವು. ಮಾತನಾಡುವಾಗ ಸ್ವಲ್ಪ ಇಂಗ್ಲೀಷ್ ಬಳಸುತ್ತಿದ್ದುದನ್ನು ನೋಡಿದರೆ ಒಳ್ಳೆ ಕುಟುಂಬದವಳೇ ಇರಬೇಕು. ಮಾತನಾಡಿದೆ. ಅವಳ ಕಥೆ ಕೇಳಿದ ಮೇಲೆ ಇನ್ನು ನಮ್ಮಂಥವರು ಬದುಕಬಾರದು ಎಂದು ನನಗೆ ಅನ್ನಿಸಿದ್ದು ನಿಜ. ಗಂಡ ಬಿಟ್ಟ ಹೆಂಗಸಿನ ಬದುಕು ಅದು. ಜೊತೆಯಲ್ಲೊಂದು ಕರುಳ ಭಾರ,ಬಾಡಿಗೆ ಮನೆಗೆ ಹಣ ಕಟ್ಟುವುದೋ ಮಗನ ಔಷಧಕ್ಕೆ ಹಣ ಹೊಂದಿಸುವುದೋ ಅರೆ ಹುಚ್ಚಿಯಂತಾದ ತಾಯಿಯ ಬದುಕು. ಸಿರೆಬ್ರಲ್ ಪಾಲ್ಸಿ ಪೀಡಿತ ಮಕ್ಕಳಿಗಾಗಿಯೇ ಇರುವ ಯಾವುದಾದರೂ ಸರಕಾರಿ  ಶಾಲೆಗೆ ಉಚಿತ  ಪ್ರವೇಶಕ್ಕಾಗಿ ಕಳೆದೊಂದು ವರ್ಷದಿಂದ ಅವಳು ಹೀಗೆ ವಿದಾನ ಸೌಧ ಸುತ್ತುತ್ತಿದ್ದಳು. ಕನಿಕರಗೊಂಡ ಪುಣ್ಯಾತ್ಮರೊಬ್ಬರು  ಇವಳನ್ನು ಆರೋಗ್ಯ ಮಂತ್ರಿ ಕಚೇರಿಗೆ ಕರೆದೊಯ್ದು  ಹಾಗೂ ಹೀಗೂ ಇವಳ ಗೋಳನ್ನು ಅಲ್ಲಿ ಹೇಳಿಕೊಂಡಿದ್ದರು.ಸರಕಾರದ ಬೇರೆ ಕಚೇರಿಗಿಂತ ಆ ಕಚೇರಿಯೇನೂ ಭಿನ್ನವಾಗಿರಲಿಲ್ಲ. ಶ್ರೇಣಿಕೃತ ವ್ಯವಸ್ಥೆಯಲ್ಲಿ ಅವಳ ಮನವಿ ಕೂಡ ಆ ಟೇಬಲ್ ನಿಂದ ಈ ಟೇಬಲ್ ಗೆ ಈ ಟೇಬಲ್ ನಿಂದ ಆ ಟೇಬಲ್ ಗೆ  ಓಡಾಡತೊಡಗಿತು. ಇವಳು ವಿಧಾನಸೌಧದ ಮೂರನೇ ಮಹಡಿ ಹತ್ತುವುದು ತಪ್ಪಲಿಲ್ಲ. ಮಗನ ಆರೋಗ್ಯವೂ ಆಗಾಗ ಹದಗೆಡುತ್ತಲೇ ಇತ್ತು. ಆರೋಗ್ಯ ಇಲಾಖೆಯ ಮಹಿಳಾ ಅಧಿಕಾರಿಯೋಬ್ಬರು ಆಗಾಗ ಅವನ ಔಷದಕ್ಕೆ ಸಹಾಯ ಮಾಡುತ್ತಿದ್ದರಂತೆ. ಆದರೆ ಅವಳ ಮಗನಿಗೆ ಉಚಿತ ಶಾಲೆ, ವಸತಿ ಅಥವಾ ಔಷಧಿಯ ಶಾಶ್ವತ ವ್ಯವಸ್ಥ ಅಂತೂ ಆಗಲಿಲ್ಲ.
ಅವಳ ಮನೆ ಎಲ್ಲಿ ಎಂದು ಕೇಳಿದೆ.ಗಿರಿನಗರ ಎಂದಳು.  ಅಲ್ಲಿವರೆಗೆ ಅವಳನ್ನು ಬಿಟ್ಟು ಬಿಡಲು ನಿರ್ಧರಿಸಿದೆ.ಗಿರಿನಗರದಲ್ಲಿ  ಇಳಕೊಂಡವಳು ಹೇಗಾದರೂ ಮಾಡಿ ಒಮ್ಮೆ ಆರೋಗ್ಯ ಮಂತ್ರಿಗಳ ಜೊತೆ ಮಾತಾಡಿ ನನಗೆ ಸಹಾಯ ಮಾಡಿ ಮೇಡಂ ಎಂದು ಕೇಳಿದಳು. ಇಲ್ಲವೆನ್ನಲು ಸಾಧ್ಯವಾಗದೆ ಅವಳಿಗೆ ನನ್ನ ಫೋನ್ ನಂಬರ್ ಕೊಟ್ಟು ಬಂದೆ. ಅಲ್ಲಿಂದ ನನಗೆ ಅವಳ ಕರೆಗಳು ಬರಲಾರಂಭಿಸಿದವು.ಅವಳ   ಕರೆಗಳಿಗೆ ಉತ್ತರಿಸಿ ಖಂಡಿತ ನಾನು ಆರೋಗ್ಯ ಮಂತ್ರಿಗಳನ್ನು ಕಂಡು ನಿನ್ನ ಕಷ್ಟ ವಿವರಿಸ್ತೀನಿ ಎಂದು ಭರವಸೆ ನೀಡಿದೆ.ಅಲ್ಲಿಂದ ನನ್ನ ಮುಜುಗರದ ಕ್ಷಣಗಳು ಕೂಡ ಆರಂಭವಾದವು ಎನ್ನಬೇಕು. ಪತ್ರಕರ್ತೆಯಾಗಿ ಮಂತ್ರಿಗಳನ್ನು ಕೇಳುವುದು ಹೇಗೆ? ಇಷ್ಟು ವರ್ಷ ಇಲ್ಲಿದ್ದೇನೆ. ಸುತ್ತಮುತ್ತಲೂ ಸಚಿವರು, ಶಾಸಕರು ಹೀಗೆ ನೂರಾರು ರಾಜಕಾರಣಿಗಳನ್ನು ನೋಡಿದ್ದೇನೆ. ಇದುವರೆಗೆ ಪ್ರಶ್ನೆಗಳನ್ನು ಬಿಟ್ಟು ಬೇರೇ ಯಾವುದೇ ಫೇವರ್  ಕೇಳಿಲ್ಲ. ಈಗ ಹೇಗೆ ಕೇಳಲಿ? ಇಲ್ಲಿ ಫೇವರ್ ಪ್ರಶ್ನೆಯೇ ಬರುವುದಿಲ್ಲ. ಅಸಹಾಯಕಳಿಗೆ ಸಹಾಯ ಮಾಡುವುದು ಫೇವರ್ ಹೇಗಾಗುತ್ತೆ? ನಮ್ಮಂಥವರಿಗೆ ರಾಜಕಾರಣಿಗಳು ಸುಲಭವಾಗಿ ಕೈಸಿಕ್ಕುವ ಕಾರಣ ನಮ್ಮಿಂದ ಅವಳು ಕೊಂಚ ಸಹಾಯ ಬಯಸಿದಲ್ಲಿ ಅದಕ್ಕೆ ಸ್ವಲ್ಪ  ಸ್ಪಂದಿಸಿದರೆ ತಪ್ಪೇನೂ ಇಲ್ಲ. ಒಮ್ಮೆ ಕೇಳಿಬಿಡೋಣ ಎಂದು ನಿರ್ಧರಿಸಿದೆ.
ಮಾರನೇ ದಿನ  ವಿಧಾನಸೌದದಲ್ಲಿ ಆರೋಗ್ಯ ಮಂತ್ರಿಗಳ  ಕೊಠಡಿಯತ್ತ ಹೊರಟೆ. ಮಾನ್ಯ ಮಂತ್ರಿಗಳು ಮಲೇರಿಯಾ , ಫಾಗಿಂಗ್ ಮಶೀನ್  ಬಗ್ಗೆ ಅವರ ಅಧಿಕಾರಿಗಳು ನೀಡಿದ ರೆಡಿಮೇಡ್ ಟಿಪ್ಪಣಿಯನ್ನು ಓದಿ ಕಂಠಪಾಠ ಮಾಡತೊಡಗಿದ್ದಾರೆ ಎಂದು ಗುಮಾಸ್ತ ನಗುತ್ತಲೇ ಹೇಳಿದ.ಆರೋಗ್ಯ ಮಂತ್ರಿಗಳ ಪಾಡು ಕೇಳಿ ನನಗೂ ನಗು ಬಂತು.ಆದರ ನಕ್ಕು ಪ್ರಯೋಜನವಿಲ್ಲ. ಪಾಪ, ಇಲಾಖೆಯನ್ನು ಅರ್ಥಮಾಡಿಕೊಳ್ಳಬೇಕೆನ್ನೋ ಮನಸ್ಸಿದ್ದರೂ ವೈಟ್ ಕಾಲರ್ ಗಳು ಬಿಡಬೇಕಲ್ಲ? ಇನ್ನೇನೂ ಇಲಾಖೆ ಕೊಂಚ ಅರ್ಥವಾಯ್ತು ಎನ್ನುವ ಹೊತ್ತಿಗೆ ಸರಕಾರವೇ ಬಿದ್ದುಹೋಗಿಬಿಟ್ಟಿರುತ್ತದೆ. ಇಂಥ ಸನ್ನಿವೇಶದಲ್ಲಿ ಕನಿಷ್ಠ ಯಾರೋ ಬರೆದುಕೊಟ್ಟ ಟಿಪ್ಪಣಿಯನ್ನು ಕಂಠಪಾಠ ಮಾಡುವಷ್ಟು ತಾಳ್ಮೆ  ಇದೆಯಲ್ಲ ಎಂಬುದಕ್ಕಾದರೂ ನಾವು ನೆಮ್ಮದಿ ಪಟ್ಟುಕೊಳ್ಳಬೇಕು ಎಂದುಕೊಂಡೆ. ಒಳ ಕೋಣೆಯಿಂದ ಹೊರಬಂದು ನನ್ನ ಉಭಯ ಕುಶಲೋಪರಿ ವಿಚಾರಿಸಿದ ಸಚಿವರಿಗೆ ನಾನು ಡೆಂಗ್ಯೂ,ಕಾಲರಾ ಬಗ್ಗೆ ಕೇಳಿದೆ. ಎರಡು ಸಾರಿ ಇವಳ ಸಂಗತಿ ಹೇಳಲು ಮುಂದಾದೆ. ಮಾತುಗಳು ಗಂಟಲಲ್ಲೇ ಸ್ಟ್ರಕ್ ಆಗಿಬಿಟ್ಟವು.
ಮತ್ತೆ ಪ್ರಯತ್ನಿಸಿದೆ. ಧೈರ್ಯ ಸಾಲಲಿಲ್ಲ. ಪತ್ರಕರ್ತೆ ಆದ್ರೇನಾಯ್ತು? ಹಣ್ಣೇ ತಾನೆ? ತಪ್ಪು ತಿಳ್ಕೊಂಬಿಟ್ರೆ? ಛೇ.ಆ ರೀತಿ ತಿಳ್ಕೊಳ್ಳಲು ಸಾಧ್ಯವಿಲ್ಲ. ಜನ ಒಳ್ಳೆಯವ್ರೇ.ಸರಿ ನಾಳೆ ದಿನ ಸುದ್ದಿ ವಿಷಯದಲ್ಲಿ ಏನಾದರೂ ಅವರು ಫೇವರ್ ಕೇಳಿದ್ರೆ? ಹೀಗೆ ನಾನು ಸಚಿವರೆದುರೇ ಗರಬಡಿದವರಂತೆ ನಿಂತು ನನ್ನೊಂದಿಗೆ ನಾನು ಮಾತಾನಾಡಲು ಶುರುಮಾಡಿದ್ದೆ. ಅಷ್ಟರಲ್ಲಿ ನಿನ್ನಿಂದ ಸಾಧ್ಯವಿಲ್ಲ.ಸುಮ್ಮನೆ ಹೊರಹೋಗು ಎಂದು ನನ್ನೊಳಗಿನ ನವೋಮಿ  ನನಗೆ ಹೇಳಿದಾಗ ನಾನು
ಹೊರನಡೆದೆ.
ಮುಂದೆ ಅವಳ ಫೋನ್ ಕರೆಗಳು ಬರೋದು ನಿಲ್ಲಲಿಲ್ಲ. ನಾನು ಸುಸ್ತಾಗಿದ್ದೆ. ದಿನಾ ರಾಜಕಾರಣಿಗಳ ಹಿಂದೆ ಸುತ್ತಿಸುತ್ತಿ ಅವರಿವರಿಗೆ ಮೈಕ್ ಹಿಡಿದು ಹಿಡಿದು ನಾನೂ ಬಳಲಿದ್ದೆ.  ಹೀಗೊಂದು ದಿನ ಇದ್ದಕ್ಕಿದ್ದಂತೆ ನನಗೆ ಅವಳ ಮೇಲೆ ವಿನಾಕಾರಣ ಕೋಪನೂ ಬಂತು. ಯಾಕೆ ನಾನೊಬ್ಬಳೇ  ಇದ್ದೀನಾ? ನನಗೇನೂ ಸಹಾಯ ಮಾಡಬಾರದು ಅಂಥ ಏನಿಲ್ವಲ್ಲ? ಆದ್ರೆ ನನ್ನ ಕೈಯ್ಯಲ್ಲಿ ಆರೋಗ್ಯ ಮಂತ್ರಿಗಳ ಮುಂದೆ ರಿಕ್ವೆಸ್ಟ್ ಮಾಡೋಕೆ ಆಗುತ್ತಿಲ್ಲ.. ಏನೋ ಕಷ್ಟ ಸುಖ ಕೇಳಿದ
ಮಾತ್ರಕ್ಕೆ ಇವಳು ಈ ರೀತಿ ಹಿಂಸೆ ನೀಡೋದಾ?ನನ್ನ ಕೆಟ್ಟ ಮನಸ್ಸು ಸಂಭಾಷಣೆ ನಡೆಸಿತ್ತು. ನಂತರ ನನ್ನ ಮೇಲೆ ನನಗೆ ಬೇಜಾರೆನಿಸಿತು. ಆದರೆ ಕೊನೆಯಲ್ಲಿ ನನ್ನ ಹೇಡಿ ಮನಸ್ಸು ನನ್ನನ್ನೇ ಸಮರ್ಥಿಸಿಕೊಂಡಿತು. ನನ್ನ ಮನಸ್ಸಿನ ಈ ರೀತಿಯ ಏರಿಳಿತದ ನಡುವೆ ಅದೆಷ್ಟೋ ಸಾರಿ ಅವಳ ಸಾಕಷ್ಟು ಕರೆಗಳು ಬಂದು ಹೋಗಿದ್ದವು, ಕೆಲವೊಂದಕ್ಕೆ ನಾನು  ಉತ್ತರಿಸಿದೆ. ಕೆಲವೊಮ್ಮೆ ನಾನು ತುಂಬಾ ಬಿಜಿ  ಎಂದೆ. ಇನ್ನು ಕೆಲವೊಮ್ಮ ಆಗಲೇ ಒಂದು ಸುತ್ತು ಆರೋಗ್ಯ
ಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ನೋಡೋಣ ಅಂತಾ ಹೇಳಿದ್ದಾರೆ ಎಂದು ಹಸಿಹಸಿ ಸುಳ್ಳು ಹೇಳಿದೆ.ಇನ್ನು ಕೆಲವೊಂದು ಸಾರಿ ಅವಳ ಪೋನ್ ರಿಸಿವ್ ಮಾಡದೇ ಕಟ್  ಮಾಡಿದೆ.ತೀರಾ ತಲೆ ಕೆಟ್ಟಾಗ ಸ್ವಿಚ್ ಆಫ್ ಮಾಡಿದೆ.
ಇಷ್ಟೆಲ್ಲಾ ನಾನು ಮಾಡುವ ಅಗತ್ಯ ಇತ್ತಾ? ಅವಳೇನೂ ಕೇಳಿ ಬಂದಿರಲಿಲ್ಲ. ಮೇಲಾಗಿ ಆ ಮಗು ಮುಖ ನೋಡಿನಾದರೂ ನವೋಮಿ ಒಂದು ಸಹಾಯ ಮಾಡೇ ಎಂದು ನನ್ನೊಳಗಿನ ನವೋಮಿ ನನ್ನನ್ನು ಕೇಳುತ್ತಲೇ ಇದ್ದಳು. ಆದರೆ ನನ್ನ ಅಸಹಾಯಕತೆ ನನ್ನನ್ನು ಕಿವುಡಾಗಿಸಿತ್ತು. ಅದೊಂದು ದಿನ ನಾನು ಯಾವುದೋ ರಾಜಕಾರಣಿ ಬಿಟ್ಟ ಹಸಿಹಸಿ ಸುಳ್ಳನ್ನು ಟೆಲಿಕಾಸ್ಟ್ ಮಾಡೋದ್ರಲ್ಲಿ ಮಗ್ನ ಆಗಿದ್ದಾಗ ಇವಳ ಫೋನ್ ಬಂತು.
ಅಯ್ಯೋ ಎಂದು ಕೊಂಡೆ.
ರಿಸೀವ್ ಮಾಡಲಿಲ್ಲ. ಸೈಲೆಂಟ್ ಮೋಡಿನಲ್ಲಿಟ್ಟು,  ನನ್ನ ಕೆಲಸದಲ್ಲಿ ಬಿಜಿಯಾದೆ.
ಆದರೂ ಯಾಕೋ ನನ್ನ ಮನಸ್ಸಿನಲ್ಲಿ ಪಾಪಪ್ರಜ್ಞೆಯೊಂದು ಮೂಡಿ ಮರೆಯಾಗಿತ್ತು. ಅಷ್ಟೊತ್ತಿಗಾಗಲೇ ಅರ್ಧದಿನ ಕಳೆದೇಹೋಗಿತ್ತು. ಮತ್ತೆ ಮೊಬೈಲ್ ನೋಡಿಕೊಂಡಾಗ ಏನಿಲ್ಲವೆಂದರೂ ಅವಳ 30 ಕರೆಗಳು ಬಂದಿದ್ದವು.
ಯಾಕೋ ದಿಗಿಲಾಗಿ ಫೋನ್ ಮಾಡಿದೆ.
ಆ ಕಡೆಯಿಂದ ಅವಳು ಅಳುತ್ತಿದ್ದಳು
ಯಾಕೆ ಎಂದೆ
ಅವಳ ಧ್ವನಿ ನಡುಗುತ್ತಿತ್ತು.
ಈಗ ನನಗೇ ದಿಗಿಲಾಗಿ ಹೋಗಿತ್ತು.
ಮತ್ತೊಮ್ಮೆ ಏನಾಯ್ತು ಎಂದೆ.
ನನ್ನ ಮಗ ಸತ್ತುಹೋದ.ಒಮ್ಮೆ ಬಂದು ನೋಡಿ.ಬೌರಿಂಗ್ ನಲ್ಲಿ ಬಾಡಿ ಇದೆ.ನೀವಂತೂ ಹೆಲ್ಪ್ ಮಾಡೇ ಮಾಡ್ತಿದ್ರಿ . ಆದ್ರೆ ಆ ಭಾಗ್ಯ ನನ್ನ ಮಗನಿಗೆ ಇಲ್ವಲ್ಲ.ತುಂಬಾ ಜ್ವರ ಇತ್ತು. ಔಷಧಿಗೂ ದುಡ್ಡಿರಲಿಲ್ಲ.ಮಗನ ಕಣ್ಣುಗಳನ್ನು ದಾನ ಮಾಡ್ತಾ ಇದ್ದೀನಿ..
ಅವಳು ಅಳುತ್ತಲೇ ಇದ್ದಳು.
ಮಾತನಾಡುತ್ತಲೇ ಇದ್ದಳು.
ನನಗೆ ಮುಂದೇನೂ ಕೇಳಿಸಲಿಲ್ಲ.
ನನ್ನೊಳಗಿನ ನವೋಮಿ ಈಗಲೂ ನನ್ನನ್ನು ಹಂಗಿಸುತ್ತಾಳೆ.

‍ಲೇಖಕರು avadhi

August 25, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

12 ಪ್ರತಿಕ್ರಿಯೆಗಳು

 1. krishnananda sharma

  ತುಂಬ ಚನ್ನಾಗಿದೆ. ಕಥೆ ಓದುತ್ತ ಹೋದಾಗ ಅಳು ಬಂತು. ಪತ್ರಕರ್ತರ ಮನಸ್ಸು
  ನನಗೆ ಅರ್ಥವಾಗುತ್ತೆ ಬಿಡಿ. ಅವ್ರಿಗೆ ಏನೂ ಸಹಾಯ ಮಾಡಿಲ್ವಲ್ಲ ಅಂತ ಪಾಪಪ್ರಜ್ಞೆ
  ಕಾಡುತ್ತೆ ಅಲ್ವಾ?

  ಪ್ರತಿಕ್ರಿಯೆ
 2. jodidar

  Madam Navomi,
  you have correctly exposed every one of us.Ashamed of ourselves-it is our sin that we are born in this ‘spititual’ nation.I congratulate you for boldly telling the naked truth.
  -pani

  ಪ್ರತಿಕ್ರಿಯೆ
 3. jodidar

  Madam,
  you have successfully exposed the system by your neat writings.Am ashamed for having taken birth here.You are blessed with a poetic narrative style and i congratulate you for that but how to improve this set up?
  -jodidar

  ಪ್ರತಿಕ್ರಿಯೆ
 4. subramani

  ನವೋಮಿ ಖಂಡಿತ ನೀವು ಸಹಾಯ ಮಾಡಬೇಕಿತ್ತು.

  ಪ್ರತಿಕ್ರಿಯೆ
 5. Radhika

  Wonder what prevented you from putting a word to the minister when you had the privilege to meet him while the poor lady did not have. After all you were not asking a favour for yourself. It was for a person who was really in need of help.

  ಪ್ರತಿಕ್ರಿಯೆ
 6. ಚಂದಿನ

  ಇದು ಖಂಡಿತ ಕೂಲ್ ಟಾಕ್ ಅಲ್ಲ ,
  ನಿಜವೆಂದು ನಂಬಲು ಕಷ್ಟವೆ.
  ನಿಜವಾಗಿದ್ದರೆ ಖಂಡಿತ ಸಹಾಯ ಮಾಡ್ತಿದ್ರಿ.
  -ಚಂದಿನ

  ಪ್ರತಿಕ್ರಿಯೆ
 7. srinivasagowda

  ಕರುಳು ಕಿತ್ತುಬರುವ ಕಥೆ ಬರಿದಿದ್ದೀರಿ, ಆದ್ರೂ ನೀವು ಸಹಾಯ ಮಾಡಬಹುದಿತ್ತು,
  ಪತ್ರರ್ತರಾದ ಮಾತ್ರಕ್ಕೆ ಕಷ್ಠದಲ್ಲಿದ್ದವರಿಗೆ ಸಹಾಯ ಮಾಡೋದು ಎಥಿಕ್ಸ್ಗ್ ದಕ್ಕೆ ಬರೋ
  ವಿಶಯ ಅಲ್ಲ, ನಿಮ್ಮೂಳಗಿನ ನವೋಮಿ ಈಗ ನನ್ನನ್ನು ಹಂಗಿಸುತ್ತಾಳೆ,
  ಉತ್ತರ ಕೊಡಿ….?

  ಪ್ರತಿಕ್ರಿಯೆ
 8. parasurama kalal

  §jà ¥ÀvÀæPÀvÀð£ÁVzÀÝgÉ ¸Á®zÀÄ ªÉÄÃqÀA, M§â ¥ÀvÀæPÀvÀð AiÀiÁåQÖ«¸ïÖ DUÀ¨ÉÃPÀÄ. E®èªÁzÀgÉ £ÁªÀÅ F zÀĵÀÖ ¯ÉÆÃPÀzÀ°è K£ÉÆà ªÀiÁqÀ¯ÁUÀĪÀÅ¢®è. ¤ªÀÄä ¥ÁæªÀiÁtÂPÀ §gÀºÀPÉÌ zsÀ£ÀåªÁzÀUÀ¼ÀÄ.
  -¥ÀgÀıÀÄgÁªÀÄ PÀ¯Á¯ï

  ಪ್ರತಿಕ್ರಿಯೆ
 9. manjunatha prasad

  preethiya navami,
  with your contacts and position definitely a precious life could have been saved.it was your half hearted approach which took away that life.ministers or any bureacrat would have been too happy to help.never make such mistake in future

  ಪ್ರತಿಕ್ರಿಯೆ
 10. srikant k b

  it’s good. real story. realy very hard to accept
  but even though we should go for fact i dont how u
  u did’t try to appoch the minister because you are
  media line so you have that dare ask anything.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: