ನನ್ನ ಹೆಸರು ಕನ್ನಿಕಾ ಚಟರ್ಜಿ..

ಕನ್ನಡತಿ
-ಸುಲಕ್ಷಣಾ ರಾವ್
ಕೃಪೆ: ಕನ್ನಡ ಬ್ಲಾಗರ್ಸ್

ಚಿತ್ರ: ರಾವ್ ಬೈಲ್


ಒಮ್ಮೆ ನಾನು ನನ್ನ ತಾಯಿಯೊಡನೆ ದಿಲ್ಲಿಯಲ್ಲಿ ನಾವಿರುವ ವಸತಿಯ ಪಕ್ಕದಲ್ಲಿನ ಮಾಲ್ ಒಂದರಲ್ಲಿ ಏನನ್ನೋ ಖರೀದಿಸಲು ಹೋಗಿದ್ದೆವು. ನನ್ನ ಕೈಯ್ಯಲ್ಲೊಂದು ಕನ್ನಡ ನಿಯತಕಾಲಿಕವಿತ್ತು. ನಮ್ಮ ಖರೀದಿಯಲ್ಲಿ ನಾವು ಮಗ್ನರಾಗಿದ್ದಾಗ ನಮ್ಮ ಹಿಂದಿನಿಂದ, “ಎಕ್ಸ್‌ಕ್ಯೂಸ್ ಮೀ” ಎಂದು ಹೆಣ್ಣಿನ ಧ್ವನಿ ಕೇಳಿಸಿತು. ನಾವಿಬ್ಬರೂ ತಿರುಗಿ ನೋಡಿದಾಗ, “ನೀವು ಬೆಂಗಳೂರಿನವರೇ?” ಎಂದು ಸುಮಾರು ೩೦ ವರ್ಷದವಳೊಬ್ಬಳು ಇಂಗ್ಲಿಶಿನಲ್ಲಿ ಕೇಳಿದಳು. ಮೂಲತಃ ಮೈಸೂರಿನವರಾದ ನಮಗೆ ಆ ಕೂಡಲೇ ಉತ್ತರಿಸಲಾಗಲಿಲ್ಲ. ಅಷ್ಟರಲ್ಲೇ ಅವಳು, “ಇಲ್ಲ; ನನ್ನ ಅರ್ಥ ನೀವು ಕರ್ನಾಟಕವದವರಾಂತ?” ಎಂದಳು, ಇಂಗ್ಲಿಶ್‌ನಲ್ಲೇ ಮುಂದುವರೆಯುತ್ತಾ. ನಮಗೋ ಆಶ್ಚರ್ಯ, ಸಂಶಯ, ಕುತೂಹಲ – ಎಲ್ಲಾ ಒಟ್ಟೊಟ್ಟಿಗೇ ಉಂಟಾದವು. ಅಮ್ಮ ಇದೇ ಭಾವಗಳನ್ನು ಸೂಸುವ ಮುಖವನ್ನು ನನ್ನೆಡೆಗೆ ತೋರಿ, “ಹೌದು”, ಎಂದು ಇಂಗ್ಲಿಶ್‍ನಲ್ಲೇ ಉತ್ತರಿಸಿದಳು.
“ಹೌದಾ? ನಾನೂ ಕನ್ನಡಿತಿಯೇ!” ಎಂದಾಕೆ ಕನ್ನಡದಲ್ಲಿ ಹೇಳಿದಳು.
ಮತ್ತೆ ಅಮ್ಮ ನನ್ನತ್ತ ಇನ್ನಷ್ಟು ಆಶ್ಚರ್ಯ ತುಂಬಿದ ಕಣ್ಣುಗಳಿಂದ ನೋಡಿದಳು. ನನಗೆ ಇನ್ನಷ್ಟು ಸಂಶಯ. ಶುದ್ಧ ಬಂಗಾಲೀ ಮುಖ ಲಕ್ಷಣದ ಈ ಯುವತಿ ತಾನು ಕನ್ನಡಿತಿ ಎಂದೆನ್ನಬೇಕಾದರೆ ಏನೋ ಮಸಲತ್ ನಡೆಸುತ್ತಿದ್ದಾಳೆ ಎಂದು ನನಗೆ ಸ್ಪಷ್ಟವಾಗತೊಡಗಿತ್ತು. ಅಮ್ಮನ ಮನಸ್ಸಲ್ಲೂ ಇದೇ ಯೋಚನೆಯಿದ್ದಿತು. ಕೂಡಲೇ ಅಮ್ಮ, “ನಿಮ್ ಹೆಸ್ರೇನು?” ಎಂದು ಚುರುಕಾಗಿ ಕೇಳಿದಳು. “ಕನ್ನಿಕಾ ಚಟರ್ಜೀ”, ಎಂದು ನಸುನಗುತ್ತಾ ಹೇಳಿದಳು.
ಸಂದರ್ಭವನ್ನು ಅವಳು ಖುಷಿಯಾಗಿ ಅನುಭವಿಸುತ್ತಿರುವಂತೆ ನನಗನ್ನಿಸಿತು. ಅವಳು ಇನ್ನಷ್ಟು ನಗುಮುಖದಿಂದ, “ನನ್ನ ತಂದೆ-ತಾಯಿ ಬಂಗಾಲಿಗಳಾಗಿರೋದರಿಂದ ನಾನು ಬಂಗಾಲಿ. ಜತೆಗೆ ನಾನು ಹುಟ್ಟಿದ್ದು ಕೊಲ್ಕತ್ತಾದಲ್ಲಿ. ಅಷ್ಟೇ. ಅದನ್ನು ಬಿಟ್ರೆ ನಾನು ಆರೇಳು ತಿಂಗಳ ವಯಸ್ಸಿನಿಂದ ಬೆಳೆದಿದ್ದು, ಓದಿದ್ದು, ಎಲ್ಲಾ ಬೆಂಗಳೂರಿನಲ್ಲೇ. ಕನ್ನಡವನ್ನ ಕೂಡಾ ಸ್ಕೂಲ್-ಕಾಲೆಜಿನಲ್ಲಿ ಕಲ್ತಿದ್ದೀನಿ”, ಎಂದಳು.
ನನಗೆ ಅತೀವ ಆನಂದವಾದುದು ನನ್ನ ಮುಖದಲ್ಲಿ ಎದ್ದು ತೋರುತ್ತಿದ್ದುದನ್ನು ನೋಡಿದ ಅಮ್ಮ, “ನಾವು ಕನ್ನಡಿಗಗೂ ಅಂತ ನೀವು ಹೇಗೆ ಅಂದಾಜ್ ಮಾಡಿದ್ರಿ?” ಎಂದು ಕೇಳಿದಳು.
“ನಿಮ್ಮ ಕಯ್ಯಲ್ಲಿರೋ “ಕಸ್ತೂರಿ” ಮ್ಯಾಗಜೀನನ್ನು ನೋಡಿ!”
“ಭಲೇ!” ಎನ್ನುವಂತೆ ಅಮ್ಮ ಅವಳತ್ತ ನೋಡಿದಳು.
ಆ ಯುವತಿ ಮುಂದುವರೆಸಿದಳು: “ನೋಡಿ – ನನ್ಗೆ ಕನ್ನಡದವರೊಡನೆ ಕನ್ನಡದಲ್ಲಿ ಮಾತಾಡಬೇಕೂಂತ ತುಂಬಾ ಆಸೆ. ಆದ್ರೆ ಇಲ್ಲಿ ಎಲ್ಲಾ ಹಿಂದಿನಲ್ಲೇ ಮಾತಾಡ್ತಾರೆ. ಕನ್ನಡಿಗರೂ ತಮ್ಮಲ್ಲಿ ಕೂಡಾ ಹಿಂದಿ ಇಲ್ಲಾ ಎಂಗ್ಲಿಶ್‍ನಲ್ಲಿ ಮಾತಾಡಿಕೊಳ್ತಾರೆ. ನಿಮ್ಮ ಕಯ್ಯಲ್ಲಿ ನಾನಿವತ್ತು ಕಸ್ತೂರಿಯನ್ನು ನೋಡ್ದಿದ್ದರೆ ನನ್ಗೆ ನಿಮ್ಮ ಪರಿಚಯವೂ ಆಗ್ತಿರಲಿಲ್ಲವೇನೋ”್, ಎಂದು ನಕ್ಕಳು.
ಅಮ್ಮ ನಸುನಕ್ಕು, ” ನಮ್ಮ ಪರಿಚಯ ಇನ್ನೂ ನಿಮ್ಗೆ ಆಗಿಲ್ಲ..” ಎಂದಳು.
ಅಲ್ಲಿಂದ ಹೆಸರು ಮನೆ ವಿಳಾಸಗಳ ವಿನಿಮಯವಾಯಿತು. ಅವಳ ಮನೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಇತ್ತು. ಪರಿಚಯ ಇಬ್ಬರ ಮನೆಗಳಿಗೆ ಹೋಗೀ ಬಂದು ಸ್ನೇಹಕ್ಕೆ ತಿರುಗಿತು.
ಬೆಂಗಳೂರಿನಲ್ಲಿರುವವನನ್ನೇ ಮದುವೆಯಾಗಬೇಕೆಂದು ಅವಳಿಗೆ ಆಸೆ ಇದ್ದರೂ, ಅವಳಿಗೆ ದೊರೆತ ಬಂಗಾಲಿ ಹುಡುಗ ದಿಲ್ಲಿನಲ್ಲಿ ಉದ್ಯೋಗದಲ್ಲಿದ್ದಾನೆ. ಅವನು ದಿಲ್ಲಿಯವನೇ. ಕನ್ನಡದ ಗಂಧ ಲವಲೇಶವೂ ಇಲ್ಲದವನು. ದಿಲ್ಲಿಯ ಕನ್ನಡಸಂಘದಲ್ಲಿ ಸದಸ್ಯಳಾಗಿದ್ದರೂ ಇವಳಾಸೆಯಂತೆ ಕನ್ನಡದಲ್ಲಿ ಮಾತಾಡುವ ಸಮಯ-ಸಂದರ್ಭಗಳು ಕಡಿಮೆ.
ಅವಳ ತಾಯ್ತಂದೆ ಇನ್ನೂ ಬೆಂಗಳೂರಿನಲ್ಲೇ ಇದ್ದಾರೆ. ಬಹುಷಃ ಅಲ್ಲೇ ಸೆಟ್ಲ್ ಆಗುತ್ತಾರೆ. ಆದರೆ ಅವರ ಕನ್ನಡ ಜ್ಞಾನ ಅತೀ ಕಡಿಮೆ. ಇವಳು ಬೆಂಗಳೂರಿಗೆ ಹೋದಾಗಲೆಲ್ಲಾ ಕನ್ನಡದಲ್ಲಿ ಮಾತಾಡಲು ತನ್ನ ಶಾಲಾ-ಕಾಲೆಜುಗಳ ಗೆಳೆಯ-ಗೆಳೆತಿಯರನ್ನು ಹುಡುಕೊಂಡು ಹೋಗುತ್ತಾಳೆ. ಆದರೆ ಎಷ್ಟು ಜನ ಸಿಕ್ಕಾರು? ಗೆಳೆತಿಯರು ಮದುವೆಯಾಗಿ ಹೊರಟುಹೋಗಿದ್ದರೆ ಗೆಳೆಯರು ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದಾರೆ. ಬೇರಿನ್ನೆಲ್ಲಿಗೇ ಹೋದರೂ “ನನ್ನ ಬಂಗಾಲೀ ಮುಸುಡಿ ನೋಡಿ” ಹಿಂದಿಯಲ್ಲೇ ಮಾತಾಡಿಸುತ್ತಾರೆ, ಎಂದು ನಕ್ಕಳು. “ಆ ಹಿಂದಿಯೋ, ಹಿಂದೀನೂ ಅಲ್ಲ; ಉರ್ದೂನೂ ಅಲ್ಲ”.
ನಮ್ಮ ಗೆಳೆತನವಾದ ಬಳಿಕ ತಿಂಗಳಿಗೆ ಇಮ್ಮೆಯಾದರೂ ನಾವು ಅವಳ ಮನೆಯಲ್ಲಿ, ಹೆಚ್ಚಾಗಿ ಅವಳು ನಮ್ಮಲ್ಲಿಗೆ ಬಂದು ಕನ್ನಡದಲ್ಲಿ ಮನಸ್ಸೇಚ್ಛೆ ಮಾತಾಡಿ, ಹಾಡು ಹೇಳಿ, ಹರಟೆ ಹೊಡೆಯುತ್ತಿದ್ದೇವೆ. ಇಡ್ಲಿ, ದೋಸೆ, ಅಕ್ಕಿರೊಟ್ಟಿಯನ್ನು ಅವಳ ಮನೆಯಲ್ಲಿ ಮಾಡಿ ತರುತ್ತಾಳೆ. ಅಕ್ಕಿರೊಟ್ಟಿ ಅವಳಿಗೆಪ್ರಿಯ. ಬೆಂಗಳೂರಿನ ಗೆಳೆತಿರಲ್ಲಿ ಕಲಿತ ತಿನಿಸುಗಳವು!

‍ಲೇಖಕರು avadhi

May 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

 1. Laxminarayana Bhat P

  ಭಾಷೆಯ ಒಂದು ವೈರುಧ್ಯ ಏನೆಂದರೆ ಅದು ಸಮಾನ ಭಾಷಿಕರನ್ನು ಒಗ್ಗೂಡಿಸುತ್ತದೆ ಹಾಗೇನೆ ಅನ್ಯ ಭಾಷಿಕರನ್ನು ಅನ್ಯರನ್ನಾಗಿಸುತ್ತದೆ!!!

  ಪ್ರತಿಕ್ರಿಯೆ
 2. CanTHee Rava

  para rajyvondaralli, moolataha mattondu kannadEtara rajyakke sErida kannada maatanaaduva vyaktiyobbaru siguvudu bahaLa aparoopada vishaya.
  sandarbha sogasagide, baravaNigeyoo chenaagide.

  ಪ್ರತಿಕ್ರಿಯೆ
 3. muralidharan

  ಕನ್ನಡದಲ್ಲಿ ಮಾತನಾಡಲು ನಮ್ಮವರು ಮುಜುಗುರ ಪಟ್ಟರೂ ಬಂಗಾಲೀ ಹುಡುಗಿ ಕನ್ನಡದಲ್ಲಿ ಉಲಿಯುವಳೆಂದರೆ ಭೇಷ್ ಎನ್ನಲೇ ಬೇಕು. ಕನ್ದಡ ಹಾ ಸವಿಗನ್ನಡವನ್ನು ಬೇರೆಯವರಿಗೂ ಕಲಿಸುವ ಹುರುಪು, ಚೈತನ್ಯ ಕೊಡಲಿ.

  ಪ್ರತಿಕ್ರಿಯೆ
 4. Mallikarjuna Barker

  Kannika hesarinalliya KANN iruvadarindane avarige kannada issta, enjoy with kannda
  bye

  ಪ್ರತಿಕ್ರಿಯೆ
 5. ಪ.ರಾಮಚಂದ್ರ, ರಾಸ್ ಲಫ್ಫಾನ್-ಕತಾರ್

  ಮೂಲತಃ ಬಂಗಾಳಿ, ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ನಗರದ ಪೂರ್ವ ನಿವಾಸಿ, ಪ್ರಸ್ತುತ ಭಾರತ ದೇಶದ ರಾಜಧಾನಿ ದೆಹಲಿಯ ನಿವಾಸಿ “ಕನ್ನಡಿತಿ” ಕನ್ನಿಕಾ ಚಟರ್ಜೀಯವರಿಗೆ ವಿದೇಶದ ಕನ್ನಡಿಗನ ಶುಭ ಹಾರೈಕೆಗಳು.
  ದೆಹಲಿಯ “ಕನ್ನಡಿತಿ” ಕನ್ನಿಕಾ ಚಟರ್ಜೀಯವರನ್ನು ನಾಡಿನ ಕನ್ನಡಿಗರಿಗೆ ಪರಿಚಯಿಸಿದ ನಿಮಗೆ ವಂದನೆಗಳು.
  -ಪ ರಾಮಚಂದ್ರ.
  ರಾಸ್ ಲಫ್ಫಾನ್, ಕತಾರ್.

  ಪ್ರತಿಕ್ರಿಯೆ
 6. Anonymous

  ಕನ್ನಡತಿ ಕನ್ನಿಕಾ ಕನ್ನಡ ಮಾತೆಯ ಹೆಮ್ಮೆಯ ಕುವರಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: