ನನ್ನ ಬುದ್ಧ

ನಂದಿನಿ ಹೆದ್ದುರ್ಗ

ಹೊಸಪ್ರೇಮಿಗಳ ನಡುರಾತ್ರಿಯ ಮೊರೆವ
ಮಾತುಗಳ ನಡುವಿಂದ ಕದ್ದು ಓಡಿ
ಬರುತ್ತವೆ ಒಂದಷ್ಟು ಮುದ್ದುಮುದ್ದು ಪದಗಳು.
ಅದು ಅವಳು ಪದ್ಯ ಬರೆಯುವ ಹೊತ್ತು.

ಬುದ್ಧನ ಕುರಿತು ಒಂದು ಗಂಭೀರ 
ಕವಿತೆ ಬೇಕೆಂಬ ಅಣತಿಯಿತ್ತು.

‘ಬಾಳಹಾದಿಯಲಿ ಮೂರು ನೋವುಗಳ
ನೋಡಿ
ಜಗದ ಬೇಗೆಗಳ ತನ್ನದೆಂದು ಹೊದ್ದ
ಎದ್ದ ಬುದ್ದ, ತೊರೆದ ಬುದ್ದ, ಹೊರಟ ಬುದ್ಧ
ಹೋದ ಬುದ್ಧ..’

ಸಾಲುಗಳಲೇನೇನೊ ಸಣ್ಣ ತೊಡಕು.
ಪದ್ಯ ಸ್ಪರ್ದೆಯಲಿ ಗೆಲ್ಲಬೇಕಿತ್ತು
ಎದೆಯೊಳಗಿಳಿದ ಬುದ್ಧ. ಬುದ್ಧ ಧ್ಯಾನ, ಬುದ್ಧ ಮೌನ,
ಬುದ್ಧನೆಡೆಗೇ ಪಯಣ..
ಇದು ಪದ್ಯ ಸುಗಮದ ಯಾನ.

‘ನಗುವೇ ಬುದ್ಧ, ಮಗುವೂ ಬುದ್ಧ
ಜಗದ ಬುದ್ಧ, ಜನರ ಬುದ್ಧ’ ಓದಿದರೆ ಸಾಲುಸಾಲಿನಲೂ ಸೋಲು
ಆಶಯವೇ ಗೈರು.

ಕುಲುಕುಲು ನಕ್ಕ ಸದ್ದು.
ಅವು ಕದ್ದೋಡಿ ಬಂದ ಪದಗಳು ಒಂದು ಲೇಖನಿಯೂ ಒಂದು ಪುಸ್ತಕವೂ
ಬುದ್ದನೂ, ಪದಗಳೂ ಮತ್ತು ಪದ್ಯ ಬರೆಯುವವಳು.

ಪಿಸುಮಾತು, ಹಸಿಮಾತು ಕುಡಿನೋಟ
ಬೆದಕಾಟ, ಮುಗುಮುಗುಳು ನಗು
ನಿಲ್ಲದ ಸೆರಗು. ಒಲವು ಪಲ್ಲವಿಸುವ ಪದಗಳು
ಪೈಪೋಟಿಯಲಿ ಪದ್ಯದೊಳಗಿಳಿಯುತಿವೆ.

ತುಸು ಅಮಲು, ಎದೆ ಬಯಲು
ಮೊರೆಯುತಿದೆ ವಿರಹ
ಥರಥರದ ತೀವ್ರತೆ
ಜುಮುಗುಡಿಸೊ ಗಾಢತೆ. ಬರೆಯದೆ ಬೇರೆ ದಾರಿಯೇ ಇಲ್ಲ.

ಉನ್ಮತ್ತ ಭಾವವೊಂದು ಪದ್ಯ ಮದ್ಯದಲ್ಲಿ
ಮೂಡಿ..
ಹಸೀಹಸೀ ಹಸಿವು ಪ್ರಸವಿಸಿ
ಮುಲುಗಿ ನಲುಗಿ ನರಳುವಾಗ ಎದೆಗಿಳಿದು ಬೆಳಕಾಗಿದ್ದ ಗುಂಗುರುಗೂದಲಿನ
ಗಂಡಿಗೂ ಸೊಕ್ಕುತಿದೆ ಕತ್ತಲಿನ ಮೋಹ.
ಬುದ್ಧ… ಗುಂಗಿನಲಿ ನಕ್ಕ.! ಬಾಗಿ ನೋಡುತ್ತಾನೆ ಪದ್ಯ ಬರೆಯುವ ಹುಡುಗಿಯ
ಬುದ್ಧನಂತವನ ನಿದ್ದೆ ಕದ್ದ ಬೆಡಗಿಯ.

ಚುಕ್ಕಿಗಣ್ಣು, ಸೊಕ್ಕಿದೆದೆ
ಹಣೆಯ ಮುತ್ತುಮಾಲೆಯಲಿ ಸೂರ್ಯ ಮುಳುಗಿ
ಬಿಗಿದ ಮೈಯಿ, ಎಸಳು ಬಾಯಿ…
ಬೆವರಿದ ಬುದ್ಧ, ಬೆದರಿದ ಬುದ್ಧ
ಬಳಲಿದ ಬುದ್ಧ.!! ಪದ್ಯ ಬರೆಯುವ ಹುಡುಗಿಗೆ ಶರಣಾದ ಬುದ್ಧ
ಪ್ರೇಮದಲಿ ಬಿದ್ದ.
ಬುದ್ಧನೆದೆ ಕದ್ದ ಜುುಳುಜುಳು ಝರಿ
ಯಶೋಧರೆಯ ಹೊಸ ಸೋದರಿ ತನಗೆ ತಾನೇ ಪರಿಚಯಿಸಿಕೊಂಡ.

“ಭೂತಕಾಲದಿಂದ್ಭವಿಸಿದ ಪ್ರೀತಿ
ಇದು ಹುಡುಗನೇ. ಧಡಬಡಿಸುತ್ತೇನೆ ಕೆಲವೊಮ್ಮೆ
ಕಡಲಂತೆ.
ನೀನು ಬಂದ ದಿನ ಇಲ್ಲಿ ಹುಣ್ಣಿಮೆ. ನಿನ್ನ ಹೊದ್ದು, ನಿನ್ನನ್ನೇ ಕದ್ದು
ನಿನ್ನ ಪ್ರೇಯಸಿಯಾಗಿ ಬಿಡುವೆ.
ಮಡದಿಯಾಗುವ ಆಸೆಯೂ
ಮಮ್ಮಲಗುಡುತಿದೆ” ಕದ್ದು ಬಂದ ಪದಗಳು
ಪ್ರಣಯದೋಕುಳಿಯಲ್ಲಿ ಅದ್ದಿ ತೆಗೆಯುತ್ತಿವೆ
ಪದ್ಯವನ್ನು.

ಸಾಲುಸಾಲಿಗೂ ವಿರಹದ್ದೇ 
ಸವಾಲು ಪದದ ನಡುವಿನ ಮೌನ 
ಅದು ಕುಡಿ ಬೆರಳ ಯಾನ..
ಕೆಂಪು ಕದಪಿನ ಹುಡುಗಿ ಮೊಲ್ಲೆಗಣ್ಣಿನ ಹುಡುಗಿ
ಕಿರುನಡುವಿನ ಹುಡುಗಿ.
ಬುದ್ಧ ನೋಡಿದ ಬಾಗಿ… ಇನ್ನಷ್ಟು ಮಾಗಿ
ನೋಡಿದ ಬುದ್ಧ.. ಪದ್ಯ ಓದಿದ ಬುದ್ಧ.. ಆಸೆ ಗೆದ್ದವನೆದೆಯೊಳಗೆ
ಯಾವುದಿದು ಕ್ಲೀಷೆ..?
ಒಲವು
ಹೊತ್ತಿಸಿದ ಉರಿಯಲ್ಲಿ ಬುದ್ಧ… ಧಗ್ಧ ಧಗ್ಧ… ತಲ್ಲಣಿಸಿದ ಬುದ್ಧ, ತವಕಿಸಿದ ಬುದ್ಧ
ಬುದ್ಧನೆಂಬುವನು ಇದ್ದ… ಅವನೀಗ ಸ್ತಬ್ಧ.

ಬಿಸಿ ರಕ್ತ ಬಸಿಬಸಿದು
ಬಯಕೆಗಳು ಹಸಿಹಸಿದು
ಸರಸರಸ ನೆರೆನುಗ್ಗಿ ಎದೆಗೆ ಎದೆ..ಬೆದೆಗೆ ಬೆದೆ
ಹೊಸ ಒಲವು
ಬಗೆಬಗೆಯ ಬೇಗೆ..
ಇದು ಬಟ್ಟ ಮುಖದ ಗಂಡಿಗೆ
ಮೊಂಡು ಮೂಗಿನ ಹೆಣ್ಣು
ಕಣ್ಣೊಳಗಿಳಿದ ಘಳಿಗೆ.

ಬುದ್ಧನೆದೆ ಅಪಹರಣದ ಸುದ್ದಿ
ರಾಣಿ ವಾಸಕೂ ತಲುಪಿ
ತುಮುಲವೋ, ತಳಮಳವೋ, ತವಕವೋ
ತನ್ನ ಮೀರಿದ ಹೆಣ್ಣಕಣ್ಣಿನ ಸೆಳೆತವೋ.. ಹೊದ್ದ ಮಾಸಲು ಮೇಲುಡುಪಿನಲ್ಲೇ
ಓಡೋಡಿ ಬಂದಳು ಬುದ್ಧನ ನೀರೆ
ಅವಳು ಯಶೋಧರೆ

ಪದ್ಯ ಬರೆಯುವ ಸ್ನಿಗ್ಧ ಹುಡುಗಿಯ ನೋಡುವಳು ಬೆರಗಿನಲಿ
ಯಶೋಧರೆ…
ಖರೆ‌.!!
ಇನ್ನಾರಿಗಾದಾನು ಇವನು ಕೈಸೆರೆ..

ಸಣ್ಣ ಧ್ವನಿಯಲಿ,ಮಧುರ ಬನಿಯಲಿ
ಕರೆದಳೇ ಯಶೋಧರೆ..?
ನನ್ನ ಸೋದರಿ… ಇವನೆದೆಯ ಗೆದ್ದ ಬಂಗಾರಿ
ಸಿರಿಗೌರಿ…ಕುವರಿ…ಮಯೂರಿ…
ಕುರುಳು ನೇವರಿಸಿ,
ಕರೆದು ಕನವರಿಸಿ
ಕಣ್ಣೀರಿಟ್ಟು ಮೋಹವಳಿದವನ ಮೇಲೆ 
ಪ್ರಣಯದಾಳಿಗೈದ ಕಣ್ಣಿಗೂ ಕವಿತೆಗೂ 
ಸೈ ಎಂದು
ರಾಹುಲಗೆ ಸಿಕ್ಕಿದನು ಮತ್ತೆ ಅಪ್ಪ ಎನ್ನುತ್ತಾ ಹೊಸತಂಗಿ
ಹಣೆಗೆ ಮುತ್ತಿಕ್ಕಿ
ನುಡಿದಳು ಮೊದಲ ಮಡದಿ ‘ನಿನ್ನ ಗೆದ್ದವನ ಸಂತಾನ ಸಾವಿರವಾಗಲಿ
ಕವಿತೆಗಣ್ಣಿನ ಹುಡುಗಿ ಹಸನಾಗಿ ಬಾಳಲಿ’
ಪ್ರಸ್ತಕ್ಕೆ ಸೂಕ್ತ ಹರಸಿದಳು ಯಶೋಧರೆ
ಮಿದುವಾಯಿತು ಕರುಣೆಯಲಿ ಧರೆ.

ಬುದ್ಧನೆದೆಯೊಳಗಿದ್ದಿದ್ದು
ಗದ್ದಲದ ಕ್ಷೋಭೆ.
ಮುಚ್ಚಿದ ಕಣ್ಣೊಳಗೆ ಯಶೋಧರೆ..
ಕ್ಷಮೆಯಾ..
ಧರೆ..?

ಓಡಿ ಬಂದ ಪದಗಳು
ಕೊನೆಯಾಗುತ್ತಲೂ ಪದ್ಯ
ನಸುನಕ್ಕು ಒಳ ಹೊಕ್ಕು
ನಿರಾಳ ನಿದ್ದೆಗಿಳಿದವು
ಬೆದೆಯ ಬೇಗೆಗೆ ಆಯಾಸಗೊಂಡು..
ನೀಳ ಮೂಗಿನ ಗಂಡು ತನ್ನ ಮಾಸದ
ಮುಗುಳು ನಗುವನ್ನು
ಪದ್ಯ ಬರೆಯುವ ಹುಡುಗಿಯ ತುಟಿಗಿಟ್ಟೇ ಬಿಟ್ಟ.
ಬದಿಯ ಕೋಣೆಯಲಿ ಕಣ್ಣೊರೆಸಿಕೊಂಡಳು
ಯಶೋಧರೆ…
ಗೆ
ಇನ್ನು ಬಿಡುವಿರದ ಬಾಣಂತನ

ಒದ್ದಾಡೋ ಬುದ್ದ, ಒದೆಯುವ ಬುದ್ಧ
ಮೊಲೆ ಕುಡಿವ ಬುದ್ಧ ಹೊಳ್ಳುವ ಬುದ್ಧ
ಅಂಬೆಗಾಲಿನ ಬುದ್ಧ
ತಪ್ಪು ಹೆಜ್ಜೆಯ ಬುದ್ಧ
ತುಂಟ ಬುದ್ಧ, ತರಲೆ ಬುದ್ಧ, ಪ್ರಬುದ್ಧ ಬುದ್ಧ. ಎಷ್ಟೊಂದು ಬುದ್ಧರು
ಈ ಜಗದ ಉದ್ದ.!!!

ನಡುರಾತ್ರಿ.. ಅದೆಲ್ಲೋ ಕೇಳುತಿದೆ ಹೊಸ ಪ್ರೇಮಿಗಳ ಹಸೀಹಸೀ ಮಾತು.
ಹಾದಿ ಮರೆಯುವ ಪದಗಳು
ಕದ್ದು ಓಡಿ ಬರುವವು ಮತ್ತೆ.
ಈಗ ಜಗವೆಲ್ಲ ಬುದ್ಧರ ಸಂತೆ.

‍ಲೇಖಕರು Avadhi

November 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮನ ಹರಿವ ನೀರು

ಮನ ಹರಿವ ನೀರು

ಅರುಣ ರಾವ್ ಮನವು ಹರಿವ ಸಲಿಲಓಡುವುದು ಸತತ ತಿನ್ನುವಾಗಲೂಕುಡಿಯುವಾಗಲೂಸ್ನಾನ ಜಪತಪಮಾಡುವಾಗಲೂ ಪೂಜೆ ಪುನಸ್ಕಾರಅಥಿತಿ ಸತ್ಕಾರಪಾಠ...

ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ

ರೆಕ್ಕೆ ಕಳಚಿದ ಸಂಕ್ರಮಣದ ಹಕ್ಕಿ

ಬಿದಲೋಟಿ ರಂಗನಾಥ್ ಬದಲಾಗದ ಬದುಕಿನೆದುರುಮಂಡಿಯೂರಿ ಕೂತುಬೆವೆತ ಕರುಳು ಕೂಗುವ ಸದ್ದಿಗೆಸುರಿವ ಕೆಂಡದ ಮಳೆಯಲಿ ತೊಯ್ದವನಿಗೆಯಾವ ಸಂಕ್ರಮಣ?...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This