ನಮ್ಮನ್ನೆಲ್ಲ ಕಾಡುವ ಜಾಫ್ನಾದ ಈ ಹುಡುಗಿ…

ಜಯಸರಿತಾ

ನಾಜಿಗಳ ಕ್ರೌರ್ಯದ ಇತಿಹಾಸಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಚಿತ್ರ ನಿರ್ದೇಶಕ ಅಲೆನ್ ರೆನೆ “ನೈಟ್ ಅಂಡ್ ಫಾಗ್” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾನೆ. ವರ್ತಮಾನದಲ್ಲಿ ಹಸಿರು ಹುಲ್ಲುಗಾವಲಿನಂತೆ ಸುಂದರವಾಗಿ ಕಾಣುವ ಹಳೆಯ ಯಾತನಾ ಶಿಬಿರಗಳು, ಪುಸ್ತಕಗಳು, ವ್ಯಕ್ತಿಗಳು ಇತ್ಯಾದಿಗಳನ್ನು ಬಳಸಿಕೊಂಡು ಭೂತವನ್ನು ಕಟ್ಟಿಕೊಡುವ ರೆನೆ, ಕೊನೆಗೊಂದು ಮಾತು ಹೇಳುತ್ತಾನೆ. ನಾಜಿಗಳ ಭಯವನ್ನು ತೊಡೆದುಹಾಕಿದ ವಾತಾವರಣವನ್ನು ತೋರಿಸುತ್ತಲೇ ಹಿನ್ನೆಲೆಯಲ್ಲಿ ಮೂಡಿಬರುವ ಆ ಮಾತುಗಳು “ಪ್ರಶಾಂತತೆಯ ನೆರಳಿನಲ್ಲಿ ಅಡಗಿ ಕುಳಿತ ಕ್ರೌರ್ಯ”ವನ್ನು ನೆನಪಿಸಿ, “ನಮ್ಮೊಳಗೇ ಇರಬಹುದಾದ ಹಿಟ್ಲರ್”ನ ಕುರಿತು ಎಚ್ಚರಿಸುತ್ತವೆ.

rajani.jpgಈ ಎಚ್ಚರ ಹೆಚ್ಚು ಹಳೆಯದಾಗುವ ಮುನ್ನವೇ ನಿಜವಾಗುತ್ತಿದೆ. ಇರಾಕ್, ಅಫ್ಘಾನಿಸ್ತಾನ್, ಅಷ್ಟೇಕೆ ನಮ್ಮದೇ ಗುಜರಾತ್ ಕಣ್ಣ ಮುಂದೆಯೇ ಇಲ್ಲವೆ? ಈ ಪ್ರಕ್ಷುಬ್ಧತೆಯ ದಿನಗಳಲ್ಲಿ ಡಾ. ಜಾಫ್ನಾದ ರಜನಿ ತಿರಣಗಮ ಹೆಚ್ಚು ಪ್ರಸ್ತುತರಾಗುತ್ತಿದ್ದಾರೆ. ಈಕೆ ಕವಯಿತ್ರಿ, ವೈದ್ಯೆ, ಶಿಕ್ಷಕಿಯಾಗಿದ್ದವರು. ಎಲ್ಲಕ್ಕಿಂತ ಹೆಚ್ಚಾಗಿ ಜಾಫ್ನಾ ಪ್ರಕ್ಷುಬ್ಧವಾಗಿದ್ದ ದಿನಗಳಲ್ಲಿ, ಸಾಮಾನ್ಯ ಮಹಿಳೆಯಂತೆ ಯೋಚಿಸುವುದೇ ಸಮಸ್ಯೆಗೆ ಪರಿಹಾರ ಎಂದುಕೊಂಡಾಕೆ ಮತ್ತು ಇದೇ ಕಾರಣದಿಂದ ಅಪರಿಚಿತ ಹಂತಕರಿಂದ ಕೊಲೆಗೀಡಾದವಳು.

ಇರಾಕಿನ ಅಬೂಘ್ರೈಬ್ ಬಂದೀಖಾನೆಗಳಲ್ಲಿ ಅಮೆರಿಕದ ಸೇನೆ ಭಯೋತ್ಪಾದನೆಯ ವಿರುದ್ಧ ಸೆಣಸುವ ನೆಪದಲ್ಲಿ ನಡೆಸಿದ ಕ್ರೌರ್ಯದ ಬಗ್ಗೆ ಬಹುದೊಡ್ಡ ಚರ್ಚೆ ನಡೆಸುವ ನಾವು, ಹದಿನೆಂಟು ವರ್ಷಗಳ ಹಿಂದೆ ಇಂಥದ್ದೇ ಚಟುವಟಿಕೆಯಲ್ಲಿ ತೊಡಗಿದ್ದೆವು ಎಂಬುದನ್ನು ನೆನಪಿಸಿಕೊಳ್ಳಬೇಕಿದೆ. ಆಗ ರಾಜೀವ್ ಭಾರತದ ಪ್ರಧಾನಿಯಾಗಿದ್ದರು. ಅಮೆರಿಕದ ಸೇನೆ ಇರಾಕಿಗಳ ವಿಮೋಚನೆ ಸ್ಲೋಗನ್ನಿನೊಂದಿಗೆ ಇರಾಕಿಗೆ ಹೋದಂತೆ ಭಾರತದ ಸೇನೆ ಶ್ರೀಲಂಕೆಗೆ ಹೋಗಿತ್ತು. ಸೇನೆ ತೋರಿಸುವ ಎಲ್ಲ ಕ್ರೌರ್ಯಗಳನ್ನು ಭಾರತೀಯ ಸೇನೆಯೂ ತೋರಿತ್ತು. ಎಲ್ ಟಿ ಟಿ ಇ ಇದಕ್ಕಾಗಿ ರಾಜೀವ್ ಹತ್ಯೆಯನ್ನೂ ನಡೆಸಿತು. ಈ ರಾಷ್ಟ್ರೀಯ ಉದ್ದೇಶ, ಜನಾಂಗೀಯ ಅನನ್ಯತೆ ಎಂಬ ಪದಪುಂಜಗಳನ್ನು ಅರಿಯದ ದೊಡ್ಡ ಸಮುದಾಯ ಜಾಫ್ನಾದಲ್ಲಿತ್ತು. ತಮಿಳರು, ಶ್ರೀಲಂಕನ್ನರು ಎಂಬ ಸಾಮಾನ್ಯೀಕರಣ ನಡೆಯುತ್ತಿದ್ದ ದಿನಗಳಲ್ಲಿ ರಜನಿ ಮನುಷ್ಯರ ಪರವಾಗಿ ನಿಂತು ಮಾತನಾಡಿದರು.

ಡಾ. ರಜನಿ ತಿರಣಗಮ ಜಾಫ್ನಾ ವಿಶ್ವವಿದ್ಯಾಲಯದ ವೈದ್ಯಕೀಯ ಶಿಕ್ಷಣ ವಿಭಾಗದ ಉದ್ಯೋಗಿಯಾಗಿದ್ದರು. ತಮಿಳು ಅನನ್ಯತೆಗಾಗಿ ಆರಂಭವಾದ ಹೋರಾಟ ಹಿಂಸಾತ್ಮಕ ತಿರುವು ಪಡೆದಾಗ ಜಾಫ್ನಾ ವಿಶ್ವವಿದ್ಯಾಲಯವನ್ನು ಮುಚ್ಚಲಾಗಿತ್ತು. ಶ್ರೀಲಂಕಾದ ಸೇನೆ ಮತ್ತು ತಮಿಳು ಉಗ್ರಗಾಮಿ ಸಂಘಟನೆಗಳಷ್ಟೇ ಭೀತಿಯನ್ನು ಭಾರತದಿಂದ ಲಂಕೆಗೆ ತೆರಳಿದ್ದ ಶಾಂತಿ ಸೇನೆಯೂ ಹುಟ್ಟಿಸುತ್ತಿತ್ತು. ಈ ಹೊತ್ತಿನಲ್ಲಿ ವಿಶ್ವವಿದ್ಯಾಲಯವನ್ನು ಪುನರಾರಂಭಿಸಲು ಪ್ರಯತ್ನಿಸಿ ಯಶಸ್ವಿಯಾದವರು ರಜನಿ. ಆಕೆಯ ಹೋರಾಟ ಅಲ್ಲಿಗೇ ನಿಲ್ಲಲಿಲ್ಲ. ತನ್ನ ಸಹೋದ್ಯೋಗಿಗಳೊಂದಿಗೆ ಸೇರಿ ಯೂನಿವರ್ಸಿಟಿ ಟೀಚರ್ಸ್ ಫಾರ್ ಹ್ಯೂಮನ್ ರೈಟ್ಸ್ ಎಂಬ ಸಂಘಟನೆಯನ್ನು ಆರಂಭಿಸಿದರು. ಜಾಫ್ನಾದಲ್ಲಿ ನಡೆದ ಸೇನೆ ಮತ್ತು ಉಗ್ರರ ಹಣಾಹಣಿ, ಈ ಎರಡೂ ಅಲ್ಲದ ಜನತೆಯ ಬದುಕನ್ನು  ಕಿತ್ತುಕೊಂಡದ್ದು ಹೇಗೆ ಎಂದು ರಜನಿ ದಾಖಲಿಸಿದರು.

rajani2.jpgಹೊರಜಗತ್ತು ಕಾಣುತ್ತಿದ್ದುದು ತಮಿಳು ಹುಲಿಗಳು ಮತ್ತು ಶ್ರೀಲಂಕಾದ ಸೇನೆಯನ್ನು ಮಾತ್ರ (ಕಾಶ್ಮೀರದಲ್ಲಿ ಜಿಹಾದಿಗಳು ಮತ್ತು ಭಾರತೀಯ ಸೇನೆ ಮಾತ್ರ ಇದೆ ಅಂದುಕೊಂಡಂತೆ). ಅಲ್ಲಿ ಹುಲಿಗಳೂ ಸೈನಿಕರೂ ಅಲ್ಲದ ಜನಸಾಮಾನ್ಯರಿದಾರೆ ಎಂಬುದನ್ನು ರಜನಿ ಜಗತ್ತಿಗೆ ಹೇಳಲು ಪ್ರಯತ್ನಿಸಿದರು. ಈ ಪ್ರಯತ್ನ ಶ್ರೀಲಂಕಾ ಮತ್ತು ಭಾರತದಿಂದ ಹೋಗಿದ್ದ ಶಾಂತಿ ಸೇನೆಗೆ ಹೇಗೆ ಅಪಥ್ಯವಾಗಿತ್ತೊ ಹಾಗೇ ಹುಲಿಗಳನ್ನೂ ಕೆರಳಿಸಿತು. ೧೯೮೯ರ ಸೆಪ್ಟೆಂಬರ್ ೨೧ರಂದು ಮನೆಗೆ ಹಿಂತಿರುಗುವ ಹೊತ್ತಲ್ಲಿ ಅವರು ಕೆಲಸ ಮಾಡುತ್ತಿದ್ದ ಸ್ಥಳದ ಸಮೀಪವೇ ರಜನಿ ಕೊಲೆಗೀಡಾದರು.

ಸಾಮಾನ್ಯ ಮಹಿಳೆಯೊಬ್ಬಳ ಚಿಂತನೆ ಬಹುದೊಡ್ಡ ಸಮಸ್ಯೆಗಳಿಗೂ ಪರಿಹಾರವಾಗಬಹುದು ಎಂಬ ಆಕೆಯ ಒಳನೋಟ ಅಮರ.

‍ಲೇಖಕರು avadhi

August 22, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This