ನಮ್ಮೊಳಗೇ ನಮಗೊಂದು ಕನ್ನಡಿ..

ಮಂಜುಳಾ ಸುಬ್ರಹ್ಮಣ್ಯ

ಪ್ರತಿ ವೃತ್ತಿಯೂ ಬದುಕಿನ ಮತ್ತೊಂದು ಮಗ್ಗುಲು ಮತ್ತು ಸಾಧ್ಯತೆಗಳನ್ನು ಪರಿಚಯಿಸುತ್ತದೆ. ನಮ್ಮೊಳಗಿನ ಇನ್ನೊಂದು ಅಗಾಧವಾದ, ಅಸಾಧ್ಯವೆಂದುಕೊಂಡ ಸಾಧ್ಯತೆಯನ್ನು ನಮ್ಮ ವೃತ್ತಿ ಅಥವಾ ಹವ್ಯಾಸ ಅನಾವರಣಗೊಳಿಸಲು ವೇದಿಕೆ ಆದರೆ ಆ ಬದುಕು ನೀಡುವ ಸಾರ್ಥಕತೆಗೆ ಬೆಲೆ ಕಟ್ಟಲು ಸಾಧ್ಯವಾಗದು.

ನಮ್ಮೊಳಗೆ ನಮಗೊಂದು ಸ್ಪೇಸ್ ಬೇಕು. ಅದನ್ನು ಕಂಡುಕೊಂಡು ಅದರೊಳಗೆ ನಮ್ಮನ್ನು ಕಾಣಬೇಕು. ಪ್ರವೃತ್ತಿ ಅದಕ್ಕೆ ಪೂರಕ ಆಗ್ತದೆ.

ನಾನು ಕಲಾವಿದೆ. ರಂಗದ ಮೇಲಿರುವುದೇ ಬದುಕು ಹೌದು, ನೃತ್ಯ ಬೋಧನೆಯೂ ನನಗೆ ವೃತ್ತಿಯೂ ಹೌದು. ನಾನು ನೃತ್ಯ ಪಾಠವನ್ನೂ ಮಾಡುತ್ತೇನಾದ್ದರಿಂದ ಅದು ನನ್ನ ಪಾಲಿಗೆ ಕಲೆ ಮಾತ್ರವಲ್ಲ, ವೃತ್ತಿ-ಪ್ರವೃತ್ತಿ ಎಲ್ಲವೂ ಹೌದು. ಆರ್ಥಿಕ ಸ್ವಾವಲಂಬನೆ, ಸಾಮಾಜಿಕ ಸಂಪರ್ಕ ಮತ್ತು ವೇದಿಕೆಗಳಲ್ಲಿ ಅನಾವರಣ ಆಗುವುದು ಮಾತ್ರ ಇಲ್ಲಿ ನನಗೆ ದಕ್ಕಿದ್ದಲ್ಲ. ಇಲ್ಲಿ ಪ್ರತಿದಿನವೂ ಬೇರೇ ಬೇರೇ ಅನುಭವಗಳು. 10ರಿಂದ 4ರ ತನಕ ಪಾಠ ಮಾಡುವ ಶಾಲೆಯ ಶಿಕ್ಷಣಕ್ಕಿಂತ ನಮ್ಮ ಶಿಕ್ಷಣ ಕ್ರಮ ಭಿನ್ನ. ಶಾಲೆಯ ತರಗತಿಗಳಿಂದ ಹೆಚ್ಚಿನ ಆಪ್ತತೆ, ಶಿಷ್ಯರ ಜೊತೆಗಿನ ವೈಯಕ್ತಿಕ ಬಾಂಧವ್ಯ ನಮ್ಮ ಶಿಕ್ಷಣದಲ್ಲಿರುತ್ತದೆ. ಇದು ನನ್ನ ಅನುಭವದ ಕುರಿತಷ್ಟೇ..

ವಿದ್ಯಾರ್ಥಿಗಳು ಅನೌಪಚಾರಿಕವಾಗಿ, ಆಪ್ತವಾಗಿ ನಮ್ಮ ಜೊತೆ ಸಂಭಾಷಿಸುವುದರಿಂದ ಮೊದಲುಗೊಂಡು ನಮ್ಮ ಮನೆಯಲ್ಲೇ ಉಳಿದುಕೊಳ್ಳುವಲ್ಲಿಯ ತನಕ ಮುಂದುವರಿಯುತ್ತಿರುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಕಲಿಸುವ ಹಂತದಲ್ಲೇ ನಾವೂ ಪ್ರೌಢರಾಗುತ್ತೇವೆ ಎಂಬುದು ಅನುಭವದ ಮಾತು.

ಬದುಕಿಗೂ ಪಾಠ ಮಾಡುವ ತಿಲ್ಲಾನಗಳು!

ನೃತ್ಯ ಕಲಾವಿದೆಯಾಗಿ, ಶಿಕ್ಕಕಿಯಾಗಿ ನನ್ನ ಅನುಭವಗಳ ಮೂಟೆ ದೊಡ್ಡದಿದೆ. ನನಗೇನೂ ನೃತ್ಯ ಕಲೆ ಸುಲಭವಾಗಿ ದಕ್ಕಿದ್ದಲ್ಲ. ಆದರೆ ಈಗ ಸಂಗಾತಿಯಾಗಿರುವ ನೃತ್ಯ ಒಂದು ಸ್ವಾಭಿಮಾನವನ್ನು, ಸ್ವತಂತ್ರ ಚಿಂತನೆಗೆ ಬೆಳಕನ್ನೂ ನೀಡಿದೆ. ಬದುಕಲೂ ಕಲಿಸಿದೆ. ಇದನ್ನೇ ನಾನು ವಿದ್ಯಾರ್ಥಿಗಳಿಗೂ ಬೋಧಿಸುವುದು. ನೃತ್ಯ ಕಲಿಯುವ ಎಲ್ಲರೂ ಪ್ರದರ್ಶನ ಕಲಾವಿದೆಯರಾಗಿ ರೂಪುಗೊಳ್ಳುತ್ತಾರೆ ಎಂದಲ್ಲ. ಕಲಿಕೆ ನಮ್ಮೊಳಗಿನ ಇನ್ನೊಂದು ಶಕ್ತಿಯನ್ನು ನಮಗೇ ತೋರಿಸಿ ಜೀವನಾಭಿವೃದ್ಧಿಗೆ ದಾರಿ ತೋರಿಸುತ್ತದೆ ಎಂಬುದು ನನ್ನ ಬಲವಾದ ಅಭಿಮತ.

ಬಾಲ್ಯದಲ್ಲಿ ತಪ್ಪಿದರೂ ನಂತರವೂ ಕಷ್ಟವೇನಲ್ಲ

ಈಗ ನೃತ್ಯ ಕಲಿಯುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದಕ್ಕೆ ವಯಸ್ಸಿನ ಹಂಗಿಲ್ಲ, ಲಿಂಗ ಬೇಧವಿಲ್ಲ. ಆದರೆ, ಲಾಲಿತ್ಯಪೂರ್ಣವಾದ ಈ ನೃತ್ಯವನ್ನು ಹೆಣ್ಣುಮಕ್ಕಳೇ ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಸಹಜವೇ.

ಸಣ್ಣ ವಯಸ್ಸಿನಲ್ಲಿ ನೃತ್ಯ ಕಲಿಯುವುದು ಒಂದು ಕ್ರಮವಾಗಿ ಬೆಳೆದು ಬಂದಿದೆ. ‌ಅಂಗಾಂಗಳ‌ ಚಲನೆ ಬಾಲ್ಯದಲ್ಲಿಯೇ ರೂಢಿಯಾದರೆ ಸುಲಭ ಸಾಧ್ಯವಾಗುತ್ತದೆ ಎನ್ನುವುದಕ್ಕಾಗಿಯೇ. ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ‌ನೃತ್ಯ ನಿಜಕ್ಕೂ ಸಹಾಯವನ್ನು ಮಾಡುತ್ತದೆ. ನೃತ್ಯ ಕಲಿಕೆಯೂ ಸುದೀರ್ಘವಾದ ಪ್ರಕ್ರಿಯೆಯಾದುದರಿಂದ ಬಾಲ್ಯದಿಂದಲೇ ಇದನ್ನು ಅಭ್ಯಸಿಸಿದರೆ ವೃತ್ತಿಪರ ಕಲಾವಿದೆ ಆಗಿ ರೂಪುಗೊಳ್ಳಲು ಅನುಕೂಲ.

ಸೌಂದರ್ಯ ಲಹರಿ!

ನಾನಿಲ್ಲಿ ಹೇಳ ಹೊರಟಿರುವುದು ಕಲಿಕಾ ಕ್ರಮದ ಕುರಿತು ಅಂತಲ್ಲ. ನೃತ್ಯ ದೈಹಿಕ ವ್ಯಾಯಾಮ, ಏಕಾಗ್ರತೆ, ದೇಹ ಸೌಂದರ್ಯ ಮಾತ್ರವಲ್ಲದೆ ಮನೋಸ್ಥೈರ್ಯವನ್ನೂ ವೃದ್ಧಿಸುತ್ತದೆ ಅಂತ.

ನಮ್ಮಲ್ಲಿ ನೃತ್ಯ ಕಲಿಕೆಗಾಗಿ ಬರುವವರಿಗೆಲ್ಲಾ ‌ಪ್ರತಿನಿತ್ಯ ಅಭ್ಯಾಸ ಮಾಡಿ, ಇದರಿಂದ ಪ್ರಯೋಜನವೇನು ಎನ್ನುವುದನ್ನು ದಿನಾ ಉರು ಹೊಡೆಯುತ್ತೇವಾದರೂ, ನೃತ್ಯ ಕಲಿಯಲು ಯಾವಾಗ ನಾವು ಶಿಕ್ಷಕಿಯರು ಎನ್ನುವವರು ಪ್ರಾರಂಭಿಸಿದ್ದೇವೆಯೋ ಆಗ ನಿಜವಾದ ನಮ್ಮ‌ಕಲಿಕೆ ಆರಂಭವಾಗುತ್ತದೆ.

ಮಧ್ಯವಯಸ್ಸಿನ ಹೆಂಗಳೆಯರಿಗೆ ಪಾಠ ಮಾಡುವಾಗ ಆಗುವ ಅನುಭವವಂತೂ ಬದುಕಿನ‌ ವಿವಿಧ ಮಜಲುಗಳನ್ನು ಪರಿಚಯಿಸುತ್ತದೆ. ಬಾಲ್ಯದಲ್ಲಿ ಅವಕಾಶ ವಂಚಿತರೇ ಹೆಚ್ಚಿನವರು ನಮ್ಮ ಬಳಿ ಬಂದಿರುತ್ತಾರೆ. ಸಾಂಸರಿಕವಾದ ಒಂದು ಹಂತದ ಜವಾಬ್ದಾರಿಗಳನ್ನು ನಿರ್ವಹಿಸಿದ ಬಳಿಕ ಸಿಕ್ಕುವ ಪುಟ್ಟ ಬಿಡುವಿನಲ್ಲಿ ಸಾಧನೆಯ, ಆತ್ಮವಿಶ್ವಾಸದ ವೃದ್ಧಿಯ ತುಡಿತ ಅವರಲ್ಲಿ ಎದ್ದು ಕಾಣುತ್ತದೆ.

ಖಂಡಿತವಾಗಿಯೂ ಪ್ರಸಿದ್ಧ ನೃತ್ಯಕಲಾವಿದರಾಗಬೇಕು ಎನ್ನುವ ಹಂಬಲವಂತೂ ಅವರದ್ದಲ್ಲ. ಆದರೆ ಬದುಕಿನ ಖುಷಿಯನ್ನು ಅನುಭವಿಸುವ ಅವರು‌ ಕಂಡುಕೊಳ್ಳುವ ದಾರಿ ಈ ಕಲಿಕೆ ಎಂದಾಗ ನಮಗಂತು ಅಪರಿಮಿತ ಖುಷಿ. ‌ಅತಿಯಾಗಿ ದೇಹ ದಂಡಿಸುವುದು ಆಗ ಸಾಧ್ಯವಾಗದೇ ಇರುವುದು, ದೇಹ ಪ್ರಕೃತಿಯ ಏರುಪೇರುಗಳು, ಸಾಂಸಾರಿಕವಾದ ತೊಡರುಗಳು ಇವುಗಳೆಲ್ಲದರ ನಡುವೆ ನೃತ್ಯ ಕಲಿಕೆಗಾಗಿ ಸಮಯವನ್ನಿಟ್ಟುಕೊಂಡು ಬರುವುದೇ ಅವರು ಅವರಿಗಾಗಿ ಕೊಟ್ಟುಕೊಳ್ಳುವ ಸ್ವಾತಂತ್ಯವೇ ಅಲ್ವೇ.

ಇದಕ್ಕಿಂತಲೂ ನಾನು ಅತ್ಯಂತ ಹೆಮ್ಮೆ ಪಟ್ಟುಕೊಂಡಂತಹ ಸಂಗತಿ.. ಹೀಗೆ ನಡುವಯಸ್ಸಿನ ಒಬ್ಬಾಕೆ ನೃತ್ಯ ನನ್ನ ಬಳಿ ಬಂದು ಅಭ್ಯಾಸ ಶುರು ಮಾಡಿಕೊಂಡ್ರು, ಎರಡು, ಮೂರು ಕ್ಲಾಸ್ ಆದ ಬಳಿಕ ಆಕೆಯ ಮಾತು ನನ್ನನ್ನು ನಿಜಕ್ಕೂ ಪುಳಕಗೊಳಿಸಿತು. ಮೇಡಂ.. ಇಷ್ಟು ವರ್ಷಗಳ ಬಳಿಕ ನನಗೂ ಕಣ್ಣಿದೆ, ಕೈ, ಕಾಲುಗಳಿವೆ ಎಂದು ಅನ್ನಿಸಲು ಶುರು ಆಗಿದೆ!!!

ಆಕೆಯ ಮಾತು ಸಹಜವಾಗಿಯೇ ಇದ್ದರೂ ನಾನು ಈ ಕುರಿತು ಸಾಕಷ್ಟು ಯೋಚಿಸುವಂತೆ ಮಾಡಿತು. ದೇಹದಲ್ಲಿ, ಮನಸ್ಸಿನಲ್ಲಿ ಅಪಾರವಾದ ಸಾಧ್ಯತೆಗಳಿದ್ದರೂ ಬಳಕೆಗೆ ಸಿಕ್ಕದ ಅವೆಷ್ಟು ವಿಚಾರಗಳು ತಮ್ಮಷ್ಟಕೇ ಬಂಜರಾಗಿರುತ್ತವೆ ಅಲ್ವ…

ಒಂದು ದಾರಿ, ಒಂದು ವೇದಿಕೆ, ಒಂದು ಮಾರ್ಗದರ್ಶನ ಮತ್ತು ನಾಲ್ಕು ಪ್ರೋತ್ಸಾಹದ ಮಾತುಗಳಿಂದ ನಾವು ಕಂಡುಕೊಳ್ಳಬಹುದು, ನಮ್ಮೊಳಗಿನ ನಮ್ಮನ್ನು ಮತ್ತು ನಾಲ್ಕು ಮಂದಿಗೆ ತೋರಿಸಿಕೊಳ್ಳಬಹುದು, ಅವರು ನಮ್ಮೊಳಗೆ ಇಷ್ಟು ದಿವಸ ಕಾಣದೇ ಇದ್ದ ಮತ್ತೊಂದು ಉಲ್ಲಾಸವನ್ನು. ವ್ಯಸ್ತ ಬದುಕು, ಯಾಂತ್ರಿಕ ಯೋಚನೆ, ಅದೇ ಲೈಕು,ಕಮೆಂಟುಗಳ ಪ್ರವಾಹದ ನಡುವೆ ನಮ್ಮನ್ನು ನಾವು ಕಂಡುಕೊಳ್ಳುವುದು ಅಂದರೆ ಇದೇ ಅಲ್ವ?

‍ಲೇಖಕರು Avadhi

February 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This