ನನ್ನ ಸಂಗೀತ ರಸಮಂಜರಿ…

“ಹಂಗಾಮ”ದಿಂದ ಹೆಕ್ಕಿದ್ದು 

ಶ್ರೀನಿಧಿ ಕರ್ಜೆ

“ಹಾಡುವುದು” ಅಂದ್ರೆ ನಂಗೆ ಭಯಂಕರ ಇಷ್ಟ ಮಾರಾಯ್ರೆ. ನಾನು ಮನೇಲಿ ಇದ್ರೆ ಇಡೀ ದಿನಾ ಹಾಡ್ತಾನೇ ಇರುವುದು. “ಗಾತಾ ರಹೇ ಮೇರಾ ದಿಲ್….” ಅನ್ನುವುದನ್ನು ಅಕ್ಷರಶಃ ಪಾಲಿಸಲು ಹೊರಟವಳ ಹಾಗೇನೇ…

ಆದ್ರೆ ಈ ನನ್ನ ಹಾಡುವ “ಮೂಡ್” ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಹೇಳುವುದು ಮಾತ್ರ ಅಸಾಧ್ಯ. ಮಪದಸಸಂ ಅಂತ ಶುರು ಮಾಡಿ ಶ್ರೀ ಗಣನಾಥ ಹಾಡ್ತಿದ್ದವಳು ಒಮ್ಮೆಲೆ “ಶಕಲಕ ಬೇಬಿ ಶಕಲಕ ಬೇಬಿ…” ಅಂತ ಹಾಡಲಿಕ್ಕೆ ಶುರು ಮಾಡಿರ್ತೇನೆ. ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಹುಚ್ಚುಕೋಡಿ ಮನಸು ಅಂತ ಭಾವಗೀತೆ ಹಾಡ್ತಿದ್ದವಳು “ಮೇರಾ ಜೀವನ್ ಕೋರಾ ಕಾಗಜ್” ಅಂತ ದುಃಖದಲ್ಲೇ ಮುಳುಗಿದವರ ಹಾಗೆ ಶೋಕಗೀತೆ ಆರಂಭಿಸಿಬಿಟ್ಟಿರ್ತೇನೆ.

ನನ್ನ ತಮ್ಮ ತಂಗಿ ಹೇಳುವ ಹಾಗೆ ನಾನೊಬ್ಬಳು ವಾಕಿಂಗ್ ಟೇಪ್ ರಿಕಾರ್ಡರ್. “ಎಲ್ಲಿ ಬೇಕಾದರೂ ಯಾವಾಗಲೂ ಕೇಳಬಹುದು”. “ಕರೆಂಟ್ ಬೇಕಿಲ್ಲ, ಶೆಲ್ ಖರ್ಚಿಲ್ಲ..” ಆದ್ರೆ ಯಾರು ಏನೇ ಹೇಳಿದರೂ ನನಗೇನು ಬೇಜಾರಿಲ್ಲ ಬಿಡಿ. “ನಿಂದಕರಿರಬೇಕು ಹಂದಿಯ ಹಾಗೆ…” ಅಂದ ಸರ್ವಜ್ಞನ ಪರಮ ಭಕ್ತೆ ನಾನು.

painting6.jpg

ನನ್ನ ಸಂಗೀತ ರಸಮಂಜರಿ ರಂಗೇರುವುದು ಮನೆಯಲ್ಲಿ ಯಾರೂ ಇಲ್ಲದಾಗ. ಆಗ ನನ್ನ ರಸಮಂಜರಿ ವಿಶಿಷ್ಟ ರಂಗಿನಿಂದ ಕೂಡಿರುತ್ತೆ. ಆಗ ನೋಡಬೇಕು ನೀವು ನನ್ನ ಹಾರಾಟವನ್ನು. “ಈಗ ನಿಮ್ಮ ಮುಂದೆ ಹಾಡಲಿದ್ದಾರೆ ಸುಪ್ರಸಿದ್ಧ ಗಾಯಕಿ…” ಅಂತ ಒಂದು ಉದ್ಘೋಷ ಹೊರಡಿಸಿ ಒಂದು ಭಕ್ತಿಗೀತೆಯೋ, ಭಾವಗೀತೆಯೋ ಹಾಡಿಬಿಡ್ತೇನೆ. ಮತ್ತೆ ಸ್ವಲ್ಪ ಹೊತ್ತಿನಲ್ಲಿ “ಏಕ್ ಶ್ಯಾಮ್ ಮೇರೇ ನಾಮ್” “ಅಬ್ ಆಪ್ ಕೆ ಸಾಮನೆ ಗಾಯೇಂಗೇ ದುನಿಯಾ ರೆ ಮಶೂರ್ ಗಾಯಿಕಾ ಥತ್ ಇಸ್ ಒನೆ ಅನ್ದ್ ಒನ್ಲ್ಯ್…” ಅಂತ ಸ್ವಯಂಘೋಷಣೆ ಹೇಳಿ ಹಿಂದಿ ಹಾಡು ಹಾಡಲು ಶುರು ಮಾಡ್ತೇನೆ. ಮಧ್ಯೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಗೆ “ವಿಸಿಲ್” ಹೊಡೆಯುವುದು ಬೇರೆ. ಯಾರಾದ್ರೂ ನೋಡಿದ್ರೆ “ಈ ಹೆಣ್ಣಿಗೆ ಮಂಡೆಪೆಟ್” ಅಂತ ಕಂಕನಾಡಿಗೆ ಸೇರಿಸುವುದು ಮಾತ್ರ ಗ್ಯಾರಂಟಿ.

ಇನ್ನು ಈ ಟೇಪ್ ರಿಕಾರ್ಡರ್ ಮತ್ತು ನನ್ನ ಜುಗಲ್ ಬಂದಿ ಕಾರ್ಯಕ್ರಮ ಕೂಡ ಇರುತ್ತೆ. ಕೆಲವೊಮ್ಮೆ ಅದರೊಟ್ಟಿಗೇ ಹಾಡುವುದು. ನನ್ನ ಸ್ವರ ಚಂದವಾ, ಟೇಪ್ ರಿಕಾರ್ಡರ್ ಸ್ವರ ಚಂದವಾ, ನಾನು ಗಟ್ಟಿ ಹಾಡ್ತೇನಾ ಟೇಪ್ ರಿಕಾರ್ಡರಾ ಅಂತ ಪೈಪೋಟಿ. ಒಳಗಿನಿಂದ “ಅಮ್ಮ ಹೆಣ್ಣೇ ಇದೆಂಥ ಮನೆಯಾ ಮೀನ್ ಮಾರ್ಕೆಟಾ…” ಅಂದ ಮೇಲೇ ನಾನು ಗಾಯನ ಲೋಕದಿಂದ ವಾಸ್ತವಕ್ಕೆ ಇಳಿಯುವುದು.

ಆ ಟೇಪ್ ರಿಕಾರ್ಡರ್ ನ ಸೌಂಡ್ ವೇರಿಯೇಶನ್ ಗಳನ್ನೆಲ್ಲಾ ಮೇಲೆ ಕೆಳಗೆ, ಕೆಳಗೆ ಮೇಲೆ ಮಾಡಿ ನನ್ನ ಸ್ವರ ಸೇರುವ ಹಾಗೆ ಮಾಡ್ತಾ ಇರ್ತೇನೆ. ಯಾವ ಹಾಡನ್ನು ಎಷ್ಟು ಗಟ್ಟಿ ಇಟ್ಟರೆ ಚೆನ್ನಾಗಿ ಕೇಳಿಸುತ್ತೆ, ಯಾವ ಹಾಡು ನಿಧಾನ ಕೇಳಬೇಕು ಅಂತ ಸಾವಿರ ಪ್ರಯೋಗ ಅದರ ಮೇಲೆ ನಡೆಸ್ತಾ ಇರ್ತೇನೆ. ಒಂದು ಸಂತೋಷದ ಸಂಗತಿ ಎಂದರೆ ನನ್ನ ಸರ್ವವಿಧ ಪ್ರಯೋಗಗಳ ನಂತರವೂ ನಮ್ಮ ಮನೆಯ ಟೇಪ್ ರಿಕಾರ್ಡರ್ ಸುಸ್ಥಿತಿಯಲ್ಲಿದೆ ಎನ್ನುವುದು.

ಇನ್ನೊಮ್ಮೆ ನನ್ನ ತಲೆಯಲ್ಲಿ ಒಂದು ಭಯಂಕರ ಭೂತ ಹೊಕ್ಕಿಬಿಟ್ಟಿತು. ನಾನೇ ಹಾಡಿ ಒಂದು ಕ್ಯಾಸೆಟ್ ರಿಕಾರ್ಡ್ ಮಾಡಿದರೆ ಹೇಗೆ ಅಂತ. ಸರಿ, ಮತ್ತೆ ಸುಮ್ಮನಿರುವ ಜಾಯಮಾನವೇ ನನ್ನದಲ್ಲ. “ನಾಳೆ ಮಾಡುವುದನ್ನು ಇಂದೆ ಮಾಡು, ಇಂದು ಮಾಡುವುದನ್ನು ಈಗಲೇ ಮಾಡು” ಅಂತ ಹೊರಟೇಬಿಟ್ಟೆ ಓದುವುದು ಬೇಕಾದರೆ “ಇವತ್ತು ಮಾಡಿಲ್ಲ, ಇವತ್ತು ತಲೆನೋವು, ಛೇ ಇವತ್ತು ಶಾರುಕ್ ಫಿಲಂ ಇದೆ..” ಅಂತ ಸಾವಿರ ನೆಪ ಹೇಳಿಯೇನು. ಆದರೆ ಇದೆಲ್ಲಾ ಕೂಡಲೇ ಆಗಬೇಕು.

ಯೋಜನೆ ಏನೋ ರೆಡಿಯಾಯಿತು. ಅದನ್ನು ಜಾರಿ ಮಾಡುವುದು ಹೇಗೆ? ಮೊದಲು ಕ್ಯಾಸೆಟ್. ಒಳ್ಳೆ ಕ್ಯಾಸೆಟ್ ಏನಾದ್ರೂ ತೆಗೆದ್ರೆ ಮನೆಯಲ್ಲಿ ಮತ್ತೆ ಕೇಳುವುದೇ ಬೇಡ. ಎಲ್ಲೋ ಹುಡುಕಿ ಹಳೇ ಕ್ಯಾಸೆಟ್ ಒಂದು ಸಿದ್ಧಪಡಿಸಿಟ್ಟೆ. “ಯಾರೂ ಇಲ್ಲದ ಶುಭ ಮುಹೂರ್ತ”ದಲ್ಲಿ ರೆಕಾರ್ಡಿಂಗ್ ಕಾರ್ಯ ಆರಂಭವಾಗಿಯೇ ಬಿಟ್ಟಿತು. ಅದೂ ಭಯಂಕರ ಜೋಶ್ ನಲ್ಲಿ. ಭಕ್ತಿಗೀತೆ, ಭಾವಗೀತೆ, ಕನ್ನಡ, ಹಿಂದಿ ಚಿತ್ರಗೀತೆ ಎಲ್ಲವೂ ಹಾಡಿದ್ದೇ ಹಾಡಿದ್ದು.

ಕ್ಯಾಸೆಟ್ ಬಿಡುಗಡೆ ಆದ್ರೆ ಸಾಕಾ? ಪ್ರಚಾರ, ಮಾರಾಟ ಎಲ್ಲಾ ಬೇಡ್ವಾ. ಸರಿ ನನ್ನ ಆಪ್ತ ಸ್ನೇಹಿತನಿಗೆ ಕ್ಯಾಸೆಟ್ ಕೊಟ್ಟೆ. ಕೇಣ್ ಮಾರಾಯಾ, ನಾನೇ ಹಾಡುದ್ದು. ಹೇಂಗಿತ್ತು ಹೇಳು, ಅಂದೆ. ಆತನೋ ಪೂರ್ವಾಗ್ರಹ ಪೀಡಿತ. ನನಗೆಲ್ಲಿ ಬೇಜಾರಾಗುತ್ತೋ ಅಂತ “ಅಡ್ದಿಲ್ಲೆ ಲಾಯಕಿತ್ತು” ಅಂದ. ಸರಿ ನನಗೆ ಕೇಳಬೇಕಾ? ತಾನ್ ಸೇನ್, ಪುರಂದರದಾಸರಿಂದ ಹಿಡಿದು ಲತಾ ಮಂಗೇಶ್ಕರ್, ಹರಿಹರನ್, ಸೋನು ನಿಗಮ್ ಎಲ್ಲರ ಕೃಪಾಕಟಾಕ್ಷ ದೊರಕಿತು ಅಂತ ಬೀಗಿದ್ದೆ ಬೀಗಿದ್ದು.

ಇನ್ನೊಬ್ಬ ಸ್ನೇಹಿತೆಯ ಹತ್ತಿರ ಕೂಡ ಹೋದೆ. ಆಕೆಯೋ “ಅಯ್ಯೋ ನೀ ಹಾಡಿದ್ದಾ, ನಂಗೆ ಬೇಡ ಮಾರಾಯ್ತಿ” ಅಂತ ಕರ್ಣಶೋಷಣೆಯಿಂಡ ತಪ್ಪಿಸಿ ಕೊಂಡೇಬಿಟ್ಟಳು. ಆದ್ರೆ ನಾನು ಅವಮಾನ ತೋರಿಸಿಕೊಳ್ಳಲಿಕ್ಕೆ ಆಗುತ್ತಾ ಮಾರಾಯ್ರೆ. “ಏಯ್ ಹೋಗಾ ನೀ ಕೇಣ್ ದಿದ್ರೆ ಅಷ್ಟೆ ಹೋಯಿತು, ನಿಂಗೆ ನಾ ಕೊಡ್ ತ್ತಿಲ್ಲೆ. ನಾ ಏನಿದ್ರೂ ವಾಯ್ಸ್ ಟೆಸ್ಟ್ ಗೆ ಅನು ಮಲಿಕ್ ರೆಹಮಾನ್ ಗೆ ಕೊಡ್ತೆ ಹೋಗಾ ಹೋಗ್” ಅಂತ ಅಡಿಬಿದ್ರು ಮೀಸೆ ಮಣ್ಣಾಗಲಿಲ್ಲ ಅನ್ನುವ ಹಾಗೆ ಕೊಚ್ಚಿಕೊಂಡ.

ಇನ್ನೊಬ್ಬಳು “ಅದ್ ನೀ ಹಾಡಿದ್ದಾ ಮಾರಾಯ್ತಿ, ಒಳ್ಳೆ ಮಕ್ಳ ಹಾಡ್ ದಾಂಗೆ ಆಯಿತ್ತ್” ಅಂತ ನನ್ನನ್ನು “ಟುಸ್” ಮಾಡಬೇಕೇ?! ಸರಿ ಆ ಆಲ್ಬಂನ ಸಹವಾಸವೇ ಸಾಕು ಅಂತ ಈಗ ತೆಪ್ಪಗೆ ಇದ್ದೇನೆ.

“ಶೋಭೆಯು ಸಪ್ತಸ್ವರ” ಅಂತ ಸಂಗೀತದ ಹುಚ್ಚು ಒಮ್ಮೆ ನನಗೆ ವಿಪರೀತ ತಲೆಗೀರಿಲ್ವಾ ಮಾರಾಯ್ರೆ. ಹಾರ್ಮೋನಿಯಂ ಬೇಕು ಅಂತ ನನ್ನ ಬೇಡಿಕೆ ಮನೆಯಲ್ಲಿ ಮುಂದಿಟ್ಟೆ. ನಮ್ಮ ಮನೆಯಲ್ಲಿ ಎಲ್ಲರೂ ಸಂಗೀತ ಪ್ರಿಯರು. ಅಂತೂ ಅಪ್ಪ “ಗ್ರಾಂಟೆಂಡ್” ಮಾಡಿಯೇಬಿಟ್ಟರು. ತರುವುದು ಯಾರು? ನಾನೇ ತರಬೇಕು. ಭಯಂಕರ ಜಾಗ್ರತೆಯಿಂದ ಬಸ್ಸಲ್ಲಿ ಎಲ್ಲೂ ತಾಗದಂತೆ ಜಾಗ್ರತೆ ವಹಿಸಿ ಕಾಲು ಮೇಲೇ ಇಟ್ಟುಕೊಂಡು ತಂದೆ.

ಗ್ರಹಚಾರಕ್ಕೆ ಎರಡನೇ ದಿನವೇ ಎರಡು ಸ್ವರಗಳು “ಕೀಂ” ಅನ್ನಲು ಪ್ರಾರಂಭಿಸಬೇಕೇ? ಮತ್ತೆ ಅದನ್ನು ಹಿಡಿದುಕೊಂಡು ನಮ್ಮ ಗುರುಗಳ ಹತ್ತಿರ ತಪಾಸಣೆಗೆ ಕರೆದೊಯ್ದೆ. ಅಲ್ಲಿಂದ ರೋಗದ ವಿವರ ಪಡೆದು ಮತ್ತೆ ಚಿಕಿತ್ಸೆಗೆ, ಶಸ್ತ್ರಕ್ರಿಯೆಗೆ ಉಡುಪಿಗೆ. ಅಬ್ಬ, ಆ ದೊಡ್ಡ ಬ್ಯಾಗ್ ಹಿಡಿದು ಊರೆಲ್ಲಾ ತಿರುಗುವ ಕೆಲಸ. ನೋಡಿದವರೆಲ್ಲಾ “ದೂರ ಹೊರಟದ್ದೇ?… ಅಂತ ಕೇಳಿ ಕೇಳಿ, ನಂಗೆ ಹೇಳಿ ಹೇಳಿಯೇ ಸುಸ್ತಾಯಿತು.

ಬೇಜಾರು ಬಂದು “ಊರ್ ಬಿಟ್ ಹೊತ್ತಿದ್ದೆ…” ಅಂದೆ. “ಅಯ್ಯೊ ನೀನ್ ಮೊದಲೇ ಹೇಳಿದ್ರೆ ಕಾರ್ ಮಾಡಿ ಕಳಿಸ್ತಿದ್ದೆ ಅಲ್ವ ಮಾರಾಯ್ತಿ, ಬೀಳ್ಕೊಡುಗೆ ಸಮಾರಂಭವೂ ಮಾಡ್ಲಕ್ಕಿತ್ ಉಪದ್ರ ಹೋಯ್ತ್ ಅಂದ್ಕಂಡ್” ಅಂತ ನೆರೆಮನೆಯವರ ಸಂತೋಷಭರಿತ ಸಂತಾಪ ಬೇರೆ. ಇಂತ ಅವಮಾನ ಬೇಕಿತ್ತಾ ಅಂತ ಸತ್ಯ ಸಂಗತಿ ಹೇಳಿದ್ರಾದ್ರೂ ಸುಖ ಉಂಟಾ ಮಾರಾಯ್ರೆ. “ಅದ್ನ ಕುತ್ತಿಗೆಗೆ ನೇತು ಹಾಕ್ಕಂಡ್ ಬಾರಿಸ್ತಾ ಹೋಗ್… ಸಂಪಾದನೆ ಆತ್ತ್ ಬಸ್ ಖರ್ಚಿಗೆ ಸಾಕ್…” ಅನ್ನಬೇಕೆ.

ಛೇ ಗಂಧರ್ವ, ದೇವಗಾನ ಸಂಗೀತಕ್ಕೆ, ನನ್ನಂತಹ ಉದಯೋನ್ಮುಖ, ಭಾವೀ ಗಾಯಕಿಗೆ ಎಷ್ಟೆಲ್ಲಾ ಅವಮಾನ…!?

ಆದ್ರೂ ನನಗೇನು ಬೇಜಾರಿಲ್ಲ ಬಿಡಿ. ನಾನು ಹಾಡ್ತಾ ಇರ್ತೇನೆ. “ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ… ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ” ಅಂದುಕೊಂಡು ಹಾಡ್ತಾನೇ ಇರ್ತೀನಿ. ನನ್ನ ಸಂಗೀತ ರಸಮಂಜರಿ ಕೇಳೋಕೆ ನೀವು ಬರ್ತೀರಾ ಅಲ್ವಾ…!?

‍ಲೇಖಕರು avadhi

October 20, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. keshav

    ತುಂಬ ಖುಷಿಯಾಯಿತು, ನಕ್ಕು ನಕ್ಕು ಸುಸ್ತಾಯಿತು. ನಾನು ಹಾಡು ‘ಹಾಡು’ವ ಜಾತಿಗೆ ಸೇರಿದವನಲ್ಲ, ಹಾಡು ‘ಹೇಳು’ವ ಜಾತಿಗೆ ಸೇರಿದವನು, ಮತ್ತು ಅದು ನನಗೆ ಎಂದೋ ಗೊತ್ತಾಗಿದೆ; ಅಷ್ಟಾದರೂ ನಾನು ಮಾಡುವುದು ಥೇಟ ನಿಮ್ಮ ಹಾಗೆ, ಆದರೆ ಕ್ಯಾಸಟ್ಟನ್ನು ಯಾರಿಗೂ ಕೇಳಲು ಕೊಟ್ಟಿಲ್ಲ, ನನ್ನ ಹೆಂಡತಿಗೂ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: