ನನ್ನ ದಾರಿಯ ವಿನ್ಯಾಸಕಾರ – ಮೋಹನ ಸೋನ

ಮೂರ್ತಿ ದೇರಾಜೆ ವಿಟ್ಲ

ಕಳೆದ 34 ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲೇ ತನ್ನನ್ನು ತೊಡಗಿಸಿಕೊಂಡವರು. ‘ಪ್ರದರ್ಶನ’ಕ್ಕಿಂತಲೂ ‘ಪ್ರಕ್ರಿಯೆ’ ಮುಖ್ಯ ಎಂದು ನಂಬಿದವರು. ರೆಡಿಮೇಡ್ ಸ್ಕ್ರಿಪ್ಟ್ ಮುಟ್ಟದೇ, ಮಕ್ಕಳಿಗೆ ಕತೆ ಹೇಳಿ, ಮಕ್ಕಳ ಮೂಲಕವೇ ಸಂಭಾಷಣೆಗಳನ್ನು ರೂಪಿಸುತ್ತಾ, ನಾಟಕ ಕಟ್ಟುವ ಇವರ ರಂಗ ಕಾಯಕ ತುಂಬಾ ಅಪರೂಪವಾದದ್ದು ಮತ್ತು ವಿಶಿಷ್ಟವಾದದ್ದು.

ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿ ತೊಡಗಿಸಿಕೊಂಡರೂ, ಆಹ್ವಾನದ ಮೇರೆಗೆ, ಮೈಸೂರಿನ ರಂಗಾಯಣ ಚಿಣ್ಣರಮೇಳದಲ್ಲೂ 3 ನಾಟಕಗಳನ್ನು ವಿನ್ಯಾಸ ಗೊಳಿಸಿದ್ದಾರೆ.

ಅನಾರೋಗ್ಯದ ನಿಶ್ಯಕ್ತಿಯಿಂದ ಹಾಸಿಗೆ ಹಿಡಿದ ನಾನು, ಎದ್ದು ಕುಳಿತಾಗ ಮೋಹನ ಸೋನ ಮಲಗಿ ಆಗಿತ್ತು. ಮೋಹನ್ ಇನ್ನು ಏಳುವುದಿಲ್ಲ ಎನ್ನುವುದು ಅರಿವಾದಾಗ ಅಳಿದುಳಿದ ಶಕ್ತಿಯೂ ಸೋರಿಹೋಯ್ತೇನೋ…!! ಮೋಹನ್ ಸೋನರ ನೆನಪನ್ನು ಹಂಚಿಕೊಂಡು ಹಗುರವಾಗಬೇಕೆಂದುಕೊಂಡರೂ… ಇಷ್ಟು ದಿನ ಸಾದ್ಯವೇ ಆಗಲಿಲ್ಲ.

೧೯೮೦ ರ ಮೊದಲು ಮೋಹನ ಸೋನ ಅವರನ್ನು ನೋಡಿ ಗೊತ್ತಿರಲಿಲ್ಲ. ರಂಗಾಯಣದ ಕೃಷ್ಣಕುಮಾರ ನಾರ್ಣಕಜೆ ಆಗಾಗ ಹೇಳುವುದು ಕೇಳಿ ಗೊತ್ತಿತ್ತು,

‘ಸೋಣಂಗೇರಿ ನಡುಮನೆ’ಯ ಮೋಹನ ಗೌಡ ಮತ್ತು ಕೃಷ್ಣಕುಮಾರ ನಾರ್ಣಕಜೆ ಜೊತೆಯಾಗಿ ದೊಡ್ಡತೋಟ ಶಾಲೆಯಲ್ಲಿ ಶಿಕ್ಷಕರಾಗಿ ದುಡಿದವರು.

ಮೋಹನ ಸೋನ ಅವರಿಂದ ಆಕರ್ಶಿತನಾಗಿ, ಕೃಷ್ಣಕುಮಾರ ಅವರ ನಾಟಕ ಚಟುವಟಿಕೆಯೊಂದಿಗೆ ಸೇರಿಕೊಂಡ. ಅಲ್ಲಿ ಅನೇಕ ನಾಟಕ ಆಗಿತ್ತು.
ನಂತರ ಕೃಷ್ಣಕುಮಾರ ನೀನಾಸಂ ಗೆ ಸೇರಿಕೊಂಡ, ಮೋಹನ ವಿಟ್ಲದ ಸಿ.ಪಿ.ಸಿ.ಆರ್.ಐ. ಎಂದು ಕರೆಯಲ್ಪಡುವ ಕೇಂದ್ರ ಸರಕಾರದ ಅಡಿಕೆ ಸಂಶೋಧನಾ ಕೇಂದ್ರದಲ್ಲಿ ಫೊಟೊಗ್ರಾಫರ್- ಆರ್ಟಿಸ್ಟ್ ಆಗಿ ಸೇರಿಕೊಂಡರು.

ಆಗ ನಾನು ಕ್ರಿಕೆಟ್ ಗುಂಗಿನಲ್ಲಿದ್ದ ಕಾಲ. ವಿಟ್ಲದ ಚಂದಳಿಕೆಯಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿನ ಮೋಹನ ಸೋನ ಅವರ ಅಳಿಲು ರಾಮಾಯಣ ಮಕ್ಕಳ ನಾಟಕದ ಬಗ್ಗೆ ಗೊತ್ತಾದದ್ದು ನಾಟಕ ಮುಗಿದ ಎರಡು ದಿನಗಳ ನಂತರ. ಛೇ..! ಮೊದಲೇ ಗೊತ್ತಿದ್ರೆ ನಾಟಕ ನೋಡಬಹುದಿತ್ತು ಅನಿಸಿತ್ತು. ಅಲ್ಲಿಗೇ ಮರೆತೂ ಹೋಯಿತು.

ಮತ್ತೆ ಪುನಃ ಅವರ ನೆನಪಾದದ್ದು.. ಮುಂದಿನ ವರ್ಷ ವಾರ್ಷಿಕೋತ್ಸವದ ಸಂದರ್ಭದಲ್ಲಿ. ಮೋಹನ ಸೋನ ಅವರ ನಾಟಕ ಇದೆಯಂತೆ ಎನ್ನುವುದು ಗೊತ್ತಾಗಿ ಹೋದೆ. “ಕಾಬೂಲಿವಾಲ” ನಾಟಕ.

ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳ ನಾಟಕಕ್ಕೆ ಸಂಗೀತ ನೀಡಬೇಕಾದ ಸಂದರ್ಭದಲ್ಲಿ ಅನಿವಾರ್ಯವಾಗಿ ಮಕ್ಕಳ ನಾಟಕ ನೋಡಿದ್ದು ಬಿಟ್ಟರೆ, ಮಕ್ಕಳ ಪ್ರದರ್ಶನವಿದ್ದ ಕಡೆಗೆ ನಾನು ತಲೆ ಹಾಕಿದವನೇ ಅಲ್ಲ. ಮಕ್ಕಳ ನಾಟಕ ಪ್ರದರ್ಶನವನ್ನು ಆಯಾ ಶಾಲೆಯ ಶಿಕ್ಷಕರೂ ಮಕ್ಕಳ ಹೆತ್ತವರೂ ಮಾತ್ರವಲ್ಲದೇ ಮೂರನೆಯವರೂ ನೋಡುವಂತೆ ಮಾಡಲು ಸಾದ್ಯ ಎನ್ನುವುದು ಗೊತ್ತಾದದ್ದು, ಮೋಹನ್ ಅವರ ನಾಟಕ ನೋಡಿ.

ಮತ್ತೆ ಅವರು ಸುಬ್ರಾಯ ಚೊಕ್ಕಾಡಿಯವರು ಬರೆದ, ಹಾವು ಮತ್ತು ಹಕ್ಕಿಮರಿಯ ಕುರಿತಾದ ಒಂದು ಕವನವನ್ನು ತಮ್ಮ ಸಹೋದ್ಯೋಗಿಗಳಿಗೆ ನಾಟಕ ಮಾಡಿಸಿದ್ದರು. ಇರುವ ವೇದಿಕೆಯನ್ನು ಬಳಸಿಕೊಳ್ಳುವ ಕ್ರಮ, ಸರಳವಾದ ರಂಗ ತಂತ್ರಗಳು, ಖರ್ಚಿಲ್ಲದ ಕಾಸ್ಟ್ಯೂಮ್ಸ್ , ಬಣ್ಣ ಮತ್ತು ಬೆಳಕು ಇತ್ಯಾದಿಗಳಿಂದಾಗಿ ಈ ಎರಡು ನಾಟಕಗಳು ನನ್ನ ಮೇಲೆ ತುಂಬಾ ಪರಿಣಾಮ ಬೀರಿದವು. ಅಲ್ಲಿ ಅವರ ಪರಿಚಯ ಮಾಡಿಕೊಂಡೆ.

ಆಗ ವಿಟ್ಲದಲ್ಲೇ ವಾಸ್ತವ್ಯವಿದ್ದ ಅವರು ನನ್ನಲ್ಲಿ, ಸಾಯಂಕಾಲ ಒಂದಷ್ಟು ಮಕ್ಕಳು ಸಿಕ್ಕಬಹುದೇ…? ಏನಾದರೂ ಚಟುವಟಿಕೆ ಮಾಡಬಹುದಿತ್ತು…!! ಅಂತ ಹೇಳಿದರು. ನಮ್ಮ ಕ್ಲಬ್ಬಿನ ಬಿಡುವಿಲ್ಲದ ಚಟುವಟಿಕೆಗಳಲ್ಲಿ ಉತ್ಸಾಹದಲ್ಲಿದ್ದ ನಾನು, ಇದೂ ಒಂದು ಚಟುವಟಿಕೆ ಎಂದು ಖುಶಿಯಾಗಿ, ಶಾಲೆಯಲ್ಲಿ, ಹೆತ್ತವರಲ್ಲಿ ಮಾತಾಡಿ ಒಂದಷ್ಟು ಮಕ್ಕಳನ್ನು ಒಟ್ಟು ಸೇರಿಸಿದೆ.

ಮೊದಲ ದಿನ ಅಲ್ಲಿದ್ದು ಮಕ್ಕಳನ್ನುಮೋಹನರ ಸುಪರ್ದಿಗೆ ಬಿಡುವುದು ಅಂತ ತೀರ್ಮಾನಿಸಿದ್ದೆ. ಆದರೆ ಒಂದೇ ದಿನದಲ್ಲಿ ನಾನು ಕ್ಲೀನ್ ಬೌಲ್ಡ್.
ಮತ್ತೆ ಪ್ರತಿದಿನ ಸಾಯಂಕಾಲವನ್ನೇ ಎದುರು ನೋಡುವ ಹಾಗಾಯ್ತು. ಕ್ರಿಕೆಟ್ ನನ್ನನ್ನು ಬಿಟ್ಟು ಓಡಿ ಹೋಯ್ತು.

ಮಕ್ಕಳ ಸೃಜನಶೀಲತೆ ನನ್ನ ಗಮನಕ್ಕೂ ಬರತೊಡಗಿತು. ಆಟದ ಮೂಲಕವೇ ಮಕ್ಕಳಿಂದ ಅದನ್ನು ಹೊರತೆಗೆಯುವ ಮೋಹನ್ ಹೆಚ್ಚು ಹೆಚ್ಚು ಇಷ್ಟವಾಗತೊಡಗಿದರು. ಸುಮಾರು ಎರಡು ವರ್ಷಗಳ ಕಾಲ ಯಾವ ಪ್ರದರ್ಶನದ ಹಂಗೂ ಇಲ್ಲದೇ ಮಕ್ಕಳೊಂದಿಗೆ ಸೇರಿ ಆಟ ಆಡಿದ್ದೇವೆ. ನಾಟಕ ಮಾಡಿದ್ದೇವೆ.

ಲಿಲ್ಲಿ ಪುಟ್ಟರ ಕತೆ, ಹೇನು ಸತ್ತು ಕಾಗೆ ಬಡವಾಯಿತು, ಗುಮ್ಮಟ ದೇವರಿಗೆ ದಾರಿಬಿಡಿ, ಮೂರು ಕರಡಿಗಳು, ಅರ್ಗಣೆ ಮುದ್ದೆ, ಅಗೋಳಿ ಮಂಜಣ್ಣ, ಮಂಗ ಮತ್ತು ಮೊಸಳೆ ಇತ್ಯಾದಿ ಪಂಜೆಯವರ, ಪಳಕಳರ ಕತೆಗಳು, ಮಕ್ಕಳ ಪಾಠದಲ್ಲಿದ್ದದ್ದು, ಚಂದಮಾಮದ ಕತೆ, ಮಕ್ಕಳದ್ದೇ ಕಲ್ಪನೆಯ ಕತೆಗಳು ಹೀಗೆ ಲೆಕ್ಕವಿಲ್ಲದಷ್ಟು ನಾಟಕಗಳು. ಮಕ್ಕಳು ಆಯ್ಕೆ ಮಾಡಿದ ಜಾಗವೇ ವೇದಿಕೆ.

ಮರಗಿಡಗಳ ನಡುವೆ, ಜಾರುಬಂಡಿಯ ಬದಿ, ಮೈದಾನ, ತಗ್ಗು, ದಿಣ್ಣೆಗಳಿರುವ ಜಾಗ ಹೀಗೆ ಮಕ್ಕಳು ಆರಿಸಿದ ಜಾಗ. ಮೋಹನ್ ನೀಡುವ ಸೂಚನೆಗಳು, ಆ ಮೂಲಕ ಪ್ರಕಟವಾಗುವ ಮಕ್ಕಳ ಕಲ್ಪನಾ ವಿನ್ಯಾಸ, ಅದನ್ನು ಕಂಡು ನಮಗಾಗುವ ಥ್ರಿಲ್‌ ಒಟ್ಟೂ ಸಂಭ್ರಮದ ಆ ಕ್ಷಣಗಳು ಇಂದಿಗೂ ಜೀವಂತ.

“ಮೂರ್ತಿ ಜೊತೆಯಲ್ಲಿರುವುದು ಒಳ್ಳೇದಾಗ್ತದೆ. ನನ್ನ ಆಲೋಚನೆಗಳಿಗೆ ಬಲ ಬರ್ತದೆ” ಅಂತ ವಿಟ್ಲದ ಅನಂತಕೃಷ್ಣ ಹೆಬ್ಬಾರರಲ್ಲಿ ಮೋಹನ್ ಹೇಳಿದ್ದರಂತೆ. “ಹೌದು ನೀವು ಈಗ ನಿಮ್ಮ ನಿಜವಾದ ದಾರಿಗೆ ಬಂದಿರಿ” ಅಂತ ಹೆಬ್ಬಾರರು ನನ್ನನ್ನು ಅಭಿನಂದಿಸಿದ್ದರು. ನಾನು ಪುಳಕಗೊಂಡಿದ್ದೆ.

ಈ ಸಮಯದಲ್ಲಿ ಚಿತ್ರ ಕಲಾವಿದರಾದ ಸುರೇಶ್ ಹಂದಾಡಿಯವರೂ ಆಸಕ್ತರಾಗಿ ಜೊತೆ ಸೇರಿಕೊಂಡರು. ಮೋಹನ್ ಅವರ ಯೋಚನೆಯಂತೆ “ಬಣ್ಣ ಮತ್ತು ಸಂಗೀತ” ಅಂತ ಒಂದು ಪ್ರಯೋಗ ಮಾಡಿದ್ದೆವು. ಮೋಹನ್ ಅವರ ಬಣ್ಣ, ಸುರೇಶ್ ಹಂದಾಡಿಯವರ ರೇಖೆಗಳು ಮತ್ತು ನನ್ನ ಸಂಗೀತ. ಸಂಗೀತ ಬಣ್ಣ ಮತ್ತು ರೇಖೆಗಳಿಗಿರುವ ಸಂಬಂಧವನ್ನು ಹುಡುಕುವ ಪ್ರಯತ್ನ. ಆ ಪ್ರಯೋಗ ಒಮ್ಮೆ ಸುಳ್ಯದಲ್ಲಿ ವೇದಿಕೆ ಏರಿತ್ತು.

ಕರಾವಳಿ ರಂಗ ಜಾತಾ ಮತ್ತು ಎಲ್ಲಾ ತಂಡಗಳ ಹತ್ತು ನಿಮಿಷದ ಕಾರ್ಯಕ್ರಮ. ಎಲ್ಲಾ ತಂಡಗಳೂ ನಾಟಕದ ತುಣುಕನ್ನು ಪ್ರದರ್ಶಿಸಿದರೆ ನಮ್ಮ “ಸಂಗೀತ ಮತ್ತು ಬಣ್ಣ” ಬಹಳಷ್ಟು ರಂಗಾಸಕ್ತರನ್ನು ಸೆಳೆದ ಕಾರ್ಯಕ್ರಮ. ಆದರೆ ಪತ್ರಿಕೆಯವರಿಗೆ “ಇದೊಂದು ಅಸಂಬದ್ಧ ಕಾರ್ಯಕ್ರಮ” ಎನಿಸಿತ್ತು.

ವಿಟ್ಲದಲ್ಲಿ ಉತ್ತಮ ನಟರು ಇದ್ದರು. ಸಾಂಪ್ರದಾಯಿಕ ನಾಟಕಗಳು ಸಾಕಷ್ಟು ರಂಗವೇರುತ್ತಿದ್ದುವು. ಶಿವರಾಮ ಕಾರಂತರ ಪ್ರಸಿದ್ದ “ಚೋಮನ ದುಡಿ”ಯನ್ನು ನಾಟಕ ಮಾಡಿ ಅಂತ ಮೋಹನ್‌ರಲ್ಲಿ ಹೇಳಿದೆ. ಚೋಮನದುಡಿ ನಾಟಕ ಕೆದಂಬಾಡಿ ಜತ್ತಪ್ಪ ರೈಯವರು ತುಳುವಿಗೆ ಅನುವಾದಿಸಿದ್ದರು. ತುಳುವಿನಲ್ಲೇ ನಾಟಕ ಮಾಡಬಹುದು ಅನ್ನಿಸಿತ್ತು ಅವರಿಗೂ. ನಾನು ಚೋಮನ ಪಾತ್ರ ಮಾಡಬೇಕು ಅಂತ ಇತ್ತು ಅವರಿಗೆ. ನಾನು ಸುತರಾಂ ಒಪ್ಪದೇ ಸಂಗೀತದ ಹೊಣೆ ಹೊತ್ತುಕೊಂಡೆ. ಅದೂ ಧೈರ್ಯ ಸಾಲದೇ ವಿಟ್ಲದ ಒಬ್ಬ ಅಸಾಧಾರಣ ವ್ಯಕ್ತಿ ದೇವಸ್ಯ ಶಾಂ ಭಟ್ಟರನ್ನು ಒಪ್ಪಿಸಿದೆ. ಅವರು ಮೋಹನರಷ್ಟೇ ನಿಷ್ಟೆಯಿಂದ ಸಂಗೀತದಲ್ಲಿ ತೊಡಗಿಕೊಂಡರು.

ಮೊದಲು ಒಪ್ಪಿಗೆ ಕೊಡದೇ ಇದ್ದ ಶಿವರಾಮ ಕಾರಂತರು ನಮ್ಮ ಸಪ್ಪೆ ಮುಖ ನೋಡಿ “ಆಯ್ತು ನೀವೊಂದು ಬಾಕಿ ಯಾಕೆ, ನೀವೂ ಹುಗಿಯಿರಿ ಚೋಮನ ಹೆಣವನ್ನು” ಅಂತ ಕಾರಂತ ಶೈಲಿಯಲ್ಲೇ ಒಪ್ಪಿಗೆ ಕೊಟ್ಟಿದ್ದರು. (ಅದು ಬೇರೆಯೇ ಬರಹ ಇದೆ)

ಉಪನ್ಯಾಸಕರಾಗಿದ್ದ ಅನಂತಕೃಷ್ಣ ಹೆಬ್ಬಾರ್ ಅವರ ಸಂಘಟನೆಯಲ್ಲಿ “ರಂಗಾಸಕ್ತರು ವಿಟ್ಲ” ತಂಡ ಹುಟ್ಟಿಕೊಂಡು ತುಳು ಭಾಷೆಯಲ್ಲಿ ಚೋಮನದುಡಿ ನಾಟಕ ಪ್ರತೀ ದಿನ ಸಾಯಂಕಾಲ ೨-೩ ಗಂಟೆಗಳ ರಿಹರ್ಸಲ್, ರಿಹರ್ಸಲ್ ಹೊತ್ತಿನಲ್ಲೇ ೨೦೦ -೩೦೦ ಜನ ಪ್ರೇಕ್ಷಕರು ಬಂದು ನೋಡುತ್ತಿದ್ದರು. ಸುಮಾರು ಎರಡು ತಿಂಗಳು ಅಭ್ಯಾಸ ನಡೆದಿತ್ತು.

ಸಾಮಾನ್ಯವಾಗಿ ಎಲ್ಲರೂ ಮೋಹನ ಸೋನರಿಗೆ ಸಲಹೆ ಕೊಡುವವರೇ. ಮೋಹನ್ ಯಾರ ಅನಿಸಿಕೆಯನ್ನೂ ತಳ್ಳಿ ಹಾಕುತ್ತಿರಲಿಲ್ಲ.
ಅವರಿಗೆ ನಾಟಕ ಎಲ್ಲರದ್ದೂ ಆಗಬೇಕು ಎನ್ನುವ ಮನಸ್ಸು. ಹಾಗೆ ಸುಮಾರು ಅರ್ಧ ಎಕರೆ ಜಾಗವನ್ನು ರಂಗವೇದಿಕೆಯನ್ನಾಗಿಸಿ,
ಆ ಕಾಲದಲ್ಲಿ ವಿಟ್ಲಕ್ಕೆ ತೀರಾ ಹೊಸದೆನಿಸಿದ್ದ ಸ್ಪಾಟ್ ಲೈಟುಗಳು ೬೦ಕ್ಕೂ ಮಿಕ್ಕಿ ಬಳಸಿಕೊಂಡು ಚೋಮನದುಡಿ ಪ್ರದರ್ಶನಗೊಂಡಿತ್ತು.
ಚೋಮನ ಮನೆ, ಧನಿ ಸಂಕಪ್ಪಯ್ಯನ ಮನೆ, ಗದ್ದೆ, ಹೊಳೆ, ಚರ್ಚು, ಘಟ್ಟ ಹತ್ತುವ ದೃಶ್ಯ ಎಲ್ಲವೂ ಖರ್ಚೇ ಇಲ್ಲದೇ ಸಾಕಾರಗೊಂಡಿತ್ತು..
ಸರಳ ಸೆಟ್ಟಿಂಗ್, ಲೈಟುಗಳ ಪರಿಣಾಮಕಾರಿಯಾದ ಬಳಕೆಯಿಂದ ದೃಶ್ಯವೈಭವವೇ ನಾಟಕದ ಪ್ರಧಾನ ಪಾತ್ರವಾಗಿತ್ತು.

ನಾಲ್ಕೈದು ಸಾವಿರ ಜನ ಪ್ರೇಕ್ಷಕರು ಪ್ರದರ್ಶನ ನೋಡಿದ್ದರು. ಎರಡು ರೂಪಾಯಿ ಪ್ರವೇಶದರ ಅಂತ ಇಟ್ಟಿದ್ದರೂ… ದುಡ್ಡಿಲ್ಲ ಅಂತ ನಾಟಕ ಕಳೆದುಕೊಳ್ಳಬೇಡಿ. ಉಚಿತ ಪ್ರವೇಶವೂ ಇದೆ. ಅಂತ ಕರಪತ್ರದಲ್ಲಿ ಸೂಚಿಸಲಾಗಿತ್ತು. ಪ್ರೇಕ್ಷಕಾಂಗಣಕ್ಕೆ ಆವರಣವೇ ಇರಲಿಲ್ಲ. ಕುಳಿತುಕೊಳ್ಳಲು ನೆಲವೇ ಆಸನ. ಕೆಲವರು ಸ್ಥಳವಿಲ್ಲದೇ ನಿಂತೇ ನಾಟಕ ನೋಡಿದ್ದಾರೆ. ಆದರೂ ಬಹಳಷ್ಟು ಜನ ನಾಟಕ ಮುಗಿದ ಮೇಲೆ ಹುಡುಕಿಕೊಂಡು ಬಂದು ಕೈಲಾದಷ್ಟು ಹಣ ನೀಡಿದ್ದರು. ಖರ್ಚೆಲ್ಲಾ ಕಳೆದು ನಾಲ್ಕೈದು ಸಾವಿರ ರೂಪಾಯಿ ಉಳಿತಾಯವಾಗಿತ್ತು. ವಿಟ್ಲದಲ್ಲಿ ಮೋಹನ ಸೋನ ಮನೆಮಾತಾದರು. ಇಂದಿಗೂ ‘ಚೋಮನದುಡಿ’ ನೆನಪಿಸಿಕೊಂಡು ಸಂಭ್ರಮ ಪಡುವವರಿದ್ದಾರೆ.

ನಾಟಕದ ಒಂದೆರಡು ರಿಹರ್ಸಲ್ ಮತ್ತು ಪ್ರದರ್ಶನಕ್ಕೆ ಕೆದಂಬಾಡಿ ಜತ್ತಪ್ಪ ರೈಯವರು ಬಂದು, ತುಂಬಾ ಸಂತೋಷಪಟ್ಟು,
ಕಾರಂತರಿಗೆ ಅದರ ಸವಿವರವಾದ ವರದಿ ಒಪ್ಪಿಸಿ, ನಿಮ್ಮ ಕಾದಂಬರಿಯ ಆಶಯಕ್ಕೆ ಏನೂ ತೊಂದರೆ ಆಗಲಿಲ್ಲ ಅಂತ ಹೇಳಿದ ಮೇಲೆ
ಕಾರಂತರಿಗೂ ಚೋಮ ಉಳ್ಕೊಂಡ ಅಂತ ಸಮಾಧಾನವಾಗಿತ್ತಂತೆ.

ಚೊಮನದುಡಿಯ ಯಶಸ್ಸಿನಿಂದಾಗಿ ವಿಟ್ಲದಲ್ಲಿ ಆಧುನಿಕ ನಾಟಕದ ಬಗ್ಗೆ ಆಸಕ್ತಿ ಮೂಡಿದ್ದರಿಂದ ನೀನಾಸಂ, ಸೃಷ್ಟಿಕೊಡಗುರಂಗ, ಇಕ್ಬಾಲ್‌ರ ಚಿಣ್ಣ ಬಣ್ಣ, ಕಿನ್ನರಮೇಳ ತುಮ್ರಿ ಇವರೆಲ್ಲಾ ವಿಟ್ಲಕ್ಕೆ ಬರುವಂತಾಯ್ತು. ಚೋಮನದುಡಿ ವಿಟ್ಲದ ರಂಗಭೂಮಿಯಲ್ಲಿ ಒಂದು ಹೊಸ ತಿರುವು.
ನಟರಿಗೆಲ್ಲಾ ಉತ್ಸಾಹ ಉಕ್ಕಿ ಹರಿದು ಪುನಃ ನಾಟಕ ಆಗಬೇಕು ಅಂತ ಕಂಡದ್ದು ನಮಗೂ ಇಷ್ಟದ ವಿಷಯವೇ ಆಯ್ತು. ಮಂಡ್ಯ ರಮೇಶ್, ಕೃಷ್ಣಕುಮಾರ ನಾರ್ಣಕಜೆ, ಭಾಗಿರಥಿ ಬಾಯಿ ಕದಂ ಬಂದು, ‘ಚೋರಚರಣದಾಸ’ ನಾಟಕ ಮಾಡಿಸಿದರು. ರಂಗಭೂಮಿಯ ಶಿಸ್ತಿಗೆ ಒಗ್ಗಲಾರದೇ ಕೆಲವು ದೊಡ್ಡ ನಟರು ಜಾರಿಕೊಂಡಾಗ ಮೋಹನ ಸೋನ ತಾವೇ ಸ್ವತಃ ನಟಿಸಿದ್ದಲ್ಲದೇ ನಾವು ಕೆಲವರನ್ನು ನಟಿಸುವಂತೆ ಪ್ರೇರೇಪಿಸಿದ್ದರು.

ತೀರಾ ಹೊಸಬರು ಬೆಳಕಿಗೆ ಬರುವಂತಾಯ್ತು. ಅದೇ ಉತ್ಸಾಹ ಉಳಿದು ಕೆಲವರು ‘ನೀನಾಸಂ’, ಕೆಲವರು ಮೈಸೂರಿನ ‘ಕಾವ’ ವನ್ನು ಸೇರಿಕೊಳ್ಳುವುದಕ್ಕೆ ಕಾರಣವಾಯ್ತು. ಮೋಹನ್ ಮತ್ತೆ ಮಕ್ಕಳ ನಾಟಕಕ್ಕೇ ಹೆಚ್ಚು ಒತ್ತು ಕೊಡಲಾರಂಬಿಸಿದರು. “ಖರ್ಚಿಲ್ಲದೇ ನಾಟಕ ಆಗಬೇಕು” ಎನ್ನುವುದು ಮೋಹನ್ ಅವರ ಆಶಯ. “ಆ ಮನಿ” ನಾಟಕ ಉಜಿರೆಯಲ್ಲಿನ ಮಕ್ಕಳ ಮೇಳಕ್ಕೆಂದು ಸಿದ್ದವಾಯ್ತು.

ಮೊದಲು ಅನಂತಕೃಷ್ಣ ಹೆಬ್ಬಾರರ ಮನೆಯ ಅಂಗಳದಲ್ಲಿ ಕೈತೋಟವನ್ನೂ ಬಳಸಿಕೊಂಡು, ಹೆಲೋಜನ್ ಲೈಟಿಗೆ ಡಬ್ಬ ಕಟ್ಟಿ ಸ್ಪಾಟ್ ಲೈಟ್ ಆಗಿಸಿ ಕೆಲವು ಪ್ರದರ್ಶನ ವಾಗಿತ್ತು. ೨೫ -೩೦ ಜನ ಪ್ರೇಕ್ಷಕರಿಗೆ ಮಾತ್ರ ಅವಕಾಶವಾದ್ದರಿಂದ ಹೆಚ್ಚು ಪ್ರದರ್ಶನಗಳಾದುವು. ಆ ಮೇಲೆ ಬಯಲಿನಲ್ಲಿ ಪ್ರದರ್ಶನವಾಯ್ತು. ಕೃಷ್ಣಕುಮಾರ ನಾರ್ಣಕಜೆ ಸ್ವತಃ ಬಂದು ಬೆಳಕಿನ ನಿರ್ವಹಣೆ ಮಾಡಿದ್ದರು. ಸುಳ್ಯದ ಮಕ್ಕಳ ನಾಟಕೋತ್ಸವದಲ್ಲೂ ಪ್ರದರ್ಶನ ವಾಯ್ತು. ಅಲ್ಲೆಲ್ಲಾ ಸಂಗೀತದ ಹೊಣೆ ನನಗೇ ವಹಿಸಿಕೊಟ್ಟರು.

ಸಂಗೀತ ನೀಡಲು ನಾನು ನಿಜಕ್ಕೂ ಅಳುಕಿದ್ದೆ. ಯಾಕೆಂದರೆ ನಾನು ನೋಡಿದ ಆಧುನಿಕ ನಾಟಕಗಳಲ್ಲಿ ಸಂಗೀತಕ್ಕೆ ಬಳಕೆಯಾಗುತ್ತಿದ್ದುದು ತಮಟೆ, ಡೋಲಕ್, ಚೆಂಡೆ ಇತ್ಯಾದಿ ಲಯವಾದ್ಯಗಳು ಮಾತ್ರ. ಹಾಡಿನೊಂದಿಗೆ ಹಾರ್ಮೋನಿಯಂ ಇರುತ್ತಿತ್ತು ಅಷ್ಟೆ. ನನ್ನಲ್ಲಿದ್ದುದು ನಾನು ಗಿಲಿಗಿಲಿ ಮ್ಯಾಜಿಕ್ ಗೆ ಇಫೆಕ್ಟ್ ನೀಡಲು ಬಳಸುತ್ತಿದ್ದ ಮ್ಯಾಂಡೊಲಿನ್, ಮೌತ್ ಆರ್ಗನ್, ಕೀ ಬೋರ್ಡ್ ಮತ್ತು ಗುಟ್ಟಿನಲ್ಲಿ ಕೆಲವು ಅವಾದ್ಯಗಳು.

ಇದು ಆಧುನಿಕ ನಾಟಕಕ್ಕೆ ಹೊಂದಿಕೆಯಾಗಲಾರದೇನೋ ಎನ್ನುವ ನನ್ನ ಹಿಂಜರಿತ ನೋಡಿ ಮೋಹನ್ ಹೇಳಿದ್ದರು. “ಯಾಕೆ ಉಪಯೋಗಿಸಬಾರದು. ಅವರಲ್ಲೆಲ್ಲಾ ಬೇರೆ ವಾದ್ಯಗಳನ್ನು ನುಡಿಸುವವರು ಇಲ್ಲ. ಇದ್ದದ್ದರಲ್ಲೇ ಸುದಾರಿಸುವುದು ಅಷ್ಟೆ.
ನೀವು ಧೈರ್ಯವಾಗಿ ಕೊಡಿ. ನೋಡಿ ಎಲ್ಲರಿಗೂ ಇಷ್ಟ ಆಗ್ತದೆ” ಅಂತ ಧೈರ್ಯ ತುಂಬಿದ್ದರಿಂದ ಸಂಗೀತ ಕೊಡಲು ಪ್ರಾರಂಭಿಸಿದ್ದೆ.
ಏನೂ ಗೊತ್ತಿಲ್ಲದ ನಾನೊಬ್ಬ ನಾಟಕ ಸಂಗೀತ ತಜ್ಞ ಎನಿಸಿಕೊಂಡೆ.

ವಿಟ್ಲ ಶಾಲೆಯ ವಾರ್ಷಿಕೋತ್ಸವಕ್ಕೆ ಒಂದು ನಾಟಕ ಮಾಡಿಸಿ ಅಂತ ಶಾಲೆಯವರು ಹೇಳಿದ್ದರಿಂದ ಅಲ್ಲಿ ಮೋಹನ್, “ಹೇನು ಸತ್ತು ಕಾಗೆ ಬಡವಾಯಿತು” ನಾಟಕ ಮಾಡಿಸಿದರು. ಆದೇ ಸಂದರ್ಭದಲ್ಲಿ ಒಬ್ಬರು ಶಿಕ್ಷಕರು ಏಕಲವ್ಯ ನಾಟಕವನ್ನು ಆರಿಸಿಕೊಂಡಿದ್ದರು. ಅದನ್ನೂ ಮೋಹನ್ ಸೋನರೇ ನಿರ್ದೇಶನ ಮಾಡಬೇಕು ಅಂತ ಕೇಳಿಕೊಂಡರು. ಮೋಹನ್ ಏಕಲವ್ಯ ನಾಟಕದ ಹೊಣೆ ನನಗೆ ವಹಿಸಿದರು. ಮೋಹನ್ ಜೊತೆ ಇದ್ದು ಕಲಿತ ಸಂಗತಿಗಳಿಂದ “ಏಕಲವ್ಯ” ನಾಟಕ ಮಾಡಲು ಸಾದ್ಯವಾಯಿತು.

ನಂತರ ನಾನು ಸ್ವತಂತ್ರವಾಗಿ ನಾಟಕ ಆಡಿಸಬೇಕೆಂದು ಮೋಹನ್ ಒತ್ತಾಯಿಸಿದರು. ಹಾಗೆ ಕೇರಳ ಗಡಿಯ ಕಾಟುಕುಕ್ಕೆಯಲ್ಲಿ ನನ್ನ ನಾಟಕ ಪಯಣ ಶುರುವಾಯ್ತು. ಪ್ರಕ್ರಿಯೆಯ ಪ್ರತೀ ಹಂತದಲ್ಲೂ ಮೋಹನ್ ನನ್ನಲ್ಲಿ ವಿಚಾರಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಮುಂದಿನ ವರ್ಷಗಳಲ್ಲಿ ವಿಟ್ಲದಲ್ಲಿ “ಆನೆ ಬಂತೊಂದಾನ”, “ನಕ್ಷತ್ರಗಳಾಚೆ” ನಾಟಕ ಸಿದ್ದವಾಗಿ ಸುಳ್ಯದ ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡವು.
ಸಂಗೀತದ ಹೊಣೆ ನನಗೊಪ್ಪಿಸಿ ಮೋಹನ್ ನಿಶ್ಚಿಂತರಾದರು.

ನಾಟಕ ಪ್ರದರ್ಶನ ಮುಖ್ಯ ಆದಾಗ ಮಕ್ಕಳಿಗೆ ಕೆಲವು ಅಭಿನಯ, ಚಲನೆಗಳನ್ನು ಹೇಳಿಕೊಟ್ಟು ಮಾತುಗಳನ್ನು ತಿದ್ದುವ ಅಗತ್ಯ ಇದೆ ಎಂದು ನನಗೆ ಕಾಣುತ್ತಿತ್ತು. ಅನೇಕ ರಂಗಕರ್ಮಿಗಳ “ಮಕ್ಕಳಿಗೆ ಅಭಿನಯ ಹೇಳಿಕೊಡಬಾರದು, ಮಕ್ಕಳ ನಾಟಕದಲ್ಲಿ ಮಕ್ಕಳು ಮಾತ್ರ ಅಭಿನಯಿಸಬೇಕು” ಇತ್ಯಾದಿ ಮಾತುಗಳು ನನಗಷ್ಟು ಒಪ್ಪಿಗೆಯಾಗದೇ ಮೋಹನ್‌ರ ಅಭಿಪ್ರಾಯ ಕೇಳಿದ್ದೆ. ಅದಕ್ಕವರು, “ಹೇಳಿಕೊಟ್ರೆ ಮಕ್ಕಳ ಮೇಲೆ ನಮ್ಮ ಛಾಯೆ ಉಳಿದು ಬಿಡುತ್ತದೇನೋ… ?” ಅಂತ ಹೇಳಿದ್ದರು.

ನಾನಾಗ “ಹಾಗೆ ಮಕ್ಕಳು ಎಷ್ಟು ನಾಟಕಗಳಿಗೆ ಸಿಗುತ್ತಾರೆ? ಹೆಚ್ಚೆಂದರೆ ನಾಲ್ಕೈದು ನಾಟಕಗಳಿಗೆ ಸಿಕ್ಕಿಯಾರು. ನಂತರ ಅವರು ಬೇರೆ ಕಡೆ ಹೋಗುತ್ತಾರಲ್ಲ. ನಮ್ಮ ಛಾಯೆ ಬೀಳಲಾರದೇನೋ…!! ಮತ್ತೆ ಪ್ರದರ್ಶನ ಇಲ್ಲ ಎಂದಾದರೆ ಏನೂ ಕಲಿಸುವುದು ಬೇಡ ಪ್ರದರ್ಶನ ಇದ್ದಾಗ ಸ್ವಲ್ಪ ಹೇಳಿಕೊಡುವುದು ಒಳ್ಳೆಯದು ಅಲ್ವಾ…?” ಅಂತ ಹೇಳಿದೆ.

ಅದಕ್ಕವರು… “ಅದು ಸರಿ ನೀವು ಹೇಳುವುದು. ಆದರೂ ಮಕ್ಕಳ ಸ್ವಂತಿಕೆ ಉಳಿಯದಿದ್ದರೆ,,,?” ಅಂತ ಸಂದೇಹ ವ್ಯಕ್ತಪಡಿಸಿದರು. ಆಗ ನಾನು “ನಾಟಕದ ಪ್ರದರ್ಶನದಲ್ಲಿ ಮಕ್ಕಳಲ್ಲಿ ಸ್ವಂತಿಕೆ ಕಾಣುವುದು ಕಡಿಮೆಯೇ ಅಲ್ವಾ… ? ಮಕ್ಕಳು ನೋಡಿದ್ದು, ಕೇಳಿದ್ದನ್ನು ಅನುಕರಣೆ ಮಾಡ್ತಾರೆ.
ಆದರೆ ಅವರ ಅನುಕರಣೆಗೆ ಇವತ್ತು ಇರುವ ಮಾದರಿಗಳು ಯಾವುದು? ಕಮರ್ಶಿಯಲ್ ಸಿನೇಮಾಗಳು, ಹಿರಿಯರ ಕೆಟ್ಟ ಮೆಲೋಡ್ರಾಮ, ಇತ್ಯಾದಿ.

ತೀರಾ ಕೃತಕವಾದದ್ದು ಮಾತ್ರ. ಹಾಗಾಗಿ “ಇದು ನಿಮ್ಮ ಅಭಿನಯ ಅಲ್ಲ. ನಿಮ್ಮದು ಇರಬೇಕಾದ್ದು ಹೀಗೆ, ಅಂತ ಮಕ್ಕಳಿಗೆ ಸಹಜವಾದ ಮಾತು, ಉದ್ಘಾರ, ಚಲನೆ ಎಲ್ಲವೂ ಅವರ ನಿತ್ಯಜೀವನದ ಉದಾಹರಣೆಯೊಂದಿಗೆ ತಿಳಿಸಿ ಹೇಳಿದರೆ ಮತ್ತೆ ಮಕ್ಕಳು ಚಳಿ ಬಿಟ್ಟು ಅವರಷ್ಟಕ್ಕವರೇ ಆಟವಾಡುವಾಗ ಇರುವಂತೆ ಸಹಜವಾಗಿ ಅಭಿನಯಿಸುತ್ತಾರೆ ಅಲ್ವೋ…?” ಅಂತ ಹೇಳಿದೆ.

ಅದನ್ನು ಸಂಪೂರ್ಣವಾಗಿ ಒಪ್ಪಿ ಮೋಹನ್ ಏನು ಹೇಳಿದರು ಅಂದ್ರೆ , “ನನಗೆ ಹೇಳಿಕೊಡಲು ತಿಳಿಯುವುದಿಲ್ಲ. ಪ್ರದರ್ಶನದ ಬಗ್ಗೆ ಆಸಕ್ತಿಯೂ ಇಲ್ಲ. ನನ್ನದು ಬಣ್ಣ ಮತ್ತು ಮನುಷ್ಯ ಸಂಬಂಧದ ಹುಡುಕಾಟ ಅಷ್ಟೆ” ಅಂತ. ಗ್ರೇಟ್….!!

ಹಾಗೆ ನಾನು ಅವರ ಜೊತೆಗಿದ್ದಾಗಲೆಲ್ಲ ಪ್ರದರ್ಶನ ಇದ್ದರೆ ಚಲನೆ, ಮಾತು, ಅಭಿನಯಗಳ ಹೊಣೆ ನನಗೊಪ್ಪಿಸುತ್ತಿದ್ದದ್ದು ನನ್ನ ಭಾಗ್ಯ.
ಅವರ ವಿನ್ಯಾಸಕ್ಕೆ, ಯೋಚನೆಗೆ ತೊಂದರೆ ಬಾರದಂತೆ ನನ್ನ ಕೆಲಸ ನಿರ್ವಹಿಸುತ್ತಿದ್ದೆ. ಮೋಹನ್ ತಮ್ಮ ಸಹೋದ್ಯೋಗಿಗಳಿಗೆ “ನಾಳೆ ಯಾರಿಗೂ ಇಲ್ಲ” ನಾಟಕ ಮಾಡಿಸಿದರು. ಅಲ್ಲೂ ಸಂಗೀತದ ಹೊಣೆ ನನಗೊಪ್ಪಿಸಿದರು.ಆ ಸಮಯದಲ್ಲಿ ಐ.ಕೆ ಬೊಳುವಾರು ವಿಟ್ಲಕ್ಕೆ ಬಂದುದರಿಂದ ಅವರು ಮೋಹನ್ ಜೊತೆ ಸೇರಿಕೊಂಡರು. ರಾಮಚಂದ್ರ ದೇವ ಅವರ ಪುಟ್ಟಿ ಕಾಡಿಗೆ ಹೋದದ್ದು ನಾಟಕ ಸಿದ್ದವಾಗಿ ಹಲವುಕಡೆ ಪ್ರದರ್ಶನಗಳಾದುವು.

ಮೋಹನ್ ಸುಳ್ಯದ ಅಭಿನಯ ತಂಡಕ್ಕೆ “ಮದುಮಕ್ಕಿ” ನಾಟಕ ಮಾಡಿಸಿದಾಗ “ಸಂಗೀತಕ್ಕಾಗಿ ಮೂರ್ತಿ ಬೇಕು” ಅಂತ ನನ್ನನ್ನು ಕರೆಸಿಕೊಂಡಿದ್ದರು. ಅವರ ಕೆರೆಗೆ ಹಾರ ನಾಟಕಕ್ಕೆ ನನ್ನ ಮ್ಯಾಂಡೊಲಿನ್ ತುಂಬಾ ಹೊಂದಿಕೆಯಾಗುತ್ತದೆ ಎಂದಿದ್ದರು. “ಸೃಷ್ಟಿ ಕೊಡಗು ರಂಗ”ದ ನಾಟಕೋತ್ಸವದ ಆಹ್ವಾನ ಪಡೆದು “ಗೋಂದೋಳು” ತುಳು ನಾಟಕವನ್ನು ಕನ್ನಡದಲ್ಲಿ ಕಟ್ಟುವ ಪ್ರಯತ್ನ ಮಾಡಿದ್ದರು.

ಮೂವತ್ತು ನಲುವತ್ತು ದಿನ ರಿಹರ್ಸಲ್ ಆಗಿತ್ತು. ತಂಡದೊಳಗಿನ ಏನೋ ಸಣ್ಣ ರಾಜಕೀಯ ನಡೆದು ಅರ್ಧಕ್ಕೆ ನಿಂತು ಹೋಯಿತು. ಮೋಹನ್ ತುಂಬಾ ನೊಂದುಕೊಂಡಿದ್ದರು. ಪ್ರದರ್ಶನ ಆಗಲಿಲ್ಲ ಎಂದಲ್ಲ. ಭಿನ್ನಾಬಿಪ್ರಾಯ ಮರೆತು ಒಂದಾಗುವುದು ನಾಟಕದ ಉದ್ದೇಶಗಳಲ್ಲಿ ಒಂದು ಎಂದು ಅವರು ನಂಬಿದ್ದರಿಂದ.

ಒಮ್ಮೆ ನನ್ನಲ್ಲಿ ಕರ್ವಾಲೋ ಪಾತ್ರ ನೀವು ಮಾಡುವುದಿದ್ದರೆ ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯನ್ನು ನಾಟಕ ಮಾಡಬೇಕು ಎನ್ನುವ ಯೋಚನೆ ಉಂಟು ಅಂತ ಹೇಳಿದರು. ಆ ಸಮಯದಲ್ಲಿ ನಾಟಕದ ಅನುಭವವೇ ನನಗೆ ನನ್ನ ಮಿತಿಯನ್ನು ತಿಳಿಸಿಕೊಟ್ಟಿತ್ತು. ಆದರೂ ಮೋಹನ್ ಹೇಳಿದ ಕೂಡ್ಲೇ ಯೋಚನೆ ಮಾಡದೇ ಒಪ್ಪಿದ್ದೆ. ಆ ನಾಟಕವೂ ಒಂದೆರಡು ವಾರ ಅಭ್ಯಾಸ ನಡೆದು, ಬೇರೆ ನಟರ ಕೊರತೆಯಿಂದಾಗಿ ನಿಂತು ಹೋಯಿತು.

“ಆ ನಾಟಕ ಮಾತ್ರ ಯಾವತ್ತಾದರೂ ಮಾಡಲೇ ಬೇಕು ಮೂರ್ತಿ” ಎಂದಿದ್ದರು. ವಿಟ್ಲದಲ್ಲಿ ಅದನ್ನು ಅವರಿಗೆ ಮಾಡಲು ಸಾಧ್ಯವಾಗಲಿಲ್ಲ.
ಆದರೆ ಅದನ್ನು ಈಗೆರಡು ವರ್ಷದ ಹಿಂದೆ ಸುಳ್ಯದಲ್ಲಿ ಅರೆ ಭಾಷೆಯಲ್ಲಿ ಕರ್ವಾಲೊ ನಾಟಕ ಮಾಡಿಸಿ, ತೃಪ್ತಿ ಪಟ್ಟಿದ್ದರು. ಪ್ರದರ್ಶನ ಅವರು ನೋಡಿದ್ದರೋ ಇಲ್ಲವೋ…!! ಆ ನಾಟಕ ಮಾತ್ರ ತುಂಬಾ ಯಶಸ್ವಿಯಾಗಿತ್ತು.

೨೦೧೧ -೧೨ ರಲ್ಲಿ “ಕೆಕೆ ಹೆಬ್ಬಾರರ ಹಾಡುವ ರೇಖೆಗಳು” ಎನ್ನುವ ಪ್ರಾತ್ಯಕ್ಷಿಕೆಯ ಮೂಲಕ ಅದ್ಭುತವಾಗಿ ಪ್ರಸಿದ್ದ ಚಿತ್ರಕಾರ ಕೆಕೆ ಹೆಬ್ಬಾರರ ನೆನಪು ಮಾಡಿಕೊಂಡಿದ್ದರು. ಎರಡು ಮೂರು ಕಾರ್ಯಕ್ರಮಗಳಾಗಿತ್ತು. ಇನ್ನೂ ಹಲವಾರು ಕಡೆ ಆ ಕಾರ್ಯಕ್ರಮವನ್ನು ಅನೇಕ ಗೆಳೆಯರು ಬಯಸಿದ್ದರು. ಯಾಕೋ ಮುಂದುವರೆಯಲಿಲ್ಲ. ಅದಕ್ಕೂ ಸಂಗೀತ ಸಂಯೋಜನೆಯ ಅವಕಾಶ ನನಗೆ ದೊರಕಿತ್ತು.

ನನ್ನ ಎರಡು ನಾಟಕ ಕೃತಿಗಳಿಗೆ ಮುಖಚಿತ್ರ ಒಳಪುಟ ಚಿತ್ರ ರಚಿಸಿಕೊಟ್ಟದ್ದು ಆ ಪುಸ್ತಕದ ಘನತೆ ಹೆಚ್ಚಿಸಿದೆ. ನನ್ನ ತೀರ್ಥರೂಪರ ನಿಧನಾ ನಂತರ ಅವರ ಎರಡು ಕೃತಿಗಳು ಪ್ರಕಟವಾದವು. ಅದರ ಮುಖಪುಟದ ರಚನೆ ಎಷ್ಟು ಚೆನ್ನಾಗಿದೆ ಅಂದರೆ, ತೀರ್ಥರೂಪರು ಮುಖಪುಟ ಹೇಗಿರಬೇಕೆಂದು ಬಯಸಿದ್ದರೋ ಆ ಅಂಶಗಳೆಲ್ಲವನ್ನೂ ಒಳಗೊಂಡಿದೆ. ದೇರಾಜೆಯವರನ್ನು ಸೋನ ನೋಡಿಯೇ ಇರಲಿಲ್ಲ.

ವಿಟ್ಲಕ್ಕೆ ಬಂದು ಇದು ತನ್ನದೇ ಊರು ಎಂದು ತಿಳಿದು, ಸಾಂಸ್ಕೃತಿಕವಾಗಿ ವಿಟ್ಲಕ್ಕೆ ದೊಡ್ಡ ಹೆಸರು ತಂದುಕೊಟ್ಟ ಮೋಹನ್ ಸೋನರೊಂದಿಗೆ
ವಿಟ್ಲದ ಕಾರುಬಾರಿನ ಜನ ಮಾತ್ರ ಕೃತಜ್ಞತೆಯಿಂದ ನಡೆದುಕೊಳ್ಳದೇ ಇದ್ದದ್ದು ದೊಡ್ಡ ಅಪರಾದ. ನೊಂದುಕೊಂಡ ಸೋನ ವಿಟ್ಲದಲ್ಲಿ ಚಟುವಟಿಕೆಯನ್ನೇ ನಿಲ್ಲಿಸಿದರು. ಪ್ರಾಯಷಃ ದಕ್ಷಿಣ ಕನ್ನಡದಲ್ಲಿ ಮಕ್ಕಳ ರಂಗಭೂಮಿಯನ್ನು ಮೊದಲು ಪ್ರಾರಂಭಿಸಿದವರೇ ಮೋಹನ ಸೋನ.
ಅವರಿಂದಾಗಿ ಎಂ.ಜಿ.ಕಜೆ, ಐ.ಕೆ ಬೊಳುವಾರು, ಗೋಪಾಡ್ಕರ್, ನಾನು, ಸುರೇಶ್ ಹಂದಾಡಿ, ಶಂಕರಪ್ರಸಾದ್, ಫೋನ್ ಶೀನಪ್ಪ ಈ ಮಕ್ಕಳ ನಾಟಕದಲ್ಲಿ ತೊಡಗಿಕೊಂಡೆವು.

ಎಲ್ಲರೂ ಸೇರಿ ಮೋಹನ್ ನೇತೃತ್ವದಲ್ಲಿ ರಂಗಶಿಬಿರಗಳನ್ನು ನಡೆಸಿ ಪುಣಚಾದಲ್ಲಿ “ನೀಲನಾಡಿನೊಳಗೆ” ಕಾಟುಕುಕ್ಕೆಯಲ್ಲಿ “ಗೊಂಬೆ ಹೇಳಿದ ಕತೆ” ನಾಟಕ ಪ್ರದರ್ಶನ ಗೊಂಡಿತ್ತು. ಈ ಎಂಟುಜನ ಯಾರು ಎಲ್ಲೇ ನಾಟಕ ಮಾಡಿದರೂ ಪರಸ್ಪರ ಒಂದು ಕೊಂಡಿ ಇರಲಿ, ಪಾಲ್ಗೊಳ್ಳುವ ಹೊಣೆ ಇರಲಿ ಎನ್ನುವ ಕಾರಣಕ್ಕೆ “ನಿರತ ನಿರಂತ” ಹುಟ್ಟಿಕೊಂಡಿತು. ನಮ್ಮ ಮನೆಯಲ್ಲೇ ಅದರ ಮೊದಲ ಮೀಟಿಂಗ್. “ನಿಮ್ಮನ್ನು ರಂಗಕ್ಕೆ ತರುವ ನಿರ್ದೇಶಕರ ರಂಗ ತಂಡ” ಎನ್ನುವುದರ ಸಂಕ್ಷಿಪ್ತ ರೂಪವೇ… “ನಿರತ ನಿರಂತ” ಹೆಸರು ಕೊಟ್ಟವರು ಗೋಪಾಡ್ಕರ್.

ಮೋಹನ್ ಅವರ ಯಾವುದೇ ನಾಟಕದ ‘ಪ್ರಕ್ರಿಯೆ’ ನೋಡದೇ ‘ಪ್ರದರ್ಶನ’ ಮಾತ್ರ ನೋಡುವ ವಿಮರ್ಶಕರಿಗೆ ಮೋಹನ ಸೋನ ಅವರ ನಾಟಕ ಸ್ವಲ್ಪ ಜಾಳು ಜಾಳು ಎನಿಸಿದ್ದೂ ಹೌದು. ಆದರೆ ಸೋನರಿಗೆ ಪ್ರದರ್ಶನ ಯಾವತ್ತೂ ಮುಖ್ಯ ಆಗಿರಲಿಲ್ಲ ಎನ್ನುವುದು ಬಹಳ ಮುಖ್ಯ.
ಪ್ರದರ್ಶನದ ಚಪಲವನ್ನೇ ಮೀರಿದ ಅಪರೂಪದ ವ್ಯಕ್ತಿ ಮೋಹನ ಸೋನ.

ಪ್ರಸಿದ್ಧ ಚಿತ್ರಕಾರರೇ ಒಬ್ಬರು ಹೇಳಿದ್ದರು “ಸೋನ ಅವರಿಗೆ ಖಚಿತತೆ ಇಲ್ಲ” ಅಂತ. ನನಗೆ ನಗು ಬಂದಿತ್ತು. ಖಚಿತ ನಿಲುವಿಗೆ ಬಂದಾತ ಮತ್ತೆ ಆ ಕುರಿತು ಯೋಚನೆಯನ್ನೇ ಮಾಡುವುದಿಲ್ಲವಲ್ಲಾ… !! ಖಚಿತತೆ ಇರುವ ಬಹಳಷ್ಟು ಪಂಡಿತರನ್ನು, ವೈಚಾರಿಕರನ್ನು ನೋಡಿದ್ರೆ ನಮ್ಮ ಅರಿವಿಗೆ ಬರ್ತದೆ. ಇಂವ ಇದ್ದಲ್ಲೇ ಇದ್ದಾನೆ ಅಂತ. ಮೋಹನ್ ಸೋನ ಒಬ್ಬ ಸೃಷ್ಟಿಶೀಲ ಕಲಾವಿದ ಆದದ್ದೇ ಈ ಖಚಿತತೆಯನ್ನು ಸಂದೇಹಿಸಿದ್ದರಿಂದ.
ಬಿ.ವಿ.ಕಾರಂತರಲ್ಲೂ ಈ ಗುಣ ಇತ್ತಲ್ಲ. ಇವತ್ತಿಗೆ ಇಷ್ಟು ಸತ್ಯ, ನಾಳೆಗೆ ಯೋಚನೆ ಬದಲಾಗಬಹುದು ಅಂತ.

ಮೋಹನ್ ಅವರ ಬಣ್ಣಗಳ ಬಗೆಗಿನ ಜ್ಞಾನ, ಚಿಂತನೆ ಅಪೂರ್ವವಾದದ್ದು. “ಕೆಂಪು ಬಣ್ಣ, ಆತ್ಮವಿಶ್ವಾಸದ ಸಂಕೇತ, ಕೆಂಪು ಬಣ್ಣದ ಗುಣವಿರುವ ಮಗು ಬುದ್ಧಿವಂತ, ಉತ್ಸಾಹಿ, ಎಲ್ಲದಕ್ಕೂ ಮುನ್ನುಗ್ಗುವವ. ಕಪ್ಪು ಬಣ್ಣದ ಮಗು (ಮೈ ಬಣ್ಣ ಅಲ್ಲ) ಕೆಂಪಿನಷ್ಟೇ ಬುದ್ಧಿವಂತ ಆದರೂ ಮನೆಯ ವಾತಾವರಣವೋ ಪರಿಸರವೋ ಯಾವುದೋ ಕಾರಣದಿಂದ ನೆಗೆಟಿವ್ ಆಗಿರ್ತದೆ. ಶಿಕ್ಷಕರ, ಪೋಶಕರ ಗುರಿ ಯಾವುದಾಗಿರಬೇಕು ಎಂದರೆ ಕಪ್ಪು ಬಣ್ಣದಲ್ಲಿರುವ ಮಗುವನ್ನು ಕೆಂಪು ಬಣ್ಣಕ್ಕೆ ತರುವುದು.” ಅದುವೇ ಶಿಕ್ಷಣದ ಉದ್ದೇಶ ಅಂತ ಹೇಳುತ್ತಿದ್ದವರು ಮತ್ತು ಅದಕ್ಕಾಗಿ ಸದಾ ಪ್ರಯತ್ನ ಪಟ್ಟವರು.

ಮೋಹನ್ ಹೆಚ್ಚಾಗಿ ಗ್ರೇ ಅಥವಾ ಬೂದು ಬಣ್ಣದ ಅಂಗಿಯನ್ನೇ ಧರಿಸುತ್ತಿದ್ದರು. ಆ ಬಣ್ಣ ಅವರಿಗೆ ಯಾಕೆ ಇಷ್ಟವಿರಬಹುದು ಅಂತ ತುಂಬಾ ತಲೆಕೆಡಿಸಿಕೊಂಡಿದ್ದೆ. ಪ್ರಾಯಶಃ ಕಪ್ಪು ಬಣ್ಣದ ಮಕ್ಕಳಿಗೆ ತಾನು ಹೆಚ್ಚು ಆಪ್ತ ಎನಿಸಬಹುದು ಎನ್ನುವ ಕಾರಣಕ್ಕೇ ಇರಬಹುದೋ ಏನೋ…!

ಮೋಹನ ಸೋನರ ದಾರಿಯಲ್ಲೇ ಹೊರಟ ಎಂ.ಜಿ.ಕಜೆ, ಗೋಪಾಡ್ಕರ್ ಮಕ್ಕಳ ನಾಟಕವನ್ನು ಹೆಚ್ಚು ಮುಂದುವರೆಸಲಿಲ್ಲ.
ಸುರೇಶ್ ಹಂದಾಡಿ ಬೇಗನೆ ಈ ಲೋಕದಿಂದ ನಿರ್ಗಮಿಸಿದರು.

ಮಕ್ಕಳ ಒಡನಾಟದಲ್ಲಿ ಸುಖ ಇದೆ, ಶಾಂತಿ ಇದೆ, ನೆಮ್ಮದಿ ಇದೆ, ಕಲಿಕೆ ಇದೆ, ಎನ್ನುವುದು ಎಲ್ಲರೂ ಹೇಳುವ ಮಾತು. ಅದನ್ನು ವಿಶಿಷ್ಟ ರೀತಿಯಲ್ಲಿ ಪರಿಣಾಮಕಾರಿಯಾಗಿ ನನ್ನೊಳಗೆ ಇಳಿಸಿ, ಮಕ್ಕಳ ನಾಟಕದೆಡೆಗೆ ಮಕ್ಕಳ ರಂಗಭೂಮಿಯ ಕಡೆಗೆ ನನ್ನನ್ನು ಸೆಳೆದು, “ಮಕ್ಕಳ ನಾಟಕದ ಪ್ರಕ್ರಿಯೆಯಲ್ಲಿ ಸೃಷ್ಟಿ ಶೀಲತೆಯ ಬೀಜ ಇದೆ…” ಎನ್ನುವುದನ್ನು ತೋರಿಸಿಕೊಟ್ಟವರು ಮೋಹನ ಸೋನ.

ನಾನು ನೀರೆರೆಯುತ್ತಿದ್ದೇನೆ ಮೊಳಕೆಯೊಡೆದದ್ದು ಇದ್ದರೆ ಅದು ನನ್ನ ಭಾಗ್ಯ. ಇದೇ ಸರಿಯಾದ ದಾರಿ ಎಂದು ನಂಬಿಕೊಂಡಿದ್ದೇನೆ. ಹಾಗೆ “ನನ್ನ ದಾರಿಯನ್ನು ರೂಪಿಸಿಕೊಟ್ಟವರು ಮೋಹನ ಸೋನ” ಎನ್ನುವುದು ಸದಾ ನನ್ನ ಮನಸ್ಸಲ್ಲೂ ಇದೆ. ನಾಲಗೆಯಲ್ಲೂ ಇದೆ.

‍ಲೇಖಕರು Avadhi

November 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

4 ಪ್ರತಿಕ್ರಿಯೆಗಳು

 1. SUDHA SHIVARAMA HEGDE

  ಎಷ್ಟು ಆಪ್ತ ಮತ್ತು ಹೃದ್ಯವಾದ ಬರವಣಿಗೆ! ಸೋನಾ ಅವರ ಇಡಿಯ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದೀರಿ. ತಡವಾಗಿಯಾದರೂ ಇಷ್ಟೊಂದು ವಿಸ್ತಾರವಾಗಿ ಬರೆದ ನಿಮಗೆ ಶರಣು. ಸದಾ ಅಂತರ್ಮುಖಿಯಾಗಿರುವ ಸೋನಾ ಅವರ ಒಳಗನ್ನು ಒಂದಿನಿತಾದರೂ ಸ್ಪರ್ಶಿಸಿದವರು ನಿಮ್ಮಂಥ ಕೆಲವೇ ಕೆಲವರು ಅನಿಸುತ್ತದೆ. ಓದಿ ಖುಶಿಯಾಯ್ತು

  ಪ್ರತಿಕ್ರಿಯೆ
 2. Basavaraju G P

  ಮೂರ್ತಿ ದೇರಾಜೆ ಅವರ ಲೇಖನ, ಮಿತ್ರಮೋಹನ ಸೋನರಿಗೆ ಸಲ್ಲಿಸಿದ ಬಹುದೊಡ್ಡ ಗೌರವ. ಅಷ್ಟೇ ಅಲ್ಲ , ವಿಟ್ಲ, ಸುಳ್ಯ ಭಾಗಗಳಲ್ಲಿ ಮಕ್ಕಳ ರಂಗಭೂಮಿ ಮೊಳೆತು, ಬೆಳೆದ ವಿವರ ಚಿತ್ರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ. ಇದೊಂದು
  ಅಪರೂಪದ ದಾಖಲೆ. ಬಹು ಮುಖ್ಯವಾದ ರಂಗಭೂಮಿ ಇತಿಹಾಸ. ಮೂರ್ತಿ ದೇರಾಜೆ ಅವರಿಗೆ ನಮಸ್ಕಾರ. ಅವಧಿಗೆ ಅಭಿನಂದನೆ.
  -ಬಸವರಾಜು ಜಿ ಪಿ

  ಪ್ರತಿಕ್ರಿಯೆ
 3. Kiran Bhat

  ಮೂರ್ತಿಯಣ್ಣ ಎಷ್ಟು ಆಪ್ತವಾಗಿ ಬರೆದಿದೀರಿ. ಸೋನ ನಿಜಕ್ಕೂ ಅಪರಿಮಿತ ಟ್ಯಾಲೆಂಟ್ ನ ಮನುಷ್ಯ. ಬಣ್ಣಗಳ ಮನಶ್ಶಾಸ್ತ್ರಜ್ಞ.

  ಪ್ರತಿಕ್ರಿಯೆ
 4. moorthy deraje

  Basavaraj GP
  Sudha Shivarama hegde
  Kiran Bhat

  ಮೋಹನ ಸೋನ ಅವರ ಬಗ್ಗೆ ಇನ್ನೂ ಒಂದಿಷ್ಟು ……

  ಮೋಹನ ಸೋನ- ನಾಟಕಗಳಲ್ಲಿ ಬೆಳಕಿನ ವಿನ್ಯಾಸ ಮಾಡುವಾಗ
  ಕೇವಲ ರಂಜನೆಗಾಗಿ ಬಣ್ಣಗಳನ್ನು ಬಳಸುವುದಲ್ಲ.
  ಅವರಿಗೆ ಬಣ್ಣವೇ ಒಂದು ಪಾತ್ರ.
  ನಾಟಕದಲ್ಲಿನ ದೃಷ್ಯಗಳು ಪ್ರೇಕ್ಷಕರ ಮೇಲೆ
  ಬಣ್ಣದ ಮೂಲಕ ಬೀರುವ ಪರಿಣಾಮದ ಕಡೆಗೆ ಅವರ ಪ್ರಯತ್ನ.

  ಬರೀ ಬಣ್ಣದ ಬೆಳಕಿನ ಮೂಲಕ ಮಾತ್ರ ಅಲ್ಲ…..
  ರಂಗಪರಿಕರಗಳಲ್ಲಿ ಬಣ್ಣ ಬಳಸುವ ಮೂಲಕ,
  ರಂಗವಿನ್ಯಾಸದಲ್ಲಿ ಪೈಂಟಿಂಗ್ ಬಳಸುವ ಮೂಲಕ
  ಅಥವಾ ಬಣ್ಣದ ಬಟ್ಟೆಯನ್ನು ಬಳಸುವ ಮೂಲಕ ….
  ಅದ್ಭುತ ಪರಿಣಾಮವನ್ನು ಸೃಷ್ಟಿಸುತ್ತಿದ್ದರು.
  “ಪುಟ್ಟಿ ಕಾಡಿಗೆ ಹೋದದ್ದು…”
  ಶ್ರೀಪಾದ ಭಟ್ಟರ ನಿರ್ದೇಶನದ “ಮಿಸ್ಟೇಕ್” ಮತ್ತು “ರಾಧ” (ಮಂಜುಳಾ ಸುಬ್ರಹ್ಮಣ್ಯ ನೃತ್ಯ ನಾಟಕ) …
  ಪಕ್ಕನೆ ನೆನಪಾಗುವ ಉದಾಹರಣೆಗಳು.
  *****************
  ಇನ್ನೊಂದು ಬಹಳ ಮುಖ್ಯವಾದದ್ದೆಂದರೆ …..
  ಮೋಹನ್ … ಬಣ್ಣದ ಮೂಲಕವೇ ಸಾಹಿತ್ಯ ಕೃತಿಯನ್ನು ವಿಶ್ಲೇಷಣೆ ಮಾಡಿದವರು.
  ಪ್ರಾಯಷ: …. ಯಾರೂ ಮಾಡದ, ಯಾರಿಗೂ ಹೊಳೆಯದ ಸಂಗತಿ ಇದು.

  ತೇಜಸ್ವಿಯವರ ಕತೆಯೊಂದನ್ನು ಬಣ್ಣದ ಮೂಲಕವೇ ವಿಶ್ಲೇಷಣೆ ಮಾಡಿದ್ದರು.
  “ತೇಜಸ್ವಿಯವರು ಸ್ವತಹಾ ಒಬ್ಬರು ಚಿತ್ರಕಾರರೂ ಆದುದರಿಂದ …
  ಉದ್ದೇಶಪೂರ್ವಕವಾಗಿ ಈ ರೀತಿ ಬಣ್ಣಗಳನ್ನು
  ಕತೆಯಲ್ಲಿ ಬಳಸಿಕೊಂಡರೋ ಹೇಗೇ,,,?” ಅಂತ ನಾನು ಕೇಳಿದ್ದೆ.
  “ಹಾಗೇನೂ ಇಲ್ಲ …. ಉದ್ದೇಶಪೂರ್ವಕ ಅಲ್ಲ.
  ಯಾವುದೇ ಕ್ಲಾಸಿಕ್ ಕೃತಿಯಲ್ಲಿ ಕೃತಿಕಾರನಿಗೆ ಗೊತ್ತಿಲ್ಲದೇ ಈ ಅಂಶಗಳು ಇರುತ್ತವೆ….
  ಗಮನಿಸಬೇಕಷ್ಟೆ… ಅಂತ ಹೇಳಿದ್ದರು.
  ಬಾಗಲೋಡಿ ದೇವರಾಯರ ಕತೆಯನ್ನೂ ಬಣ್ಣದ ಮೂಲಕ ವಿಶ್ಲೇಷಿದ್ದರು.

  ಪುತ್ತೂರಿಗೆ ಅಸಿಸ್ಟೆಂಟ್ ಕಮಿಶನರ್ ಆಗಿ ಬಂದ ಮಾನ್ಯ ಪ್ರಸನ್ನ ಅವರು, ಪ್ರಾಯಷಃ
  ಡಾ.ಶ್ರೀಪಾದ ಭಟ್ಟರ ಸೂಚನೆಯಂತೆ ಮೋಹನ ಸೋನ ಅವರನ್ನು ಸಂಪರ್ಕಿಸಿದ್ದರಿಂದ
  ಶಿವರಾಮ ಕಾರಂತರ ಬಾಲವನ ಮತ್ತೆ ಆರೋಗ್ಯಕರವಾಗಿ ಬೆಳೆಯಲಾರಂಬವಾಯ್ತು.
  ಮೋಹನ ಸೋನ …ನಾಡಿನ ಪ್ರಸಿದ್ಧ ಸಾಹಿತಿಗಳು, ಚಿತ್ರಕಾರರನ್ನು ಕರೆಸಿ,
  ಸಂವಾದ ಏರ್ಪಡಿಸಿ, ಕಾರಂತರ ಕೃತಿಗಳ ಚಿತ್ರ ಬರೆಯಿಸಿದರು.
  ಒಂದು ಅಪೂರ್ವ ಕಲಾ ಗ್ಯಾಲರಿ ಸಿದ್ಧವಾಯ್ತು.

  ಮತ್ತೆ ಪ್ರಸನ್ನ ಅವರು ತಾವಿದ್ದ ಮಡಿಕೇರಿ,ಕಾರವಾರಗಳಿಗೂ
  ಮೋಹನ ಸೋನರನ್ನು ಕರೆಸಿಕೊಂಡದ್ದರಿಂದ,
  ಅಲ್ಲಿಯೂ ಕಲಾಸೃಷ್ಟಿಯಾಗಿ ನಗರ ಸೌಂದರ್ಯವನ್ನು ಹೆಚ್ಚಿಸಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: