ನನ್ನ ಮಾಮನಿಗೆ ನನ್ನದೊಂದು ಆಖರೀ ಸಲಾಂ. ದಿಲ್ ಸೇ..

ದಿಲಾವರ್ ರಾಮದುರ್ಗ

DILSE

ನಾನಿನ್ನೂ ಸ್ಕೂಲ್ ನಲ್ಲಿ ಓದುತ್ತಿದ್ದೆ. ಕೈಗೆ ಇಂಪೋರ್ಟೆಡ್ ಕ್ಯಾಸಿಯೊ ವಾಚ್ ಕಟ್ಟುತ್ತಿದ್ದೆ. ಅದರಲ್ಲಿ ಏಳು ಬಗೆಯ ಮ್ಯುಜಿಕಲ್ ಅಲಾರಾಂ ಇತ್ತು. ನನ್ನ ಜನ್ಮದಿನದಂದು ಅದು ಹ್ಯಾಪಿ ಬರ್ತಡೇ ಸಂಗೀತ ಹೇಳುತ್ತಿತ್ತು. ಬರ್ತಡೇ ದಿನ ತಾಸಿಗೊಂದು ಬಾರಿ ಇಡೀ ದಿನ ಅಲಾರಾಂ ಮೊಳಗುವಂತೆ ಮಾಡಬಲ್ಲ ವ್ಯವಸ್ಥೆ ಅದರಲ್ಲಿತ್ತು. ನನ್ನ ಓರಿಗೆಯ ಹುಡುಗರಲ್ಲಿ ಅದು ಮೂಡಿಸಿದ ಕುತೂಹಲ ಅಷ್ಟಿಷ್ಟಲ್ಲ. ಓದುತ್ತಿದ್ದ ಸ್ಕೂಲಿನಿಂದ ಹಿಡಿದು ಇಡೀ ಸುತ್ತಮುತ್ತಲಿನ ಜನಕ್ಕೂ ನಾನೊಂದು ಸ್ಪೆಶಲ್ ಪರ್ಸನ್ ಆಗಿಬಿಟ್ಟಿದ್ದೆ. ಬಟನ್ ಒತ್ತಿದರೆ ಒಂದು ಸಣ್ಣ ಟಾರ್ಚಿನಷ್ಟು ಬೆಳಕು ಮೂಡುತ್ತಿತ್ತು. ರಾತ್ರಿ ಕರೆಂಟ್ ಹೋದಾಗ ಒಳ್ಳೆ ಓದುವ ಧಿಮಾಕು ತೋರಿಸುವಂತೆ ವಾಚ್ ಹಿಡಿದುಕೊಂಡು ಓದುವ ಸಾಹಸ ಮಾಡುತ್ತಿದ್ದೆ. ಆ ವಾಚು ನನ್ನ ಕಾಲೇಜು ದಿನಗಳವರೆಗೂ ಇತ್ತು. ಕೆಲ ಗೆಳೆಯರು ಎಲ್ಲಾದರೂ ಊರಿಗೆ ಹೋಗುವುದಿದ್ದರೆ ನನ್ನ ವಾಚ್ ಕಟ್ಟಿಕೊಂಡೇ ಹೋಗುತ್ತಿದ್ದರು. ಅದೆಷ್ಟು ಜನರ ಮುಂದೆ ಮ್ಯುಜಿಕಲ್ ಖುಷಿ ಮೂಡಿಸಿತೋ! ಅದರ ಸೆಲ್ ಒಮ್ಮೆ ಖಾಲಿಯಾಯ್ತು. ಅದಕ್ಕಾಗಿ ನಾನು ಪರಿದಾಡಿದ್ದು ಅಷ್ಟಿಷ್ಟಲ್ಲ. ಆಗಷ್ಟೇ ಕ್ವಾರ್ಟ್ಜ ವಾಚುಗಳು ದೇಶಕ್ಕೆ ದಾಂಗುಡಿ ಇಡುತ್ತಿದ್ದವು. ಕಡೆಗೆ ಅದರ ಸೆಲ್ ಬೆಳಗಾವಿಯಲ್ಲಿ ಸಿಕ್ಕಿತು. ಆಗ ಅದು ದುಬಾರಿಯಾಗಿತ್ತು. ಆರಂಭದ ಕೆಲ ವರ್ಷಗಳತನಕ ಸೆಲ್ ಡೌನ್ ಆಗೇ ಇರಲಿಲ್ಲ. ಆನಂತರದಲ್ಲಿ ಹತ್ತಾರು ಬಾರಿ ಸೆಲ್ ಚೇಂಜ್ ಮಾಡಿದೆ. ಮ್ಯುಜಿಕ್ ಬಟನ್, ಡೇಟ್ ಬಟನ್, ಲೈಟ್ ಬಟನ್ ಎಷ್ಟು ಬಳಸಿದೆನೆಂದರೆ ಕಡೆ ಕಡೆಗೆ ಅದರ ಎಲ್ಲಾ ಬಟನ್ ಗಳು ಲೂಜ್ ಆಗಿ ಕಳಚಿಬಿಟ್ಟವು. ಆದರೂ ಅದರ ನಾದ ಬಿಡಲಿಲ್ಲ. ಕಡ್ಡಿ ಒತ್ತಿಯಾದರೂ ಅದರ ಮ್ಯೂಜಿಕ್ ಸವಿಯುತ್ತಿದ್ದೆ. ಅದರ ಬಾಡಿ ಸಿಂಥೆಟಿಕ್ ಮಟೀರಿಯಲ್ ನಿಂದ ಮಾಡಿದ್ದು ಸೊಗಸಾಗಿತ್ತು. ಮೇಲಿನ ಗ್ಲಾಸ್ ಒಂದಷ್ಟೂ ಹೊಳಪು ಕಳಕೊಂಡಿರಲಿಲ್ಲ. ಕಡ್ಡಿ ಬಳಸಿದ್ದರಿಂದ ಅದರ ಸೆನ್ಸರಿಯೇ ಡ್ಯಾಮೇಜ್ ಆಗಿ ಹೋಗಿತ್ತು. ಆ ಮೇಲೆ ಅದನ್ನು ರಿಪೇರಿ ಮಾಡದಷ್ಟು ಕೆಡಿಸಿಬಿಟ್ಟೆ. ನನ್ನ ಕೈಗೆ ಮತ್ತೊಂದು ವಾಚ್ ಬಂತು. ಅದು ಸ್ವಿಸ್ ಮೇಡ್. ಬಂಗಾರಬಣ್ಣದ ಆ ರಿಸ್ಟ್ ವಾಚ್ ನೋಡುಗರೆಲ್ಲರ ಗಮನಸೆಳೆಯುವಂತಿತ್ತು. ಅದು ನನ್ನ ಕೈಯಿಂದ ಒಂದಷ್ಟು ಬಾರಿ ಕಳಚಿಬಿದ್ದು ಅದರ ಲಿವ್ಹರ್ ಹೊರಟು ಹೋಗಿತ್ತು. ಇಂಪೋರ್ಟೆಡ್ ವಾಚ್ ಆದ್ದರಿಂದ ಅದರ ಲಿವ್ಹರ್ ಸಿಕ್ಕಲೇ ಇಲ್ಲ. ಅದೂ ಮೂಲೆಗುಂಪಾಯಿತು. ನಾನು ಪಿಜಿ ಸೇರುವಷ್ಟೊತ್ತಿಗೆ ಮತ್ತೊಂದು ವಾಚ್ ಕೈಸೇರಿತು. ಮತ್ತೆ ಕ್ಯಾಸಿಯೊ ವಾಚ್! ಅದೀಗ ಸ್ಟೀಲ್ ಕೇಸ್ ಹೊಂದಿತ್ತು. ಅದರಲ್ಲೂ ಅಲರಾಂ ಇತ್ತು. ಜತೆಗೆ ಕ್ಯಾಲ್ಕುಲೇಟರ್! ಸಣ್ಣ ಸಣ್ಣ ಲೆಕ್ಕಕ್ಕೆಲ್ಲ ಆ ಕ್ಯಾಲ್ಕುಲೇಟರ್ ಬಳಸುವುದು ಚಟವೇ ಆದಂತಾಗಿತ್ತು. ಅದರಲ್ಲೂ ಮ್ಯೂಜಿಕ್, ಲೈಟ್, ಅಲರಾಂ ಎಲ್ಲವೂ ಇತ್ತು. ಆ ವಾಚು ತುಂಬ ಜತನದಿಂದ ಕಾಯ್ದುಕೊಂಡು ಬಂದಿದ್ದೆ. ಬೆಂಗಳೂರಿಗೆ ಬಂದಾಗಲೂ ನನ್ನ ಕೈಯಲ್ಲಿದ್ದದ್ದು ಅದೇ ವಾಚು. ಬೆಂಗಳೂರಿನಲ್ಲಿ ಆರಂಭದ ಸಮಯ ಚೆನ್ನಾಗೇ ಇತ್ತು. ಗಾಡಿ ತಗೊಂಡೆ. ಅದರ ಹಿಂದೆ ಸೀಟು ಯಾವತ್ತೂ ಖಾಲಿ ಇರತಾನೇ ಇರಲಿಲ್ಲ! ತುಂಬ ಹಾಯಾಗಿದ್ದೆ. ಜಾಲಿಯಾಗಿದ್ದೆ. ಗಾಡಿ ಹಿಂದಿನ ಸೀಟು ಖಾಲಿ ಮಾಡಿ ಮನೆ ಸೇರುತ್ತಿದ್ದಾಗ ಅದಾವ ವಕ್ರದೃಷ್ಟಿ ನನ್ನ ಮೇಲಿತ್ತೋ… ಒಂದು ಕಾರು ನನ್ನೆದುರಿಗೆ ಇದ್ದಕ್ಕಿದ್ದಂತೆ ಹೆಡ್ ಲೈಟ್ ಆನ್ ಮಾಡಿಕೊಂಡಿತು. ನೋಡ ನೋಡುತ್ತಿದ್ದಂತೆ ಅದು ನನ್ನ ಮೇಲೆ ಎಗರಿ ಬಂತು. ಯೋಚಿಸುವದಕ್ಕೂ ಸಮಯ ಕೊಡದೇ ನನ್ನನ್ನು ಗುದ್ದಿಕೊಂಡು ಹೋಯಿತು. ಆಯತಪ್ಪಿ ನೆಲಕ್ಕೊರಗಿದೆ. ಆಸ್ಪತ್ರೆ ಸೇರಿದಾಗ ನನ್ನ ಕಾಲು ತುಂಬ ಡ್ಯಾಮೇಜ್ ಆಗಿತ್ತು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಕಾಲು ರಿಪೇರಿಯಾಯ್ತು. ಗಾಡಿ, ಅದರ ಹಿಂದಿನ ಸೀಟೂ ಖಾಲಿ! ನೋವು ಹಾಗೇ ಉಳಿದುಕೊಂಡಿತು. ಕ್ಯಾಸಿಯೊ ವಾಚು ಉಜ್ಜಿಹೋಗಿ ಅಪ್ಪಚ್ಚಿಯಾಗಿತ್ತು. ನನಗೆ ಪ್ರಜ್ಞೆ ಬಂದಾಗ ವಾಚನ್ನು ನನ್ನ ಕೈಗಿತ್ತರು. ಕಣ್ಣಲ್ಲಿ ನೀರಾಡಿತ್ತು. ಆ ನಜ್ಜುಗುಜ್ಜಾದ ವಾಚು ನನ್ನ ಗುಜರಿಯಲ್ಲಿನ್ನೂ ಇದೆ. ಈ ಮೂರೂ ವಾಚುಗಳನ್ನು ನನಗೆ ಕೊಟ್ಟಿದ್ದು ನನ್ನ ಚಿಕ್ಕ ಮಾಮ ಅಜೀಜ್ ಮುದ್ನಾಳ್. ತಾಯಿಯ ಅಣ್ಣ. ಅವರು 35 ವರ್ಷಗಳ ಕಾಲ ಕುವೈತ್ ನಲ್ಲಿದ್ದವರು. ಪ್ರತಿಬಾರಿ ಬಂದಾಗೆಲ್ಲ ನನಗೆ ಇಂಪೋರ್ಟೆಡ್ ವಾಚ್, ಬಟ್ಟೆ ಕೊಡುತ್ತಿದ್ದ ಮಾಮನ ಸಮಯ ಕೆಲ ದಿನಗಳಿಂದ ಚೆನ್ನಾಗಿರಲಿಲ್ಲ. ಅವರು ನನಗೆ ಕೊಟ್ಟ ವಾಚ್ ಗಳ ಕಡ್ಡಿ ಅಲುಗದೇ ಹಾಗೇ ನಿಂತುಕೊಂಡಂತೆ ಇವತ್ತು ಅವರ ಹಾರ್ಟ್ ಬೀಟ್ ಕೂಡ ನಿಂತುಹೋಯ್ತು. ಈ ಬೆಳಗ್ಗೆ (ಮಂಗಳವಾರ, 24, ಜುಲೈ 2012) ಅವರ ಬದುಕಿನ ಸಮಯ ಮುಗಿದ ಸುದ್ದಿ ನನ್ನ ಕಿವಿಗಪ್ಪಳಿಸಿತು. ಸಮಯದ ಕಡ್ಡಿ ಅಲುಗಾಡದ ಆ ವಾಚ್, ಮ್ಯೂಜಿಕ್ ನಿಂತು ಹೋದ ವಾಚ್, ಲೆಕ್ಕ ಮಾಡಲಾಗದ ಆ ವಾಚ್… ಎಲ್ಲ ನನ್ನ ಜತೆಗೇ ಇವೆ. ಅವರೇ ಇಲ್ಲ. ತುಂಬ ಅವರ ನೆನಪಾಗುತ್ತಿದೆ. ನನ್ನ ದಿಲ್ ಬೀಟ್ ನಿಲ್ಲುವವರೆಗೆ ನಾನೂ ಹೀಗೆ ಸಮಯದ ಸಹಜ ನಡಿಗೆಯ ಜತೆಗೇ ಇರುತ್ತೇನೆ. ನನ್ನ ಮಾಮನಿಗೆ ನನ್ನದೊಂದು ಆಖರೀ ಸಲಾಂ. ದಿಲ್ ಸೇ…  ]]>

‍ಲೇಖಕರು G

July 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

  1. D.RAVI VARMA

    ಅವರ ಬದುಕಿನ ಸಮಯ ಮುಗಿದ ಸುದ್ದಿ ನನ್ನ ಕಿವಿಗಪ್ಪಳಿಸಿತು. ಸಮಯದ ಕಡ್ಡಿ ಅಲುಗಾಡದ ಆ ವಾಚ್, ಮ್ಯೂಜಿಕ್ ನಿಂತು ಹೋದ ವಾಚ್, ಲೆಕ್ಕ ಮಾಡಲಾಗದ ಆ ವಾಚ್… ಎಲ್ಲ ನನ್ನ ಜತೆಗೇ ಇವೆ. ಅವರೇ ಇಲ್ಲ. ತುಂಬ ಅವರ ನೆನಪಾಗುತ್ತಿದೆ. ನನ್ನ ದಿಲ್ ಬೀಟ್ ನಿಲ್ಲುವವರೆಗೆ ನಾನೂ ಹೀಗೆ ಸಮಯದ ಸಹಜ ನಡಿಗೆಯ ಜತೆಗೇ ಇರುತ್ತೇನೆ. ನನ್ನ ಮಾಮನಿಗೆ ನನ್ನದೊಂದು ಆಖರೀ ಸಲಾಂ. ದಿಲ್ ಸೇ…
    REALLY HEART TOUCHING.. AA NIMMA MAAMANIGE NANNADU ONDU AAKHARII SALAAM…..
    RAVI VARMA HOSAPETE

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: