-ಈತ ಆರಿಫ್ ರಾಜಾ…. ರಾಯಚೂರಿನ ಹಳ್ಳಿಯೊಂದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ಆರಿಫ್ ಕವನಗಳು ಕಾಡುತ್ತವೆ,
ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಕುಳಿತುಬಿಡುತ್ತವೆ ಎನ್ನುತ್ತಾರೆ ಭಾರತೀದೇವಿ. ಅವರು ಮೆಚ್ಚಿದ ಒಂದು ಕವನ ಇಲ್ಲಿದೆ.
ಕಿರೀಟವಿಲ್ಲದ ಅರಸುಗಳ ಹಾಗೆ
ಹೆಸರಿಲ್ಲದ ಊರುಗಳಿಂದ ಬಂದ ಕೂಲಿಯಾಳುಗಳು ನಾವು
ನಮ್ಮ ಕತ್ತೆಗಳು ಹೊತ್ತ ಕೆಲಸದ ಮೂಟೆಗಳು
ಗದ್ದುಗೆಗಳ ಪ್ರಭಾವದಲಿ ಹಾಳಾದವು
–
ನಾವು ಪರವಾನಿಗೆ ಪತ್ರಗಳನ್ನಿಟ್ಟುಕೊಂಡೇ ಬಂದಿದ್ದೇವೆ
ನಮ್ಮನ್ನು ಯಾರು ಬೇಕಾದರೂ ಖರೀದಿಸಬಹುದು ರೂಪಾಯಿ ಪೈಸೆಗಳಿಗೆ
–
ಇಲ್ಲಿ ಚಾಕರಿ ಸುಲಭವಾಗಿ ಸಿಗುವುದಿಲ್ಲ ಗೊತ್ತು
ಕಳ್ಳರಿಗೆ ಕೊಲೆಗಡುಕರಿಗೆ ತಲೆಹಿಡುಕರಿಗೆ ಮೊದಲ ಆದ್ಯತೆ
ಇವರ ಸಾಲಿನಲ್ಲಿ ನಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು
–
ನಮಗೆ ಮನೆ ಕೊಡುವುದಿಲ್ಲವಂತೆ
ನಗರದಲ್ಲಿ ನಮಗೆ ಬಾಡಿಗೆಮನೆ ಸಿಗುವುದಿಲ್ಲವಂತೆ
ಏಕೆಂದರೆ ನಾವು
ಗಡ್ಡಬಿಟ್ಟಿರುತ್ತೇವೆ, ದನದ ಮಾಂಸ ತಿನ್ನುತ್ತಿರುತ್ತೇವೆ
ಕರ್ಫ್ಯೂ ಹೇರಿದಂತಿರುವ ತುರ್ತುಪರಿಸ್ಥಿತಿಯ ನಡಾವಳಿಗಳು
ನಮ್ಮನ್ನು ಅನುಮಾನದಿಂದ ಕಾಣುತ್ತವೆ
ಕ್ರೀಡೆಗಳಲ್ಲಿ ಸೇನೆಗಳಲ್ಲಿ ಸೌಹಾರ್ದ ಸಂಬಂಧಗಳಲ್ಲಿ
–
ಭಯೋತ್ಪಾದಕರಲ್ಲ
ಗುಲಾಮಿ ಸಂತತಿಯ ಕಪ್ಪು ಅಕ್ಷರಗಳು ನಾವು
ಗೋಡೆಗಳ ಮೇಲೆ ಬರಹಗಳನ್ನು ಬರೆಯುವೆವು
–
ಹಣೆಬರಹ ಬದಲಾಯಿಸುತ್ತೇವೆ ಅಕ್ಕರೆಯ ಹುಡುಗರು
ವ್ಯವಸ್ಥೆಯ ಹುಣ್ಣುಗಳನ್ನು ವರೆಸಿಹಾಕುತ್ತೇವೆ
ನಮ್ಮ ಹುಟ್ಟುಹಬ್ಬವನ್ನು ಯಾರೂ ಆಚರಿಸುವುದಿಲ್ಲ
ನಮ್ಮ ಗೆಳತಿಯರ ಹೊಟ್ಟೆಯಲಿ ಭಾರತೀಯರಾಗಿ ಹುಟ್ಟಿಬರುತ್ತೇವೆ
ಜಾತಿಗೊಂದು ಪ್ರಮಾಣ ಪತ್ರ ಬೇಡುವ
ಇಂಡಿಯಾಕ್ಕೆ ನಮ್ಮ ನಮಸ್ಕಾರಗಳು
–
ಮಾನವ ಬಾಂಬುಗಳ ದಾಳಿಗೆ ಒಳಗಾದ ನಿರ್ಜೀವ ಸ್ಮಾರಕಗಳು
ನಮ್ಮೊಳಗೆ ಝಂಡಾ ಹಾರಿಸುತ್ತಾ ನಗುತ್ತವೆ
ಎಲ್ಲಾ ದೇಶಗಳಲ್ಲೂ ಅಷ್ಟೆ
ಪ್ರಾರ್ಥನೆಯ ಭಾಷೆ ಪ್ರಭುತ್ವಕ್ಕೆ ಬೇಗ ಬರುವುದಿಲ್ಲ
idu entha lokavayya,manasugala odeva,kanasugala suduva idu entha lokavayya.