ನಮ್ಮ ಕಾಲದ ಬಗ್ಗೆ ಅಜ್ಜಿ ಹೇಳಿದ ಕತೆ…

wownew.jpg

ಕಿರಣ್ ಕುಮಾರ್ ಕೆ

ಹೀಗೇ ಒಂದು ಸಂಜೆ ಒಂಟಿಯಾಗಿ ಕುಳಿತಿದ್ದ ಅಜ್ಜಿಯ ಬಳಿಗೆ ಬಂದು ಕೂತ ಮೊಮ್ಮಗ ಅದೂ ಇದೂ ಅಂತ ಮಾತಿಗಿಳಿದ. ಮಾತು ಮಾತಲ್ಲೆ “ಅಜ್ಜಿ ನಮ್ಮ ಕಾಲದ ಬಗ್ಗೆ ನಿನಗೆ ಏನನ್ನಿಸುತ್ತಜ್ಜಿ?” ಅಂತಲೂ ಕೇಳಿದ.

ಕ್ಷಣ ಕಾಲ ಸುಮ್ಮನೇ ಯೋಚಿಸಿದ ಅಜ್ಜಿ ಹೇಳಿದಳು: “ನಾನು ಹುಟ್ಟಿದಾಗ ಇನ್ನೂ ಟಿ.ವಿ., ಪೆನ್ಸಿಲಿನ್, ಪೋಲಿಯೋ ಲಸಿಕೆ, ಜೆರಾಕ್ಸ್, ಕಾಂಟ್ಯಾಕ್ಟ್ ಲೆನ್ಸ್ ಇವ್ಯಾವೂ ಹುಟ್ಟಿರಲಿಲ್ಲ. ರಡಾರ್ ಇರಲಿಲ್ಲ, ಕ್ರೆಡಿಟ್ ಕಾರ್ಡು, ಲೇಸರ್ ಕಿರಣ… ಇವೆಲ್ಲಾ ಹೋಗಲಿ ಬಾಲ್ ಪಾಯಿಂಟ್ ಪೆನ್ನು ಕೂಡ ಹುಟ್ಟಿರಲಿಲ್ಲ. ಮನುಷ್ಯ ಇನ್ನೂ ಏರ್ ಕಂಡಿಷನರ್, ಡಿಶ್ ವಾಷರ್, ಬಟ್ಟೆ ಒಣಗಿಸೋ ಯಂತ್ರ ಯಾವುದನ್ನೂ ಕಂಡು ಹಿಡಿದಿರಲಿಲ್ಲ. ಬಟ್ಟೆಗಳನ್ನು ಬಿಸಿಲಿಗೆ ಒಳ್ಳೆ ಗಾಳಿಗೆ ಒಣಗಿಸುತ್ತಿದ್ದೆವು. ಅಷ್ಟೇ ಅಲ್ಲ, ಈಗೆಲ್ಲ ಹೆಂಗಸರು ಹಾಕುತ್ತಾರಲ್ಲ ಪ್ಯಾಂಟಿಹೋಸ್ ಅದು ಇರಲೇ ಇಲ್ಲ.

ನಿನ್ನ ಅಜ್ಜನಿಗೂ ನನಗೂ ಮೊದಲು ಮದುವೆಯಾಯಿತು ನಂತರ ನಾವು “ಲಿವಿಂಗ್ ಟುಗೆದರ್” ಅಂತ ಬದುಕಿದೆವು. ಆಗೆಲ್ಲ ಎಲ್ಲಾ ಕುಟುಂಬದಲ್ಲೂ ತಂದೆ ತಾಯಿ ಇರುತ್ತಿದ್ದರು. ನನಗೆ ೨೫ ವರ್ಷ ಆಗುವವರೆಗೂ ನನಗಿಂತ ಹಿರಿಯರಾದವರನ್ನು ಸರ್ ಅಂತಲೇ ಮಾತನಾಡಿಸುತ್ತಿದ್ದೆ. ನಂತರ ಕೂಡ ಪೊಲೀಸರು ಹಾಗೂ ಇತರೆ ಅಧಿಕಾರಿಗಳನ್ನು ಸರ್ ಅಂತಲೇ ಕರೀತಿದ್ದೆ. ನಾವೆಲ್ಲ ಈ ಕಂಪ್ಯೂಟರ್ ಡೇಟಿಂಗ್, ಡೇ ಕೇರ್ ಸೆಂಟರ್ ಗಳು, ಗ್ರೂಪ್ ಥೆರಪಿ, ಸಲಿಂಗ ಕಾಮದ ಹಕ್ಕುಗಳು ಇವನ್ನೆಲ್ಲಾ ಕೇಳೇ ಇರಲಿಲ್ಲ.

“ಫಾಸ್ಟ್ ಫುಡ್” ಅಂದರೆ ಶಿವರಾತ್ರಿ ದಿನ ತಿನ್ನುವ ತಿಂಡಿ ಅಂತ ಮಾತ್ರ ಅಂದುಕೊಂಡಿದ್ವಿ. ಒಳ್ಳೆ ಸಂಬಂಧ ಅಂದರೆ ಸಂಬಂಧಿಗಳ ಜೊತೆ ಚೆನ್ನಾಗಿರೋದು ಅನ್ನೋದು ನಮ್ಮ ಕಾಲದ ನಂಬಿಕೆ. ಮನೆಯವರ ಜೊತೆ ಕಾಲ ಕಳೆಯೋದು ಅಂದ್ರೆ ಸಂಜೆ ಮತ್ತು ರಜಾ ದಿನಗಳಲ್ಲಿ ಮನೆಯಲ್ಲಿ ಎಲ್ಲರ ಜೊತೆ ಇರುವುದು ಅಂತ ನಮ್ಮ ತಿಳುವಳಿಕೆ – ಶಾಪಿಂಗ್ ಹೋಗೋದು ಅಂತಲ್ಲ.

ನಾವೆಂದೂ ಎಫ್ ಎಂ ರೇಡಿಯೋ ಕೇಳಿರಲಿಲ್ಲ. ಟೇಪ್ ರೆಕಾರ್ಡರ್, ಸಿ.ಡಿ., ಎಲೆಕ್ಟ್ರಾನಿಕ್ ಟೈಪ್ ರೈಟರ್ ಇವ್ಯಾವೂ ನಮಗೆ ಗೊತ್ತಿರಲಿಲ್ಲ. ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳ ಭಾಷಣಗಳನ್ನು ರೇಡಿಯೋದಲ್ಲೇ ಕೇಳುತ್ತಿದ್ದುದು. ನನಗೆ ನೆನಪಿದ್ದ ಹಾಗೆ ಆಗ ಯಾವ ಹುಡುಗರೂ ಟಾಮಿ ಡೊರ್ಸೆ, ಮೈಕೆಲ್ ಜಾಕ್ಸನ್ ಹಾಡುಗಳನ್ನು ಕೇಳಿ ಹುಚ್ಚರಾಗಿರಲಿಲ್ಲ. ಈ ಪಿಜಾ ಹಟ್, ಮೆಕ್ ಡೊನಾಲ್ಡ್, ಇನ್ ಸ್ಟಂಟ್ ಕಾಫಿ ಇವನ್ನೆಲ್ಲಾ ನಾವು ಕೇಳಿರಲೇ ಇಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಆಗ ಹುಡುಗರ್‍ಯಾರೂ ಕಿವಿಗೆ ಓಲೆ ಹಾಕಿಕೊಳ್ತಿರಲಿಲ್ಲ.

ಆಗ ನಾಲ್ಕಾಣೆ ಎಂಟಾಣೆಗೆ ಎಷ್ಟೆಲ್ಲಾ ವಸ್ತುಗಳು ಸಿಗುತ್ತಿದ್ದವು. ೩೦,೦೦೦ ಕೊಟ್ಟರೆ ಒಳ್ಳೆ ಕಾರ್ ಸಿಗುತ್ತಿತ್ತು. ಆದರೆ ಅಷ್ಟೊಂದು ದುಬಾರಿ ಬೆಲೆಗೆ ಕೊಳ್ಳೋದು ಯಾರಿಗೆ ಸಾಧ್ಯವಿತ್ತು? ಎಂಟಾಣೆಗೆ ಲೀಟರ್ ಪೆಟ್ರೋಲ್ ಬೇರೆ ಹಾಕಬೇಕಿತ್ತಲ್ಲ! ಆಗ ಇಲ್ಲೇ ಇರುವ ಊರಿಂದೂರಿಗೆ ನಾವು ಪತ್ರ ಬರೆಯುತ್ತಿದ್ದೆವು. ಹೊರ ರಾಜ್ಯಕ್ಕಾದರೆ ಪೋಸ್ಟ್ ಆಫೀಸಿನ ಮುಂದೆ ಅರ್ಧ ದಿನ ಕಳೆದು “ಟ್ರಂಕ್ ಕಾಲ್” ಮಾಡುತ್ತಿದ್ದೆವು. ಮೊಬೈಲು ಎನ್ನುವ ಫೋನಿನ ಕಲ್ಪನೆಯೇ ನಮಗಿರಲಿಲ್ಲ.

ನಮ್ಮ ಕಾಲದಲ್ಲಿ “ಗ್ರಾಸ್” ಅಂದರೆ ಹುಲ್ಲು ಅಂತ ಅರ್ಥ ಇತ್ತು. “ಕೋಕ್” ಅಂದರೆ ಶರಬತ್, “ಪಾಟ್” ಅಂದರೆ ನಮ್ಮಮ್ಮ ಅಡಿಗೆ ಮಾಡುತ್ತಿದ್ದ ಪಾತ್ರೆ. ನಮ್ಮ ಅಜ್ಜಿಯರು ಹಾಡುತ್ತಿದ್ದ ಜೋಗುಳವೇ ನಮಗೆ “ರಾಕ್ ಮ್ಯೂಸಿಕ್.” ಆಗೆಲ್ಲ “ಏಡ್ಸ್” ಅಂದರೆ ಬೇರೆಯವರಿಗೆ ಧನ ಸಹಾಯ ಅಂತಿದ್ದರೆ “ಚಿಪ್” ಅನ್ನುವುದು ತೆಂಗಿನ ಕರಟ ಅಂತ ಗೊತ್ತಿತ್ತು. “ಹಾರ್ಡ್ ವೇರ್” ಅನ್ನುವುದು ಕಬ್ಬಿಣದ ಅಂಗಡಿಯಾಗಿದ್ದರೆ, “ಸಾಫ್ಟ್ ವೇರ್” ಅನ್ನೋ ಪದ ಹುಟ್ಟೇ ಇರಲಿಲ್ಲ.

ಮಕ್ಕಳಾಗಬೇಕೆಂದರೆ ಗಂಡ ಬೇಕು ಅಂದುಕೊಂಡಿದ್ದವರಲ್ಲಿ ನಾವೇ ಕೊನೆಯ ಜನರೇಶನ್ ನವರಿರಬೇಕು. ನಮ್ಮನ್ನು ಜನ “ಹಳೆ ಕಾಲದವರು” ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಮತ್ತೆ ಜನರೇಶನ್ ಗ್ಯಾಪ್ ಅಂತಲೂ ಮಾತನಾಡುತ್ತಾರೆ. ಎಲ್ಲ ಎಷ್ಟು ಬೇಗ ಬದಲಾಯಿತು!” ಹೀಗೆ ಮೊಮ್ಮಗನಿಗೆ ತನ್ನ ಕಥೆ ಹೇಳಿದ ಅಜ್ಜಿ ಮತ್ತೆ ಯೋಚಿಸುತ್ತ ಕೂತಳು.

ಮೊಮ್ಮಗನಿಗೆ ಅಚ್ಚರಿ! ಅವನ ಮನದಲ್ಲಿ ದೊಡ್ಡ ಪ್ರಶ್ನೆ: ಹಾಗಾದರೆ ಈ ಅಜ್ಜಿ ಎಷ್ಟು ಶತಮಾನದ ಹಿಂದಿನವಳು?

ಈ ಕಥೆ ಓದುತ್ತ, ಅಜ್ಜಿ ಹೇಳುತ್ತಿದ್ದ ಎಲ್ಲವೂ ಈಗ ಬೇರೆಯೇ ಆಗಿರುವುದನ್ನು ಯೋಚಿಸುತ್ತ ನನಗೆ ಒಂದು ಕ್ಷಣ ದಂಗು ಬಡಿದಂತಾಗಿತ್ತು. ಅಜ್ಜಿಯ ಕಾಲಕ್ಕೂ – ನಮ್ಮ ಕಾಲಕ್ಕೂ ಬದುಕಿನ ಅರ್ಥವೇ ಬದಲಾಗಿದೆಯಲ್ಲ! ಸಮಾಜದ ದಿಕ್ಕೇ ಬದಲಾಗಿದೆಯಲ್ಲ! ಅಂದುಕೊಳ್ಳುತ್ತ, ಅಜ್ಜಿಯ ವಯಸ್ಸಿನ ಬಗ್ಗೆ ಕುತೂಹಲ ಇಮ್ಮಡಿಯಾಯಿತು.

ನಿಮಗೇನಾದರೂ ಗೊತ್ತೆ ಈ ಅಜ್ಜಿ ಎಷ್ಟು ಹಳಬಳಿರಬಹುದೆಂದು? ಮೊಮ್ಮಗನ ಈ ಪ್ರಶ್ನೆಗೆ ಅಜ್ಜಿ ನಗುತ್ತ ಹೇಳಿದ್ದು: ನನಗೀಗ ೫೮ ವರ್ಷ ಮಗುವೆ.

***

ಕಥೆ ಓದಿದ ಯಾರಿಗಾದರೂ ಕಳೆದ ೫೦ ವರ್ಷಗಳಲ್ಲಿ ನಮ್ಮ ಬದುಕಿನಲ್ಲಾಗಿರುವ ಬದಲಾವಣೆಗಳ ಬಗ್ಗೆ ಒಂದು ಸಣ್ಣ ಅಚ್ಚರಿಯಾಗುವುದು ಖಚಿತ. ಇಂದು ಜಗತ್ತಿನ ಪ್ರಮುಖ ದಿನಬಳಕೆ ವಸ್ತುಗಳನ್ನೆಲ್ಲ ಸಾವಿರಾರು ವರ್ಷಗಳಿಂದಲೂ ಬಲ್ಲವರಂತೆ ಬಳಸುವ ನಮಗೆ, ನಮ್ಮ ವೇಗ ಭಯ ಹುಟ್ಟಿಸದಿರುವುದು “ಆರುವ ಮೊದಲು ಜೋರಾಗಿ ಉರಿವ ದೀಪ”ದ ನೆನಪು ತರುವುದಿಲ್ಲವೆ?

‍ಲೇಖಕರು avadhi

September 1, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

3 ಪ್ರತಿಕ್ರಿಯೆಗಳು

 1. Kiran

  Mohan Ji,

  Thanks for the comment. I don’t know weather you would read this reply but still i am dropping one in case you read it later.

  The ‘tea’ plan which Tina was telling is still pending i think. Or did you guys had a tea?

  ಪ್ರತಿಕ್ರಿಯೆ
 2. G N Mohan

  dear kiran
  drop that ‘ji’ in future
  in hyderabad i am fed up with this ‘ji’ and ‘garu’ which always reminds me that i am an outsider

  i am in bangalore again
  i did not contact tina
  let’s plan tea party

  we will meet this time

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ G N MohanCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: