ಪಿ ಚಂದ್ರಿಕಾ
ನೋವು
ತಾಯಿಯೊಬ್ಬಳು ವಸಂತ ಕಾಲದಲ್ಲಿ ತನ್ನ ಕಂದನ ಗೋರಿಯನ್ನು ಹುಡುಕುತ್ತಾ ಬಂದಳು. ಇಡೀ ಭೂಮಿಗೆ ಹುಚ್ಚು ಹತ್ತಿದೆ ಎನ್ನುವಂತೆ ಹೂಗಳು ಅರಳಿದ್ದವು. ಬಣ್ಣದ ಹೂಗಳು, ಸುವಾಸನೆಯ ಹೂಗಳು, ಚಂದದ ಹೂಗಳು. ಮಗುವಿನ ಗೋರಿಯ ಹುಡುಕಿ ಸುಸ್ತಾದ ತಾಯಿ ಗೊಣಗುತ್ತಾಳೆ: “ರಕ್ಕಸಿ ಭೂಮಿ ನನ್ನ ಕಂದನ ಎಲುಬನ್ನೂ ಬಿಡದೆ ತಿಂದಿರಬೇಕು.”
*
ಹಸಿವು
ಯುದ್ಧಭೂಮಿಯ ತುಂಬಾ ಹೆಣಗಳು. ಇಬ್ಬರು ಸೈನಿಕರು ಮಾತ್ರ ಉಳಿದಿದ್ದಾರೆ. ಅವರಿಗೆ ಅನ್ನಿಸುತ್ತಿದೆ. “ನಾವು ಯಾತಕ್ಕಾಗಿ ಕೊಂದೆವು? ಯಾರಿಗಾಗಿ ಕೊಂದೆವು?” ತಮ್ಮ ಕೈಗಳ ರಕ್ತ ನೋಡಿಕೊಂಡು ಬೇಸರಿಸಿದರು. ಇಬ್ಬರಿಗೂ ದಣಿವು, ಇಬ್ಬರಿಗೂ ಬೇಸರ. ಇನ್ನು ಹಸಿವು ತಡೆಯುವುದು ಅಸಾಧ್ಯ ಅನ್ನಿಸಿತು. ಅಲ್ಲಿಗೆ ಎಲ್ಲಿಂದಲೋ ಒಂದು ಜಿಂಕೆ ಬಂತು. ತಕ್ಷಣ ಒಬ್ಬ ಹೇಳಿದ: “ಹೊಡೆಯೋ ಅದನ್ನ.” ಇಬ್ಬರೂ ಸೇರಿ ಜಿಂಕೆಯನ್ನು ಕೊಂದು ತಿಂದರು. ಅವರ ಹಸಿವು ತೀರಿತ್ತು.
*
ಮರಣ ಶಾಸನ
ರಾಜನೊಬ್ಬ ತನ್ನ ಮರಣ ಶಾಸನ ಬರೆಸಿದ. “ಇದನ್ನು ನನ್ನ ಗೋರಿಯ ಮೇಲೆ ಬರೆಯಿಸಿರಿ” ಎಂದು ತನ್ನ ಮಕ್ಕಳಿಗೆ ಹೇಳಿದ. ಸಾಯುವ ಮೊದಲೇ ಶಿಲ್ಪಿಯೊಬ್ಬ ಕಲ್ಲಿನ ಮೇಲೆ ಮರಣ ಶಾಸನ ಕೆತ್ತಿದ. ರಾಜನ ಮಕ್ಕಳು ಕಾಯುತ್ತಾ ಕುಳಿತಿದ್ದರು, ಅಪ್ಪ ಯಾವಾಗ ಸಾಯುತ್ತಾನೆ ಎಂದು.
*
ಥೇಟ್ ಅಪ್ಪ
ನಾಟಕಕಾರನೊಬ್ಬ ತನ್ನ ಪಾತ್ರಕ್ಕೆ ರಂಗು ತುಂಬಿದ್ದ. ಅದರಲ್ಲಿನ ಮುಖ್ಯ ಪಾತ್ರವನ್ನು ಬೇರೆಯವರು ಕೆಡಿಸಿಯಾರು ಎಂದು ತಾನೇ ನಟಿಸುತ್ತಿದ್ದ. ಅದು ಹೆಂಡತಿಯನ್ನು ನೋಯಿಸುವ ದುಷ್ಟ ಪಾತ್ರ. ನಾಟಕ ನೋಡಿ ಎಲ್ಲರೂ “ಅದ್ಭುತವಾಗಿದೆ” ಎಂದರು. ಅವನ ಪುಟ್ಟ ಮಗು ಮಾತ್ರ ಹೇಳಿತು: “ಇದು ಥೇಟ್ ನನ್ನ ಅಪ್ಪನ ಹಾಗೇ ಇದೆ.”
ಓಹ್! ಪುಟ್ಟ ಪುಟ್ಟ ಕಥೆಗಳು…
ಬಹಳ ಚೆನ್ನಾಗಿವೆ. ತುಂಬಾ ಖುಶಿಯಾಯ್ತು.
ಇವುಗಳದೊಂದು ಪುಸ್ತಕ ಇದೆ ಅಲ್ಲವೇ?