ನಮ್ಮ ಕಾಲದ ದಿಟ್ಟ ಹುಡುಗಿಯ ಬಗ್ಗೆ…

ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ

aksha.jpg

ಲೇ: ಅಕ್ಷತಾ ಕೆ
ಪ್ರ: ಅಹರ್ನಿಶಿ ಪ್ರಕಾಶನ, ರಾಗಂ, ೨ನೆ ತಿರುವು, ವಿದ್ಯಾನಗರ, ಸಹ್ಯಾದ್ರಿ ಕಾಲೇಜಿನ ಎದುರು, ಶಿವಮೊಗ್ಗ.
ಪುಟಗಳು: ೮೦, ಬೆಲೆ: ೪೦ ರೂ.

* * *

ವಳೆಷ್ಟು ಗಟ್ಟಿ ಹುಡುಗಿಯೆಂದರೆ, ಇವಳು ಗೋಳೋ ಅನ್ನುತ್ತಿಲ್ಲ. ತಾನು ಮೆಚ್ಚಿದವನು ತನ್ನ ನಿರೀಕ್ಷೆಯನ್ನು ಮುಟ್ಟಲಿಲ್ಲವೆಂದು ಗೊತ್ತಾದಾಗಲೂ ಇವಳಲ್ಲಿ ಆ ಬಗ್ಗೆ ಆಘಾತವಿಲ್ಲ. ತಾನೇ ಹೊಸ ಬಗೆಯಲ್ಲಿ ಬದುಕುವ ಅಗತ್ಯವಿದೆ ಎಂದು ಯೋಚಿಸುತ್ತಾಳೆ. ಆ ಮೂಲಕ ನಿವಾರಣೆಯ ದಣಪೆಯಲ್ಲಿ ನಿಂತು ಆತ್ಮವಿಶ್ವಾಸ ಕಟ್ಟಿಕೊಳ್ಳುತ್ತಾಳೆ. ಹಾಗೆಂದು ಇವಳೇನು ಕೌಟುಂಬಿಕ ಪರಿಧಿಯಿಂದ ಆಚೆ ನಿಂತವಳಲ್ಲ. ಅಲ್ಲಿನ ಎಲ್ಲ ಸಣ್ಣತನಗಳ ಜೊತೆಗೇ ಏಗುತ್ತಲೂ ತನ್ನ ದಾರಿಯ ಬಗ್ಗೆ ಎಚ್ಚರಾಗಿರುವವಳು. ಎಂಥದೋ ವಿಶಿಷ್ಟ ಅಂತಃಶಕ್ತಿಯೊಂದರ ಸಖ್ಯದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳುತ್ತಿರುವವಳು.

ಈ ಹುಡುಗಿ ಸಿಗುವುದು ಅಕ್ಷತಾ ಅವರ ಕವಿತೆಗಳಲ್ಲಿ. ಮತ್ತು ಇವಳು ಎಲ್ಲ ಲೆಕ್ಕಗಳಲ್ಲೂ ನಮ್ಮ ಕಾಲದ ಹುಡುಗಿ. ಇಷ್ಟೊಂದು ಮಾಗಿದವಳ ಹಾಗೆ ಕಾಣಿಸುತ್ತಾಳಲ್ಲ, ಇದೇನು ಕೃತಕ ಪೋಸ್ ಇರಬಹುದೇ ಎಂಬ ಅನುಮಾನದ ದೃಷ್ಟಿಯಿಂದ ನೋಡಿದರೂ, ಇಲ್ಲ ಹಾಗಲ್ಲ ಎಂಬ ಸಮಾಧಾನವೇ ಮುಂದೆ ಬರುತ್ತದೆ. ಇವಳನ್ನು ಕುತೂಹಲದಿಂದ, ಪ್ರೀತಿಯಿಂದ, ಕಾಳಜಿಯಿಂದ ಗಮನಿಸುತ್ತಿದ್ದರೆ, ಪರಂಪರೆಯ ಪಾಠಗಳನ್ನು ಅರಗಿಸಿಕೊಂಡು ವರ್ತಮಾನದ ನೆಲದಲ್ಲಿ ಬೇರಿಳಿಸಿರುವ ಗಟ್ಟಿಗಿತ್ತಿ ಎಂದೇ ನಿಶ್ಚಯವಾಗುತ್ತದೆ.

ಯಾವ ಘೋಷಣೆಗಳಿಲ್ಲದೆ, ಅಹಂಕಾರವಿಲ್ಲದೆ, ಗಂಡಸನ್ನು ತೀರಾ ದೂಷಿಸಲೂ ಹೋಗದೆ ಅಕ್ಷತಾ ಇಂಥದೊಂದು ಹೆಣ್ಣನ್ನು ತಮ್ಮ ಅಂತರಂಗದೊಳಗೆ ಕಂಡುಕೊಂಡಿದ್ದಾರಲ್ಲ ಎಂದು ಅಚ್ಚರಿಯಾಗುತ್ತದೆ. ಇಲ್ಲಿನ ಬಹುತೇಕ ಕವಿತೆಗಳು ಈ ಕಾರಣದಿಂದಲೇ ಸತ್ವಯುತವಾಗಿವೆ.

ನನ್ನ ಜೀವಿತದ ಮೂವತ್ತು ವಸಂತಗಳು
ಬರೀ ಕಟ್ಟುವುದರಲ್ಲೇ ಕಳೆಯಿತು
ದೇವರೆ
ಮನಸು ಕಟ್ಟಿದೆ ಕಾಲು ಕಟ್ಟಿದೆ
ಕೊನೆಗೊಮ್ಮೆ
ಬಾಯಿ ಕಣ್ಣು ಕಿವಿಗಳನ್ನು
ಕಟ್ಟಿಟ್ಟು ಜೀವಿಸಿದೆ

ಆದರೆ ಕಟ್ಟಿದ ಜೀವ ಒಮ್ಮೆಲೆ
ಭೋರ್ಗರೆದು ಹರಿಯಿತು
ಬಿಚ್ಚುವುದರಲ್ಲಿನ ಸುಖ ಆಗ ತಿಳಿಯಿತು

-ಹೀಗೆ ಅವಸ್ಥಾಂತರದ ಸುಖದಲ್ಲಿ ಮಿಂದ ಹುಡುಗಿಯ ಮನಸ್ಸಲ್ಲಿ ಹೊಳೆವ ಮಿಂಚು ಕೂಡ ಸಣ್ಣದಲ್ಲ.

ಬಿರಿದರೆ ಭೂಮಿ ಬಿರಿಯಲಿ
ಎಂದು ನಿಶ್ಚಯಿಸಿದ ನೀವೆ
ದಣಪೆ ದಾಟುವ ಹಂಬಲ
ತೋರದೆ ಹೋದಿರಿ

-ಎಂದು ತನ್ನ ಪೂರ್ವದ ತಲೆಮಾರಿನ ಎದುರು ಈಕೆ ಎತ್ತುವ ಆಕ್ಷೇಪ ಆ ಇಡೀ ಸಂದರ್ಭದ ಬೇಗುದಿ, ಅಸಹಾಯಕತೆ, ತಲ್ಲಣ ಮತ್ತು ಕನವರಿಕೆಗಳಿಗೇ ಕೊರಳಾಗುವಷ್ಟು ಹಿರಿತನದ್ದಾಗಿದೆ.

ಯಾಕೆ ಸ್ತಬ್ಧಳಾದೆ ಗಂಡ
ಮನೆಗೆ ಬಂದಾಗಿರುತ್ತದೆಂದೆ
ಮಕ್ಕಳಿಗೆ ಸಂಜೆಯ ತಿಂಡಿ
ಮಾಡಿಟ್ಟಿರದ ನೆನಪಾಯ್ತೆ
ದುಗುಡ ಬಿಡು
ಇಷ್ಟು ವರ್ಷ ಅವರೆಲ್ಲರ
ಬದುಕನ್ನು ಸಲೀಸುಗೊಳಿಸಲು
ಬದುಕನ್ನೇ ತೇಯುತ್ತಿದ್ದೇನೆ ಎಂಬ
ಭ್ರಮೆಯಿತ್ತಲ್ಲ ಅದನ್ನು ಬಿಡು

-ಇಂಥದೊಂದು ಹೊಸ ದಿನಚರಿಗೆ ಮನಸ್ಸನ್ನು ಒಗ್ಗಿಸಿಕೊಳ್ಳುವ ಹಠದಲ್ಲಿ ಹೊರಟವಳ ಮುಂದೆ “ಸೂರ್ಯನಿನ್ನೂ ಪೂರ್ಣ ಮರೆಯಾಗಿಲ್ಲ” ಎಂಬ ಆಶಾವಾದವಿದೆ. “ನಮ್ಮ ಆತ್ಮವಂಚನೆಗೆ ಕಡಿವಾಣ/ ಬಿಗಿಯದಿದ್ದರೆ ಸಂಗಾತಿ/ ನಾವು ಬೆತ್ತಲಾಗುವ ದಿನ/ ದೂರವಿಲ್ಲ” ಎಂಬ ಎಚ್ಚರ ಕೂಡ ಅವಳನ್ನು ಈ ದಿನಚರಿಯ ಮಾರ್ಪಾಟಿನ ಕಡೆಗೆ ನಡೆಸುತ್ತಿದೆ. 

“ಕರೆ”, “ಕಾಯುತ್ತೇನೆ ಬೆಳದಿಂಗಳ ರಾತ್ರಿಯಲ್ಲಿ” ಮೊದಲಾದ ಕವಿತೆಗಳು ನಮ್ಮೆದುರು ಇಡುವುದು ಅತ್ಯಂತ ಸರಳ ಮತ್ತು ಸಾಮಾನ್ಯ ಹೆಣ್ಣುಮಗಳ ಚಿತ್ರವನ್ನೇ. ಬಹುಶಃ ಎಲ್ಲ ಹೆಣ್ಣುಮಕ್ಕಳೂ ಇಷ್ಟೇ ಸರಳ ಮನಸ್ಸಿನವರೇ ಆಗಿರುತ್ತಾರೆ. ಆದರೆ, ತಮಗೆ ಒಪ್ಪಿಗೆಯಾಗುವ ಹಾಗೇ ಇರಬೇಕು ಎಂದು ಬಯಸುವ, ಬಲವಂತ ಮಾಡುವ ಸಮಾಜದ ಬಗ್ಗೆ ಮಾತ್ರ ಆಕೆಗೆ ಇನ್ನಿಲ್ಲದ ಅಸಹನೆ. ಈ ಅಸಹನೆ “ಸೂಚನೆಯ ಪಾಲನೆ” ಎಂಬ ಕವಿತೆಯಲ್ಲಿ ಬಹಳ ಮಾರ್ಮಿಕವಾಗೇ ಮೂಡಿದೆ.

ಅಕ್ಷತಾ ತಾವು ಬರೆಯಹೊರಟಿರುವ ಈ ಕಾಲಘಟ್ಟದ ಸ್ವರೂಪ ಮತ್ತು ಸವಾಲುಗಳನ್ನು ಸಾಕಷ್ಟು ನಿಚ್ಚಳವಾಗೇ ಅರಿತುಕೊಂಡಿದ್ದಾರೆ. “ಬದುಕ ಸ್ಪರ್ಶಿಸುವುದ” ಅರಿತಿದ್ದಾರೆ. ಈ ಅರಿವು ಅವರನ್ನು ಇತರ ಹೊಸ ಕವಯತ್ರಿಯರಿಗಿಂತ ಬೇರೆ ಎನ್ನಿಸುವಂತೆ ಕಾಣಿಸಲು ಕಾರಣವಾಗಿದೆ. ಅಕ್ಷತಾ ಆಲೋಚಿಸುವ ಧಾಟಿಯಲ್ಲೇ ವಿಭಿನ್ನ ನಾದವಿದೆ. ಹಾಗಾಗಿಯೇ ಅವರು, ಮಥುರೆಗೆ ಹೊರಟ ಕೃಷ್ಣನಿಗೆ “ಮರಳದಿರು ಎಂದೂ ಗೋಕುಲೆಗೆ” ಎಂದು ಹೇಳಬಲ್ಲ ಗೊಲ್ಲತಿಯ ಮನಸ್ಸಿನ ಸಂಕಟವನ್ನು (“ವಿದಾಯ” ಕವಿತೆಯಲ್ಲಿ) ಕಾಣಬಲ್ಲರು. “ಇಷ್ಟು ದಿನ/ ಪ್ರೀತಿಯ ಹೆಸರಲ್ಲಿ/ ದಾಂಪತ್ಯದ ಕಟ್ಟಳೆಯಲ್ಲಿ/ ಮನೆ ಮಕ್ಕಳು ಆಸ್ತಿ ಎಲ್ಲದರ/ ಭವಿಷ್ಯದ ಕನಸಲ್ಲಿ ಹಿಡಿದಿರಿಸಿದ್ದಕ್ಕಾಗಿ/ ಸಾಧ್ಯವಾದರೆ ನನ್ನ ಕ್ಷಮಿಸು” ಎಂದು ಸಂಬಂಧವೊಂದಕ್ಕೆ ವಿದಾಯ ಹೇಳಲೇಬೇಕಾಗಿ ಬರಬಹುದಾದ ಅನಿವಾರ್ಯತೆಯನ್ನು (“ಆಸ್ಥೆ” ಕವಿತೆಯಲ್ಲಿ) ಸ್ವೀಕರಿಸಬಲ್ಲರು. ಇವೆರಡೂ ಬೇರೆ ಬೇರೆ ಬಗೆಯ ವಿದಾಯಗಳು. ಆದರೆ, ಬಾಂಧವ್ಯದ ಮನೆಯನ್ನು ಕಟ್ಟುವಲ್ಲಿ ತೊಡಗಿಕೊಂಡವಳ ಆಳದ ದುಃಖ, ಎಷ್ಟೋ ನದರುಗಳಿಗೆ ಗುರುತಾಗದೇ ಹೋಗಬಹುದಾದ ದುಃಖ ಮಾತ್ರ ಒಂದೇ. ಇಂಥ ದುಃಖವನ್ನು ಎದುರಿಸಿದ ಜಾನಕಿಯನ್ನು ಅಕ್ಷತಾ ಒಂದು ಮಾದರಿಯಾಗಿ ಕಾಣದೆ, ಒಂದು ಭರವಸೆಯಾಗಿ ಕಾಣುವುದು ಖುಷಿ ಕೊಡುತ್ತದೆ.

ಹಾಗೊಮ್ಮೆ ಭೂಮಿ ಬಿರಿದರೂ
ಅಲ್ಲಿಯೇ ಅದೆಷ್ಟೋ ಕಾಲದಿಂದ ಇದ್ದಾಳಲ್ಲ
ಜಾನಕಿ ಕಾಯುತ್ತಾಳೆ ಎಂದಲ್ಲ
ದಾಟಿದ ನಂತರದ ಬದುಕ ಕಲಿಸುತ್ತಾಳೆ

ಮತ್ತೆ ಮತ್ತೆ ಗಮನಿಸಿದರೆ, ಈ ನಿಲುವಿನಲ್ಲಿ ಬಿಂಬಗೊಂಡಿರುವ ಹೆಣ್ಣಿನ ಧಾರ್ಷ್ಟ್ಯ, ಸ್ವಾವಲಂಬಿ ಗುಣ ಬೆರಗಾಗಿ ಬೆಳೆಯುತ್ತದೆ. ಅಕ್ಷತಾ ಮತ್ತೆ ಬರೆಯಲಿರುವ ಕವಿತೆಗಳ ಬಗ್ಗೆ ಭರವಸೆಯಿಂದ ಕಾಯಬೇಕೆನ್ನಿಸುತ್ತದೆ.

‍ಲೇಖಕರು avadhi

March 6, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

3 ಪ್ರತಿಕ್ರಿಯೆಗಳು

 1. chetanachaitanya

  akshata kavitegaLu gaTTiyaagive, taTTuvantive.
  “rekke bicci AkASa nechchi” sheershikeyE hosa anubhava koDuttade
  – Chetana

  ಪ್ರತಿಕ್ರಿಯೆ
 2. mangy

  “ಇಷ್ಟು ದಿನ/ ಪ್ರೀತಿಯ ಹೆಸರಲ್ಲಿ/ ದಾಂಪತ್ಯದ ಕಟ್ಟಳೆಯಲ್ಲಿ/ ಮನೆ ಮಕ್ಕಳು ಆಸ್ತಿ ಎಲ್ಲದರ/ ಭವಿಷ್ಯದ ಕನಸಲ್ಲಿ ಹಿಡಿದಿರಿಸಿದ್ದಕ್ಕಾಗಿ/ ಸಾಧ್ಯವಾದರೆ ನನ್ನ ಕ್ಷಮಿಸು” E salugalu idi jeevanavanne sukshmavagiddaru serious agive. Great!

  ಪ್ರತಿಕ್ರಿಯೆ
 3. ಚಕೋರ

  ಚೆನ್ನಾಗಿವೆ. ಹೊಳಹುಗಳಲ್ಲಿ ಹೊಸತನ ಇದೆ. ಕೆಲವೊಂದು ಸಾಲುಗಳು ಬಹಳ fresh ಅನ್ನಿಸುತ್ತವೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: