ನಮ್ಮದಲ್ಲದ ಊರಲ್ಲಿ ನಮ್ಮವರ ನಡುವೆ…

ಕ್ರಿಸ್ಟೋಫರ್ ಡಿಸೋಜ

ನೀನಾಸಮ್ ತರಬೇತಿಯನ್ನು 2010ರಲ್ಲಿ ಮುಗಿಸಿ ಮಂಗಳೂರು ಸೇರಿದ ಕ್ರಿಸ್ಟೋಫರ್ ಡಿಸೋಜ ರಂಗವಲಯದಲ್ಲಿ ಕ್ರಿಸ್ಟೀ ಎಂದೇ ಪರಿಚಿತರು. ಪದುವಾ ಹೈಸ್ಕೂಲಲ್ಲಿ ಅಧ್ಯಾಪಕರಾಗಿದ್ದು ಕೊಂಕಣಿ ಯುವ ಸಮುದಾಯವನ್ನು ರಂಗದತ್ತ ಸೆಳೆಯುವ ಪ್ರಯತ್ನ ಮಾಡಿದ ಕ್ರಿಸ್ಟೀ, ‘ಅಸ್ತಿತ್ವ’ ಎಂಬ ತಂಡ ಕಟ್ಟಿ ಹಲವಾರು ಹೊಸ ನಾಟಕಗಳನ್ನು ಕೊಂಕಣಿ ಹಾಗೂ ಕನ್ನಡ ರಂಗಭೂಮಿಗಿತ್ತಿದ್ದಾರೆ.

‘ಅಸ್ತಿತ್ವ’, ನಮ್ಮ ಯುವಜನರೇ ಸೇರಿ ಕಟ್ಟಿಕೊಂಡ ಒಂದು ತಂಡ. ‘ಪಯಣ’ ಎಂಬ ಹೆಸರಿನಡಿಯಲ್ಲಿ ನಾವು ಪ್ರತೀ ತಿಂಗಳಿನ ಒಂದು ಶನಿವಾರ, ಭಾನುವಾರದಂದು ಯಾವುದಾದರೂ ಹಳ್ಳಿಯಲ್ಲಿ ಹಳ್ಳಿ ಜೀವನ ಶಿಬಿರವನ್ನು ಆಯೋಜಿಸಿ ನಮ್ಮ ಮೂಲ ಅಸ್ತಿತ್ವದ ಹುಡುಕಾಟದೊಂದಿಗೆ ನಮ್ಮ ಪಯಣ ಸಾಗುತಿತ್ತು. ಪ್ರಕೃತಿಗೆ ಹತ್ತಿರವಾದ ಹಲವು ಕೆಲಸಗಳನ್ನು ಮಾಡುವುದರ ಮೂಲಕ ಮತ್ತೆ ಪರಿಸರದ ಕಡೆ ಹೋಗುವ ಸಣ್ಣ ಪ್ರಯತ್ನ ಈ ಯೋಜನೆ ಮಾಡುತಿತ್ತು.

ಬಹಳಷ್ಟು ಹೊಸ ಹೊಸ ವಿಚಾರಗಳನ್ನು ನಾವು ಈ ಪಯಣದಲ್ಲಿ ಕಲಿತದ್ದಿದೆ. ನಮ್ಮ ಅಸ್ತಿತ್ವದ ಮೂಲ ಹುಡುಕಾಟ ಎಂಬ ಧ್ಯೇಯದೊಂದಿಗೆ ಹಲವು ಪಯಣಗಳನ್ನು ಇಲ್ಲಿಯವರೆಗೆ ಮುಗಿಸಿಕೊಂಡಿದ್ದೇವೆ. ಬಹುತೇಕ ರಂಗ ಕಲಾವಿದರೇ ಈ ತಂಡದಲ್ಲಿ ಸೇರಿಕೊಂಡಿದ್ದರಿಂದ ಕೆಲವು ದಿನಗಳ ನಂತರ ಸಹಜವಾಗಿಯೇ ನಮ್ಮೆಲ್ಲರ ಆಸಕ್ತಿ ರಂಗಪ್ರದರ್ಶನವನ್ನು ಸಿದ್ದಗೊಳಿಸುವ ಕಡೆ ಹೆಚ್ಚಾಗತೊಡಗಿತು. ಹೀಗೇ ನಮ್ಮ ತಂಡ ಒಂದು ರಂಗತಂಡವಾಗಿಯೂ ಕೂಡ ಪರಿವರ್ತಿತಗೊಂಡಿತು. ಈಗ ನಮ್ಮ ಹುಡುಕಾಟದ ಪಯಣ ರಂಗಭೂಮಿಯೆಡೆಗೆ ತಿರುಗಿ, ರಾಜ್ಯ ಹಾಗೂ ಪರ ರಾಜ್ಯದಲ್ಲಿ ರಂಗಪ್ರದರ್ಶನಗಳನ್ನು ಯಶಸ್ವಿಯಾಗಿ ಮುಗಿಸಿಕೊಂಡು ಕಳೆದ ವರ್ಷ ಮೊದಲ ಸಲ ಗಲ್ಫ್ ದೇಶದಲ್ಲಿ ರಂಗ ಪ್ರದರ್ಶನವನ್ಮೂ ಮುಗಿಸಿ ಬಂದಿದ್ದೇವೆ. ಅಲ್ಲಿ ನಡೆದ ಕೆಲವೊಂದಿಷ್ಟು ಸ್ವಾರಸ್ಯಕರ ವಿಷಯಗಳನ್ನು ಇಲ್ಲಿ ವಿವರಿಸುವವನಿದ್ದೇನೆ.

ಶಾರ್ಜಾದಲ್ಲಿ SMMKC ಸಂಘಟನೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ರಂಗಹಬ್ಬದಲ್ಲಿ ನಮ್ಮ‌ತಂಡದ‌ ಪ್ರದರ್ಶನವಿತ್ತು. ನಮ್ಮ ನಾಟಕದ ರಂಗ ವಿನ್ಯಾಸ, ಬೆಳಕಿನ ವಿನ್ಯಾಸ ಮೊದಲೇ ಕಳುಹಿಸಿದ್ದ ನಾವು, ಈ ಎಲ್ಲಾ ವಸ್ತುಗಳನ್ನು ಅಲ್ಲಿ ಒದಗಿಸಿಕೊಡುತ್ತೇವೆ ಎಂಬ ಸಂಘಟಕರ ನಂಬಿಕೆಯೊಂದಿಗೆ ನಾವು ಗಲ್ಫ್ ದೇಶಕ್ಕೆ ಪಯಣ ಹೊರಟಿದ್ದೆವು. ಆದರೆ ದಿನಗಳು ಕಡಿಮೆ ಇದ್ದುದರಿಂದ ಹಾಗೂ ಎಲ್ಲಾ ರೀತಿಯ ವ್ಯವಸ್ಥೆಗಳು ನಮಗೆ ಬೇಕಾದ ಹಾಗೆ ಸಿಗುವವೋ ಎಂಬ ಸಂದೇಹವಿತ್ತು. ಇದ್ದುದರಲ್ಲೇ ಏನಾದರೂ ವ್ಯವಸ್ಥೆ ಮಾಡಿ, ನಾಟಕ ಪ್ರದರ್ಶನ ಮುಗಿಸುವ ಆಲೋಚನೆಯೊಂದಿಗೆ ನಾವು ಸಿದ್ದರಾಗಿದ್ದೆವು. ಆದರೆ ಅಲ್ಲಿ ನಮ್ಮ ಎಲ್ಲಾ ಆಲೋಚನೆಗಳು ತಲೆಕೆಳಗಾಗಿದ್ದವು. ಅಲ್ಲಿ ನಮ್ಮದೇ ಊರಿನ ವ್ಯವಹಾರಗಾರರೊಬ್ಬರ ಪರಿಚಯವಾಯಿತು, ಅವರು ಅವರ ಗೋದಾಮಿಗೆ ಕರೆದುಕೊಂಡು ಹೋಗಿ ಬೇಕಾದ ವ್ಯವಸ್ಥೆ ಮಾಡಿಸಿದರು.

ಅಲ್ಲಿ, ಒಂದು ಬೇರೆಯದೇ ಆದ ಪ್ರಪಂಚ ತೆರೆಯಿತು. ಆ ಗೋದಾಮಿನಲ್ಲಿ ಇಲ್ಲದ ವಸ್ತುಗಳಿರಲಿಲ್ಲ. ಏನು ಬೇಕಾದರೂ ತಕ್ಷಣ ಸಿದ್ಧಪಡಿಸಿ ಕೊಡುವ ವ್ಯವಸ್ಥೆ, ಉನ್ನತ ಮಟ್ಟದ ತಂತ್ರಜ್ಞಾನದಿಂದ ಕ್ಷಣಮಾತ್ರದಲ್ಲಿ ತಯಾರಾಗುವ ರಂಗ ಪರಿಕರಗಳನ್ನು ಕಂಡು ಬೆರಗಾದೆವು. ಅದರಲ್ಲೂ ಮತ್ತೊಂದು ವಿಶೇಷತೆ ಏನಂದರೆ ಅಲ್ಲಿನ 70% ಕಾರ್ಮಿಕರು ನಮ್ಮದೇ ಊರಿನವರು.

ಇಲ್ಲಿ ಕೆಲಸ ಮಾಡಲು ಆಗಲ್ಲ ಎಂದು ಹೇಳಿದ ತಲೆಗಳು ಅಲ್ಲಿ ಮೈಮುರಿದು ದುಡಿಯುತ್ತಿದ್ದುವು. ಅಲ್ಲಿನ ತಂತ್ರಜ್ಞಾನ, ಅಲ್ಲಿನ ಕಾರ್ಯಕ್ಷಮತೆ, ಅಲ್ಲಿನ ಶಿಸ್ತುಬದ್ದತೆ ನಮ್ಮ ಊರಿನಲ್ಲೂ ಬಂದರೆ ನಮ್ಮ ರಂಗಪ್ರದರ್ಶನಗಳೂ ಹೊಸ ಹುರುಪನ್ನು ಪಡೆಯಬಹುದೆಂಬ ಆಸೆ ಹುಟ್ಟಿದ್ದು ಸುಳ್ಳಲ್ಲ.. ಯಾಕೆಂದರೆ ಇವರೆಲ್ಲರೂ ನಮ್ಮವರೇ ಆಗಿದ್ದರು. ಇಲ್ಲಿ ನಮ್ಮೂರಿನಲ್ಲಿ ಬೆಳಕಿನ ವಿನ್ಯಾಸದ ಸಂದರ್ಭಲ್ಲಿ, ಕೊನೇ ಕ್ಷಣದಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿದ್ದರೆ, ಸರಿಪಡಿಸಲು ಮೇಲಿಂದ ಕೆಳಗೆ ನೋಡುವವರು, ಅಲ್ಲಿ ಯಾವ ಕ್ಷಣದಲ್ಲಾದರೂ ಬಂದು ನಿರಂತರವಾಗಿ ಕೆಲಸ ಮಾಡುವವರಾಗಿದ್ದರು. ಅಷ್ಟು ವೃತ್ತಿ ನಿಷ್ಠತೆ ನಮಗಲ್ಲಿ ಕಾಣಸಿಕ್ಕಿತು.

ರಂಗಪ್ರದರ್ಶನದ ದಿನದಂದು ನಮಗೆ ಕಾಡಿದ ಮತ್ತೊಂದು ಹೆದರಿಕೆ ಏನಂದರೆ, ಗಲ್ಫ್ ದೇಶದ ಜನರು ಬಹಳಷ್ಟು ವರ್ಷಗಳಿಂದ ಹೊರನಾಡಿನಲ್ಲಿರುವುದರಿಂದ ನಾಟಕವನ್ನು ಆಸ್ವಾದಿಸಿ ನಮಗೆ ಬೇಕಾದ ಪ್ರತಿಕ್ರಿಯೆ ನೀಡಲು ಶಕ್ಯರಿರುವರೇ ಎಂದು. ಆದರೆ ಎಲ್ಲಾ ನಿರೀಕ್ಷೆಗಳು ನಾಟಕ ಶುರುವಾದ ಪ್ರತೀ ಕ್ಷಣದಿಂದ ಹುಸಿಯಾಗತೊಡಗಿದ್ದವು. ಬಹುಶಃ ನಾವು ಇಷ್ಟರವರೆಗೆ ನೀಡಿದ ಎಲ್ಲಾ ಪ್ರದರ್ಶನಗಳಿಗಿಂತ ಅತೀ ಹೆಚ್ಚು ಪ್ರತಿಕ್ರಿಯೆ ನಮಗೆ ಅಲ್ಲಿಯೇ ದೊರಕಿತ್ತು ಎಂದು ಹೇಳಿದರೆ ಉತ್ಪ್ರೇಕ್ಷೆ ಎಂದಣಿಸುವುದಿಲ್ಲ. ಬಹುಶಃ ನಾವು ನಮ್ಮವರ ಬಗ್ಗೆ ಇಟ್ಟುಕೊಂಡಿದ್ದ ಎಲ್ಲಾ ಕಪೋಕಲ್ಪಿತ ವಿಚಾರಗಳು, ಹಾಗೂ ಕೆಲವರಿಂದಲೇ ಕೇಳಿದ ತಾತ್ಸಾರದ ಮಾತುಗಳು ಎಲ್ಲವೂ ಹುಸಿಯಾಗಿದ್ದವು.

ನಿಜ ಹೇಳಬೇಕೆಂದರೆ ನಮಗೆ ನಾವೊಂದು ಬೇರೆಯದೇ ದೇಶಕ್ಕೆ ಹೋಗಿ ರಂಗಪ್ರದರ್ಶನ ನೀಡಿದ್ದೇವೆ ಎಂದು ನನಗೆ ಅನ್ನಿಸಲೇ ಇಲ್ಲ. ಯಾಕೆಂದರೆ ಎಲ್ಲಿ ನೋಡಿದರೂ ನಮ್ಮ ಊರಿನ ಭಾಷೆಗಳಾದ ಕೊಂಕಣಿ, ತುಳು, ಹಾಗೂ ಕನ್ನಡ ಭಾಷೆಗಳೇ ಕೇಳುತ್ತಿದ್ದವು. ಮತ್ತೊಂದು ವಿಚಿತ್ರವಾದ ಸಂಗತಿ ಏನೆಂದರೆ ಆ ಗುಂಪಿನಲ್ಲಿ ಒಬ್ಬ ತಮಿಳುನಾಡಿನವನೂ ಇದ್ದ. ಆದರೆ ಆತ ಅದೆಷ್ಟು ಚೆಂದವಾದ ತುಳು ಹಾಗೂ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದನೆಂದರೆ ನಾವ್ಯಾರೂ ಆತ ಈ ಊರಿನವನು ಅಲ್ಲ ಎಂದಾಗ ನಂಬಲೇ ಇಲ್ಲ. ಆತ ಈ ಗಲ್ಫ್ ರಾಷ್ಟ್ರಕ್ಕೆ ಬಂದು, ಇಲ್ಲಿ ನಮ್ಮವರ ಜೊತೆ ಬೆರೆತು ಕೇವಲ ಒಂದೂವರೆ ವರ್ಷದೊಳಗಡೆ ನಮ್ಮ ಭಾಷೆಗಳನ್ನು ಕಲಿತಿದ್ದ, ಚೆಂದವಾದ ಹಾಡುಗಳನ್ನೂ ಹಾಡುತ್ತಿದ್ದ.

ಹೊಸ ಭಾಷೆ ಕಲಿಯಲು, ಅಥವಾ ಇದ್ದ ಪ್ರಾಂತೀಯ ಭಾಷಾ ವೈವಿಧ್ಯಗಳನ್ನು ಸರಿಪಡಿಸಲು ರಾಜ್ಯ, ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಆಯೋಜಿಸಿ, ಎಲ್ಲಾ ಪಂಡಿತರು ಸೇರಿ ಮಾತನಾಡಿ, ಮುಂದಿನ ವರ್ಷ ಮತ್ತೊಮ್ಮೆ ಸೇರೋಣ ಎಂದು ಹೇಳಿ ವ್ಯರ್ಥವಾದ ಘೋಷಣೆಯೊಂದಿಗೆ ಅಂತ್ಯವಾಗುವ ಎಲ್ಲಾ ಯೋಜನೆಗಳು ನಿರುಪಯುಕ್ತ ಎಂದು ಅನಿಸಿದ್ದು ಸುಳ್ಳಲ್ಲ.

ಸಾಮಾನ್ಯ ವಿದ್ಯಾ ಜ್ಞಾನ ಪಡೆದ ಒಬ್ಬ ವ್ಯಕ್ತಿ ತನ್ನದಲ್ಲದ ಭಾಷೆ, ಸಂಸ್ಕ್ರತಿಯನ್ನು ತನ್ನ ಕರ್ಮ ಭೂಮಿ ಮುಖಾಂತರ ಸುಲಲಿತವಾಗಿ ಕಲಿಯುತ್ತಾನೆ ಎಂದರೆ, ಇದಕ್ಕಿಂತ ಮಿಗಿಲಾದ ಕಲಿಕೆ ಇದೆಯೇ…? ಇದೇ ಅಲ್ಲವೇ ನಿಜವಾದ ಸಾಂಸ್ಕೃತಿಕ ಕೊಡುಕೊಳ್ಳುವಿಕೆ…. ರಂಗಭೂಮಿಯ ಶಕ್ತಿಯೂ ಅದೇ, ಹೊಸ ಹೊಸ ವಿಚಾರಗಳನ್ನು, ಹೊಸ ಹೊಸ ಸಂಸ್ಕೃತಿ, ಭಾಷಾ ವೈವಿಧ್ಯಗಳನ್ನು ಹೇಳದೇ ಕೇಳದೇ ನಮಗೆ ಕಲಿಸಿಕೊಟ್ಟು, ನಮ್ಮದೇ ಎಂಬ ಭಾವನೆಯನ್ನು ನಮ್ಮೊಳಗೆ ಮೂಡಿಸುತ್ತದೆ. ನನಗಂತೂ ಈ ರಂಗ ಪ್ರವಾಸ ನಮ್ಮದಲ್ಲದ ಊರಲ್ಲಿ ನಮ್ಮವರ ನಡುವೆ, ನಾವೆಲ್ಲರೂ ಸೇರಿ ಒಂದೊಳ್ಳೆ ಪ್ರದರ್ಶನ ಮಾಡಿದ ಅನುಭವವಾಯಿತು.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಂಗ ತಂಡ ಕಟ್ಟಿ ನೋಡು..

ರಂಗ ತಂಡ ಕಟ್ಟಿ ನೋಡು..

ಶಶಿಧರ ಭಾರಿಘಾಟ್ ರಂಗಭೂಮಿಯಲ್ಲಿ ನಲುವತ್ತು ವರ್ಷಗಳ ಅನುಭವ. ನಟ, ನಾಟಕಕಾರ, ನಿರ್ದೇಶಕ, ಸಂಘಟಕ -ಹೀಗೆ ವಿವಿಧ ಪ್ರಕಾರಗಳಲ್ಲಿ ಗಟ್ಟಿಯಾಗಿ...

ಹೆಚ್ಚು ಹೆಚ್ಚು ಮಾನವರಾಗಲು..

ಹೆಚ್ಚು ಹೆಚ್ಚು ಮಾನವರಾಗಲು..

ಕೃಷ್ಣಮೂರ್ತಿ ಕವತ್ತಾರ್ ೧೯೯೭ರಷ್ಟು ಹಿಂದೆ ನೀನಾಸಮ್ ಪದವಿ ಪಡೆದು, ತಿರುಗಾಟವನ್ನೂ ನಡೆಸಿ ಬೆಂಗಳೂರಿಗೆ ಬಂದು ನೆಲೆಸಿದ ಕೃಷ್ಣಮೂರ್ತಿ...

ಲಾರಿ ಏರಿ..

ಲಾರಿ ಏರಿ..

ಕಾಸರಗೋಡು ಚಿನ್ನಾ ಲಾರಿ ನಾಟಕ, ವಠಾರ ನಾಟಕ, ಸಂಗೀತ ರಥ, ಯಕ್ಷತೇರು ಮುಂತಾದ ಅದ್ವಿತೀಯ ರಂಗಕೈಂಕರ್ಯದ ಸಾಧಕರು. ನಟ, ನಿರ್ದೇಶಕ, ಸಂಘಟಕ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This