ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ…..

ಕಾಶ್ಮೀರದ ನೋವಿನ ನೆನಪುಗಳು

ಡಾ.ಎನ್. ಜಗದೀಶ್ ಕೊಪ್ಪ

ಅದೊಂದು ಕಾಲವಿತ್ತು ಕಾಶ್ಮೀರವೆಂದರೆ ಧರೆಯ ಮೇಲಿನ ಸ್ವರ್ಗ ಎಂಬ ಕಲ್ಪನೆ ಎಲ್ಲರ ಮನದಲ್ಲಿ ಗರಿಗೆದರಿತ್ತು. ಇತ್ತೀಚೆಗಿನ ದಿನಗಳ ಅಲ್ಲಿನ ಭಯೋತ್ಪಾದನೆ, ಹಿಂಸೆ, ರಕ್ತಪಾತ ಇವೆಲ್ಲವೂ ಅದೇ ಕಾಶ್ಮೀರವನ್ನು ಭಾರತೀಯರ ಪಾಲಿಗೆ ಅದೊಂದು ವಾಸಿಯಾಗದ ವೃಣವೇನೊ ಎಂಬಂತೆ ಮಾಡಿವೆ. ಸಂಸ್ಕೃತಿಯ ರಕ್ಷಣೆಗೋಸ್ಕರ ಸಾಂಸ್ಥಿಕ ರೂಪ ತಳೆದ ಧರ್ಮವೆಂಬುದು ಎರಡು ಹಲುಗಿನ ಕತ್ತಿ ಎಂಬುದನ್ನು ನಾವು ಮನಗಾಣಬೇಕಾದರೆ, ಒಮ್ಮೆ ಕಾಶ್ಮೀರದ ಇತಿಹಾಸದತ್ತ ನೋಡಬೇಕು. ಇದು ಕೇವಲ ಒಂದು ರಾಜ್ಯದ ಅಥವಾ ಒಂದು ಸಮುದಾಯದ ಪತನದ ಕಥನವಲ್ಲ, ಒಂದು ನೆಲದ ಸಾಂಸ್ಕೃತಿಕ ಪತನವೂ ಕೂಡ ಹೌದು. ಈವರೆಗೆ ಸಮಾಜದ ಮುಖ್ಯವಾಹಿನಿಯಲ್ಲಿ ಚರ್ಚೆಗೆ ಬಾರದೆ ಉಳಿದು ಹೋದ ಕಾಶ್ಮೀರದ ಪಂಡಿತರ ದುರಂತಕ್ಕೆ ಹಲವಾರು ಆಯಾಮಗಳಿವೆ.
ಭಾರತೀಯ ಸಂಸ್ಸ್ಕೃತಿಗೆ ಅಪರೂಪದ ಕಾಣಿಕೆಗಳನ್ನು ನೀಡಿದ ಅಲ್ಲಿನ ಪಂಡಿತ ಸಮುದಾಯ, ಕಾಶ್ಮೀರದ ಧಾರ್ಮಿಕ ಮೂಲಭೂತವಾದಿಗಳ ಹಿಂಸಾ ಪ್ರವೃತ್ತಿಯಿಂದ ಬೀದಿಗೆ ಬಿದ್ದು ಕಾಲು ಶತಮಾನವಾಯಿತು. ಇದೊಂದು ಗಂಭೀರ ಸಮಸ್ಯೆ ಎಂದು ಪರಿಗಣಿಸಲಾಗದ ವಿಸ್ಮೃತಿಗೆ ದೂಡಲ್ಪಟ್ಟಿರುವ ನಮಗೆ, ಅಪರೂಪದ ಇತಿಹಾಸವನ್ನು ಹೇಳುವ ರಾಜತರಂಗಿಣಿ ಬರೆದ ಕಲಹಣ, ಶೈವ ಪದ್ಧತಿಗೆ ನಾಂದಿ ಹಾಡಿದ ತಂತ್ರಾಲೋಕ ಎಂಬ ಕೃತಿ ಮತ್ತು ಭರತನ ನಾಟ್ಯಶಾಸ್ತ್ರದ ಬಗ್ಗೆ ಬರೆದ ವಿಮರ್ಶೆಯ ಕೃತಿಯಾದ ಅಭಿನವ ಭಾರತಿ ಯನ್ನು ರಚಿಸಿದ ಅಭಿನವಗುಪ್ತ, ಹಾಗೂ ಬೃಹತ್ ಕಥಾಮಂಜರಿ ಬರೆದ ಕ್ಷೇಮೆಂದ್ರ ಇವರೆಲ್ಲಾ ಕಾಶ್ಮೀರಿ ಪಂಡಿತರ ಕುಲದಿಂದ ಬಂದವರು.ಎಂಬುವುದು ಮರೆತು ಹೋಗಿದೆ. ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಕುಟುಂಬ ಮೂಲತಃ ಕಾಶ್ಮೀರಿ ಪಂಡಿತ ಕುಟುಂಬವಾಗಿದ್ದು ಅಲಹಬಾದ್ ನಗರಕ್ಕೆ ವಲಸೆ ಬಂದ ಮನೆತನ ಎಂಬುದೂ ಕೂಡ ಮರೆತು ಹೋಗಿದೆ.
ಇದೀಗ ಕಾಶ್ಮೀರಿ ಪಂಡಿತ ಕುಟುಂಬದಿಂದ ಬಂದಿರುವ ಹೊಸತಲೆಮಾರಿನ ಪ್ರತಿನಿಧಿಯಂತಿರುವ ರಾಹುಲ ಪಂಡಿತ ಎಂಬ ಯುವ ಪತ್ರಕರ್ತ ತನ್ನ ಸಮುದಾಯದ ನೋವಿನ ಚರಿತ್ರೆಯನ್ನು ತನ್ನ ಕುಟುಂಬದ ಇತಿಹಾಸ ಹೇಳುವುದರ ಮೂಲಕ ಅಲ್ಲಿನ ತವಕ ತಲ್ಲಣಗಳನ್ನು ತೆರೆದಿಟ್ಟಿದ್ದಾನೆ. Our Moon Has Blood Clots ( ನಮ್ಮ ಚಂದ್ರಮನಲ್ಲಿ ರಕ್ತದ ಕಲೆಗಳಿವೆ) ಎಂಬ ಸುಂದರ ಶಿರೋನಾಮೆ ಹೊತ್ತಿರುವ ಈ ಕೃತಿಯಲ್ಲಿ ಲೇಖಕ ಮುನ್ನುಡಿ ರೂಪದಲ್ಲಿ ಬರೆದಿರುವ ಭಾಗದ ಅನುವಾದ ಇಲ್ಲಿದೆ.

ಅದು 1990ರ ಜೂನ್ ತಿಂಗಳ ಸಮಯ. ಜಮ್ಮುವಿನ ಹೊರವಲಯದ ನಿರಾಶ್ರಿತರ ವಸತಿ ಪ್ರದೇಶದ ಹರಿದು ಚಿಂದಿಯಾದ ಗುಡಾರದಲ್ಲಿ ಓರ್ವ ವೃದ್ಧ ಸತ್ತು ಮಲಗಿದ್ದ. ಒಂದು ಬದಿಗೆ ಒರಗಿ ಮಲಗಿದಂತೆ ಇದ್ದ ಅವನ ಬಲಕೆನ್ನೆಗೆ ಬಳಕೆಯಾಗದೆ ಉಳಿದು ಹೋಗಿದ್ದ ಹಾಲಿನ ಪಾಕೇಟೊಂದು ಒತ್ತಿಕೊಂಡಿತ್ತು. ಜೂನ್ ತಿಂಗಳಿನಲ್ಲಿ ಜಮ್ಮುವಿನಲ್ಲಿ ಬೇಸಿಗೆಯ ತಾಪ ಮುಗಿಲು ಮುಟ್ಟುವ ಸಮಯ. ಆತನ ಗುಡಾರದ ಬಳಿ ವಾಸಿಸುತ್ತಿದ್ದ ನೆರೆಯ ನಿರಾಶ್ರಿತನೊಬ್ಬ ಈ ಸಾವನ್ನು ಮೊದಲು ಕಂಡವನಾಗಿದ್ದ. ಸತ್ತು ಮಲಗಿರುವ ವೃದ್ಧನ ತಲೆಯ ಬಳಿಯೇ ಇದ್ದ ರೇಡಿಯೋ ಟ್ರಾನ್ಸಿಸ್ಟರ್ ನಿಂದ ಹಳೆಯ ಹಿಂದಿ ಚಿತ್ರದ ಹಾಡು ಕೇಳಿಬರುತ್ತಿತ್ತು.
ಆದ್ಮಿ ಮುಸಾಫಿರ್ ಹೈ
ಆತ ಹೈ ಜಾತ ಹೈ
(ಮನುಷ್ಯ ಪಯಣಿಗ/ ಬರುತ್ತಾನೆ/ಹೋಗುತ್ತಾನೆ.)
ಸತ್ತು ಮಲಗಿದ್ದ ಆ ವೃದ್ಧವ್ಯಕ್ತಿ ನಮ್ಮ ಕುಟುಂಬಕ್ಕೆ ಪರಿಚಿತವನಾಗಿದ್ದ. ಆತನ ಮಗ ಮತ್ತು ನನ್ನ ತಂದೆ ಇಬ್ಬರೂ ಗೆಳೆಯರಾಗಿದ್ದರು. ಅವನೂ ಕೂಡ ನನ್ನ ತಂದೆಯ ಹಾಗೆ ಹಲವು ವರ್ಷಗಳ ಹಿಂದೆ ಕಾಶ್ಮೀರ ಕಣಿವೆಯ ಜೀಲಂ ನದಿಯ ದಂಡೆಯಲ್ಲಿ ವಾಸವಾಗಿದ್ದವನು.
ತ್ರ್ರಿಲೋಕಿನಾಥ್ ಎಂಬ ಹೆಸರಿನ ಆ ವೃದ್ಧನ ಶವವನ್ನು ಕೂಡಲೇ ಅಲ್ಲೇ ಹರಿಯುತ್ತಿದ್ದ ಕಾಲುವೆಯ ದಡದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಅಂತ್ಯ ಸಂಸ್ಕಾರಕ್ಕೆ ನೆರದಿದ್ದವರಲ್ಲಿ ಒಬ್ಬಾತ ಈ ಕಾಲುವೆ ನೀರು ತ್ರಿಲೋಕ್ ನಾಥ್ ಮಗನ ಮನೆಯ ಹಿಂದೆ ದೊಡ್ಡದಾಗಿ ಹರಿದು ಹೋಗುತ್ತದೆ ಎಂದು ನುಡಿದ. ಆತನ ಮಗನಿಗೆ ತನ್ನಪ್ಪನ ಸಾವು ಕುರಿತಂತೆ ಯಾರೂ ಅನಾವಶ್ಯಕವಾಗಿ ಹೆಚ್ಚು ಮಾತನಾಡುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಕುಟುಂಬದ ರಹಸ್ಯ ಬಯಲಾಗುವ ಭಯ ಆತನನ್ನು ಕಾಡುತ್ತಿತ್ತು.
ತ್ರಿಲೋಕಿನಾಥನ ಮಗ ಜಮ್ಮು ನಗರದ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಮೊದಲು ದನದ ಕೊಟ್ಟಿಗೆಯಾಗಿದ್ದ ಆ ಮನೆಯನ್ನು ಅದರ ಮಾಲೀಕ ಒಂದು ಕೊಠಡಿಯ ವಾಸದ ಮನೆಯಾಗಿ ಪರಿವರ್ತಿಸಿ, ಕಡಿಮೆ ಬೆಲೆಯ ಡಿಸ್ಟಂಪರ್ ನೀಲಿ ಬಣ್ಣವನ್ನು ಬಳಿದು ಬಾಡಿಗೆ ನೀಡಿದ್ದ. ಮನೆಯ ಮಾಲಿಕ ಬಾಡಿಗೆ ನೀಡುವಾಗ ಕೇವಲ ನಾಲ್ಕು ಮಂದಿ ಮಾತ್ರ ಮನೆಯಲ್ಲಿ ವಾಸಿಸಬೇಕೆಂದು ನಿರ್ಬಂಧ ಹೇರಿದ್ದ. ಇದರ ಪರಿಣಾಮವಾಗಿ ವೃದ್ಧನ ಮಗ ತಾನು, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆ ಹೊಕ್ಕು, ತನ್ನ ಅಪ್ಪನನ್ನು ಜಮ್ಮು ನಗರದ ಹೊರ ವಲಯದಲ್ಲಿದ್ದ ನಿರಾಶ್ರಿತರ ಶಿಬಿರಕ್ಕೆ ತಂದು ಬಿಟ್ಟು ಹೋಗಿದ್ದ. ಅಲ್ಲಿನ ಶಿಬಿರ ಇಂತಹ ನಿರಾಶ್ರಿತರ ಜೊತೆಗೆ ಹಾವು,ಚೇಳುಗಳಿಗೂ ಸಹ ಆಶ್ರಯ ತಾಣವಾಗಿತ್ತು.
ನಮ್ಮದು ಕೂಡ ಕಾಶ್ಮೀರ ಪಂಡಿತರ ಕುಟುಂಬ. ಈ ಘಟನೆ ನಡೆದ ಹಿಂದಿನ ವರ್ಷವಷ್ಟೇ ನಾವೂ ಸಹ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಮನೆ ತೊರೆದು ನಿರಾಶ್ರಿತರಾಗಿ ಬಂದು ಜಮ್ಮುವಿನಲ್ಲಿ ವಾಸವಾಗಿದ್ದೆವು. ಶತಶತಮಾನಗಳ ಕಾಲ ನಮ್ಮ ಪೂರ್ವಿಕರು ಬದುಕಿದ್ದ ಆ ನೆಲದಿಂದ ನಮ್ಮನ್ನು ಬಲವಂತವಾಗಿ ಹೊರದಬ್ಬಲಾಗಿತ್ತು. ನನಗಾಗ ಕೇವಲ ಹದಿನಾಲ್ಕು ವರ್ಷ. ಆರಂಭದಲ್ಲಿ ಜಮ್ಮು ನಗರಕ್ಕೆ ಬಂದ ನಮ್ಮ ಕುಟುಂಬ ಒಂದು ಕಳಪೆ ಹೊಟೇಲಿನ ಕೊಠಡಿಯೊಂದರಲ್ಲಿ ವಾಸವಾಗಿತ್ತು. ನಂತರ ಅಲ್ಲಿನ ಸಕರ್ಾರ ವಲಸೆ ಬಂದ ಕಾಶ್ಮೀರಿ ಪಂಡಿತರ ಕುಟುಂಬಗಳಿಗಾಗಿ ನಿರ್ಮಿಸಿದ ಜಿಂಕ್ ಶೀಟ್ಗಳ ತಾತ್ಕಾಲಿಕ ವಸತಿ ಮನೆಯೊಂದರಲ್ಲಿ ನಾವು ವಾಸಿಸತೊಡಗಿದೆವು.
ವಸತಿ ಕಾಲೋನಿಯಲ್ಲಿ ನಿರ್ಮಿಸಲಾಗಿದ್ದ ಒಂದೇ ಒಂದು ಸಾರ್ವಜನಿಕ ಕೊಳದ ಮುಂದೆ ನೀರಿಗಾಗಿ ಹೆಂಗಸರು ದಿನವಿಡಿ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಇನ್ನೊಂದೆಡೆ ಕೆಟ್ಟ ದುರ್ವಾಸನೆ ಬೀರುತ್ತಿದ್ದ ಸಾರ್ವಜನಿಕ ಶೌಚಾಲಯದ ಮುಂದೆ ಹೊಟ್ಟೆಯನ್ನು ಬಿಗಿ ಹಿಡಿದು ನಿಂತ ಪುರುಷರು ನಿಲ್ಲತ್ತಿದ್ದರು. ಇವೆಲ್ಲವೂ ಅಲ್ಲಿ ನಮ್ಮ ಪಾಲಿಗೆ ದಿನ ನಿತ್ಯದ ಸಾಮಾನ್ಯ ದೃಶ್ಯಗಳಾಗಿದ್ದವು.
ಒಂದು ದಿನ ಮಧ್ಯಾಹ್ನ ನನ್ನೊಬ್ಬ ಗೆಳಯನನ್ನು ಹುಡುಕುತ್ತಾ ಮನೆಯಿಂದ ಹೊರಟೆ. ಆತ ಕೂಡ ಆದಿನ ಶಾಲೆಗೆ ಚಕ್ಕರ್ ಹೊಡೆದಿದ್ದ. ಆತನ ಅಜ್ಜಿ ಬಿಸಿಲ ಶಾಖದಿಂದ ನಿತ್ರಾಣಗೊಂಡಿದ್ದಳು. ಆಕೆಗೆ ತಣ್ಣನೆಯ ಗ್ಲೂಕೋಸ್ ನೀರು ಕುಡಿಸಿ ಚೇತರಿಸಿಕೊಳ್ಳುವಂತೆ ಮಾಡಲಾಗಿತ್ತು. ನಾವಿಬ್ಬರೂ ನಿರಾಶ್ರಿತರ ಕ್ಯಾಂಪ್ ನಿಂದ ಸ್ವಲ್ಪ ದೂರ ನಡೆದು ಯಾರೂ ಓಡಾಡದ ಜಾಗದಲ್ಲಿ ಹುಡುಗಿಯರ ಬಗ್ಗೆ ಮಾತನಾಡುತ್ತಾ ಕುಳಿತೆವು. ಆ ಸ್ಥಳ ನಮ್ಮ ಪಾಲಿಗೆ ತೀರಾ ಖಾಸಾಗಿ ಸ್ಥಳವಾಗಿತ್ತು. ಕೆಲವು ಹಸುಗಳು ಬಯಲಿನಲ್ಲಿ ಮೇಯುವುದನ್ನು ಹೊರತುಪಡಿಸಿದರೆ ಮನುಷ್ಯರ ಓಡಾಟ ತೀರಾ ಅಪರೂಪಗಿತ್ತು.
ನಾವು ಮಾತನಾಡುತ್ತಿದ್ದ ಸಮಯಕ್ಕೆ ಸರಿಯಾಗಿ ವಸತಿ ಕಾಲೋನಿಯಿಂದ ಜನರ ಕೂಗಾಟದ ಶಬ್ಧ ಕೇಳಿಬಂತು. ಶಬ್ಧ ಕೇಳಿದೊಡನೆ ಗೆಳೆಯ ಪರಿಹಾರದ ವ್ಯಾನ್ ಬಂದಿದೆ ಎಂದು ಹೇಳುತ್ತಾ ನನ್ನ ಪ್ರತಿಕ್ರಿಯೆಗೆ ಕಾಯದೆ ಓಡತೊಡಗಿದ. ನಾನು ಸಹ ಆತನನ್ನು ಹಿಂಬಾಲಿಸಿದೆ. ನಾವು ಆ ಸ್ಥಳಕ್ಕೆ ಹೋಗುವಷ್ಟರಲ್ಲಿ ವ್ಯಾನ್ ಬಳಿ ತುಂಬಾ ಜನರು ಜಮಾಯಿಸಿದ್ದರು. ಆದಿನ ಟಮೋಟೊ ಹಣ್ಣುಗಳನ್ನು ಉಚಿತವಾಗಿ ಹಂಚಲು ತರಲಾಗಿತ್ತು. ಇದೇ ರೀತಿ ನಿರಾಶ್ರಿತ ಶಿಬಿರದಲ್ಲಿದ್ದ ಕಾಶ್ಮೀರಿ ಪಂಡಿತರ ಕುಟುಂಬಗಳಿಗೆ ಉಚಿತವಾಗಿ ಪಡಿತರವನ್ನು ಸಹ ಆಗಾಗ್ಗೆ ಹಂಚಲಾಗುತ್ತಿತ್ತು.
ವ್ಯಾನ್ ಹಿಂಬದಿ ಕುಳಿತು ಟಮೋಟೊ ಹಂಚುತ್ತಿದ್ದ ವ್ಯಕ್ತಿ ನಿಧಾನವಾಗಿ ಬನ್ನಿ ಎಂದು ಮುಗಿಬೀಳುತ್ತಿದ್ದ ಜನರನ್ನು ಸಮಾಧಾನಿಸುತ್ತಿದ್ದ. ಮೊದಲು ಬಂದವರಿಗೆ ಬೊಗಸೆ ತುಂಬಾ ಹಣ್ಣುಗಳನ್ನು ಕೊಡತೊಡಗಿದ. ನಂತರ ಸರತಿ ಸಾಲಿನಲ್ಲಿ ನಿಂತಿದ್ದ ಜನರನ್ನು ಗಮನಿಸಿ ತಲಾ ಒಬ್ಬರಿಗೆ ಮೂರು ಹಣ್ಣುಗಳನ್ನು ನೀಡಲಾರಂಭಿಸಿದ. ಸರತಿಯ ಸಾಲು ಕರಗದೆ ಹನುಮಂತನ ಬಾಲದಂತೆ ಬೆಳೆಯುತ್ತಿರುವುದನ್ನು ಕಂಡ ಆತ ನಂತರ ಒಂದೊಂದೆ ಟಮೋಟೊ ಹಣ್ಣು ನೀಡತೊಡಗಿದ. ನಾನು ಮತ್ತು ಗೆಳಯನ ಸರದಿ ಬಂದಾಗ ಟಮೋಟೊ ಹಣ್ಣು ಸಂಪೂರ್ಣ ಖಾಲಿಯಾಗಿದ್ದವು. ತುಕ್ಕು ಹಿಡಿದ ಚಾಕು ತೆಗೆದುಕೊಂಡು ಹಣ್ಣನ್ನು ಎರಡು ಹೋಳಾಗಿಸಿ ಹಂಚತೊಡಗಿದ. ನಮ್ಮಿಬ್ಬರ ಅಂಗೈಗಳ ಮೇಲೆ ತಲಾ ಒಂದೊಂದು ಟಮೋಟೊ ಹಣ್ಣಿನ ಹೋಳುಗಳಿದ್ದವು. ಅವುಗಳನ್ನು ಹಿಡಿದುಕೊಂಡು ಮತ್ತೇ ಏಕಾಂತ ಸ್ಥಳಕ್ಕೆ ಬಂದವು. ಹಣ್ಣಿನ ಹೋಳುಗಳನ್ನು ಏನು ಮಾಡಬೇಕೆಂದು ತೋಚಲಿಲ್ಲ. ಸನೀಹದಲ್ಲಿ ಹುಲ್ಲು ಮೇಯುತ್ತಿದ್ದ ಹಸುಗಳ ಮುಂದೆ ಅವುಗಳನ್ನು ಬಿಸಾಡಿದೆವು. ಮುಂದೆ ನಾವು ಬೆಳೆದು ದೊಡ್ಡವರಾಗಿ ಕುಟುಂಬದ ಹೊಣೆ ಹೊತ್ತಾಗ ಸರ್ಕಾರ ನೀಡುವ ಪರಿಹಾರವನ್ನು ಯಾವ ಪ್ರತಿಕ್ರಿಯೆ ಇಲ್ಲದೆ ನಿಶ್ಯಬ್ಧವಾಗಿ ಇದೇ ರೀತಿ ಅರ್ಧ ಟಮೋಟೊ ಹಣ್ಣಿನ ಹೋಳನ್ನು ಪಡೆದ ಹಾಗೆ ಪಡೆಯಬೇಕೆನೊ ಎಂಬ ಭಾವನೆ ಮತ್ತು ಭಯ ಆ ದಿನ ನಮ್ಮಿಬ್ಬರ ಮನಸ್ಸನ್ನು ಆಕ್ರಮಿಸಿಕೊಂಡಿವು.
 

‍ಲೇಖಕರು G

February 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This