ನನ್ನ ನೋವಿಗೆ ಮದ್ದುಗಳಿಲ್ಲ

ಡಾ.ಎನ್ ಜಗದೀಶ್ ಕೊಪ್ಪ ಕಳೆದ ರಾತ್ರಿ ಧಾರವಾಡದಲ್ಲಿ ಈ ವರ್ಷದ ಮೊದಲ ಮುಂಗಾರು ಮಳೆ ಧಾರಕಾರವಾಗಿ ಸುರಿಯಿತು. ಬೆಳಗಿನ ಜಾವದ ಎರಡು ಗಂಟೆ ಹತ್ತು ನಿಮಿಷದ ವೇಳೆಯಲ್ಲಿ ಶೀತಗಾಳಿಯಿಂದಾಗಿ ನನ್ನವಳು ಎದ್ದು ಮನೆಯ ಕಿಟಕಿ ಬಾಗಿಲುಗಳನ್ನು ಭದ್ಪಡಿಸುವಾಗ ಶಬ್ಧ ಕೇಳಿ ಎಚ್ಚರವಾಯಿತು. ಸಾಮಾನ್ಯವಾಗಿ ನಾಲ್ಕು ಗಂಟೆಗೆ ಎದ್ದು ಬರೆಯಲು ಕೂರುವ ಅಭ್ಯಾಸವಿರುವ ನನಗೆ ಮತ್ತೇ ನಿದ್ರೆ ಹತ್ತಲಿಲ್ಲ. ಮನೆಯಿಂದ ಹೊರಗೆ ಬಂದು ಮಳೆ ನೋಡುತ್ತಾ ನಿಂತ ನನಗೆ , ಮನೆಯುದರು ನಿಂತ ಹಸು ಕರುಗಳನ್ನ ನೋಡಿ ಮನಸ್ಸು ಒದ್ದೆಯಾಯಿತು.ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಹಗ್ಗ ,ಮೂಗುದಾರಗಳಿಲ್ಲದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಹಸು ಕರುಗಳು ಮನೆಗಳಲ್ಲಿ ನೀಡುವ ರಾತ್ರಿಯ ಅನ್ನ ರೊಟ್ಟಿ ಚಪಾತಿ, ನೀರು ಇವುಗಳನ್ನ ಆಶ್ರಯಿಸಿ ಬೆಳೆಯುತ್ತಿವೆ. ನನ್ನ ಮನೆಯ ಸಮೀಪದ ಶಾಲಾ ಮೈದಾನದಲ್ಲಿ ಮಲಗುತಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ಹಸು, ಕರುಗಳು, ಮಳೆಯಿಂದ ತೊಯ್ದು ಮಲಗಲಾಗದೆ, ಮರದ ಕೆಳೆಗೆ ಆಶ್ರಯ ಪಡೆದು ನಿಂತಿದ್ದವು. ಎರಡು ಮೂರು ತಿಂಗಳಿನ ಪುಟ್ಟ ಕರುಗಳು ಅವುಗಳ ಅಮ್ಮಂದಿರ ಕೆಳೆಗೆ ನಿಂತು ಮಳೆಯಿಂದ ರಕ್ಷಣೆ ಪಡೆದ ಬಗೆ ನೋಡಿ ಮನಸ್ಸಿಗೆ ಸಂಕಟವಾಯಿತು. ಒಳಕ್ಕೆ ಬಂದು ಕಾಫಿ ಮಾಡಿಕೊಂಡು ಕುಡಿದು, , ಚಳಿಗೆ ಬೆಡ್ ಶೀಟ್ ಜೊತೆ ಶಾಲು ಹೊದಿಯಲು ತೀರ್ಮಾನಿಸಿ, ಅಲ್ಮೆರಾ ದಿಂದ ಶಾಲು ತೆಗೆಯುತಿದ್ದಂತೆ, ಏಕೋ ಏನೋ?ಧಾರವಾಡದ ನತದೃಷ್ಟ ಮಾನಸಿಕ ಅಸ್ವಸ್ಥರು ನೆನಪಾಗಿ , ಮೈ ಮತ್ತು ಮನಸ್ಸಿಗೆ ಅಂಟಿಕೊಂಡಿದ್ದ ಚಳಿ ಆ ಕ್ಷಣದಲ್ಲಿ ದೂರವಾಯಿತು. ಯಾವ ತಾಯಂದಿರು ಹೆತ್ತ ಮಕ್ಕಳೋ ಕಾಣೆ ಅವರುಗಳು ಎದುರಾದಾಗಲೆಲ್ಲಾ ಕೈಗೆ ಒಂದು ಬನ್ನು ಮತ್ತು ಬಾಳೆಹಣ್ಣು ಕೊಟ್ಟು ಐದು ಅಥವಾ ಹತ್ತು ರೂಪಾಯಿ ನೀಡಿ ಎದೆಯ ಭಾರವನ್ನು ಇಳಿಸಿಕೊಳ್ಳುತ್ತೇನೆ, ಅವರನ್ನು ನೋಡಿ ಹಾಗೆ ಬಂದು ಬಿಟ್ಟರೆ, ರಾತ್ರಿಯ ೂಟದ ತಟ್ಟೆ ಕೈಗೆತ್ತುಕೊಂಡಾಗ ಅವರುಗಳು ಕಾಡತೊಡಗುತ್ತಾರೆ.ಏಕೆಂದರೆ,ಬಾಲ್ಯದ ಹಸಿವು, ಅಪಮಾನಗಳ ನಡುವೆ ಬದುಕು ಕಟ್ಟಿಕೊಂಡಿರುವ ನನಗೆ ಅವರನ್ನು ದಾಟಿ ಬರುವುದು ಸುಲಭದ ಸಂಗತಿಯಲ್ಲ. ಇಲ್ಲಿನ ಧರ್ಮಸ್ಥಳ ಇಂಜಿನಿಯಿರಿಂಗ್ ಕಾಲೇಜ್ ಬಳಿ ಇರುಸ ನೀಳ ಮೂಗಿನ, ಕೆಂಪು ಬಣ್ಣದ ಅತ್ಯಂತ ಸ್ಪುರದ್ರೂಪಿ ಯುವಕನನ್ನು ನೋಡಿದಾಗ ಮನಸ್ಸು ಮುದುಡಿ ಹೋಗುತ್ತದೆ. ಸುಮಾರು 28 ವರ್ಷದ ಈ ಯುವಕ ಉತ್ತರ ಭಾರತದವನಂತೆ ಕಾಣುತ್ತಾನೆ, ತನ್ನ ಪಾಡಿಗೆ ನಗುತ್ತಾ, ತಾನೆ ಮಾತನಾಡಿಕೊಳ್ಳುತ್ತಾ, ಕಾಲೇಜು ಮುಂದೆ ಓಡಾಡುವ ಈತನಿಗೆ ಅಲ್ಲಿನ ವಿದ್ಯಾರ್ಥಿಗಳು ಕೊಡಿಸುವ ಚಹಾ ಅಥವಾ ತಿಂಡಿಯೇ ಬದುಕಿಗೆ ಆಸರೆ. ಇನ್ನು ಧಾರವಾಡ- ಹುಬ್ಬಳ್ಳಿ ನಡುವೆ ಇರುವ ದರ್ಗಾದ ಬಳಿ ಪೊಲಿಯೊ ಪೀಡಿತ 1ಹದಿನಾರು ವರ್ಷದ ಯುವತಿಯೊಬ್ಬಳಿಗೆ ಯಾರೋ ಪುನ್ಯಾತ್ಮರು ತಲೆ ಬೋಳಿಸಿ ಸ್ಕಟ್ ಲಂಗ ತೊಡಿಸಿದ್ದಾರೆ. ದರ್ಗಾಕ್ಕೆ ಪ್ರಾರ್ಥನೆ ಸಲ್ಲಿಸಲು ಬರುವ ಮುಸ್ಲಿಂ ಬಾಂಧವರು ಕೊಡುವ ಆಹಾರವೇ ಈಕೆಗೆ ಆಧಾರ, ಕೈಯಲ್ಲೊಂದು ಪ್ಲಾಸ್ಟಿಕ್ ಬಾಟಲ್ ಹಾಗೂ ಪುಟ್ಟ ಬಟ್ಟೆಯ ಗಂಟು ಇವಳ ಆಸ್ತಿ. ಮತ್ತೊಬ್ಬ ನತದೃಷ್ಟ ಸುಮಾರು ಅರವತ್ತು ವಯಸ್ಸಿನ ಕಾಲು ಮತ್ತು ಸೊಂಟದ ಶಕ್ತಿ ಕಳೆದುಕೊಂಡ ಮುಸ್ಲಿಂ ವೃದ್ಧ. ತನ್ನ ದೈಹಿಕ ಅಂಗ ಹೀನತೆಯ ಜೊತೆಗೆ ಮಾನಸಿಕ ಸ್ವಾಸ್ಥ ಕಳೆದುಕೊಂಡು, ಕೃಷಿ ಮಾರುಕಟ್ಟೆಯ ಮುಖ್ಯ ಬಾಗಿಲ ಎದುರು ಮಳೆ, ಬಿಸಿಲು ಚಳಿ ಎನ್ನದೆ, ಶಿಲೆಯಂತೆ ಭೂಮಿಗೆ ಸ್ಥಾಪಿತವಾಗಿಬಿಟ್ಟಿದ್ದಾನೆ. ಆದರೆ, ಇವರುಗಳು ನಮ್ಮ ನೆಮ್ಮದಿಯ ಬದುಕಿನ ಕಕ್ಷೆಯೊಳಗೆ ಬರಲಾರದಷ್ಟು ವಿಸ್ಮೃತಿಯ ಆಳಕ್ಕೆ ನಾವು ಜಾರಿಬಿಟ್ಟಿದ್ದೇವೆ. ನಮಗೆ ನಮ್ಮದೇ ಆದ್ಯತೆಗಳಿವೆ,ಕುಡಿಯಲು ಪೆಪ್ಸಿ ಮತ್ತು ಕೋಲಗಳಿವೆ. ಬೇಸಿಗೆಗೆ ತಣ್ಣನೆಯ ಬಿಯರ್ ಬಾಟಲ್ ಗಳಿವೆ. ನೋಡಲು ಟ್ವೆಂಟಿ-ಟ್ವೆಂಟಿ ಕ್ರಿಕೇಟ್ ಮ್ಯಾಚ್ ಗಳಿವೆ, ಶತಮಾನ ಕಳೆದರೂ ಮುಗಿಯದ ಸೀರಿಯಲ್ ಗಳಿವೆ, ಹಳಸಲು ಸುದ್ಧಿಗಳನ್ನು ಹೊಸದೆಂಬಂತೆ ತೌಡು ಕುಟ್ಟುವ ಸುದ್ಧಿ ಛಾನಲ್ ಗಳಿವೆ ಇನ್ನೇನು ಬೇಕು? ಈ ದೇಶದ ವೈರುಧ್ಯವನ್ನು ನೆನದರೆ, ನೋವಿನೊಂದಿಗೆ ನಾಚಿಕೆಯೂ ಆಗುತ್ತದೆ. ಒಂದೆಡೆ, ಅಪೌಷ್ಟಿಕತೆ ಯಿಂದ ಬಳಲುತ್ತಿರುವ, ಸಾಯುತ್ತಿರುವ ಮಕ್ಕಳು.ಜೊತೆಗೆ ಒಂದೊತ್ತಿನ ೂಟಕ್ಕೆ ಪರದಾಡುವ ಕೋಟ್ಯಾಂತರ ಮಂದಿ ಪೋಷಕರು, ಇನ್ನೊಂದಡೆ ಗೋಧಾಮಿನಲ್ಲಿ ಸಂರಕ್ಷಣೆಯಿಲ್ಲದೆ, ಮತ್ತು ವಿತರಣೆಯಾಗದೆ, ಕೊಳೆತು ಹೋದ 80 ಲಕ್ಷ ಟನ್ ಗೋಧಿ, ಇವುಗಳ ವಿವೇಚನೆಯಿಲ್ಲದೇ, ಕರ್ನಾಟಕದ ಬತ್ತಲೆ ರಾಜಕೀಯವನ್ನು ಮತ್ತು ದೇಶದ ರಾಜಕೀಯವನ್ನು ದೊಡ್ಡದಾಗಿ ಬಿಂಬಿಸುತ್ತಿರುವ ಮಾಧ್ಯಮಗಳು. ಇವುಗಳನ್ನ ನೆನಪಿಸಿಕೊಂಡಾಗ ಬಹುಷ ನನ್ನ ಗ್ರಹಿಕೆಯಲ್ಲಿ ನ್ಯೂನ್ಯತೆಗಳಿರಬೇಕು ಎಂಬ ಸಂಶಯ ಕಾಡುತ್ತದೆ. ದೂರದ ಅಸ್ಸಾಂ ರಾಜ್ಯದ ಪ್ರವಾಹದ ಚಿತ್ರಗಳನ್ನು ಪರಿಣಾಮಕಾರಿಯಾಗಿ ಸೆರೆಹಿಡಿದು ಜಗತ್ತಿನ ಮುಂದಿಡುತ್ತಿರುವ ಅಸೋಸಿಯೇಟೆಡ್ ಪ್ರೆಸ್ ಮತ್ತು ರಾಯಿಟರ್ ಸುದ್ಧಿ ಸಂಸ್ಥೆಯ ಕ್ಯಾಮರಾಮೆನ್ ಗಳ ಬದ್ಧತೆ ಬಗ್ಗೆ ಈ ಕ್ಷಣದಲ್ಲಿ ಯೋಚಿಸುತಿದ್ದೇನೆ,, ಅಷ್ಟೇ ಅಲ್ಲ ನಾನೆ ಅನುವಾದಿಸಿದ್ದ ಗಾಲಿಬ್ ನ ಕವಿತೆ ಕೂಡ ನೆನಪಾಗುತ್ತಿದೆ.

ಪ್ರೀತಿಯಿಂದ ಬದುಕು

ಸಂತೃಪ್ತಿ ಪಡೆಯಿತು

ನೋವೆಂಬ ಮದ್ದನ್ನೇ

ತನ್ನದಾಗಿಸಿಕೊಂಡಿತು

ಕೊನೆಗೆ ಮದ್ದಿಲ್ಲದ

ನೋವನ್ನೇ ಪಡೆಯಿತು

 

   ]]>

‍ಲೇಖಕರು G

July 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

4 ಪ್ರತಿಕ್ರಿಯೆಗಳು

 1. mahadev hadapad

  ಪ್ರೀತಿಯಿಂದ ಬದುಕು
  ಸಂತೃಪ್ತಿ ಪಡೆಯಿತು
  ನೋವೆಂಬ ಮದ್ದನ್ನೇ
  ತನ್ನದಾಗಿಸಿಕೊಂಡಿತು
  ಕೊನೆಗೆ ಮದ್ದಿಲ್ಲದ
  ನೋವನ್ನೇ ಪಡೆಯಿತು
  ಅದೇ ಧಾರವಾಡದ ಕಡಪಾ ಮೈದಾನದ ಮುಂದಿನ ಪುಟಪಾತ್ ಮೇಲೆ, ನಾಲ್ಕು ವರ್ಷದ ಹಿಂದೆ (ಆ ದಿವಸ ನಾನು ಕಿತ್ತೂರಿನ ಹತ್ತಿರದ ಬೀಡಿ ಗ್ರಾಮಕ್ಕೆ ಹೋಗಲು ತಯಾರಾಗಿ ಬಂದಿದ್ದೆ, ಶಾರದಾ ದಾಬಡೆಯವರು ಬರುವುದನ್ನು ಕಾಯುತ್ತ ನಿಂತಿದ್ದಾಗ…) ನಾನೊಂದು ದೃಶ್ಯ ಕಂಡಿದ್ದೆ.
  ಹೊಟ್ಟೆಯನ್ನು ನೆಲಕ್ಕಂಟಿಸಿ ಕಂವುಚಿ ಮಲಗಿದ್ದ ಒಬ್ಬ ಮಾನಸಿಕ ಅಸ್ವಸ್ಥ ಹೆಣಮಗಳು ಯಾರೋ ಕೊಟ್ಟು ಹೋಗಿದ್ದ ದೋಸೆ ಒಂದನ್ನು, ತನ್ನಂತೆ ಹಸಿದುಕೊಂಡು ಜುಬ್ಲೀ ಸರ್ಕಲ್ಲಿನ ಆ ಮೂಲೆ ಈ ಮೂಲೆ ತಿರುಗುತ್ತಿದ್ದ ನಾಯಿಗೆ ಸಮಪಾಲು ಮಾಡಿ ಹಾಕಿ ತಾನೂ ತಿನ್ನುತ್ತಿದ್ದಳು.
  ಮತ್ತೊಂದು ಸಲ ಧಾರವಾಡ ರಂಗಾಯಣ ಸುರುವಾತಿಗೆ ನಾನೂ ಅಲ್ಲಿ ಸ್ವಿಡಿಷ್ ಪ್ರಾಜೆಕ್ಟನಲ್ಲಿ ಕೆಲಸಮಾಡುತ್ತದ್ದಾಗ -ಅದೇ ಊರಿನ ಕಾಲೇಜು ವಿದ್ಯಾರ್ಥಿಗಳು ಹೇಮಾಮಾಲಿನಿ ಎಂದು ಕಾಡಿಸುವ ಮೋಡಕಾ ಆಯುವ ಹುಚ್ಚಿಯೊಬ್ಬಳು ಬಸವರಾಜ ರಾಜಗುರು ಬಯಲು ರಂಗಮಂದಿರದ ಹಿಂದಿನ ಅಕ್ಕಮಹಾದೇವಿ ಕಲ್ಯಾಣಮಂಟಪದ ಒಂದು ಮೂಲೆಯಲ್ಲಿ ಚಳಿಗೆ ಗಡಗಡ ನಡಗುತ್ತ ಕುಳಿತಿದ್ದಳು. ಆಗ ಅಲ್ಲಿಗೆ ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು ತನ್ನ ಎರಡು ಎಳೆ ಕಂದಮ್ಮಗಳನ್ನು ಕರೆದುಕೊಂಡು ಬಂದಿದ್ದಳು. ಆ ಮಕ್ಕಳು ಚಳಿಗೆ ನಡಗುವುದನ್ನು ನೋಡಿದ ಈ ಹೇಮಾಮಾಲಿನಿ ತನ್ನ ಮೈಮೇಲಿದ್ದ ಶರ್ಟ ಬಿಚ್ಚಿಕೊಟ್ಟಿದ್ದಳು. (ನಂತರ ಹೆಗ್ಗೊಡಿನ ಜೀವನ್ ತನ್ನ ಹಳೆಯ ಶರ್ಟನ್ನ ಹೇಮಾಮಾಲಿನಿಗೆ ಕೊಟ್ಟ) ಈ ಎರಡು ಘಟನೆ ನನ್ನನ್ನ ಆಗಾಗ್ಗೆ ಕಾಡುತ್ತವೆ ಸಾರ್. ನಿಮ್ಮ ಲೇಖನ ಓದಿದ ಮೇಲೆ ಆ ಎರಡು ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಆದರೆ ವ್ಯವಸ್ಥೆಯ ಅಹಂಕಾರದ ಜೊತೆಗಿರುವ ನಾವು ನೂರೆಂಟು ತೆರನಾಗಿ ಯೋಚಿಸಿ ನಮ್ಮಲ್ಲಿದ್ದದ್ದನ್ನು ಹಂಚಿಕೊಳ್ಳುತ್ತೇವೆ. ಆದರೆ ಆ ಇಬ್ಬರು ಮಾನಸಿಕರು ಮದ್ದಿಲ್ಲದ ನೋವನ್ನೆ ಪಡೆದವರು ಎಂಥಾ ಉದಾತ್ತ ಸಜ್ಜನರು ಅಲ್ಲವಾ ?

  ಪ್ರತಿಕ್ರಿಯೆ
 2. D.RAVI VARMA

  ನಮಗೆ ನಮ್ಮದೇ ಆದ್ಯತೆಗಳಿವೆ,ಕುಡಿಯಲು ಪೆಪ್ಸಿ ಮತ್ತು ಕೋಲಗಳಿವೆ. ಬೇಸಿಗೆಗೆ ತಣ್ಣನೆಯ ಬಿಯರ್ ಬಾಟಲ್ ಗಳಿವೆ. ನೋಡಲು ಟ್ವೆಂಟಿ-ಟ್ವೆಂಟಿ ಕ್ರಿಕೇಟ್ ಮ್ಯಾಚ್ ಗಳಿವೆ, ಶತಮಾನ ಕಳೆದರೂ ಮುಗಿಯದ ಸೀರಿಯಲ್ ಗಳಿವೆ, ಹಳಸಲು ಸುದ್ಧಿಗಳನ್ನು ಹೊಸದೆಂಬಂತೆ ತೌಡು ಕುಟ್ಟುವ ಸುದ್ಧಿ ಛಾನಲ್ ಗಳಿವೆ ಇನ್ನೇನು ಬೇಕು?
  ಈ ದೇಶದ ವೈರುಧ್ಯವನ್ನು ನೆನದರೆ, ನೋವಿನೊಂದಿಗೆ ನಾಚಿಕೆಯೂ ಆಗುತ್ತದೆ. ಒಂದೆಡೆ, ಅಪೌಷ್ಟಿಕತೆ ಯಿಂದ ಬಳಲುತ್ತಿರುವ, ಸಾಯುತ್ತಿರುವ ಮಕ್ಕಳು.ಜೊತೆಗೆ ಒಂದೊತ್ತಿನ ೂಟಕ್ಕೆ ಪರದಾಡುವ ಕೋಟ್ಯಾಂತರ ಮಂದಿ ಪೋಷಕರು, ಇನ್ನೊಂದಡೆ ಗೋಧಾಮಿನಲ್ಲಿ ಸಂರಕ್ಷಣೆಯಿಲ್ಲದೆ, ಮತ್ತು ವಿತರಣೆಯಾಗದೆ, ಕೊಳೆತು ಹೋದ 80 ಲಕ್ಷ ಟನ್ ಗೋಧಿ, ಇವುಗಳ ವಿವೇಚನೆಯಿಲ್ಲದೇ, ಕರ್ನಾಟಕದ ಬತ್ತಲೆ ರಾಜಕೀಯವನ್ನು ಮತ್ತು ದೇಶದ ರಾಜಕೀಯವನ್ನು ದೊಡ್ಡದಾಗಿ ಬಿಂಬಿಸುತ್ತಿರುವ ಮಾಧ್ಯಮಗಳು. ಇವುಗಳನ್ನ ನೆನಪಿಸಿಕೊಂಡಾಗ ಬಹುಷ ನನ್ನ ಗ್ರಹಿಕೆಯಲ್ಲಿ ನ್ಯೂನ್ಯತೆಗಳಿರಬೇಕು ಎಂಬ ಸಂಶಯ ಕಾಡುತ್ತದೆ.ಈ ಮಾನಸಿಕ ಅಸ್ವಸ್ತತೆ ನಿಜಕ್ಕೂ ಈಡೀ ಮನುಕುಲಕ್ಕೆ ಅದುಒಂದು ದೊಡ್ಡ ಶಾಪ . ಇವರು ಬಹಳಷ್ಟು ಸಾರಿ ಗೇಲಿಗೆ ಒಳಪಡುತ್ತರೆಯೇ ಹೊರತು ಅವರ ಬಗ್ಗೆ,ಒಂದಿಸ್ತುಪ್ರೀತಿ, ಕಳಕಳಿ . ಪಡೆಯುವುದು ತುಂಬಾ ವಿರಳ. ಇಲ್ಲೊಬ್ಬ ಹೊಸಪೇಟೆಯ ಕಾಲೇಜಿನ ಮುಂದಣ ರಸ್ತೆಯಲ್ಲಿ ಕಸದ ದೊಡ್ಡ ಕುಪ್ಪ್ ಹಾಕಿಕೊಂಡು ಅದರ ಮೇಲೆಯೇ ಮಲಗಿರುತ್ತಾನೆ,ಎಂದು ಯಾರನ್ನು ಬೇಡುವುದಿಲ್ಲ,ಏನಾದ್ರೂ ಕೊಟ್ಟರೆ ಮಾತ್ರ ತಿನ್ನುತ್ತಾನೆ, ಅದು ಹೊಸಬರಾದರೆ ಸುತಾರಾಂ ಸ್ವೀಕರಿಸುವುದಿಲ್ಲ. ನನಗಿನ್ನೂ ನೆನಪಿದೆ, ನೆಲಕಂತೆಸ್ವರ ದೇವಸ್ತಾನದ ಹತ್ತಿರ ಸ್ಪುರದ್ರೂಪಿ ಹೆಂಗಸು ಅರೆಬಟ್ಟೆ ಹಾಕಿಕೊಂಡು ಮಲಗಿರುತ್ತಿದ್ದಳು. ಆಕೆಯ ತಾಯಿ,ತಂದೆಯಾರು ಗೊತ್ತಿರಲಿಲ್ಲ,ಅದೆಲ್ಲಿಂದ ಬಂದಳೋ , ಆಕೆ ರಾತ್ರಿ ಹೊತ್ತು ಸರಾಯಿ ಕುಡಿಯುತ್ತಿದ್ದಳಂತೆ, ಹಾಗಂತ ಅಲ್ಲಿನವರ ಮಾತು. ಒಬ್ಬ ಆಗಂತುಕ ದಿನ ರಾತ್ರಿ ಆಕೆಗೆ ಉಟ.ಸರಾಯಿ ತಂದ್ಕೊದುತ್ತಿದ್ದನತೆಆಟ ಯಾರು ಅನ್ನೋ ಕುತೂಹಲಕ್ಕೆ ನಾವು ನೋಡಲು ಹೋದರೆ, ಆತ ಯಾರು ಇಲ್ಲದ ಸಮಯದಲ್ಲಿ ಬಂದು ಹೋಗುತ್ತಿದ್ದನಂತೆ. ನೋಡನೋಡುತಿದ್ದಂತೆ ಆಕೆ ಬಸರಿಯಾದದ್ದು, ಆ ಗುಡಿಯವರು ಅಲ್ಲಿಂದ ಹೊರಹಾಕಿದ್ದು .ಅದೆಲ್ಲಿ ಮಾಯವಾದಲೋ….. ಇನ್ನು ನಿಗುಡವಾಗೆ ಉಳಿದಿದೆ.., ರಸ್ತೆಯಲ್ಲಿ ಯಾರೋ ಸುಂದರಿ ಹೆಂಗಸು ಕಂಡಾಗ ಆಕೆಯಆ ಮುಗ್ಧ ಮುಖ ಕಾಡುತ್ತದೆ.
  ಕೊಪ್ಪದ ಸರ್,ಬಹಳ ಕಾಲದ ನಂತರ ಮನಸ್ಸಿಗೆ ಶಾಕ್ ಕೊಡುವ ಘಟನೆಬರೆದಿದ್ದೀರಿ .ಇಲ್ಲ್ಪಬ್ಬ ಮಾನಸಿಕ ವೈದ್ಯರು ಹೇಳೋದು ಕೇಳಿದ್ರೆ ಶಾಕ್ ಆಗುತ್ತೆ,ಮುಂಬರುವ ದಿನಗಳಲ್ಲಿ ಈ ಮನಸಿಕಗೀಳು, ಅಸ್ವಸ್ತತೆ, ಬಹು ವ್ಯಾಪಕವಾಗಿ ಹರಡಿ, ಕೆಲವು ಕಾಲದ ನಂತರ ಪ್ರತಿ ಮನೆಯಲ್ಲೂ ಒಬ್ಬ ಅಥವಾ ಮಾನಸಿಕ ರೋಗಿಗಳಿರುತ್ತಾರೆ,ಇಂದಿನ ನಮ್ಮ ಬದುಕಿನ ಒತ್ತಡ,ಹಳಹಳಿಕೆ, ದುರಾಶೆ, ಬೇಸರ ಪಡೆಯಲಾಗದ ಸುಖ,ಸವಲತ್ತುಗಳು, ಇವೆಲ್ಲವೂ ಅದಕ್ಕೆ ದಾರಿ ಅಂತಾ ವ್ಯಥೆ ಪಡುತ್ತಿದ್ದರು .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 3. jagadishkoppa

  ಪ್ರಿಯ ಮಹಾದೇವ್ ನೀವು ಹೆಸರಿಸಿರುವ(ನನ್ನ ಪತ್ರಕರ್ತ ಮಿತ್ರ ನಾಗೇಶ್ ಹೆಗ್ಗಡೆಯವರ ತಂಗಿ) ಶಾರದಾ ಗೋಪಾಲ್ ದಾಬಡೆ ಮನೆಯ ಪಕ್ಕದಲ್ಲಿ ನಾನು ವಾಸವಾಗಿದ್ದೇನೆ.( ನನ್ನ ಮನೆ ಹೆಸರು ಅಕ್ಷರ. ಧಾರವಾಡಕ್ಕೆ ಬಂದಾಗ ಬನ್ನಿ. ಅವರು ಮತ್ತು ಅವರ ಪತಿ ಗೋಪಾಲ್ ನನ್ನ ಬೆಳಗಿನ ವಾಕ್ ಗೆ ಜೊತೆಗಾರರು) ಆ ರಾತ್ರಿ ಹಸು ಕರುಗಳು ನಿಂತಿದ್ದು ಅವರ ಮನೆಯ ಮುಂದಿನ ಮರದಕೆಳಗೆ. ಇನ್ನೂ ಹೇಮಾಮಾಲಿನಿ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ನಿನ್ನೆ ಸಂಜೆ ಮಾರುಕಟ್ಟೆಗೆ ಹೋಗುವಾಗ ಆಕೆ ಧಾರವಾಡ ಹೊಟೇಲ್ ಸಮೀಪ ಬಸಪ್ಪ ಖಾನಾವಳಿ ಬಳಿ ನಿಂತಿದ್ದಳು. ಯಾರನ್ನೋ ಸಿಕ್ಕಾಪಟ್ಟೆ ಬೈಯ್ಯುತಿದ್ದಳು.ಈಗಲೂ ಅವಳ ಹೆಗಲ ಮೇಲೇ ಚೀಲ, ಕೈಯಲ್ಲಿ ಕೋಲು ಹಾಗೇ ಇವೆ.
  ನಿನ್ನೆ ಬೆಳಿಗ್ಗೆ, ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಧಾರವಾಡದ ಮಳೆ-ಚಳಿಯಲ್ಲಿ ಸಾಯುತ್ತಿರುವ ಈ ನತದೃಷ್ಟರ ಬಗ್ಗೆ ತಿಳಿಸಿ ಬಂದಿದ್ದೇನೆ. ದರ್ಪಣ್ ಜೈನ್ ಎಂಬ ದೆಹಲಿ ಮೂಲದ ಆದರ್ಶ ಮನೋಭಾವದ ಯುವಕ ಈಗ ಧಾರವಾಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಿದ್ದಾನೆ.ಅಹಿಂಸೆಯನ್ನು ಪ್ರತಿಪಾದಿಸುವ ಧಾರ್ಮಿಕ ಕುಟೂಂಬವೊದರಲ್ಲಿ ಬೆಳೆದು ಬಂದಿರುವ ಈ ವ್ಯಕ್ತಿಯ ಶ್ರದ್ಧೆ, ಪ್ರಾಮಾಣಿಕತೆ ಬೆರಗು ಮೂಡಿಸುವಂತಹದ್ದು. ಅವರಿಗೆ ವ್ಯವಸ್ಥೆ ಕಲ್ಪಸಿಕೊಡಲು ಮನಸ್ಸು ತೋರಿದ್ದಾನೆ. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆ ಸಂಪರ್ಕದಲ್ಲಿ ಇರಲು ನಮ್ಮ ಧಾರವಾಡದ ುದಯ ಟಿ.ವಿ.ವರದಿಗಾರನಿಗೆ ಸೂಚಿಸಿದ್ದೀನಿ.

  ಪ್ರತಿಕ್ರಿಯೆ
 4. ಲಕ್ಷ್ಮೀಕಾಂತ ಇಟ್ನಾಳ

  ಮೊನ್ನೆ ದಿನನಿತ್ಯದಂತೆ ನಮ್ಮ ಆಫೀಸಿನ ಹತ್ತಿರ ಒಂದು ಗೂಡಂಗಡಿ ಚಹಾ ಅಂಗಡಿಯಲ್ಲಿ ಚಹ ಕುಡಿಯಲೆಂದು ಚಹ ಕೈಯಲ್ಲಿ ಹಿಡಿದು ಅಂಗಡಿಯ ಮುಂದೆ ನಿಂತಿದ್ದೆ. ಅಲ್ಲಿಯೇ ಸಮೀಪದಲ್ಲಿ ಚಿಂದಿ ಆಯುತಿದ್ದ ಹೇಮಾಮಾಲಿನಿಯನ್ನು ನೋಡಿ ಅಂಗಡಿಯವನಿಗೆ ಅವಳಿಗೂ ಚಹ ಕೊಡು ಎಂದೆ. ಅಂಗಡಿಯವ ಅವಳನ್ನು ಕರೆದು ‘ಚಹ ಕುಡಿಬಾ ಬೇ’ ಎಂದು ಕರೆದ. ಅಂಗಡಿಯ ಹತ್ತಿರ ಬಂದು ‘ಯಾರೂ ನೀನ ಚಹ ಕೊಡಾಕತ್ತೀಯೋ ಇಲ್ಲಾ ಯಾರರ ಕೊಡಸಾಕತ್ತ್ಯಾರೋ’ ಅಂದಳು. ಅಂಗಡಿಯವ ನನ್ನತ್ತ ಕೈ ತೋರಿಸಿ, ಆ ಸರ್ ಹೇಳ್ಯಾರು ನೋಡವಾ ಅಂದ. ಅವರು ಏನ ಹೇಳ್ಯಾರು ಅಂದಳು, ನಿನಗ ಚಹ ಕೊಡಲು ಹೇಳ್ಯಾರು ಅಂದ. ಹಾಗಂದರ ನನಗ ಒಂದು ಪ್ಲೇಟ್ ಇಡ್ಲಿ ಕೊಡು ನಂತರ ಚಹ ಕೊಡು. ಅಂದಳು ಆದರೆ ಇಡ್ಲಿ ರೊಕ್ಕ ನಾ ಕೊಡತೇನಿ ಅಂದಳು. ನಾನು ಅವಳಿಂದ ದುಡ್ಡು ತೊಗೊಬ್ಯಾಡ ಅಂದು ತಾಕೀತು ಮಾಡಿ ಅವನಿಗೆ ನೂರರ ನೋಟು ಕೊಟ್ಟು ಅವಸರವಿದ್ದುದರಿಂದ ಚಿಲ್ಲರೆ ಆ ಮೇಲೆ ತೆಗೆದುಕೊಳ್ಳುವೆ ಎಂದು ಹೇಳಿ, ನನ್ನ ಕೆಲಸಕ್ಕೆ ಹೋದೆ. ಮರುದಿನ ಅಂಗಡಿಗೆ ಹೋದಾಗ ನನಗೆ ಕೇವಲ ಅವಳ ಹಾಗೂ ನನ್ನ ಚಹದ ಬಿಲ್ ಅಷ್ಠೇ ಮುರಿದು ದುಡ್ಡು ಕೊಟ್ಟ. ಯಾಕೆ ಎಂದು ಕೇಳಿದ್ದಕ್ಕೆ ಅವಳು ಒಪ್ಪದೇ ಒತ್ತಾಯ ಮಾಡಿ ತನ್ನ ಇಡ್ಲಿ ದುಡ್ಡು ಕೊಟ್ಟೇ ಹೋದಳು ಸರ್ ಎಂದ.ಅವಳ ಸ್ವಾಭಿಮಾನ ಮೆಚ್ಚತಕ್ಕದ್ದಲ್ಲವೇ?. ತಾವು ಬರೆದ ಮಾನವೀಯ ಲೇಖನ ನಿಜವಾಗಿಯೂ ಮನ ಕಲಕಿತು. ತಮಗೆ ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: